ಶ್ರೀಮದ್ಭಗವದ್ಗೀತಾ 》ಅಧ್ಯಾಯ :- 10 》ವಿಭೂತಿ ವಿಸ್ತಾರ ಯೋಗ.

ಅಧ್ಯಾಯ ಹತ್ತು

 ನಾವು ಉಪಾಸನೆ ಮಾಡಬೇಕಾದ ಭಗವಂತನ ಗುಣವನ್ನು, ಜ್ಞಾನ ವಿಜ್ಞಾನವನ್ನು ಅರ್ಜುನನಿಗೆ ವಿವರಿಸಿದ ಕೃಷ್ಣ, ಆತನಲ್ಲಿ ಅರಳಿದ ಜ್ಞಾನ ತೃಷೆಯನ್ನು, ಪೂರ್ಣ ನಿಷ್ಠೆಯನ್ನು ಗುರುತಿಸಿ-ವಿಶೇಷವಾಗಿ ಉಪಾಸನೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅನುಸಂಧಾನವನ್ನು, ಭಗವಂತನ ವಿಭೂತಿಯನ್ನು  ಈ ಅಧ್ಯಾಯದಲ್ಲಿ ವಿವರಿಸುತ್ತಾನೆ.

ಸಾಮಾನ್ಯವಾಗಿ ಅಮೂಲ್ಯ ವಿದ್ಯೆಯನ್ನು ಗುರು ಸುಲಭವಾಗಿ ಬಹಿರಂಗಗೊಳಿಸುವುದಿಲ್ಲ.  ಶಿಷ್ಯ ಗುರುವಿನಲ್ಲಿ ಪೂರ್ಣ ನಿಷ್ಠೆ ತೋರಿದಾಗ, ಆತನಲ್ಲಿ ಯೋಗ್ಯತೆ ಇದ್ದಾಗ  ಮಾತ್ರ ಅಂತಹ ವಿಚಾರವನ್ನು ಬಿಚ್ಚಬೇಕು ಎನ್ನುತ್ತದೆ ಶಾಸ್ತ್ರ. ಹೀಗಾಗಿ ಗುರು ತನ್ನ ಶಿಷ್ಯನನ್ನು ಪರೀಕ್ಷೆ ಮಾಡದೆ ಅಮೂಲ್ಯ ವಿಚಾರವನ್ನು ಆತನಿಗೆ ಹೇಳುವುದಿಲ್ಲ. ಇದಕ್ಕೆ ಉತ್ತಮ ದೃಷ್ಟಾಂತವನ್ನು  ಪ್ರಶ್ನೋಪನಿಷತ್ತಿನಲ್ಲಿ ಕಾಣಬಹುದು.

ಪಿಪ್ಪಲಾದನ ಹತ್ತಿರ ಬಂದ ಆರು ಮಂದಿ ಮಹಾನ್ ವಿದ್ವಾಂಸರನ್ನು ಕುರಿತು ಆತ ಹೀಗೆ ಹೇಳುತ್ತಾನೆ:
ಭೂಯ ಏವ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ಸಂವಸ್ಸರಂ ಸಂವತ್ಸ್ಯಥ;

