ಶ್ರೀಮದ್ಭಗವದ್ಗೀತಾ 》ಅಧ್ಯಾಯ :- 03 》ಕರ್ಮ ಯೋಗ.

ಅಧ್ಯಾಯ ಮೂರು

ಎರಡನೆ ಅಧ್ಯಾಯದಲ್ಲಿ ಭಗವಂತನ ಅರಿವುಆ ಅರಿವನ್ನು ಪಡೆಯುವ ಉಪಾಯವನ್ನು ಕೃಷ್ಣ ವಿವರಿಸಿದ.  ಈ ಉಪದೇಶದಲ್ಲಿ ಒಂದು ಕಡೆ ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ ಕೃಷ್ಣ. ಇನ್ನೊಂದು ಕಡೆ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಎನ್ನುತ್ತಾನೆ! ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಏಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ  ಯುದ್ಧಮೂರನೇ ಅಧ್ಯಾಯ ಅರ್ಜುನನ ಈ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.

ಅಧ್ಯಾಯ - 03 : ಶ್ಲೋಕ  01

ಅರ್ಜುನ ಉವಾಚ ।

ಜ್ಯಾಯಸೀ  ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ ।

ತತ್  ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ॥೧॥

ಅರ್ಜುನ ಉವಾಚ- ಅರ್ಜುನ ಹೇಳಿದನು: 
ಜ್ಯಾಯಸೀ  ಚೇತ್ ಕರ್ಮಣಃ ತೇ  ಮತಾ ಬುದ್ಧಿಃ ಜನಾರ್ದನ 
ತತ್  ಕಿಂ ಕರ್ಮಣಿ ಘೋರೇ ಮಾಮ್  ನಿಯೋಜಯಸಿ ಕೇಶವ -

 ಓ ಜನಾರ್ದನ, ಕಾಯಕಕ್ಕಿಂತ ಅರಿವೇ ಹಿರಿದು ಎಂದು ನಿನ್ನ ಆಶಯವಾದರೆ, ಮತ್ತೇಕೆ ನನ್ನನ್ನು ಈ ಕೊಲ್ಲುವ ಕಾಯಕದಲ್ಲಿ ತೊಡಗಿಸುತ್ತಿರುವೆ ಕೇಶವ?
ಕೃಷ್ಣ ಜ್ಞಾನ ಮತ್ತು ಕರ್ಮದ ಬಗ್ಗೆ ಕೊಟ್ಟ ವಿವರಣೆಯಿಂದ ಅರ್ಜುನನಿಗೆ ಗೊಂದಲವಾಗುತ್ತದೆ.  

ತನಗೆ ಯಾವ ಮಾರ್ಗ ಉಚಿತ ಎನ್ನುವ ಪ್ರಶ್ನೆ ಆತನನ್ನು ಕಾಡುತ್ತದೆ. ಕೃಷ್ಣ ಒಮ್ಮೆ ಜ್ಞಾನ ಮಾರ್ಗದಲ್ಲಿ ಸಾಗು-ಅದು ಶ್ರೇಷ್ಠ ಎನ್ನುತ್ತಾನೆ, ಇನ್ನೊಮ್ಮೆ  ಯುದ್ಧ ಮಾಡು ಅನ್ನುತ್ತಾನೆ! ತಾನೇಕೆ ಶ್ರೇಷ್ಠವಾದ ಜ್ಞಾನ ಮಾರ್ಗದಲ್ಲಿ ಸಾಗಬಾರದು,ಯುದ್ಧವನ್ನೇಕೆ ಮಾಡಬೇಕು ಎನ್ನುವ ಗೊಂದಲ ಅರ್ಜುನನದು. 

ಈ ಗೊಂದಲದಲ್ಲಿ  ಅರ್ಜುನ  ಕೃಷ್ಣನಲ್ಲಿ ಕೇಳುತ್ತಾನೆ: ಓ ಜನಾರ್ದನ, ಕರ್ಮಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಎನ್ನುವುದು ನಿನ್ನ ಅಭಿಮತವಾದರೆ, ನನ್ನ ಹತ್ತಿರ ಕರ್ಮ ಮಾಡು ಎಂದು ಏಕೆ ಹೇಳುತ್ತಿದ್ದೀಯ? ಯುದ್ಧ ಎನ್ನುವುದು ಘೋರ ರಾಗ-ದ್ವೇಷಗಳಿಂದ ತುಂಬಿದ ತಾಮಸಕಾರ್ಯ. ಅದು ಅಧ್ಯಾತ್ಮ ಸಾಧನೆಗೆ ತೀರ ವಿರುದ್ಧವಾದ ಕರ್ಮ. ಹೀಗಿರುವಾಗ ನನ್ನನ್ನೇಕೆ  ಈ ಕಾರ್ಯದಲ್ಲಿ ತೊಡಗಿಸುತ್ತಿರುವೆ ಕೇಶವ? ಎಂದು. 

ಈ ಶ್ಲೋಕದಲ್ಲಿ ‘ಜನಾರ್ದನ’ ಮತ್ತು ‘ಕೇಶವ’ ಎನ್ನುವ ಎರಡು ನಾಮ ವಿಶೇಷಣವನ್ನು ಬಳಸಿದ್ದಾರೆ. ಈ ವಿಶೇಷಣದಲ್ಲಿ-ಪ್ರಶ್ನೆ ಮಾಡುತ್ತಿರುವ ಅರ್ಜುನನ ಭಾವ ಅಡಗಿದೆ.  ಜನ+ಅರ್ಧನ ಅಂದರೆ ಜನರನ್ನು ನಾಶ ಮಾಡುವವ!  ಇಲ್ಲಿ ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. “ದುಷ್ಟ ನಿಗ್ರಹಕ್ಕಾಗಿ ಅವತರಿಸಿದ ನೀನು, ನನ್ನಿಂದ ಈ ಕಾರ್ಯವನ್ನು ಮಾಡಿಸುತ್ತಿದ್ದೀಯ. ಆದರೆ ಇಲ್ಲಿ ಸೇರಿರುವರೆಲ್ಲ ದುರ್ಜನರಲ್ಲ. ಹೀಗಿರುವಾಗ ಅವರನ್ನು ಕೊಲ್ಲುವ ಕರ್ಮ ಶ್ರೇಷ್ಠ ಹೇಗಾದೀತು? ಜನನ ಮುಕ್ತಗೊಳಿಸಿ ಮೋಕ್ಷವನ್ನು ಕರುಣಿಸುವ ನೀನು, ನನ್ನಿಂದ ಗುರು ಹಿರಿಯರನ್ನು ಕೊಲ್ಲುವ ಈ ಘೋರ ಕರ್ಮವನ್ನು ಏಕೆ ಮಾಡಿಸುತ್ತಿರುವೆ?”.ಎನ್ನುವುದು ಅರ್ಜುನನ ಪ್ರಶ್ನೆ. ಶ್ಲೋಕದ ಕೊನೆಯಲ್ಲಿ ‘ಕೇಶವ’ ಎನ್ನುವ ನಾಮವಿಶೇಷಣ ಅರ್ಜುನನ ಶರಣಾಗತಿಯನ್ನು ಸೂಚಿಸುತ್ತದೆ. ಕಾ+ಈಶ+ವ-ಕೇಶವ; ಇಲ್ಲಿ ’ಕಾ’ ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ ; ಈಶ ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ. ಕೇಶವ ಅಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯನ್ನೊಳಗೊಂಡ ಪರಶಕ್ತಿ. “ಸೃಷ್ಠಿ-ಸ್ಥಿತಿ-ಸಂಹಾರ-ಮೊಕ್ಷಗಳಿಗೆ ಕಾರಣನಾದ ನೀನು ನನ್ನನ್ನು ಈ ಗೊಂದಲದಿಂದ ಪಾರು ಮಾಡು” ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಶರಣಾಗಿ ಬೇಡುತ್ತಾನೆ.

ಅಧ್ಯಾಯ - 03 : ಶ್ಲೋಕ  02

ವ್ಯಾಮಿಶ್ರೇಣ್ಯೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ ।

ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್ ॥೨॥

ವ್ಯಾಮಿಶ್ರೇಣ ಇವ  ವಾಕ್ಯೇನ ಬುದ್ಧಿಮ್  ಮೋಹಯಸಿ ಇವ ಮೇ 
ತತ್  ಏಕಮ್ ವದ ನಿಶ್ಚಿತ್ಯ ಯೇನ ಶ್ರೇಯಃ ಅಹಮ್ ಅಪ್ನುಯಾಮ್-

ಇಬ್ಬಗೆಯ ಮಾತಿನಿಂದ ನನ್ನ ನಿರ್ಧಾರಶಕ್ತಿಯನ್ನು ಗೊಂದಲಕ್ಕೀಡುಮಾಡುವಂತಿದೆ. ಆದ್ದರಿಂದ,ಒಂದನ್ನು ನಿರ್ಧರಿಸಿ ಹೇಳು: ಯಾವುದರಿಂದ ನಾನು ಒಳಿತನ್ನು ಪಡೆದೇನು?
ಇಲ್ಲಿ 'ವ್ಯಾಮಿಶ್ರೇಣ' ಎಂದರೆ ಸಂದಿಗ್ದಾರ್ಥ (Contradicting, Confusing). 

“ಈ  ರೀತಿ ಇಬ್ಬಗೆಯ ಮಾತಿನಿಂದ ನನಗೆ ಯಾವುದು ಸರಿ-ಯಾವುದು ತಪ್ಪು ಎನ್ನುವ ತೀರ್ಮಾನ ಬರುತ್ತಿಲ್ಲ, ಹಾಗು ಆ ಶಕ್ತಿ  ನನ್ನಲ್ಲಿಲ್ಲ. ನಿನ್ನ ಅಭಿಪ್ರಾಯವನ್ನು ನಾನು ಗ್ರಹಿಸಲಾರೆ. ಯಾವ ದಾರಿಯಲ್ಲಿ ನಡೆದರೆ ನಾನು ಶ್ರೇಯಸ್ಸನ್ನು ಪಡೆದೇನು? ನನ್ನ ಬದುಕು ಸಾರ್ಥಕವಾಗುವ ನಿಶ್ಚಿತ ದಾರಿಯನ್ನು ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.

ಅಧ್ಯಾಯ - 03 : ಶ್ಲೋಕ  03

ಭಗವಾನುವಾಚ ।

ಲೋಕೇsಸ್ಮಿನ್  ದ್ವಿವಿದಾ ನಿಷ್ಠಾ ಪುರಾ ಪ್ರೋಕ್ತಾ ಮಯಾsನಘ ।

ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೩॥

ಭಗವಾನುವಾಚ-ಭಗವಂತ ನುಡಿದನು: 
ಲೋಕೇ ಅಸ್ಮಿನ್  ದ್ವಿ ವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾ ಅನಘ 
ಜ್ಞಾನಯೋಗೇನ ಸಾಂಖ್ಯಾನಾಮ್   ಕರ್ಮಯೋಗೇನ ಯೋಗಿನಾಮ್--

ಓ ಪಾಪದೂರನೆ, ಈ ಲೋಕದಲ್ಲಿ ಎರಡು ಬಗೆಯ ಇರವನ್ನು (ಮುಕ್ತಿಯನ್ನು) ನಾನು ಹಿಂದೆ ಹೇಳಿರುವೆ: ಜ್ಞಾನಮಾರ್ಗಿಗಳಿಗೆ ಜ್ಞಾನ ಪ್ರಧಾನವಾದ ಸಾಧನೆಯಿಂದ; ಕರ್ಮಮಾರ್ಗಿಗಳಿಗೆ ಕರ್ಮಪ್ರಧಾನವಾದ ಸಾಧನೆಯಿಂದ.
ಈ ಹಿಂದೆ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಹೇಳಿದ್ದ ಕೃಷ್ಣ,  ಯಾವ ನೆಲೆಯಲ್ಲಿ ಯಾವ  ಸ್ತರದಲ್ಲಿ ಯಾವುದು ಮುಖ್ಯ ಎನ್ನುವ ವಿಚಾರವನ್ನು ಇಲ್ಲಿ ವಿವರಿಸುತ್ತಾನೆ. 

ಕರ್ಮಯೋಗದ ಬಗ್ಗೆ ವಿಶೇಷ ವಿವರಣೆ ಇಲ್ಲಿಂದ ಆರಂಭವಾಗುತ್ತದೆ. 
ಈ ಶ್ಲೋಕದಲ್ಲಿ 'ನಿಷ್ಠಾ' ಎನ್ನುವ ಪದ ಬಳಕೆಯಾಗಿದೆ. ಇಲ್ಲಿ 'ನಿಷ್ಠಾ' ಎಂದರೆ ಜೀವನದ ನಡೆ ಅಥವಾ ಕೊನೇಯ ಸ್ಥಿತಿ-ಅದೇ 'ಮೋಕ್ಷ'. ಕೃಷ್ಣ ಹೇಳುತ್ತಾನೆ: “ಸಾಧಕರಲ್ಲಿ ಎರಡು ವಿಧ -ಸಾಂಖ್ಯರು ಮತ್ತು ಯೋಗಿಗಳು" ಎಂದು. ಇಲ್ಲಿ ಸಾಂಖ್ಯರು ಎಂದರೆ ಜ್ಞಾನಮಾರ್ಗದಲ್ಲಿ ಸಾಧನೆ ಮಾಡುವವರು. 

ಯೋಗಿಗಳು ಎಂದರೆ ಕರ್ಮಸಾಧನೆಯ ಮೂಲಕ ಸಾಧನೆ ಮಾಡುವವರು. 
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ: “ಜ್ಞಾನದ ಸಾಧಕರು ಜ್ಞಾನ ಮಾರ್ಗದಲ್ಲಿ ಹೋಗಬೇಕು, ಕರ್ಮದ ಮೂಲಕ ಸಾಧನೆ ಮಾಡುವವರು  ಕರ್ಮದ ದಾರಿಯಲ್ಲಿ ಹೋಗಬೇಕು” ಎಂದು ಹೇಳಿದಂತೆ ಕಾಣಿಸುತ್ತದೆ. ಇಲ್ಲಿ ಅರ್ಜುನ ಕರ್ಮದ ಮೂಲಕ ಸಾಧನೆ ಮಾಡಬೇಕಾದವ, ಆದ್ದರಿಂದ ಕೃಷ್ಣ ಆತನಲ್ಲಿ ಯುದ್ಧ ಮಾಡು ಎಂದು ಹೇಳಿದ ಎನ್ನುವಂತೆ ಕಾಣುತ್ತದೆ. ಆದರೆ ಅದು ನಿಜವಾದ ಅರ್ಥವಲ್ಲ. ನಿ

ಮಗೆ ತಿಳಿದಂತೆ ಅರ್ಜುನ ಆ ಕಾಲದ ಮಹಾ ಜ್ಞಾನಿಗಳಲ್ಲಿ ಒಬ್ಬ. ಹಾಗಿರುವಾಗ ನಾವು ಈ ರೀತಿ ಮೇಲ್ನೋಟದ ಅರ್ಥವನ್ನು ಈ ಶ್ಲೋಕಕ್ಕೆ ಅರ್ಥೈಸಬಾರದು. ಇಲ್ಲಿ ಆಳವಾದ ಚಿಂತನೆ ಅಗತ್ಯ.
ಶಾಸ್ತ್ರಗಳಲ್ಲಿ ಹೇಳುವಂತೆ ಜ್ಞಾನದಿಂದ ಮಾತ್ರ ಮೋಕ್ಷಕ್ಕೆ ಹೋಗಲು ಸಾಧ್ಯ. ಮೋಕ್ಷಕ್ಕೆ ಬೇರೆ ಮಾರ್ಗವೇ ಇಲ್ಲ.  ಅಂದಮೇಲೆ ಮೋಕ್ಷ ಸಾಧನೆಗೆ ಜ್ಞಾನ ಬೇಕೇಬೇಕು. ಕರ್ಮವಿರುವುದು ಜ್ಞಾನಕ್ಕಾಗಿ. ಜ್ಞಾನಕ್ಕೆ ಪೂರಕವಲ್ಲದ ಕರ್ಮ ಕರ್ಮವಲ್ಲ. 

ಬೆಳಗಿನಿಂದ ಸಂಜೆಯ ತನಕ ಜಪ ಮಣಿ ಹಿಡಿದು ಮಡಿ-ಮಡಿ ಎಂದು ಕುಳಿತರೆ ಅದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು. ನಾವು ಏನೇ ಕರ್ಮ ಮಾಡುವುದಿದ್ದರೂ ಅದನ್ನು ತಿಳಿದು ಮಾಡಬೇಕು. ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಬೇಕು. ಆದ್ದರಿಂದ ಬರೀ ಜ್ಞಾನಯೋಗವೆಂದಾಗಲಿ, ಬರೀ ಕರ್ಮಯೋಗವೆಂದಾಗಲಿ ಇಲ್ಲ. ಕರ್ಮವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಕರ್ಮವಿಲ್ಲ. ಛಾ೦ಧೋಕ್ಯ  ಉಪನಿಷತ್ತಿನಲ್ಲಿ ಹೇಳುವಂತೆ: 

"ಯದೇವ ವಿದ್ಯಯಾ ಕರೋತಿ ಶ್ರದ್ಧೆಯ ಉಪನಿಷದಾ, ತದೇವ ವೀರ್ಯವತ್ತರ೦ ಭವತಿ , ವಿಜ್ಞಾನ೦ ಯಜ್ಞಾ೦ ತನುತೇ". 

ಅಂದರೆ “ನೀನು ಏನನ್ನೂ ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಮಾಡುವ ಕರ್ಮವನ್ನು ಏತಕ್ಕಾಗಿ ಮಾಡುತ್ತಿದ್ದೇವೆ,ಮಾಡುವುದರ ಫಲವೇನು, ಮಾಡುವುದು ಹೇಗೆ-ಎನ್ನುವುದು ಗೊತ್ತಿರಬೇಕು. ಅಜ್ಞಾನದಿಂದ ಮಾಡುವ ಕರ್ಮ ವ್ಯರ್ಥವಾಗುತ್ತದೆ.  ಇಲ್ಲಿ ಕೃಷ್ಣ ಹೇಳಿರುವುದು ಒಂದು ಕರ್ಮಪ್ರದವಾದ ಮಾರ್ಗ(ಜನಕಾದಿಗಳಂತೆ) ಹಾಗು ಇನ್ನೊಂದು  ಜ್ಞಾನಪ್ರದವಾದ ಮಾರ್ಗ(ಸನಕಾದಿಗಳಂತೆ).

ಅಧ್ಯಾಯ - 03 : ಶ್ಲೋಕ  04

ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋsಶ್ನುತೇ ।

ನಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ  ॥೪॥

ನ ಕರ್ಮಣಾಮ್ ಅನಾರಂಭಾತ್  ನೈಷ್ಕರ್ಮ್ಯಂ ಪುರುಷಃ ಅಶ್ನುತೇ 
ನ ಚ ಸಂನ್ಯಸನಾತ್  ಏವ ಸಿದ್ಧಿಮ್  ಸಮಧಿಗಚ್ಛತಿ--

ಕರ್ಮಗಳಲ್ಲಿ ತೊಡಗದೆ ಇರುವುದರಿಂದ ಸಾಧಕ ಕರ್ಮಗಳಿಂದ ಬಿಡುಗಡೆ ಹೊಂದುವುದಿಲ್ಲ. ಕರ್ಮ ಫಲವನ್ನು ತೊರೆದ ಮಾತ್ರಕ್ಕೆ ಸಿದ್ಧಿ ಪಡೆಯುವುದಿಲ್ಲ.
ಶಾಸ್ತ್ರಗಳಲ್ಲಿ  ಹೇಳುವಂತೆ 'ಕರ್ಮ ಬಂಧನದ ದಾರಿ ಹಾಗು ಜ್ಞಾನ ಬಿಡುಗಡೆಯ ದಾರಿ'. ಆದರೆ ಕೃಷ್ಣ ಹೇಳಿದ -ಮೋಕ್ಷಕ್ಕೆ ಜ್ಞಾನಪ್ರದವಾದ ಮತ್ತು ಕರ್ಮಪ್ರದವಾದ ಎರಡು ಮಾರ್ಗಗಳಿವೆ ಎಂದು. 

ಇಲ್ಲಿ ಅದರ ವಿವರಣೆ ಕೊಡುತ್ತಾನೆ ಕೃಷ್ಣ. “ಮೋಕ್ಷ ನಿಷ್ಕರ್ಮದಿಂದ ಪಡೆಯುವಂತದ್ದು-ಕರ್ಮ ಬಂಧಕ” ಅನ್ನುವುದಾದರೆ, ಒಂದು ಶರೀರದಲ್ಲಿ ಜೀವ ಏನೂ ಕರ್ಮ ಮಾಡದೆ ಇರಲು ಸಾಧ್ಯವೇ ಇಲ್ಲ. ದೇಹ ಬಂದ ಮೇಲೆ ಕರ್ಮ ಕ್ರಿಯೆ ನಡೆದೇ ನಡೆಯುತ್ತದೆ. ಕರ್ಮ ಮಾಡುವುದನ್ನು ಬಿಟ್ಟ ತಕ್ಷಣ ಮೋಕ್ಷ ದೊರೆಯದು. ಮೂಲತಃ ಕರ್ಮವನ್ನು ತೊರೆಯುವುದೂ ಸಾಧ್ಯವಿಲ್ಲ. ಜ್ಞಾನಕ್ಕೆ ಪೂರಕವಲ್ಲದ ಯಾಂತ್ರಿಕ ಕರ್ಮ ಬಂಧಕ.  ಜ್ಞಾನಕ್ಕೆ ಪೂರಕವಾದ ಕರ್ಮ ಎಂದೂ ಬಂಧಕವಲ್ಲ.

ಕರ್ಮದ ಫಲವನ್ನು ಬಯಸದೇ ಇದ್ದ ತಕ್ಷಣ ಯಾವ ಸಿದ್ಧಿಯೂ  ಆಗದು. ಕೇವಲ ಕರ್ಮತ್ಯಾಗ ಮಾಡುವುದರಿಂದ ಎಂದೂ ಸಿದ್ಧಿ ಪಡೆಯಲು ಸಾಧ್ಯವಿಲ್ಲ.

ಅಧ್ಯಾಯ - 03 : ಶ್ಲೋಕ  05

ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।

ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥೫॥

ನ ಹಿ ಕಶ್ಚಿತ್ ಕ್ಷಣಮ್ ಅಪಿ ಜಾತು ತಿಷ್ಠತಿ ಅಕರ್ಮ ಕೃತ್ 
ಕಾರ್ಯತೇ ಹಿ ಅವಶಃ ಕರ್ಮ ಸರ್ವಃ ಪ್ರಕೃತಿಜೈಃ ಗುಣೈಃ--

ಯಾವನೂ ಒಂದು ಕ್ಷಣ ಕೂಡಾ ಏನೂ ಮಾಡದೆ ತೆಪ್ಪಗಿರುವುದು ಸಾಧ್ಯವಿಲ್ಲ. 

ಪ್ರತಿಯೊಬ್ಬನೂ ಪ್ರಕೃತಿಯ ಗುಣಗಳಿಂದ ಅರಿವಿಲ್ಲದೆಯೇ (ಭಗವಂತನ ಅಧೀನವಾಗಿ) ಕರ್ಮ ಮಾಡುತ್ತಾನೆ.

ಕರ್ಮತ್ಯಾಗದಿಂದ ಸಿದ್ಧಿ ಸಿಗದು. ಅಷ್ಟೇ ಅಲ್ಲ, ಕರ್ಮ ತ್ಯಾಗ ಮಾಡುವುದು ಸಾಧ್ಯವಿಲ್ಲ!  ನಮ್ಮ ಅನ್ನಮಯ ಮತ್ತು ಪ್ರಾಣಮಯ ಕೋಶ ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತವೆ. ಬದುಕಿರುವಾಗ ನಿಷ್ಕ್ರೀಯರಾಗಿರುವುದು ಅಸಾಧ್ಯ. ಯಾವ ಕಾಲದಲ್ಲೂ ಕೂಡಾ ಒಂದು ಕ್ಷಣ ನಿಷ್ಕ್ರೀಯನಾಗಿ ಇರುವುದು ಸಾಧ್ಯವಿಲ್ಲ. "ಕಾರ್ಯತೇ ಹಿ ಅವಶಃ"-ದೇಹದ ಒಳಗಿರುವ ಜೀವ ದೇಹದ ಮೂಲಕ ಮನಸ್ಸಿನ ಮೂಲಕ, ಮಾತಿನ ಮೂಲಕ-ಕೆಲಸ ಮಾಡಿಸಲ್ಪಡುತ್ತದೆ. ಅದು ನಮ್ಮ ಸ್ವಾಧೀನದಲ್ಲಿರುವುದಿಲ್ಲ, ಅದು ಭಗವಂತನ ವಶ. 
ಇಡೀ ವಿಶ್ವವೇ ಪ್ರಕೃತಿಯಿಂದ ಸೃಷ್ಠಿಯಾಗಿದೆ. 

