ಶ್ರೀಮದ್ಭಗವದ್ಗೀತಾ 》ಅಧ್ಯಾಯ :- 09 》ರಾಜ-ವಿದ್ಯಾ-ಗುಹ್ಯಾ ಯೋಗ.

ಅಧ್ಯಾಯ ಒಂಭತ್ತು

ಜ್ಞಾನ ಎಂದರೆ ಭಗವಂತನ ಅರಿವು(Spiritual wisdom).  ಎಲ್ಲವನ್ನು ತಿಳಿದ ಭಗವಂತನೆಡೆಗೆ ನಮ್ಮ ಮನಸ್ಸು ಹರಿಯುವುದು ಜ್ಞಾನ. ಭಗವಂತ ಸರ್ವೋತ್ತಮ, ಭಗವಂತ ಸರ್ವಗತ, ಭಗವಂತ ಸರ್ವಜ್ಞ, ಇತ್ಯಾದಿಯಾಗಿ ತಿಳಿಯುವುದು ಜ್ಞಾನ. ಆ ನಂತರ ಅದರ ವಿವರಗಳ ಅರಿವು ವಿಜ್ಞಾನ(ವಿಶಿಷ್ಟವಾದ ಜ್ಞಾನ).  ಭಗವಂತ ಗುಣಪೂರ್ಣ ಎನ್ನುವುದು ಜ್ಞಾನ. ಭಗವಂತ ಜ್ಞಾನಪೂರ್ಣ, ಭಗವಂತ ಆನಂದಪೂರ್ಣ, ಭಗವಂತ ಸೌಂದರ್ಯಪೂರ್ಣ, ಭಗವಂತ ದಯಾಪೂರ್ಣ, ಹೀಗೆ ಒಂದೊಂದು ಗುಣಗಳ ಪೂರ್ಣತೆಯನ್ನು ವಿವರವಾಗಿ ಅನುಸಂಧಾನ ಮಾಡುವುದು ವಿಜ್ಞಾನ(exclusive wisdom of God). ನಾವು ದೇವರನ್ನು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. 

ಆದರೆ ಪ್ರತಿಯೊಂದು ಜೀವನಿಗೆ ಅವನವನಿಗೆ ವಿಶಿಷ್ಟವಾದಂತಹ ಅರಿವಿನ ಮಟ್ಟವಿದೆ. ಎಲ್ಲರೂ ಒಂದೇ ರೀತಿ ತಿಳಿದುಕೊಳ್ಳಲು ಬರುವುದಿಲ್ಲ. ಅವರವರ ಮಟ್ಟಕ್ಕೆ ತಕ್ಕಂತೆ ಭಗವಂತನನ್ನು ಅರಿಯುವುದು ವಿಜ್ಞಾನ(individual exclusive wisdom of God ). ಹೀಗೆ ಭಗವಂತ ಸರ್ವೋತ್ತಮ ಎಂದು ತಿಳಿದುಕೊಳ್ಳುವುದು ಜ್ಞಾನವಾದರೆ, ಆ ಸರ್ವೋತ್ತಮ ತತ್ವವನ್ನು ವಿವರವಾಗಿ ಅದರ ಬೇರೆ ಬೇರೆ ಮುಖಗಳಿಂದ ಅವರವರ ಯೋಗ್ಯತೆಗೆ ತಕ್ಕಂತೆ  ಅನುಸಂಧಾನ ಮಾಡುವುದು ವಿಜ್ಞಾನ. ಹೀಗೆ ಅನುಸಂಧಾನ ಮಾಡುವುದರಿಂದ ಭಗವಂತ ಎಲ್ಲವುದಕ್ಕಿಂತ ವಿಲಕ್ಷಣ ಎನ್ನುವ ಸತ್ಯದ ಸಾಕ್ಷಾತ್ಕಾರವಾಗುತ್ತದೆ.

ಕೃಷ್ಣ ಏಳನೇ ಅಧ್ಯಾಯದಲ್ಲಿ ಅರ್ಜುನನಿಗೆ ಹೇಳಿದ್ದ- “ತಿಳಿಯಬೇಕಾದ ನನ್ನ ಹಿರಿಮೆಯನ್ನು ಅದರ ಬಿತ್ತರದ ಜತೆಗೆ ನಿನಗೆ ನಾನು ಪೂರ್ತಿಯಾಗಿ ಹೇಳುತ್ತೇನೆ. ಇದನ್ನುತಿಳಿದರೆ ಮತ್ತೆ  ವಿಷಯದಲ್ಲಿ ಬೇರೆ ತಿಳಿಯುವಂಥದೇನೂ ಉಳಿದಿರುವುದಿಲ್ಲ” ಎಂದು (ಅ-೭ , ಶ್ಲೋ-೨). ಮತ್ತೆ ಇಲ್ಲಿ ಈ ಅಧ್ಯಾಯದಲ್ಲಿ ಪುನಃ ಜ್ಞಾನ ವಿಜ್ಞಾನದ ಬಗ್ಗೆ ವಿವರಿಸುತ್ತಾನೆ!  ಏಕೆ ಹೀಗೆ? ಹಿಂದೆ ಹೇಳಿದ್ದನ್ನು ಕೃಷ್ಣ ಮರೆತು ಪುನಃ ವಿವರಿಸುತ್ತಿದ್ದಾನೋ?! ಅಲ್ಲ, ಅದಕ್ಕೆ ಕಾರಣಗಳಿವೆ. ಒಮ್ಮೆ ಹೇಳಿದ್ದನ್ನು ಮತ್ತೆ ಏಕೆ ಹೇಳುತ್ತಿದ್ದಾನೆ ಎಂದರೆ ‘ಬೇರೆಬೇರೆ ಆಯಾಮದಲ್ಲಿ ಹೇಳುವುದಕ್ಕೊಸ್ಕರ’. ಆದ್ದರಿಂದ ಇಲ್ಲಿ ಹೇಳುವುದು ಹಿಂದೆ ಹೇಳಿದುದರ ವಿವರಣೆ ಮತ್ತು ಸೃಷ್ಟೀಕರಣ. ಸಂಕ್ಷಿಪ್ತವಾಗಿ ಅಲ್ಲಿ ವಿವರಿಸಿದ್ದನ್ನು ಇಲ್ಲಿ ಕೆಲವು ಹೊಸ ಅರ್ಥಗಳಿಂದ ಇನ್ನೊಂದು ರೀತಿಯಲ್ಲಿ ಕೃಷ್ಣ ವಿವರಿಸುತ್ತಾನೆ. ಭಗವಂತನ ತತ್ವ ಚಿಂತನೆಯನ್ನು ಒಂದು ಬಾರಿ ಮಾಡಿದರೆ ನಮ್ಮ ತಲೆಯೊಳಗೆ ಹೋಗುವುದಿಲ್ಲ! ನಿರಂತರ ಚಿಂತನೆ ಮಾಡುತ್ತಾ ಇದ್ದರೆ ಎಲ್ಲೋ ಸ್ವಲ್ಪ ಒಳಗೆ ಹೋಗುತ್ತದೆ! ಕೇಳಿದಾಗ, ಓದಿದಾಗ ಎಲ್ಲವೂ ತಿಳಿಯಿತು ಅನಿಸುತ್ತದೆ. ಆದರೆ ಸ್ವಲ್ಪ ಹೊತ್ತಿನ ನಂತರ ಒಂದೂ ನೆನಪಾಗುವುದಿಲ್ಲ! ಅದಕ್ಕೋಸ್ಕರ ಆವೃತ್ತಿ ಮಾಡುತ್ತಾ ಬೇರೆಬೇರೆ ಆಯಾಮದಲ್ಲಿ ಚಿಂತನೆ ಮಾಡಬೇಕು. ಈ ಅಧ್ಯಾಯದಲ್ಲಿ ಕೃಷ್ಣ ಹಿಂದೆ ಹೇಳಿದ್ದ  ಜ್ಞಾನ-ವಿಜ್ಞಾನವನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಬೇರೆ ಬೇರೆ ಮುಖಗಳಿಂದ ಬೇರೆ ಬೇರೆ ಆಯಾಮದಲ್ಲಿ ವಿವರಿಸುತ್ತಾನೆ.

ಒಬ್ಬ ಸೈನಿಕನಾಗಿ ಯುದ್ಧರಂಗದಲ್ಲಿ ನಿಂತಿರುವ ವ್ಯಕ್ತಿಯ ಮಾನಸಿಕ ಸ್ಥಿತಿ ಅಧ್ಯಾತ್ಮ ಚಿಂತನೆಯಲ್ಲಿ ಬಹಳ ಹತ್ತಿರವಾಗಿರುತ್ತದೆ. ಈ ಕಾರಣದಿಂದ ಯುದ್ಧರಂಗದಲ್ಲಿ ಕೃಷ್ಣ ಅಧ್ಯಾತ್ಮವನ್ನು ಬಿಚ್ಚುತ್ತಾನೆ. ಅರ್ಜುನ ಬಹಳ ದೊಡ್ಡ ಜ್ಞಾನಿ. ಸದಾ ಭಗವದ್ ಚಿಂತನೆಯಲ್ಲಿ ಇರತಕ್ಕಂತಹ ದೇವಾಂಶಸಂಭೂತ. ಅದರ ಜೊತೆಗೆ ಆತನನ್ನು ಯುದ್ಧರಂಗದಲ್ಲಿ ನಿಲ್ಲಿಸಿ ಮಾನಸಿಕವಾಗಿ ಹುಟ್ಟು ಸಾವುಗಳ ಈ ಲೀಲೆಯ ಆಚೆಗೆ ಅವನನ್ನು ಕರೆದೊಯ್ದು ಮಾನಸಿಕವಾಗಿ ಅಣಿಗೊಳಿಸಿ ಕೃಷ್ಣ ವೇದಾಂತವನ್ನು ಹೇಳುತ್ತಾನೆ. ಇಂತಹ ಕ್ಷಣದಲ್ಲಿ ಭಗವಂತನ ಬಗೆಗೆ ಹೇಳಿದರೆ ಬಹುಬೇಗ ಹೃದಯ ತುಂಬಿಕೊಳ್ಳುತ್ತದೆ. ನಾವಾದರೂ ಅಷ್ಟೇ, ನಮ್ಮ ದೈನಂದಿನ ಜೀವನದಲ್ಲಿ ಸರಿ-ತಪ್ಪು, ಧರ್ಮಾಧರ್ಮಗಳ ಸಂಘರ್ಷ ನಡೆಯುತ್ತಲೇ ಇರುತ್ತದೆ. ಅಂತಹ ಯುದ್ಧದ ಸಂದರ್ಭದಲ್ಲೇ ನಮಗೆ ಅಧ್ಯಾತ್ಮ ಅರ್ಥವಾಗುವುದು.

ಅಧ್ಯಾಯ - 09: ಶ್ಲೋಕ  01

ಭಗವಾನುವಾಚ ।

ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ।

ಜ್ಞಾನಂ ವಿಜ್ಞಾನಸಹಿತಂ ಯಜ್ ಜ್ಞಾತ್ವಾ ಮೋಕ್ಷ್ಯಸೇSಶುಭಾತ್ ॥೧॥

ಭಗವಾನುವಾಚ-ಭಗವಂತ ಹೇಳಿದನು:
ಇದಮ್  ತು ತೇ ಗುಹ್ಯತಮಮ್  ಪ್ರವಕ್ಷ್ಯಾಮಿ ಅನಸೂಯವೇ
ಜ್ಞಾನಮ್  ವಿಜ್ಞಾನ ಸಹಿತಮ್  ಯತ್  ಜ್ಞಾತ್ವಾ ಮೋಕ್ಷ್ಯಸೇ ಶುಭಾತ್

ಇದಂತೂ ತುಂಬಾ ಬಚ್ಚಿಡಬೇಕಾದದ್ದು. ಕಿಚ್ಚು ಪಡದೆ ಮೆಚ್ಚುವವನೆಂದು ಹೇಳುತ್ತಿದ್ದೇನೆ: ತಿಳಿವು ಮತ್ತು ತಿಳಿವಿನ ಬಿತ್ತರ. ಇದನ್ನು ತಿಳಿದು ಕುತ್ತಿನಿಂದ ಪಾರಾಗುವೆ.

ಕೃಷ್ಣ ಹೇಳುತ್ತಾನೆ “ಭಗವದ್ ತತ್ವದ ಬಗೆಗೆ ನಿನಗೆ ಪುನಃ ಹೇಳುತ್ತೇನೆ; ಅತ್ಯಂತ ರಹಸ್ಯವಾದ ಉಪಾಸನೆ ಸಂಗತಿಯನ್ನು ನಿನ್ನ ಮುಂದೆ ಬಿಚ್ಚಿಡುತ್ತಿದ್ದೇನೆ” ಎಂದು. ಇದು ಎಲ್ಲರ ಮುಂದೆ ತೆರೆದಿಡುವ ಸಂಗತಿಯಲ್ಲ. ಯಾರಿಗೆ ಭಗವಂತನ ಉಪಾಸನೆಯಲ್ಲಿ ಅನನ್ಯವಾದ ಕಾತರ ಇದೆ, ಭಗವಂತನಲ್ಲದೆ ನನಗೆ ಇನ್ನೇನೂ ಬೇಡ ಎನ್ನುವ ಮನಸ್ಸುಳ್ಳವರ ಮತ್ತು  ಭಗವಂತನಿಗೋಸ್ಕರ ಹಾತೊರೆಯುವವರ ಮುಂದೆ ಹೇಳಬೇಕಾದ ಮಾತು. ಅತ್ಯಂತ ರಹಸ್ಯವಾದ ಗೊಪನೆ ಮಾಡಬೇಕಾದ ಸಂಗತಿ. “ಅದನ್ನು ನಾನು ನಿನಗೆ ಹೇಳುತ್ತಿದ್ದೇನೆ” ಎನ್ನುತ್ತಾನೆ ಕೃಷ್ಣ.  ಇಲ್ಲಿ ಅರ್ಜುನನಿಗೆ ಈ ವಿಚಾರವನ್ನು ತಿಳಿಯುವ ಜಿಜ್ಞಾಸೆ ಮತ್ತು ಅರ್ಹತೆ ಇದ್ದುದರಿಂದ ಕೃಷ್ಣ ಆತನಿಗೆ ಆ ಗೋಪ್ಯವಾದ ವಿಚಾರವನ್ನು ಹೇಳುತ್ತಾನೆ. ಕೇಳುವ ಅರ್ಹತೆ ಮತ್ತು ಬಯಕೆ ಇದ್ದವರಿಗೆ ಮಾತ್ರ ಕೊಡಬೇಕಾದ ವಿದ್ಯೆ ಇದು. ಇದನ್ನು ಎಲ್ಲರಿಗೂ ಕೊಡಲಾಗುವುದಿಲ್ಲ.

ಇಲ್ಲಿ ಕೃಷ್ಣ “ಅನಸೂಯವೇ” ಎನ್ನುವ ಪದವನ್ನು ಬಳಸಿದ್ದಾನೆ. ಮನುಷ್ಯನಿಗೆ ವೇದಾಂತ ಓದುವ ಮತ್ತು ವೇದಾಂತ ಓದಿದ ನಂತರವೂ ಇರಬೇಕಾದ ಗುಣಮಟ್ಟ(Quality) ‘ಅಹಂಕಾರ ರಹಿತತೆ’(egolessness). ಅಹಂಕಾರ ಇದ್ದು ವೇದಾಂತ ಓದಿದರೆ ಏನೂ ಉಪಯೋಗವಿಲ್ಲ. ವೇದಾಂತ ಓದುವ ಮೊದಲು ಅಹಂ  ಇರಬಾರದು. “ಭಗವಂತನ ಮುಂದೆ ನಾನು ಏನೂ ಅಲ್ಲ” ಎಂದು ತಿಳಿದಿದ್ದರೆ ಅಹಂಕಾರ ಬರುವುದಿಲ್ಲ. ವೇದಾಂತ ಓದಿ ‘ನಾನು ದೊಡ್ಡ ಜ್ಞಾನಿ’ ಅನ್ನುವ ಅಹಂಕಾರ ಬಂದರೆ- ಓದಿ ದೇವರನ್ನು ಕಳೆದುಕೊಂಡಂತಾಗುತ್ತದೆ. ಆದರೆ ಇಂದು ನಾವು ಒಂದಲ್ಲ ಒಂದು ಅಹಂಕಾರಕ್ಕೆ ಒಳಗಾಗಿರುತ್ತೇವೆ. ಜ್ಞಾನದ ಅಹಂಕಾರ, ಅಧಿಕಾರದ ಅಹಂಕಾರ, ಸಂಪತ್ತಿನ ಅಹಂಕಾರ, ಸೌಂದರ್ಯದ ಅಹಂಕಾರ, ಯೌವನದ ಅಹಂಕಾರ, ಇಂತಹ ಅನೇಕ ಸಂಗತಿಗಳು ನಮ್ಮನ್ನು ಕಾಡುತ್ತಿರುತ್ತವೆ. ಅದನ್ನು ಕಳಚಿಕೊಂಡಾಗ ಮಾತ್ರ ವೇದಾಂತವನ್ನು ಅರಿಯಲು ನಾವು ಅರ್ಹತೆ ಪಡೆದಂತಾಗುತ್ತದೆ. ಎಲ್ಲಿಯ ತನಕ ನಮ್ಮಲ್ಲಿ ಅಹಂಕಾರ ತುಂಬಿದೆಯೋ ಅಲ್ಲಿಯ ತನಕ ವೇದಾಂತ ನಮಗೆ ಉಪಯೋಗಕ್ಕೆ ಬರುವುದಿಲ್ಲ.

ಎಲ್ಲಾ ಅಹಂಕಾರಕ್ಕಿಂತ ಜ್ಞಾನದ ಅಹಂಕಾರ ಬಹಳ ಅಪಾಯಕಾರಿ. ಇತರ ಅಹಂಕಾರಕ್ಕೆ ಕೊನೆ ಇದೆ, ಆದರೆ ಜ್ಞಾನದ ಅಹಂಕಾರಕ್ಕೆ ಕೊನೆ ಇಲ್ಲ.  ‘ನಾನು ಪಂಡಿತ’ ಎನ್ನುವ ಅಹಂಕಾರ ತಲೆಗೆ ಬಂದರೆ ಅಂತವನು ಮಹಾ ದರಿದ್ರ ಎನಿಸುತ್ತಾನೆ!  ಅಹಂಕಾರದ ಮರಿ ‘ಅಸೂಯೆ’. ಈ ಅಸೂಯೆ ನಮ್ಮನ್ನು ಸುಡುವ ಬೆಂಕಿ. ಅದಕ್ಕಾಗಿ ಅದನ್ನು ಕನ್ನಡದಲ್ಲಿ ‘ಹೊಟ್ಟೆಕಿಚ್ಚು’ ಎನ್ನುತ್ತಾರೆ. ಇದು ನಮ್ಮ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಅಂತವರಿಗೆ ವೇದಾಂತ ಹೇಳಿ  ಉಪಯೋಗವಿಲ್ಲ. “ ನಿನಗೆ ಅಸೂಯೆ ಇಲ್ಲ,  ಅದಕ್ಕಾಗಿ ನಿನಗೆ ಈ ಗೋಪ್ಯವನ್ನು ಹೇಳುತ್ತಿದ್ದೇನೆ” ಎನ್ನುತ್ತಾನೆ ಕೃಷ್ಣ.

ಯುದ್ಧ ರಂಗದಲ್ಲಿ ನಿಂತ ವ್ಯಕ್ತಿಗೆ ಅಸೂಯೆ ಇಲ್ಲದೆ ಇರುವುದು ಅತ್ಯಂತ ಮಹಾನ್ ಸಂಗತಿ. ದ್ವೇಷ-ಅಸೂಯೆ ಅಹಂಕಾರಗಳು ಯುದ್ಧರಂಗದಲ್ಲಿ ಸದಾ ತುಂಬಿ ತುಳುಕುತ್ತಿರುತ್ತವೆ. ಇದನ್ನು ಗೆದ್ದು ನಿಂತವ  ಅತ್ಯಂತ ಶ್ರೇಷ್ಠ. ಇಲ್ಲಿ ಕೃಷ್ಣ ಹೇಳುತ್ತಾನೆ “ಇದನ್ನು ತಿಳಿದುಕೊಂಡರೆ ನಿನ್ನ ಮನಸ್ಸು ಪರಿಶುದ್ಧವಾಗಿ ಭಗವಂತನನ್ನು ಬಯಸುವುದು ಸಾಧ್ಯವಾಗುತ್ತದೆ” ಎಂದು. ಜ್ಞಾನ ಬಂದರೆ ನಮ್ಮೊಳಗಿನ ಕೊಳೆ ತೊಳೆದು ಹೋಗಿ ಮನಸ್ಸು ನಿರ್ಮಲವಾಗುತ್ತದೆ. ನಮ್ಮ ಅತಿ ದೊಡ್ಡ ಸಂಪತ್ತು ಎಂದರೆ ಪ್ರಸನ್ನವಾದ ಸ್ವಚ್ಛ ಮನಸ್ಸು. ಅಂತಹ ಮನಸ್ಸಿನಲ್ಲಿ ಭಗವಂತ ಕಾಣಿಸಿಕೊಳ್ಳುತ್ತಾನೆ. ಅಹಂಕಾರ-ಅಸೂಯೆ ಇಲ್ಲದ ಮನಸ್ಸು ‘ವಸುದೇವ’ ಹಾಗು ಇಂತಹ ಮನಸ್ಸಿಗೆ ಕಾಣುವ ಭಗವಂತ ‘ವಾಸುದೇವ’. ಶುದ್ಧ ಮನಸ್ಸಿನಿಂದ ಜ್ಞಾನ, ಇದರಿಂದ ಅಭಯ ಮತ್ತು ಆನಂದ. ಆನಂದಮಯವಾದ ಈ ಸ್ಥಿತಿಯಿಂದ ಪಾಂಚಬೌತಿಕ ಶರೀರದಿಂದ ಮತ್ತು ಸಂಸಾರದಿಂದ   ಬಿಡುಗಡೆ ಮತ್ತು ಮೋಕ್ಷ.

ನಮಗೆ ಪಾಂಚಬೌತಿಕವಾದ ಮೂರು ಆವರಣವಿದೆ. ಈ ಮೂರು ಆವರಣದ ಒಳಗೆ ಜ್ಞಾನಾನಂದಮಯವಾದ ಆತ್ಮಸ್ವರೂಪವಿದೆ. ಲಿಂಗಶರೀರ, ಸೂಕ್ಷ್ಮಶರೀರ ಮತ್ತು ಸ್ಥೂಲಶರೀರ ಇವು ಆತ್ಮವನ್ನು ಆವರಿಸಿರುವ ಆವರಣಗಳು. ನಾವು ಈ ಮೂರೂ ಅಂಗಿಗಳನ್ನು ಕಳಚಿ, ಅಶುಭದಿಂದ ಬಿಡುಗಡೆಹೊಂದಿ,    ಸ್ವರೂಪಭೂತವಾದ ನೈಜ ಸ್ಥಿತಿಯಲ್ಲಿ ಭಗವಂತನ ಮುಂದೆ ನಿಲ್ಲುವುದನ್ನು ಇಲ್ಲಿ ಕೃಷ್ಣ  ‘ಮೋಕ್ಷ್ಯಸೇSಶುಭಾತ್’ ಎಂದು ಸಂಕ್ಷಿಪ್ತವಾಗಿ ಹೇಳಿದ್ದಾನೆ.[ನಾವು ದೇವಸ್ಥಾನದಲ್ಲಿ ದೇವರ ಮುಂದೆ ಅಂಗಿ ತೆಗೆಯುವುದು ‘ಭಗವಂತನ ಮುಂದೆ ಹಾಕಿಕೊಂಡಿರುವ ಎಲ್ಲ ಆವರಣವನ್ನು ತೆಗೆದು ದೇವರ ಮುಂದೆ ಬತ್ತಲಾಗುವುದು’ ಎನ್ನುವ ಮುಖ್ಯಾರ್ಥವನ್ನು ಹೊಂದಿದೆ. ನಾವು ಭಗವಂತನ ಮುಂದೆ ಹಾಕಿಕೊಂಡ ಎಲ್ಲ ಮುಚ್ಚಳಗಳನ್ನು ಬಿಚ್ಚಿ ಆತನ ಮುಂದೆ ತೆರೆದುಕೊಳ್ಳಬೇಕು. ಆಗ ಆತ ನಮಗೆ ತೆರೆದುಕೊಳ್ಳುತ್ತಾನೆ.] ಹೀಗೆ ಯಾವ ರೀತಿ ಪಾಂಚಬೌತಿಕ ಶರೀರದಿಂದ ಬಿಡುಗಡೆ ಮತ್ತು ಮೋಕ್ಷ  ಎನ್ನುವ  ಜ್ಞಾನ-ವಿಜ್ಞಾನವನ್ನು ಭಗವಂತ  ಸಮಷ್ಠಿಯಾಗಿ ಅರ್ಜುನನಿಗೆ ಹೇಳುವುದನ್ನುಮುಂದಿನ ಶ್ಲೋಕಗಳಲ್ಲಿ ನೋಡೋಣ.

ಅಧ್ಯಾಯ - 09: ಶ್ಲೋಕ  02

ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ ।

ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥೨॥

ರಾಜವಿದ್ಯಾ ರಾಜಗುಹ್ಯಮ್ ಪವಿತ್ರಮ್ ಇದಮ್  ಉತ್ತಮಮ್          
ಪ್ರತ್ಯಕ್ಷ ವಗಮಮ್  ಧರ್ಮ್ಯಮ್  ಸು ಸುಖಮ್  ಕರ್ತುಮ್ ಅವ್ಯಯಮ್-

ಇದು ಅರಿವುಗಳ ಅರಸ. ಗುಟ್ಟುಗಳ ಗುಟ್ಟು. ಮಿಗಿಲಾದ ಅಪ್ಪಟ. ಕಣ್ಣಲ್ಲಿ ಕೂತವನ ಕಾಣಿಸುವ ದಾರಿ. ಎಲ್ಲ ಹೊತ್ತವನನ್ನು ಕುರಿತದ್ದು. ಆಚರಿಸಲು ಆರಾಮ. ಅಳಿವಿಲ್ಲದ್ದು.

ಕೃಷ್ಣ ತಾನು ಮುಂದೆ ಉಪದೇಶ ಮಾಡಲಿರುವ ಅಧ್ಯಾತ್ಮ ವಿಜ್ಞಾನದ ಬಗ್ಗೆ ಹೇಳುತ್ತಾ ಹೇಳುತ್ತಾನೆ “ಇದು ವಿದ್ಯೆಗಳಲ್ಲೆಲ್ಲಾ ಪ್ರಧಾನ ವಿದ್ಯೆ; ಅತ್ಯಂತ ರಹಸ್ಯವಾದ ಮತ್ತು ಪರಮ ಪವಿತ್ರವಾದ ವಿದ್ಯೆ” ಎಂದು. ಪ್ರತ್ಯಕ್ಷ ಶಬ್ದವಾಚ್ಯನಾದ(ಇಂದ್ರಿಯ ನಿಯಾಮಕಗಿರುವ ) ಭಗವಂತನನ್ನು ಪ್ರತ್ಯಕ್ಷ ತೋರಿಸುವಂತಹ, ಜಗತ್ತಿನ ಧಾರಕ ಶಕ್ತಿಯಾದ ಭಗವಂತನನ್ನು ನೇರ ವಿಷಯೀಕರಿಸುವ ಸಾಕ್ಷಾತ್ ಭಗವದ್ ವಿಷಯಕವಾದ ವಿದ್ಯೆ. ಈ ವಿದ್ಯೆಯನ್ನು ತಿಳಿದು ಭಗವಂತನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಏಕೆಂದರೆ ಭಗವಂತನಿಗೆ ಅತ್ಯಂತ ಪ್ರೀಯವಾದದ್ದು ಜ್ಞಾನ. ಭಗವಂತ ಜ್ಞಾನಕ್ಕೆ ಒಲಿದಷ್ಟು ಸುಲಭವಾಗಿ ಯಾವ ದಾರಿಗೂ ಒಲಿಯುವುದಿಲ್ಲ. “ಇದು ಅಳಿವಿರದ ದಾರಿ”     ಎನ್ನುತ್ತಾನೆ ಕೃಷ್ಣ.  ಆದ್ದರಿಂದ ಜ್ಞಾನದ ದಾರಿ ಎಂದೂ ವ್ಯರ್ಥವಲ್ಲ.

ಅಧ್ಯಾಯ - 09: ಶ್ಲೋಕ  03

ಅಶ್ರದ್ದಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ  ।

ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ      ॥೩॥

ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯ ಸ್ಯ ಪರಂತಪ           
ಅಪ್ರಾಪ್ಯ ಮಾಮ್ ನಿವರ್ತಂತೇ ಮೃತ್ಯು ಸಂಸಾರ ವರ್ತ್ಮನಿ-

ಅರಿಗಳ ಉರಿಯೆ, ಈ ನಡೆಯ ಬಗೆಗೆ ನಂಬಿಕೆಯಿಡದ ಮಂದಿ ನನ್ನನ್ನು ಪಡೆಯದೆ ಸಾವಿನ ಸುಳಿಯಾದ ಬಾಳ ದಾರಿಯಲ್ಲಿ ಜಾರಿಬೀಳುತ್ತಾರೆ. 