ಯಥಾಕಾಮಂ ಪ್ರಶ್ನಾನ್ ಪೈಚ್ಛತ; ಯದಿ ವಿಜ್ಞಾಸ್ಯಾಮಃ ಸರ್ವಂ ಹ ವೋ ವಕ್ಷ್ಯಾಮ ಇತಿ ||೨|| 
 “ಒಂದು ವರ್ಷ ತಪಸ್ಸಿನಿಂದಲೂ ಬ್ರಹ್ಮಚರ್ಯದಿಂದಲೂ ಶ್ರದ್ಧೆಯಿಂದ ವಾಸಮಾಡಿರಿ ಒಂದು ವರ್ಷದ ನಂತರ ನಿಮ್ಮ ಇಚ್ಛಾನುಸಾರ ಪ್ರಶ್ನೆ ಕೇಳಿ, ನನಗೆ ಗೊತ್ತಿದ್ದರೆ ಉತ್ತರಿಸುತ್ತೇನೆ” ಎಂದು.  ಇಲ್ಲಿ ಗುರು ಮತ್ತು ಶಿಷ್ಯರ ಪರಸ್ಪರ ಪರೀಕ್ಷೆ ಎದ್ದು ಕಾಣುತ್ತದೆ.  ಆದರೆ ಗುರು ತನ್ನ ಯೋಗ್ಯ ಶಿಷ್ಯನಲ್ಲಿ ಪೂರ್ಣ ನಿಷ್ಠೆಯನ್ನು ಗುರುತಿಸಿದಾಗ, ಆತ ಪ್ರಶ್ನಿಸದಿದ್ದರೂ ಕೂಡಾ ಸಂತೋಷದಿಂದ ತನ್ನಲ್ಲಿರುವ ಜ್ಞಾನವನ್ನು ಆತನಿಗೆ  ಧಾರೆಯೆರೆಯುತ್ತಾನೆ. ಈ ಹಂತದಲ್ಲಿ ಕೃಷ್ಣ ಅರ್ಜುನನಲ್ಲಿ ಕಂಡಿದ್ದು ಇಂತಹ ಪೂರ್ಣನಿಷ್ಠೆ.


ಅಧ್ಯಾಯ - 10: ಶ್ಲೋಕ  01

ಭಗವಾನುವಾಚ ।

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ ।

ಯತ್ ತೇSಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ ॥೧॥

ಭಗವಾನ್ ಉವಾಚ –ಭಗವಂತ ಹೇಳಿದನು:
ಭೂಯಃ  ಏವ ಮಹಾಬಾಹೋ ಶೃಣು ಮೇ ಪರಮಮ್  ವಚಃ 
ತ್  ತೇ ಅಮ್  ಪ್ರೀಯಮಾಣಾಯ ವಕ್ಷ್ಯಾಮಿ ಹಿತ ಕಾಮ್ಯಯಾ-

 ಓ ಮಹಾವೀರ, ಇನ್ನೂ  ಕೇಳು ನನ್ನ ಹಿರಿನುಡಿಯನ್ನು, ಏಕೆಂದರೆ ಕೇಳಿ ಖುಷಿಪಡುತ್ತಿರುವ ನಿನಗೆ ಒಳಿತನ್ನು ಬಯಸಿಯೆ ನಾನು ಹೇಳುತ್ತಿದ್ದೇನೆ. ಗುರುವಿಗೆ ಜ್ಞಾನ ಕೊಡುವುದರಲ್ಲಿ ಅತೃಪ್ತಿ ಬರುವುದು ಶಿಷ್ಯನ ಪ್ರತಿಭೆ ಮತ್ತು ಗುಣ ವಿಶೇಷದಿಂದ. ಇಲ್ಲಿ ಕೃಷ್ಣ ಹೇಳುತ್ತಾನೆ:  “ನಿನಗೆ ಇನ್ನಷ್ಟು ಹೇಳುತ್ತೇನೆ”  ಎಂದು. ಏಕೆಂದರೆ ಇಲ್ಲಿ ಹೇಳುವ ವಿಷಯ “ಪರಮಮ್  ವಚಃ” ಎನ್ನುತ್ತಾನೆ ಕೃಷ್ಣ.  ಇಲ್ಲಿ ‘ಪರಮಂ’ ಎಂದರೆ ನಾವು ತಿಳಿದುಕೊಳ್ಳಬೇಕಾದ ವಿಷಯದಲ್ಲೇ ಶ್ರೇಷ್ಠವಾದ ವಿಷಯ. ಅದು ಎಲ್ಲಕ್ಕಿಂತ ಮಿಗಿಲಾದ ಪರತತ್ವದ ಅರಿವನ್ನು ಕೊಡತಕ್ಕ ಶ್ರೇಷ್ಠ ಜ್ಞಾನ. ಇಡೀ ಲೋಕಕ್ಕೇ ಉಪಕಾರವಾಗುವಂತದ್ದು . ಇದಕ್ಕಿಂತ ಮಿಗಿಲಾದ ಇನ್ನೊಂದು ಸಂಗತಿ ಇಲ್ಲ. “ನೀನು ಈ ಯುದ್ಧ ಭೂಮಿಯಲ್ಲಿ ನಿಂತು ಇದನ್ನು ಕೇಳಿ ಸಂತೋಷ ಪಡುತ್ತಿದ್ದೀಯ, ನಿನ್ನಲ್ಲಿ ಆ ಆನಂದ ಚಿಮ್ಮುತ್ತಿದೆ. ಅದಕ್ಕೋಸ್ಕರ, ಜಗತ್ತಿನ ಹಿತಕ್ಕೋಸ್ಕರ  ಹೇಳುತ್ತೇನೆ ಕೇಳು” ಎನ್ನುತ್ತಾನೆ ಕೃಷ್ಣ.