ಅದರ ಮೂಲ ದ್ರವ್ಯ ಸತ್ವ-ರಜಸ್ಸು-ತಮಸ್ಸು. ಜೀವಕ್ಕೆ ಅದರದ್ದೇ ಆದ ಸ್ವಭಾವವಿರುತ್ತದೆ, ಅದಕ್ಕನುಗುಣವಾಗಿ ಪ್ರಕೃತಿಯ ಈ ತ್ರಿಗುಣಗಳ ಪ್ರಭಾವ ನಮ್ಮ ಮೇಲಾಗುತ್ತಿರುತ್ತದೆ. ಆದ್ದರಿಂದ  ನಿಷ್ಕ್ರೀಯತೆ ಎನ್ನುವುದು ಅರ್ಥ ಶೂನ್ಯ. ನಾವು ಜೀವನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕರ್ತವ್ಯ ಶೀಲರಾಗಬೇಕು. ಅದರೊಂದಿಗೆ ಮಾನಸಿಕವಾಗಿ ಐಹಿಕ ಪ್ರಪಂಚದಿಂದ ಆಚೆಗಿನ ಸತ್ಯದ ಕಡೆ ನಮ್ಮ ಮನಸ್ಸು ಜಾಗೃತವಾಗಿರಬೇಕು. ಈ ಎಚ್ಚರದಿಂದ ಎಲ್ಲಾ ಕರ್ತವ್ಯ ಕರ್ಮಗಳನ್ನು ಮಾಡಬೇಕು. 

ನಿಷ್ಕ್ರೀಯತೆ  ವೇದಾಂತವಲ್ಲ-ಕರ್ತವ್ಯಚ್ಯುತಿ ಅಧ್ಯಾತ್ಮವಲ್ಲ. ಭಗವಂತನ ಪ್ರಜ್ಞೆಯೊಂದಿಗೆ ನಿನ್ನ ಪಾಲಿನ ಕರ್ಮ ನೀನು ಮಾಡು. ಹೀಗೆ ಮಾಡಿದಾಗ ಕರ್ಮ ಮತ್ತು ಜ್ಞಾನ ಮಾರ್ಗಗಳು ಒಂದಕ್ಕೊಂದು ಪೂರಕವಾಗುತ್ತವೆ.

ಅಧ್ಯಾಯ - 03 : ಶ್ಲೋಕ  06

ಕರ್ಮೇಂದ್ರಿಯಾಣಿ  ಸಂಯಮ್ಯ ಯ ಆಸ್ತೇ ಮನಸಾ ಚರನ್ ।

ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥೬॥

 ಕರ್ಮೇಂದ್ರಿಯಾಣಿ  ಸಂಯಮ್ಯ ಯಃ ಆಸ್ತೇ ಮನಸಾ ಚರನ್ 
ಇಂದ್ರಿಯ ಅರ್ಥಾನ್ ವಿಮೂಢ ಆತ್ಮಾ ಮಿಥ್ಯಾ ಆಚಾರಃ ಸಃ ಉಚ್ಯತೇ- 

ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ  ಡಂಭಾಚಾರಿ ಎನಿಸುತ್ತಾನೆ.
ಈ ಶ್ಲೋಕದಲ್ಲಿ ಕೃಷ್ಣ ಒಂದು ಮುಖ್ಯವಾದ ವಿಚಾರವನ್ನು ಹೇಳಿದ್ದಾನೆ. 

ಸಾಮಾನ್ಯವಾಗಿ ಇಂದಿನ ಪ್ರಪಂಚದಲ್ಲಿ ಹೊರಗಿನ ವೇಷಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದನ್ನು ನಾವು ಕಾಣುತ್ತೇವೆ. ಮನಸ್ಸಿನಲ್ಲಿ ಎಲ್ಲಾ ಆಸೆ ಇಟ್ಟುಕೊಂಡು, ಯಾವುದೋ ಭಯದಿಂದ ಹೊರ ನೋಟಕ್ಕೆ ಸದಾಚಾರಸಂಪನ್ನರಂತೆ ಬದುಕುವವರಿದ್ದಾರೆ.

ಕೃಷ್ಣ ಇದನ್ನು ಕಪಟ ಧಾರ್ಮಿಕತೆ ಎನ್ನುತ್ತಾನೆ. ನಾವು ಮೊದಲು ನಮ್ಮ ಆತ್ಮ ಸಾಕ್ಷಿಗೆ ವಂಚನೆ ಮಾಡದೆ ಬದುಕಬೇಕು. ಹೊರಗಿನ ಆಚಾರಕ್ಕಿಂತ ಮೊದಲು ಒಳಗಿನ ಆಚಾರಶುದ್ಧಿ ಮುಖ್ಯ. ಇದಿಲ್ಲದಿದ್ದರೆ ಎಂದೂ ಉದ್ಧಾರವಿಲ್ಲ. ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ  ಡಂಭಾಚಾರಿ ಎನಿಸುತ್ತಾನೆ ಎಂದಿದ್ದಾನೆ ಕೃಷ್ಣ.  

ಅಧ್ಯಾಯ - 03 : ಶ್ಲೋಕ  07

ಯಸ್ತ್ವಿಂದ್ರಿಯಾಣಿ   ಮನಸಾ ನಿಯಮ್ಯಾsರಭತೇsರ್ಜುನ ।

ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ ॥೭॥

ಯಃ ತು ಇಂದ್ರಿಯಾಣಿ  ಮನಸಾ ನಿಯಮ್ಯ ಆರಭತೇ ಅರ್ಜುನ 
ಕರ್ಮ ಇಂದ್ರಿಯೈಃ ಕರ್ಮಯೋಗಮ್ ಅಸಕ್ತಃ ಸ ವಿಶಿಷ್ಯತೇ-

ಓ ಅರ್ಜುನ, ಇಂದ್ರಿಯಗಳನ್ನು ಮನೋಬಲದಿಂದ ಗೆದ್ದು, ಫಲದ ನಂಟು ತೊರೆದು, ಇಂದ್ರಿಯಗಳ ಮೂಲಕ ಸಾಧನೆಯಲ್ಲಿ ತೊಡಗುವವನು ಮಿಗಿಲಾದವನು.
ಮನಸ್ಸು ಸ್ವಚ್ಛವಾಗಿದ್ದು, ಇಂದ್ರಿಯಗಳ ಮೇಲೆ ಮಾನಸಿಕ ಕಡಿವಾಣ ಗಟ್ಟಿಯಿದ್ದಾಗ- ಕರ್ಮೆಂದ್ರಿಯದಿಂದ ಮಾಡುವ ಸಾಧನೆ  ಕರ್ಮಯೋಗವಾಗುತ್ತದೆ. ಇದು ಶುದ್ಧ ಅಧ್ಯಾತ್ಮ ಸಾಧನೆ. 

ಈ ಸ್ಥಿತಿಯಲ್ಲಿ ಇಂದ್ರಿಯಗಳು ದಾರಿ ತಪ್ಪುವುದಿಲ್ಲ. ತನ್ನ ಜೀವ ಸ್ವರೂಪದ ಸ್ವಭಾವಕ್ಕನುಗುಣವಾಗಿ ಚತ್ತ ಶುದ್ಧಿಯಿಂದ ಮಾಡುವ ಕರ್ಮ ನಿಜವಾದ ಅಧ್ಯಾತ್ಮ ಸಾಧನೆ. ಈ ರೀತಿಯ ಸಾಧನೆಯಲ್ಲಿ ತೊಡಗುವವನು ಶ್ರೇಷ್ಠನೆನಿಸುತ್ತಾನೆ. ಇಂತವರು ಒಳಗೊಂದು-ಹೊರಗೊಂದು ಆಗಿರದೆ, ಮನೋಬಲದಿಂದ ಇಂದ್ರಿಯಗಳನ್ನು ಗೆದ್ದು, ಫಲದ ನಂಟನ್ನು ತೊರೆದು, ಎತ್ತರಕ್ಕೇರುತ್ತಾರೆ.

ಅಧ್ಯಾಯ - 03 : ಶ್ಲೋಕ  08

ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ ।

ಶರೀರಯಾತ್ರಾsಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ॥೮॥

ನಿಯತಮ್  ಕುರು ಕರ್ಮ ತ್ವಮ್  ಕರ್ಮ ಜ್ಯಾಯಃ  ಹಿ  ಅಕರ್ಮಣಃ 
ಶರೀರ ಯಾತ್ರಾ ಅಪಿ ಚ ತೇ ನ ಪ್ರಸಿದ್ಧ್ಯೇತ್ ಅಕರ್ಮಣಃ -

ನಿನ್ನ ಪಾಲಿನ ಕರ್ಮ ನೀನು ಮಾಡು. ನಿಷ್ಕ್ರೀಯತೆಗಿಂತ ಕರ್ಮ ಮೇಲಲ್ಲವೇ ? ನಿಷ್ಕ್ರೀಯನಾದರೆ ನಿನ್ನ ಬಾಳ ಬಂಡಿಯ ಪಯಣವು ಸಾಗದು.
ಕೃಷ್ಣ ಹೇಳುತ್ತಾನೆ: 'ನೀನು ನಿನ್ನ ಜೀವ ಸ್ವಭಾವಕ್ಕೆ ಅನುಗುಣವಾದ, ಜ್ಞಾನಕ್ಕೆ ಪೂರಕವಾದ ನಿಯತ ಕರ್ಮವನ್ನು ಮಾಡು' ಎಂದು. ಇಲ್ಲಿ ಅರ್ಜುನನನ್ನು ನೋಡಿದರೆ,ಆತನ ಜೀವ ಸ್ವಭಾವ ಅನ್ಯಾಯದ ವಿರುದ್ಧ ಹೋರಾಡಿ ದೇಶದ ಪ್ರಜೆಗಳ ರಕ್ಷಣೆ ಮಾಡುವ ಕ್ಷತ್ರಿಯ ಸ್ವಭಾವ. 

ಅದನ್ನು ಬಿಟ್ಟು, ದೇಶದಲ್ಲಿ ಅನ್ಯಾಯ ತಾಂಡವವಾಡುತ್ತಿರುವಾಗ, ಜ್ಞಾನ ಮಿಗಿಲೆಂದು ತಪಸ್ಸನ್ನಾಚರಿಸಿದರೆ ಅದು ನಿಜವಾದ ಯೋಗವೆನಿಸುವುದಿಲ್ಲ. ಕೃಷ್ಣ ಹೇಳುತ್ತಾನೆ, “ಎಂದೂ ನಿಷ್ಕ್ರೀಯನಾಗಬೇಡ,ನಿನ್ನ ಕರ್ಮವನ್ನು ನೀನು ಮಾಡು,ಅದರಿಂದ ಏನು ಸಿಕ್ಕಿತೋ ಅದನ್ನು ಅನುಭವಿಸು. ಆದರೆ ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಲಿ. ಭಗವಂತನ ಎಚ್ಚರ ಯಾವಾಗಲೂ ಇರಲಿ” ಎಂದು. ‘ಭಗವಂತ ಈ ಕರ್ಮವನ್ನು ನನ್ನ ಕೈಯಿಂದ ಮಾಡಿಸುತ್ತಿದ್ದಾನೆ, ಇದು ಅವನಿಗರ್ಪಿತ’ ಎನ್ನುವ ಭಾವನೆಯಿಂದ ಕರ್ಮ ಮಾಡಿದಾಗ ಯಾವ ಕರ್ಮವೂ ನಮಗೆ ಬಂಧಕವಾಗುವುದಿಲ್ಲ. 
ನಿನ್ನ   ಪಾಲಿನ ಕರ್ಮ ಮಾಡು, ಬಂದುದನುಣ್ಣು, ಹರಿಯ ಚರಣದ ಅರಿವು ತಪ್ಪದಿರಲಿ. 

ಹರಿಯೇ ಪರ ದೈವತವು, ಹರಿಯೇ ಗುರು ಆಸರೆಯು, ಹರಿಯೊಬ್ಬನೆ ಜಗದ ತಾಯಿ ತಂದೆ. 
ನಾವು ಒಂದು  ದೇಹದಲ್ಲಿರುವಷ್ಟು ಕಾಲ ಕರ್ಮ ಅನಿವಾರ್ಯ. ಅಪರೋಕ್ಷ ಜ್ಞಾನ ಬಂದಾಗಲೂ ಕೂಡಾ ಕರ್ಮ ನಿರಂತರ. ಈ ರೀತಿ ಕೃಷ್ಣ  ಕರ್ಮ ಸಿದ್ಧಾಂತವನ್ನು ಈ ಶ್ಲೋಕದ ಮುಖೇನ ನಮ್ಮ ಮುಂದೆ ಬಿಚ್ಚಿಟ್ಟಿದ್ದಾನೆ.
ಇಲ್ಲಿ ಒಂದು ವಿಷಯವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಶಾಸ್ತ್ರಗಳು ಹೇಳುವ ಪ್ರಕಾರ ಕರ್ಮ ಬಂಧಕ . ಪುನಃ ಕರ್ಮ ಮಾಡುವುದರಿಂದ ನಾವು ಕರ್ಮ ಚಕ್ರದಲ್ಲಿ ಸಿಲುಕುತ್ತೇವೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ- ಕರ್ಮ ಅನಿವಾರ್ಯ ಎಂದು.  ಹಾಗಿದ್ದರೆ ಮೋಕ್ಷದ ಮಾರ್ಗ ಯಾವುದು? ನಮ್ಮ ಈ ಪ್ರಶ್ನೆಗೆ ಮುಂದಿನ ಶ್ಲೋಕದಲ್ಲಿ ಸ್ಪಷ್ಟ ಉತ್ತರವಿದೆ.

ಅಧ್ಯಾಯ - 03 : ಶ್ಲೋಕ  09

ಯಜ್ಞಾರ್ಥಾತ್ ಕರ್ಮಣೋsನ್ಯತ್ರ ಲೋಕೋsಯಂ ಕರ್ಮಬಂಧನಃ ।

ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ ॥೯॥

ಯಜ್ಞಾ ಅರ್ಥಾತ್ ಕರ್ಮಣಃ ಅನ್ಯತ್ರ ಲೋಕಃ ಅಯಮ್  ಕರ್ಮ ಬಂಧನಃ 
ತತ್ ಅರ್ಥಮ್  ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ-- 

ಭಗವಂತನ ಪೂಜಾ ರೂಪವಾದ ಇಂಥ ಕರ್ಮಕ್ಕಿಂತ ಬೇರೆಯಾದ ನಡೆಯಲ್ಲಿ ಮಾತ್ರ ಸಾಧಕ ಕರ್ಮದ ಕಟ್ಟಿಗೆ ಸಿಲುಕುತ್ತಾನೆ. ಓ ಕೌಂತೇಯ, ಫಲದ ನಂಟು ತೊರೆದು, ಭಗವಂತನ ಪೂಜೆಯೆಂದು ಕರ್ಮ ಮಾಡು.

ಈ ಲೋಕ ಕರ್ಮದ ಬಂಧನಕ್ಕೆ ಒಳಗಾಗಿದೆ. ಆದರೆ ಎಲ್ಲಾ ಕರ್ಮವೂ ಬಂಧಕ ಅಲ್ಲ. ತಿಳಿದು ಮಾಡುವ ಕರ್ಮ ಎಂದೂ ಬಂಧಕವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ಭಗವಂತನ ಪ್ರಜ್ಞೆಯಿಂದ ಮಾಡಬೇಕು. ನಾವು ಸೂತ್ರದ ಗೊಬೆಗಳಿದ್ದಂತೆ. ಭಗವಂತ ಸೂತ್ರದಾರ. ಈ ಎಚ್ಚರದಿಂದ ನಾವು ಕರ್ಮ ಮಾಡಿದಾಗ ನಮ್ಮ ಪ್ರತಿಯೊಂದು ಕರ್ಮವೂ ಕೂಡಾ ಯಜ್ಞವಾಗುತ್ತದೆ.  ಉದಾಹರಣೆಗೆ ನಾವು ಉಸಿರಾಡುತ್ತೇವೆ. ಹೊರಗಿನಿಂದ ಆಮ್ಲಜನಕವನ್ನು ಹೀರಿ ಕಾರ್ಬನ್  ಡೈ ಆಕ್ಸೈಡನ್ನು ಹೊರ ಹಾಕುತ್ತೇವೆ. ನಮ್ಮೊಳಗಿರುವ ಆ ವಿಶೇಷ ಯಂತ್ರದ ಕಲ್ಪನೆ ಕೂಡಾ ನಮಗಿರುವುದಿಲ್ಲ. ನಮಗೆ ಅರಿವಿಲ್ಲದಂತೆ ಈ ಕ್ರಿಯೆ ನಡೆಯುತ್ತಿರುತ್ತದೆ.  

ನಾವು ಬಿಟ್ಟ ಗಾಳಿಯನ್ನು ಗಿಡಗಳು ಸೇವಿಸಿ ನಮಗೆ ಬೇಕಾದ ಆಮ್ಲಜನಕವನ್ನು ಕೊಡುತ್ತವೆ. ಇದೆಲ್ಲವೂ ಆ ಭಗವಂತನ ವ್ಯವಸ್ಥೆ. ಈ ಕಾರಣಕ್ಕಾಗಿ ಭಾರತೀಯರು ಅತಿಹೆಚ್ಚು ಆಮ್ಲಜನಕವನ್ನು ಕೊಡುವ ಅಶ್ವತ್ಥವೃಕ್ಷವನ್ನು ಪೂಜಿಸುತ್ತಾರೆ.  ಆ ವೃಕ್ಷದಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ. ಈ ರೀತಿ ನಾವು ನಮ್ಮ ಪ್ರತಿಯೊಂದು ಕಾರ್ಯದಲ್ಲೂ  ಭಗವಂತನ ಹಿರಿಮೆಯನ್ನು ತಿಳಿದಾಗ, ನಾವು ಮಾಡುವ ಕರ್ಮ-ಕರ್ಮಯೋಗವಾಗುತ್ತದೆ. ಹಾಗು ಅದು ಎಂದೂ ಬಂಧಕವಾಗುವುದಿಲ್ಲ. 

ಇಲ್ಲಿ ಬಳಕೆಯಾದ 'ಯಜ್ಞ' ಪದದ ಅರ್ಥ 'ಯಜ-ದೇವ-ಪೂಜಾ' ಅಂದರೆ ದೇವರ ಪೂಜೆ ಎಂದರ್ಥ. ದೇವರನ್ನು ಕೂಡಾ ಯಜ್ಞ ಎಂದು ಕರೆಯುತ್ತಾರೆ.  ಆದ್ದರಿಂದ ಕೇವಲ ಅಗ್ನಿ ಮುಖದಲ್ಲಿ ಮಾಡುವ  ಪೂಜೆ ಮಾತ್ರ ಯಜ್ಞವಲ್ಲ. ನಮ್ಮ ಪ್ರತಿಯೊಂದು ಕರ್ಮವನ್ನು  ಭಗವದ್ಪ್ರಜ್ಞೆಯಿಂದ ಮಾಡಿದಾಗ ಅದು ಯಜ್ಞವಾಗುತ್ತದೆ. ಇಲ್ಲಿ ನಾವು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ನಾವು ಕರ್ಮದ ಬಗ್ಗೆ ಇರುವ ನಮ್ಮ  ಭಾವನೆಯನ್ನು ಬದಲಿಸಿ ಕೊಳ್ಳಬೇಕು ಅಷ್ಟೆ. ಕರ್ಮ ಎಂದರೆ 'ಕರ+ಮ' ಅಂದರೆ ಭಗವಂತನ ರಾಜ್ಯದ ಪ್ರಜೆಗಳಾದ ನಾವು ಆತನಿಗೆ ಸಲ್ಲಿಸುವ 'ಕರ' ಅಥವಾ ಕಂದಾಯವೇ ಕರ್ಮ.  ಭಗವಂತ ಎಂದೂ ದುಡ್ಡಿನ ಕಂದಾಯವನ್ನು ಪಡೆಯುವುದಿಲ್ಲ. ಆತನ ಕರ ಸಂದಾಯವನ್ನು ನಾವು- ನಮ್ಮನ್ನು ಸಮಾಜ ಕ್ರಿಯೆಯಲ್ಲಿ ತೊಡಗಿಸಿಗೊಂಡು ಸಲ್ಲಿಸಬೇಕು. ಈ ಭಾವನೆ ಬಂದಾಗ ಕರ್ಮ ಬಂಧಕವಾಗದೆ ಮೋಕ್ಷ ಮಾರ್ಗವಾಗುತ್ತದೆ. 

ಇಲ್ಲಿ  ಕೃಷ್ಣ ಅರ್ಜುನನನ್ನು 'ಕೌಂತೇಯ' ಎಂದು ಸಂಬೋಧಿಸಿದ್ದಾನೆ. ಈ ರೀತಿ ಇಲ್ಲಿ ಸಂಬೋಧಿಸಲು ವಿಶೇಷ ಕಾರಣವಿದೆ.  ಕುಂತಿ  ಅಷ್ಟು ದೊಡ್ಡ ಮನೆತನದಲ್ಲಿ ಹುಟ್ಟಿ ಬೆಳೆದರೂ ಕೂಡಾ,  ಆಕೆ ಎಂದೂ ಭೋಗದ ಆಸೆಗೆ ಬಲಿಬಿದ್ದವಳಲ್ಲ. ತನ್ನ ಯೌವನವನ್ನು ಕಾಡಿನಲ್ಲಿ ಕಳೆದ ಆಕೆ, ತನ್ನ ಮಕ್ಕಳು ಧೈರ್ಯಗೆಟ್ಟಾಗ ಧೈರ್ಯ ತುಂಬಿದ ಧೀರ ಮಹಿಳೆ.  ಆಕೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಆದರೆ ಆಕೆ ಕೃಷ್ಣನಲ್ಲಿ “ನನಗೆ ಕಷ್ಟವನ್ನೇ ಕೊಡು, ಏಕೆಂದರೆ ಆಗ ನಮಗೆ ಸದಾ ನಿನ್ನೊಂದಿಗಿರುವ ಭಾಗ್ಯವಿರುತ್ತದೆ” ಎಂದಾಕೆ!  ಕರ್ತವ್ಯ ನಿಷ್ಠೆಯನ್ನು ಜಗತ್ತಿಗೆ ತೋರಿದ ಧೀರ ಮಹಿಳೆ ಆಕೆ. ಇಂಥ ಮಹಾ ಮಹಿಳೆಯ ಮಗನಾದ ನಿನಗೆ ಕರ್ಮ ಯೋಗದ ಬಗ್ಗೆ ತಿಳಿದೇ ಇದೆ  ಎನ್ನುವ ಧ್ವನಿಯಲ್ಲಿ ಕೃಷ್ಣ ಅರ್ಜುನನನ್ನು 'ಕೌಂತೇಯ' ಎಂದು ಸಂಬೋಧಿಸಿದ್ದಾನೆ.

ಈ ರೀತಿ ಜ್ಞಾನವನ್ನು ಮತ್ತು ಕರ್ಮವನ್ನು ಹೇಗೆ ಸಮನ್ವಯಗೊಳಿಸಿಕೊಂಡು ಬದುಕಬೇಕು ಎನ್ನುವುದನ್ನು ಹೇಳಿದ ಕೃಷ್ಣ, ಮುಂದೆ ಅದು ಸ್ಪಷ್ಟವಾಗಿ ಅರ್ಥವಾಗುವಂತೆ ಒಂದು ಕಥೆಯ ರೂಪದಲ್ಲಿ ವಿವರಣೆಯನ್ನು ಕೊಡುತ್ತಾನೆ. ಆ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

ಅಧ್ಯಾಯ - 03 : ಶ್ಲೋಕ  10

ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ ।

ಅನೇನ ಪ್ರಸವಿಷ್ಯಧ್ವಮೇಷ ವೋsಸ್ತ್ವಿಷ್ಟಕಾಮಧುಕ್ ॥೧೦॥

ಸಹ ಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರಾ ಉವಾಚ ಪ್ರಜಾಪತಿಃ 
ಅನೇನ ಪ್ರಸವಿಷ್ಯಧ್ವಮ್ ಏಷ ವಃ ಅಸ್ತು ಇಷ್ಟ ಕಾಮ ಧುಕ್- 

ಹಿಂದೆ ಪ್ರಜಾಪತಿ ಭಗವಂತನ ಪೂಜಾ ರೂಪವಾದ ಕರ್ಮದ ಜೊತೆಗೆ ಮಾನವರನ್ನು ಹುಟ್ಟಿಸಿ ಹೀಗೆ ಹೇಳಿದನು: ಇದರಿಂದ ಬೆಳವಣಿಗೆ ಹೊಂದಿ, ಇದು ನಿಮ್ಮ ಬಯಕೆಯನ್ನು ಈಡೇರಿಸಲಿ.

ಹಿಂದೆ ಚತುರ್ಮುಖ- ಚಿಂತನ ಶೀಲ ಮಾನವರನ್ನು ಸೃಷ್ಠಿ ಮಾಡಿ, ಅವರಿಗಾಗಿ ಅವರು ಆಚರಿಸಬೇಕಾದ ಯಜ್ಞವನ್ನು ಸೃಷ್ಠಿ ಮಾಡಿದ. ಹಾಗು ಹೇಳಿದ " ಈ ಪೂಜಾ ವಿಧಾನದಿಂದ ಬೇಕಾದ್ದನ್ನು ಪಡೆಯಿರಿ. ಇದು ನೀವು ಬಯಸಿದ ಅಭೀಷ್ಟವನ್ನು ಕೊಡುವ ಕಾಮದೇನು" ಎಂದು. ಹಿಂದೆ ಹೇಳಿದಂತೆ  'ಯಜ್ಞ' ಎಂದರೆ 'ದೇವರನ್ನು ಉಪಾಸನೆ ಮಾಡುವ ವಿಧಾನ'; 

'ದಾನ' ಹಾಗು 'ಸಂಗತೀಕರಣ' ಕೂಡಾ ಯಜ್ಞ. ಇಲ್ಲಿ ದಾನ ಎನ್ನುವುದಕ್ಕೆ ವಿಶೇಷ ಅರ್ಥವಿದೆ. ತನ್ನಲ್ಲಿ ಬೇಕಾದಷ್ಟು ಇದ್ದು ತನಗೆ ಬೇಡವಾದದ್ದನ್ನು ಇನ್ನೊಬ್ಬನಿಗೆ ಕೊಡುವುದು ದಾನವಲ್ಲ. ತನ್ನಲ್ಲಿ ಎರಡು ಹೊತ್ತಿನ ಊಟವಿದ್ದು, ಇನ್ನೊಬ್ಬನಲ್ಲಿ ಒಂದು ಹೊತ್ತಿನ ಊಟ ಕೂಡಾ ಇಲ್ಲದಿದ್ದಾಗ, ಅವನಿಗೆ ತನ್ನಲ್ಲಿರುವ ಊಟವನ್ನು ಕೊಟ್ಟು ಹಂಚಿ ತಿನ್ನುವುದು ನಿಜವಾದ ದಾನ. ಇನ್ನೊಬ್ಬರ ಕಷ್ಟದಲ್ಲಿ ಕರಗುವುದು ನಿಜವಾದ ದಾನ. ಇನ್ನು ಸಂಗತೀಕರಣ ಎಂದರೆ ಜ್ಞಾನಾರ್ಜನೆಗಾಗಿ ಒಂದು ಕಡೆ ಕಲೆಯುವುದು. ಪ್ರವಚನ ಒಂದು ಸಂಗತೀಕರಣ.