ಹಿಂದೆ ಅಸೂಯೆ ಬಗ್ಗೆ ಹೇಳಿದ್ದ ಕೃಷ್ಣ ಇಲ್ಲಿ ಇನ್ನೊಂದು ಅತೀ ಮುಖ್ಯವಾದ  ಗುಣದ ಬಗ್ಗೆ ಹೇಳುತ್ತಾನೆ- ಅದೇ ‘ಶ್ರದ್ಧೆ’.  ಯಾರಿಗೆ ಶ್ರದ್ಧೆ ಇಲ್ಲ ಅವರಿಗೆ ಏನನ್ನು ಹೇಳಿಯೂ ಉಪಯೋಗವಿಲ್ಲ. ನಮಗೆ ಯಾವುದರ ಮೇಲೆ ಶ್ರದ್ಧೆ ಇಲ್ಲವೋ ಅದನ್ನು ನಮ್ಮ ಮನಸ್ಸು ಸ್ವೀಕರಿಸುವುದೇ ಇಲ್ಲ. ಒಂದು ವಿಷಯವನ್ನು ನಾವು ಗ್ರಹಣ ಮಾಡಬೇಕಾದರೆ ನಮಗೆ ಆ ವಿಷಯದಲ್ಲಿ ಶ್ರದ್ಧೆ ಇರಬೇಕು. “ನನಗೆ ಗೊತ್ತಿಲ್ಲದ ವಿಷಯಗಳು ಇರಲು ಸಾಧ್ಯ, ಏಕೆಂದರೆ ನನಗೆ ಗೊತ್ತಿಲ್ಲದೇ ಇರುವ ಬಹಳ ಸಂಗತಿಗಳಿವೆ” –ಎಂದು ತಿಳಿಯುವುದು  ಶ್ರದ್ಧೆಯ ಮೊದಲ ಮೆಟ್ಟಿಲು. (I must know that I do not know). ನಮ್ಮ ಅಜ್ಞಾನದ ಅರಿವು ನಮಗಿರಬೇಕು. ಆಗ ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಳ್ಳುವ ಶ್ರದ್ಧೆ ಬರುತ್ತದೆ. ಮೊದಲು ಗೊತ್ತಿಲ್ಲ ಅನ್ನುವುದರ ಬಗ್ಗೆ ನಮಗೆ ಗೊತ್ತಿರಬೇಕು; ಆಮೇಲೆ ನಮಗೆ ಗೊತ್ತಿಲ್ಲದೆ ಇರುವ ಇರುವ ವಿಷಯ ಸತ್ಯವಾಗಿರುವ ಸಾಧ್ಯತೆ ಇದೆ ಎನ್ನುವ ಸಾಧ್ಯತೆಯ ಅರಿವು ಬೇಕು; ಅದನ್ನು ತಿಳಿಯುವ ಶ್ರದ್ಧೆ ಬೇಕು. ಹೀಗೆ ತಿಳಿಯುತ್ತಾ ಗೊತ್ತಿಲ್ಲದ ವಸ್ತು ಇದೆ ಎನ್ನುವ ಸತ್ಯ ತಿಳಿಯುತ್ತದೆ.

ಜ್ಞಾನದ ದಾರಿಯಲ್ಲಿ ಸಾಗುವ ಸಾಧಕನಿಗೆ ಮೂಲಭೂತವಾಗಿ ನಂಬಿಕೆ ಬೇಕು. ನಂಬದವನ ಮುಂದೆ ಏನು ಹೇಳಿಯೂ ಪ್ರಯೋಜನವಿಲ್ಲ. ಇದನ್ನೇ ಇಲ್ಲಿ ಕೃಷ್ಣ ಹೇಳುತ್ತಾನೆ “ಯಾರಿಗೆ ಶ್ರದ್ಧೆ ಇಲ್ಲವೋ ಅಂತವರ ಪಾಲಿಗೆ ಸತ್ಯ ಇಲ್ಲ” ಎಂದು. ಜಗತ್ತಿನ ಧಾರಕನಾದ ಭಗವಂತನ ಬಗೆಗೆ ನಂಬಿಕೆ ಇಲ್ಲದವರು ಭಗವಂತನನ್ನು  ಸೇರುವುದಿಲ್ಲ. “ಅಂತವರು ಆತ್ಮ ನಾಶವಾದ ತಮಸ್ಸನ್ನು ಸೇರುತ್ತಾರೆ ಅಥವಾ ಸಂಸಾರದ ಸುಳಿಯಲ್ಲಿ ಸುತ್ತುತ್ತಿರುತ್ತಾರೆ” ಎನ್ನುತ್ತಾನೆ ಕೃಷ್ಣ. 
ಈ ಶ್ಲೋಕದಲ್ಲಿ ಪರಂತಪ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಇದರ ಮೇಲ್ನೋಟದ ಅರ್ಥ ಶತ್ರುಗಳನ್ನು ಸುಡುವ ಶೂರ ಎಂದು. ನಮ್ಮ ಜೀವನ ಯುದ್ಧದಲ್ಲಿ ನಮ್ಮ ಶತ್ರುಗಳೆಂದರೆ ನಮ್ಮೊಳಗೆ ಇರುವ ಅಜ್ಞಾನ, ಮೋಹ, ಕಾಮ, ಕ್ರೋಧ, ಇತ್ಯಾದಿಗಳು. ಪ್ರತಿಯೊಬ್ಬ ಸಾಧಕ ಕೂಡಾ ಪರತತ್ವದಲ್ಲಿ ಶ್ರದ್ಧೆಯನ್ನಿಟ್ಟು ಇಂತಹ ಶತ್ರುಗಳನ್ನು ಸುಡುವ ಬೆಂಕಿಯಾಗಬೇಕು, ಸುಟ್ಟು ಬೆಳಗುವ ಪರಂತಪನಾಗಬೇಕು.

ಮುಂದಿನ ಶ್ಲೋಕಗಳಲ್ಲಿ ಕೃಷ್ಣ ತಿಳಿಯಬೇಕಾದ ಜ್ಞಾನದ ಬಗ್ಗೆ ಉಪದೇಶ ಮಾಡುತ್ತಾನೆ.

ಅಧ್ಯಾಯ - 09: ಶ್ಲೋಕ  04

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।

ಮತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ ॥೪॥

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ 
ತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ 

ಈ ಎಲ್ಲ ಜಗತ್ತು ಮೈದೋರದ ನನ್ನಿಂದ ತುಂಬಿದೆ.ಇಲ್ಲಿ ಇರುವವೆಲ್ಲ ನನ್ನಲ್ಲಿ ನೆಲೆಸಿವೆ. ನಾನು ಅವುಗಳ ನೆರವಿನಲ್ಲಿಲ್ಲ.

ಕೃಷ್ಣ ಹೇಳುತ್ತಾನೆ “ನಾನು ಇಡೀ ಜಗತ್ತಿನಲ್ಲಿ ತುಂಬಿರುವ ಅವ್ಯಕ್ತಮೂರ್ತಿ” ಎಂದು. ಇಲ್ಲಿ ಬಳಸಿರುವ ಅವ್ಯಕ್ತಮೂರ್ತಿ ಎನ್ನುವ ಪದದಲ್ಲಿ ಅವ್ಯಕ್ತ ಮತ್ತು ಮೂರ್ತಿ ಎನ್ನುವುದು ಪರಸ್ಪರ ವಿರುದ್ಧ ಪದಗಳು. ಅವ್ಯಕ್ತ ಎಂದರೆ ಕಾಣದ್ದು, ಆಕಾರವಿಲ್ಲದ್ದು. ಮೂರ್ತಿ ಎಂದರೆ ಆಕೃತಿ ಮತ್ತು ರೂಪ. ಭಗವಂತ ಆಕಾಶದಂತೆ ಎಲ್ಲೆಡೆ ವ್ಯಾಪಿಸಿರುವ ಅವ್ಯಕ್ತ  ಆದರೆ ಆತ ಜ್ಞಾನಾನಂದಮಯನಾಗಿ ಎಲ್ಲರೊಳಗೆ ತುಂಬಿರುವ ಮೂರ್ತಿ. ಒಂದೊಂದು ವಸ್ತುವಿನಲ್ಲೂ ಒಂದೊಂದು ರೂಪದಲ್ಲಿ ತುಂಬಿರುವ ಅನಂತ ರೂಪಗಳುಳ್ಳವ ಆ ಭಗವಂತ. ಕೃಷ್ಣ ಹೇಳುತ್ತಾನೆ “ಪ್ರತಿಯೊಂದು ವಸ್ತುವಿಗೂ  ನಾನು ಆಧಾರ, ಈ ಇಡೀ ಪ್ರಪಂಚ ನನ್ನನ್ನು ಅವಲಂಬಿಸಿಕೊಂಡಿದೆ. ಆದರೆ ನಾನು ನಿರಾಲಂಬನಾಗಿ ಎಲ್ಲೆಡೆ ತುಂಬಿದ್ದೇನೆ”. ಎಂದು.

ಅಧ್ಯಾಯ - 09: ಶ್ಲೋಕ  05

ನಚ ಮತ್ ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ ।

ಭೂತಭೃನ್ನ ಚ ಭೂತಸ್ಥೋ ಮಮಾSತ್ಮಾ ಭೂತಭಾವನಃ ॥೫॥

ನಚ ಮತ್ ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮ್ ಈಶ್ವರಮ್ 
ಭೂತಭೃತ್ ನಚ ಭೂತಸ್ಥಃ  ಮಮ ತ್ಮಾ ಭೂತಭಾವನಃ – 

ನನ್ನಲ್ಲಿ ಎಲ್ಲ ಉಂಟು; ನನಗಿಲ್ಲ ಯಾವುದರ ಅಂಟು. ನೋಡು-ಮಿಗಿಲಾದ ನನ್ನ ಮಹಿಮೆಯನ್ನು. ನನ್ನ ರೂಪ ಇವುಗಳಿಗೆ ರೂಪು ಕೊಟ್ಟಿದೆ. ಹೊತ್ತು ಸಲಹಿದೆ. ಆದರೂ ಇವುಗಳಲ್ಲಿಲ್ಲ.

ಹಿಂದಿನ ಮತ್ತು ಈ ಶ್ಲೋಕದಲ್ಲಿ ಕೃಷ್ಣ ಹೇಳುವ ವಿಚಾರವನ್ನು ನಾವು ಗಮನವಿಟ್ಟು ನೋಡಬೇಕು. ಮೇಲ್ನೋಟಕ್ಕೆ ಇವು ಒಂದೊಕ್ಕೊಂದು ವಿರುದ್ಧವಾಗಿರುವ ಒಗಟಿನ ಹೇಳಿಕೆಯಂತೆ ಕಾಣುತ್ತದೆ. ಕೃಷ್ಣ ಹೇಳುವ ಮಾತು ಹೀಗಿದೆ "ನನ್ನ ಸಾಮರ್ಥ್ಯವನ್ನು ತಿಳಿ, ನಾನು ಎಲ್ಲವುದರಲ್ಲೂ ಇದ್ದೇನೆ-ಆದರೆ ಯಾವುದರಲ್ಲೂ ಇಲ್ಲ. ಎಲ್ಲವೂ ನನ್ನಲ್ಲಿದೆ ಆದರೆ ಯಾವುದೂ ನನ್ನಲ್ಲಿಲ್ಲ” ಇದು ಭಗವಂತನ ಅಚಿಂತ್ಯ  ಶಕ್ತಿಯ ಅನುಸಂಧಾನ. ಭಾಗವತದಲ್ಲಿ ಹೇಳುವಂತೆ ‘ನಾವು ಯಾವುದನ್ನು ಪ್ರಪಂಚದಲ್ಲಿ ವಿರೋಧಾತ್ಮಕ(Contradictory) ಎನ್ನುತ್ತೇವೋ ಅವು ಶುಭ ಧರ್ಮವಾದಲ್ಲಿ ಭಗವಂತನಲ್ಲಿ ಅನ್ವಯವಾಗುತ್ತವೆ’. ಈ ವಿರುದ್ಧವಾದ ಧರ್ಮವನ್ನು ಹೇಳುವುದರ ಮೂಲಕ ಇಲ್ಲಿ ಭಗವಂತ ಏನನ್ನು ತಿಳಿಸುತ್ತಿದ್ದಾನೆ ಅಂದರೆ “ ಎಲ್ಲವೂ ನನ್ನಲ್ಲಿದೆ ಆದರೆ ಯಾವ ಮಮಕಾರ(Attachment)ನನಗಿಲ್ಲ”. 

ಅಂದರೆ ಇದು ಭಗವಂತನ ನಿರ್ಲಿಪ್ತತೆಯನ್ನು ಸೂಚಿಸುತ್ತದೆ. ಆತ ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ಯಾವುದನ್ನೂ ಆಶ್ರಯಿಸಿಕೊಂಡಿಲ್ಲ ಮತ್ತು ಯಾವುದರ ಲೇಪವೂ ಆತನಿಗಿಲ್ಲ. ಕೃಷ್ಣ ಹೇಳುತ್ತಾನೆ “ಇದು ನನ್ನ ಈಶ್ವರೀಯ ಶಕ್ತಿ” ಎಂದು. ಇದು ಭಗವಂತನ ಸರ್ವಸಮರ್ಥತೆ.

ಈ ವಿಚಾರವನ್ನು ಕೃಷ್ಣ ಇನ್ನೊಮ್ಮೆ ಸಂಕ್ಷಿಪ್ತ(Crisp)ವಾಗಿ ಭೂತಭೃತ್ ನಚ ಭೂತಸ್ಥಃ” ಎಂದು ವಿವರಿಸುತ್ತಾನೆ. ಇಲ್ಲಿ ‘ನಚ’ ಅನ್ನುವ ಪದ ಹೊಸ್ತಿಲಲ್ಲಿ ಇಟ್ಟ ದೀಪದಂತೆ ಎರಡು ಪದಗಳ ನಡುವೆ ಬಳಕೆಯಾಗಿದೆ. ಇದರರ್ಥ ಹೀಗೆ: “ನಾನು ಭೂತಭೃತ್-ಎಲ್ಲಾ ಜೀವಜಾತಗಳನ್ನು ಧರಿಸಿದ್ದೇನೆ ಮತ್ತು  ನಚಭೂತಭೃತ್-ಏನನ್ನೂ ಧರಿಸಿಲ್ಲ; ನಾನು ಭೂತಸ್ಥ-ಎಲ್ಲ ಜೀವಜಾತಗಳು ನನ್ನಲ್ಲಿವೆ ಮತ್ತು ನಾನು ನಚಭೂತಸ್ಥ-ಯಾವುದರಲ್ಲೂ ನಾನಿಲ್ಲ”.

ಕೃಷ್ಣ ಹೇಳುತ್ತಾನೆ “ಮಮ ತ್ಮಾ ಭೂತಭಾವನಃ” ಎಂದು.  ಅಂದರೆ ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಭಗವಂತನಿಂದ. ಇಲ್ಲಿ ಕೃಷ್ಣ ‘ಮಮ ಆತ್ಮ’ ಎಂದಿದ್ದಾನೆ. ಭಗವಂತ ಜ್ಞಾನಾನಂದ ಸ್ವರೂಪ. ಭಗವಂತ ಬೇರೆ ಆತನ ದೇಹ ಬೇರೆ ಅಲ್ಲ. ಭಗವಂತನ ಗುಣ ಕ್ರಿಯೆಗಳು ಬೇರೆ ಅಲ್ಲ. ಅವೆಲ್ಲವೂ ಅಖಂಡ. ಇದನ್ನು ಪಾಂಚಬೌತಿಕ ಮತ್ತು ತ್ರೈಗುಣ್ಯದ ಪರಿದಿಯಲ್ಲಿ ನಾವು ಕಲ್ಪಿಸಲು ಸಾಧ್ಯವಿಲ್ಲ.

ಭಗವಂತ ಹೇಗೆ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವುದನ್ನು ಕೃಷ್ಣ ಒಂದು ದೃಷ್ಟಾಂತದ ಮೂಲಕ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಅಧ್ಯಾಯ - 09: ಶ್ಲೋಕ  06

ಯಥಾSSಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್।

ತಥಾ ಸರ್ವಾಣಿ ಭೂತಾನಿ ಮತ್ ಸ್ಥಾನೀತ್ಯುಪಧಾರಯ ॥೬॥

ಯಥಾ ಕಾಶಸ್ಥಿತಃ ನಿತ್ಯಮ್  ವಾಯುಃ ಸರ್ವತ್ರ ಗಃ  ಮಹಾನ್
ತಥಾ ಸರ್ವಾಣಿ ಭೂತಾನಿ ಮತ್ ಸ್ಥಾನಿ ಇತಿ ಉಪಧಾರಯ 

ಎಲ್ಲೆಡೆ ಹಿಗ್ಗಿ ತುಂಬಿರುವ ಗಾಳಿ ಎಂದೆಂದೂ ಆಗಸದಲ್ಲಿರುವಂತೆ ಜಗದ ಎಲ್ಲ ಇರುವಿಕೆಗಳೂ ನನ್ನಲ್ಲಿವೆ. ಎಂದು ಮನಗಾಣು.

ಗಾಳಿ ಎಲ್ಲಾ ಕಡೆ ಇದೆ. ಅದು ಒಳಗೂ ಇದೆ, ಹೊರಗೂ ಇದೆ. ಗಾಳಿ ನಮಗೆ ಕಾಣುವುದಿಲ್ಲ. ಗಾಳಿ ಈ ಆಕಾಶದಲ್ಲಿ ತುಂಬಿದೆ. ಹೀಗೆ ಭಗವಂತ ನಮ್ಮ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ. ಆದರೆ ಯಾವುದರ ಲೇಪವೂ ಆತನಿಗಿಲ್ಲ. ಈ ಜಗತ್ತಿನ ಸರ್ವ ಇರುವಿಕೆಯೂ ಭಗವಂತನಲ್ಲಿದೆ.

ಅಧ್ಯಾಯ - 09: ಶ್ಲೋಕ  07

ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ  ಮಾಮಿಕಾಮ್ ।

ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ॥೭॥

ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ  ಮಾಮಿಕಾಮ್ 
ಕಲ್ಪಕ್ಷಯೇ ಪುನಃ ತಾನಿ ಕಲ್ಪ ದೌ ವಿಸೃಜಾಮಿ ಅಹಮ್ 

ಸೃಷ್ಟಿಯ ಕೊನೆಯಲ್ಲಿ ಎಲ್ಲ ವಸ್ತುಗಳೂ ನನ್ನದೇ ಆದ ಮೂಲ ಪ್ರಕೃತಿಯನ್ನು ಸೇರುತ್ತವೆ. ಸೃಷ್ಟಿಯ ಮೊದಲಲ್ಲಿ ಮರಳಿ ಅವನ್ನುನಾನು ನಿರ್ಮಿಸುತ್ತೇನೆ.

ಸೃಷ್ಟಿಯಾಗಿ 31,104 ಸಾವಿರ ಕೋಟಿ ವರ್ಷಗಳ ನಂತರ ಮಹಾಪ್ರಳಯ. ಇದು ಚತುರ್ಮುಖ ಬ್ರಹ್ಮನ ನೂರು ವರ್ಷ. ಇದನ್ನು ಕಲ್ಪಕ್ಷಯ ಎನ್ನುತ್ತಾರೆ. ಈ ಮಹಪ್ರಳಯದಲ್ಲಿ ಸತ್ಯಲೋಕದಿಂದ ಹಿಡಿದು ಪ್ರತಿಯೊಂದೂ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಭಗವಂತನ ಅಧೀನವಾದ ಪ್ರಕೃತಿಯನ್ನು ಸೇರುತ್ತವೆ. ಎಲ್ಲಾ ಜೀವ ಜಾತಗಳೂ ಕೂಡಾ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಭಗವಂತನ ಉದರವನ್ನು ಸೇರುತ್ತದೆ. ಮತ್ತೆ 31,104 ಸಾವಿರ ಕೋಟಿ ವರ್ಷ ಪ್ರಳಯಕಾಲ. ನಂತರ ಮರಳಿ ಈ ಸೃಷ್ಟಿ ನಿರ್ಮಾಣವಾಗುತ್ತವೆ. ಅಂದರೆ ಮರಳಿ ಸೂಕ್ಷ್ಮರೂಪದಿಂದ ಸ್ಥೂಲರೂಪವನ್ನು ಪಡೆಯುತ್ತವೆ. 

ಅಧ್ಯಾಯ - 09: ಶ್ಲೋಕ  08

ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ ।

ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್ ॥೮॥

ಪ್ರಕೃತಿಮ್  ಸ್ವಾಮ್ ಅವಷ್ಟಭ್ಯ ವಿಸೃಜಾಮಿ ಪುನಃ ಪುನಃ 
ಭೂತ ಗ್ರಾಮಮ್ ಇಮಿಮಮ್  ಕೃತ್ಸ್ನಮ್ ಅವಶಮ್  ಪ್ರಕೃತೇಃ ವಶಾತ್ – 

ಪ್ರಕೃತಿಯ ನಿಯತಿಗೊಳಪಟ್ಟು ಪರತಂತ್ರವಾದ [ನನ್ನಂಕೆಯಲ್ಲಿರುವ] ಈ ಇಡಿಯ ವಿಶ್ವವನ್ನು ನನ್ನದೆ ಆದ ಪ್ರಕೃತಿಯನ್ನು ಬಳಸಿ ಮತ್ತೆ ಮತ್ತೆ ನಿರ್ಮಿಸುತ್ತೇನೆ.

ಪ್ರಳಯ ಕಾಲದಲ್ಲಿ ಸೂಕ್ಷ್ಮರೂಪದಲ್ಲಿ ಭಗವಂತನನ್ನು ಸೇರಿದ ಜಡ ಮತ್ತು ಜೀವವನ್ನು ಭಗವಂತ ತನ್ನ ಅಧೀನವಾದ ಪ್ರಕೃತಿಯನ್ನು ಬಳಸಿ ಮತ್ತೆ ಸೃಷ್ಟಿ ಮಾಡುತ್ತಾನೆ. ಭಗವಂತನ ಈ ಸೃಷ್ಟಿ ಮತ್ತು ಸಂಹಾರಚಕ್ರ ನಿರಂತರ.  ಇಂತಹ ಅನಂತ ಬ್ರಹ್ಮಾಂಡಗಳು ಹಿಂದೆ ನಿರ್ಮಾಣವಾಗಿ ಸಂಹಾರವಾಗಿವೆ ಮತ್ತು ಇನ್ನೂ ಅನಂತ ಕಾಲದಲ್ಲೂ ಇದು ಮುಂದುವರಿಯುತ್ತದೆ. ಈ ಕಾರಣಕ್ಕಾಗಿ ಭಗವಂತನನ್ನು ಅನಂತ ಕೋಟಿ ಬ್ರಹ್ಮಾಂಡನಾಯಕ ಎಂದು ಕರೆಯುತ್ತಾರೆ.(ಈ ಬಗ್ಗೆ ವಿವರವಾಗಿ ನಾವು ಏಳನೇ ಅಧ್ಯಾಯದಲ್ಲೇ ಚರ್ಚಿಸಿದ್ದೇವೆ).

ಹೀಗೆ ನಿರಂತರ ಸೃಷ್ಟಿ-ಸಂಹಾರ ಮಾಡುವ ಭಗವಂತನಿಗೆ ಕರ್ಮ ಅಂಟುವುದಿಲ್ಲವೇ? ಮುಂದಿನ ಶ್ಲೋಕಗಳಲ್ಲಿ ನೋಡೋಣ:

ಅಧ್ಯಾಯ - 09: ಶ್ಲೋಕ  09

ನಚ ಮಾಂ ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ ।

ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು ॥೯॥

ನಚ ಮಾಮ್  ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ 
ಉದಾಸೀನವತ್ ಆಸೀನಮ್ ಅಸಕ್ತಮ್  ತೇಷು ಕರ್ಮಸು 

ಧನಂಜಯ, ನಾನು ಮಾಡಿಯೂ ಮಾಡದವನಂತೆ ಇದ್ದುಬಿಡುತ್ತೇನೆ. ಆ ಕರ್ಮಗಳಲ್ಲಿ ನನಗೆ ನಂಟಿಲ್ಲ. ಅದರಿಂದ ಆ ಕರ್ಮಗಳು ನನ್ನನ್ನು ಕಟ್ಟಿ ಹಾಕಲಾರವು.

ಭಗವಂತ ನಿರ್ಲಿಪ್ತ, ಆತ ಕರ್ಮ ಮಾಡುವುದು ಆತನಿಗೊಸ್ಕರ ಅಲ್ಲ. ಸ್ವತಂತ್ರನಾದ ಭಗವಂತನನ್ನು ಎಂದೂ ಯಾವ ಕರ್ಮವೂ ಕಟ್ಟಿ ಹಾಕಲಾರವು.(ಒಂದು ವೇಳೆ ಹಾಗೆ ಕಟ್ಟಿ ಹಾಕುವುದಾದರೆ ಭಗವಂತ ಸ್ವತಂತ್ರ ಎನಿಸುವುದಿಲ್ಲ!). “ನಾನು ನನಗೋಸ್ಕರ ಏನೂ ಮಾಡುವುದಿಲ್ಲ ಮತ್ತು ಕರ್ಮ ನನಗೆ ಅಂಟುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾನೆ ಕೃಷ್ಣ. 
ಈ ಶ್ಲೋಕದಲ್ಲಿ ಧನಂಜಯ ಎನ್ನುವ ವಿಶೇಷಣ ಬಳಕೆಯಾಗಿದೆ. 

ವ್ಯವಹಾರಿಕವಾಗಿ ಈ ನಾಮವನ್ನು ನೋಡಿದರೆ ‘ಜನರಿಂದ ಹಣವನ್ನು ದೋಚಿ ದುಷ್ಟ ರಾಜ್ಯಭಾರ ಮಾಡುವ ಶತ್ರು ರಾಜರನ್ನು ಸೋಲಿಸಿ, ಆ ಸಂಪತ್ತನ್ನು ಜಯಿಸಿ, ಅದನ್ನು ಪ್ರಜೆಗಳಿಗಾಗಿ ಸದುಪಯೋಗ ಮಾಡುವವ ಧನಂಜಯ’.  [ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ಮೇಲೆ ದಾಳಿಮಾಡಿ ಹಣ ಗಳಿಸುವವ ‘ದರೋಡೆಕೋರ’ ಎನಿಸುತ್ತಾನೆ ಹೊರತು ಧನಂಜಯ ಎನಿಸುವುದಿಲ್ಲ. ಮಹಾಭಾರತದಲ್ಲಿ ಏಕಲವ್ಯ ಈ ಎರಡನೇ ಗುಂಪಿಗೆ ಸೇರಿದವನಾಗಿದ್ದ. ಆದ್ದರಿಂದ ಆತನ ಬೆರಳನ್ನು ಕತ್ತರಿಸಲಾಯಿತು ಮತ್ತು ಕೃಷ್ಣ ಸ್ವತಃ ಆತನನ್ನು ಸಂಹಾರ ಮಾಡಿದ್ದ.] ಆಧ್ಯಾತ್ಮಿಕವಾಗಿ ನಿಜವಾದ ಧನ ಎಂದರೆ ಭಗವಂತ. ಅಂತಹ ಭಗವಂತನ ಜ್ಞಾನವನ್ನು ಪಡೆದವ ಧನಂಜಯ. ನಾವೆಲ್ಲರೂ ಅರ್ಜುನನಂತೆ ಭಗವಂತನ ಜ್ಞಾನವನ್ನು ಪಡೆದು  ಧನಂಜಯರಾದಾಗ ಮಾತ್ರ  ಮೋಕ್ಷವನ್ನು ಪಡೆಯಲು ಸಾಧ್ಯ.

ಅಧ್ಯಾಯ - 09: ಶ್ಲೋಕ  10

ಮಯಾSಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್।

ಹೇತುನಾSನೇನ ಕೌಂತೇಯ ಜಗದ್ ವಿಪರಿವರ್ತತೇ ॥೧೦॥

ಮಯಾ ಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರ ಚರಮ್
ಹೇತುನಾ ನೇನ ಕೌಂತೇಯ ಜಗತ್  ವಿಪರಿವರ್ತತೇ-

ಸಾಕ್ಷಿಯಾಗಿ ನಿಂತ ನನ್ನಿಂದಲೆ ಜೀವ-ಜಡಗಳನ್ನು ಬೆಸೆದು ಪ್ರಕೃತಿ ಹಡೆಯುತ್ತದೆ. ಕೌಂತೇಯ, ಈ ಕಾರಣದಿಂದಲೆ ಜಗತ್ತು ಬದಲುತ್ತ  ಸುತ್ತುತ್ತಿದೆ.