ಅಧ್ಯಾಯ - 10: ಶ್ಲೋಕ  02

ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ ।

ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ॥೨॥

ನ ಮೇ ವಿದುಃ ಸುರ ಗಣಾಃ ಪ್ರಭವಮ್  ನ ಮಹಾ ಋಷಯಃ 
ಅಹಮ್ ಆದಿಃ ಹಿ ದೇವಾನಾಮ್  ಹಾ ಋಷೀಣಾಮ್  ಚ ಸರ್ವಶಃ 

ನನ್ನ ಆಳವನ್ನು, [ನಾನು ಜಗವನ್ನು ನಿರ್ಮಿಸುವ ಬಗೆಯನ್ನು] ದೇವತೆಗಳಾಗಲಿ, ಮಹರ್ಷಿಗಳಾಗಲಿ, ಅಥವಾ ಇನ್ಯಾರೂ ತಿಳಿದಿಲ್ಲ. ದೇವತೆಗಳಿಗೆ, ಹಿರಿಯ ಋಷಿಗಳಿಗೆ , ಎಲ್ಲರಿಗೂ ಮೂಲ ನಾನೆ ಅಲ್ಲವೆ?

ಕೃಷ್ಣ ಇಲ್ಲಿ ಒಂದು ಮೂಲಭೂತವಾದ ಸಂಗತಿಯನ್ನು ತಿಳಿಸುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ: “ನನ್ನ ಪ್ರಭವವನ್ನು ಮಹರ್ಷಿಗಳಿಂದ ಹಿಡಿದು ಬ್ರಹ್ಮಾದಿ ದೇವತೆಗಳೂ ತಿಳಿದಿಲ್ಲ” ಎಂದು. ಇಲ್ಲಿ ‘ಪ್ರಭವ’ ಎನ್ನುವ ಪದವನ್ನು ಮೂರು ಅರ್ಥದಲ್ಲಿ ಬಳಸಲಾಗಿದೆ. ಪ್ರಭವ ಎಂದರೆ ಮೂಲ ಅಥವಾ ಹುಟ್ಟು; ಪ್ರಭವ ಎಂದರೆ ಸಾಮರ್ಥ್ಯ ಅಥವಾ ಹಿರಿಮೆ; ಪ್ರಭವ ಎಂದರೆ ಜಗತ್ತಿನ ಉತ್ಪತ್ತಿ. “ನನ್ನ ಮೂಲ, ನನ್ನ ಮಹಿಮೆ ಮತ್ತು ನನ್ನಿಂದಾದ ಈ ಜಗತ್ತಿನ ಹುಟ್ಟು-ನನ್ನನ್ನು ಸಾಕ್ಷಾತ್ಕರಿಸಿಕೊಂಡ  ಮಹಾಜ್ಞಾನಿಗಳಿಂದ ಹಿಡಿದು, ನನ್ನ ಅಪರೋಕ್ಷ ಜ್ಞಾನ ಪಡೆದ ಬ್ರಹ್ಮಾದಿ ದೇವತೆಗಳಿಗೂ ತಿಳಿದಿಲ್ಲ” ಎನ್ನುತ್ತಾನೆ ಕೃಷ್ಣ.