ಅಧ್ಯಾಯ - 03 : ಶ್ಲೋಕ  11

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।

ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ ॥೧೧॥

ದೇವಾನ್ ಭಾವಯತಾ ಅನೇನ ತೇ ದೇವಾಃ ಭಾವಯಂತು ವಃ 
ಪರಸ್ಪರಮ್  ಭಾವಯಂತಃ ಶ್ರೇಯಃ ಪರಮ್ ಅವಾಪ್ಸ್ಯಥ-

ಇದರಿಂದ ದೇವತೆಗಳಿಗೆ ನೆರವಾಗಿ. ಆ ದೇವತೆಗಳು ನಿಮಗೆ ನೆರವಾಗಲಿ. ಒಬ್ಬರಿಗೊಬ್ಬರು ನೆರವಾಗುತ್ತ ಹಿರಿಯ ಹಿತವನ್ನು ಪಡೆಯಿರಿ.

ಈ ರೀತಿ ಯಜ್ಞದ ಸೃಷ್ಟಿ ಮಾಡಿದ ಚತುರ್ಮುಖ ಹೇಳಿದನಂತೆ: ಯಜ್ಞಗಳ ಮೂಲಕ ನೀವು  ದೇವತೆಗಳಿಗೆ ನೇರವಾಗಿ ಹಾಗು ಅವರು ನಿಮ್ಮ ಅಭೀಷ್ಟವನ್ನು ಪೂರೈಸಲಿ" ಎಂದು.  "ಹೀಗೆ ಒಬ್ಬರಿಗೊಬ್ಬರು ನೆರವಾಗುತ್ತಾ ಹಿರಿಯ ಹಿತವನ್ನು ಪಡೆಯಿರಿ" ಎಂದನಂತೆ. ನಾವು ನಮಗೆ ಬೇಕಾದುದನ್ನು ನಾವೇ ಸೃಷ್ಟಿಸಿ ಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ. ನಾವು ಬಿತ್ತಿ ಬೆಳೆಯಬೇಕು ಎಂದರೆ ಪ್ರಕೃತಿಯಲ್ಲಿ ವಾತಾವರಣ ವೈಪರಿತ್ಯ ಆಗಬಾರದು. ಇಲ್ಲದಿದ್ದರೆ ನಮಗೆ ಏನನ್ನೂ ಬೆಳೆಯಲು ಸಾಧ್ಯವಿಲ್ಲ.  

ಪ್ರತಿಯೊಂದು ಕ್ರಿಯೆಯ ಹಿಂದೆ ಅನೇಕ ದೇವತಾ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ನಮ್ಮ ಪ್ರತಿಯೊಂದು ಅಂಗಾಂಗಳಿಗೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಆ ಶಕ್ತಿ ಕೆಲಸ ಮಾಡದೆ ಇದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗೆ ನಮಗೆ ಬದುಕು ಕೊಟ್ಟು, ನೋಡುವ ಕಣ್ಣು, ಕೇಳುವ ಕಿವಿ ಕೊಟ್ಟು,ಒಳ್ಳೆಯದನ್ನು ನೋಡುವ, ಒಳ್ಳೆಯದನ್ನು ಕೇಳುವ ಬುದ್ಧಿ ಕೊಟ್ಟು, ಈ ಎಲ್ಲಾ ಕಾರ್ಯವನ್ನು ಒಂದು ದೇವತೆಗಳ ಸಮೂಹ ನಿರಂತರ ನಡೆಸುವಂತೆ ಭಗವಂತನ ವ್ಯವಸ್ಥೆ ಇದೆ. ಹೀಗಿರುವಾಗ ನಾವು ಇಂತಹ ದೇವತಾ ಶಕ್ತಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಹೀಗೆ ಒಬ್ಬರಿಗೊಬ್ಬರು ನೆರವಾದಾಗ ನಾವು ಹಿತವನ್ನು ಕಾಣಲು ಸಾಧ್ಯ. 

ಸಾಮಾನ್ಯವಾಗಿ ಅಗ್ನಿ ಮುಖದಲ್ಲಿ ಮಾಡುವ ಪೂಜೆಯನ್ನು ಯಜ್ಞ ಎನ್ನುವುದು ವಾಡಿಕೆ. ದೇವರ ಪೂಜೆಯಲ್ಲಿ ಅಗ್ನಿ ಅತ್ಯಂತ ಮುಖ್ಯ ಪ್ರತೀಕ. ಏಕೆಂದರೆ ಅಗ್ನಿ ಅತ್ಯಂತ ಶುದ್ಧ. ಅಗ್ನಿಗೆ ಏನನ್ನು ಹಾಕಿದರೂ ಅದು ಶುದ್ಧವಾಗುತ್ತದೆ. ಅಗ್ನಿ  ಭಗವಂತನ ಪ್ರತೀಕ. ಭಗವಂತನಿಗೆ ಆಕಾರವಿಲ್ಲ, ಆತ ಬೆಳಕಿನ ಪುಂಜ ಹಾಗು ಪವಿತ್ರ. ಇದೇ ಗುಣವನ್ನು ಅಗ್ನಿಯಲ್ಲಿ ನಾವು ಕಾಣಬಹುದು. ಇನ್ನು ನಾವು ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎಂದರೆ ಅದು ಅಗ್ನಿ ಮುಖೇನ ಮಾತ್ರ ಸಾಧ್ಯ.  ಯಜ್ಞದಲ್ಲಿ ನಾವು ಪೂಜೆ ಮಾಡುವುದು ಬೆಂಕಿಯನ್ನಲ್ಲ, ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ-ಯಜ್ಞ. ಈ ಅರಿವಿಲ್ಲದೆ ಯಜ್ಞವನ್ನು ಮಾಡಿದರೆ ಹೊಗೆ ತಿಂದು ಸಾಯಬೇಕಾದೀತು! ನಮ್ಮ ಪೂಜೆ ಅಗ್ನಿನಾರಾಯಣನಿಂದ ಸೂರ್ಯ ನಾರಾಯಣನನ್ನು ಸೇರಿ, ಮರಳಿ ನರನಾರಾಯಣನನ್ನು ತಲುಪುತ್ತದೆ. ಇದಕ್ಕಾಗಿ ದೇವರನ್ನು ಕುರಿತು ಮಾಡುವ ಯಜ್ಞ ಯಾವಾಗಲೂ ಹಗಲು ಹೊತ್ತಿನಲ್ಲೇ ನಡೆಯುತ್ತದೆ. ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನವಾಗುವ ಯಜ್ಞಶಕ್ತಿ, ವಾತಾವರಣವನ್ನು ಸೇರಿ ಲೋಕಕ್ಕೆ ಮಂಗಳಮಂಗಳವನ್ನುಂಟುಮಾಡುತ್ತದೆ. ಇದನ್ನು ಇಲ್ಲಿ ಕೊಡು-ಕೊಂಡುಕೊಳ್ಳುವ ಕ್ರಿಯೆ ಎಂದಿದ್ದಾರೆ.

ಅಧ್ಯಾಯ - 03 : ಶ್ಲೋಕ  12

ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ ।

ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ॥೧೨॥

ಇಷ್ಟಾನ್ ಭೋಗಾನ್ ಹಿ ವಃ ದೇವಾಃ ದಾಸ್ಯಂತೇ ಯಜ್ಞ ಭಾವಿತಾಃ 
ತೈಃ ದತ್ತಾನ್ ಅಪ್ರದಾಯ ಏಭ್ಯಃ  ಯಃ ಭುಂಕ್ತೇ ಸ್ತೇನಃ ಏವ ಸಃ 

ಇಂಥ ಯಜ್ಞದಿಂದ ಬಲಗೊಂಡ ದೇವತೆಗಳು ನೀವು ಬಯಸಿದ ಬಯಕೆಗಳನ್ನು ಈಡೇರಿಸುತ್ತಾರೆ. ಅವರು ನೀಡಿದ್ದನ್ನು ಅವರಿಗೆ ನೀಡದೆ ತಿನ್ನುವವನು ಕಳ್ಳನೇ ಸರಿ.

ನಮಗೆ ಏನು ಬೇಕೋ ಅದನ್ನು ಈ ಪ್ರಕೃತಿ ಕೊಡುತ್ತದೆ. ಹಾಗಿರುವಾಗ ಅದನ್ನು ಉಪಯೋಗಿಸುವ ನಮಗೆ ಕೃತಜ್ಞತೆ ಬೇಕು. ಅದನ್ನು ಬಿಟ್ಟು 'ಇದು ನನ್ನದು' ಎಂದು ಅಧಿಕಾರ ಅಹಂಕಾರ ತೋರಿದರೆ ಉದ್ಧಾರವಿಲ್ಲ. ಪ್ರಕೃತಿ ಕೊಟ್ಟಿದ್ದನ್ನು ಕೃತಜ್ಞತೆ ಸಲ್ಲಿಸದೆ ಪಡೆದುಕೊಂಡು 'ಇದು ನನ್ನದು' ಎನ್ನುವವನು ಕಳ್ಳನೇ ಸರಿ!

ಅಧ್ಯಾಯ - 03 : ಶ್ಲೋಕ  13

ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ  ಸರ್ವಕಿಲ್ಬಿಷೈಃ ।

ಭುಂಜತೇ  ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್ ॥೧೩॥

ಯಜ್ಞ ಶಿಷ್ಟ ಅಶಿನಃ ಸಂತಃ  ಮುಚ್ಯಂತೇ  ಸರ್ವ ಕಿಲ್ಬಿಷೈಃ । 
ಭುಂಜತೇ  ತೇ ತು ಅಘಮ್  ಪಾಪಾಃ ಯೇ ಪಚಂತಿ ಆತ್ಮ ಕಾರಣಾತ್- 

ದೇವತೆಗಳಿಗೆ ಸಲ್ಲಿಸಿ ಉಳಿದಿದ್ದನ್ನು ಉಣ್ಣುವ ಸಜ್ಜನರು ಎಲ್ಲಾ ಪಾಪಗಳಿಂದ ಪಾರಾಗುತ್ತಾರೆ. ತಮಗಾಗಿ ಅನ್ನ ಬೇಯಿಸುವವರು ತಮ್ಮ ಪಾಪವನ್ನೇ ತಾವು ತಿನ್ನುತ್ತಾರೆ.


ಯಾರು ಪಡೆದಿದ್ದನ್ನು ಭಗವದರ್ಪಣೆ ಮಾಡಿ ಅದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸುತ್ತಾರೆ, ಅವರು  ಬದುಕಿನ ಎಲ್ಲಾ ಕೊಳೆಗಳಿಂದ 

ಬಿಡುಗಡೆಗೊಂಡು ಸ್ವಚ್ಛ ಬದುಕನ್ನು ಬಾಳುತ್ತಾರೆ. ಯಾರ ಮನೆಯಲ್ಲಿ ತಮಗೋಸ್ಕರ ಅನ್ನ ಬೇಯುತ್ತದೋ ಅವನು ತಿನ್ನುವುದು ಅನ್ನವನ್ನಲ್ಲ ಪಾಪವನ್ನು. ನಮಗೆ ಈ ಆಹಾರವನ್ನು ಕೊಟ್ಟವನು ಆ ಭಗವಂತ. ಅವನಿಗೆ ನಾವು ಮೊದಲು ಕೃತಜ್ಞತೆಯನ್ನು ತೋರಬೇಕು. ಅದನ್ನು ಬಿಟ್ಟು ಇದು ನನ್ನ ಸಂಪಾದನೆ, ನಾನ್ಯಾಕೆ ಇದನ್ನು ಇನ್ನೊಬ್ಬರಿಗೆ ಹಂಚಬೇಕು ಎನ್ನುವ ಭಾವನೆಯನ್ನು ಬೆಳೆಸಿಕೊಂಡರೆ ನಾವು ನಮ್ಮ ಪಾಪದ ಗಂಟನ್ನು ಬೆಳೆಸಿಕೊಳ್ಳುತ್ತೇವೆ. ಸೃಷ್ಟಿಯ ಉದ್ದೇಶ(Divine Will)ದಂತೆ ನೆಡೆದುಕೊಳ್ಳದೇ ಇದ್ದರೆ ನಾವು ಗಳಿಸಿದ್ದು ಸಹ ನಮಗೆ ದಕ್ಕುವುದಿಲ್ಲ.

ಅಧ್ಯಾಯ - 03 : ಶ್ಲೋಕ  14

ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ ।

ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ॥೧೪॥

ಅನ್ನಾತ್  ಭವಂತಿ ಭೂತಾನಿ ಪರ್ಜನ್ಯಾತ್ ಅನ್ನ ಸಂಭವಃ 
ಯಜ್ಞಾತ್  ಭವತಿ ಪರ್ಜನ್ಯಃ  ಯಜ್ಞಃ  ಕರ್ಮ ಸಮುದ್ಭವಃ -

ಜೀವಿಗಳ ಹುಟ್ಟು  ಆಹಾರದಿಂದ;  ಆಹಾರದ ಬೆಳೆ ಸೂರ್ಯನಿಂದ[ಮೋಡದಿಂದ]. ಸೌರಶಕ್ತಿಯ ವೃದ್ಧಿ [ಮೋಡದ ಹುಟ್ಟು]-ಯಜ್ಞದಿಂದ; ಯಜ್ಞದ ನಿರ್ವಹಣೆ-ಕರ್ಮದಿಂದ.


ಅಧ್ಯಾಯ - 03 : ಶ್ಲೋಕ  14

ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ ।

ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ॥೧೪॥

ಅನ್ನಾತ್  ಭವಂತಿ ಭೂತಾನಿ ಪರ್ಜನ್ಯಾತ್ ಅನ್ನ ಸಂಭವಃ 
ಯಜ್ಞಾತ್  ಭವತಿ ಪರ್ಜನ್ಯಃ  ಯಜ್ಞಃ  ಕರ್ಮ ಸಮುದ್ಭವಃ -

ಜೀವಿಗಳ ಹುಟ್ಟು  ಆಹಾರದಿಂದ;  ಆಹಾರದ ಬೆಳೆ ಸೂರ್ಯನಿಂದ[ಮೋಡದಿಂದ]. ಸೌರಶಕ್ತಿಯ ವೃದ್ಧಿ [ಮೋಡದ ಹುಟ್ಟು]-ಯಜ್ಞದಿಂದ; ಯಜ್ಞದ ನಿರ್ವಹಣೆ-ಕರ್ಮದಿಂದ.

ಅಧ್ಯಾಯ - 03 : ಶ್ಲೋಕ  15

ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ ।

ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ॥೧೫॥

ಕರ್ಮ ಬ್ರಹ್ಮಉದ್ಭವಮ್  ವಿದ್ಧಿ  ಬ್ರಹ್ಮ ಅಕ್ಷರ ಸಮುದ್ಭವಮ್ 
ತಸ್ಮಾತ್ ಸರ್ವ ಗತಮ್  ಬ್ರಹ್ಮ ನಿತ್ಯಮ್  ಯಜ್ಞೇ ಪ್ರತಿಷ್ಠಿತಮ್ - 

ಕರ್ಮದ ನಿಷ್ಪತ್ತಿ ಭಗವಂತನಿಂದ; ಭಗವಂತನ ಅಭಿವ್ಯಕ್ತಿ- ವೇದಾಕ್ಷರದಿಂದ. ಆದ್ದರಿಂದ ಎಲ್ಲೆಡೆಯಿರುವ ಭಗವಂತ ಸದಾ ಯಜ್ಞದಲ್ಲಿ ನೆಲೆಸಿದ್ದಾನೆ.        

ಅಧ್ಯಾಯ - 03 : ಶ್ಲೋಕ  16

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ।

ಅಘಾಯುರಿಂದ್ರ ಯಾರಾಮೋ ಮೋಘಂ ಪಾರ್ಥ ಸ ಜೀವತಿ ॥೧೬॥

ಏವಂ ಪ್ರವರ್ತಿತಮ್  ಚಕ್ರಮ್  ನ  ಅನುವರ್ತಯತಿ ಇಹ ಯಃ 
ಅಘ ಆಯಃ  ಇಂದ್ರಿಯ ಆರಾಮಃ ಮೋಘಮ್  ಪಾರ್ಥ ಸಃ ಜೀವತಿ -

ಹೀಗೆ ಜಗದ ಗಾಲಿಯನ್ನು ಮುಂದುವರಿಸದವನು ಪಾಪದ ಬದುಕು ಬದುಕುತ್ತ ಇಂದ್ರಿಯ ಸುಖದಲ್ಲೇ ಮೈಮರೆತವನು. ಓ ಪಾರ್ಥ, ಅಂಥವನ ಬದುಕು ವ್ಯರ್ಥ.

ಜೀವಜಾತದ ಹುಟ್ಟು ಆಹಾರದಿಂದ. ಆಹಾರವಿಲ್ಲದೆ ಬದುಕಿಲ್ಲ. ಈ ಆಹಾರ ಸಿಗುವುದು ಬೆಳೆಯಿಂದ. ಬೆಳೆಗೆ ಮೂಲ ಸೌರಶಕ್ತಿ  ಮತ್ತು ಮಳೆ. ಮಳೆ ಬರುವುದು ಯಜ್ಞದಿಂದ, ನಾವು ಮಾಡುವ ಪ್ರಾಮಾಣಿಕ ಬದುಕಿನಿಂದ, ಭಗವದರ್ಪಣ ಬುದ್ಧಿಯಿಂದ. ಯಜ್ಞದ ನಿರ್ವಹಣೆ ಕರ್ಮದಿಂದ, ನಮ್ಮ ಕ್ರಿಯಾಶೀಲತೆಯಿಂದ. ಕರ್ಮ ಎಂದರೆ ಕರ್ತವ್ಯ ಕರ್ಮ, ಪ್ರಾಮಾಣಿಕ ಕ್ರಿಯೆ. ಇಂತಹ ಕರ್ಮ ನಡೆಯುವುದು  ಭಗವಂತನಿಂದ. ಈ ಭಗವಂತ(ಬ್ರಹ್ಮ) ನೆಲೆಸಿರುವುದು ವೇದ(ಅಕ್ಷರ)ದಲ್ಲಿ. ವೇದ ಇರುವುದು ಜೀವ ಜಾತಗಳಲ್ಲಿ(ಮನುಷ್ಯನಲ್ಲಿ). ಆದ್ದರಿಂದ ಇದೊಂದು ಚಕ್ರ.  ಮಾನವ<->ಆಹಾರ<->ಮಳೆ<->ಯಜ್ಞ<->ಭಗವಂತ<->ವೇದ<-> ಮಾನವ. ಇಲ್ಲಿ ವೇದ ಎಂದರೆ ವೇದ ಮಂತ್ರವನ್ನು ಬಾಯಿಪಾಠ ಮಾಡುವುದಲ್ಲ. ವೈದಿಕ ವಾಙ್ಮಯದ ಎಚ್ಚರ-ಪ್ರಜ್ಞೆ. ಈ ಚಕ್ರದಲ್ಲಿ ನಾವು ನಮ್ಮ ಕರ್ಮವನ್ನು ತೊರೆಯುವಂತಿಲ್ಲ. 

ಕರ್ಮವನ್ನು ಸದಾ ಯಜ್ಞವಾಗಿ, ಭಗವದರ್ಪಣವಾಗಿ ಮಾಡಬೇಕು. ಭಗವಂತನ ಎಚ್ಚರ, ವೈದಿಕ ವಾಙ್ಮಯ ಪ್ರಜ್ಞೆ  ಎಲ್ಲವೂ ಸಮನಾಗಿದ್ದರೆ ಮಳೆ, ಮಳೆಯಿಂದ ಬೆಳೆ,ಬೆಳೆಯಿಂದ ಜೀವನ. ಈ ಚಕ್ರವನ್ನು ಯಾರು ಮುಂದುವರಿಸಿಕೊಂಡು ಹೋಗುವುದಿಲ್ಲವೋ ಅವನು ವಿಶ್ವ ಚಕ್ರದ ನಡೆಯನ್ನು ಮುರಿದವನು, ಸಮಾಜದ ಸಹಜ ನಡೆಗೆ ಅಡ್ಡಗಾಲು ಹಾಕಿದವನು. ಅಂತವನು ಬರಿಯ ಇಂದ್ರಿಯ ಸುಖ ಭೋಗದಲ್ಲಿ ಮೈಮರೆತು ತನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾನೆ.

ಇಲ್ಲಿ ಹೇಳಿರುವ ಈ ವಿಶ್ವ ಚಕ್ರದ ಎಚ್ಚರ ನಮಗೆ ನಮ್ಮ ದೈನಂದಿನ ಕಾರ್ಯದಲ್ಲಿ ಇದ್ದರೆ ನಮ್ಮ ಜೀವನ ಸಾರ್ಥಕ. ನಾವು ಸದಾ ಆ ವಿಶ್ವ ಶಕ್ತಿಯ ನಡೆಯನ್ನು ಅನುಸರಿಸಿದರೆ ನಮ್ಮ ಉದ್ಧಾರ ಸದಾಸಿದ್ಧ. ಎಂದೂ ಯಾವ ವಿಚಾರವಾಗಿ ನಾವು ಭಯ ಪಡುವ ಅಗತ್ಯವಿಲ್ಲ. ನಮ್ಮ ದೈನಂದಿನ ಬದುಕನ್ನು ಒಂದು ಯಜ್ಞವಾಗಿ ಮಾಡಿಕೊಂಡು, ಭಗವಂತನ ಪ್ರಜ್ಞೆಯಲ್ಲಿ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು. ಇದು ನಿಜವಾದ ಕರ್ಮಯೋಗ. ಇದುವೇ ಮೋಕ್ಷದ  ನಡೆ. ಇದು ಭಗವಂತನನ್ನು ಸೇರುವ ಮಾರ್ಗ.

ಈ ವಿಶ್ವದಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಿದೆ(Inter Dependent). ಒಂದು ಇನ್ನೊಂದರ ಸಹಾಯದಿಂದ ನಿಂತಿದೆ. ಯಾವುದೂ ಸ್ವತಂತ್ರ ಅಲ್ಲ (Inter linked not independent). ಪ್ರತಿಯೊಂದು ಪುಟ್ಟ ಕ್ರಿಯೆಯಲ್ಲಿ ಇಡೀ ವಿಶ್ವದ ಶಕ್ತಿಗಳು  ಪರೋಕ್ಷವಾಗಿ ಪಾಲ್ಗೊಳ್ಳುತ್ತವೆ. ನಾವು ಉಣ್ಣುವ ಆಹಾರದ ಹಿಂದೆ ಅನೇಕ ಋಣಗಳಿವೆ. ಅದನ್ನು ನೆನಪಿಸದೇ ಇದ್ದರೆ ವಿಶ್ವ ಶಕ್ತಿಗೆ ಕೃತಘ್ನರಾದಂತೆ.

ವಿಶ್ವದ ನಡೆಯ ಕರ್ಮಚಕ್ರ’; ಅದರಲ್ಲಿ ನಮ್ಮ ಕರ್ತವ್ಯಕರ್ಮ’; ನಮ್ಮ ಯಜ್ಞ ಯಾಗಾದಿಗಳು ಈ ಬಗ್ಗೆ ವಿವರವಾಗಿ ಕೃಷ್ಣ ಹೇಳಿದ. ಆದರೆ ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ: ಹಿಂದೆ ಕೃಷ್ಣ  ಜ್ಞಾನವನ್ನು ಶ್ರೇಷ್ಠ ಎಂದು ಹೇಳಿದ್ದ ಆದರೆ ಕರ್ಮವನ್ನು ಬಿಟ್ಟಲ್ಲ ಎಂತಲೂ  ಹೇಳಿದ.  ಆದರೆ ಶಾಸ್ತ್ರದಲ್ಲಿ ಜ್ಞಾನಿಗಳಿಗೆ ಕರ್ಮ ಬೇಡ ಎಂದು ಹೇಳಿದೆ. ಏನಿದರ ಅರ್ಥ ಕೃಷ್ಣ ನಮ್ಮ ಈ ಪ್ರಶ್ನೆಯನ್ನು ಆತನೇ ಎತ್ತಿಕೊಂಡು ಮುಂದಿನ ಶ್ಲೋಕದಲ್ಲಿ ಉತ್ತರ ಕೊಡುತ್ತಾನೆ. ಒಬ್ಬ ಅಂತರಂಗದಲ್ಲಿ ಯಜ್ಞ ಮಾಡತಕ್ಕವನಿಗೆ ಕರ್ಮವಿದೆಯೋ? ಅವನು ಕರ್ಮ ಮಾಡದಿದ್ದರೆ ಲೋಪವಿದೆಯೋ? ಮನುಷ್ಯ ಕರ್ಮ ಬಂಧನವಿಲ್ಲದೆ ಇರುವ ಸ್ಥಿತಿ ಯಾವುದು? ಮೋಕ್ಷಕ್ಕೆ ಮೊದಲು ಸಂಸಾರಿಕ ಸ್ಥಿತಿಯಲ್ಲಿ ಕರ್ಮ ಮಾಡದೆ ಇರುವುದು ಸಾಧ್ಯವೋ? ಕರ್ಮವಿಲ್ಲದೆ ಸಂಪೂರ್ಣ ಅಂತರಂಗದ ಸ್ಥಿತಿಯಲ್ಲಿರುವುದು ಸಾಧ್ಯವೋ? ಇತ್ಯಾದಿ ಪ್ರಶ್ನೆಗಳಿಗೆ ಮುಂದೆ ಕೃಷ್ಣ ವಿವರಣೆ ಕೊಟ್ಟಿದ್ದಾನೆ.