ಜಗತ್ತನ್ನು ಸೃಷ್ಟಿ ಮಾಡಲು ಬೇಕಾದ ಮೂಲದ್ರವ್ಯ ಜಡಪ್ರಕೃತಿ ಮತ್ತು ಅದಕ್ಕೆ ಆಕಾರ ಕೊಡುವುದು ಜಡಪ್ರಕೃತಿಯ ಮಾನಿನಿಯಾದ ಚೇತನ ಪ್ರಕೃತಿ ಲಕ್ಷ್ಮಿ. ಭಗವಂತ ಇಡೀ ಸೃಷ್ಟಿಯ ಅಧ್ಯಕ್ಷನಾಗಿ ನಿಂತು, ಕ್ರಿಯೆಯ ಹಿಂದಿನ ಶಕ್ತಿಯಾಗಿ, ಜಡ ಮತ್ತು ಚೇತನಪ್ರಕೃತಿಯ ಮೂಲಕ ಈ ಸೃಷ್ಟಿ ನಿರ್ಮಾಣ ಮಾಡುತ್ತಾನೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ.

ಅಧ್ಯಾಯ - 09: ಶ್ಲೋಕ  11

ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ।

ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್      ॥೧೧॥

ಅವಜಾನಂತಿ ಮಾಮ್   ಮೂಢಾಃ ಮಾನುಷೀಂ ತನುಮ್ ಆಶ್ರಿತಮ್ 
ಪರಮ್  ಭಾವಮ್ ಅಜಾನಂತಃ  ಮಮ ಭೂತಮಹೇಶ್ವರಮ್-

ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೆ ಬಗೆದು ಕಡೆಗಾಣಿಸುತ್ತಾರೆ-ಎಂದೆಂದು ಎಲ್ಲೆಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು.  

ಈ ಶ್ಲೋಕದಲ್ಲಿ ಭಗವಂತ ತನ್ನ ಸ್ವರೂಪದ ಬಗ್ಗೆ ಇನ್ನ್ಯಾರೂ ಹೇಳಲಾಗದ ಒಂದು ಸಂಗತಿಯನ್ನು ಹೇಳುತ್ತಾನೆ. ಭಗವಂತನಿಗೆ ಪಾಂಚಭೌತಿಕ ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ನಮ್ಮಂತೇ ಶರೀರ ಉಳ್ಳವನಂತೆ ಕಾಣಿಸಿಕೊಳ್ಳುತ್ತಾನೆ ಅಷ್ಟೇ. ಅಲ್ಲಿ ಕಾಣುವ ಶರೀರವನ್ನು ಕಂಡು: ಭಗವಂತನ ಶರೀರ ನಮ್ಮಂತೆ ನಶ್ವರವಾದ, ಒಂದು ದಿನ ಬಿದ್ದು ಹೋಗುವ ಶರೀರ ಎಂದು ತಿಳಿಯುವವರು- ಸ್ವಭಾವತಃ ತಾಮಸರು ಅಥವಾ ತಾಮಸದ ಪ್ರಭಾವಕ್ಕೆ ಒಳಗಾದ ಭಗವಂತನ ಹಿರಿಮೆಯನ್ನರಿಯದ ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ.

ಇಲ್ಲಿ ಭೂತಮಹೇಶ್ವರ  ಎನ್ನುವ ವಿಶೇಷಣ ಬಳಕೆಯಾಗಿದೆ. ಇದು ಭಗವಂತನ ಹಿರಿಮೆಯನ್ನು ಹೇಳುವ ವಿಶೇಷ ಪದ.  ಸಮಷ್ಟಿಯಾಗಿ ಈ ಪದವನ್ನು ನೋಡಿದರೆ: ಭೂತಗಳು ಎಂದರೆ ಸಮಸ್ತ ಜೀವಗಳು. ಅವರಿಗೆ ಈಶರು ಬ್ರಹ್ಮಾದಿ ದೇವತೆಗಳು(ಭೂತೇಶರು). ಈ ದೇವತೆಗಳಿಗೆ ಮಹತ್ತಾದವಳು ಶ್ರೀಲಕ್ಷ್ಮಿ(ಭೂತಮಹೇಶಳು). ಇಂತಹ ಲಕ್ಷ್ಮಿಗೆ ವರನಾಗಿರುವ ಭಗವಂತ “ಭೂತಮಹೇಶ್ವರ”. ಇದೇ ಪದವನ್ನು ಬಿಡಿಸಿ ನೋಡಿದರೆ ಭೂತಮಹಾನ್+ಈಶ್ವರ : ಅಂದರೆ  ಬ್ರಹ್ಮಾದಿ ಸಮಸ್ತ ಭೂತಗಳಿಗೂ ಮಹಾನ್ ಆಗಿ ಎಲ್ಲರನ್ನು ನಿಯಂತ್ರಿಸುವ , ಸರ್ವೋನ್ನತನಾದ- ಸರ್ವಸಮರ್ಥ ಭಗವಂತ. ಇನ್ನೊಂದು ರೀತಿಯಲ್ಲಿ ಭೂತ+ಮಹತ್+ಈಶ್ವರ. ಇಲ್ಲಿ ಭೂತ ಎಂದರೆ: ಉನ್ನತಿಯ ತುತ್ತ ತುದಿಯಲ್ಲಿರುವ, ಹುಟ್ಟು ಸಾವಿಲ್ಲದ ಅನಾಧಿನಿತ್ಯ. ಮಹತ್ ಎಂದರೆ: ಕಾಲತಃ , ದೇಶತಃ, ಗುಣತಃ ಪರಿಪೂರ್ಣವಾಗಿರುವ ತತ್ತ್ವ. ಈಶ್ವರ ಎಂದರೆ : ಸರ್ವ ಸಮರ್ಥ ಭಗವಂತ.  ಹೀಗೆ ಈ ವಿಶೇಷಣ ಅನೇಕ ರೂಪದಲ್ಲಿ ಭಗವಂತನ ಗುಣವನ್ನು ಸಾರುತ್ತದೆ.

ಅಧ್ಯಾಯ - 09: ಶ್ಲೋಕ  12

ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ ।

ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ     ॥೧೨॥

ಮೋಘ ಶಾ ಮೋಘಕರ್ಮಾಣಃ ಮೋಘಜ್ಞಾನಾಃ  ವಿಚೇತಸಃ 
ರಾಕ್ಷಸೀಮ್ ಆಸುರೀಮ್  ಚ ಏವ ಪ್ರಕೃತಿಮ್  ಮೋಹಿನೀಮ್  ಶ್ರಿತಾಃ 

ಇವರ ಆಸೆ ಈಡೇರದು. ಕರ್ಮಗಳು ಫಲಿಸವು. ತಿಳಿವು ಮಾಯವಾಗುವುದು.ಅವರು ಬಗೆಗೇಡಿಗಳು; ಮರುಳುಗೊಳಿಸುವ, ರಕ್ಕಸರ –ಅಸುರರ ತಾಮಸ ಸ್ವಭಾವಕ್ಕೆ ಒಳಗಾದವರು.

‘ಭಗವಂತ ಜ್ಞಾನಾನಂದ ಸ್ವರೂಪ, ಆತನಿಗೆ ಪಾಂಚಭೌತಿಕ ಶರೀರ ಇಲ್ಲ’ ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಒತ್ತು ಕೊಟ್ಟು ಹೇಳುತ್ತಾನೆ. “ದೇವರಿಗೆ ನಮ್ಮಂತೆ ಪಾಂಚಭೌತಿಕ ಶರೀರ ಇದೆ-ಅನ್ನುವ ಚಿಂತನೆಯೇ ಪಾತಕದ ದಾರಿ” ಎನ್ನುತ್ತಾನೆ ಕೃಷ್ಣ. ಏಕೆಂದರೆ ಹಾಗೆ ಚಿಂತನೆ ಮಾಡುವವರು ಸಾತ್ವಿಕರಾಗಿರುವುದಿಲ್ಲ. ಅವರು ಎಂದೂ ಭಗವದ್ ಭಕ್ತರಾಗಿರುವುದಿಲ್ಲ. ಹೀಗೆ ಚಿಂತನೆ ಮಾಡುವವರ ಅಧ್ಯಾತ್ಮ ಸಾಧನೆಯ ಎಲ್ಲಾ ಆಸೆಗಳೂ ಕಮರಿ ಹೋಗುತ್ತವೆ. ಭಗವಂತನನ್ನು ನಶ್ವರ ಎಂದು ಹೇಳುವವರನ್ನು ದೇವತೆಗಳು ಎಂದೂ ಪ್ರೀತಿಸುವುದಿಲ್ಲ. ಅವರು ಮಾಡುವ ಯಜ್ಞ-ಯಾಗಾದಿಗಳು ವ್ಯರ್ಥ. ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ ಆಸೆಯೂ ನೆರವೇರುವುದಿಲ್ಲ.

ಸಾತ್ವಿಕ ಚಿಂತನವೇ ಇಲ್ಲದವರು ಅಥವಾ ತಾಮಸ ಪ್ರಭಾವಕ್ಕೊಳಗಾದವರು ಭಗವಂತನನ್ನು ಈ ರೀತಿ ದೋಷ ಚಿಂತನೆ ಮಾಡುತ್ತಾರೆ. ಅವರಿಗೆ ಚಿಂತನಾ ಶಕ್ತಿ ಇರುವುದಿಲ್ಲ. ಇವರು ಯಾವ ಶಾಸ್ತ್ರ ಓದಿಯೂ ಉಪಯೋಗವಿಲ್ಲ. ಅವರ ಮನಸ್ಸು ಅಧ್ಯಾತ್ಮವನ್ನು ಗ್ರಹಿಸುವುದಿಲ್ಲ. “ಇಂತವರು ರಾಕ್ಷಸರು ಅಥವಾ ಅಸುರರಾಗಿರುತ್ತಾರೆ” ಎನ್ನುತ್ತಾನೆ ಕೃಷ್ಣ. ರಾಕ್ಷಸರು ಎಂದರೆ ಸ್ವಭಾವತಃ ತಾಮಸರು; ಅಸುರರು ಎಂದರೆ ರಾಜಸರು-ಇಂದ್ರಿಯ ಭೋಗದಲ್ಲೇ ಪುರುಷಾರ್ಥ ಕಾಣುವವರು. ಇವರ ಜೊತೆಗೆ ಪ್ರಭಾವದಿಂದ ಚಿಂತನಾ ಶೀಲತೆಯನ್ನು ಕಳೆದುಕೊಂಡವರು ಕೂಡಾ ಈ ರೀತಿ ಯೋಚಿಸುತ್ತಾರೆ. ಇವರಿಗೆ ಎಂದೂ ಸಹಜ ಚಿಂತನೆ ಬರುವುದೇ ಇಲ್ಲ. ಇವರು ಯಾವಾಗಲೂ ಸತ್ಯಕ್ಕೆ ವಿರುದ್ಧವಾಗಿ ಚಿಂತಿಸುತ್ತಿರುತ್ತಾರೆ.

ಅಧ್ಯಾಯ - 09: ಶ್ಲೋಕ  13

ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ ।

ಭಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್      ॥೧೩॥

ಮಹಾ ತ್ಮಾನಃ ತು ಮಾಮ್  ಪಾರ್ಥ ದೈವೀಮ್  ಪ್ರಕೃತಿಮ್ ಆಶ್ರಿತಾಃ 
ಜಂತಿ ಅನನ್ಯ ಮನಸಃ  ಜ್ಞಾತ್ವಾ ಭೂತ ದಿಮ್ ಅವ್ಯಯಮ್ 

ಓ ಪಾರ್ಥ, ಸಾತ್ವಿಕ ಸ್ವಭಾವದ ಹಿರಿಯ ಮಂದಿ, ಅಳಿವ ವಿಶ್ವಕ್ಕೆಲ್ಲ ಅಳಿವಿರದ ನಾನೆ  ಕಾರಣ ಎಂದು ತಿಳಿದು, ಒಂದೆ ಬಗೆಯಿಂದ ನನ್ನನ್ನು ಪೂಜಿಸುತ್ತಾರೆ.

ಹಿಂದಿನ ಶ್ಲೋಕದಲ್ಲಿ ಆಸುರೀ ಮತ್ತು ರಾಕ್ಷಸ ಸ್ವಭಾವದವರನ್ನು  ವಿವರಿಸಿದ ಕೃಷ್ಣ ಇಲ್ಲಿ ದೈವೀ ಸ್ವಭಾವದವರನ್ನು ವಿವರಿಸುತ್ತಾನೆ. ದೈವೀ ಸ್ವಭಾವದವರು ಸದಾ ಜ್ಞಾನದ, ಬೆಳಕಿನ, ಸತ್ಯದ ದಾರಿಯಲ್ಲಿ ಸಾಗುವವರು. ಅವರು ಭಗವಂತನನ್ನು ತಿಳಿಯುವ  ಭಾಗ್ಯ ಪಡೆದವರು. ಇವರನ್ನು ಭಗವಂತ “ಮಹಾತ್ಮರು” ಎನ್ನುತ್ತಾನೆ. ಭಗವಂತನಿಗೆ ಇವರ ಮೇಲೆ ಅಪಾರ ಪ್ರೀತಿ. ಕೃಷ್ಣ ಹೇಳುತ್ತಾನೆ “ಅವರು ನನ್ನನ್ನು ಅನನ್ಯ ಮನಸ್ಸಿನಿಂದ ಭಜನೆ ಮಾಡುತ್ತಾರೆ” ಎಂದು. ನಾವು ದೇವರನ್ನು ಪ್ರೀತಿಸುವುದು ಮತ್ತು ದೇವರು ನಮ್ಮನ್ನು ಪ್ರೀತಿಸುವುದು ನಿಜವಾದ ಭಜನೆ. ದೈವೀ ಸ್ವಭಾವದವರು ಭಗವಂತನನ್ನು ಬಿಟ್ಟು ಉಳಿದುದೆಲ್ಲವೂ ನಶ್ವರ, ಶಾಶ್ವತ ಸತ್ಯ ಭಗವಂತ ಮಾತ್ರ  ಎನ್ನುವ ಸತ್ಯವನ್ನು ಅರಿತಿರುತ್ತಾರೆ. ಪ್ರಪಂಚದಲ್ಲಿ ಭಗವಂತ ಮತ್ತು ಆತನ  ಜ್ಞಾನ ಮಾತ್ರ ಅವ್ಯಯ. ಉಳಿದ (ದುಡ್ಡು, ಆಸ್ತಿ, ಚಿನ್ನ, ಅಧಿಕಾರ, ಇತ್ಯಾದಿ) ಎಲ್ಲವೂ ವ್ಯಯ. ನಶ್ವರವಲ್ಲದ ಸಂಪತ್ತು ಭಗವಂತ ಮತ್ತು ಆತನ ಜ್ಞಾನ. ಈ ರೀತಿ ಭಗವಂತನ ಚಿಂತನೆ ಮಾಡುವವರು ಮಹಾತ್ಮರು.

ಈ ಶ್ಲೋಕದಲ್ಲಿ ಬಂದಿರುವ ವಿಶೇಷಣ ‘ಪಾರ್ಥ’. “ಪ್ರಥೆಯ ಮಗನೆ” ಎಂದು ಕೃಷ್ಣ ಅರ್ಜುನನನ್ನು ಸಂಬೋಧಿಸುತ್ತಿದ್ದಾನೆ ಎನ್ನುವುದು ಮೇಲ್ನೋಟದ ಅರ್ಥ. ವ್ಯುತ್ಪತ್ತಿ ಶಾಸ್ತ್ರೀಯ ದೃಷ್ಟಿಯಿಂದ(Etymologically) ನೋಡಿದರೆ ಈ ವಿಶೇಷಣದ ಹಿಂದೆ ಅಧ್ಯಾತ್ಮಿಕವಾಗಿ ಬೇರೆಯೇ ಅರ್ಥವಿದೆ. ‘ಪ್ರಥ- ವಿಸ್ತಾರೆ’ ಧಾತು. ಯಾವುದು ಹಬ್ಬಿಕೊಂಡಿದೆಯೋ, ಯಾವುದು ಎಲ್ಲಾ ಕಡೆ ತುಂಬಿದೆಯೋ ಅದು ‘ಪ್ರಥ’. ಇದು ಭಗವಂತನ ಸರ್ವಗತತ್ವವನ್ನು ಸೂಚಿಸುತ್ತದೆ. ಭಗವಂತ ಸರ್ವಗತ ಎನ್ನುವ ಸತ್ಯವನ್ನು ಅರಿತು ಅವನನ್ನು ಎಲ್ಲ ಕಡೆ ಕಾಣುವವರು ‘ಪಾರ್ಥರು’. ಇನ್ನೊಂದು ಅರ್ಥದಲ್ಲಿ ವೇದಾರ್ಥಭೂತನಾದ ಭಗವಂತನನ್ನು, ಅವನ ಗುಣಗಳನ್ನು, ಸದಾ ಪಾನ ಮಾಡುವವರು ‘ಪಾರ್ಥರು’. ನಾವೆಲ್ಲರೂ ವೇದಾರ್ಥವನ್ನು ಪಾನ ಮಾಡುತ್ತಾ ಪಾರ್ಥರಾಗಬೇಕು. ಎಲ್ಲೆಡೆ ಹಬ್ಬಿರುವ ಸರ್ವಗತವಾದ ಶಕ್ತಿಯನ್ನು ನಮ್ಮೊಳಗೂ ಕಾಣಬೇಕು ಎನ್ನುವುದು ಈ ಸಂಬೋಧನೆಯ ಹಿಂದಿರುವ  ಸಂದೇಶ.

ದೈವೀ ಸ್ವಭಾವದವರು ಭಗವಂತನನ್ನು ಯಾವಯಾವ ಬಗೆಯಲ್ಲಿ  ಉಪಾಸನೆ ಮಾಡುತ್ತಾರೆ  ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಅಧ್ಯಾಯ - 09: ಶ್ಲೋಕ  14

ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ    ।

ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ         ॥೧೪॥

ಸತತಮ್  ಕೀರ್ತಯಂತ ಮಾಮ್  ಯತಂತಃ ಚ  ದೃಢ ವ್ರತಾಃ        
ಮಸ್ಯಂತ ಚ  ಮಾಮ್  ಭಕ್ತ್ಯಾ ನಿತ್ಯ ಯುಕ್ತಾಃ  ಉಪಾಸತೇ 

ಅನುದಿನವು ನನ್ನಲ್ಲಿ ಬಗೆಯಿಟ್ಟು ನನ್ನನ್ನೆ ಸೇವಿಸುತ್ತಾರೆ. ನಿರಂತರ ನನ್ನನ್ನು ಕೊಂಡಾಡುತ್ತಾ ನೇಮಗಳನ್ನುನೆಮ್ಮಿಕೊಂಡು ಹೆಣಗುತ್ತಾ ನನಗಾಗಿ ತಲೆಬಾಗುತ್ತ.

“ದೈವೀ ಸ್ವಭಾವದವರು ನಿರಂತರ  ನನ್ನನ್ನು ಕೀರ್ತನ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ.  ಅವರ ಪ್ರತಿಯೊಂದು ಚಟುವಟಿಕೆಯಲ್ಲೂ ಭಗವದ್ ಪ್ರಜ್ಞೆ ಗಾಢವಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ  ತತವಾದ್ಯವನ್ನು ಹಿಡಿದು, ತಂತಿಯನ್ನು ಮೀಟುತ್ತಾ  ಭಗವಂತನ ಗುಣಗಾನ ಮಾಡುತ್ತಾ, ಹಾಡುತ್ತಾ(ನಾರದ ಮಹರ್ಷಿಗಳಂತೆ) ಸದಾ ಸಂತೋಷವಾಗಿರುವವರು ದೈವೀ ಸ್ವಭಾವದವರು.  ಇವರು ನಿರಂತರ, ತಮ್ಮ ಗುರಿ ತಲುಪುವತನಕವೂ ದೃಡ ಧೀಕ್ಷೆಯಿಂದ, ಅನನ್ಯ ಪ್ರೀತಿಯಿಂದ ಗೌರವಿಸುತ್ತಾ ಉಪಾಸನೆ ಮಾಡುತ್ತಾರೆ. ಇವರಲ್ಲಿ ಇನ್ನೊಂದು ವಿಧದ ಭಕ್ತರನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಅಧ್ಯಾಯ - 09: ಶ್ಲೋಕ  15

ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ     ।

ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತೋಮುಖಮ್        ॥೧೫॥

ಜ್ಞಾನಯಜ್ಞೇನ ಚ ಅಪಿ ಅನ್ಯೇ ಯಜಂತಃ  ಮಾಮ್  ಉಪಾಸತೇ       
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತಃ ಮುಖಮ್-

ಕೆಲವರು ಅರಿವಿನ ಮಾನಸ ಯಜ್ಞದಿಂದ ಎಲ್ಲೆಡೆ ತುಂಬಿರುವ ನನ್ನನ್ನು ಪೂಜಿಸುತ್ತ ಸೇವಿಸುತ್ತಾರೆ- ಎಲ್ಲೆಡೆಯಿರುವ ಭಗವಂತನೊಬ್ಬನೆ ಎಂದು[ಏಕಮೂರ್ತಿಯೆಂದು], ಎಲ್ಲಕ್ಕಿಂತ ಬೇರೆಯೆಂದು[ಚತುರ್ಮೂರ್ತಿಯೆಂದು], ಬಗೆಬಗೆಯ ಬಣ್ಣದವನೆಂದು [ಅನೇಕಮೂರ್ತಿ ಯೆಂದು], ಹೀಗೆ ಹಲವಾರು ಬಗೆಯಿಂದ.

ಇನ್ನು ಕೆಲವರು ಭಗವಂತನ ಅರಿವಿನ ಪ್ರಪಂಚದಲ್ಲಿ ಮುಳುಗಿಬಿಟ್ಟಿರುತ್ತಾರೆ. ಧ್ಯಾನದಲ್ಲಿ ಅವರಿಗೆ ಹೊರಗಿನ ಪ್ರಪಂಚದ ಅರಿವೇ ಇರುವುದಿಲ್ಲ. ಧ್ಯಾನದಲ್ಲಿ ಭಗವಂತನನ್ನು ಅನೇಕ ಆಯಾಮದಲ್ಲಿ ಕಾಣುವುದೇ ಅವರ ಉಪಾಸನೆ. ಇವರ ಉಪಾಸನೆ ಧ್ಯಾನ ಪೂರ್ವಕವಾದ ಯಜ್ಞ. ಬಾಹ್ಯವಾಗಿ ಇವರನ್ನು ಮಹಾತ್ಮರು ಎಂದು ಗುರುತಿಸುವುದು ಬಹಳ ಕಷ್ಟ.   ಕೃಷ್ಣ ಹೇಳುತ್ತಾನೆ “ಇಂತವರು ನನ್ನನ್ನು ಒಂದಾಗಿ,  ಬೇರೆಯಾಗಿ, ಬಹುವಾಗಿ ಕಾಣುತ್ತಾರೆ” ಎಂದು. 

ಇಲ್ಲಿ ಏಕತ್ವೇನ ಅಂದರೆ ಭಗವಂತ ಒಬ್ಬನೆ ಎಂದು ಉಪಾಸನೆ ಮಾಡುವುದು. ಒಂದೊಂದು ದೇಶಕ್ಕೆ, ಒಂದೊಂದು ಜಾತಿಗೆ, ಒಂದೊಂದು ಮತಕ್ಕೆ ಒಬ್ಬ ದೇವರಲ್ಲ. ಎಲ್ಲರಿಗೂ ದೇವರು ಒಬ್ಬನೇ ಎಂದು ಉಪಾಸನೆ ಮಾಡುವುದು ಏಕತ್ವೇನ. ಪೃಥಕ್ತ್ವೇನ ಎಂದರೆ ಎಲ್ಲರಿಂದ ವಿಲಕ್ಷಣನಾದ ಭಗವಂತನನ್ನು ಅನೇಕ ಬಗೆಯಿಂದ ಕಾಣುವುದು. ಇವರು ಭಗವಂತನನ್ನು ಧ್ಯಾನದಲ್ಲಿ ಅನೇಕ ವರ್ಣದಿಂದ ಕಾಣುತ್ತಾರೆ. ಹೀಗೆ ವಿಶ್ವತೋಮುಖ ಭಗವಂತನನ್ನು ಏಕ ಎಂತಲೂ, ಚತುರ್ಮೂರ್ತಿ ಎಂತಲೂ, ಅನೇಕ ಮೂರ್ತಿ ಎಂತಲೂ, ಅನೇಕ ವರ್ಣದಿಂದ ಉಪಾಸನೆ ಮಾಡುತ್ತಾರೆ.  

ಅಧ್ಯಾಯ - 09: ಶ್ಲೋಕ  16

ಭಗವಂತನನ್ನು ಹೇಗೆ ಅನುಸಂಧಾನ ಮಾಡಬೇಕು, ಹೇಗೆ ಮಾಡಬಾರದು ಎನ್ನುವ ಅರಿವನ್ನು ಕೊಟ್ಟ ಕೃಷ್ಣ, ಮುಂದೆ ಭಗವಂತನ ವಿಭೂತಿಯನ್ನು ಬೇರೆ ಬೇರೆ ಪ್ರತೀಕಗಳಲ್ಲಿ ಹೇಗೆ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ಇಡೀ ವಿಶ್ವದ ಅಣು ಕಣಗಳಲ್ಲಿ ತುಂಬಿರುವ ಭಗವಂತನ ಅನುಸಂಧಾನ ಹಾಗು ಅದರ ವಿಶಿಷ್ಟ ಉಪಾಸನೆಯ ವಿವರವನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ವಿವರಿಸಿದ್ದಾನೆ. ಬನ್ನಿ ಈ ಅಪೂರ್ವ ವಿಶಿಷ್ಟ ಜ್ಞಾನವನ್ನು ಭಗವಂತನಿಂದಲೇ ಕೇಳಿ ತಿಳಿದು ಕೃತಾರ್ಥರಾಗೋಣ.  

ಅಹಂ ಕ್ರತುರಹಂ ಯಜ್ಞಃ ಸ್ವಧಾSಹಮಹಮೌಷಧಮ್ ।

ಮಂತ್ರೋSಹಮಹಮೇವಾSಜ್ಯಮಹಮಗ್ನಿರಹಂ ಹುತಮ್ ॥೧೬॥


ಅಹಮ್  ಕ್ರತುಃ ಅಮ್  ಯಜ್ಞಃ ಸ್ವಧಾ ಮ್ ಔಷಧಮ್ 
ಮಂತ್ರಃ ಅಮ್ ಅಹಮ್ ಏವ ಆಜ್ಯಮ್ ಅಹಮ್ ಅಗ್ನಿಃ ಅಹಮ್  ಹುತಮ್

ನನ್ನಿಂದ ಯಾಗ. [ನನ್ನ ಕ್ರಿಯೆ ನನ್ನ ಸ್ವರೂಪವಾದ್ದರಿಂದ ನಾನು ‘ಕ್ರತು’]. ನನ್ನಿಂದ ಹವನ ಕ್ರಿಯೆ.[ಎಲ್ಲ ಬಲ್ಲವನಾದ್ದರಿಂದ ‘ಯಜ್ಞ’]. ಪಿತೃಗಳ ಅನ್ನ ನನ್ನಿಂದ [ನನಗೆ ನಾನೆ ಆಸರೆಯಾದ್ದರಿಂದ ‘ಸ್ವಧಾ’]. ನನ್ನಿಂದ ಮನುಷ್ಯರ ಆಹಾರ[ಬೆಂದವರಿಗೆ ಆಸರೆಯಾದ್ದರಿಂದ ‘ಔಷಧ’]. ಮಂತ್ರ ನನ್ನಿಂದ[ತಿಳಿವಿತ್ತು ಸಲಹುದರಿಂದ ‘ಮಂತ್ರ’]. ನನ್ನಿಂದಲೆ ತುಪ್ಪ [ಎಲ್ಲಕ್ಕಿಂತ ಹಿರಿಯನಾದ್ದರಿಂದ ‘ಆಜ್ಯ’]. ನನ್ನಿಂದ ಬೆಂಕಿ.[ನಾನೆ ಚಲಿಸದ ವಿಶ್ವಕ್ಕೆ ಚಲನೆ ನೀಡುವುದರಿಂದ ‘ಅಗ್ನಿ’]. ನನ್ನಿಂದ ಹೋಮದ ಹವಿ[ಭಕ್ತರು ಕರೆವುದರಿಂದ ನಾನೆ ‘ಹುತ’].

ಭಗವಂತನ ಉಪಾಸನೆಗೆ ಮೂರು ಪ್ರತೀಕವನ್ನು ಶಾಸ್ತ್ರಕಾರರು ಹೇಳಿದ್ದಾರೆ. ವೇದದಲ್ಲಿ ಆ ಮೂರು ಪ್ರತೀಕಗಳಿಂದ ಉಪಾಸನೆಯೇ ನಮಗೆ ಎಲ್ಲಾ ಕಡೆ ಸಿಗುವುದು. ಅವುಗಳೆಂದರೆ ಅಗ್ನಿಪ್ರತೀಕ, ವಾಯುಪ್ರತೀಕ ಮತ್ತು ಆದಿತ್ಯಪ್ರತೀಕ. ಭೂಸ್ತರದಲ್ಲಿ ಭಗವಂತನ ಉಪಾಸನೆ ಅಗ್ನಿಪ್ರತೀಕದಲ್ಲಿ. ಅಂತರಿಕ್ಷ  ಸ್ತರದಲ್ಲಿ ಆದಿತ್ಯ ಮುಖದಲ್ಲಿ ಮತ್ತು ಅಂತರಂಗದಲ್ಲಿ ಭಗವಂತನ ಉಪಾಸನೆ ವಾಯುವಿನ ಪ್ರತೀಕದಲ್ಲಿ. ಭೂಮಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ಜ್ಞಾನಮಾರ್ಗಕ್ಕಿಂತ ಹೆಚ್ಚು ಕರ್ಮ ಮಾರ್ಗಕ್ಕೆ ಅಂಟಿಕೊಂಡವರು. ಇಂಥವರಲ್ಲಿ ಜ್ಞಾನಕ್ಕಿಂತ ಕರ್ಮಕ್ಕೆ ಒತ್ತು ಹೆಚ್ಚು. ಕೆಲವರು ಬೆಳಿಗ್ಗೆಯಿಂದ ಸಂಜೆ ತನಕ ಪೂಜೆ ಮಾಡುತ್ತಾರೆ, ಆದರೆ ತಾವು ಮಾಡುವ ಅನುಷ್ಠಾನದ ಜ್ಞಾನವೇ ಅವರಿಗಿರುವುದಿಲ್ಲ. ಇವರಿಗೆ ಜ್ಞಾನ ಸಂಪಾದನೆ  ದ್ವಿತೀಯಕ(Secondary). ಇದು ಮನುಷ್ಯನ ದೌರ್ಬಲ್ಯ. ನಮಗೆ ನಮ್ಮ ಮಡಿವಂತಿಕೆಯಲ್ಲಿರುವಷ್ಟು ಒತ್ತು ಜ್ಞಾನದಲ್ಲಿರುವುದಿಲ್ಲ! ತಿಳಿಯದ ಬಾಹ್ಯಾನುಷ್ಠಾನದಲ್ಲಿ ಕಾಲಹರಣ ಮಾಡುವುದಕ್ಕಿಂತ ಪಾಠ ಪ್ರವಚನದಿಂದ ಸ್ವಲ್ಪಮಟ್ಟಿನ ಜ್ಞಾನ ಗಳಿಸಿಕೊಳ್ಳುವುದು ದೇವರು ಮೆಚ್ಚುವ ಮಹಾ ಪೂಜೆ ಎನಿಸುತ್ತದೆ.

ಕರ್ಮ ಪ್ರಧಾನವಾಗಿರುವವರಿಗೆ ಭಗವಂತನ ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ.  ಕೃಷ್ಣ ಹೇಳುತ್ತಾನೆ: “ಅಹಮ್  ಕ್ರತುಃ ಅಮ್  ಯಜ್ಞಃ” ಎಂದು.  ಭಗವಂತನ ಆರಾದನೆಗೊಸ್ಕರ ಮಾಡತಕ್ಕಂತಹ ಅಗ್ನಿ ಆರಾದನೆಯ ಪ್ರಕ್ರಿಯೆ ‘ಕ್ರತು’. ಇಲ್ಲಿ ಯಜ್ಞದ ಮೂಲಕ ಭಗವಂತನಿಗೆ ಆಹುತಿ ಕೊಡುವಾಗ ಈ ರೀತಿ ಹೇಳಿ ಆಹುತಿ ಕೊಡುತ್ತೇವೆ: ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ; ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ; ಇಂದ್ರಾಯ ಸ್ವಾಹಾ-ಇಂದ್ರಾಯ ಇದಂ ನ ಮಮ; ಸೂರ್ಯಾಯ ಸ್ವಾಹಾ-ಸೂರ್ಯಾಯ ಇದಂ ನ ಮಮ; ವಾಯವೇ ಸ್ವಾಹಾ-ವಾಯವ ಇದಂ ನ ಮಮ; ವರುಣಾಯ ಸ್ವಾಹಾ-ವರುಣಾಯ ಇದಂ ನ ಮಮ;..ಇತ್ಯಾದಿ.  ಹೀಗೆ ಬೇರೆ ಬೇರೆ ಪ್ರತೀಕದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಯಜ್ಞ. ಇಲ್ಲಿ ಕೃಷ್ಣ ಹೇಳುತ್ತಾನೆ “ನೀವು ಮಾಡುವ ಕ್ರತುವಿನ ನಿಯಾಮಕ ನಾನು" ಎಂದು. ನಾವು ಯಾವ ಪ್ರತೀಕದಲ್ಲಿ ಪೂಜೆ ಮಾಡಿದರೂ ಅದು ಸಲ್ಲುವುದು ಆ ದೇವತೆಯ ಅಂತರ್ಯಾಮಿ ಭಗವಂತನಿಗೆ. ಉದಾಹರಣೆಗೆ ಗಣಹೋಮ, ಚಂಡಿಕಾಹೋಮ, ನವಗ್ರಹಹೋಮ ಇತ್ಯಾದಿ.  ಇಲ್ಲಿ ನಾವು ಯಾವ ದೇವತೆಯ ಪ್ರತೀಕದಲ್ಲಿ ಯಜ್ಞ ಮಾಡಿದರೂ ಕೂಡಾ ಆ ಯಜ್ಞ ಭಗವಂತನಿಗೆ ಸಲ್ಲುತ್ತದೆ ಎನ್ನುವ ಅನುಸಂಧಾನ ನಮ್ಮಲ್ಲಿರಬೇಕು. ಭಗವಂತ ಅನೇಕ ಶಕ್ತಿ ರೂಪದಲ್ಲಿ ಅಭಿವ್ಯಕ್ತನಾದರೂ ಕೂಡ, ಸರ್ವ ನಿಯಾಮಕ ಭಗವಂತ ಒಬ್ಬನೆ. [ನಮಗೆ ಬಂದಿರುವ ಆಪತ್ತಿನ ನಿವಾರಣೆಗಾಗಿ ಜೋತಿಷಿಗಳು ಭಗವಂತನ ಆಯಾ ಶಕ್ತಿ ಪ್ರತೀಕವನ್ನು ಪೂಜಿಸುವಂತೆ ಹೇಳುತ್ತಾರೆ ಹೊರತು, ಭಗವಂತ ಅನೇಕ ಅಲ್ಲ]. ದೇವತೆಯ ಒಳಗಿರುವ ಭಗವಂತ ಪ್ರೀತನಾದಾಗ ಮಾತ್ರ ಅದು ಆ ದೇವತೆಗೂ ಮತ್ತು ಭಗವಂತನಿಗೂ ಸಂದಂತೆ. ಆದ್ದರಿಂದ ಒಂದೊಂದು ದಿನ ಒಂದೊಂದು ದೇವತೆಗೆ ಪ್ರೀತಿಯಾಗುವುದಕ್ಕೊಸ್ಕರ ಕರ್ಮ ಮಾಡುವುದಲ್ಲ. ಸರ್ವಾಂತರ್ಯಾಮಿ ಭಗವಂತನಿಗೆ ನಮ್ಮ ಪೂಜೆ ಮೀಸಲಾಗಿರಬೇಕು. 
ನಮ್ಮ ದೇಹದೊಳಗೆ ತತ್ವಾಭಿಮಾನಿ ದೇವತೆಗಳಿದ್ದಾರೆ. ಅವರನ್ನು ನಿಯಮನ ಮಾಡಿಕೊಂಡು ಆ ಭಗವಂತನಿದ್ದಾನೆ. ಈ ತತ್ವಾಭಿಮಾನಿ ದೇವತೆಗಳು ಭಗವಂತನ ಅನುಗ್ರಹದಿಂದ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದು ಅವರ ಅಂತರ್ಯಾಮಿಯಾದ ಭಗವಂತನನ್ನು ಆರಾದಿಸುವುದು ಯಜ್ಞ.

ನಾವು ನಿತ್ಯ ಪೀಠದಲ್ಲಿ ಮಾಡುವ ಪೂಜೆ ತತ್ವಾಭಿಮಾನಿ ದೇವತೆಗಳನ್ನು ಕುರಿತು ಮಾಡುವ ಯಜ್ಞವಾದರೆ, ಶ್ರಾದ್ಧ- ಪಿತೃದೇವತೆಗಳನ್ನು ಕುರಿತು ಮಾಡುವ ಯಜ್ಞ. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ. ಶ್ರಾದ್ಧ ‘ದೇಹ ತ್ಯಾಗ ಮಾಡಿದ ಜೀವಕ್ಕೆ’ ಎಂದು. ಆದರೆ ಇದು ಸರಿಯಲ್ಲ. ಶ್ರಾದ್ಧ ಸ್ಥೂಲ ದೇಹವನ್ನು ತ್ಯಜಿಸಿ ಸೂಕ್ಷ್ಮ ಶರೀರದಲ್ಲಿರುವ ಜೀವವನ್ನು ನಿಯಂತ್ರಿಸುವ ‘ಪಿತೃದೇವತೆಗಳಿಗೆ’ ಮಾಡುವಂತದ್ದು. ವಿಶೇಷವಾಗಿ ಹತ್ತು ಮಂದಿ ವಿಶ್ವೇದೇವತೆಗಳು(ಕ್ರತು,ದಕ್ಷ, ವಾಸು, ಸತ್ಯ, ಕಾಮ, ಕಾಲ,ಧುರಿ, ಲೋಚನ,ಪುರೂರವ ಆರ್ದ್ರವ); ಇವರಲ್ಲಿ ಪುರೂರವ ಮತ್ತು ಆರ್ದ್ರವರದ್ದು ಪಿತೃಗಣದ ನಿಯಮನ ಮಾಡತಕ್ಕಂತಹ ಖಾತೆ(Portfolio). ಪಿತೃದೇವತೆಗಳ ಗಣ ಹತ್ತು(ನೂರು ಮಂದಿ ಪಿತೃಗಳಲ್ಲಿ ಇವರು ಪ್ರಧಾನರು): ಯಮ, ಸೋಮ, ಕವ್ಯವಾಹ(ಇವರು ಮೂವರು ಪಿತೃಪತಿಗಳು), ಸೋಮಸದರು, ಅಗ್ನಿಷ್ವಾತ್ತರು, ಬಹಿರ್ಷದರು, ಸೋಮಪರು, ಹವಿರ್ಭುಜರು, ಅಜ್ಯಪರು, ಸುಕಾಲಿಗಳು. ನಾವು ಪಿಂಡ ಹಾಕುವುದು ಜೀವದ ಹಸಿವು ನೀಗಲಿಕ್ಕೆ ಅಲ್ಲ. ನಮ್ಮ ಹಿರಿಯರು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದು ಅವರು ಮಾಡಿದ ಕರ್ಮಫಲದಿಂದ ಹೊರತು ನಾವು ಹಾಕಿದ ಶ್ರಾದ್ಧದಿಂದಲ್ಲ. ಶ್ರಾದ್ಧಾ ಏಕೆಂದರೆ ಪಿತೃದೇವತೆಗಳ ಸ್ವಾದೀನದಲ್ಲಿರುವ ಜೀವ ಯಾವುದೋ ದುರಿತದ ಪ್ರಭಾವದಿಂದ ದಾರಿಯಲ್ಲಿ ತಡೆಯನ್ನು  (Road blockers) ಎದುರಿಸಬೇಕಾಬಹುದು. ಆ ಸಮಯದಲ್ಲಿ ಅದನ್ನು ನಿವಾರಣೆ ಮಾಡುವ ಕರ್ಮಾನುಷ್ಠಾನ ಆ ಸೂಕ್ಷ್ಮ ಶರೀರದಲ್ಲಿ ಇರುವುದಿಲ್ಲ. ಅದಕ್ಕೋಸ್ಕರ ಅಂತಹ ಪ್ರತಿಬಂಧಕಗಳಿಂದ ಅವರನ್ನು ಪಾರು ಮಾಡಿ ಮುಂದೆ ಸಾಗಲು ನೆರವು ಕೋರಿ ಮಾಡುವ  ಪಿತೃದೇವತೆಗಳ ಪೂಜೆಯೇ ಶ್ರಾದ್ಧ. ಒಟ್ಟಾರೆ ಇದು ಹಿರಿಯರು ಸತ್ತ ದಿನದ ನೆನಪು, ಅವರಿಗೆ ಕೃತಜ್ಞತೆ ಮತ್ತು ಪಿತೃದೇವತೆಗಳ ಪೂಜೆ.

ಕೃಷ್ಣ ಹೇಳುತ್ತಾನೆ “ಸ್ವಧಾ ಮ್” ಎಂದು. ಮಂತ್ರಗಳು ವಿಳಾಸದಂತೆ, ‘ಸ್ವಾಹ’ ತತ್ವಾಭಿಮಾನಿ ದೇವತೆಗಳಿಗಾದರೆ ‘ಸ್ವಧಾ’ ಪಿತೃದೇವತೆಗಳಿಗೆ. ನನ್ನ ಮುಖೇನವೇ ಶ್ರಾದ್ಧ ಪಿತೃದೇವತೆಗಳಿಗೆ ಸಲ್ಲುವುದು ಎನ್ನುತ್ತಾನೆ ಕೃಷ್ಣ. 
ತತ್ವಾಭಿಮಾನಿದೇವತೆಗಳು ಮತ್ತು  ಪಿತೃದೇವತೆಗಳ ನಂತರ ಮನುಷ್ಯರು. ಮನುಷ್ಯರ ಮುಖ್ಯವಾದ ಆಹಾರ ‘ಓಷಧಿ’. ಫಲ ಕೊಟ್ಟು ಸಾಯುವ ಗಿಡವನ್ನು ಸಂಸ್ಕೃತದಲ್ಲಿ ‘ಓಷಧಿ’ ಎನ್ನುತ್ತಾರೆ. ಆ ಗಿಡದ ಪ್ರಸವವೇ ಅದರ ಸಾವು. ಮನುಷ್ಯ ತಿನ್ನುವ ದವಸದಾನ್ಯ ಎಲ್ಲವೂ ಓಷಧಿಗಳು. ಇಂತಹ ಓಷಧಿಗಳ ಸಮುದಾಯವೇ ಔಷಧಿ. ಕೃಷ್ಣ ಹೇಳುತ್ತಾನೆ “ಅಮ್  ಔಷಧಮ್” ಎಂದು. ನಾವು ತಿನ್ನುವ ದವಸ ಧಾನ್ಯ ಸಲ್ಲುವುದು ಕೂಡಾ ವೈಶ್ವಾನರನಾಗಿ ಒಳಗೆ ಕುಳಿತಿರುವ ಭಗವಂತನಿಗೆ. ಔಷಧ ಕೊಡತಕ್ಕವ, ಅದರಿಂದ ರೋಗ ನಿವಾರಿಸುವವ, ಹಸಿವು ನಿವಾರಿಸಿ ರಕ್ಷಣೆ ಮಾಡುವವ ಭಗವಂತ.

ನಾವು ಬೇರೆ ಬೇರೆ ಮಂತ್ರಗಳಿಂದ ಆಹುತಿಯನ್ನು ಕೊಡುತ್ತೇವೆ. ಈ ಹಿಂದೆ ಹೇಳಿದಂತೆ ಮಂತ್ರ ವಿಳಾಸವಿದ್ದಂತೆ. ಕೊಡುವ ಆಹುತಿ ಎಲ್ಲವೂ ಭಗವಂತನಿಗೆ ಸೇರುವುದಾದರೆ ಬೇರೆಬೇರೆ ವಿಳಾಸವೇಕೆ? ಕೃಷ್ಣ ಹೇಳಿದ “ಬೇರೆ ಬೇರೆ ವಿಳಾಸದಲ್ಲಿರುವ ನನಗೆ” ಎಂದು!   ಭಗವಂತ ಏಕ ಆದರೆ ಆತನ ರೂಪ ಅನೇಕ. ನಾವು ಯಾವ ಮಂತ್ರದಿಂದ ಕಳುಹಿಸಿದರೂ ಕೂಡಾ-ಅದು ಸೇರುವುದು ಎಲ್ಲಾ ಮಂತ್ರದಿಂದ ವಾಚ್ಯನಾದ, ಸರ್ವಶಬ್ದವಾಚ್ಯ ಭಗವಂತನನ್ನು. ಹೀಗೆ ಬೇರೆ ಬೇರೆ ಶಕ್ತಿ ರೂಪವನ್ನು ಬೇರೆ ಬೇರೆ ದೇವತಾ ಪ್ರತೀಕದಲ್ಲಿ ಪೂಜಿಸಿದರೂ ಕೂಡಾ ಪ್ರತಿಯೊಂದು ನಾಮವೂ ಸಹ ಅಂತತಃ ಭಗವಂತನನ್ನೇ ಹೇಳುತ್ತದೆ. ಎಲ್ಲವುದರ ಸಾರವೂ ಭಗವಂತ. ಇದಕ್ಕೆ ಉತ್ತಮ ಉದಾಹರಣೆ ತೆಂಗಿನಕಾಯಿ. ಸಿಪ್ಪೆ ಸಹಿತವಾಗಿರುವ ತೆಂಗಿನಕಾಯಿ ಉರಿಯುವ ಬೆಂಕಿಯಂತೆ; ಸಿಪ್ಪೆಯೊಳಗಿನ ಕಾಯಿ ಬೆಂಕಿಯ ಅಂತರ್ಯಾಮಿ ಅಗ್ನಿ ದೇವತೆಯಂತೆ;  ಚಿಪ್ಪಿನ ಒಳಗಿನ ಕೊಬ್ಬರಿ   ಅಗ್ನಿ ದೇವತೆಯೊಳಗಿನ ಭಗವಂತನಂತೆ. ಇಲ್ಲಿ ನಾವು ಎಲ್ಲವನ್ನೂ ಕರೆಯುವುದು ತೆಂಗಿನಕಾಯಿ ಅಥವಾ ಅಗ್ನಿ ಎಂತಲೆ. ಹೇಗೆ ನಿಜವಾದ ತೆಂಗಿನಕಾಯಿ ಒಳಗಿನ ಸಾರವೋ  ಹಾಗೇ ನಿಜವಾದ ಅಗ್ನಿ ಅಂತತಃ ಅಂತರ್ಯಾಮಿ ಭಗವಂತ. ಈ ಶ್ಲೋಕದಲ್ಲಿ ಕೃಷ್ಣ ಇದನ್ನೇ   “ಅಹಮ್ ಅಗ್ನಿಃ” ಎಂದಿರುವುದು.

ಕೃಷ್ಣ ನಾವು ಆಹುತಿಯಾಗಿ ಕೊಡುವ ಒಂದು ಪ್ರಮುಖ ವಸ್ತುವನ್ನು ಉದಾಹರಣೆಯಾಗಿ ತೆಗೆದುಕೊಂಡು ಹೇಳುತ್ತಾನೆ “ಅಹಮ್ ಏವ ಆಜ್ಯಮ್” ಎಂದು. ಆಜ್ಯ ಎಂದರೆ ತುಪ್ಪ. ಆಜ್ಯದಲ್ಲಿ ದೇವತೆಗಳನ್ನು ತಣಿಸುವ ವಿಶಿಷ್ಟ ಶಕ್ತಿ ಇದೆ. ಆಜ್ಯದಲ್ಲಿ ವಿಶಿಷ್ಟ ಶಕ್ತಿಯಾಗಿ ನಾನಿದ್ದೇನೆ ಎನ್ನುವ ಕೃಷ್ಣ ನಾನೇ ಹೋಮದ ಹವಿ (ಅಹಮ್  ಹುತಮ್) ಎನ್ನುತ್ತಾನೆ.

ಹವಿಸ್ಸು ಎಂದರೆ ಭಗವಂತನಿಗೆ ಅರ್ಪಿಸುವ ಹೋಮ ದ್ರವ್ಯ. ಆ ಹವಿಸ್ಸಿನಲ್ಲಿ ವಿಶೇಷ ಶಕ್ತಿ ಇರುವುದು ಆ ಭಗವಂತನಿಂದ. ನಾವು ಅರ್ಪಿಸುವ ಹವಿಸ್ಸು ಎಂದೂ ವ್ಯರ್ಥವಲ್ಲ. ಅಗ್ನಿಗೆ ಅರ್ಪಿಸಿದ ಹವಿಸ್ಸು ಅಗ್ನಿಯಿಂದ ಹೊರ ಹೊಮ್ಮುವ ಏಳು ಬಣ್ಣಗಳ ಮುಖೇನ ವಾತಾವರಣದಲ್ಲಿನ ಸೂರ್ಯ ಕಿರಣದೊಂದಿಗೆ ಸೇರಿ ಸಮಾಜಕ್ಕೆ ಫಲವನ್ನು ಕೊಡುತ್ತದೆ. 

ಹವಿರ್ಭಾಗವನ್ನು ಸ್ವೀಕರಿಸುವ ಭಗವಂತ ಹವಿರ್ಹರಿಃ . ನಾವು ಯಾವುದೇ ನಾಮವನ್ನುಚ್ಚರಿಸಿ ಹವಿಸ್ಸನ್ನು ಅರ್ಪಿಸಿದರೂ ಅದು ಸೇರುವುದು ಸರ್ವಶಬ್ದ ವಾಚ್ಯನಾದ ಭಗವಂತನನ್ನು. "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಆದ್ದರಿಂದ ಯಾವ ಶಬ್ದವನ್ನು ಹೇಳಿದರೂ ಅದು ಸೇರುವುದು ಅವನನ್ನೇ. ಹೀಗೆ ಹವಿಸ್ಸನ್ನು ಸ್ವೀಕರಿಸಿ ಭಕ್ತರ ಪಾಪವನ್ನು ಪರಿಹರಿಸುವ ಭಗವಂತ ಹವಿರ್ಹರಿಃ
ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದರೆ, ಇಲ್ಲಿ  ಬರುವ  ಒಂದೊಂದು ಶಬ್ದವನ್ನು ಭಗವಂತನಲ್ಲಿ ಅನುಸಂಧಾನ ಮಾಡು ಎನ್ನುವ ಸಂದೇಶವನ್ನು ಕಾಣುತ್ತೇವೆ.

 “ಕ್ರತುಃ ” –ಭಗವಂತನೇ ಕ್ರತು ಶಬ್ದದ ಮುಖ್ಯಾರ್ಥ. 'ಕ್ರತು' ಕ್ರಿಯೆ, ಜ್ಞಾನ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಕ್ರಿಯಾ ಸ್ವರೂಪ, ಜ್ಞಾನ ಸ್ವರೂಪ ಭಗವಂತ  ‘ಕ್ರತುಃ’. ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗು ಅನುಕೂಲತೆ ಕೊಟ್ಟು,  ನಮ್ಮ ಹಿಂದೆ ನಿಂತು, ಕ್ರಿಯಾ ಕಲಾಪಗಳನ್ನು ನಡೆಸುವ, ಜ್ಞಾನ ಸ್ವರೂಪನೂ, ಕರ್ಮದ ಕಟ್ಟಿನಿಂದ ನಮ್ಮನ್ನು ಪಾರು ಮಾಡುವನೂ ಆದ ಭಗವಂತ ‘ಕ್ರತುಃ’.

“ಯಜ್ಞ” -ಯಜ್ಞ ಅಂದರೆ ಎಲ್ಲವನ್ನೂ ತಿಳಿದವನು. ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ ಯಜ್ಞದ ಅಂತರ್ಯಾಮಿ.

ಸ್ವಧಾಃ” ಎಂದರೆ ತನ್ನನ್ನು ತಾನು ಆದರಿಸಿ ನಿಂತ ಸರ್ವ ನಿಯಾಮಕ. 

ಭಗವಂತ   ‘ಔಧಃ’.  ಎಂದರೆ ಸಂಸಾರ ತಾಪದಲ್ಲಿ ಬಿದ್ದು ಒದ್ದಾಡುವವ(ಔಷರು)ರಿಗೆ ಆಸರೆ-ಮೋಕ್ಷ ಪ್ರದ. 
“ಮಂತ್ರಃ” –ಜ್ಞಾನ ಪೂರ್ವಕವಾಗಿ ಅನುಸಂಧಾನ ಮಾಡುವವರನ್ನು ರಕ್ಷಣೆ ಮಾಡುವ ಭಗವಂತ ‘ಮಂತ್ರಃ’.  ಮಂತ್ರ ನಮ್ಮನ್ನು ರಕ್ಷಣೆ ಮಾಡುವುದು ನಾವು ತಿಳಿದು ಪಠಿಸಿದಾಗ ಮಾತ್ರ.[ಇಲ್ಲದಿದ್ದರೆ ಕಿಂಚಿತ್ ಫಲ ಮಾತ್ರ. ಮಹಾ ಫಲದಿಂದ ವಂಚಿತರಾಗುತ್ತೇವೆ].

ಭಗವಂತ ಎಲ್ಲಕ್ಕಿಂತ ದೊಡ್ಡ ವಸ್ತು ಆದ್ದರಿಂದ ಆತ “ಆಜ್ಯಃ”.  

ಚಲಿಸದೇ ಇರುವ ವಸ್ತುವಿಗೆ ಚಲನೆ ಕೊಡುವ ಭಗವಂತ “ಅಗ್ನಿಃ”.

ಎಲ್ಲ ಭಕ್ತರಿಂದ ಆಹುತನಾದ್ದರಿಂದ ಭಗವಂತ  “ಹುತಃ”. 

ಅಧ್ಯಾಯ - 09: ಶ್ಲೋಕ  17

ಪಿತಾSಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ ।

ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ      ॥೧೭॥

ಪಿತಾ ಮ್ ಅಸ್ಯ ಜಗತಃ  ಮಾತಾ ಧಾತಾ ಪಿತಾಮಹಃ 
ವೇದ್ಯಮ್  ಪವಿತ್ರಮ್ ಓಂಕಾರಃ  ಋಕ್ ಸಾಮ ಯಜುಃ ಏವ  ಚ

ನಾನು ಈ ಜಗದ ತಂದೆ, ತಾಯಿ, ಪೋಷಕ ಮತ್ತು ಅಜ್ಜ-ಮುತ್ತಜ್ಜ.[ಸಲಹುವುದರಿಂದ ‘ಪಿತೃ’. ಅರಿಯುವುದರಿಂದ ‘ಮಾತೃ’. ಬೆಳೆಯುವುದರಿಂದ ‘ಧಾತೃ’. ತಂದೆಗಿಂತಲೂ ಹಿರಿಯನಾದ್ದರಿಂದ ‘ಪಿತಾಮಹ’] ಜಗವೆಲ್ಲ ತಿಳಿಯಬೇಕಾದವನು. ಜಗಕೆ ಪಾವನನಾದವನು. ಓಂಕಾರದಿಂದ, ಋಗ್ವೇದ-ಸಾಮವೇದ-ಯಜುರ್ವೇದಗಳಿಂದ ವಾಚ್ಯನಾದವನು. [‘ಓಂ’ ಎಂದು ಕರೆಸಿಕೊಳ್ಳುವುದರಿಂದ ‘ಓಂಕಾರ’. ಪೂಜನೀಯನಾದ್ದರಿಂದ ‘ಋಕ್’. ಸಮಾನನಾದ್ದರಿಂದ ‘ಸಾಮ’. ಯಜ್ಞಗಳಿಂದ ಆರಾಧ್ಯನಾದ್ದರಿಂದ ‘ಯಜುಸ್’]

ಬದುಕಿನ ಸಂಬಂಧಗಳಿಗೆ ಸಂಬಂಧಿಸಿ ಭಗವಂತನ ಉಪಾಸನೆಯನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ “ಪಿತಾ ಮ್ ಅಸ್ಯ ಜಗತಃ  ಮಾತಾ ಧಾತಾ ಪಿತಾಮಹಃ” ಎಂದು. ಅಂದರೆ “ನಾನೆ ತಂದೆ, ನಾನೆ ತಾಯಿ, ನಾನೆ ಧಾರಕ ಮತ್ತು ಪಿತಾಮಹ”. ನಮಗೆ ತಿಳಿದಂತೆ ಒಬ್ಬರು ತಂದೆಯಾಗಬಹುದು ಅಥವಾ ತಾಯಿಯಾಗಬಹುದು. ಆದರೆ ಒಬ್ಬರೇ ತಾಯಿ ಮತ್ತು ತಂದೆ ಎರಡೂ ಆಗುವುದು ಸಾಧ್ಯವಿಲ್ಲ. ಇದು ಭಗವಂತನಲ್ಲಿ ಮಾತ್ರ ಸಾಧ್ಯ. ಭಗವಂತ ಎಲ್ಲರಿಗೂ ಅಪ್ಪ ಮತ್ತು ಎಲ್ಲರಿಗೂ ಅಮ್ಮ. ತಂದೆಯೊಳಗೆ ‘ತಂದೆ’ಯಾಗಿ, ತಾಯಿಯೊಳಗೆ ‘ತಾಯಿ’ಯಾಗಿ ತುಂಬಿರುವ ಶಕ್ತಿ ಆ ಭಗವಂತ. ಇದನ್ನು ನಾವು ಈ ರೀತಿ ಸ್ತುತಿಸುತ್ತೇವೆ:  
     

ತ್ವಮೇವ ಮಾತಾಚ ಪಿತಾ ತ್ವಮೇವ

ತ್ವಮೇವ ಬಂದುಶ್ಚ ಸಖಾ ತ್ವಮೇವ

ತ್ವಮೇವ ವಿದ್ಯಾ ದ್ರವಿಣಂ ತ್ವಮೇವ

ತ್ವಮೇವ ಸರ್ವಂ ಮಮ ದೇವ ದೇವ

ಗಾಯತ್ರಿಯಲ್ಲಿ ಮೂಲತಃ ಈ ಅನುಷ್ಠಾನವಿದೆ. “ತತ್ಸವಿತುರ್ವರೇಣ್ಯಂ ಭರ್ಗಃ” ಎನ್ನುವಲ್ಲಿ ಭಗವಂತ ಜಗತ್ತನ್ನು ಸೃಷ್ಟಿ ಮಾಡಿದ ತಂದೆ ಎನ್ನುವ ಅರ್ಥವಿದೆ.  ‘ಸವಿತ’. ಎಂದರೆ ಜಗತ್ತನ್ನು ಹೆತ್ತವನು ಎಂದರ್ಥ. 