ಅಧ್ಯಾಯ - 03 : ಶ್ಲೋಕ  17

ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ।

ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ ॥೧೭॥

ಯಃ ತು ಆತ್ಮ ರತಿಃ ಏವ ಸ್ಯಾತ್ ಆತ್ಮ  ತೃಪ್ತಃ ಚ  ಮಾನವಃ 
ಆತ್ಮನಿ ಏವ ಚ ಸಂತುಷ್ಟ ತಸ್ಯ ಕಾರ್ಯಮ್  ನ ವಿದ್ಯತೇ- 

ಪರಮಾತ್ಮನನ್ನು ಕಂಡು (ಪರಮಾತ್ಮನ ಕರುಣೆಯಿಂದ) ಸುಖವುಂಡವನು, ಪರಮಾತ್ಮನ ಕಾಣ್ಕೆಯಿಂದ(ಕರುಣೆಯಿಂದ) ಕೃತಕೃತ್ಯನಾದವನು, ಬೇರಾವುದೂ ಬೇಡವನಿಸಿ ಪರಮಾತ್ಮನಲ್ಲೆ ಆನಂದವಾಗಿರುವ ಸಮಾಧಿಮಗ್ನನು(ತೃಪ್ತನಾಗುವ ಮುಕ್ತನು) ಮಾತ್ರವೇ ಮಾಡಬೇಕಾದ್ದೇನೂ ಇರುವುದಿಲ್ಲ.
ಭಗವಂತನನ್ನು ಅಂತರಂಗದಲ್ಲಿ ಕಂಡು ಪಡುವ ಆನಂದ 'ಆತ್ಮರತಿ'. 

ಈ ಸ್ಥಿತಿಯನ್ನು ಸಮಾಧಿ ಸ್ಥಿತಿಯಲ್ಲಿ ತಲುಪಬಹುದು. ನಿಜವಾದ ಸಮಾಧಿ ಸ್ಥಿತಿಯಲ್ಲಿ ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಕೆಲಸ ಮಾಡುವುದಿಲ್ಲ. ಜ್ಞಾನ ಸ್ವರೂಪವಾದ 'ಜೀವಸ್ವರೂಪ' ನೇರವಾಗಿ ಭಗವಂತನನ್ನು ಕಾಣುವ ಸ್ಥಿತಿ ಸಮಾಧಿಸ್ಥಿತಿ. ಈ ಸ್ಥಿತಿಯಲ್ಲಿ ಭಗವಂತನೊಡನೆ ನೇರ ಸಂಪರ್ಕ ಸಾಧ್ಯ. ಇಂತಹ ಸ್ಥಿತಿಯಲ್ಲಿರುವವನಿಗೆ ಯಾವುದೇ ಕರ್ಮದ ಲೇಪವಿಲ್ಲ. ದೇವರನ್ನು ಕಂಡ ಮೇಲೆ ಆತನಿಗೆ ಈ ಲೌಕಿಕ ಪ್ರಪಂಚ ತೃಪ್ತಿಯಾಗಿ ಅದು ಬೇಡವೆನಿಸುತ್ತದೆ.  ಕೇವಲ ಭಗವಂತನ ಸಾಕ್ಷಾತ್ಕಾರದ ಆನಂದ ಸಾಗರದಲ್ಲಿ ಆತ ಮುಳುಗಿರುತ್ತಾನೆ. ಈ ಸ್ಥಿತಿಯಲ್ಲಿ ಆತನಿಗೆ ಯಾವುದೇ ಕರ್ತವ್ಯ ಕರ್ಮವಿಲ್ಲ, ಆತ ವಿಧಿ ನಿಷೇಧಗಳಿಂದ ಅತೀತನಾಗಿರುತ್ತಾನೆ.

ಅಧ್ಯಾಯ - 03 : ಶ್ಲೋಕ  18

ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ ।

ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ ॥೧೮॥

ನ ಏವ ತಸ್ಯ ಕೃತೇನ ಅರ್ಥಃ ನ ಅಕೃತೇನ ಇಹ ಕಶ್ಚನ 
ನ ಚ ಅಸ್ಯ ಸರ್ವಭೂತೇಷು ಕಶ್ಚಿತ್ ಅರ್ಥ ವ್ಯಪಾಶ್ರಯಃ -

ಅಂಥವನು ಏನನ್ನಾದರೂ ಮಾಡುವುದರಿಂದ ಹೆಚ್ಚಿನ ಸಾಧಕವಾಗಲಿ, ಮಾಡದೆ ಇರುವುದರಿಂದ ಯಾವುದೇ ಬಾದಕವಾಗಲಿ ಇಲ್ಲ. ಸಮಸ್ತ ಜೀವಿಗಳಲ್ಲಿ ಅವನಿಗೆ ಯಾವುದೇ ಫಲದ ಹಂಗಿಲ್ಲ
ಸಮಾಧಿ ಸ್ಥಿತಿಯಲ್ಲಿ ಅವನಿಗೆ ಹಸಿವು, ಬಾಯಾರಿಕೆ ಇಲ್ಲ. ಆತನಿಗೆ ಹೊರ ಪ್ರಪಂಚದ ಅರಿವೇ ಇರುವುದಿಲ್ಲ. 

ಇಂತಹ ಸ್ಥಿತಿಯಲ್ಲಿರುವಾಗ ಇನ್ಯಾವುದೋ ಸಾಧನೆ ಮಾಡುವುದರಿಂದ ಉದ್ಧಾರವಾಗಲಿ, ಕರ್ತವ್ಯ ಕರ್ಮ ಮಾಡದೆ ಇರುವ ದೋಷವಾಗಲಿ ಇರುವುದಿಲ್ಲ. ಪಂಚಭೂತಗಳ, ಪಂಚಕೋಶಗಳ ಆಸರೆ ಕೂಡಾ ಅವನಿಗೆ ಬೇಕಾಗಿರುವುದಿಲ್ಲ. ಸಮಸ್ತ ಜನಾಂಗ, ಪರಿವಾರ ಎನ್ನುವ ಮಮಕಾರ ಈ ಸ್ಥಿತಿಯಲ್ಲಿ ಇರುವುದಿಲ್ಲ. ಆತನಿಗೆ ಹೊರ ಪ್ರಪಂಚದ ಹಂಗಿಲ್ಲ. ಈ ರೀತಿ ಸಮಾಧಿ ಸ್ಥಿತಿಯಿಂದ ದೇವರನ್ನು ಕಾಣುತ್ತಿರುವವನು ಕರ್ತವ್ಯ ಕರ್ಮದಿಂದ ಆಚೆಗಿರುತ್ತಾನೆ.ಅಧ್ಯಾಯ - 03 : ಶ್ಲೋಕ  19

ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ ।

ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ ॥೧೯॥

ತಸ್ಮಾತ್ ಅಸಕ್ತಃ ಸತತಂ ಕಾರ್ಯಮ್  ಕರ್ಮ ಸಮಾಚರ । 
ಅಸಕ್ತಃ ಹಿ ಆಚರನ್ ಕರ್ಮ ಪರಮ್ ಆಪ್ನೋತಿ ಪೂರುಷಃ –

ಆದ್ದರಿಂದ  ಫಲದ ನಂಟು ತೊರೆದು ಸದಾ ಕರ್ತವ್ಯ ಕರ್ಮವನ್ನು ಮಾಡುತ್ತಿರು. ನಂಟು ತೊರೆದು ಕರ್ತವ್ಯದಲ್ಲಿ ತೊಡಗುವುದರಿಂದಲೇ ಸಾಧಕ ಭಗವಂತನನ್ನು ಸೇರುವುದು ಸಾಧ್ಯ.

ಈ ಎಲ್ಲಾ ಕಾರಣದಿಂದ ನಾವು ನಮ್ಮ ಕರ್ತವ್ಯ ಕರ್ಮವನ್ನು ಮಾಡಬೇಕು. "ಎಲ್ಲವನ್ನು ಮಾಡು ಆದರೆ ಯಾವುದನ್ನೂ ಅಂಟಿಸಿಕೊಳ್ಳದೇ ಮಾಡು. ಏನು ಮಾಡಬೇಕೋ  ಅದನ್ನು ಫಲದ ಬಗ್ಗೆ ಯೋಚಿಸದೆ(ಅಧಿಕಾರ ಸಾಧಿಸದೇ) ಮಾಡು. ಹೀಗೆ ಕರ್ಮ ಮಾಡಿದರೆ ಅದು ನಿನ್ನನ್ನು ಭಗವಂತನಡೆಗೆ ಕೊಂಡೊಯ್ಯುತ್ತದೆ. ಅದು ಎಂದೂ ನಿನ್ನನ್ನು ಮತ್ತೆ ಕರ್ಮ ಬಂಧನಕ್ಕೆ ತಳ್ಳುವುದಿಲ್ಲ. ಈ ರೀತಿ ಮಾಡುವುದರಿಂದ ಭಗವಂತನನ್ನು ಸೇರುವುದು ಸಾಧ್ಯ ಹೊರತು ಕರ್ಮ ತ್ಯಾಗದಿಂದಲ್ಲ "ಎನ್ನುತ್ತಾನೆ ಕೃಷ್ಣ.
ಇಲ್ಲಿ "ಪೂರುಷಃ" ಎನ್ನುವ ಪದ ಬಳಕೆಯಾಗಿದೆ. ಪುರದಲ್ಲಿ(ಪೂರ್ಣವಾದ ಶರೀರದಲ್ಲಿ) ಇರುವವ ಪುರುಷ. ಪುರವನ್ನು ಪೂರ್ಣ  ಪ್ರಮಾಣದಲ್ಲಿ ಉಪಯೋಗಿಸುವ ಸಾಧಕ-ಪೂರುಷಃ. ಸಾಧನಾ ಶರೀರದಲ್ಲಿದ್ದು ಸಾಧನೆಯಲ್ಲಿ ತೊಡಗಿರುವ ಜೀವ ಪೂರುಷಃ. 
ಈ ರೀತಿ ಕರ್ಮ ಸಿದ್ಧಾಂತವನ್ನು ವಿವರಿಸಿದ ಕೃಷ್ಣ ಅದಕ್ಕೆ ಪೂರಕವಾದ ನಿದರ್ಶನವನ್ನು ಮುಂದಿನ ಶ್ಲೋಕದಲ್ಲಿ ಕೊಡುತ್ತಾನೆ.


ಅಧ್ಯಾಯ - 03 : ಶ್ಲೋಕ  20

ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ ।

ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ ॥೨೦॥

ಕರ್ಮಣಾ ಏವ ಹಿ ಸಂಸಿದ್ಧಿಮ್ ಅಸ್ಥಿತಾಃ  ಜನಕ ಅದಯಃ 
ಲೋಕಸಂಗ್ರಹಮ್ ಏವ ಅಪಿ ಸಂಪಶ್ಯನ್ ಕರ್ತುಮ್ ಅರ್ಹಸಿ -

ಕರ್ಮದಿಂದಲೆ ಸಾಧಿಸಿ ಜನಕ ಮೊದಲಾದವರು ಗುರಿ ಮುಟ್ಟಿದರು. ಜನತೆಯನ್ನು ತಿದ್ದುವ ಹೊಣೆಯನ್ನರಿತಾದರೂ ನೀನು ಕರ್ಮ ಮಾಡಬೇಕಾಗಿದೆ.

ಹಿಂದಿನ ಅನೇಕ ರಾಜರ್ಷಿಗಳು ಈ ಮಾರ್ಗದಲ್ಲಿ ನಡೆದು ಮೋಕ್ಷ ಪಡೆದಿದ್ದಾರೆ. ಅವರ್ಯಾರೂ ಎಲ್ಲವನ್ನು ತ್ಯಜಿಸಿ ಕಾಡಿಗೆ ಹೋಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಜನಕ ಮಹಾರಾಜ. ಈತ ಎಲ್ಲಾ ರಾಜ್ಯ ವೈಭೋಗದೊಂದಿಗೆ ರಾಜ್ಯಭಾರ ಮಾಡಿದ ವ್ಯಕ್ತಿ. ಆದರೆ ಅವನಷ್ಟು ದೊಡ್ಡ ಜ್ಞಾನಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ಅಂಥಹ ಮಹಾ ರಾಜರ್ಷಿ ಆತ.  ಶುಖಾಚಾರ್ಯರು  ವೈರಾಗ್ಯದ ಬಗ್ಗೆ ಸರಿಯಾದ ತಿಳುವಳಿಕೆಗಾಗಿ ಜನಕನಲ್ಲಿಗೆ ಬಂದಿದ್ದರು!  ಇದು ನಿಜವಾದ ಸಾಧಕನ ಬದುಕು. ಜನಕ ಎಲ್ಲಾ ಅಧಿಕಾರದ ಭೋಗದ ನಡುವೆ ಇದ್ದು, ವಿರಕ್ತನಾಗಿ ಬದುಕಿದವ. ಆದ್ದರಿಂದ ಕೃಷ್ಣ ಇಲ್ಲಿ ಜನಕನ ಹೆಸರನ್ನು ಪ್ರಸ್ತಾಪಿಸುತ್ತಾನೆ. ಕೃಷ್ಣ ಹೇಳುತ್ತಾನೆ: "ಜನಕ ಮುಂತಾದ ರಾಜರ್ಷಿಗಳು ಕರ್ಮಯೋಗದಿಂದಲೇ ಜ್ಞಾನ ಪಡೆದು, ಕರ್ಮ ಮಾಡುತ್ತಾ ಎತ್ತರಕ್ಕೇರಿದರೇ ಹೊರತು, ಕರ್ಮ ತ್ಯಾಗದಿಂದಲ್ಲ" ಎಂದು. ಈ ರೀತಿ ಸಮಾಜಕ್ಕೆ ಮಾರ್ಗದರ್ಶಿಯಾದ ನೀನು ಸಮಾಜಕ್ಕೋಸ್ಕರ ಯುದ್ಧ ಮಾಡು ಎಂದು ಹೇಳುತ್ತಿದ್ದಾನೆ ಕೃಷ್ಣ".
  
ಕರ್ತವ್ಯ ಕರ್ಮದ ಬಗ್ಗೆ ವಿವರವಾಗಿ ವಿವರಿಸಿದ ಕೃಷ್ಣ, ಈಗ ತಪ್ಪು ದಾರಿಯಲ್ಲಿ ಮುಂದಾಳು ನಡೆದಾಗ ಸಮಾಜದ ಮೇಲಾಗುವ ಪರಿಣಾಮದ ಬಗ್ಗೆ ಸ್ವತಃ ತನ್ನನ್ನೇ ಉದಾಹರಣೆಯಾಗಿಟ್ಟುಕೊಂಡು ಮುಂದಿನ ಶ್ಲೋಕಗಳಲ್ಲಿ ವಿವರಿಸುತ್ತಾನೆ.


ಅಧ್ಯಾಯ - 03 : ಶ್ಲೋಕ  21

ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ ।

ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥೨೧॥

ಯತ್ ಯತ್ ಆಚರತಿ ಶ್ರೇಷ್ಠಃ ತತ್ ತತ್  ಏವ ಇತರಃ  ಜನಃ 
ಸಃ  ಯತ್ ಪ್ರಮಾಣಮ್  ಕುರುತೇ ಲೋಕಃ ತತ್ ಅನುವರ್ತತೇ--

ಮುಂದಾಳು ಏನೇನು ಮಾಡುತ್ತಾನೆ ಉಳಿದ ಮಂದಿ ಅದೇ ದಾರಿ ಹಿಡಿಯುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೆ ಜನತೆ ಅದನ್ನೇ ಬೆನ್ನು ಹತ್ತುತ್ತದೆ.

ಸಮಾಜದಲ್ಲಿ ಹಿರಿಯನೆನಿಸಿದವ(ಶ್ರೇಷ್ಠ), ವಯಸ್ಸಿನಲ್ಲಿ, ಆಚರಣೆಯಲ್ಲಿ, ಜ್ಞಾನದಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲ, ಎತ್ತರದಲ್ಲಿರುವ ವ್ಯಕ್ತಿ ಯಾವ ದಾರಿಯಲ್ಲಿ ಸಾಗುತ್ತಾನೋ, ಉಳಿದವರೂ ಅದೇ ಹಾದಿಯಲ್ಲಿ ಸಾಗುತ್ತಾರೆ. ಇಲ್ಲಿ ಅರ್ಜುನ ಸಮಾಜದ ಮುಖಂಡ. ಆತ ಏನು ಮಾಡುತ್ತಾನೋ ಅದನ್ನೇ  ಸಮಾಜ ಹಿಂಬಾಲಿಸುತ್ತದೆ. ಏಕೆಂದರೆ ಸಾಮಾನ್ಯ ಜನರಿಗೆ ಶಾಸ್ತ್ರ ಇತ್ಯಾದಿ ತಿಳಿಯುವುದಿಲ್ಲ. ಅವರು ಕೇವಲ ಆದರ್ಶ ವ್ಯಕ್ತಿಗಳೆನಿಸಿದವರನ್ನು ಹಿಂಬಾಲಿಸುತ್ತಾರೆ. 

ನಾಯಕನಾದವನು ಯಾವುದನ್ನು ಪ್ರಮಾಣವಾಗಿರಿಸಿಕೊಂಡು ಮಾಡುತ್ತಾನೋ ಅದನ್ನೇ ಸಾಮಾನ್ಯ ಜನರು ಅನುಸರಿಸುತ್ತಾರೆ.
ಈ ಶ್ಲೋಕದಲ್ಲಿ ಕೃಷ್ಣ ಕೊಟ್ಟಿರುವ ಸಂದೇಶವನ್ನು ನಾವು ನಮ್ಮ ದೈನಂದಿನ ಬದುಕಿನಲ್ಲಿ ಕಾಣುತ್ತೇವೆ. ಒಂದು ಸಂಸ್ಥೆಯನ್ನು ನಡೆಸುವ ಮುಖ್ಯಸ್ತನ ನಡವಳಿಕೆ, ಆಚರಣೆ,ಸರಿದಾರಿಯಲ್ಲಿ ಇಲ್ಲದಿದ್ದರೆ, ಆ ಸಂಸ್ಥೆ ಅದೋಗತಿಯನ್ನು ಕಾಣುತ್ತದೆ. ದುಷ್ಟ ಶಕ್ತಿಗಳು ಎದ್ದು ನಿಲ್ಲುತ್ತವೆ.  ಏಕೆಂದರೆ ಮುಖಂಡ ಎನಿಸಿದವ ಏನನ್ನು ಅನುಸರಿಸುತ್ತಾನೋ ಅದನ್ನೇ ಪ್ರಮಾಣವಾಗಿ ಆತನ ಕೆಳಗಿರುವ ಜನರು ತಮಗರಿವಿಲ್ಲದಂತೆ ಅನುಸರಿಸಲಾರಂಭಿಸುತ್ತಾರೆ. ಈ ಕಾರಣದಿಂದ ಒಬ್ಬ ಮುಖಂಡ ಎಷ್ಟು ಎಚ್ಚರದಿಂದಿದ್ದರೂ ಸಾಲದು. ಒಂದು ದೇಶವನ್ನು ನಡೆಸುವ ಮುಖ್ಯಸ್ಥ ಬ್ರಷ್ಟಾಚಾರಿಯಾಗಿದ್ದಲ್ಲಿ ಇಡೀ ದೇಶ ಬ್ರಷ್ಟಾಚಾರದ ಹಾದಿಯನ್ನು ತುಳಿಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಾನವರು ಒಳ್ಳೆಯದನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ಹಾಗು ವೇಗವಾಗಿ ಕೆಟ್ಟದನ್ನು ಅನುಸರಿಸುವುದು ಹೆಚ್ಚು. ಉದಾಹರಣೆಗೆ ಒಬ್ಬ ಉತ್ತಮ ಅಧ್ಯಾಪಕ ಧೂಮಪಾನ ಮಾಡುವ ಹವ್ಯಾಸದವನಾಗಿದ್ದರೆ, ಆತನ ವಿದ್ಯಾರ್ಥಿಗಳು  ಆತನಲ್ಲಿರುವ ಜ್ಞಾನಕ್ಕಿಂತ ಮಿಗಿಲಾಗಿ ಆತನ ದುರಾಭ್ಯಾಸವನ್ನು ಪ್ರಮಾಣವಾಗಿರಿಸಿಕೊಂಡು ಕೆಟ್ಟ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಇದು ಹಿರಿಯವರೆನಿಸಿದವರು ತಪ್ಪು ದಾರಿ ತುಳಿದಾಗ ಸಮಾಜದ ಮೇಲಾಗುವ ದುಷ್ಟರಿಣಾಮ. ಇದು ತುಂಬಾ ಅಪಾಯಕಾರಿ ಹಾಗು ಇದರ ಅರಿವು ನಮಗಿರಬೇಕು.


ಅಧ್ಯಾಯ - 03 : ಶ್ಲೋಕ  22

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ ।

ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ॥೨೨॥

ನ ಮೇ ಪ್ರಾರ್ಥ ಅಸ್ತಿ  ಕರ್ತವ್ಯಮ್  ತ್ರಿಷು ಲೋಕೇಷು ಕಿಂಚನ 
ನ ಅನವಾಪ್ತಮ್ ಅವಾಪ್ತವ್ಯಮ್ ವರ್ತೇ ಏವ ಚ ಕರ್ಮಣಿ --

ಪಾರ್ಥ, ಮೂರು ಲೋಕಗಳಲ್ಲು ನಾನು ಮಾಡಬೇಕಾದ್ದು ಏನೂ ಇಲ್ಲ. ಪಡೆಯದೇ ಇದ್ದು ಪಡೆಯಬೇಕಾದ್ದು ಇಲ್ಲ.ಆದರೂ ನಾನು ಕರ್ಮದಲ್ಲಿ ತೊಡಗಿದ್ದೇನೆ.ಅಧ್ಯಾಯ - 03 : ಶ್ಲೋಕ  23

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ ।

ಮಮ ವರ್ತ್ಮಾನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥೨೩॥

ಯದಿ ಹಿ ಅಹಮ್ ನ ವರ್ತೇಯಮ್  ಜಾತು ಕರ್ಮಣಿ ಅತಂದ್ರಿತಃ 
ಮಮ ವರ್ತ್ಮ ಅನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ --

ಓ ಪಾರ್ಥ, ನಾನು ಎಂದಾದರೂ ಎಚ್ಚರದಿಂದ ಕರ್ಮದಲ್ಲಿ ತೊಡಗದೆ ಹೋದರೆ, ಮನುಷ್ಯರು ಎಲ್ಲ ಬಗೆಯಿಂದಲೂ ನನ್ನ ದಾರಿ ಹಿಡಿದು ಬಿಡುತ್ತಾರೆ.ಅಧ್ಯಾಯ - 03 : ಶ್ಲೋಕ  24

ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಮ್ ।

ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ ॥೨೪॥

ಉತ್ಸೀದೇಯಃ ಇಮೇ ಲೋಕಾಃ  ನ ಕುರ್ಯಾಮ್  ಕರ್ಮ ಚೇತ್ ಅಹಮ್ 
ಸಂಕರಸ್ಯ ಚ ಕರ್ತಾ ಸ್ಯಾಮ್ ಉಪಹನ್ಯಾಮ್ ಇಮಾಃ ಪ್ರಜಾಃ  --

ನಾನು ಕರ್ಮ ಮಾಡದೇ ಇದ್ದರೆ ಈ ಜನರೆಲ್ಲಾ ದಾರಿ ತಪ್ಪಿ ಹಾಳಾಗುತ್ತಾರೆ. ಧರ್ಮದ ಕಲಬೆರೆಕೆಗೆ ಕಾರಣನಾಗಿ ಈ ಎಲ್ಲ ಜನತೆಯನ್ನು ನಾನೆ ಕೈಯಾರ ಕೆಡವಿದಂತಾದೀತು.

ಈ ಮೇಲಿನ ಮೂರು  ಶ್ಲೋಕದಲ್ಲಿ ಕೃಷ್ಣ ತನ್ನನ್ನೇ ತಾನು ಉದಾಹರಣೆಯಾಗಿಟ್ಟುಕೊಂಡು ಹಿಂದೆ  ಹೇಳಿದ ವಿಷಯವನ್ನು ವಿವರಿಸುತ್ತಾನೆ. ಅರ್ಜುನನ ಸಾರಥಿಯಾಗಿ ನಿಂತಿರುವ ಕೃಷ್ಣ ಹೇಳುತ್ತಾನೆ- "ನನಗೆ ಏನಾದರೂ ಮಾಡಬೇಕಾದ್ದು ಅಥವಾ ಮಾಡದೇ ಇದ್ದರೆ ತೊಂದರೆ ಆಗುವಂಥದ್ದು ಏನೂ ಇಲ್ಲ, ಆದರೆ ನಾನು ಕರ್ತವ್ಯ ಕರ್ಮದಲ್ಲಿ ನಿಂತಿದ್ದೇನೆ" ಎಂದು. 

ಮೂರು ಲೋಕದಲ್ಲಿ, ಸೃಷ್ಠಿ-ಸ್ಥಿತಿ-ಸಂಹಾರವನ್ನು ತನ್ನ ನಿತ್ಯ ಕರ್ಮವಾಗಿ ಮಾಡುತ್ತಿರುವ ಭಗವಂತ, ಎಲ್ಲವನ್ನು ತನ್ನ ಪ್ರೀತಿಯ ಭಕ್ತರಿಗಾಗಿ, ಜೀವಜಾತಕ್ಕಾಗಿ ಮಾಡುತ್ತಿದ್ದಾನೆಯೇ ಹೊರತು ಇನ್ನೇನೋ ಲಾಭಕ್ಕಾಗಿ ಅಲ್ಲ.

ಒಂದು ವೇಳೆ ಕೃಷ್ಣ ತನ್ನನ್ನು ನಿತ್ಯ ಕರ್ಮದಲ್ಲಿ ತೊಡಗಿಸಿಕೊಳ್ಳದೆ ಇದ್ದಿದ್ದರೆ ಎಲ್ಲರೂ ಆತನನ್ನು ಪ್ರಮಾಣವಾಗಿರಿಸಿಕೊಂಡು ಆತನ ದಾರಿಯನ್ನು ಹಿಡಿಯುತ್ತಿದ್ದರು. ಈ ಕಾರಣಕ್ಕಾಗಿ ಭಗವಂತ ಅವತಾರ ತಾಳಿದಾಗ ಒಬ್ಬ ಸಾಮಾನ್ಯ ಮಾನವನಂತೆ ಕಾಣಿಸಿಕೊಂಡು, ತನ್ನ ನಿತ್ಯ ಕರ್ಮಗಳನ್ನು ಆದರ್ಶವಾಗಿ ಜನತೆ ಪಾಲಿಸುವಂತೆ ಕರ್ತವ್ಯ ಕರ್ಮವನ್ನು ನಿರ್ವಹಿಸುತ್ತಾನೆ. ಕೃಷ್ಣಾವತಾರದಲ್ಲಿ ನೋಡಿದರೆ ಕೃಷ್ಣ ಸಂಧ್ಯಾವಂದನೆ ಇತ್ಯಾದಿ ಮೂಲ ಕರ್ಮವನ್ನು ತಪ್ಪದೆ ಮಾಡುತ್ತಿದ್ದ. ಇದು ಆತನಿಗೊಸ್ಕರವಲ್ಲ, ಆತನನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶನಕ್ಕೋಸ್ಕರ.

ಕೃಷ್ಣ ಹೇಳುತ್ತಾನೆ "ನಾನು ಕರ್ಮ ಮಾಡದೇ ಇದ್ದರೆ ಇಡೀ ಲೋಕ ಕರ್ಮ ಪ್ರಜ್ಞೆಯನ್ನು ಕಳೆದುಕೊಂಡು ದಾರಿತಪ್ಪಿಬಿಡುತ್ತದೆ, ಸ್ವಚ್ಛಂದತೆ ಬಂದು ನಿರ್ದಿಷ್ಟ ವ್ಯವಸ್ಥೆ ಹೊರಟು ಹೋಗುತ್ತದೆ" ಎಂದು. ಯಾರಿಗೆ ಯಾವುದು ಧರ್ಮವೋ ಅದನ್ನು ಮಾಡಲೇ ಬೇಕು. ಅದೊಂದು ವ್ಯವಸ್ಥೆ. ಇಲ್ಲದಿದ್ದರೆ ಎಲ್ಲರೂ ತಮಗೆ ತೋಚಿದಂತೆ ಮಾಡಲಾರಂಭಿಸಿಬಿಡುತ್ತಾರೆ. "ಇದರಿಂದ ಅವ್ಯವಸ್ಥೆ ತಾಂಡವವಾಡುತ್ತದೆ ಹಾಗು ಅದಕ್ಕೆ ಜವಾಬ್ದಾರಿ ನಾವಾಗುತ್ತೇವೆ" ಎನ್ನುತ್ತಾನೆ ಕೃಷ್ಣ.

ಅಧ್ಯಾಯ - 03 : ಶ್ಲೋಕ  25

ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ  ಭಾರತ।

ಕುರ್ಯಾದ್ ವಿದ್ವಾಂಸ್ತಥಾsಸಕ್ತಶ್ಚಿಕೀರ್ಷುರ್ಲೋಕಸಂಗ್ರಹಮ್ ॥೨೫॥

ಸಕ್ತಾಃ ಕರ್ಮಣಿ ಅವಿದ್ವಾಂಸಃ ಯಥಾ ಕುರ್ವಂತಿ  ಭಾರತ
ಕುರ್ಯಾತ್  ವಿದ್ವಾನ್ ತಥಾ ಅಸಕ್ತಃ ಚಿಕೀರ್ಷುಃ ರ್ಲೋಕ ಸಂಗ್ರಹಮ್ -

ಓ ಭಾರತ, ತಿಳಿಯದ ಮಂದಿ ಫಲದ ನಂಟಿಗಾಗಿ ಕರ್ಮಗಳನ್ನು ಮಾಡುತ್ತಾರೆ ಹೇಗೆ, ಹಾಗೇ ತಿಳಿದವನೂ ಕರ್ಮ ಮಾಡುತ್ತಿರಬೇಕು-ಫಲದ ನಂಟು ತೊರೆದು, ಸಮಾಜವನ್ನು ತಿದ್ದುವುದಕ್ಕಾಗಿ.
ತಿಳುವಳಿಕೆ ಇಲ್ಲದವರು ಫಲಾಪೇಕ್ಷೆಯಿಂದ ಕರ್ಮ ಮಾಡುತ್ತಾರೆ. 

ಆದರೆ ತಿಳಿದವನು, ಜ್ಞಾನಿ, ಯಾವುದೇ  ಫಲದ ಅಧಿಕಾರ ಸಾಧಿಸದೆ, ನಿಷ್ಕಾಮ ಕರ್ಮ ಮಾಡುತ್ತಿರಬೇಕು. "ನಾನು ನನ್ನ ಕಣ್ಮಂದೆ ಬೆಳೆಯುತ್ತಿರುವ ಜನಾಂಗಕ್ಕೆ ಮಾರ್ಗದರ್ಶನವಾಗಿ ಭಗವಂತನ ಸೇವೆ ಮಾಡುತ್ತಿದ್ದೇನೆ, ನನಗೆ ಇದರಿಂದ ಭಗವಂತ ಏನು ಕೊಟ್ಟರೂ ಸಂತೋಷ" ಎಂಬ ಸಂಕಲ್ಪದಿಂದ ಕರ್ಮ ಮಾಡಬೇಕು ಇದು ನಿಜವಾದ ಕರ್ಮಯೋಗ.ಅಧ್ಯಾಯ - 03 : ಶ್ಲೋಕ 26

ನ ಬುದ್ಧಿಭೇದಂ ಜನಯೇದಜ್ಞಾನಾಮ್  ಕರ್ಮಸಂಗಿನಾಮ್ ।

ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ॥೨೬॥

ನ ಬುದ್ಧಿ ಭೇದಮ್  ಜನಯೇತ್ ಅಜ್ಞಾನಾಮ್  ಕರ್ಮ ಸಂಗಿನಾಮ್
ಜೋಷಯೇತ್ ಸರ್ವ ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್--

ತಿಳುವಳಿಕೆಯಿಲ್ಲದೆ ಫಲದ ನಂಟಿಗಾಗಿಯೇ ಕರ್ಮ ಮಾಡುವ ಮಂದಿಯ ನಂಬಿಕೆಯನ್ನು ನಲುಗಿಸಬಾರದು. ಉಪಾಯ ಬಲ್ಲ ತಿಳಿದವನು ತಾನು ಎಲ್ಲಾ ಕರ್ಮಗಳನ್ನು ಮಾಡುತ್ತ ಅವರನ್ನು ಒಲೈಸಬೇಕು.

ಸಮಾಜದಲ್ಲಿ ಅನೇಕ ತರದ ಜನರಿರುತ್ತಾರೆ. ಎಲ್ಲರಿಗೂ ತಿಳುವಳಿಕೆ ಇರುವುದಿಲ್ಲ. ಅವರು ಅವರ ನಂಬಿಕೆಗೆ ತಕ್ಕಂತೆ ನೆಡೆದುಕೊಳ್ಳುತ್ತಿರುತ್ತಾರೆ. ತಿಳಿದವನಿಗೆ ಅದು ಮೂಢನಂಬಿಕೆಯಾಗಿ ಕಾಣಬಹುದು. ಆದರೆ ಎಂದೂ ಒಮ್ಮೆಗೆ ಹೋಗಿ ಅಂತಹ ಜನರನ್ನು ಪರಿಹಾಸ್ಯ ಮಾಡಬಾರದು. 

ಒಬ್ಬ ಒಂದು ಕಲ್ಲನ್ನು ಅದಕ್ಕೊಂದು ಹೆಸರನ್ನು ಕೊಟ್ಟು ದೇವರೆಂದು ಪೂಜಿಸುತ್ತಿರಬಹುದು. ಆತನ ಅಪಾರ ನಂಬಿಕೆ ಶರಣಾಗತಿ ಆತನನ್ನು ರಕ್ಷಿಸುತ್ತಿರುತ್ತದೆ. ಇದನ್ನು ನೋಡಿ ಪರಿಹಾಸ್ಯ ಮಾಡುವುದು ಮೂಢತನ. ಅವರು ಇಂತಹ ನಂಬಿಕೆಯ ನೆಲಗಟ್ಟಿನಲ್ಲಿ ಜೀವನದಲ್ಲಿ ಭರವಸೆಯಿಂದ ಬದುಕುತ್ತಿರುತ್ತಾರೆ.ಅವರಿಗೊಂದು ಸನಾತನ ಪ್ರಜ್ಞೆ ಇರುತ್ತದೆ. ಸರ್ವಗತಸರ್ವಶಬ್ದವಾಚ್ಯ ಹಾಗು ಸರ್ವಶಕ್ತ ಭಗವಂತ ಆತನಿಗೆ ಕಲ್ಲಿನ ಮುಖೇನ ರಕ್ಷಣೆ ಕೊಡಲೂ ಸಾಧ್ಯವಿದೆಯಲ್ಲವೇ?  ಆದ್ದರಿಂದ ಎಂದೂ ಅಂತವರನ್ನು ನೋಡಿ ನಗಬಾರದು. ಅದನ್ನು ಬಿಟ್ಟು ಅವನನ್ನು ಕ್ರಮೇಣವಾಗಿ ಜ್ಞಾನದ ಪರಿದಿಗೆ ತರುವ ಪ್ರಯತ್ನವನ್ನು ಮಾಡಬೇಕು.  ಎಲ್ಲವನ್ನು ಸಾಮಾಜಿಕ ಕಾಳಜಿಯಿಂದ ಮಾಡಬೇಕು, ಆದರೆ ನಿರ್ಲಿಪ್ತನಾಗಿ ಎಲ್ಲಾ ಕರ್ಮವನ್ನು ಮಾಡುತ್ತಾ ಅಜ್ಞಾನಿಗಳಲ್ಲಿ ಜ್ಞಾನವನ್ನು ತುಂಬಬೇಕು.


ಅಧ್ಯಾಯ - 03 : ಶ್ಲೋಕ  27

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ ।

ಅಹಂಕಾರವಿಮೂಢಾತ್ಮಾ ಕರ್ತಾsಹಮಿತಿ ಮನ್ಯತೇ ॥೨೭॥

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ
ಅಹಂಕಾರವಿಮೂಢ ಆತ್ಮಾ ಕರ್ತಾ ಅಹಮ್ ಇತಿ ಮನ್ಯತೇ--

ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಿಂದ(ಭಗವದಧೀನವಾದಜೀವನ ಸ್ವಭಾವ ಸಹಜವಾದ ಗುಣಗಳಿಂದ) ಎಲ್ಲ ಬಗೆಯ ಕರ್ಮಗಳೂ  ನಡೆಯುತ್ತಿರುತ್ತವೆ. ಹಮ್ಮಿನಿಂದ ಮೈಮರೆತವನು 'ನಾನೇ ಮಾಡಿದೆಎಂದು ತಿಳಿಯುತ್ತಾನೆ.

ಈ ಶ್ಲೋಕ ಅನೇಕ ವಿಧದಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಕೃಷ್ಣ ಮುಖ್ಯವಾಗಿ 'ನಾನೇ ಮಾಡಿದೆಎಂದು ಅಹಂಕಾರ ಪಡುವುದು ಎಷ್ಟು ತಪ್ಪು ಮತ್ತು ಏಕೆ ಎನ್ನುವುದನ್ನು ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ "ಯಾರಾದರು ಏನನ್ನಾದರು 'ನಾನೇ ಮಾಡಿದೆಎಂದು ತಿಳಿದುಕೊಂಡರೆ ಅದು ಅವನ ತಿಳಿಗೇಡಿತನ" ಎಂದು. ಸೃಷ್ಟಿಯಲ್ಲಿನ ಒಂದು ವಿಚಿತ್ರವೆಂದರೆ ಯಾರೂ ಏನನ್ನೂ ಮಾಡುವುದಿಲ್ಲ-ಆದರೆ ಎಲ್ಲವೂ ಎಲ್ಲರ ಕೈಯಿಂದ ಆಗುತ್ತಿರುತ್ತದೆ!  ಈ ದೇಹ (ಪಿಂಡಾಂಡ) ಪ್ರಕೃತಿಯ ನಿರ್ಮಾಣ. ಪ್ರಕೃತಿಯಲ್ಲಿ ಅದಕ್ಕೆ ಪೋಷಕವಾದ ಅಂಗಭೂತವಾದ ಇಂದ್ರಿಯಗಳಿವೆ. 

ಪ್ರಕೃತಿ ಎಂದರೆ ಈ ದೇಹಅದರ ಗುಣಗಳು ಎಂದರೆ ಇಂದ್ರಿಯಗಳು. ಶಬ್ದ-ಸ್ಪರ್ಶ-ರಸ-ರೂಪ- ಗಂಧಕಿವಿ-ತೊಗಲು-ನಾಲಿಗೆ-ಕಣ್ಣು-ಮೂಗು;  ಅದಕ್ಕೆ ಅನುಗುಣವಾಗಿ ಆಕಾಶ(ಶಬ್ದ), ಗಾಳಿ(ಸ್ಪರ್ಶ), ನೀರು(ರಸ), ಅಗ್ನಿ (ರೂಪ), ಮತ್ತು ಮಣ್ಣು(ಗಂಧ) ಇವು ಪ್ರಕೃತಿಯ ಗುಣಗಳು. ಹೀಗಿರುವಾಗ ನಾವು ಯಾವುದೋ ಒಂದು ವಿಷಯವನ್ನು ನಾನೇ ಮಾಡಿದೆ ಎಂದು ಹೇಳುವುದು ಅರ್ಥ ಶೂನ್ಯ.

 ಉದಾಹರಣೆಗೆ 'ಕಣ್ಣಿನಿಂದ ನೋಡಿದೆ'; ಈ ಕಣ್ಣನ್ನು ನಮಗೆ ಕೊಟ್ಟವನು ಯಾರುಹುಟ್ಟು ಕುರುಡನಿಗೆ ಕಣ್ಣು ಕೊಡಲು ನಿನಗೆ ಸಾಧ್ಯವೇಅಂದರೆ ಕಣ್ಣು ಪ್ರಕೃತಿಯ ಕೊಡುಗೆ. ಭಗವಂತ ನಮಗೆ ಕಣ್ಣು ಕೊಟ್ಟಕಣ್ಣ ಮುಂದೆ ನೋಡುವ ವಸ್ತುವನ್ನಿಟ್ಟ, ನೋಡುವಂತೆ ಪ್ರೇರೇಪಿಸಿದ- ನಾವು ನೋಡಿದೆವು!  ಒಂದು ವೇಳೆ ನಮಗೆ ಒಳ್ಳೆಯ ಸ್ವರವಿದ್ದರೆ ಅದಕ್ಕಾಗಿ ಅಹಂಕಾರ ಪಡುತ್ತೇವೆ. ಆದರೆ ಈ ಸ್ವರವನ್ನು ನಮಗೆ ಕೊಟ್ಟವನು ಯಾರುಈ ಬಗ್ಗೆ ಎಂದೂ ನಾವು ಯೋಚಿಸುವುದಿಲ್ಲ. ಒಂದು ಕಾರ್ಯವಾಗಬೇಕಾದರೆ ಇಡೀ ವಿಶ್ವದ ಅನೇಕ ಘಟಕಗಳು ಸೇರಿ ಕಾರ್ಯ ನಿರ್ವಹಿಸಬೇಕು. ಪ್ರಕೃತಿ ಜಡ ಅದಕ್ಕೆ ಇಚ್ಛೆ ಇಲ್ಲ. 'ನಾವು ಮಾಡುವುದುಅಂದರೆ ಇಚ್ಛಿಸಿ ಮಾಡುವುದು. ನಮಗೆ ಇಚ್ಛೆ ಇದೆ;ಪ್ರತಿಯೊಬ್ಬ ಜೀವನಿಗೂ ಅವನದೇ ಆದ ಜೀವ ಸ್ವಭಾವವಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯ ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿರುತ್ತದೆ. ಇದು ಇಚ್ಛಾ ಪೂರ್ವಕ ಕ್ರಿಯೆ. ಆದರೆ ಇಲ್ಲಿ ನಮಗೆ ಇಚ್ಛಾ ಸ್ವಾತಂತ್ರ್ಯವಿಲ್ಲ.

ಇಚ್ಛಾಸ್ವಾತಂತ್ರ್ಯ ಇರುವುದು ಕೇವಲ ಭಗವಂತನಲ್ಲಿ. ಅದಕ್ಕನುಗುಣವಾಗಿ ಸರ್ವಕಾರ್ಯ ನಿರ್ವಹಣೆ ಆಗುತ್ತದೆ. ಆದ್ದರಿಂದ ನಮ್ಮ ಸ್ವಭಾವವನ್ನು ನಿಯಂತ್ರಿಸುವವ ಇಡೀ ಜಗತ್ತಿನ ಮೂಲ ಕರ್ತೃ ಭಗವಂತ. ಅವನ ಇಚ್ಛೆಗನುಗುಣವಾಗಿ ಪ್ರಪಂಚದ ವ್ಯಾಪಾರ ನಡೆಯುತ್ತದೆ. ಇದು ವಿಶ್ವದ ವ್ಯವಸ್ಥೆ. ಇಡೀ ವಿಶ್ವದ ಕರ್ಮ ಚಕ್ರದಲ್ಲಿ ನಾವು ಒಂದು ಘಟಕ ಅಷ್ಟೆ. ಆದ್ದರಿಂದ 'ನಾನೇ ಮಾಡಿದೆಎಂದು ಅಹಂಕಾರ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ನಿಜವಾದ ಕರ್ತೃ ಭಗವಂತ. ಜೀವನಿಗೊಂದು ಕರ್ತೃತ್ವ ಹಾಗು ಜಡಕ್ಕೊಂದು  ಕರ್ತೃತ್ವವಿದೆ. ಇದರ ಅಂತರ ನಮಗೆ ತಿಳಿದಿರಬೇಕು. ಮಣ್ಣು  ಜಡ ಅದಕ್ಕೆ ಇಚ್ಛೆ ಇಲ್ಲ. ಬೀಜ ಚೇತನಅದಕ್ಕೆ ಮರವಾಗುವ ಸ್ವಭಾವವಿದೆ ಆದರೆ ಸ್ವಾತಂತ್ರ್ಯವಿಲ್ಲ. ಬೀಜವನ್ನು ಬಿತ್ತಿ ಬೆಳೆಸುವ ತೋಟಗಾರ ಆ ಭಗವಂತ. ಭಗವಂತನ ಇಚ್ಛೆಗನುಗುಣುವಾಗಿ, ‘ಜೀವ’ ನಲ್ಲಿರುವ ಸ್ವಭಾವಕ್ಕನುಗುಣವಾಗಿ ಪ್ರಪಂಚದಲ್ಲಿ ಕ್ರಿಯೆ ನಡೆಯುತ್ತದೆ. ಒಂದು ಕ್ರಿಯೆಯ ಹಿಂದೆ ಇಡೀ ವಿಶ್ವದ ಪಾಲುದಾರಿಕೆ ಇರುತ್ತದೆ.

ಅಧ್ಯಾಯ - 03 : ಶ್ಲೋಕ  28

ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ ।

ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ ॥೨೮॥

ತತ್ತ್ವವಿತ್ ತು ಮಹಾಬಾಹೋ ಗುಣ ಕರ್ಮ ವಿಭಾಗಯೋಃ
ಗುಣಾಃ  ಗುಣೇಷು ವರ್ತಂತೇ  ಇತಿ ಮತ್ವಾ ನ ಸಜ್ಜತೇ- ಓ ಮಹಾವೀರಇಂದ್ರಿಯಾದಿಗಳ(ಜೀವ ಸ್ವಭಾವದ ಗುಣಗಳ) ಮತ್ತು ಕ್ರಿಯೆಗಳ ಪ್ರಭೇದಗಳ ನಿಜವನ್ನರಿತವನುಇಂದ್ರಿಯಗಳ ವಿಷಯಗಳಲ್ಲಿ ಚರಿಸುತ್ತವೆ ಎಂದರಿತು ಅವುಗಳನ್ನು ಅಂಟಿಸಿಕೊಳ್ಳುವುದಿಲ್ಲ.

ತತ್ವವನ್ನು ಅರಿತ ಅಥವಾ ಯಥಾರ್ಥವನ್ನು ಅರಿತ ತತ್ವವಾದಿ-ಗುಣಕರ್ಮಇಂದ್ರಿಯ ಮತ್ತು ಅದರಲ್ಲಿನ ಕ್ರಿಯಾಭೇದವನ್ನು ತಿಳಿದಿರಬೇಕು. ಮೂಲಭೂತವಾಗಿ ಇಂದ್ರಿಯಗಳಲ್ಲಿ ಸಾತ್ವಿಕರಾಜಸ ಮತ್ತು ತಾಮಸವೆಂಬ ತ್ರೈಗುಣ್ಯಗಳಿಂದ ಕರ್ಮ ನಡೆಯುತ್ತಿರುತ್ತದೆ. 

ಇದು ನಾವು ಹಿಂದೆ ಅಂಟಿಸಿಕೊಂಡು ಬಂದುದರ ಪ್ರಭಾವವಿರಬಹುದು. ಇದರಿಂದ ಆಗುವ ಕರ್ಮವನ್ನು ನಾವು ತಟಸ್ಥರಾಗಿ ನೋಡುತ್ತಿರಬೇಕು. ಈ ವಿಷಯ ಮನೋಶಾಸ್ತ್ರಕ್ಕೆ ಸಂಬಂಧಪಟ್ಟಿದ್ದು. ನಾವೇ ಮಾಡುವ ಕ್ರಿಯೆಯನ್ನು ನಾವೇ ತಟಸ್ಥರಾಗಿ ವಿಶ್ಲೇಷಿಸುವುದು! ನನ್ನ ಮೇಲೆ ತ್ರೈಗುಣ್ಯದ ಯಾವ ಗುಣ ಪ್ರಭಾವಬೀರುತ್ತಿದೆ ಎನ್ನುವುದನ್ನು ಸ್ವಯಂ ವಿಶ್ಲೇಷಣೆ(Self analysis)ಮಾಡಿಗುಣಕರ್ಮ ವಿಭಾಗ ತತ್ವವನ್ನು ತಿಳಿದುಕೊಂಡಾಗತ್ರೈಗುಣ್ಯದ  ಪ್ರಭಾವದ ಅರಿವಾಗುತ್ತದೆ. 

ಆಗ ನಮಗೆ ಅದರಲ್ಲಿ ಒಡೆತನವಿಲ್ಲ ಎನ್ನುವ ಸತ್ಯ ತಿಳಿಯುತ್ತದೆ.ಇಂದ್ರಿಯಗಳು- ಅದರ ಮೇಲೆ ಪ್ರಕೃತಿಯ ತ್ರೈಗುಣ್ಯ-ಅದರ ಮೇಲೆ ಜೀವ ಸ್ವಭಾವ-ಅದರ ಮೇಲೆ ಭಗವಂತನ ಜ್ಞಾನಾನಂದ- ಇವೆಲ್ಲವೂ ಕರ್ಮವಾಗಿ ಇಂದ್ರಿಯದ ಮೂಲಕ  ಅಭಿವ್ಯಕ್ತವಾಗುತ್ತಿರುತ್ತದೆ. ಜಡದಲ್ಲಿ ಬರಿಯ ಕೃತಿ(Action), ಜೀವನಲ್ಲಿ ಇಚ್ಛೆ ಮತ್ತು ಕೃತಿ (Intentional Action) ಹಾಗು ಭಗವಂತನಲ್ಲಿ ಸ್ವತಂತ್ರ ಇಚ್ಛಾಕೃತಿ(Independent Intentional Action)-ಇದು ಕರ್ಮಭೇದ. ಹೀಗೆ ಗುಣಭೇದ ಮತ್ತು ಕರ್ಮಭೇದವನ್ನು ಅರಿತವನು 'ತತ್ವವಿತ್ತು'. ಈ ತತ್ವ ಅರ್ಥವಾದರೆ "ನಾನು ಮಾಡಿದೆ" ಎನ್ನುವ ಅಹಂಕಾರ ಎಂದೂ ನಮ್ಮನ್ನು ಕಾಡುವುದಿಲ್ಲ.

ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ-ಸ್ವಾರಸ್ಯವಾಗಿವಿಷಯಗರ್ಭಿತವಾಗಿ ಮಾತನಾಡುವ ಒಬ್ಬ ಮಾತುಗಾರನನ್ನು ನೋಡಿ:  ಆತ ಹೀಗೆ ಮಾತನಾಡಬೇಕಾದರೆ ಕೇವಲ ಬಾಯಿ ಇದ್ದರೆ ಸಾಲದುಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು. ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು.ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದ ಹುಟ್ಟಬೇಕಾದರೆ ಮಾಧ್ಯಮವಾಗಿ ಆಕಾಶ ಮತ್ತು ಗಾಳಿ ಅಗತ್ಯ. ಈ ಎಲ್ಲಾ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರುಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆಇಲ್ಲಿ ನಮ್ಮ ಕೈವಾಡ ಏನಿದೆಇದು ತಿಳಿದಾಗ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ   ಇರಲು ಸಾಧ್ಯ.

ಇಂದ್ರಿಯಗಳಲ್ಲಿ ಸತ್ವ-ರಜೋ-ತಮೋ ಗುಣಗಳು ಜೀವ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡುತ್ತವೆ. ಭಗವಂತನ ಜ್ಞಾನಾನಂದ ಸ್ವರೂಪ- ಜೀವನ ಜ್ಞಾನೇಂದ್ರಿಯ ಗುಣಗಳನ್ನು ನಿಯಂತ್ರಿಸುತ್ತವೆ. ಇದನ್ನು ತಿಳಿದಾಗ ನಾನು-ನನ್ನದು ಎನ್ನುವುದು ಹೊರಟು ಹೋಗುತ್ತದೆ. ವಿಶ್ವವೆಂಬ ಈ ಮಹಾ ಸಾಗರದಲ್ಲಿ ನಾನೊಂದು ಮರಳಿನ ಕಣ ಎನ್ನುವ ನಿಜ ತಿಳಿಯುತ್ತದೆ. ವಿಶ್ವದ ವಿಶ್ವತೋಮುಖವಾದ ಅಸ್ತಿತ್ವ ಗುರುತಿಸಿದವ "ನಾನು ಮಾಡಿದೆ" ಎಂದು ಎಂದೂ ಹೇಳುವುದಿಲ್ಲ ಹಾಗು ಯಾವುದನ್ನೂ ಅಂಟಿಸಿಕೊಳ್ಳು(Attachment)ವುದಿಲ್ಲ.
ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು 'ಮಹಾಬಾಹೋಎಂದು ಸಂಬೋಧಿಸಿದ್ದಾನೆ. ಮೇಲ್ನೋಟದಲ್ಲಿ ಮಹಾಬಾಹು ಎಂದರೆ ವೀರಹೋರಾಟಗಾರ. ಬಲಿಷ್ಠ ತೊಳಿನವನಾದ ನೀನು ಹೇಡಿಯಾಗದೆ ಹೋರಾಡು ಎನ್ನುವುದು ಇಲ್ಲಿ ಕಾಣುವ ಭಾವ. ಆದರೆ ಅದರಿಂದಾಚೆಗೆ ಇನ್ನೂ ಅನೇಕ ಅರ್ಥವಿದೆ. ಮಹತ್ ವಹತೀತಿ ಮಹಾಬಾಹು ಅಂದರೆ ದೊಡ್ದದ್ದನ್ನು ಹೊತ್ತುಕೊಂಡವ. ಜಗತ್ತಿನ ಮೂಲಭೂತವಾದ ಸತ್ಯವನ್ನು ಹೃದಯದಲ್ಲಿ ಹೊತ್ತವ ಎಂದರ್ಥ. “ಜಗತ್ತಿನ ಮಹತ್ತಾದ ಸಂಗತಿಯನ್ನು ಗ್ರಹಿಸಬಲ್ಲ ಅರಿವಿನ ಮಹಾತೋಳಿನಿಂದ ದಿಗಂತದಾಚೆಗಿನ ಸತ್ಯ(ಭಗವಂತ)ವನ್ನು ಹಿಡಿ” ಎನ್ನುವುದು ಈ ಸಂಬೋಧನೆ ಹಿಂದಿರುವ ಇನ್ನೊಂದು ಭಾವ.ಅಧ್ಯಾಯ - 03 : ಶ್ಲೋಕ  29

ಪ್ರಕೃತೇರ್ಗುಣ ಸಮ್ಮಾಢಾಃ ಸಜ್ಜಂತೇ  ಗುಣಕರ್ಮಸು ।

ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್ ॥೨೯॥

ಪ್ರಕೃತೇಃ ಗುಣ ಸಮ್ಮಾಢಾಃ ಸಜ್ಜಂತೇ  ಗುಣಕರ್ಮಸು 
ತಾನ್ ಅಕೃತ್ಸ್ನವಿದಃ ಮಂದಾನ್ ಕೃತ್ಸ್ನವಿತ್ ನ  ವಿಚಾಲಯೇತ್--

ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಲ್ಲೇ ಮೈಮರೆತವರು ಇಂದ್ರಿಯಾದಿಗಳ ಕ್ರಿಯೆಯಲ್ಲೆ ಅಂಟಿಕೊಳ್ಳುತ್ತಾರೆ. ಪೂರ್ತಿ ನಿಜವನ್ನರಿಯದ ಅಂಥ ಮಂದಿಯನ್ನು ಪೂರ್ತಿ ಅರಿತವರು ಗೊಂದಲಗೆಡಿಸಬಾರದು.

ಪ್ರಕೃತಿಯ ಗುಣಭೂತವಾಗಿರುವ ಇಂದ್ರಿಯ ಸುಖದಲ್ಲಿ ಮುಳುಗಿದವರು, ಮೂಲ ಪ್ರಕೃತಿಯ ತ್ರಿಗುಣದ ಮೋಹಕ್ಕೊಳಗಾಗಿ, ಸತ್ಯವನ್ನರಿಯದೆ, ಜೀವ ಸ್ವಭಾವದ ಗುಣ ಮೋಹದಲ್ಲಿದ್ದು, ತಾನು ಭಗವಂತನ ಗುಣದ ಅಧೀನ ಎನ್ನುವ ಎಚ್ಚರ ಇಲ್ಲದೆ ಇರುವವರನ್ನು ಕೃಷ್ಣ   'ಪ್ರಕೃತೇರ್ಗುಣ ಸಮ್ಮಾಢಾಃ' ಎಂದು ಕರೆದಿದ್ದಾನೆ. ಇಂತವರು ಭಗವಂತನ ಗುಣ ಕರ್ಮವನ್ನು ತಮ್ಮದೇ ಎಂದು ಭ್ರಮಿಸಿಕೊಂಡು, 'ನಾನೇ ಎಲ್ಲಾ ನನ್ನಿಂದಲೇ ಎಲ್ಲ' ಎಂದು ಬದುಕುತ್ತಿರುತ್ತಾರೆ. ಇಂತವರಿಗೆ ಸತ್ಯವನ್ನು ಅಥವಾ ಪೂರ್ಣವನ್ನು ಅರಿಯುವ ಯೋಗ್ಯತೆ ಇರುವುದಿಲ್ಲ. 

ಅಂಥವರನ್ನು 'ಪೂರ್ಣವನ್ನು ಅರಿತವರು'  ಗೊಂದಲಗೆಡಿಸಲು ಹೋಗಬಾರದು. ಅವರಲ್ಲಿ ಸತ್ಯವನ್ನು ತಿಳಿಯುವ ಯೋಗ್ಯತೆ ಇದ್ದರೆ ಅವರು ಆ ಸ್ಥಿತಿಯಿಂದಾಚೆಗೆ ಬರುತ್ತಾರೆ. ಇಲ್ಲದ ಯೋಗ್ಯತೆಯನ್ನು ಯಾರೂ ಅವರಲ್ಲಿ ತುಂಬಿಸಲಾರರು, ಇದ್ದ ಯೋಗ್ಯತೆಯನ್ನು ಯಾರೊಬ್ಬರೂ ಕಸಿಯಲಾರರು. ಯಾರಿಗೆ ಸತ್ಯವನ್ನು ತಿಳಿಯುವ ಅಪೇಕ್ಷೆ ಇದೆ ಅವರೊಂದಿಗೆ ಸೇರಿ ಅವರ ಸಹವಾಸ ಮಾಡಿ ಅವರಿಂದ ಕಲಿಯಬಹುದು ಅಥವಾ ಅವರಿಗೆ ತಿಳಿಹೇಳಬಹುದು. 
ಅಧ್ಯಾಯ - 03 : ಶ್ಲೋಕ  30

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ ।

ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ ॥೩೦॥

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ ಅಧ್ಯಾತ್ಮ ಚೇತಸಾ            
ನಿರಾಶೀಃ ನಿರ್ಮಮಃ ಭೂತ್ವಾ ಯುಧ್ಯಸ್ವ ವಿಗತ ಜ್ವರಃ-

ಎಲ್ಲ ಕರ್ಮಗಳನ್ನು ನನ್ನಲ್ಲಿ ಅರ್ಪಿಸಿ, ನನ್ನಲ್ಲೇ ಮನವಿಟ್ಟು, ಹಂಬಲ ತೊರೆದು, ಮಮಕಾರ ತೊರೆದು,ಚಳಿ ಬಿಟ್ಟು ಹೋರಾಡು.

ಕೃಷ್ಣ ಹೇಳುತ್ತಾನೆ "ನೀನು ಮಾಡುವ ಸರ್ವಕರ್ಮವನ್ನು ನನಗರ್ಪಿಸಿ ಕರ್ಮ ಮಾಡು" ಎಂದು.  ಇಲ್ಲಿ 'ಸಂನ್ಯಸ್ಯ' ಎನ್ನುವ ಪದ ಬಳಕೆಯಾಗಿದೆ. ನಾನು ಮಾಡಿದ್ದೆಲ್ಲವೂ ನಾನೇ ಮಾಡಿದ್ದಲ್ಲ. ಏನು ಕ್ರಿಯೆ ನನ್ನಿಂದಾಯಿತೋ ಅದು ನನ್ನ ಕೈಯಿಂದ ಭಗವಂತ ಮಾಡಿಸಿದ್ದು. ಏನು ನನ್ನ ಮೂಲಕ ನಡೆಯಿತು ಅದು ಭಗವಂತನ ಪೂಜೆ ಎನ್ನುವ  ಸಮರ್ಪಣಾ ಭಾವ ಸಂನ್ಯಾಸ. "ನಾಹಂ  ಕರ್ತಾ ಹರಿ ಕರ್ತಾ; ಹರಿ ಕರ್ತಾ ಹಿ ಕೇವಲಮ್" ; "ನನ್ನ ಬಾಯಿಯಿಂದ ಏನು ಬಂತೋ ಅದು ನಿನ್ನ ಸ್ತೋತ್ರವಾಗಲಿ. ನನ್ನ ಮನಸ್ಸಿನ ಮೂಲಕ ನಡೆಯುವುದೆಲ್ಲವೂ ನಿನ್ನ ಸ್ಮರಣೆಯಾಗಲಿ. 

ಎಲ್ಲವೂ ನಿನ್ನ ಪೂಜೆಯಾಗಲಿ ಅನ್ನುವ ಚಿಂತನೆ ಬೆಳೆಸಿಕೊ-ಯುದ್ಧ ಮಾಡುವಾಗಲೂ ಸಹ"  ಎನ್ನುತ್ತಾನೆ ಕೃಷ್ಣ.

ಇಲ್ಲಿ ಯುದ್ಧ ಸಮಷ್ಟಿಯಾಗಿ ತೀರ್ಮಾನವಾಗಿರುವುದು. ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮರಾಯ ರಾಜಸೂಯ ಯಾಗ ಮಾಡಿದಾಗ ಅಲ್ಲಿ  ಶಿಶುಪಾಲನ ತಲೆ ಉರುಳುತ್ತದೆ. ಆಗ ಧರ್ಮರಾಯನಿಗೆ ವ್ಯಾಸರು "ಇದು ಮುಂದೆ ಸುಮಾರು ಹದಿಮೂರು ವರ್ಷಗಳ ನಂತರ ನಡೆಯುವ ಮಹಾ ಯುದ್ಧದ ಮುನ್ಸೂಚನೆ" ಎಂದು ಹೇಳುತ್ತಾರೆ. ಅಂದರೆ ಈ ಯುದ್ಧ ವಿಧಿಲಿಖಿತ. ಇಲ್ಲಿ ಅರ್ಜುನ ಕೇವಲ ಉಪಕರಣ(Instrument) ಅಷ್ಟೇ. 

ಆದ್ದರಿಂದ “ಭಗವಂತನಲ್ಲಿ ಮನವನ್ನಿಟ್ಟು ಹಂಬಲ-ಮಮಕಾರ ತೊರೆದು ನಿಶ್ಚಿಂತೆಯಿಂದ ಹೋರಾಡು” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.
ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಏನು ಆಗಬೇಕೋ ಅದು ಆಗೇ ತೀರುತ್ತದೆ. ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಭಗವಂತ ನನಗೆ ವಹಿಸಿದ ಕೆಲಸವನ್ನು ಆತನೇ ನನ್ನ ಕೈಯಿಂದ ಮಾಡಿಸಿದ, ಇದು ಅವನಿಗರ್ಪಿತವಾಗಲಿ,ಅವನ ಪೂಜೆಯಾಗಲಿ. ಏನು ಫಲ ಬಂತೋ ಅದು ಭಗವಂತನ ಪ್ರಸಾದ. ಈ ಸಂಕಲ್ಪವನ್ನಿಟ್ಟು ಕಾರ್ಯ ನಿರ್ವಹಿಸಿದಾಗ ಏನೇ ಆದರೂ ಅದರ ಹೊಣೆಯನ್ನು ಭಗವಂತ ಹೊರುತ್ತಾನೆ. ಇದಕ್ಕಿಂತ ದೊಡ್ಡ ಪೂಜೆ ಯಾವುದೂ ಇಲ್ಲ. ಇದು ಗೀತೆ ಮೂಲಕ ಕೃಷ್ಣ ನಮಗೆ ಕೊಟ್ಟ ಜೀವನ ಸಂದೇಶ.  ಇದರ ಫಲಶ್ರುತಿ ಎಂಬಂತೆ ಮುಂದಿನ ಎರಡು ಶ್ಲೋಕಗಳಿವೆ.


ಅಧ್ಯಾಯ - 03 : ಶ್ಲೋಕ  31

ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ ।

ಶ್ರದ್ಧಾವಂತೋsನಸೂಯಂತೋ  ಮುಚ್ಯಂತೇ ತೇsಪಿ ಕರ್ಮಭಿಃ ॥೩೧॥


ಯೇ ಮೇ ಮತಮ್ ಇದಮ್  ನಿತ್ಯಮ್ ಅನುತಿಷ್ಠಂತಿ ಮಾನವಾಃ    
ಶ್ರದ್ಧಾವಂತಃ ಅನಸೂಯಂತಃ  ಮುಚ್ಯಂತೇ ತೇ ಅಪಿ ಕರ್ಮಭಿಃ -

ಯಾವ ಮನುಷ್ಯರು ಕಿಚ್ಚು ಪಡದೆ ನನ್ನ ಈ ಸಿದ್ದಾಂತವನ್ನು ನಂಬಿ ನಡೆಯುವರೋ ಅವರು ಕರ್ಮಗಳಿಂದ ಪಾರಾಗುತ್ತಾರೆ.

"ಎಲ್ಲವನ್ನು ಭಗವಂತ ನನ್ನ ಕೈಯಿಂದ ಮಾಡಿಸುತ್ತಿದ್ದಾನೆ, ನಾನು ಮಾಡುವುದೆಲ್ಲವೂ ಅವನ ಪೂಜೆ, ನನಗೆ ಯಾವ ಫಲದಿಂದ ಒಳಿತು ಎನ್ನುವುದು ನನಗಿಂತ ಭಗವಂತನಿಗೆ ಚನ್ನಾಗಿ ತಿಳಿದಿದೆ. ಆದ್ದರಿಂದ ಫಲದಲ್ಲಿ ಅಧಿಕಾರ ಬಯಸದೇ ಬಂದಿದ್ದನ್ನು ಭಗವಂತನ ಪ್ರಸಾದ ಎಂದು ಸ್ವೀಕರಿಸಿ ಬದುಕುವುದು". ಇದು ನಮ್ಮ ಜೀವನದ ನಿತ್ಯಾನುಷ್ಠಾನದ ಪರಿಯಾಗಬೇಕು.  

ಜೀವನದ ಪ್ರತಿ ಕ್ಷಣದಲ್ಲೂ ಈ ಅನುಸಂಧಾನವಿರುವ ಮಾನವರು(Human being, ಜ್ಞಾನಿಗಳು, ಮನುಷ್ಯತ್ವ ಉಳ್ಳವರು) ಅಶ್ರದ್ಧೆ(ರಾಜಸ) ಹಾಗು ಅಸೂಯೆ(ತಾಮಸ) ತೊರೆದು ನಿಷ್ಕಾಮಕರ್ಮ ಮಾಡಿದಾಗ, ಅವರ ಜ್ಞಾನ ವೃದ್ಧಿಯಾಗುತ್ತದೆ. ಅದರಿಂದ ಅವರು ಕರ್ಮ ಬಂಧನವನ್ನು ಕಳಚಿಕೊಂಡು ಮೋಕ್ಷಕ್ಕೆ ಹೋಗಲು ಅರ್ಹರಾಗುತ್ತಾರೆ. ನಿತ್ಯಾನುಷ್ಠಾನದಲ್ಲಿ  ಈ ಅನುಸಂದಾನವಿದ್ದಾಗ ನಮ್ಮ ಕರ್ಮವೇ ನಮ್ಮನ್ನು ಕರ್ಮ ಬಂಧನದಿಂದ ಕಳಚುವುದಕ್ಕೆ ಮೆಟ್ಟಿಲಾಗುತ್ತದೆ ಹಾಗು ಕರ್ಮ ಬಂಧನದಿಂದ ಪಾರು ಮಾಡುತ್ತದೆ.ಅಧ್ಯಾಯ - 03 : ಶ್ಲೋಕ  32

ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ  ಮೇ ಮತಮ್।

ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿನಷ್ಟಾನಚೇತಸಃ ॥೩೨॥

ಯೇ ತು ಏತತ್ ಅಭ್ಯಸೂಯಂತಃ ನ ಅನುತಿಷ್ಠಂತಿ  ಮೇ ಮತಮ್ । 
ಸರ್ವ ಜ್ಞಾನ ವಿಮೂಢಾನ್ ತಾನ್ ವಿದ್ಧಿ ನಷ್ಟಾನ್ ಅಚೇತಸಃ -

ಯಾರು ಕಿಚ್ಚಿನಿಂದ ನನ್ನ ಸಿದ್ದಾಂತವನ್ನು ಆಚರಣೆಗೆ ತರುವುದಿಲ್ಲ ಅವರು ಎಲ್ಲ ತಿಳಿವಿಗೂ ಎರವಾದವರು. ವಿನಾಶದತ್ತ ಸರಿವ ತಿಳಿಗೇಡಿಗಳು-ಎಂದು ತಿಳಿ.

ಮೇಲೆ ಹೇಳಿದ ಅನುಷ್ಠಾನವನ್ನು ಅರಿಯದೆ, ಅಸೂಯೆ-ಅಸಹನೆಯಿಂದ, 'ನನ್ನ ಕೆಲಸಕ್ಕೆ ನಾನೊಬ್ಬನೇ ಜವಾಬ್ದಾರ, ನಾನು ಮಾಡುವುದು ನನ್ನ ಸ್ವಂತ ಹಿತಾಸಕ್ತಿಗಾಗಿ,ಅದರ ಫಲವನ್ನು ನಾನು ಪಡೆಯುತ್ತೇನೆ ನನ್ನ ಕೈಯಲ್ಲಿ ನನ್ನ ಅಸ್ತಿತ್ವವಿದೆ, ಯಾವ ದೇವರೂ ಅದಕ್ಕೆ ಹೊಣೆಗಾರನಲ್ಲ' ಎಂದು ಅಭಿಪ್ರಾಯ ತೋರಿ ಅಹಂಕಾರದಿಂದ ಬದುಕುವವರಿಗೆ ಎಂದೂ ಅರಿವಿನ ಬಾಗಿಲು ತೆರೆಯುವುದಿಲ್ಲ. 

ಆತ ಪ್ರಪಂಚದಲ್ಲಿ ವಿಮೂಢ(ಶ್ರೇಷ್ಠ ದಡ್ಡ)ಎನಿಸುತ್ತಾನೆ. ಆತನಿಗೆ 'ತನಗೆ ಏನೂ ಗೊತ್ತಿಲ್ಲ ಎನ್ನುವ ವಿಷಯವೂ ಗೊತ್ತಿರುವುದಿಲ್ಲ!' ಇಂತವರಿಗೆ ಸತ್ಯದ ಬಗ್ಗೆ ಚಿಂತನೆ ಮಾಡುವ ಅರ್ಹತೆ ಇರುವುದಿಲ್ಲ. ಅಂತವರು ವಿನಾಶದತ್ತ ನಡೆಯುವ ತಿಳಿಗೇಡಿಗಳು. ಅವರು ಕತ್ತಲಿನಿಂದ ಕತ್ತಲಿಗೆ ಹೋಗುತ್ತಾ ಅಧಃಪಾತವನ್ನು ತಲುಪಿ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಾರೆ.
ಕೃಷ್ಣನ ಈ ಮೇಲಿನ ಸಂದೇಶವನ್ನು ಕೇಳಿದಾಗ ನಮಗೊಂದು ಪ್ರಶ್ನೆ ಬರುತ್ತದೆ. ಜಗತ್ತಿನ ಮೂಲಭೂತವಾದ ಈ ಸತ್ಯವನ್ನು ಏಕೆ ಎಲ್ಲರೂ ಅನುಸರಿಸುವುದಿಲ್ಲ?ಎಂದು.  ಇದಕ್ಕೆ ತುಂಬಾ ರೋಚಕವಾದ ಉತ್ತರವನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ಕೊಡುತ್ತಾನೆ.ಅಧ್ಯಾಯ - 03 : ಶ್ಲೋಕ  33

ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ ।

ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ ॥೩೩॥

ಸದೃಶಮ್  ಚೇಷ್ಟತೇ ಸ್ವಸ್ಯಾಃ ಪ್ರಕೃತೇಃ  ಜ್ಞಾನವಾನ್ ಅಪಿ 
ಪ್ರಕೃತಿಮ್  ಯಾಂತಿ ಭೂತಾನಿ ನಿಗ್ರಹಃ ಕಿಮ್  ಕರಿಷ್ಯತಿ--

ಎಷ್ಟು ತಿಳಿದವನಾದರೂ ತನ್ನ ಸಂಸ್ಕಾರಕ್ಕೆ (ಸ್ವಭಾವಕ್ಕೆ) ತಕ್ಕಂತೆಯೆ ನಡೆದುಕೊಳ್ಳುತ್ತಾನೆ. ಎಲ್ಲ ಜೀವಿಗಳೂ ಸಂಸ್ಕಾರದ(ಸ್ವಭಾವದ) ಕೈಗೊಂಬೆಗಳು. ಅದುಮಿಟ್ಟರೇನು ಬಂತು.

ಯಾರು ಎಷ್ಟೇ  ಉಪದೇಶ ಮಾಡಿದರೂ ಇಡೀ ಜಗತ್ತಿನಲ್ಲಿ ಎಲ್ಲರೂ ಒಂದೇ ಮಾರ್ಗ ಅನುಸರಿಸುವುದು ಎಂದೂ ಸಾಧ್ಯವಿಲ್ಲ. ಇದಕ್ಕೆ ಕಾರಣ ನಮ್ಮ ನಡೆ, ನಮ್ಮ ಸಂಸ್ಕಾರ, ಹಾಗು ನಮ್ಮ ಜೀವ ಸ್ವಭಾವ. ನಾವು ನಮ್ಮ  ಪೂರ್ವ ಸಂಸ್ಕಾರವನ್ನು ನೋಡಿದರೆ-ಸಾತ್ವಿಕ,ರಾಜಸ,ತಾಮಸವಾದ ಅನೇಕ ಅನುಭವಗಳು ಜನ್ಮ-ಜನ್ಮಾಂತರಗಳಿಂದ ಸುಪ್ತಪ್ರಜ್ಞೆಯಲ್ಲಿರುತ್ತವೆ. ಅನೇಕ ಜನ್ಮಗಳ ಮೂಲಕ ಹರಿದು ಬಂದ ಈ ಜೀವಕ್ಕೆ ಅನೇಕ ಜನ್ಮಗಳ ಅನುಭವದ ಸಂಸ್ಕಾರವಿದೆ. ಒಂದೇ ಜನ್ಮವನ್ನು ನೋಡಿದರೂ ಕೂಡಾ,  ಬೆಳೆದು ಬಂದ ವಾತಾವರಣದ ಛಾಪು ಈ ಪ್ರಭಾವ, ಸದಾ ನಮ್ಮ ಮೇಲಿರುತ್ತದೆ. ಇದಲ್ಲದೆ ಪ್ರತೀ ವ್ಯಕ್ತಿಗೆ ಆತನದೇ ಆದ ಜೀವಸ್ವಭಾವವಿರುತ್ತದೆ. ಆತ ಸದಾ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾನೆ. 