ಪ್ರಳಯಕಾಲದಲ್ಲಿ ಜಗತ್ತನ್ನು ತನ್ನ ಉದರದಲ್ಲಿ ಧರಿಸಿ, ಸೃಷ್ಟಿ ಕಾಲದಲ್ಲಿ ಅದನ್ನು ಭಗವಂತ ಹೆತ್ತ. ಹೆತ್ತು ಹೊತ್ತು ಸಲಹುವವಳು ‘ತಾಯಿ’-ಆದ್ದರಿಂದ ಭಗವಂತ ತಾಯಿಯೂ ಹೌದು. ಅಷ್ಟೇ ಅಲ್ಲ, ಪ್ರತಿಯೊಬ್ಬ ತಾಯಿಯೊಳಗಿದ್ದು ಆ ತಾಯಿಯ ತಾಯ್ತನವನ್ನು ಜಾಗೃತಗೊಳಿಸಿ, ತಾಯಿಯೊಳಗೆ ತಾಯಿಯಾಗಿ ತುಂಬಿರುವ ಭಗವಂತ, ಎಲ್ಲ ತಂದೆಯಂದಿರ ಒಳಗೂ ಇದ್ದು, ಅವರಲ್ಲಿ ಪಿತೃತ್ವ ಜಾಗೃತಗೊಳಿಸುವ ತಂದೆ. ಪಿತಾ ಅನ್ನುವ ಪದದ ನಿರ್ವಚನ ನೋಡಿದರೆ ‘ತಂದೆ’ ಅನ್ನುವುದು ಕೇವಲ ರೂಢಿ ಅರ್ಥ. ಶ್ರುತಿಯಲ್ಲಿ ಹೀಗೆ ಹೇಳುತ್ತಾರೆ:

ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|

ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ||

ಇಲ್ಲಿ ಪಿತಾ ಮತ್ತು ಜನಕನನ್ನು ಬೇರೆ ಬೇರೆಯಾಗಿ ಹೇಳುತ್ತಾರೆ. ಅವನು ನಮ್ಮ ತಂದೆ, ಅವನು ನಮ್ಮ ಜನಕ. ಅಂದರೆ: ಹುಟ್ಟಿಸಿದವನೂ ಅವನೇ, ರಕ್ಷಕನೂ ಅವನೆ.

ಲೋಕದಲ್ಲಿ ಗಂಡು ಹೆಣ್ಣಲ್ಲ, ಹೆಣ್ಣು ಗಂಡಲ್ಲ. ಆದರೆ ಭಗವಂತ ಎಲ್ಲರ ಬಿಂಬರೂಪ. ಆದ್ದರಿಂದ ಭಗವಂತ ಉಭಯಲಿಂಗ-ಆತ ಸ್ತ್ರೀಪುಂಸಕ. ಆದರೆ ಆತನಲ್ಲಿ ಸ್ತ್ರೀಯಲ್ಲಿರುವ ದೋಷವಾಗಲಿ, ಪುರುಷನಲ್ಲಿರುವ ದೋಷವಾಗಲೀ ಇಲ್ಲ. ಆದ್ದರಿಂದ ಆತ ಲಿಂಗಾತೀತಕೂಡಾ ಹೌದು.[ಇದನ್ನು ನಾವು ಭಗವಂತನ ನಾಮಾವಳಿಗಳಲ್ಲಿ ಕಾಣಬಹುದು]. 
ಭಗವಂತನೇ ‘ಧಾತಾ’. ಆತ ಅನಾಧಿ ಅನಂತಕಾಲದಲ್ಲಿ ಈ ಜಗತ್ತಿನ ಧಾರಣೆ ಮತ್ತು ಪೋಷಣೆ ಮಾಡುವವ. ಚತುರ್ಮುಖ ಬ್ರಹ್ಮನೊಳಗಿದ್ದು, ಪಿತಾಮಹ ಶಬ್ದ ವಾಚ್ಯನಾಗಿರುವವ ಭಗವಂತ.

ಇಲ್ಲಿ ಕೃಷ್ಣ ಕೇವಲ ಮುಖ್ಯವಾದ ಸಂಬಂಧವನ್ನು ಮಾತ್ರ ಹೇಳಿದ. ಇದರರ್ಥ ಎಲ್ಲಾ ಸಂಬಂಧದಲ್ಲಿಯೂ ಆ ಭಾವವನ್ನು ಜಾಗೃತಗೊಳಿಸುವವ ಅಂತರ್ಯಾಮಿ ಭಗವಂತ ಎಂಬುದು. ಪ್ರತಿಯೊಂದು ಸಂಬಂಧದ ಹಿಂದೆ ಭಗವಂತನ ಸಂಬಂಧವಿದೆ. ಆದರೆ ನಮಗೆ ಆ ಕಲ್ಪನೆ ಇರುವುದಿಲ್ಲ. ಆಯಾ ಜೀವದ ಪ್ರಾರಾಬ್ಧ ಕರ್ಮಕ್ಕನುಗುಣವಾಗಿ ಸಂಬಂಧಗಳು. ಅಲ್ಲಿರುವ ಪ್ರೀತಿ, ಮಮತೆ, ಶತ್ರುತ್ವ ಎಲ್ಲವೂ ಭಗವಂತನ ಕಾರ್ಯಕ್ರಮ. ಇದನ್ನು ನಾವು ತಿಳಿದಾಗ ನಮ್ಮ ಜೀವನ ಸುಗಮ. ಒಬ್ಬರು ನಮ್ಮನ್ನು ದ್ವೇಷಿಸಿದಾಗ ಕುಗ್ಗುವ ಅಗತ್ಯವಾಗಲೀ, ಒಬ್ಬರು ನಮ್ಮನ್ನು ಪ್ರೀತಿಸಿದಾಗ ಹಿಗ್ಗುವ ಅಗತ್ಯವಾಗಲೀ ಇಲ್ಲ. ಎಲ್ಲವೂ ನಮ್ಮ ಜೀವಸ್ವಭಾವ ಮತ್ತು ಪ್ರರಾಬ್ಧಕರ್ಮಕ್ಕನುಗುಣವಾಗಿ ಭಗವಂತನ ಲೀಲೆ ಎನ್ನುವ ಎಚ್ಚರ ಇಲ್ಲಿ ಬಹಳ ಮುಖ್ಯ. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಭಾಗವತದಲ್ಲಿ ಬರುವ ವೃತ್ರ ಮತ್ತು ಇಂದ್ರನ ಯುದ್ಧದ ಕಥೆ: ಇಂದ್ರನನ್ನು ಕೊಲ್ಲಲು ಹೊರಟವೃತ್ರನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಒಂದು ಸ್ವರ ತಪ್ಪಾಗಿದ್ದರಿಂದ-ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು, ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು. ವೃತ್ರ ಮತ್ತು ಇಂದ್ರರ ಯುದ್ಧದಲ್ಲಿ ಇಂದ್ರ ಮಹಾಜ್ಞಾನಿಯಾದ ವೃತ್ರನನ್ನು ಕೊಲ್ಲಲು ಹಿಂದೇಟು ಹಾಕುತ್ತಾನೆ. ಆಗ ವೃತ್ರ ಹೇಳುತ್ತಾನೆ “ಸಂಕೋಚ ಪಡಬೇಡ ಇಂದ್ರ, ನನ್ನನ್ನು ಕೊಂದುಬಿಡು. ಏಕೆಂದರೆ ಈ ನಾಟಕದಲ್ಲಿ ಭಗವಂತ ನಿನಗೆ ಕೊಲ್ಲುವ ಪಾತ್ರವನ್ನೂ ಮತ್ತು ನನಗೆ ಸಾಯುವ ಪಾತ್ರವನ್ನೂ ಕೊಟ್ಟಿದ್ದಾನೆ. ನಾವು ಅದನ್ನು ಅಭಿನಯಿಸಬೇಕು ಅಷ್ಟೇ” ಎಂದು. ಈ ರೀತಿ ಎಚ್ಚರವಿದ್ದರೆ ನಮಗೆ ಇನ್ನೊಬ್ಬರು ಬೈದಾಗ ಅಥವಾ ದ್ವೇಶಿಸಿದಾಗ ಬೇಸರವಾಗುವುದಿಲ್ಲ. ಎಲ್ಲವೂ ಭಗವಂತನ ವ್ಯವಸ್ಥೆ ಎಂದು ತಿಳಿದಾಗ ಎಲ್ಲವೂ ಏಕರೂಪವಾಗಿ ಕಾಣುತ್ತದೆ. ದ್ವೇಷ ಮತ್ತು ಪ್ರೀತಿ ಸಹಜವಾಗಿ ಬಿಡುತ್ತದೆ. ಸಂಬಂಧ ಕಳಚಿದಾಗ ಕುಗ್ಗುವುದಾಗಲೀ, ಬೆಸೆದಾಗ ಹಿಗ್ಗುವುದಾಗಲೀ ಇರುವುದಿಲ್ಲ. ಇದು ಬಹಳ ಎತ್ತರದ ಸ್ಥಿತಿ.

ಒಟ್ಟಿನಲ್ಲಿ ಕೃಷ್ಣ ಇಲ್ಲಿ ಹೇಳಿರುವ ವಿಚಾರವೆಂದರೆ: ಎಲ್ಲಾ ಸಂಬಂಧದ ಹಿಂದೆ ಇರುವವನು ಆ ಭಗವಂತ. ಎಲ್ಲರ ಒಳಗೂ ‘ಎಲ್ಲರೂ’ ಆಗಿ ಆತ ತುಂಬಿದ್ದಾನೆ. ಒಂದೊಂದು ರೂಪದಲ್ಲಿ, ಅವರವರಲ್ಲಿ, ಆಯಾ ಕ್ರಿಯೆಗಳನ್ನು ಮಾಡಿಸುತ್ತಾನೆ. ಇದು ನಾವು ಅನುಸಂಧಾನ ಮಾಡಬೇಕಾದ ವಿಜ್ಞಾನ.

ಕ್ರಿಯೆ, ಸಂಬಂಧಗಳನ್ನು ವಿವರಿಸಿದ ಕೃಷ್ಣ ಈಗ ಜ್ಞಾನದ ಬಗ್ಗೆ ವಿವರಿಸುತ್ತಾನೆ.  ಕೃಷ್ಣ ಹೇಳುತ್ತಾನೆ “ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ” ಎಂದು. ನಾಮಾತ್ಮಕವಾದ ಈ ಪ್ರಪಂಚದ ಎಲ್ಲ ನಾಮಗಳ ಮೂಲ ‘ಓಂ’. ಕೃಷ್ಣ ಹೇಳುತ್ತಾನೆ: “ನಾನು ಓಂಕಾರ” ಎಂದು. ಪ್ರಪಂಚದಲ್ಲಿನ ಎಲ್ಲಾ ಶಬ್ದವೂ ಹುಟ್ಟಿದ್ದು ಓಂಕಾರದಿಂದ. ಆದ್ದರಿಂದ ಭಗವಂತ ಸರ್ವಶಬ್ದವಾಚ್ಯ. ಸಂಸ್ಕೃತದಲ್ಲಿನ ಎಲ್ಲಾ ಶಬ್ದಗಳೂ ಕೂಡಾ ಓಂಕಾರದಿಂದ ಆವಿರ್ಬಾವಗೊಂಡ ಶಬ್ದಗಳು. ಅದು ಹೇಗೆಂದು ನೋಡೋಣ:

ವೈದಿಕವಾಙ್ಮಯದ ಮೂಲಾಕ್ಷರವಾದ ಓಂಕಾರದಲ್ಲಿ ಎಂಟು ಅಕ್ಷರಗಳು: ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಇದರಿಂದ ವ್ಯಕ್ತವಾದದ್ದು ನಾರಾಯಣಾಷ್ಟಾಕ್ಷರ: ‘ಓಂ ನಮೋ ನಾರಾಯಣಾಯ’.  ಓಂಕಾರದ ಎಂಟು ಮೂಲವರ್ಣಗಳಿಂದ ಅಕ್ಷರ ಮಾಲಿಕೆಯ ಎಂಟು ವರ್ಗಗಳು ರೂಪುಗೊಂಡವು:

೧. ಸ್ವರಾಕ್ಷರಗಳು: ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
೨. ಕ ವರ್ಗ: ಕ ಖ ಗ ಘ ಙ
೩. ಚ ವರ್ಗ: ಚ ಛ ಜ ಝ ಞ
೪. ಟ ವರ್ಗ : ಟ ಠ ಡ ಢ ಣ
೫. ತ ವರ್ಗ: ತ ಥ ದ ಧ ನ
೬. ಪ ವರ್ಗ: ಪ ಫ ಬ ಭ ಮ
೭.ಅಂತಸ್ಥಾಕ್ಷರಗಳು: ಯ ರ ಲ ವ
೮. ಕೊನೆಯ ಆರು ಅಕ್ಷರಗಳು: ಶ ಷ ಸ ಹ ಳ ಕ್ಷ

ಒಟ್ಟು 'ಅ' ದಿಂದ 'ಕ್ಷ' ತನಕ ಐವತ್ತೊಂದು ಅಕ್ಷರಗಳು(ಅ ದಿಂದ ಕ್ಷ ತನಕ ಆದ್ದರಿಂದ ಅ-ಕ್ಷ-ರ). ಇಡೀ ಪ್ರಪಂಚದಲ್ಲಿರುವ ಎಲ್ಲಾ ಶಬ್ದಗಳೂ ಈ ಅಕ್ಷರಗಳ ಸಂಯೋಜನೆ. ಎಲ್ಲಾ ಶಬ್ದಗಳೂ ಓಂಕಾರದಿಂದ ಹುಟ್ಟಿರುವುದರಿಂದ ಓಂಕಾರ ವಾಚ್ಯ ಭಗವಂತ ಸರ್ವ ಶಬ್ದವಾಚ್ಯ. ಆದ್ದರಿಂದ ಎಲ್ಲಾ ಶಬ್ದಗಳ ಮೂಲಭೂತ ಪವಿತ್ರ ಅರ್ಥ ಭಗವಂತನನ್ನು ಹೇಳುತ್ತದೆ.  ದೋಷವನ್ನು ಹೇಳುವ ಪದಗಳೂ ಕೂಡಾ ಭಗವಂತನಲ್ಲಿ ಕೇವಲ ಪವಿತ್ರ ಅರ್ಥವನ್ನು ಮಾತ್ರ ಹೇಳುತ್ತವೆ. 

ಉದಾಹರಣೆಗೆ ‘ದುಃಖಿ’. ಇದು ಭಗವಂತನಲ್ಲಿ ಹೇಳುವಾಗ ‘ದುಃಖದ ಒಡೆಯ ಎನ್ನುವ ಅರ್ಥವನ್ನು ಕೊಡುತ್ತದೆ.   
ಐವತ್ತೊಂದು ಅಕ್ಷರಗಳಿಂದ(ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಗಳೂ ಐವತ್ತೊಂದು:

೧. ಅಜ, ೨. ಆನಂದ, ೩. ಇಂದ್ರ,  ೩. ಈಶ, ೪. ಉಗ್ರ, ೫. ಊರ್ಜ, ೭. ಋತಂಭರ, ೮. ೠಘ, ೯. ಲ್ ಶ, ೧೦. ಲ್ೕಜಿ, ೧೧. ಏಕಾತ್ಮ , ೧೨. ಐರ, ೧೩. ಓಜೋಭೃತ್, ೧೪. ಔರಸ, ೧೫. ಅಂತ, ೧೬. ಅರ್ಧಗರ್ಭ, ೧೭. ಕಪಿಲ, ೧೮. ಖಪತಿ, ೧೯. ಗರುಡಾಸನ, ೨೦. ಘರ್ಮ, ೨೧. ಙಸಾರ ೨೨. ಚಾರ್ವಾಂಗ, ೨೩. ಛಂದೋಗಮ್ಯ, ೨೪. ಜನಾರ್ದನ, ೨೫. ಝೂಟಿತಾರಿ, ೨೬. ಞಮ, ೨೭.ಟಂಕಿ, ೨೮.ಠಕಲ, ೨೯. ಡರಕ, ೩೦.ಢರಿ, ೩೧. ಣಾತ್ಮ, ೩೨. ತಾರ, ೩೩. ಥಭ, ೩೪. ದಂಡಿ, ೩೫. ಧನ್ವಿ, ೩೬. ನಮ್ಯ, ೩೭. ಪರ, ೩೮. ಫಲಿ, ೩೯. ಬಲಿ, ೪೦. ಭಗ, ೪೧. ಮನು, ೪೨. ಯಜ್ಞ, ೪೩. ರಾಮ, ೪೪. ಲಕ್ಷ್ಮೀಪತಿ, ೪೫. ವರ, ೪೬. ಶಾಂತಸಂವಿತ್, ೪೭. ಷಡ್ಗುಣ, ೪೮. ಸಾರಾತ್ಮ, ೪೯. ಹಂಸ, ೫೦. ಳಾಳುಕ, ೫೧. ನೃಸಿಂಹ[ನೃಹರ್ಯಕ್ಷ].

ಓಂಕಾರದ ಮೂಲ ಮೂರಕ್ಷರ ಅ-ಉ-ಮ ಪದ್ಯ-ಗದ್ಯ-ಗಾನ ರೂಪದ ಮೂರು ವೇದವನ್ನು ಮತ್ತು ವೇದ ಪ್ರತಿಪಾದ್ಯ ಭಗವಂತನನ್ನು ಹೇಳುತ್ತವೆ. ಕಾರ ಋಗ್ವೇದಕ್ಕೆ, ‘ಕಾರ ಯಜುರ್ವೇದಕ್ಕೆ ಮತ್ತು ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |..."  ಎಂದು  ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥ ಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ ಇಷೇ ತ್ವೋರ್ಜೆ ತ್ವಾ …” ಎಂದು ಕಾರದಿಂದ ಪ್ರಾರಂಭವಾಗಿ“……..ಸಮುದ್ರೋ ಬಂಧುಃ ಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ಕಾರ ಮತ್ತು ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ ಅಗ್ನ ಆ ಯಾಹಿ ………” ಎಂದು ಕಾರದಿಂದ ಆರಂಭವಾಗಿ “……

ಬ್ರ್ಹಸ್ಪತಿರ್ದಧಾತು ಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ  ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ  ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ  ಓಂಕಾರ ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ. ಈ ಕಾರಣದಿಂದ ಓಂಕಾರ ಭಗವಂತನನ್ನು ನಾವು ಕರೆಯಲು ಬಳಸುವ ಅವನ ವಿಶೇಷ(Exclusive)ನಾಮ.

ಓಂಕಾರ ವಿಸ್ತೃತವಾದಾಗ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರಿ, ಗಾಯತ್ರಿ ವಿಸ್ತಾರವಾಗಿ ಕುರುಡ ಸೂಕ್ತ ನಂತರ ಮೂರು ವೇದಗಳು, ಅಲ್ಲಿಂದ ಸಮಸ್ತ ವೇದಗಳು. ಹೀಗೆ ಪ್ರಣವದಲ್ಲಿ, ವ್ಯಾಹೃತಿಯಲ್ಲಿ, ಪುರುಷ ಸೂಕ್ತದಲ್ಲಿ, ಸಮಸ್ತವೇದಗಳಲ್ಲಿ ಭಗವಂತ ನೆಲೆಸಿದ್ದಾನೆ. ಓಂಕಾರದ ಬಗ್ಗೆ ಅಧ್ಯಾಯ ಏಳರಲ್ಲಿ(ಶ್ಲೋಕ -೦೮) ವಿಶೇಷವಾಗಿ ವಿವರಿಸಲಾಗಿದೆ. 

ವೇದದ ಶಬ್ದಗಳಿಂದಲೇ ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ದದಲ್ಲೂ ಎಲ್ಲಾ ಲೌಕಿಕ ನಾದದಲ್ಲೂ  ತುಂಬಿದ ಭಗವಂತ, ಆಕಾಶದಲ್ಲಿ ಅನಂತ ಶಬ್ದಗಳನ್ನೂ, ಅನಂತ ನಾದಗಳನ್ನು ಸೃಷ್ಟಿ ಮಾಡಿದ. ನಮಗೆ ಶಬ್ದದಿಂದ ಅನಂತ ಅನುಭವವನ್ನು ಕೊಟ್ಟು, ಆ ಶಬ್ದವನ್ನು ಗ್ರಹಿಸುವ ಮತ್ತು ಗ್ರಹಿಸಿ ಪುನರುಚ್ಛರಿಸುವ ವಿಶೇಷ ಶಕ್ತಿಯನ್ನು ಕರುಣಿಸಿದ. ಜ್ಞಾನದ ಮೂಲಕ ಈ ಶಬ್ದ ನಾಮಕ ಭಗವಂತನನ್ನು ತಿಳಿಯುವ ವಿಶೇಷ ಶಕ್ತಿ ಮಾನವನಿಗೆ ಭಗವಂತನ ವಿಶೇಷ ಕೊಡುಗೆ. 
ಭಗವಂತ ‘ಋಕ್’: ಯಾವುದರಿಂದ ನಾವು ಭಗವಂತನನ್ನು ಅರ್ಚನೆ ಮಾಡುತ್ತೇವೆ ಅದು ಋಕ್. 

ಅದು ಮಂತ್ರಗಳು. ಯಾರು ಅರ್ಚಿಸಲ್ಪಡುತ್ತಾನೋ ಅವನು ಋಕ್ ನಾಮಕ ಭಗವಂತ. ಎಲ್ಲಾ ಮಂತ್ರಗಳಿಂದ ಅರ್ಚಿಸಲ್ಪಡುವವ-ಸ್ತುತಿಗೆ ಪಾತ್ರನಾದ ಭಗವಂತ ‘ಋಕ್’
ಭಗವಂತ ‘ಸಾಮಃ’: ಎಲ್ಲವನ್ನು ಸಮೀಕರಿಸಿದವನು. ತನ್ನ ಎಲ್ಲ ರೂಪದಲ್ಲಿ ಜ್ಞಾನಾನಂದಾದಿ ಗುಣಗಳಿಂದ ಸಮನಾದ್ದರಿಂದ ಮತ್ತು ಅವರವರ ಯೋಗ್ಯತೆಗೆ ಸಮನಾಗಿ ಜೀವನ ಕೊಡುವ ಭಗವಂತ ‘ಸಾಮಃ’. 
ಭಗವಂತ ‘ಯಜುಸ್’: ಎಲ್ಲ ಯಾಗಗಳಿಂದ ಹೊಮಿಸಲ್ಪಡುವ, ವೇದಗಳಲ್ಲಿ ಸನ್ನಿಹಿತನಾಗಿರುವ ಸರ್ವಶಬ್ದವಾಚ್ಯ ಭಗವಂತ ‘ಯಜುಸ್’.

ಅಧ್ಯಾಯ - 09: ಶ್ಲೋಕ  18

ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್        ।

ಪ್ರಭವಃ ಪ್ರಳಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್       ॥೧೮॥

ತಿಃ ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಮ್  ಸುಹೃತ್    
ಪ್ರಭವಃ ಪ್ರಯಃ ಸ್ಥಾನಮ್  ನಿಧಾನಮ್  ಬೀಜಮ್ ಅವ್ಯಯಮ್-

ಮುಕ್ತಿಗಾಗಿ ತಿಳಿಯಬೇಕಾದವನು. ಎಲ್ಲ ಹೊಣೆಯನ್ನು ಹೊತ್ತವನು. ಎಲ್ಲದರ ಒಡೆಯ. ಎಲ್ಲವನ್ನು ನೇರ ಕಾಣಬಲ್ಲವನು. ಎಲ್ಲರ ನೆಲೆ. ಮುಕ್ತರಿಗು ಆಸರೆ. ಅನಿಮಿತ್ತ ಬಂಧು. ಸೃಷ್ಟಿ-ಸ್ಥಿತಿ-ಪ್ರಳಯಗಳಿಗೆ ಕಾರಣ. ಪ್ರಳಯದಲ್ಲಿ ಜಗವನ್ನು ಬಸಿರಲ್ಲಿ ಹೊತ್ತವನು. ಮತ್ತೆ ಜಗದ ಅಭಿವ್ಯಕ್ತಿಗೆ ಕಾರಣನಾದವನು. ಅಳಿವಿರದವನು.

ಸಂಬಂಧಗಳ ಬಗ್ಗೆ ಹಿಂದೆ ಹೇಳಿದ್ದ ಕೃಷ್ಣ ಇಲ್ಲಿ ನಾನಾ ವಿಧದ ಅನುಬಂಧಗಳನ್ನು ಹೇಳುತ್ತಾನೆ. ಬೇರೆಬೇರೆ ರೀತಿಯಾಗಿ ಸಮಾಜದಲ್ಲಿ ಒಬ್ಬರಿಂದ ಒಬ್ಬರು ನೆರವು ಪಡೆಯುತ್ತಾರೆ. ರಾಜನಿಂದ ರಕ್ಷಣೆ, ಆಪತ್ಕಾಲದಲ್ಲಿ ಆಶ್ರಯ, ಕಷ್ಟದಲ್ಲಿರುವವನನ್ನು ಸಂತೈಸುವುದು, ಗೆಳೆತನ ಇತ್ಯಾದಿ ಅನುಬಂಧಗಳು. ಇವೆಲ್ಲವೂ ಭಗವಂತನ ಧರ್ಮ ಎನ್ನುತ್ತಾನೆ ಕೃಷ್ಣ.

ಯಾರೂ ನೆಲೆಯೇ ಇಲ್ಲ, ಬದುಕುವುದಕ್ಕೆ ಅವಕಾಶವೇ ಇಲ್ಲ ಅನ್ನುವಾಗ ‘ನಾನಿದ್ದೇನೆ’ ಎಂದು ರಕ್ಷಣೆ ಮಾಡುವವರನ್ನು ‘ಗತಿ’ ಎನ್ನುತ್ತಾರೆ. ವಾಸ್ತವವಾಗಿ ಗತಿ ಎಂದರೆ ಕೊನೆಯ ಗತಿ. ಸಂಸಾರದಲ್ಲಿ ಮಾತ್ರ ಅಲ್ಲ ಮೊಕ್ಷದಲ್ಲೂ ಆಶ್ರಯವಾಗಿರುವ ಭಗವಂತ ಗತಿಃ. ಆತನೇ ಸದ್ಗತಿ, ತಪ್ಪು ಮಾಡಿದಾಗ ಆತನೇ ದುರ್ಗತಿ ಕೂಡಾ. ಎಲ್ಲ ಹೊಣೆಯನ್ನು ಹೊತ್ತು, ಪ್ರಪಂಚದಲ್ಲಿ ಪ್ರತಿಯೊಬ್ಬರು ಏನು ಮಾಡುತ್ತಾರೆ, ಅವರ ಒಳಿತು ಕೆಡುಕುಗಳೇನು ಎಂದು ನೋಡಬಲ್ಲ ಪ್ರಭು ಭಗವಂತ. ಆತ ನಮ್ಮ ಅಂತರಂಗ ಬಹಿರಂಗ ಎಲ್ಲವನ್ನೂ ಬಲ್ಲವ. ಆತ ಎಲ್ಲೆಡೆ ತುಂಬಿ ಎಲ್ಲವನ್ನೂ ಕಾಣಬಲ್ಲ ನಿಜವಾದ ಸಾಕ್ಷಿ. 
ಮುಂದುವರಿದು ಕೃಷ್ಣ ಹೇಳುತ್ತಾನೆ “ಅಹಮ್ ನಿವಾಸಃ” ಎಂದು. ಈಶಾವಾಸ್ಯೋಪನಿಷತ್ತಿನಲ್ಲಿ ಹೇಳುವಂತೆ:

ಈಶಾವಾಸ್ಯಂ ಇದಂ ಸರ್ವಂ ಯತ್ ಕಿಂ ಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭೂಂಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್|

ನಾವು ವಾಸ ಮಾಡುತ್ತಿರುವುದೇ ಭಗವಂತನ ಮನೆಯಲ್ಲಿ. ಈ ವಿಶ್ವವೆಂಬ ಮನೆಯನ್ನು ನಿರ್ಮಿಸಿ, ಅದರಲ್ಲಿ ನಮಗೆ ಆಶ್ರಯ ಕೊಟ್ಟು, ನಮಗೆ ಬದುಕಲು ಬೇಕಾದ ವ್ಯವಸ್ಥೆ ಮಾಡಿದ ಭಗವಂತ ನಿವಾಸಃ. ಆತ ಎಲ್ಲರಿಗೂ ಆಸರೆ. ಇಂತಹ ಭಗವಂತ ನಮಗೆ ಆಪತ್ಕಾಲದಲ್ಲಿ ರಕ್ಷಣೆ(ಶರಣ) ಕೊಡುವ ಆತ್ಮೀಯ ಗೆಳೆಯ(ಸುಹೃತ್). 