ಮೆಣಸಿನ ಗಿಡ ಹೇಗೆ ಸಿಹಿಯಾದ ಹಣ್ಣನ್ನು ನೀಡಲಾರದೋ ಹಾಗೇ ಒಬ್ಬ ವ್ಯಕ್ತಿಯ ಜೀವಸ್ವಭಾವವನ್ನು ಬದಲಿಸುವುದು ಅಸಾಧ್ಯ. ಸ್ವಭಾವ ಮತ್ತು ಪ್ರಭಾವದ ಸಮ್ಮಿಶ್ರಣ ಈ ಬದುಕು.
ಈ ಮೇಲಿನ ವಿಶ್ಲೇಷಣೆಯನ್ನು ನೋಡಿದಾಗ ಸಹಜವಾಗಿ ನಮಗೊಂದು ಪ್ರಶ್ನೆ ಮೂಡುತ್ತದೆ. “ಜೀವ ಸ್ವಭಾವದಂತೆ ಜೀವದ ನಡೆ; ಸ್ವಭಾವದಂತೆ ಕ್ರಿಯೆ; ಸ್ವಭಾವಕ್ಕೆ ತಕ್ಕಂತೆ ಎಲ್ಲವೂ ಆಗುತ್ತದೆ. ಹಾಗಾದರೆ ಪ್ರಯತ್ನ ಏಕೆ ಮಾಡಬೇಕು?” ಎಂದು.  ಏಕೆಂದರೆ ಸದಾ ಪ್ರಯತ್ನ ಮಾಡುವುದರಿಂದ ಸಂಸ್ಕಾರದಿಂದ ಅಥವಾ ಪ್ರಭಾವದಿಂದ ಈಚೆ ಬರಲು ಸಾಧ್ಯ. ಸಹಜ ಸ್ವಭಾವದಲ್ಲಿ ನಿಲ್ಲುವ ತನಕ ಪ್ರಭಾವದಿಂದ ಪಾರಾಗುವ ನಿರಂತರ ಪ್ರಯತ್ನ ಅಗತ್ಯ. ನಿರಂತರ ಅಧ್ಯಾತ್ಮ ಸಾಧನೆ ನಮ್ಮ ಸಹಜ ಸ್ವಭಾವವನ್ನು ಅಭಿವ್ಯಕ್ತಗೊಳಿಸಲು ಸಹಾಯ ಮಾಡುತ್ತದೆ.       ಅಧ್ಯಾಯ - 03 : ಶ್ಲೋಕ  34

ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ ।

ತಯೋರ್ನ ವಶಮಾಗಚ್ಛೇತ್ ತೌ  ಹ್ಯಸ್ಯ ಪರಿಪಂಥಿನೌ ॥೩೪॥

ಇಂದ್ರಿಯಸ್ಯ ಇಂದ್ರಿಯಸ್ಯಅರ್ಥೇ ರಾಗ ದ್ವೇಷೌ ವ್ಯವಸ್ಥಿತೌ 
ತಯೋಃ ನ ವಶಮ್ ಅಗಚ್ಛೇತ್ ತೌ ಹಿ ಅಸ್ಯ ಪರಿಪಂಥಿನೌ--

ಒಂದೊಂದು ಇಂದ್ರಿಯದ ವಿಷಯದಲ್ಲೂ ಒಲವು -ಹಗೆತನಗಳು ತುಂಬಿವೆ. ಅವುಗಳಿಗೆ ಬಲಿಯಾಗಬಾರದು. ಅವೇ ಸಾಧಕನ ಹಗೆಗಳು.
ನಮ್ಮ ಇಂದ್ರಿಯಗಳಲ್ಲಿ ಎರಡು ವಿಷಯಗಳು ನಮ್ಮ ಶತ್ರುಗಳಾಗಿ ಕೆಲಸ ಮಾಡುತ್ತವೆ. ಅವುಗಳೆಂದರೆ ರಾಗ(ಇಷ್ಟ ಪಡುವುದು, Attachment); ಹಾಗು ಬೇಕು ಎನ್ನುವ ಬಯಕೆ(ಕಾಮ, Desire). ಇಷ್ಟಪಡುವುದು-ರಾಗ, ಅದರಿಂದ ಕಾಮ.  ಇಷ್ಟ ಆಗದೆ- ದ್ವೇಷ, ಅದರಿಂದ ಕೋಪ. ಒಂದು ವಸ್ತುವನ್ನು ಬಯಸಿದೆವು, ಅದು ಸಿಗಲಿಲ್ಲ ಆಗ ಸಿಟ್ಟು. ಅದು ಇನ್ನೊಬ್ಬರಿಗೆ ಸಿಕ್ಕಿತು ಆಗ ದ್ವೇಷ, ಸಿಕ್ಕಿತು ಆದರೆ ಅದು ನಾವು ಅಂದುಕೊಂಡಂತೆ ಇಲ್ಲ ಆಗ ಕೋಪ.  

ಮೂಲಭೂತವಾಗಿ ಇರತಕ್ಕ ದೊಡ್ಡ ದೋಷ ಬಯಕೆ. ಯಾವುದನ್ನು ಹೆಚ್ಚು ಹೆಚ್ಚು ಬಯಸುತ್ತೇವೋ ಅದರಿಂದ ಹೆಚ್ಚು ಹೆಚ್ಚು ದುಃಖಕ್ಕೀಡಾಗುತ್ತೇವೆ. ಬಯಕೆಯನ್ನು ಸೀಮಿತಗೊಳಿಸದೆ ಮೇಲೆ ಬರಲು ಸಾಧ್ಯವಿಲ್ಲ. ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ರಾಗ-ದ್ವೇಷ; ಕಾಮ-ಕ್ರೋಧ ತುಂಬಿರುತ್ತದೆ. ಆದರೆ ನಾವು ಎಂದೂ ಈ ಬೇಕು ಬೇಡಗಳಿಗೆ, ರಾಗ ದ್ವೇಷಗಳಿಗೆ ವಶವಾಗಬಾರದು. ನನ್ನದು ಎನ್ನುವ ಅತಿ ಅನುರಾಗ (Possessiveness) ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ನನಗೆ ಬೇಕು, ಅದು ಇನ್ನೊಬ್ಬರಿಗೆ ಸಿಗಬಾರದು ಎನ್ನುವುದು ಪ್ರತೀ ಇಂದ್ರಿಯದಲ್ಲಿ ತುಂಬಿದೆ. ಇದು ನಮ್ಮ ಪ್ರವೃತ್ತಿಯ ಹಿಂದಿರುವ ಅಹಂಕಾರ(Ego). ಕೃಷ್ಣ ಹೇಳುತ್ತಾನೆ: "ಎಂದೂ ಈ ಬೇಕು ಬೇಡಗಳ ದಾಸನಾಗಬೇಡ, ಅವು ನಿನ್ನ ಸಾಧನೆಯ ದಾರಿಗೆ ಅಡ್ಡಗೋಡೆ. ಅವು ನಿನ್ನ ನಿಜ ಶತ್ರುಗಳು" ಎಂದು.

ನಾವು  ಈ ಶತ್ರುಗಳಿಗೆ ಬಲಿಯಾಗದೆ, ನಮ್ಮ ಇಂದ್ರಿಯಗಳನ್ನು ನಾವೇ ವಿಶ್ಲೇಷಿಸಬೇಕು. ನನ್ನ ಇಂದ್ರಿಯ ಏನನ್ನು ಬಯಸುತ್ತಿದೆ, ಏಕೆ ಬಯಸುತ್ತಿದೆ, ಅದರ ಹಿಂದಿರುವ ಸ್ವಾರ್ಥ-ದ್ವೇಷವೇನು, ಇದು ನನ್ನನ್ನು ದಾರಿತಪ್ಪಿಸುವ ಬಯಕೆಯೋ ಅಥವಾ ಮೇಲಕ್ಕೆ ತರುವ ಬಯಕೆಯೋ? ಹೀಗೆ ವಿಚಾರ ಮಾಡಿ ನಮ್ಮ ಬಯಕೆಗಳ ಶುದ್ಧೀಕರಣ ಮಾಡಿಕೊಳ್ಳಬೇಕು. ವೇದದಲ್ಲಿ ಹೇಳುವಂತೆ  'ಹಿಟ್ಟನ್ನು ಸಾರಣಿಗೆಯಿಂದ ಬೇರ್ಪಡಿಸುವಂತೆ ನಾವು ನಮ್ಮ ಮನಸ್ಸೆಂಬ ಸಾರಣಿಗೆಯಿಂದ ನಮ್ಮ ಬಯಕೆಗಳ ಶುದ್ಧೀಕರಣ ಮಾಡಿಕೊಳ್ಳಬೇಕು. ಆಗ ಅಲ್ಲಿ ಸ್ನೇಹದ ಬೆಸುಗೆ ಇರುತ್ತದೆ. ಅಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ'.
ಇಲ್ಲಿ ಕೃಷ್ಣ  ಅರ್ಜುನನಿಗೆ ಯುದ್ಧ ಮಾಡುವಾಗ ಕೂಡಾ ರಾಗ-ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ, ಕೇವಲ ನ್ಯಾಯಾನ್ಯಾಯದ ಹೋರಾಟ ಎನ್ನುವ ನಿರ್ಲಿಪ್ತತೆಯಿಂದ ಹೋರಾಡು ಎನ್ನುತ್ತಿದ್ದಾನೆ! ಅಂದರೆ ದುರ್ಯೋಧನ ಸತ್ತಾಗ ಸಂತೋಷ ಬೇಡ ಸ್ವಂತ ಮಗ ಸತ್ತಾಗ ದುಃಖ ಬೇಡ ಎನ್ನುವ ಕಿವಿಮಾತಿದು! ಅಧ್ಯಾಯ - 03 : ಶ್ಲೋಕ  35

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ॥೩೫॥

ಶ್ರೇಯಾನ್ ಸ್ವ ಧರ್ಮಃ ವಿಗುಣಃ ಪರಧರ್ಮಾತ್ ಸು ಅನುಷ್ಠಿತಾತ್ 
ಸ್ವಧರ್ಮೇ ನಿಧನಮ್  ಶ್ರೇಯಃ ಪರಧರ್ಮಃ ಭಯ ಆವಹಃ-- 

ತನ್ನ ಸ್ವಭಾವಕ್ಕೆ ಪರಕೀಯವಾದ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ,ಅರೆಬರೆಯಾಗಿಯಾದರೂ ಸಹಜ ಧರ್ಮವನ್ನು ಆಚರಿಸುವುದು ಮಿಗಿಲು. 

ಸ್ವಭಾವ ಸಹಜ ಧರ್ಮದಲ್ಲಿ ಸಾವಾದರೂ ಮೇಲು. ಪರಕೀಯ ಧರ್ಮ ಅದಕ್ಕಿಂತ ಭಯಂಕರ.
ಹಿಂದೆ ಹೇಳಿದಂತೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿರುತ್ತದೆ ಹಾಗು ಅದನ್ನು ಬದಲಿಸಲು ಬರುವುದಿಲ್ಲ. ಜೀವ ಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ, ಅದು ಸ್ವಧರ್ಮ. ಇದು ಸಹಜ ಕ್ರಿಯೆ.  

ನಮ್ಮ ಸಹಜ ಸ್ವಭಾವ ಯಾವುದೋ ಅದನ್ನು ನಾವು ಮಾಡಬೇಕೇ ವಿನಃ ಅನ್ಯವನ್ನಲ್ಲ. ಈ ಕಾರಣಕ್ಕಾಗಿ ತಂದೆ-ತಾಯಿ ತಮ್ಮ ಅಭಿರುಚಿಯನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ನಿಜ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾಗಿ ಅವರ ಭವಿಷ್ಯವನ್ನು ರೂಪಿಸಬೇಕು. ಇಲ್ಲದಿದ್ದರೆ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ.  ಮಕ್ಕಳ ಪ್ರತಿಭೆ ಅವರ ಸಹಜವಾದ ಸ್ವಭಾವದಲ್ಲಿದೆ.  ಪ್ರತಿಯೊಬ್ಬನೂ ತನ್ನ ಜೀವ ಸ್ವಭಾವಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಇನ್ಯಾರದ್ದೋ  ಧರ್ಮವನ್ನು ಅನುಸರಿಸಿ ಅಲ್ಲ.  ಇಲ್ಲಿ ಕೃಷ್ಣ ಹೇಳುತ್ತಾನೆ "ನಿನ್ನ ಸ್ವಧರ್ಮ ಆಚರಣೆಯಲ್ಲಿ ನ್ಯೂನತೆ ಇದ್ದರೂ, ಅದು ಪರಕೀಯ ಧರ್ಮವನ್ನು ಆಚರಿಸುವುದಕ್ಕಿಂತ ಶ್ರೇಷ್ಠ" ಎಂದು. ಪರ ಧರ್ಮವನ್ನು ಎಷ್ಟು ಪರಿಪೂರ್ಣವಾಗಿ ಆಚರಿಸಿದರೂ ಅದರಿಂದ ಒಳಿತಿಲ್ಲ, ಅದು ಅಸಹ್ಯ ಅಥವಾ ಭಯಂಕರ.

ಇಲ್ಲಿ  ಯುದ್ಧ ಮಾಡುವುದು ಅರ್ಜುನನ ಸ್ವಭಾವ ಧರ್ಮ. ಅದನ್ನು ಬಿಟ್ಟು ಆತ ತಪಸ್ಸು ಮಾಡುವುದಕ್ಕೆ ಕಾಡಿಗೆ ಹೋಗುವುದು ಆತನ ಸ್ವಧರ್ಮಕ್ಕೆ ವಿರುದ್ಧ. ಆದುದರಿಂದ ಸ್ವಧರ್ಮ ಪಾಲನೆ ಮಾಡು, ರಾಗ ದ್ವೇಷವನ್ನು ಬಿಟ್ಟು ಹೋರಾಡು ಎನ್ನುತ್ತಿದ್ದಾನೆ ಕೃಷ್ಣ.


ಅಧ್ಯಾಯ - 03 : ಶ್ಲೋಕ  37

ಭಗವಾನುವಾಚ

ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ।

ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ॥೩೭॥

ಭಗವಾನುವಾಚ-ಭಗವಂತ ಹೇಳಿದನು: 
ಕಾಮಃ  ಏಷಃ  ಕ್ರೋಧಃ ಏಷಃ ರಜಃ ಗುಣ ಸಮುದ್ಭವಃ 
ಮಹಾ ಅಶನಃ  ಮಹಾಪಾಪ್ಮಾ ವಿದ್ಧಿ ಏನಮ್ ಇಹ ವೈರಿಣಮ್--

ಪಾಪವನ್ನು ಪ್ರೇರೇಪಿಸುವ ಶಕ್ತಿ ಕಾಮ (ಕಾಮದ ಅಭಿಮಾನಿಯಾದ ಕಾಲನೇಮಿ) ಇದರದೇ ರೂಪಾಂತರ ಸಿಟ್ಟು. ರಜೋಗುಣದಿಂದ ಇದರ ಹುಟ್ಟು. ಇದು ತಿಂದಷ್ಟೂ ತಣಿಯದ ಹೊಟ್ಟೆಬಾಕ. ಮಹಾಪಾತಕಗಳ ತವರು. ಇದನ್ನು ಈ ಸಾಧನಾ ಪಥದಲ್ಲಿ ಹಗೆಯೆಂದು ತಿಳಿ.

ಎಲ್ಲವುದಕ್ಕೂ ಮೂಲಕಾರಣ ನಮ್ಮೊಳಗಿರುವ ಬಯಕೆ. ಯಾವುದೋ ಒಂದು ಬಯಕೆ ನಮ್ಮನ್ನು ಕಾಡುತ್ತಿರುತ್ತದೆ, ಆ ಬಯಕೆಯನ್ನು ತಪ್ಪು ಮಾಡುವ ಮುಖೇನ ಈಡೇರಿಸಿಕೊಳ್ಳಬಹುದು ಎನ್ನುವ ಪ್ರೇರಣೆ (temptation) ನಮ್ಮಲ್ಲಿರುತ್ತದೆ. ಇದನ್ನು ಮಾಡಿಸುವವನು ಕಾಮದ ಅಭಿಮಾನಿಯಾದ ದುಷ್ಟ ಶಕ್ತಿ 'ಕಾಲನೇಮಿ';ನಮ್ಮೊಳಗೆ ಕಾಲನೇಮಿ ಬಂದು ಕೂತರೆ ನಮಗರಿವಿಲ್ಲದಂತೆ ನಾವು ತಪ್ಪು ಮಾಡುತ್ತೇವೆ. ಮೂಲಭೂತವಾಗಿ ನೋಡಿದರೆ ಮನುಷ್ಯ ತಪ್ಪು ಮಾಡುವುದಕ್ಕೆ ಎರಡು ಸಂಗತಿಗಳು ಕಾರಣ. ಒಂದು ಅಪೇಕ್ಷೆಗಳು ಹಾಗು ಅಪೇಕ್ಷೆ ಈಡೇರದೆ ಇದ್ದಾಗ ಕೋಪ. ಸಿಟ್ಟಿನ ಬರದಲ್ಲಿ ಮನುಷ್ಯ ಎಷ್ಟು ತಪ್ಪು ಮಾಡುತ್ತಾನೆ ಎಂದು ಹೇಳುವುದೂ ಕಷ್ಟ. ತಪ್ಪು ಮಾಡಿ ಕೊನೆಗೆ ಪಶ್ಚಾತಾಪ ಪಡುತ್ತೇವೆ. ಈ ಕ್ರೋಧ ಎನ್ನುವುದಕ್ಕೆ ಮೂಲ ಕಾಮ. ಕಾಮವಿಲ್ಲದೆ ಕ್ರೋಧವಿಲ್ಲ. ಎಲ್ಲಾ ಕ್ರೋಧದ ಹಿಂದೆ ಅರ್ಥಹೀನ ಕಾಮವಿರುತ್ತದೆ.

ಮನುಷ್ಯನಲ್ಲಿರುವ ರಜೋಗುಣ ರಾಗ-ದ್ವೇಷವನ್ನು ಬೆಳೆಸುತ್ತದೆ. ಅದಕ್ಕೆ ಎಷ್ಟು ಆಹಾರ ಹಾಕಿದರೂ ಹೊಟ್ಟೆ ತುಂಬುವುದಿಲ್ಲ! ಇದಕ್ಕೆ ಉತ್ತಮ ಉದಾಹರಣೆ ಎಂದರೆ ಒಬ್ಬ ಕೆಲಸಕ್ಕಾಗಿ ಅಲೆದಾಡುತ್ತಿರುತ್ತಾನೆ, ಆಗ ಆತನಿಗೆ ಹೊಟ್ಟೆ ಪಾಡಿಗೆ ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಅಭಿಪ್ರಾಯವಿರುತ್ತದೆ. ಒಮ್ಮೆ ಕೆಲಸ ಸಿಕ್ಕಿತು, ಆತನ ಬಯಕೆ ಹೆಚ್ಚು ಸಂಬಳ ಪಡೆಯುವತ್ತ ಹರಿಯುತ್ತದೆ. ಹೆಚ್ಚು ಸಿಕ್ಕಿದಾಗ ಮತ್ತಷ್ಟರಾಸೆ, ಹೀಗೆ ಇದು ಬೆಳೆದುಕೊಂಡು ಹೋಗುತ್ತದೆ. ಎಂದೂ ತೃಪ್ತಿ ಇರುವುದೇ ಇಲ್ಲ.

ಹೀಗೆ ನಾವು ತಪ್ಪು ಮಾಡುವುದನ್ನು ಒಗ್ಗಿಸಿಕೊಂಡರೆ ಅದು 'ಮಹಾಶನ' ವಾಗುತ್ತದೆ. ಅದಕ್ಕೆ ಎಷ್ಟು ಔತಣ ಹಾಕಿದರೂ ಮತ್ತೆ ಬೇಕು ಅನ್ನುತ್ತದೆ. ಎಲ್ಲಿಯವರೆಗೆ ಅಂದರೆ ಅದು ನಮ್ಮಿಂದ ಮಾಡಬಾರದ ಕೆಲಸವನ್ನು ಮಾಡಿಸುತ್ತದೆ. ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಛಲಕ್ಕೆ ಬಿದ್ದವ ಬ್ರಹ್ಮಹತ್ಯಗೂ ಹೇಸುವುದಿಲ್ಲ ಎನ್ನುತ್ತದೆ ಶಾಸ್ತ್ರ! ಆದ್ದರಿಂದ ನಮ್ಮ ಮೊದಲ ಶತ್ರು ರಾಗ-ದ್ವೇಷ. ಅದರ ಬಗ್ಗೆ ಎಚ್ಚರವಹಿಸಬೇಕು. ಅದು ನಿನ್ನೊಳಗಿದ್ದು ನಿನ್ನನ್ನು ಆಳದಿರಲಿ. ಇದನ್ನೇ ಕುರಾನಿನಲ್ಲಿ ಹೀಗೆ ಹೇಳಿದ್ದಾರೆ "Drive them out from where you have been driven out". ರಾಗ ದ್ವೇಷಗಳು ನಮ್ಮ ವ್ಯಕ್ತಿತ್ವವನ್ನು ಸೂರೆ ಮಾಡಿ ತಾವು ಆಳುತ್ತಿದ್ದಾವಲ್ಲ, ಅವನ್ನು ಹೊರಗೋಡಿಸು, ನೀನು ನೀನಾಗಿ ಬದುಕು.   


ಅಧ್ಯಾಯ - 03 : ಶ್ಲೋಕ  38

ಧೂಮೇನಾsವ್ರಿಯತೇ ವಹ್ನಿರ್ಯಥಾssದರ್ಶೋ ಮಲೇನ ಚ ।

ಯಥೋಲ್ಬೇನಾsವೃತೋ ಗರ್ಭಸ್ತಥಾ ತೇನೇದಮಾವೃತಮ್ ॥೩೮॥

ಧೂಮೇನ ಅವ್ರಿಯತೇ ವಹ್ನಿಃ ಯಥಾ ಆದರ್ಶಃ  ಮಲೇನ ಚ           
ಯಥಾ ಉಲ್ಬೇನ ಆವೃತಃ ಗರ್ಭಃ ತಥಾ ತೇನ ಇದಮ್ ಆವೃತಮ್ -

ಹೊಗೆಯಿಂದ ಬೆಂಕಿ ಕವಿದಂತೆ (ಭಗವಂತ), ಕೊಳೆಯಿಂದ ಕನ್ನಡಿ ಕವಿದಂತೆ(ಮನಸ್ಸು), ಗರ್ಭ ಕೋಶದಿಂದ ಭ್ರೂಣ ಕವಿದಂತೆ(ಜೀವ), ಕಾಮದಿಂದ ಈ ಎಲ್ಲಾ ಕವಿದುಕೊಂಡಿದೆ.[ಹೊಗೆ ಬೆಂಕಿಯನ್ನು ಕವಿದಂತೆ ಕಾಮ ಸಜ್ಜನರನ್ನು ಕವಿಯುತ್ತದೆ. ಕೊಳೆ ಕನ್ನಡಿಯನ್ನು ಕೆಡಿಸಿದಂತೆ ಮಧ್ಯಮರನ್ನು. 

ಗರ್ಭಕೋಶ ಭ್ರೂಣವನ್ನು ಮುಚ್ಚಿದಂತೆ ದುರ್ಜನರನ್ನು]
ರಾಗ  ದ್ವೇಷಗಳು ಹೇಗೆ ನಮ್ಮ ಕಣ್ಣನ್ನು ಕಟ್ಟುತ್ತವೆ ಎನ್ನುವುದಕ್ಕೆ ಒಂದು ಸುಂದರ ವಿವರಣೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ. ಎಲ್ಲವನ್ನು ಬೆಳಗುತ್ತಿರುವ ಬೆಂಕಿ, ಅದು ತಾನೂ ಬೆಳಗುತ್ತದೆ ಹಾಗು ಎಲ್ಲವನ್ನೂ ಬೆಳಗಿಸುತ್ತದೆ. ಈ ಬೆಂಕಿಗೆ ಹೊಗೆ ತುಂಬಿದಾಗ ಅದು ಕಾಣುವುದಿಲ್ಲ ಹಾಗು ಬೆಳಗುವುದಿಲ್ಲ. ಭಗವಂತ ಬೆಂಕಿಯಂತೆ. ನಮ್ಮ ರಜೋ ಗುಣ ಹೊಗೆಯಂತೆ. ನಮಗೂ ಭಗವಂತನಿಗು ನಡುವೆ  ರಜೋಗುಣದ ಪರದೆ ಬೆಂಕಿಯನ್ನು ಸುತ್ತಿದ ಹೊಗೆಯಂತೆ. 

ಇದು ಸಾತ್ವಿಕ ಮನುಷ್ಯನಿಗೆ ಕೃಷ್ಣ ಕೊಟ್ಟ ದೃಷ್ಟಾಂತ. ಇನ್ನು ರಾಜಸರಿಗೆ ಕೃಷ್ಣ ಕೊಡುವ ದೃಷ್ಟಾಂತ ಮಸಿ ಬಳಿದ ಕನ್ನಡಿ. ಮನಸ್ಸು ಎನ್ನುವ ಕನ್ನಡಿಗೆ ರಜೋಗುಣ ಎನ್ನುವ ಕೊಳೆ ಬಳಿದಂತೆ ಎನ್ನುತ್ತಾನೆ ಕೃಷ್ಣ. ತಾಮಸರಿಗೆ ಕೃಷ್ಣನ ದೃಷ್ಟಾಂತ ಗರ್ಭಚೀಲದಲ್ಲಿರುವ ಭ್ರೂಣ. ಎಲ್ಲವೂ ಕತ್ತಲು. ಕಣ್ಣು ತೆರೆದರೂ ಕಾಣದು, ಜೀವಜಾತವೆನ್ನುವ ಮರಿಯನ್ನು ರಜೋಗುಣ ಎನ್ನುವ ಮೊಟ್ಟೆಯಲ್ಲಿಟ್ಟಂತೆ.

ಹೀಗೆ ಬೆಂಕಿಗೆ ಹೊಗೆಯಂತೆ-ಭಗವಂತನಿಗೆ ಆವರಣ ಈ ರಜೋ ಗುಣ; ಕನ್ನಡಿಗೆ ಹಚ್ಚಿದ ಮಸಿಯಂತೆ- ಅಂತಃಕಾರಣಕ್ಕೆ ಆವರಣ ಈ ರಜೋಗುಣ. ಅಂತಃಕರಣ ಕೆಲಸ ಮಾಡದೆ ಇದ್ದಾಗ ಭಗವಂತ ಕಾಣುವುದಿಲ್ಲ ಆಗ- ಜೀವಕ್ಕೆ 'ಭ್ರೂಣದಂತೆ' ಎಲ್ಲವೂ ಕತ್ತಲು. ಎಲ್ಲವೂ ಇದ್ದೂ ಏನೂ ಉಪಯೋಗವಿಲ್ಲದೆ ವ್ಯರ್ಥವಾಗುತ್ತದೆ.ಅಧ್ಯಾಯ - 03 : ಶ್ಲೋಕ  39

ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ ।

ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ  ॥೩೯॥

ಆವೃತಮ್  ಜ್ಞಾನಮ್ ಏತೇನ ಜ್ಞಾನಿನಃ ನಿತ್ಯವೈರಿಣಾ 
ಕಾಮ ರೂಪೇಣ ಕೌಂತೇಯ ದುಷ್ಪೂರೇಣ ಅನಲೇನ ಚ-

ಓ ಕೌಂತೇಯ, ಬೆಂಕಿಯಂತೆ ಕಬಳಿಸಿದಷ್ಟೂ ತೃಪ್ತಿಯಿಲ್ಲದೆ, ಕೊನೆಯಿಲ್ಲದ ಈ ಕಾಮವೆಂಬುದು ಸಾಧಕನ ಚಿರಶತ್ರು. ಇದು ಬಲ್ಲವರ ತಿಳಿವನ್ನೂ ಕವಿದು ಮಂಕಾಗಿಸುತ್ತದೆ.

ಈ ರಜೋಗುಣದ ಪರದೆ- ಜ್ಞಾನ ಬಂದವನಿಗೆ ಇದ್ದ ಜ್ಞಾನ ಉಪಯೋಗವಾಗದಂತೆ, ಜ್ಞಾನವಿಲ್ಲದವನಿಗೆ  ಜ್ಞಾನ ಬರದಂತೆ-ತಡೆಗೋಡೆಯಾಗಿ ನಿಲ್ಲುತ್ತದೆ. ರಾಗ-ದ್ವೇಷ ನಮ್ಮ ಕಡು ವೈರಿ. ಅದು ಎಷ್ಟು ಭಯಂಕರ ಎಂದರೆ ಅದನ್ನು 'ಬಯಕೆಯ ಬೆಂಕಿ' ಎನ್ನಬಹುದು. ಅದಕ್ಕೆ ಎಷ್ಟು ಬಡಿಸಿದರೂ ಅದು ಸಾಕು ಎನ್ನದು. ಕುಂತಿಯಂತಹ ಮಹಾ ತಾಯಿಯ ಮಗನಾದ ನೀನು ಈ ಕಾಮ(ಬಯಕೆ, Attachment) ಎನ್ನುವ ಜ್ಞಾನ ವಿರೋಧಿ ಶತ್ರುವನ್ನು ತಿಳಿ ಎನ್ನುತ್ತಾನೆ ಕೃಷ್ಣ.
ಇಲ್ಲಿ ನಮಗೆ ನಮ್ಮ ನಿಜ ವೈರಿ ನಮ್ಮ ಕಾಮ ಅಥವಾ  ಬಯಕೆ, ಅಥವಾ ರಾಗ-ದ್ವೇಷ ಎಂದು ತಿಳಿಯಿತು. ಹಾಗಿದ್ದರೆ ಈ ವೈರಿಯ ನೆಲೆ ಯಾವುದು? ಇದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.


ಅಧ್ಯಾಯ - 03 : ಶ್ಲೋಕ  40

ಇಂದ್ರಿಯಾಣಿ  ಮನೋ ಬುದ್ಧಿರಸ್ಯಾಧಿಷ್ಠಾನಮುಚ್ಯತೇ ।

ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಮ್ ॥೪೦॥

ಇಂದ್ರಿಯಾಣಿ  ಮನಃ ಬುದ್ಧಿಃ ಅಸ್ಯ ಅಧಿಷ್ಠಾನಮ್  ಉಚ್ಯತೇ     
ಎತೈಃ ವಿಮೋಹಯತಿ ಏಷಃ  ಜ್ಞಾನಮ್ ಆವೃತ್ಯ ದೇಹಿನಮ್-

ಇಂದ್ರಿಯಗಳು, ಮನಸ್ಸು, ಬುದ್ಧಿ ಈ ಕಾಮದ ನೆಲೆದಾಣಗಳು. ಇವುಗಳ ಮೂಲಕ ಇದು ತಿಳಿವನ್ನು ಕವಿದು ಸಾಧಕನನ್ನು ಕಂಗೆಡಿಸುತ್ತದೆ.  

ನಮ್ಮ ಬಯಕೆಗಳ ಸರಮಾಲೆ ಮೊದಲು ಬಂದು ಕೂರುವುದು ನಮ್ಮ ಇಂದ್ರಿಯದಲ್ಲಿ. ಕಣ್ಣಿಗೆ ನೋಡುವ, ಕಿವಿಗೆ ಕೇಳುವ, ಮೂಗಿಗೆ ಮೂಸುವ, ಮೈಗೆ ಮುಟ್ಟುವ-ಹೀಗೆ ಒಂದೊಂದು ಬಯಕೆ ಒಂದೊಂದು ರೂಪದಲ್ಲಿ ಒಂದೊಂದು ಇಂದ್ರಿಯದಲ್ಲಿ ಬಂದು ಕೂರುತ್ತದೆ. ಅಲ್ಲಿ ನಾವು ಅದನ್ನು ನಿಗ್ರಹಿಸದೇ ಇದ್ದರೆ  ಅದು ನಮ್ಮ ಮನಸ್ಸನ್ನು ಆಕ್ರಮಿಸುತ್ತದೆ.  ಅಲ್ಲೂ ನಾವು ಸಡಿಲಗೊಳಿಸಿದರೆ ಅದು ಮುಂದೆ ನಮ್ಮ ಬುದ್ಧಿಯನ್ನು ಆಕ್ರಮಿಸಿಬಿಡುತ್ತದೆ.  ಹೀಗೆ ಅಂಗಳದ(ಇಂದ್ರಿಯ) ಈ ಶತ್ರುವನ್ನು ಮೊಗಸಾಲೆ(ಮನಸ್ಸು)ಗೆ ಕರೆದು, ನಂತರ ನಮ್ಮ ನಡು ಮನೆಯಲ್ಲಿ(ಬುದ್ಧಿ) ಕುಳ್ಳಿರಿಸಿದಂತೆ.  

ಒಮ್ಮೆ ಈ ಶತ್ರು ನಮ್ಮ ಬುದ್ಧಿಯನ್ನು ಆಕ್ರಮಿಸಿದರೆ ಮುಂದೆ ಅದನ್ನು ತೊಡೆದು ಹಾಕುವುದು ತುಂಬಾ ಕಷ್ಟ. ಈ ಸ್ಥಿತಿಯಲ್ಲಿ ಬಯಕೆ ಎನ್ನುವುದು ಸಿದ್ಧಾಂತವಾಗಿ ನಮ್ಮೊಳಗಿದ್ದು ನಮ್ಮನ್ನೇ ಆಳುವುದಕ್ಕೆ ಆರಂಭಿಸುತ್ತದೆ. ಇದರಿಂದ ಕಾಮನೆ ಎನ್ನುವುದು ನಮ್ಮ ಜೀವನ ಧರ್ಮವಾಗುತ್ತದೆ. ಉದಾಹರಣೆಗೆ ಒಂದು ಸಂಗತಿ ನಮ್ಮ ಕಿವಿ ಮೇಲೆ ಬೀಳುತ್ತದೆ. ನಾವು ಆ ವಿಷಯದಿಂದ ನಮಗೇನು ಉಪಯೋಗ ಆ ಬಗ್ಗೆ ಗಮನ ಏಕೆ ಹರಿಸಬೇಕು ಎಂದು ಯೋಚಿಸುವುದಿಲ್ಲ, ಅದನ್ನು ಬಿಟ್ಟು ಕೇಳಿದ ವಿಷಯವನ್ನು ನೋಡಲು ಹಂಬಲಿಸುತ್ತೇವೆ. ನೋಡಿದ ಮೇಲೆ ಮುಟ್ಟಬೇಕು(ತಿನ್ನಬೇಕು ಮೂಸಬೇಕು ಇತ್ಯಾದಿ) ಎನ್ನುವ ಆಸೆ!  ಹೀಗೆ ನಾವು ನಮ್ಮೆಲ್ಲಾ ಇಂದ್ರಿಯದಲ್ಲಿ ಈ ಕಾಮನೆ ಎನ್ನುವ  ವೈರಿಗೆ ಪ್ರೋತ್ಸಾಹ ಕೊಡುತ್ತೇವೆ. ಆಗ ಅದು ನಿಧಾನವಾಗಿ  ನಮ್ಮ ಮನಸ್ಸನ್ನು ಆಕ್ರಮಿಸುತ್ತದೆ. 

ಮನಸ್ಸು ನಿರಂತರವಾಗಿ ಆ ವಿಷಯದ ಬಗ್ಗೆ ಯೋಚಿಸಲಾರಂಭಿಸುತ್ತದೆ. ಮನಸ್ಸು 'ಅದು ನನ್ನದಾಗಬೇಕು,ನನ್ನದೇ ಆಗಬೇಕು (Possessiveness)', ಎಂದು ಯೋಚಿಸುತ್ತಿದೆ ಎಂದರೆ ಈ ವೈರಿ ಮನಸ್ಸನ್ನು ಆಕ್ರಮಿಸಿದೆ ಎಂದರ್ಥ. ಇಲ್ಲಿಂದ ಮುಂದೆ ಬುದ್ಧಿ; 'ಅದನ್ನು ಬಿಟ್ಟು ನಾನಿರಲಾರೆ, ಏನೇ ಆಗಲಿ ನಾನು ಅದನ್ನು ಪಡೆಯಲೇ ಬೇಕು' ಇತ್ಯಾದಿ ಯೋಚನೆಗಳು, ಇದು ಕಾಮನೆ ನಮ್ಮ ಬುದ್ಧಿಯನ್ನು ಆಕ್ರಮಿಸುವ ಸೂಚನೆ. ಇದು ಸರ್ವನಾಶದ ಮುನ್ಸೂಚನೆ. ಹೀಗೆ ಜ್ಞಾನಕ್ಕೆ ವಿಭ್ರಮೆಯಾಗಿರುವ ಈ ಮೂರು ಜಾಗದಲ್ಲಿ ಕೂತು ಜ್ಞಾನಕ್ಕೆ ಪರದೆಯಾಗಿ ನಿಲ್ಲುತ್ತದೆ ಈ ನಮ್ಮ ವೈರಿ.

ಇಲ್ಲಿ 'ದೇಹಿನಮ್' ಎನ್ನುವ ಪದ ಬಳಕೆಯಾಗಿದೆ- ನಮ್ಮ ದೇಹ ಎನ್ನುವುದು ಜ್ಞಾನದ ಮೂಲಕ ನಮ್ಮನ್ನು  ಎತ್ತರಕ್ಕೆ ಕೊಂಡೊಯ್ಯುವ ಸಾಧನ, ಆದರೆ ಕಾಮನೆ ಎನ್ನುವ ವೈರಿಯ ಸಂಗ ಮಾಡಿದಾಗ ಅದು ನಮ್ಮನ್ನು ಅಧಃಪಾತಕ್ಕೆ ತಳ್ಳುವ ಸಾಧನವಾಗುತ್ತದೆ. ಇದು ಈ ಪದದ ಹಿಂದಿರುವ ಭಾವಾರ್ಥ.
ಹೀಗೆ ನಮ್ಮ ವೈರಿ ಯಾರು, ಆತ ಇರುವ ಸ್ಥಾನ ಯಾವುದು ಹಾಗು ಆತ ಹೇಗೆ ನಮ್ಮನ್ನು ಆಕ್ರಮಿಸುತ್ತಾನೆ ಎನ್ನುವ ವಿವರಣೆಯನ್ನು ಕೊಟ್ಟ ಕೃಷ್ಣ, ಈ ವೈರಿಯನ್ನು ಗೆದೆಯುವ ಪರಿಯನ್ನು ಮುಂದೆ ವಿವರಿಸುತ್ತಾನೆ.ಅಧ್ಯಾಯ - 03 : ಶ್ಲೋಕ  41

ತಸ್ಮಾತ್ ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ ।

ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನನಾಶನಮ್ ॥೪೧॥

ತಸ್ಮಾತ್  ತ್ವಮ್  ಇಂದ್ರಿಯಾಣಿ ಆದೌ ನಿಯಮ್ಯ ಭರತ ಋಷಭ      
ಪಾಪ್ಮಾನಮ್  ಪ್ರಜಹಿ ಹಿ ಏನಮ್ ಜ್ಞಾನ ವಿಜ್ಞಾನ ನಾಶನಮ್-

ಅದರಿಂದ , ಓ  ಭರತವಂಶದ ವೀರ, ಮೊದಲು ನೀನು ಇಂದ್ರಿಯಗಳನ್ನು ಹದ್ದಿನಲ್ಲಿರಿಸಿಕೊಂಡು, ಅರಿವನ್ನೂ ಆಳವಾದ ಚಿಂತನ ಶಕ್ತಿಯನ್ನೂ ಹಾಳು ಗೆಡವಬಲ್ಲ ಈ ಪಾಪಿಯನ್ನು ಒದ್ದೋಡಿಸು.

ಇಂತಹ ಮಹಾ ವೈರಿಯನ್ನು ನಾವು ಮೊದಲ ಹಂತದಲ್ಲೇ ನಿಯಂತ್ರಿಸಬೇಕು. ಈ ಶತ್ರುವಿನ ಮೊದಲ ಪ್ರವೇಶ ದ್ವಾರವಾದ ಇಂದ್ರಿಯದಲ್ಲೇ ಅದರ ನಿಯಂತ್ರಣ ಮಾಡಬೇಕು. ನಮ್ಮ ಜ್ಞಾನ(ಶ್ರವಣ)ವನ್ನು, ವಿಜ್ಞಾನ(ಮನನ-ನಿಧಿಧ್ಯಾಸನ)ವನ್ನು ಹಾಳುಗೆಡವಿ, ನಮ್ಮ ಚಿಂತನಾ ಶಕ್ತಿಯನ್ನು ನಾಶಮಾಡಬಲ್ಲ ಈ ಮಹಾ ಪಾಪಿಯನ್ನು ಓದ್ದೊಡಿಸು ಎನ್ನುತ್ತಾನೆ ಕೃಷ್ಣ.  ಆದರೆ ಹೇಗೆ? ಇದಕ್ಕೆ ಯಾರು ಸಹಾಯ ಮಾಡುತ್ತಾರೆ ? ಮುಂದೆ ಕೇಳಿ!


ಅಧ್ಯಾಯ - 03 : ಶ್ಲೋಕ  42

ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ     ।

ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ     ॥೪೨॥

ಇಂದ್ರಿಯಾಣಿ ಪರಾಣಿ ಆಹುಃ ಇಂದ್ರಿಯೇಭ್ಯಃ ಪರಮ್  ಮನಃ      
ಮನಸಃ ತು ಪರಾ ಬುದ್ಧಿಃ ಯಃ ಬುದ್ಧೇಃ  ಪರತಃ ತು ಸಃ-

ಇಂದ್ರಿಯಗಳು[ಶರೀರಕ್ಕಿಂತ) ಹಿರಿದಾದ ತಾಣಗಳು. (ಇಂದ್ರಿಯಾಭಿಮಾನಿಗಳಾದ ಇಂದ್ರಾದಿಗಳು  ಹಿರಿಯ ದೇವತೆಗಳು].ಇಂದ್ರಿಯಗಳಿಗಿಂತ ಮನಸ್ಸು ಹಿರಿಯ ತಾಣ.[ಇಂದ್ರಿಯಾಭಿಮಾನಿ ದೇವತೆಗಳಿಗಿಂತ ಮನೋಭಿಮಾನಿ ರುದ್ರ ಹಿರಿಯ ದೇವತೆ]. 

ಮನಸ್ಸಿಗಿಂತ ಬುದ್ಧಿ ಹಿರಿಯ ತಾಣ(ಮನೋಭಿಮಾನಿಗಿಂತ ಬುದ್ಧಿಮಾನಿನಿ ಸರಸ್ವತಿ ಹಿರಿಯ ದೇವತೆ)  ಬುದ್ಧಿಗಿಂತಲು ಆಚೆಗಿರುವಂಥದು ಆ ಪರತತ್ವ(ಬುದ್ಧಿ ಮಾನಿನಿಗಿಂತಲೂ ಬುದ್ಧಿಗೋಚರನಾಗದ ಭಗವಂತ ಹಿರಿಯತತ್ವ).
ಹೇಗೆ ದುಷ್ಟ ಶಕ್ತಿಗಳಿವೆಯೋ ಹಾಗೇ ನಮ್ಮ ಒಳಿತನ್ನು ಬಯಸುವ ದೇವತಾಶಕ್ತಿಗಳು ನಮ್ಮ ರಕ್ಷಣೆಗೆ ನಿಂತಿರುತ್ತಾರೆ. ಪ್ರತಿಯೊಂದು ಇಂದ್ರಿಯಗಳಿಗೂ ಒಬ್ಬ ದೇವತೆ ಅಭಿಮಾನಿ. ನಮ್ಮ ಇಂದ್ರಿಯದ ಅಭಿಮಾನಿದೇವತೆ ಇಂದ್ರ. ಮನಸ್ಸಿನ ಅಭಿಮಾನಿ  ಶಿವ-ಪಾರ್ವತಿಯರು, ಬುದ್ಧಿಯ ಅಭಿಮಾನಿ ಸರಸ್ವತಿ. ಬುದ್ಧಿಯಿಂದಾಚೆಗಿರುವುದು ಆತ್ಮ-ಅದುವೇ ಆ ಭಗವಂತನ ಸ್ಥಾನ.
ನಾವು ನಮ್ಮ ಇಂದ್ರಿಯ ಮನಸ್ಸು ಬುದ್ಧಿಯನ್ನು ನಿಯಂತ್ರಿಸುವ ದೇವತಾ ಶಕ್ತಿಗೆ ಶರಣಾಗಬೇಕು. 

ಆಗ ಆ ದೇವತಾ ಶಕ್ತಿಗಳ ಸಹಾಯದಿಂದ ನಾವು ಜ್ಞಾನವನ್ನು ಪಡೆದು ಭಗವಂತನನ್ನು ಕಾಣಬಹುದು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಕಣ್ಣಿಗೆ  ಸೂರ್ಯ, ಕಿವಿಗೆ ಚಂದ್ರ, ಬಾಯಿಗೆ ಅಗ್ನಿ, ನಾಲಿಗೆ-ವರುಣ, ಮೂಗು-ಅಶ್ವಿದೇವತೆಗಳು ,ಕೈ-ಇಂದ್ರ(ಈತ ಸರ್ವೇಂದ್ರಿಯದ  ಒಡೆಯ ಕೂಡಾ ಹೌದು), ಕಾಲು-ಇಂದ್ರ ಪುತ್ರ ಉಪೇಂದ್ರ, ಯಮ-ಮಲಮೂತ್ರ ವಿಸರ್ಜನಾಂಗದ ಮತ್ತು ದಕ್ಷ ಸಂತಾನಕ್ಕೆ ಸಂಭಂದಪಟ್ಟ ಅಂಗದ ದೇವತೆ. ಹೀಗೆ ಪ್ರತಿಯೊಂದು ದೇವತೆಗಳೂ ನಮಗೆ ನಮ್ಮ ಶತ್ರುವಿನಿಂದ ಪಾರಾಗಲು ಸಹಾಯ ಮಾಡುತ್ತಾರೆ. ಹೀಗೆ ದೇವತೆಗಳನ್ನು ಪ್ರಾರ್ಥಿಸಿ ಅವರ ಸಹಾಯ ಪಡೆದು ದುಷ್ಟ ಶಕ್ತಿಯಿಂದ ದೂರ ಸರಿದು ಎಲ್ಲಕ್ಕೂ ಮಿಗಿಲಾದ ಆ ಪರತತ್ವವನ್ನು ಸೇರಬೇಕು.

ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾsತ್ಮಾನಮಾತ್ಮನಾ।

ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಮ್ ॥೪೩॥

 ಏವಮ್ ಬುದ್ಧೇಃ ಪರಮ್  ಬುದ್ಧ್ವಾ ಸಂಸ್ತಭ್ಯ ಆತ್ಮನಮ್  ಆತ್ಮಾನಾ 
ಜಹಿ ಶತ್ರುಮ್  ಮಹಾ ಬಾಹೋ ಕಾಮರೂಪಮ್  ದುರಾಸದಮ್-

ಓ ಮಹಾವೀರ, ಹೀಗೆ ಬುದ್ಧಿಗೂ ನಿಲುಕದ ಆ ಪರತತ್ವವನ್ನು ತಿಳಿದು, ವಿವೇಕದಿಂದ ಬಗೆಯನ್ನು ಬಿಗಿಹಿಡಿದು, ಸಾಮಾನ್ಯರಿಗೆ ಬಗ್ಗದ ಕಾಮವೆಂಬ ಹಗೆಯನ್ನು ಒದ್ದೋಡಿಸು.

ಹೀಗೆ ಇಂದ್ರಿಯ-ಮನಸ್ಸು-ಬುದ್ಧಿಗೆ  ನಿಲುಕದ ಆ ಪರತತ್ವವನ್ನು ತಿಳಿದು ಮನಸ್ಸೆಂಬ ಚಂಚಲವಾದ ಕುದುರೆಗೆ ಬುದ್ಧಿಯೆಂಬ ಲಗಾಮನ್ನು ಕಟ್ಟಿ, ಆ ಕಡಿವಾಣವನ್ನು ಭಗವಂತನ ಕೈಯಲ್ಲಿ ಕೊಟ್ಟು ಸರ್ವ ದೇವತೆಗಳ ಸಹಾಯದಿಂದ ಕಾಲನೇಮಿ ಎನ್ನುವ ರಾಕ್ಷಸನನ್ನು ಹಂತ ಹಂತವಾಗಿ ಗೆದ್ದು, ಭಗವಂತನನ್ನು ಸೇರು ಎನ್ನುತ್ತಾನೆ ಕೃಷ್ಣ.

ಇಲ್ಲಿ ಹೇಳಿದ ವಿವರಣೆಯನ್ನು ನಮಗೆ ಕೆಟ್ಟ ಬಯಕೆ ಹುಟ್ಟಿದಾಗ ನೆನಪಿಸಿಕೊಂಡರೆ ಕಾಲನೇಮಿ ಎನ್ನುವ ರಾಕ್ಷಸ ನಮ್ಮೊಳಗೆ ನುಸುಳದಂತೆ ತಡೆಯಬಹುದು.ಏಕೆಂದರೆ ಎಲ್ಲಾ ಬಯಕೆಗಳೂ ಕೆಟ್ಟದ್ದಲ್ಲ. ಭಗವಂತನನ್ನು ಸೇರಬೇಕು ಎನ್ನುವ ಬಯಕೆ ಬೇಕು. ಆದ್ದರಿಂದ ನಮ್ಮ ಬುದ್ಧಿಯನ್ನು ಭಗವಂತನ ಕೈಗೊಪ್ಪಿಸಿ, ದುಷ್ಟ ಕಾಮನೆಗಳ ವಿರುದ್ಧ ದೇವತೆಗಳ  ಸಹಾಯದಿಂದ ಹೋರಾಡಿ ಮೋಕ್ಷವನ್ನು ಪಡೆಯಬಹುದು. ಇಲ್ಲಿ ಒಂದು ಎಚ್ಚರ ಅಗತ್ಯ, ಒಂದೇ ಸಲ ಈ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ಜಯ ಗಳಿಸುತ್ತೇನೆ ಎಂದರೆ ಅದು ಅಸಾಧ್ಯ.  ಇದನ್ನು ಹಂತ ಹಂತವಾಗಿ ಗಳಿಸಬೇಕು. ಸಾಧನೆಯ ವಿವಿಧ ಮೆಟ್ಟಲಿನಲ್ಲಿ  ವಿವಿಧ ದೇವತೆಗಳು ನಮಗೆ ಸಹಾಯ ಮಾಡುತ್ತಾರೆ.    
ಇತಿ ತೃತೀಯೋಧ್ಯಾಯಃ 
ಮೂರನೇ ಅಧ್ಯಾಯ  ಮುಗಿಯಿತು 
*******
Previous
Next Post »