ಗೆಳೆಯರಲ್ಲಿ ಎರಡು ವಿಧ. ಸಖ ಮತ್ತು ಸುಹೃತ್. ‘ಸಖ’ ಎಂದರೆ ಒಡನಾಡಿ. ಯಾವಾಗಲೂ ಜೊತೆಗಿರುವವ. ಸುಹೃತ್ ಎಂದರೆ ದೂರದಲ್ಲಿರಲಿ ಹತ್ತಿರವಿರಲಿ ನಮ್ಮ ಹೃದಯಕ್ಕೆ ಸ್ಪಂದಿಸಿ ನಮ್ಮ ಹಿತಚಿಂತಕನಾಗಿರುವವ. ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿಯಾಗಿರುವ ಸಖ ಮತ್ತು ನಮ್ಮ  ಹೃದಯದ ಕೂಗಿಗೆ ಸದಾ ಸ್ಪಂದಿಸುವ ಸುಹೃತ್. 
ಅನುಬಂಧವನ್ನು ಹೇಳಿದ ಕೃಷ್ಣ ಮುಂದೆ ಮನುಷ್ಯ ಶಕ್ತಿಯನ್ನು ಬಿಟ್ಟು ದೇವತಾ ಶಕ್ತಿಯನ್ನು ವಿವರಿಸುತ್ತಾನೆ. ಹೇಳುತ್ತಾನೆ “ಪ್ರಭವಃ ಪ್ರಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್” ಎಂದು.  ನಮ್ಮಲ್ಲಿ ಕೆಲವರು ತಿಳಿದಿದ್ದಾರೆ ಸೃಷ್ಟಿಕರ್ತ -ಬ್ರಹ್ಮ, ಸ್ತಿತಿ-ವಿಷ್ಣು ಮತ್ತು ಸಂಹಾರ-ಶಿವ ಎಂದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ನಾನೇಪ್ರಭವಃ- ಪ್ರಯಃ-ಸ್ಥಾನಂ” ಎಂದು. ಜಗತ್ತಿನ ಸೃಷ್ಟಿಗೆ ಮೂಲ ಕಾರಣ, ಸೃಷ್ಟಿಯ ಕೊನೆಯಲ್ಲಿ ಈ ಜಗತ್ತು ನಾಶವಾಗಲು, ಮತ್ತು ಸೃಷ್ಟಿಯಿಂದ ಸಂಹಾರ ತನಕದ ಅವದಿಯಲ್ಲಿ ಸ್ಥಿತಿಗೆ ಮೂಲತಃ ಭಗವಂತನೇ ಕಾರಣ.

ಪ್ರಳಯ ಕಾಲದಲ್ಲಿ ಸಮಸ್ತ ಜೀವಜಾತವನ್ನು  ಸೂಕ್ಷ್ಮ ಸ್ಥಿತಿಯಲ್ಲಿ ತನ್ನ ಹೊಟ್ಟೆಯಲ್ಲಿಟ್ಟು ಸಾಕುವವ ಆ ಭಗವಂತ. ಆ ಸೂಕ್ಷ್ಮ ವಸ್ತು ಮತ್ತೆ ಚಿಗುರಿ ಅರಳಿ ಹೆಮ್ಮರವಾಗಿ ಬೆಳೆಯುವಂತೆ ಬೀಜಕ್ಷೇಪ ಮಾಡುವ, ಎಂದೂ ಅಳಿವಿಲ್ಲದ  ಅವ್ಯಯ-ಭಗವಂತ.
ಹೀಗೆ ಜಗತ್ತಿನ ಸಮಸ್ತ ಕ್ರಿಯೆಯನ್ನು, ಲೌಕಿಕ , ಪ್ರಾಪಂಚಿಕ, ಪಾರಲೌಕಿಕವಾದ ಸಂಬಂಧಗಳು,ಅನುಬಂಧಗಳು ಎಲ್ಲವನ್ನು ವಿವರಿಸಿದ ಕೃಷ್ಣ  ಮುಂದೆ ಕಾಲಕಾಲದಲ್ಲಿ ಆಗತಕ್ಕಂತಹ ಸಂಗತಿಗಳನ್ನು ವಿವರಿಸುತ್ತಾನೆ.

ಅಧ್ಯಾಯ - 09: ಶ್ಲೋಕ  19

ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ ।

ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥೧೯॥

ತಪಾಮಿ ಅಮ್ ಅಮ್  ವರ್ಷಮ್  ನಿಗೃಹ್ಣಾಮಿ ಉತ್ಸೃಜಾಮಿ ಚ  
ಅಮೃತಮ್  ಚ ಏವ  ಮೃತ್ಯುಃ ಚ ತ್ ಅತ್ ಚ ಅಹಮ್ ಅರ್ಜುನ-

ನಾನು ಸುಡುತ್ತೇನೆ. ನಾನು ಮಳೆ ಬರದಂತೆ ತಡೆಯುತ್ತೇನೆ; ಮಳೆಗರೆಸುತ್ತೇನೆ. ಸಾವು ಬರದಂತೆ ಮಾಡುತ್ತೇನೆ; ಸಾಯಿಸುತ್ತೇನೆ. ಓ ಅರ್ಜುನ, ಕಾಣುವ ಕಾರ್ಯ, ಕಾಣದ ಕಾರಣ ಎಲ್ಲವೂ ನನ್ನಿಂದ.[ಸದ್ಗುಣಗಳ ಸೆಲೆಯಾದ್ದರಿಂದ ನಾನು ‘ಸತ್’. ನನ್ನಂಥವ ಇನ್ನೊಬ್ಬ ಇರದ್ದರಿಂದ ನಾನು ‘ಅಸತ್’]

ಸೂರ್ಯನಲ್ಲಿ ಸನ್ನಿಹಿತನಾಗಿ,  ಭೂಮಿಗೆ ಸೌರಶಕ್ತಿಯನ್ನು ಹರಿಸಿ, ಬದುಕು ಕೊಟ್ಟವ ಭಗವಂತ. ಕಾಲ ಕಾಲಕ್ಕೆ ಮಳೆ ಬರುವಂತೆ ಮಾಡುವವನೂ ಅವನೆ, ಅಕಾಲದಲ್ಲಿ ಮಳೆ ಬಾರದಂತೆ ತಡೆಯುವವನೂ ಅವನೆ. ಮಳೆ ಬರಬೇಕಾದಾಗ ಬಾರದೇ ಇರುವುದು, ಮಳೆ ಬರಬಾರದಾಗ ಬರುವುದೂ ಭಗವಂತನನಿಂದಲೆ.  ಕಾಣುವ ಕ್ರಿಯೆಯ ಹಿಂದಿನ ಕಾರಣಶಕ್ತಿ ಭಗವಂತ.

ಭಗವಂತ ನಮ್ಮ ಬದುಕಿನಲ್ಲಿ ಉಸಿರು ಕೊಟ್ಟು ಬದುಕಿಸುವ ಅಮೃತ. ಆಯಸ್ಸು ಮುಗಿದಾಗ ಉಸಿರು ನಿಲ್ಲಿಸಿ ಕರೆಸಿ ಕೊಳ್ಳುವವನೂ ಅವನೆ. ಒಟ್ಟಿನಲ್ಲಿ ಕೃಷ್ಣ ಹೇಳುತ್ತಾನೆ “ಕಣ್ಣಿಗೆ ಕಾಣುವ (ಸತ್), ಕಣ್ಣಿಗೆ ಕಾಣದ (ಅಸತ್) ಸಮಸ್ತ ಪ್ರಪಂಚವನ್ನು ನಿರ್ವಹಿಸುವ ಶಕ್ತಿ ನಾನು” ಎಂದು. ಇದು ಕೃಷ್ಣ ಸೂಕ್ಷ್ಮವಾಗಿ ಭಗವಂತನ ಅನುಸಂಧಾನಕ್ಕೆ ಕೊಟ್ಟಿರುವ ಸಮಗ್ರ ಚಿತ್ರಣ. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಭಗವಂತನ ಅನುಸಂಧಾನಕ್ಕೆ ಬೇಕಾದ ಸಮಗ್ರ ಸಂಗತಿ ಅಡಗಿದೆ.
ಮುಂದೆ ಕೃಷ್ಣ ತನ್ನ ಭಕ್ತರಲ್ಲಿ(ಜ್ಞಾನಿಗಳಲ್ಲೇ) ಪ್ರಮುಖವಾಗಿ ಎರಡು ವಿಧದ ಭಕ್ತರ ಬಗ್ಗೆ ವಿವರಿಸುತ್ತಾನೆ. ಅವರೆಂದರೆ ತ್ರೈವಿದ್ಯರು ಮತ್ತು ಭಾಗವತರು.

ಅಧ್ಯಾಯ - 09: ಶ್ಲೋಕ  20

ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾಃ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ ।

ತೇ ಪುಣ್ಯಮಾಸಾದ್ಯ ಸುರೇಂದ್ರ ಲೋಕಮಶ್ನಂತಿ ದಿವ್ಯಾನ್ ದಿವಿ ದೇವಭೋಗಾನ್ ॥೨೦॥

ತ್ರೈ ವಿದ್ಯಾಃ ಮಾಮ್  ಸೋಮಪಾಃ ಪೂತ ಪಾಪಾಃ ಯಜ್ಞೈಃ ಇಷ್ಟ್ವಾ ಸ್ವಃ ಗತಿಮ್ ಪ್ರಾರ್ಥಯಂತೇ 
ತೇ ಪುಣ್ಯಮ್ ಆಸಾದ್ಯ ಸುರ ಇಂದ್ರ ಲೋಕಮ್ ಅಶ್ನಂತಿ ದಿವ್ಯಾನ್ ದಿವಿ ದೇವ ಭೋಗಾನ್ – 

ತ್ರೈವಿದ್ಯರು ಮೂರು ವೇದಗಳ ಮೊರೆಹೊಕ್ಕ ಹಂಬಲಿಗರು. ಹೊಮಿಸುತ್ತ ನನ್ನನಾರಾಧಿಸಿ, ಸೋಮರಸ ಕುಡಿದು, ಪಾಪ ತೊಡೆದು, ಸಗ್ಗದ ದಾರಿಯನ್ನು ಬೇಡುತ್ತಾರೆ. ಅವರು ಪುಣ್ಯದ ಫಲವಾಗಿ ದೇವೇಂದ್ರನ ನಾಡು ಸೇರಿ, ಆ ಸಗ್ಗದಲ್ಲಿ ವೆಗ್ಗಳದ ದೇವಭೂಗಗಳನ್ನು ಉಣ್ಣುತ್ತಾರೆ.

ತ್ರೈವಿದ್ಯರು ಎಂದರೆ ತ್ರಿಪಥಗಾಮಿಗಳು! ಇವರು ಭಗವಂತನ ಜೊತೆಗೆ ಅನೇಕವನ್ನು ಹಂಚಿಕೊಂಡವರು. ಇವರು ಸ್ವರ್ಗದ ಬಯಕೆ, ಲೌಕಿಕ ಬಯಕೆಯನ್ನು ಮುಂದಿಟ್ಟು ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಇವರಿಗೆ ವೇದದಲ್ಲಿ ಹೇಳಿದ ಕರ್ಮಖಂಡವೇ ಮುಖ್ಯವಾಗುತ್ತದೆ. ಜ್ಯೋತಿಷ್ಟೋಮಯ ಯಾಗಗದಂತಹ ಯಾಗವನ್ನು ಕೇವಲ ಸ್ವರ್ಗದ ಬಯಕೆಯಿಂದ ಮಾಡಿ, ಭಗವಂತನನ್ನು ಬಯಸದೆ ಸ್ವರ್ಗವನ್ನು ಬಯಸುತ್ತಾರೆ. ಹೀಗೆ ಭಕ್ತಿ ಮಾಡುವುದರ ಫಲವಾಗಿ ಅವರು ಇಂದ್ರನ ನಾಡಾದ ಸ್ವರ್ಗವನ್ನು ಸೇರಿ ಅಲ್ಲಿ ಭೋಗವನ್ನು ಅನುಭವಿಸುತ್ತಾರೆ.     

ಅಧ್ಯಾಯ - 09: ಶ್ಲೋಕ  21

ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ        ।

ಏವಂ ತ್ರಯೀಧರ್ಮಮನುಪ್ರಪನ್ನಾಃ  ಗತಾಗತಂ ಕಾಮಕಾಮಾ ಲಭಂತೇ ॥೨೧॥

ತೇ ತಮ್  ಭುಕ್ತ್ವಾ ಸ್ವರ್ಗ ಲೋಕಮ್  ವಿಶಾಲಮ್  ಕ್ಷೀಣೇ ಪುಣ್ಯೇ ಮರ್ತ್ಯ ಲೋಕಮ್  ವಿಶಂತಿ  
ಏವಮ್  ತ್ರಯೀ ಧರ್ಮಮ್ ಅನುಪ್ರಪನ್ನಾಃ  ಗತ ಗತಮ್  ಕಾಮ ಕಾಮಾಃ  ಲಭಂತೇ – 

ಅವರು ಹಿರಿದಾದ ಸಗ್ಗಿಗರ ನಾಡನ್ನು ಕಂಡುಂಡು, ಪುಣ್ಯ ಮುಗಿದಾಗ ಭೂಮಿಗೆ ಮರಳುತ್ತಾರೆ. ಹೀಗೆ ವೈದಿಕ ಕರ್ಮಗಳ ಮೊರೆ ಹೊಕ್ಕು, ಬಯಕೆಗಳ ಬೆನ್ನುಹತ್ತಿ ಅತ್ತಿಂದಿತ್ತ ಅಲೆದಾಡುತ್ತಿರುತ್ತಾರೆ.

ಸ್ವರ್ಗದ ಬಯಕೆಯಿಂದ ಪುಣ್ಯಕರ್ಮ ಮಾಡುವ ತ್ರೈವಿದ್ಯರು ಸ್ವರ್ಗವನ್ನು ಸೇರಿ ಅಲ್ಲಿ ಬಗೆ ಬಗೆಯ ಭೋಗವನ್ನು ಅನುಭವಿಸಿ ತಮ್ಮ ಸತ್ಕರ್ಮದ ಫಲ ಮುಗಿದ ತಕ್ಷಣ ಪುನಃ ಭೂಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ ಇವರು ಅತ್ಯಂತ ಹಿರಿದಾದ ಮೋಕ್ಷದಿಂದ, ಭಗವಂತನಿಂದ   ವಂಚಿತರಾಗುತ್ತಾರೆ. ಇವರು ಸದಾ ಬಯಕೆಗಳ ಬೆನ್ನು ಹತ್ತಿ  ಚಕ್ರಭ್ರಮಣದಲ್ಲಿ ಸಿಲುಕಿ ಕೊಳ್ಳುತ್ತಾರೆ.
ಇವರಿಗಿಂತ ತೀರ ಭಿನ್ನ ನಡೆ ಭಾಗವತರದ್ದು:

ಅಧ್ಯಾಯ - 09: ಶ್ಲೋಕ  22

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥೨೨॥

ಅನನ್ಯಾಃ ಚಿಂತಯಂತಃ ಮಾಮ್  ಯೇ ಜನಾಃ ಪರ್ಯುಪಾಸತೇ 
ತೇಷಾಮ್  ನಿತ್ಯ ಭಿಯುಕ್ತಾನಾಮ್  ಯೋಗ ಕ್ಷೇಮಮ್  ವಹಾಮಿ ಅಹಮ್

ಬೇರೆಲ್ಲಾ ತೊರೆದು ನನ್ನನ್ನೆ ನೆನೆಯುತ್ತ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲು ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು.

ಭಾಗವತರು ಯಾವುದನ್ನೂ ಬೇಕು ಎಂದು ಬಯಸುವುದಿಲ್ಲ. ಅವರಿಗೆ ಭಗವಂತನ ಚಿಂತನೆಯೊಂದನ್ನು ಬಿಟ್ಟರೆ ಬೇರೆ ಚಿಂತನೆಯೇ ಇಲ್ಲ. ಇವರು ಅನನ್ಯವಾಗಿ ಭಗವಂತನನ್ನು ಮಾತ್ರ ಬಯಸುತ್ತಾರೆ. ಯಾವುದೋ ಬಯಕೆಗೆ ಕಟ್ಟು ಬಿದ್ದು ಅವರು ಪೂಜೆ ಮಾಡುವುದಿಲ್ಲ. ಇವರು ಭಗವಂತನಲ್ಲದೆ ಇನ್ನ್ಯಾವುದೇ ದೇವತೆಯನ್ನು ಪ್ರಧಾನವಾಗಿಟ್ಟುಕೊಂಡು ಆಹುತಿ ಕೊಟ್ಟು ಆರಾಧನೆ ಮಾಡುವುದಿಲ್ಲ. ಎಲ್ಲ ದೇವತೆಯ ಒಳಗೂ ಇವರು ಕೇವಲ ಭಗವಂತನನ್ನು ಕಾಣುತ್ತಾರೆ. ಇದು ಏಕಭಕ್ತಿ-ಪರಮಾತ್ಮನನ್ನು, ಮೋಕ್ಷವನ್ನು ಸೇರಲು ಅನುಸರಿಸಬೇಕಾದ ಮಾರ್ಗ.

ನಾವು ಪೂಜೆ ಮಾಡಿಸಿದಾಗ ಸಂಕಲ್ಪ ಮಾಡಿಸುತ್ತಾರೆ. ಇಲ್ಲಿ ನಾವು ಎಂದೂ ನಮ್ಮ ಐಹಿಕ ಬಯಕೆಗಳನ್ನು ಭಗವಂತನ ಮುಂದಿಡಬಾರದು. ಕೇವಲ ಜ್ಞಾನ, ಭಕ್ತಿ, ಮೋಕ್ಷ- ಇದು ನಮ್ಮ ಸಂಕಲ್ಪವಾಗಿರಬೇಕು. ನಶ್ವರವಾದ ಬಯಕೆಗಳನ್ನು ಮುಂದಿಟ್ಟು ಪೂಜೆ ಮಾಡಿಸಿದಾಗ ನಾವು ಮಹತ್ತಾದ ಫಲವನ್ನು ಕಳೆದುಕೊಳ್ಳುತ್ತೇವೆ. ನಮಗೆ ಏನು ಬೇಕು ಏನು ಬೇಡ ಎನ್ನುವುದು  ಆ ಭಗವಂತನಿಗೆ ನಮಗಿಂತ ಚನ್ನಾಗಿ ಗೊತ್ತು ಮತ್ತು ಆತ ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ.

ಪೂಜೆ ಕೇವಲ ಭಗವಂತನ ಪ್ರೀತ್ಯಾರ್ಥವಾಗಿ ಮಾಡಿ ಆತನಲ್ಲಿ ಅನನ್ಯ ಭಕ್ತಿ ನೆಟ್ಟಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಕೃಷ್ಣ ಹೇಳುತ್ತಾನೆ “ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್” ಇಂತಹ ಭಕ್ತರ ಯೋಗಕ್ಷೇಮದ ಹೊಣೆ ನನ್ನದು ಎಂದು. ಇದಕ್ಕಿಂತ ಹೆಚ್ಚಿನ ಭರವಸೆ ಏನು ಬೇಕು?  
ನಾವು ಗಾಢವಾಗಿ “ಭಗವಂತ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆ” ಎಂದು ಗಟ್ಟಿಯಾಗಿ ನಂಬಿದರೆ ಆತ ರಕ್ಷಿಸಿಯೇ ರಕ್ಷಿಸುತ್ತಾನೆ. ಭಗವಂತನ ಮೇಲಿನ ನಮ್ಮ  ನಂಬಿಕೆಯಲ್ಲಿ ನಾವು ಎಂದೂ ವಿಚಲಿತರಾಗಬಾರದು. ಅದು ದೃಢವಾಗಿರಬೇಕು. ಗುರಿ ಕೇವಲ ಭಗವಂತನನ್ನು ಸೇರುವತ್ತ ಇರಬೇಕು. 

ಭಗವಂತ ಏನು ಕೊಟ್ಟನೋ ಅದೇ ಮಹಾ ಪ್ರಸಾದವೆಂದು ಸ್ವೀಕರಿಸಿ ಸಂಪೂರ್ಣ ಆತನಲ್ಲಿ ಶರಣಾಗಬೇಕು. ಇಂತಹ ಸ್ಥಿತಿಯಲ್ಲಿ ನಮಗೆ ಎಂದೂ ದುಃಖವಾಗುವುದಿಲ್ಲ. ಬದುಕು ಆನಂದಮಯವಾಗಿರುತ್ತದೆ. ಜೀವನದಲ್ಲಿ ಏನೇ ಘಟನೆ ನಡೆದರೂ “ಭಗವಂತನ ಚಿತ್ತದಂತೆ ಆಯಿತು” ಎಂದು ತಿಳಿದು ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿ ನಮ್ಮದಾಗಬೇಕು. ಇದು ಮೋಕ್ಷದ ಹೆಬ್ಬಾಗಿಲು.

ಅಧ್ಯಾಯ - 09: ಶ್ಲೋಕ  23

ಯೇSಪ್ಯನ್ಯದೇವತಾ ಭಕ್ತಾ ಯಜಂತೇ  ಶ್ರದ್ಧಯಾSನ್ವಿತಾಃ ।

ತೇSಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್  ॥೨೩॥

ಯೇ ಅಪಿ ಅನ್ಯ ದೇವತಾ ಭಕ್ತಾಃ ಜಂತೇ  ಶ್ರದ್ಧಯಾ ನ್ವಿತಾಃ 
ತೇ ಅಪಿ ಮಾಮ್ ಏವ ಕೌಂತೇಯ ಯಜಂತಿ ಅವಿಧಿ ಪೂರ್ವಕಮ್-

ಕೌಂತೇಯ, ಯಾರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಆರಾಧಿಸುತ್ತಾರೆ ಅಂಥವರು ಕೂಡ ತಪ್ಪುದಾರಿಯಿಂದ ನನ್ನನ್ನೆ ಆರಾಧಿಸುತ್ತಾರೆ.

ಅಧ್ಯಾಯ - 09: ಶ್ಲೋಕ  24

ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ ।

ನತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥೨೪॥

ಅಹಮ್  ಹಿ ಸರ್ವಯಜ್ಞಾನಾಮ್  ಭೋಕ್ತಾ ಚ ಪ್ರಭುಃ ಏವ  ಚ           
 ತು ಮಾಮ್ ಅಭಿಜಾನಂತಿ ತತ್ತ್ವೇನ ಅತಃ ಚ್ಯವಂತಿ ತೇ-

ನಾನೆ ಅಲ್ಲವೆ ಎಲ್ಲ ಪೂಜೆಗಳನ್ನು ಕೊಳ್ಳುವವನು ಮತ್ತು ನಡೆಸುವವನು. ನಿಜವಾಗಿ ಅವರು ನನ್ನನ್ನು ಚನ್ನಾಗಿ ತಿಳಿದಿಲ್ಲ. ಅದರಿಂದ ಜಾರಿ ಬೀಳುತ್ತಾರೆ.

ಹಿಂದೆ ವಿಶ್ಲೇಶಿಸಿದಂತೆ ಕೆಲವರು ತಮ್ಮ ಬಯಕೆಗಳನ್ನು ಈಡೇರಿಸುವಂತೆ ಕೋರಿ ದೇವತೆಗಳನ್ನು  ಪ್ರಮುಖವಾಗಿ (ಭಗವಂತನಿಗಿಂತ ಬಿನ್ನವಾಗಿ) ಪೂಜಿಸುತ್ತಾರೆ. ಹೀಗೆ ಮಾಡಿದಾಗ ಏನಾಗುತ್ತದೆ ಎನ್ನುವ ಪ್ರಶ್ನೆ ನಮಗೆ ಮೂಡಬಹುದು. ಹಿಂದೆ ಕೃಷ್ಣ ಹೇಳಿದ್ದ “ಎಲ್ಲವುದರಲ್ಲೂ ಇರುವವನು ನಾನು” ಎಂದು. ಯಾರನ್ನು ಪ್ರಮುಖವಾಗಿ ಪೂಜಿಸಿದರೂ ಕೂಡಾ ಅದು ಸಲ್ಲುವುದು ಭಗವಂತನನ್ನೇ. ಇಲ್ಲಿ ಸಮಸ್ಯೆ ಎಂದರೆ ಪೂಜೆ ಮಾಡುವವರಿಗೆ ಆ ಅರಿವು ಇಲ್ಲದಿರುವುದು. ಇದರಿಂದ ತಪ್ಪು ಅನುಸಂಧಾನ. ಅರಿವಿಲ್ಲದೇ ಮಾಡುವ ಭಕ್ತಿ ಪೂರ್ಣ ಭಕ್ತಿಯಾಗಲಾರದು. ಪರತತ್ವದ ಎಚ್ಚರ ಇಲ್ಲದೆ ಮಾಡುವ ಪೂಜೆ ಎಂದೂ ನಮ್ಮನ್ನು ಉನ್ನತಿಗೇರಿಸಲಾರದು. ಕೃಷ್ಣ ಹೇಳುತ್ತಾನೆ “ಈ ರೀತಿಯ ಪೂಜೆಯಿಂದ ಪುಣ್ಯ ಗಳಿಸುವ ಬದಲು, ಪುಣ್ಯ ಕರ್ಮ ಮಾಡಿಯೂ ಜಾರಿ ಬಿದ್ದಂತೆ” ಎಂದು. ಆದ್ದರಿಂದ ಯಾವ ಪೂಜೆಯನ್ನೇ ಆಗಲಿ ಪರತತ್ವದ ಎಚ್ಚರದಿಂದ ಮಾಡಿದಾಗ ಮಾತ್ರ ಅದು ಸಾರ್ಥಕ. ಯಾರನ್ನೇ ಪೂಜಿಸಿದರೂ ಆ ಪೂಜೆ ಅಂತತಃ ಸಲ್ಲುವುದು ಭಗವಂತನನ್ನೇ. 

ಏಕೆಂದರೆ ಸರ್ವ ಯಜ್ಞಗಳ ಭೊಕ್ತಾರ ಭಗವಂತ.  ಇದು ಯಜ್ಞದ ಹಿಂದಿರುವ ಯಜ್ಞಪುರುಷನ ರಹಸ್ಯ. ಪುರುಷಸೂಕ್ತದಲ್ಲಿ ಹೇಳುವಂತೆ "ಯಜ್ಞೇನ ಯಜ್ಞ ಮಯಜಂತ ದೇವಾಃ"-ಯಜ್ಞದಿಂದ ಯಜ್ಞ ನಾಮಕ ಭಗವಂತನ ಆರಾಧನೆ. ಯಜ್ಞಗಳ ಭೊಕ್ತ, ಯಜ್ಞಗಳ ಸ್ವಾಮಿ, ಯಜ್ಞ ಶಬ್ದವಾಚ್ಯನಾದ ಭಗವಂತನ ಆರಾಧನೆಯಿಂದ ನಾವು ಭಗವಂತನನ್ನು ಸೇರಬಹುದು.    
ಹೀಗಿದ್ದರೂ ಕೂಡಾ ಸಮಾಜದಲ್ಲಿ ನಾವು ಅನೇಕ ರೀತಿಯಲ್ಲಿ ದೇವತಾ ಆರಾದನೆ ಮಾಡುವವರನ್ನು ನೋಡುತ್ತೇವೆ. ಅಂತವರು  ಆ ದೇವತೆಯನ್ನು ಪೂಜಿಸುವುದರಲ್ಲೇ ಶ್ರದ್ಧೆ ಇಟ್ಟಿರುತ್ತಾರೆ. ಆ ರೀತಿ ಪೂಜೆ ಮಾಡುವವರ ಗತಿ ಏನು?  ಇದಕ್ಕೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.

ಅಧ್ಯಾಯ - 09: ಶ್ಲೋಕ  25

ಯಾಂತಿ  ದೇವವ್ರತಾ ದೇವಾನ್ ಪಿತ ನ್ ಯಾಂತಿ  ಪಿತೃವ್ರತಾಃ ।

ಭೂತಾನಿ ಯಾಂತಿ  ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್ ॥೨೫॥

ಯಾಂತಿ  ದೇವವ್ರತಾಃ  ದೇವಾನ್ ಪಿತ ನ್ ಯಾಂತಿ  ಪಿತೃವ್ರತಾಃ 
ಭೂತಾನಿ ಯಾಂತಿ  ಭೂತೇಜ್ಯಾ ಯಾಂತಿ ತ್ ಯಾಜಿನಃ ಅಪಿ ಮಾಮ್-

ದೇವತೆಗಳ ನೇಮ ಹಿಡಿದವರು ದೇವತೆಗಳನ್ನು ಸೇರುತ್ತಾರೆ. ಪಿತೃಗಳ ನೇಮ ಹಿಡಿದವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳನ್ನು ಪೂಜಿಸುವವರು ದೆವ್ವಗಳನ್ನು ಸೇರುತ್ತಾರೆ. ನನ್ನನ್ನು ಪೂಜಿಸುವವರು ನನ್ನನ್ನೇ ಸೇರುತ್ತಾರೆ.

ಕೃಷ್ಣ ಹೇಳುತ್ತಾನೆ “ನೀವು ಯಾರನ್ನು ಪೂಜಿಸುತ್ತೀರೋ ಅವರನ್ನೇ  ಪಡೆಯುತ್ತೀರಿ” ಎಂದು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೂ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನೂ, ಭೂತ ಪ್ರೇತವನ್ನು(ದೇವತಾ ಗಣ) ಪೂಜಿಸುವವರು ಭೂತ ಪ್ರೇತಗಳನ್ನೂ ಪಡೆಯುತ್ತಾರೆ. ಆದರೆ ಯಾರು ಏಕಭಕ್ತಿಯಿಂದ ಎಲ್ಲವುದರಲ್ಲೂ ಭಗವಂತನನ್ನು ಕಂಡು ಶ್ರದ್ಧೆಯಿಂದ ಆತನನ್ನು ಪೂಜಿಸುತ್ತಾರೋ- “ಅವರು ನನ್ನನ್ನು ಸೇರುತ್ತಾರೆ” ಎನ್ನುವ ಭರವಸೆಯನ್ನು ಇಲ್ಲಿ  ಕೃಷ್ಣ ಕೊಡುತ್ತಾನೆ. ದೇವತೆಗಳನ್ನು ಪೂಜಿಸಿ ಸ್ವರ್ಗವನ್ನು ಪಡೆಯಬಹುದು, ಆದರೆ ಮರಳಿ ಹುಟ್ಟದ ಮೋಕ್ಷವನ್ನಲ್ಲ. ಯಾವ ಪೂಜೆ ಮಾಡಿದರೂ ಸರಿಯೇ, ಪ್ರತಿಯೊಂದು ಕ್ರಿಯೆಯ ಹಿಂದೆ ಭಗವಂತನ ಅರಿವಿದ್ದು ಅದರಿಂದ ಅವನನ್ನು ಆರಾಧಿಸುವುದೇ ನಿಜವಾದ ಪೂಜೆ. ಅರಿವಿಲ್ಲದ ಪೂಜೆ ಎಂದೂ ನಮ್ಮನ್ನು ಮೋಕ್ಷದತ್ತ ಕೊಂಡೊಯ್ಯುವುದಿಲ್ಲ.

ಬ್ರಹ್ಮಾದಿ ಸಮಸ್ತ ದೇವತಾ ಪರಿವಾರ ಸಮೆತನಾಗಿರತಕ್ಕಂತಹ ಭಗವಂತನ ಆರಾಧನೆ ಮಾಡಿದರೆ ಆಗ ಭಗವಂತನನ್ನು ಸೇರುತ್ತಾರೆ. ಇದು ಶಾಸ್ತ್ರದ ವ್ಯವಸ್ಥೆ.

ಅಧ್ಯಾಯ - 09: ಶ್ಲೋಕ  26, 27

ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕು. ನಾವು ನಮ್ಮ ದೈನಂದಿನ ಜೀವನದಲ್ಲಿ ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ, ಇತ್ಯಾದಿ ರೂಪದಲ್ಲಿ ಉಪಾಸನೆ ಮಾಡುತ್ತೇವೆ. ಇದು ತಪ್ಪೇ? ನಾವು ಗಣಪತಿ ಅಥವಾ ಇನ್ಯಾವುದೋ ಪ್ರತೀಕದಲ್ಲಿ ಭಗವಂತನ ಆರಾಧನೆ ಮಾಡಿದರೆ ನಮಗೆ ಮೋಕ್ಷ ಪ್ರಾಪ್ತಿ ಇಲ್ಲವೇ? ಯಾವುದು ಸರಿ, ಯಾವುದು ತಪ್ಪು? ಯಾವುದು ತ್ರೈವಿಧ್ಯಧರ್ಮ, ಯಾವುದು ಭಾಗವತ ಧರ್ಮ  ?

ನಮ್ಮಲ್ಲಿ ಇಂದು ಭಾಗವತ ಧರ್ಮ ಕಣ್ಮರೆಯಾಗುತ್ತಿದೆ. ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿರುವ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ವೇಳೆ ನಾವು ಯಾವ ಫಲ ಕಾಮನೆ ಇಲ್ಲದೆ, ಕೇವಲ ಮೋಕ್ಷ ಪ್ರಾಪ್ತಿಗಾಗಿ,  ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ  ನವಗ್ರಹ ಹೋಮ ಮಾಡಿದರೆ ಏನೂ ತಪ್ಪಿಲ್ಲ. ಆದರೆ   ಅಲ್ಲಿ ನಾವು  ‘ನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿ’ ಎಂದು ಸಂಕಲ್ಪ ಮಾಡಿದಾಗ   ಅದು ತ್ರೈವಿಧ್ಯ ಧರ್ಮವಾಗುತ್ತದೆ. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರಿಸದೆ ಕೇವಲ ಭಗವದ್ ಪ್ರೀತ್ಯರ್ಥ ಎಂದು ಯಾವ ಕಾಮ್ಯ ಕರ್ಮ ಮಾಡಿದರೂ ಅದು ಭಾಗವತ ಧರ್ಮ. ಭಗವಂತ ಸುಪ್ರೀತನಾದರೆ ಎಲ್ಲವೂ ಸಿದ್ಧಿ. ಅವನು ಕೊಟ್ಟಿದ್ದನ್ನು ಸಂತೋಷವಾಗಿ ಭೋಗಿಸು, ಕೊಡದಿದ್ದನ್ನು ಬಯಸಬೇಡ. ನಿನಗೆ ಬಂದ ಕಷ್ಟ ನಿವಾರಣೆ ಮಾಡು ಎಂದು ಭಗವಂತನನ್ನು ಪೂಜಿಸಬೇಡ, ಬದಲಿಗೆ ಬಂದದ್ದನ್ನು ಪ್ರಸಾದವಾಗಿ ಸ್ವೀಕರಿಸು ಮತ್ತು ಜ್ಞಾನ ವೈರಾಗ್ಯ ಭಕ್ತಿ-ಮೋಕ್ಷ ಕೊಡು ಎಂದು ನಿರಂತರ ಭಗವಂತನನ್ನು ಪ್ರಾರ್ಥಿಸು. ನಿನ್ನ ರಕ್ಷಣೆಯ ಭಾರ ಆ ಭಗವಂತನದ್ದು. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. 

ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅದು ಆಕಸ್ಮಿಕವಲ್ಲ. ಅದು ಭಗವಂತನ ಇಚ್ಛೆ, ಅದರ ನಿವಾರಣೆಗಾಗಿ ನೀನು ಭಗವಂತನನ್ನು ಪೂಜಿಸುವುದಲ್ಲ ಬದಲಿಗೆ ಭಗವಂತನನ್ನು ಸೇರಲು ಭಗವಂತನನ್ನು ಪೂಜಿಸುವುದು. ಈ ರೀತಿ ನಾವು ನಮ್ಮ ಸಂಕಲ್ಪದ ಹಿಂದಿನ ಅನುಸಂಧಾನವನ್ನು ಬದಲಿಸಿಕೊಂಡಾಗ ಅದು ಭಾಗವತ ಧರ್ಮವಾಗುತ್ತದೆ. ಒಬ್ಬ ತ್ರೈವಿಧ್ಯ ತನ್ನ ಗುರುವಿಗೆ ‘ನನ್ನ ಗುರು’ ಎಂದು ನಮಸ್ಕಾರ ಮಾಡಿದರೆ ಭಾಗವತ ‘ಆ ಗುರುಗಳ ಒಳಗೆ ಭಗವಂತ  ಕೂತು ನನಗೆ ಪಾಠ ಹೇಳುತ್ತಿದ್ದಾನೆ’ ಎಂದು ತಿಳಿದು ನಮಸ್ಕಾರ ಮಾಡುತ್ತಾನೆ. ಭಾಗವತ ತನ್ನೆಲ್ಲಾ ಕ್ರಿಯೆಯಲ್ಲಿ ಭಗವಂತನನ್ನು ಕಾಣುತ್ತಾನೆ. ಆತ ತನ್ನೆಲ್ಲಾ ಕ್ರಿಯಾ ಕರ್ಮದಲ್ಲಿ ಮೋಕ್ಷ ಮತ್ತು ಭಗವಂತನನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಆತನ ಪೂಜಾ ಸಂಕಲ್ಪದಲ್ಲಿ  ಮೋಕ್ಷದ ಬಯಕೆಯನ್ನು ಬಿಟ್ಟು ಇನ್ಯಾವುದೇ ಬಯಕೆ ಇರುವುದಿಲ್ಲ.  ನಾವು ಈ ಎತ್ತರಕ್ಕೇರುವುದು ಅಸಾಧ್ಯವಲ್ಲ. ಇದನ್ನು ಸಾಧ್ಯ ಮಾಡಲು ಪ್ರಯತ್ನ ಬೇಕು ಅಷ್ಟೇ. ನಾವು ಎಷ್ಟುಎಷ್ಟು ಭಗವತ್ ಪ್ರೀತ್ಯರ್ಥ ಕರ್ಮ ಮಾಡುತ್ತೇವೋ ಅಷ್ಟುಅಷ್ಟು ಹೆಚ್ಚು ಮೋಕ್ಷಕ್ಕೆ ಹತ್ತಿರವಾಗುತ್ತೇವೆ. ಭಗವಂತನಲ್ಲಿ ‘ನನಗೆ ಇದನ್ನು ಕೊಡು’ ಎಂದಾಗಾಲಿ ಅಥವಾ  ‘ಇದನ್ನು ನಿವಾರಿಸು’ ಎಂದಾಗಲಿ  ಎಂದೂ  ಕೇಳಬೇಡ. ನಿನಗೆ ಏನು ಬೇಕು ಎನ್ನುವುದು ಭಗವಂತನಿಗೆ ಗೊತ್ತಿದೆ, ಅದನ್ನು ಭಗವಂತನಿಗೆ ಬಿಡು. ಕೇವಲ ಭಗವತ್ ಪ್ರೀತಿಗಾಗಿ, ಮೋಕ್ಷ ಸಾಧನೆಗಾಗಿ  ಕರ್ಮ ಮಾಡು”. 

“ಇದು ಕೇವಲ ಭೀಮಸೇನ/ವಾಯುದೇವರಿಗೆ ಮಾತ್ರ” ಎಂದು ಪಲಾಯನ ವಾದ ಮಾಡದೆ ಯಾವುದೇ ಫಲ ಕಾಮನೆ ಇಲ್ಲದೆ ಪೂರ್ಣ ಭಕ್ತಿಯಿಂದ ಭಗವಂತನ ಪೂಜೆ ಮಾಡು. ಪೂಜೆಯಲ್ಲಿ ನಿನಗೆ ಬೇಡಲು ಇರುವ ಅಧಿಕಾರ ಕೇವಲ ‘ಮೋಕ್ಷ ಮತ್ತು ಭಗವಂತ’. ಅದನ್ನು ಪಡೆಯಲು ನಿನ್ನ ಸಾಧನೆಯನ್ನು ಮೀಸಲಿಡು. ಜೀವನದಲ್ಲಿ ಬರುವ ಏಳು ಬೀಳು ಎಲ್ಲವೂ ನಶ್ವರ, ಆ ಬಗ್ಗೆ ಯೋಚಿಸದೆ, ಸಂಸಾರದಿಂದ ಕಳಚಿಕೊಂಡು ಸಾವಿಲ್ಲದ ಮೋಕ್ಷವನ್ನು ಸೇರುವುದಕ್ಕಾಗಿ ಸಾಧನೆ ಮಾಡು.  ಇದು ಇಲ್ಲಿರುವ ಮೂಲ ಸಂದೇಶ.

ಭಗವಂತನ ಪೂಜೆಗೆ ಬೇಕಾಗಿರುವುದು ಧನ-ಕನಕವಲ್ಲ. ಕೇವಲ ನಿಷ್ಕಾಮ ಭಕ್ತಿ. ಭಗವಂತನ ಪೂಜೆ ಎಷ್ಟು ಸುಲಭ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:

ಅಧ್ಯಾಯ - 09: ಶ್ಲೋಕ  26

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥೨೬॥

ಪತ್ರಮ್  ಪುಷ್ಪಮ್  ಫಲಮ್  ತೋಯಮ್  ಯಃ  ಮೇ ಭಕ್ತ್ಯಾ ಪ್ರಯಚ್ಛತಿ 
ತ್ ಅಮ್  ಭಕ್ತಿ ಉಪಹೃತಮ್ ಅಶ್ನಾಮಿ ಪ್ರಯತ ತ್ಮನಃ 

ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೆ ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಆ ಕೊಡುಗೆಯನ್ನು ನಾನು ನಲ್ಮೆಯಿಂದ ಕೊಳ್ಳುತ್ತೇನೆ.

  ಮಹೋನ್ನತನಾದ ಭಗವಂತನ ಪೂಜೆಗೆ ಮೂಲವಾಗಿ ಬೇಕಾಗಿರುವುದು ‘ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ಳುವುದು(involvement)’, ಮತ್ತು ‘ಮನಸ್ಸು ತುಂಬಿ ಆರಾಧನೆ’ ಮಾಡುವುದು. ಮನಸ್ಸಿನಲ್ಲಿ ಭಕ್ತಿ ತುಂಬಿ ತುಳಸಿ ಪತ್ರೆಯನ್ನೋ, ಹೂವನ್ನೋ ಅರ್ಪಿಸಿದರೆ ಅದನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲಿ, ಪಂಚಪಾತ್ರೆಯಾಗಲಿ ಏನೂ ಬೇಡ. ಮನೆಯಲ್ಲಿ, ಮನೆ ತೋಟದಲ್ಲಿ ಏನಿದೆ ಅದನ್ನೇ ಅರ್ಪಿಸು. ಮನೆಯಲ್ಲಿ ಹಾಲಿಲ್ಲದಿದ್ದರೆ ಒಂದು ಲೋಟ ನೀರನ್ನು ಭಕ್ತಿಯಿಂದ ಅರ್ಪಿಸು. ಆದರೆ ಅದರ ಹಿಂದೆ ಭಾವ ಶುದ್ಧಿ ಇರಲಿ ಅಷ್ಟೇ.  ಕೃಷ್ಣ ಹೇಳುತ್ತಾನೆ “ಯೋ ಮೇ ಭಕ್ತ್ಯಾ ಪ್ರಯಚ್ಛತಿ” ಎಂದು. 

ಭಗವಂತ ಬಯಸುವುದು ನಮ್ಮ ಅಂತರಂಗದ ಪ್ರೀತಿಯನ್ನು ಮತ್ತು ಹೃದಯವಂತಿಕೆಯನ್ನು ಹೊರತು ಹೊರಗಿನ ವೈಭವವನ್ನಲ್ಲ. “ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ”-“ನೀನು ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿ, ಭಕ್ತಿಯಿಂದ ಏನು ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ ಕೃಷ್ಣ. ರಾಮಾಯಣದಲ್ಲಿ ಬರುವ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ದೃಷ್ಟಾಂತ.  

ಅಧ್ಯಾಯ - 09: ಶ್ಲೋಕ  27

ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್   ।

ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ॥೨೭॥

ತ್ ಕರೋಷಿ ಯತ್ ಅಶ್ನಾಸಿ ಯತ್ ಜುಹೋಷಿ ದದಾಸಿ ಯತ್      
ತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮತ್ ಅರ್ಪಣಮ್-

ಕೌಂತೇಯ, ಏನು ಮಾಡುವೆ, ಏನು ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನು ನನಗೆ ಒಪ್ಪಿಸು.
ಕೃಷ್ಣ ಹೇಳುತ್ತಾನೆ “ನನಗಾಗಿ ನೀನು ಏನನ್ನೂ ಮಾಡುವುದು ಬೇಡ ಆದರೆ ನಿನಗೋಸ್ಕರ ಏನು ಮಾಡುತ್ತೀಯೋ ಅದನ್ನು ನನಗೆ ಅರ್ಪಿಸು” ಎಂದು. ನಮ್ಮ ನಿತ್ಯ ಜೀವನದಲ್ಲಿ ಮಾಡಬೇಕಾದ ಅನೇಕ ಅನಿವಾರ್ಯ ವೃತ್ತಿ ಕಾರ್ಯಗಳಿರುತ್ತವೆ. 

ಜೀವನ ನಿರ್ವಹಣೆಯ ಕಾಯಕವಿರುತ್ತದೆ. ನಾವು ಅದನ್ನೇ ಭಗವಂತನ ಪೂಜೆ ಎಂದು ತಿಳಿದು ಮಾಡಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಧರ್ಮವ್ಯಾಧನ ಕಥೆ. ಮಾಂಸ ವಿಕ್ರಯ ಮಾಡಿ ಜೀವನ ಸಾಗಿಸುತ್ತಿದ್ದ ಆತನಲ್ಲಿ ಒಂದು ಸಂಕಲ್ಪ ಇತ್ತು. “ಮಾಂಸ ತಿನ್ನುವುದು ನನಗೆ ಆನುವಂಶೀಯವಾಗಿ ಬಂದ ಅಭ್ಯಾಸ. ಆದ್ದರಿಂದ ನಾನು ಮಾಂಸ ತಿನ್ನುತ್ತೇನೆ, ನನಗೆ ಬದುಕುವುದಕ್ಕೋಸ್ಕರ ಮತ್ತು ನನ್ನ ತಂದೆತಾಯಿಯನ್ನು ಸಾಕುವುದಕ್ಕೊಸ್ಕರ ನನ್ನ ಪಾಲಿಗೆ ಬಂದ ಈ ವೃತ್ತಿಯನ್ನು ನಾನು ಮಾಡುತ್ತೇನೆ. ಇದರಿಂದ ನನ್ನ ಬದುಕಿಗೆ ಬೇಕಾದಷ್ಟನ್ನು ಮಾತ್ರ ನಾನು ಗಳಿಸುತ್ತೇನೆ. ಎಂದೂ ವ್ಯವಹಾರದಲ್ಲಿ ಜನರ ಶೋಷಣೆ ಮಾಡುವುದಿಲ್ಲ” ಎಂದುಕೊಂಡು ಮಾಂಸ ವಿಕ್ರಯ ಮಾಡುತ್ತಿದ್ದ ಆತ. ಇದರಿಂದ ಆತನಿಗೆ ದೊಡ್ಡ ಜ್ಞಾನಿ ಧರ್ಮವ್ಯಾಧ ಎನ್ನುವ ಹೆಸರು ಬಂತು. ಋಷಿ ಮುನಿಗಳು ಆತನಿಂದ ಪಾಠ ಕಲಿಯುವ ಪ್ರಸಂಗ ಬಂತು. ಇದಕ್ಕೆ ಮೂಲ ಕಾರಣ ಆತ ತಾನು ಏನು ಮಾಡುತ್ತಿದ್ದನೋ ಅದನ್ನು ದೇವರ ಪೂಜೆ ಎಂದು ಮಾಡಿದ ಅಷ್ಟೇ. ಹೀಗೆ ಎಂದೂ ನಾವು ಮಾಡುವ ವೃತ್ತಿ  ಮುಖ್ಯವಾಗುವುದಿಲ್ಲ,  ಬದಲಿಗೆ ಅದನ್ನು ಭಗವಂತನ ಪೂಜೆ ಎಂದು ಮಾಡುವ ಅನುಸಂಧಾನ ಮುಖ್ಯವಾಗುತ್ತದೆ.

ನಿನ್ನ ನಿತ್ಯ ಕರ್ತವ್ಯ ಏನಿದೆ ಅದನ್ನು ಭಗವಂತನಿಗೆ ಅರ್ಪಿಸು. ಅದನ್ನು ಭಗವಂತನ ಪೂಜೆ ಎಂದು ಮಾಡು. ಭಗವಂತನಿಗಾಗಿ ಭಕ್ಷ್ಯ ಭೋಜ್ಯವನ್ನು ಮಾಡುವ ಅಗತ್ಯವಿಲ್ಲ. ನೀನು ಏನನ್ನು ತಿನ್ನುತ್ತೀಯೋ ಅದನ್ನು ಭಗವಂತನಿಗೆ ಅರ್ಪಿಸು. ಹೀಗೆ ಮಾಡಿದಾಗ ಭಗವಂತನ ಆರಾಧನೆ ಪ್ರತ್ಯೇಕವಾಗುವುದಿಲ್ಲ ಮತ್ತು ಕಷ್ಟವಾಗುವುದಿಲ್ಲ. ಭಗವಂತನಿಗಾಗಿ ಯಾವುದೋ ವಿಶೇಷ ಹೋಮ ಹವನ ಮಾಡುವ ಅಗತ್ಯವಿಲ್ಲ. ನೀನು ಏನು ಹೋಮ ಮಾಡುತ್ತೀಯೋ ಅದನ್ನೇ ‘ಅಗ್ನಿ ಅಂತರ್ಗತ ನಾರಾಯಣಾಯ ಇದಮ್ ನ ಮಮ’ ಎಂದು ಅರ್ಪಿಸು.  ಒಬ್ಬ ಹಸಿದ ವ್ಯಕ್ತಿ ಆತನ ಹೊಟ್ಟೆಯಲ್ಲಿ ವೈಶ್ವಾನರ ರೂಪಿ ಭಗವಂತನನ್ನು ಹೊತ್ತು ಬಂದಿದ್ದಾನೆ ಎಂದು ತಿಳಿದು  ಆತನೊಳಗಿರುವ  ವೈಶ್ವಾನರ ಪ್ರಸನ್ನನಾಗಲಿ ಎಂದು ಆ ವ್ಯಕ್ತಿಯನ್ನು ಸತ್ಕಾರ ಮಾಡು. ಇದೇ ಭಗವಂತನ ಮಹಾ ಪೂಜೆ ಎನಿಸುತ್ತದೆ.

ಕೃಷ್ಣ ಹೇಳುತ್ತಾನೆ “ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್” ಎಂದು. ಇಲ್ಲಿ ತಪಸ್ಸು ಎಂದರೆ ‘ಚಿಂತನೆ’ ಅಥವಾ ವೃತಾನುಷ್ಟಾನ. ಉದಾಹರಣೆಗೆ ‘ಸಂಕಷ್ಟಿ’- ಅದನ್ನು ಆಚರಿಸುವಾಗ ಗಣಪತಿ ಅಂತರ್ಗತನಾದ ಭಗವಂತನಿಗೆ ಅರ್ಪಿತವಾಗಲಿ ಎಂದು ಮಾಡು. ಅಲ್ಲಿ ಯಾವುದೇ ಫಲಾಪೇಕ್ಷೆ ಅಹಂಕಾರ ಇಟ್ಟುಕೊಳ್ಳಬೇಡ. ಹೀಗೆ ಯಾವ ಆಚರಣೆಯೂ ಕೂಡಾ ಅಂತತಃ ಪರಮ ಪುರುಷನಾದ ಭಗವಂತನಿಗೆ ಅರ್ಪಿತ ಎಂದು ತಿಳಿದು ಮಾಡಿದಾಗ ಅದು ನಿಜವಾದ ತಪಸ್ಸಾಗುತ್ತದೆ.  ಇಲ್ಲಿ ಅರ್ಜುನನಿಗೆ “ನಿನ್ನ ಕರ್ತವ್ಯ ಕರ್ಮವಾಗಿ ಬಂದಿರುವ ಈ  ಯುದ್ಧವನ್ನೂ ಕೂಡಾ ಭಗವಂತನ ಪೂಜೆಯಾಗಿ ಮಾಡು” ಎನ್ನುವ ಸಂದೇಶವನ್ನು ಈ ಶ್ಲೋಕದ ಮೂಲಕ  ಕೃಷ್ಣ ನೀಡಿದ್ದಾನೆ.

ಅಧ್ಯಾಯ - 09: ಶ್ಲೋಕ  28-31

ಭಾಗವತ ಧರ್ಮ ಅನುಷ್ಠಾನದಿಂದ ಎನು ಫಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
        

ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ ।

ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ॥೨೮॥

ಶುಭ ಶುಭ ಭಲೈಃ ಏವಮ್  ಮೋಕ್ಷ್ಯಸೇ ಕರ್ಮ ಬಂಧನೈಃ 
ಸಂನ್ಯಾಸ ಯೋಗ ಯುಕ್ತ ತ್ಮಾ ವಿಮುಕ್ತಃ  ಮಾಮ್ ಉಪೈಷ್ಯಸಿ-

ಹೀಗೆ ಬದುಕಿದಾಗ, ಒಳಿತು-ಕೆಡುಕುಗಳ ಕಡೆಗೆಳೆವ ಕರ್ಮದ ಸೆರೆಯಿಂದ ಪಾರಾಗುವೆ. ಫಲದ ಹಂಗು ತೊರೆದು ಕರ್ತವ್ಯದಲ್ಲಿ ಬಗೆ ತೊಡಗಿಸುತ್ತ ಸೆರೆ ಕಳಚಿಕೊಂಡು ನನ್ನ ಬಳಿ ಸೇರುವೆ.

ನಾವು ಯಾವುದೇ ಕರ್ಮವನ್ನು ‘ನನಗೆ  ಇಂತಹ ಫಲ ಬರಬೇಕು’ ಎನ್ನುವ ಫಲದ ನಂಟಿನಿಂದ ಮತ್ತು ‘ನಾನು ಈ ಕರ್ಮವನ್ನು ಮಾಡಿದೆ’ ಎನ್ನುವ ಅಹಮ್ ಇದ್ದು ಮಾಡಿದಾಗ ಆ ಕರ್ಮ ನಮಗೆ ಅಂಟುತ್ತದೆ. ಅದಕ್ಕೋಸ್ಕರ ಹಿಂದಿನ ಕಾಲದಲ್ಲಿ  ‘ಕರ್ಮಕರಿಷ್ಯೇ’ ಎಂದು ಸಂಕಲ್ಪ ಮಾಡುವಾಗ ಈ ರೀತಿ ಹೇಳುತ್ತಿದ್ದರು:

ಭಗವತೋ ಬಲೇನ ಭಗವತೋ ವೀರ್ಯೇನ ಭಗವದಃ ತೇಜಸಾ |

ಭಗವತಾ ಕರ್ಮಣಾ ಕರ್ಮಕರಿಷ್ಯಾಮಿ ಭಗವತೋ ವಾಸುದೇವಸ್ಯಃ ||

“ನಾನು ಮಾಡುವ ಕರ್ಮ ನನ್ನ ಕರ್ಮವಲ್ಲ, ನನ್ನೊಳಗಿರುವ ಭಗವಂತ ಮಾಡುವ ಕರ್ಮ. ಅದರ ಹಿಂದಿರುವ ಶಕ್ತಿ ಸಾಮರ್ಥ್ಯ ಎಲ್ಲವೂ ಭಗವಂತನದ್ದು, ನನ್ನದೇನೂ ಇಲ್ಲ” ಎಂದು. ಇದು ಭಾಗವತಧರ್ಮದ ಸಂಕಲ್ಪ. ಭಗವತ್ ಪ್ರೀತ್ಯರ್ಥ ಮಾಡಿದ ಯಾವ ಕರ್ಮವೂ ನಮಗೆ ಬಂಧನವಾಗುವುದಿಲ್ಲ. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ: “ಭಗವಂತನ ಜ್ಞಾನ ನಮ್ಮೊಳಗೆ ದೃಢವಾಗಿ ಅಪರೋಕ್ಷವಾದಾಗ, ಹಿಂದೆ ಫಲಕಾಮನೆಯಿಂದ ಮಾಡಿದ ಎಲ್ಲಾ ಪಾಪಗಳನ್ನು ಆ ಜ್ಞಾನಾಗ್ನಿ ಸುಟ್ಟುಬಿಡುತ್ತದೆ” ಎಂದು.  ಆದ್ದರಿಂದ ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ. 

ಇದನ್ನು ನಾವು ಕಠೋಪನಿಷತ್ತಿನಲ್ಲಿ ಬರುವ ಯಮ ಮತ್ತು ನಚಿಕೇತನ ಸಂಭಾಷಣೆಯಲ್ಲಿ ಕಾಣುತ್ತೇವೆ.  ಅಲ್ಲಿ ನಚಿಕೇತ ಯಮನಲ್ಲಿ ಜ್ಞಾನವನ್ನು ವರವಾಗಿ ಬೇಡಿದಾಗ ಯಮ ಆತನಿಗೆ “ನಿನಗೆ ಎಷ್ಟು ಸಂಪತ್ತು ಬೇಕು ಅದನ್ನು ಕೇಳು, ನಿನ್ನನ್ನು ಬೇಕಿದ್ದರೆ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡುತ್ತೇನೆ” ಎನ್ನುತ್ತಾನೆ. ಇದಕ್ಕೆ ನಚಿಕೇತ ಹೇಳುತ್ತಾನೆ “ ಇದೆಲ್ಲವೂ ನರಕಕ್ಕೆ ಹೋಗುವ ಸಾಧನಗಳು, ಇದ್ಯಾವುದೂ ನನಗೆ ಬೇಡ. ನನಗೆ ಭಗವಂತನ ಬಗ್ಗೆ ತಿಳಿಯಬೇಕು” ಎಂದು. ಹೀಗೆ ನಮ್ಮ ಪಾಪ ಕರ್ಮವನ್ನು ಸಂಪೂರ್ಣ ತೊಳೆದುಕೊಂಡು ಮೋಕ್ಷಕ್ಕೆ ಹೋಗುವ ಏಕಮಾತ್ರ ಮಾರ್ಗ ಭಗವಂತನ ಬಗೆಗಿನ ಜ್ಞಾನ. 

ಭಗವದರ್ಪಣ ಬುದ್ಧಿಯಿಂದ ಕರ್ಮ ಅನುಷ್ಠಾನ ಮಾಡಿದಾಗ ಶುಭಾಶುಭ ಕರ್ಮದ ಕಟ್ಟಿನಿಂದ ಬಿಡುಗಡೆ ಸಾಧ್ಯ.  ಕೃಷ್ಣ ಹೇಳುತ್ತಾನೆ “ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ” ಎಂದು. ಇಲ್ಲಿ ಹೇಳುವ ಸಂನ್ಯಾಸ ಒಂದು ಯೋಗ(ಉಪಾಯ). ಎಲ್ಲವನ್ನೂ ಭಗವಂತನಿಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದೆ ಭಗವತ್ ಪೂಜಾ ದೃಷ್ಟಿಯಿಂದ ಮಾಡುವಂತಹ ಸಾತ್ವಿಕರ ಸಾಧನೆ. ಸಂನ್ಯಾಸ ಎಂದರೆ ಕಾಮ-ಸಂಕಲ್ಪವನ್ನು ಭಗವಂತನಲ್ಲಿ ಅರ್ಪಿಸುವುದು. ಕಾಮ ಅಂದರೆ ಮಾಡಬೇಕು ಎಂದು ಬಯಸುವುದು, ಸಂಕಲ್ಪ ಎಂದರೆ  ಮಾಡುತ್ತೇನೆ ಎಂದು ನಿರ್ಧರಿಸುವುದು. ಕಾಮಸಂಕಲ್ಪ ವರ್ಜಿತ-ಸಂನ್ಯಾಸ. ಹೀಗೆ ಭಾಗವತ ಧರ್ಮ ಪಾಲನೆ ಮಾಡಿದರೆ ಸುಲಭವಾಗಿ ಭಗವಂತನನ್ನು ಸೇರಬಹುದು-“ನಿಶ್ಚಿತವಾಗಿಯೂ ನನ್ನನ್ನು ಸೇರುತ್ತಾರೆ” ಎನ್ನುವುದು ಕೃಷ್ಣನ ಭರವಸೆ.  

ಅಧ್ಯಾಯ - 09: ಶ್ಲೋಕ  29

ಸಮೋSಹಂ ಸರ್ವಭೂತೇಷು ನ ಮೇ ದ್ವೇಷ್ಯೋSಸ್ತಿ ನ ಪ್ರಿಯಃ ।

ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ॥೨೯॥

ಮಃ ಅಮ್  ಸರ್ವಭೂತೇಷು ನ ಮೇ ದ್ವೇಷ್ಯಃ ಅಸ್ತಿ ನ ಪ್ರಿಯಃ 
ಯೇ ಭಜಂತಿ ತು ಮಾಮ್  ಭಕ್ತ್ಯಾ ಮಯಿ ತೇ ತೇಷು ಚ ಅಪಿ ಅಹಮ್-

ಎಲ್ಲ ಜೀವಿಗಳೂ ನನಗೆ ಒಂದೆ. ನನಗೆ ಹಗೆಯನೂ ಇಲ್ಲ, ಗೆಳೆಯನೂ ಇಲ್ಲ. ಆದರೆ ಯಾರು ನನ್ನನ್ನು ಭಕ್ತಿಯಿಂದ ಒಲಿಸುತ್ತಾರೆ ಅವರು ನನ್ನ ವಶ; ನಾನು ಅವರ ವಶ.

ಭಗವಂತನಿಗೆ ಯಾರ ಮೇಲೂ ಹಗೆಯಾಗಲೀ ಅಥವಾ ಗೆಳೆತನವಾಗಲೀ ಇಲ್ಲ. ಆತ ಪ್ರೀತಿಸುವುದು ವ್ಯಕ್ತಿಯನ್ನಲ್ಲ ಬದಲಿಗೆ ವ್ಯಕ್ತಿಯಲ್ಲಿರುವ ಜ್ಞಾನವನ್ನು ಮತ್ತು ಭಕ್ತಿಯನ್ನು. ಅರ್ಹತೆ ಇದ್ದವರು ಭಗವಂತನನ್ನು ಭಕ್ತಿಯಿಂದ ಒಲಿಸುತ್ತಾರೆ. ನಿಜವಾದ ಭಕ್ತರಿಗೆ ಭಗವಂತ ವಶನಾಗುತ್ತಾನೆ.

ಅಧ್ಯಾಯ - 09: ಶ್ಲೋಕ  30

ಅಪಿ ಚೇತ್ ಸುದುರಾಚಾರೋ ಭಜತೇ ಮಾಮನನ್ಯಭಾಕ್ ।

ಸಾಧುರೇವ ಸ ಮಂತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ ॥೩೦॥

ಅಪಿ ಚೇತ್ ಸು ದುರಾಚಾರಃ  ಭಜತೇ ಮಾಮ್ ಅನನ್ಯ ಭಾಕ್ 
ಸಾಧುಃ ಏ ಸಃ  ಮಂತವ್ಯಃ ಸಮ್ಯಗ್ ವ್ಯವಸಿತಃ  ಹಿ ಸಃ 

ಬೇರೆಡೆಗೆ ಬಗೆಗೊಡದೆ ನನ್ನಲ್ಲೇ ಭಕ್ತಿಯಿಡುವವನು ಎಂಥ ನಡತೆಗೇಡಿಯಾದರೂ ಮೂಲತಃ ಒಳ್ಳೆಯವನೆಂದೇ ತಿಳಿಯಬೇಕು. ಏಕೆಂದರೆ ಅವನು ಖಚಿತವಾಗಿ ನಿಜವನರಿತವನು.

ನಿಜವಾದ ಭಕ್ತರು ಸಾಮಾನ್ಯವಾಗಿ ಎಂದೂ ದುರಾಚಾರಿಗಳಾಗಿರುವುದಿಲ್ಲ. ಆಕಸ್ಮಾತ್ ಒಬ್ಬ ಸಾತ್ವಿಕ ಯಾವುದೋ ಪ್ರಾರಬ್ಧ ಕರ್ಮದಿಂದ ಒಂದು ಜನ್ಮದಲ್ಲಿ ನಡತೆಗೇಡಿಯಾಗಿದ್ದರೂ ಸಹ ಆತ ಮೂಲತಃ ಉತ್ತಮನೇ ಆಗಿರುತ್ತಾನೆ. ಏಕೆಂದರೆ ಆತ ತನ್ನ ಅನೇಕ ಜನ್ಮದಲ್ಲಿ ಭಗವತ್ ಸಾಧನೆ ಮಾಡಿರುತ್ತಾನೆ. ಇದು ಸಾಮಾನ್ಯರಾದ ನಮಗೆ ಕಾಣದಿದ್ದರೂ ಕೂಡಾ ಭಗವಂತನಿಗೆ ಕಾಣುತ್ತದೆ. ಭಗವಂತನ ದೃಷ್ಟಿಯಲ್ಲಿ ಆತ ಉತ್ತಮನೆನಿಸಿರುತ್ತಾನೆ. ಈ ಕಾರಣಕ್ಕಾಗಿ ನಾವು ಯಾರನ್ನೂ ಹಗುರವಾಗಿ ಕಾಣಬಾರದು. ಒಬ್ಬ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದರೆ ಅದಕ್ಕೆ ಅನೇಕ ಕಾರಣಗಳಿರಬಹುದು. ಆತ ಸಾತ್ವಿಕನೂ ಇರಬಹುದು. ಆದರೆ ಆತನ ಪ್ರರಾಬ್ಧ ಕರ್ಮ ಆತನನ್ನು ಆ ಮಾರ್ಗದಲ್ಲಿ ನಡೆಯುವಂತೆ ಮಾಡಿರಬಹುದು. ಉತ್ತಮನೆನಿಸಿದವನು ಶಾಶ್ವತವಾಗಿ ಆ ದಾರಿಯಲ್ಲಿ ಸಾಗುವುದಿಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.

ಅಧ್ಯಾಯ - 09: ಶ್ಲೋಕ  31

ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾನ್ತಿಂ ನಿಗಚ್ಛತಿ ।

ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥೩೧॥

ಕ್ಷಿಪ್ರಮ್  ಭವತಿ ಧರ್ಮ ಆತ್ಮಾ ಶಶ್ವತ್ ಶಾಂತಿಮ್  ನಿಗಚ್ಛತಿ 
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ 

ಅವನು ಒಡನೆಯೆ ಸರಿದಾರಿ ಹಿಡಿಯುತ್ತಾನೆ; ಅಳಿವಿರದ ಸುಖದ ಸೆಲೆಯನ್ನು ಪಡೆಯುತ್ತಾನೆ. ಕೌಂತೇಯ, ಇದನ್ನು ಆಣೆಯಿಟ್ಟಾಡು: ‘ನನ್ನ ಭಕ್ತನೆಂದೂ ಕೆಡುವುದಿಲ್ಲ’.

ಹೀಗೆ ಪ್ರರಾಬ್ಧ ಕರ್ಮದಿಂದ ದಾರಿತಪ್ಪಿದವರು ಯಾವುದೋ ಒಂದು ಸಂದರ್ಭದಲ್ಲಿ ಒಡನೆಯೇ ತಾವು ಮಾಡುತ್ತಿರುವ ತಪ್ಪಿನ ಅರಿವಾಗಿ ಸರಿದಾರಿಯನ್ನು ಹಿಡಿಯುತ್ತಾನೆ, ಮತ್ತು ಅಳಿವಿರದ ಮೋಕ್ಷವನ್ನು ಸೇರುತ್ತಾನೆ. ಇದು ನಿಶ್ಚಿತ. ಇದನ್ನು ನೀನು ಆಣೆಮಾಡಿ ಹೇಳು ಎನ್ನುತ್ತಾನೆ ಕೃಷ್ಣ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳನ ಕಥೆ. ತನ್ನ ಜೀವನದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿದ ಅಜಾಮಿಳ ಮೂಲತಃ ಒಬ್ಬ ಶ್ರೇಷ್ಠ ಜೀವ. ಇಂತಹ ಅಜಾಮಿಳನಿಗೆ ಭಗವಂತ ಜೀವನದ ಕೊನೆಗಾಲದಲ್ಲಿ ಸತ್ಯದ ದಾರಿ ತೋರಿಸಿ ಉದ್ಧಾರ ಮಾಡುತ್ತಾನೆ. ಆತ ತನ್ನ ಕೊನೆಗಾಲದಲ್ಲಿ ಸಾಧನೆ ಮಾಡಿ ಮೋಕ್ಷವನ್ನು ಸೇರುತ್ತಾನೆ.

ಇಲ್ಲಿ ಕೃಷ್ಣ ಅರ್ಜುನನಲ್ಲಿ ಏಕೆ “ನೀನು ಪ್ರತಿಜ್ಞೆ ಮಾಡು” ಎಂದು ಹೇಳುತ್ತಾನೆ ಎಂದರೆ-ಭಗವಂತ ಭಕ್ತರಿಗಾಗಿ ತನ್ನ ಪ್ರತಿಜ್ಞೆಯನ್ನು ಮುರಿದಾನು ಆದರೆ ಎಂದೂ ಭಕ್ತರ ಪ್ರತಿಜ್ಞೆಯನ್ನಲ್ಲ. ಇದಕ್ಕೆ ಉದಾಹರಣೆ ಮಹಾಭಾರತ ಯುದ್ಧದಲ್ಲಿ ನಡೆದ ಒಂದು ಘಟನೆ:

ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಯುದ್ಧದ ನಡುವೆ ಅರ್ಜುನ ಭೀಷ್ಮನ ಎದುರು ಯುದ್ಧ ಮಾಡುವುದಕ್ಕೆಹಿಂಜರಿದಾಗ, ಕೋಪಾವೇಶದಿಂದ  ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ  ತನ್ನ ಎರಡೂ ಕೈಗಳನ್ನು ಜೋಡಿಸಿ  ಹೀಗೆ ಹೇಳುತ್ತಾನೆ: " ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ.  ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ  ನಿನ್ನ ಭಕ್ತನ ಪ್ರತಿಜ್ಞೆಯನ್ನಲ್ಲ;ನೀನಲ್ಲದೆ  ನಮಗೆ  ಗತಿ ಇನ್ಯಾರು?" ಎಂದು.  ಈ ಘಟನೆಯಲ್ಲಿ ಭಗವಂತ ಎಂತಹ ಭಕ್ತವತ್ಸಲ ಎನ್ನುವುದು ತಿಳಿಯುತ್ತದೆ.

ಅಧ್ಯಾಯ - 09: ಶ್ಲೋಕ  32

ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ ಪಾಪಯೋನಯಃ ।

ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇSಪಿ ಯಾಂತಿ ಪರಾಂ ಗತಿಮ್ ॥೩೨॥

ಮಾಮ್  ಹಿ ಪಾರ್ಥ ವ್ಯಪಾಶ್ರಿತ್ಯ ಯೇ ಪಿ ಸ್ಯುಃ ಪಾಪಯೋನಯಃ 
ಸ್ತ್ರಿಯಃ  ವೈಶ್ಯಾಃ ತಥಾ ಶೂದ್ರಾಃ ತೇ ಅಪಿ ಯಾಂತಿ ಪರಾಮ್  ಗತಿಮ್ 

ಪಾರ್ಥ, ನನಗೆ ಶರಣು ಬಂದವರು ಯಾವುದೋ ಪಾಪದಿಂದ ಹೆಣ್ಣಾಗಿ, ವೈಶ್ಯರಾಗಿ, ಶೂದ್ರರಾಗಿ ಸಾಧನೆಯಿಂದ ವಂಚಿತರಾದರೂ ಹಿರಿಯ ನೆಲೆಯಾದ ನನ್ನನ್ನೆ ಪಡೆಯುತ್ತಾರೆ.

ಈ ಶ್ಲೋಕ ಕೆಲವು ಭಾಷ್ಯಕಾರರಿಗೇ ಗೊಂದಲ ಮಾಡಿದ ಶ್ಲೋಕ. ಮಧ್ವಾಚಾರ್ಯರು ಈ ಶ್ಲೋಕಕ್ಕೆ ಭಾಷ್ಯ ನೀಡುವ ತನಕ ಹೆಚ್ಚಿನವರು ಇದಕ್ಕೆ ತಪ್ಪು ಅರ್ಥವನ್ನು ಕಲ್ಪಿಸಿಕೊಂಡಿದ್ದರು. ಮೇಲ್ನೋಟದಲ್ಲಿ ಈ ಶ್ಲೋಕವನ್ನು ನೋಡಿದಾಗ “ಸ್ತ್ರೀಯರು, ವೈಶ್ಯರು ಮತ್ತು ಶೂದ್ರರು ಪಾಪಿಗಳು” ಎಂದು ತಿಳಿಯುವ ಅಪಾಯ ಹೆಚ್ಚು. ಇಲ್ಲಿ ಕೃಷ್ಣ ಹೇಳುತ್ತಿರುವುದು ಸ್ತ್ರೀ ಜೀವದ ಬಗ್ಗೆ ಅಲ್ಲ. ಸ್ತ್ರೀಯರು ಪಾಪಿಗಳಲ್ಲ. ಯಾವುದೋ ಪಾಪದಿಂದ ಅಥವಾ ಶಾಪದಿಂದ ಸ್ತ್ರೀ ಜನ್ಮ ಪಡೆದ ಗಂಡು ‘ ಸ್ತ್ರೀ ಪಾಪಯೋನಿ’ ಹೊರತು ಹೆಣ್ಣಾಗಿರುವ ಸ್ತ್ರೀಜೀವ ಪಾಪಯೋನಿಯಲ್ಲ.

ಕೃಷ್ಣ ಹೇಳುತ್ತಾನೆ “ಯಾವುದೋ ಪಾಪದಿಂದ ಹೀನಯೋನಿ ಬಂದಿರಬಹುದು, ಆದರೆ ಅಂತವರು ನನ್ನನ್ನು ಆರಾಧಿಸಿ ಎಲ್ಲಾ ದೋಷಗಳಿಂದ ಬಿಡುಗಡೆ ಹೊಂದಬಹುದು” ಎಂದು. ಇದಕ್ಕೆ ಉತ್ತಮ ದೃಷ್ಟಾಂತ ನರಕಾಸುರನ ಸೆರೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ಸ್ತ್ರೀಯರು. ಇವರು ಅಗ್ನಿ ಪುತ್ರರು. ಭಗವಂತನ ಪತ್ನಿಯರಾಗಬೇಕು ಎಂಬ ಆಸೆಯಿಂದ ತಮ್ಮ ಎತ್ತರವನ್ನು ಕಳೆದುಕೊಂಡು ಭೂಮಿಯಲ್ಲಿ ಹೆಣ್ಣಾಗಿ ಹುಟ್ಟಿ ನರಕಾಸುರನ ಸೆರೆಮನೆಯಲ್ಲಿ ಸಿಕ್ಕಿ ಒದ್ದಾಡಿದವರು. ಕೃಷ್ಣ ಅವರನ್ನು ಮದುವೆಯಾಗಿ ಉದ್ಧರಿಸಿದ.

ನಂದಗೋಪ ಮತ್ತು ಯಶೋದೆ ಇವರು ಮೂಲತಃ ದೇವಾಂಶ ಸಂಭೂತರು. ‘ದ್ರೋಣ’ ನಾಮಕ ವಸು ನಂದಗೋಪ ಮತ್ತು ‘ಧರ’ ನಾಮಕ ವಸುಪತ್ನಿ ಯಶೋದೆ. ಅವರು ಭೂಮಿಯಲ್ಲಿ ವೈಶ್ಯರಾಗಿ ಹುಟ್ಟಿದರು. ಭಗವಂತ ತನ್ನ ಅವತಾರದಲ್ಲಿ ಅವರ ಮನೆಯಲ್ಲಿ ಬೆಳೆದು ಅವರನ್ನು ಉದ್ಧರಿಸಿದ.

ಮಹಾ ಚೇತನ ವಿಧುರ. ಈತ ಸ್ವಯಂ ಧರ್ಮರಾಯ. ಶಾಪದ ಫಲವಾಗಿ ಭೂಮಿಯಲ್ಲಿ ಶೂದ್ರನಾಗಿ ಬದುಕಬೇಕಾಗಿ ಬಂತು. ಸಂಧಾನಕ್ಕೆ ಬಂದ ಕೃಷ್ಣ ದುರ್ಯೋಧನ, ಭೀಷ್ಮ, ದ್ರೋಣರ ಮನೆಗೆ ಹೋಗದೆ ನೇರವಾಗಿ ವಿಧುರನ ಮನೆಗೆ ಬಂದು ಅಲ್ಲಿ ವಿಧುರನಿಂದ ಸರಳ ಆಹಾರ ಸೇವಿಸಿ ಆತನನ್ನು ಪ್ರಸನ್ನನಾಗಿ ಮಾಡಿದ. ಇಲ್ಲಿ ಭಗವಂತ ಬಯಸುವುದು ಪ್ರದರ್ಶನವನ್ನಲ್ಲ ಬದಲಿಗೆ ಪ್ರೀತಿಯನ್ನು ಎನ್ನುವುದು ಸ್ಪಷ್ಟವಾಗುತ್ತದೆ. ಆತನಿಗೆ ಅಂತರಾತ್ಮ ಮುಖ್ಯ, ಮುಖವಾಡವಲ್ಲ.
ಹೀಗೆ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ “ಯಾವುದೋ ಪಾಪ ಕರ್ಮದಿಂದ ಅಥವಾ ಶಾಪದಿಂದ ಹೀನಯೋನಿಯಾಗಿ ಹುಟ್ಟಿದವರು ನನ್ನನ್ನು ಆಶ್ರಯಿಸಿದಾಗ ಪಾಪದಿಂದ ಕಳಚಿಕೊಂಡು ನನ್ನನ್ನು ಸೇರುತ್ತಾರೆ” ಎಂದು.                   

ಅಧ್ಯಾಯ - 09: ಶ್ಲೋಕ  33

ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ ।

ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್     ॥೩೩॥

ಕಿಮ್  ಪುನಃ ಬ್ರಾಹ್ಮಣಾಃ ಪುಣ್ಯಾಃ ಭಕ್ತಾಃ  ರಾಜ ಋಷಯಃ ತಥಾ 
ಅನಿತ್ಯಮ್ ಅಸುಖಮ್ ಲೋಕಮ್ ಇಮಮ್  ಪ್ರಾಪ್ಯ ಭಜಸ್ವ ಮಾಮ್-

ಪುಣ್ಯದ ಫಲದಿಂದ ಬ್ರಾಹ್ಮಣರಾಗಿ, ಋಷಿಗಳಂಥ ಅರಸರಾಗಿ ಹುಟ್ಟಿ ಬಂದು ಭಕ್ತಿ ಮಾಡುವವರ ಬಗೆಗೆ ಹೇಳುವುದೇನು? ಅದರಿಂದ ಸ್ಥಿರವಲ್ಲದ, ಸುಖವಿಲ್ಲದ ನರಜನ್ಮ ಬಂದಾಗ ನನ್ನನ್ನು ಆರಾಧಿಸು.

“ಪುಣ್ಯದ ಫಲದಿಂದ ರಾಜರ್ಷಿಗಳಾಗಿ, ಬ್ರಹ್ಮಜ್ಞಾನಿಗಳಾಗಿ ಹುಟ್ಟಿ ಭಗವಂತನನ್ನು ಆರಾಧಿಸುವವರ ಬಗೆಗೆ ವಿಶೇಷವಾಗಿ ಹೇಳಬೇಕೆನು?”    ಎಂದು ಪ್ರಶ್ನಿಸುತ್ತಾನೆ ಕೃಷ್ಣ. ಹೀಗೆ ಭಗವಂತನಲ್ಲಿ ಶರಣಾಗಿ ಆಶ್ರಯ ಬೇಡುವ ಪ್ರತಿಯೊಬ್ಬರ ರಕ್ಷಣೆಯ ಭಾರ ಭಗವಂತನದ್ದು. ಅದಕ್ಕಾಗಿ ಕೃಷ್ಣ ಇಲ್ಲಿ ನಮಗೆ ಕಿವಿ ಮಾತನ್ನು ಹೇಳುತ್ತಾನೆ: “ನೀನು ಈ ಪ್ರಪಂಚವೇ ಸರ್ವಸ್ವ ಎಂದು ಪ್ರಪಂಚದಲ್ಲಿ ಬಿದ್ದು ಒದ್ದಾಡಬೇಡ. ಏಕೆಂದರೆ ಇದು  ‘ಅನಿತ್ಯಮ್ ಅಸುಖಮ್ ಲೋಕಮ್’. ಇದರಲ್ಲಿ ಸುಖವಿಲ್ಲ. ಇದು ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಆನಂದವನ್ನು ಪಡೆಯುವುದಕ್ಕೋಸ್ಕರ ನನ್ನನ್ನು ಆಶ್ರಯಿಸು. ನನಗೆ ಶರಣಾಗು. ನಿನ್ನನ್ನು ಉದ್ಧಾರ ಮಾಡುವ ಹೊಣೆ ನನ್ನದು”.

ಅಧ್ಯಾಯ - 09: ಶ್ಲೋಕ  34

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ॥೩೪॥

ತ್ ಮನಾಃ  ಭವ ಮತ್ ಭಕ್ತಃ  ಮತ್ ಯಾಜೀ ಮಾಮ್  ನಮಸ್ಕುರು          
ಮಾಮ್ ಏವ ಎಷ್ಯಸಿ ಯುಕ್ತ್ವಾ ಏವಮ್ ಆತ್ಮಾನಮ್  ಮತ್ ಪರಾಯಣಃ 

ನನ್ನಲ್ಲೆ ಬಗೆಯಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೆ ಆರಾಧಿಸು.ನನಗೇ ತಲೆಬಾಗು. ಬಗೆಯನ್ನು ಹೀಗೆ ಅಣಿಗೊಳಿಸಿ ನನಗೇ ಮೊರೆ ಹೊಕ್ಕಾಗ ನನ್ನನ್ನೆ ಸೇರುವೆ.

ನಾವು ನಮ್ಮ ಜೀವನದಲ್ಲಿ ಸಾಧಿಸಬೇಕಾದ ಒಂದೇ ಒಂದು ಸಂಗತಿ ಎಂದರೆ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವುದು. ವ್ಯವಹಾರ ಪ್ರಪಂಚದಲ್ಲಿನ ಸಾವಿರಾರು ವಿಚಾರಗಳು ನಮ್ಮನ್ನು ಉದ್ಧಾರ ಮಾಡಲಾರವು. ಅವು ನಮ್ಮನ್ನು ಮರಳಿ ಅಧಃಪಾತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಅವೆಲ್ಲವನ್ನೂ ಬಿಟ್ಟು ಮನಸ್ಸಿನಲ್ಲಿ ಭಗವಂತನನ್ನು ತುಂಬಿಸಬೇಕು. ಭಗವಂತನನ್ನು ನಿರಂತರ ಪ್ರೀತಿಸಬೇಕು. ನೀನು ಎಷ್ಟು ಗಾಢವಾಗಿ ಭಗವಂತನನ್ನು ಪ್ರೀತಿಸುತ್ತೀಯೋ ಅಷ್ಟೇ ಗಾಢವಾಗಿ ಭಗವಂತ ನಿನ್ನನ್ನು ಪ್ರೀತಿಸುತ್ತಾನೆ. ಶ್ರೀ ಸೂಕ್ತದಲ್ಲಿ ಹೇಳುವಂತೆ “ತ್ವನ್ಮಾ ಭಜಸ್ವ ಪದ್ಮಾಕ್ಷಿ, ಯೇನ ಸೌಖ್ಯಂ ಲಭಾಮ್ಯಹಮ್”. ನಾನು ನಿನ್ನನ್ನು ಭಜನೆ ಮಾಡುತ್ತೇನೆ, ನೀನು ನನ್ನನ್ನು ಭಜನೆ ಮಾಡು”. ಇಲ್ಲಿ ಭಜನೆ ಎಂದರೆ ಭಕ್ತಿಯಿಂದ ಪ್ರೀತಿಸುವುದು.

ನೀನು ಏನು ಪೂಜೆ ಮಾಡುತ್ತೀಯೋ ಅದು ಭಗವಂತನ  ಪೂಜೆಯಾಗಿರಲಿ, ನಿನ್ನ ಎಲ್ಲಾ ಪ್ರೀತಿಯಲ್ಲಿ ಭಗವಂತನನ್ನು ಕಾಣು. ನೀನು ಮಾಡುವ ಎಲ್ಲಾ ನಮಸ್ಕಾರ ಭಗವಂತನ ನಮಸ್ಕಾರವಾಗಿರಲಿ. ಹೀಗೆ ಮಾಡಿ ನಿನ್ನ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿ ಇಡಿಯ ಬದುಕನ್ನು ಭಗವನ್ಮಯ ಮಾಡಿಕೊ- ನಿನಗೆ ಎಲ್ಲಕ್ಕಿಂತ ದೊಡ್ಡ ವಸ್ತು ಭಗವಂತ, ಬದುಕಿನ ಸಾರ ಸರ್ವಸ್ವ ಭಗವಂತ, ನಿರಂತರ ಚಿಂತನೆಯ ವಸ್ತು ಭಗವಂತನಾಗಲಿ. ನಿನ್ನ ಬದುಕಿನ ಒಂದೊಂದು ಕ್ರಿಯೆಯೂ ಭಗವಂತನ ಆರಾಧನೆಯಾಗಲಿ. ಆಗ “ನೀನು ನನ್ನನ್ನು ಸೇರಲೇ ಬೇಕು” ಎನ್ನುತ್ತಾನೆ ಕೃಷ್ಣ. ಹೀಗೆ ಮೋಕ್ಷ ಸಾಧಕವಾದ ಉಪಾಸನೆಯನ್ನು ಕೃಷ್ಣ ವಿವರಿಸಿದ ಅನ್ನುವಲ್ಲಿಗೆ ಒಂಬತ್ತನೆಯ ಅಧ್ಯಾಯ ಮುಕ್ತಾಯವಾಯಿತು.

ಇತಿ  ನವಮೋSಧ್ಯಾಯಃ

      
ಒಂಬತ್ತನೆಯ ಅಧ್ಯಾಯ ಮುಗಿಯಿತು   
*******
Previous
Next Post »