ಅಧ್ಯಾಯ - 10: ಶ್ಲೋಕ  03

ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ ।

ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ      ॥೩॥

ಯಃ ಮಾಮ್ ಅಜಮ್ ಅನಾದಿಮ್  ಚ ವೇತ್ತಿ ಲೋಕ ಹಾ ಈಶ್ವರಮ್ 
ಸಮ್ಮೂಢಃ  ಸಃ  ಮರ್ತ್ಯೇಷು ಸರ್ವ ಪಾಪೈಃ ಪ್ರಮುಚ್ಯತೇ 

ನಾನು ಹುಟ್ಟಿರದವನು. ಎಲ್ಲವನ್ನು ನಡೆಸುತ್ತ ಎಲ್ಲದರ ಮೊದಲಿದ್ದವನು [ಪ್ರಾಣತತ್ವಕ್ಕೂ ಮೂಲಕಾರಣ]. ಎಲ್ಲ ಲೋಕಗಳ ಒಡೆಯರಿಗು ಹಿರಿಯೊಡೆಯ. ಮನುಜರಲ್ಲಿ ಹೀಗೆ ನನ್ನನ್ನು ತಿಳಿದವನು ಮೋಹವಳಿದವನು. ಅವನು ಪಾಪಗಳಿಂದ ಪಾರಾಗುತ್ತಾನೆ.

ನಮ್ಮಲ್ಲಿ ಕೆಲವರಿಗೆ ಒಂದು ಪ್ರಶ್ನೆ ಬರುವುದಿದೆ. “ಸಕಲ ಜೀವಜಾತವನ್ನು ಭಗವಂತ ಸೃಷ್ಟಿ ಮಾಡಿದರೆ ಆತನನ್ನು ಯಾರು ಸೃಷ್ಟಿ ಮಾಡಿದರು” ಎಂದು. ಒಂದು ವೇಳೆ ಭಗವಂತನನ್ನು ಇನ್ನೊಬ್ಬ ಸೃಷ್ಟಿ ಮಾಡುತ್ತಿದ್ದರೆ ನಾವು ಈತನನ್ನು ದೇವರು ಎಂದು ಹೇಳಲಾಗುತ್ತಿರಲಿಲ್ಲ ಎನ್ನುವ ವಿಚಾರ ಕೂಡ ನಮಗೆ ಹೊಳೆಯುವುದಿಲ್ಲ. ಕೃಷ್ಣನಿಗೆ ನಮ್ಮ ಸಂದೇಹ ಏನು ಎನ್ನುವುದು ಗೊತ್ತು. ಅದಕ್ಕಾಗಿ ಆತ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ನೀಡಿದ್ದಾನೆ. ಕೃಷ್ಣ ಹೇಳುತ್ತಾನೆ “ಯಃ ಮಾಮ್ ಅಜಮ್ ಅನಾದಿಮ್ ” ಎಂದು. ಇಲ್ಲಿ ‘ಅಜ’ ಎಂದರೆ ಹುಟ್ಟಿರದವನು. ಭಗವಂತ ಹುಟ್ಟು ಸಾವಿನಿಂದಾಚೆ ನಿಂತವನು. ಅದಕ್ಕಾಗಿ ನಾವು ಹುಟ್ಟು-ಸಾವಿನಿಂದ ಪಾರಾಗಬೇಕಾದರೆ ಆತನನ್ನು ಉಪಾಸನೆ ಮಾಡಿ ಆತನನ್ನು ಸೇರಬೇಕು.  ಭಗವಂತ ಅನಾದಿ. ಇಲ್ಲಿ ಅನಾದಿ(ಅನ+ಆದಿ) ಎಂದರೆ: ‘ಸೃಷ್ಟಿಗೆ ಮೊದಲು ಪ್ರೇರಣೆ ಮಾಡುತ್ತಿದ್ದವ ಮತ್ತು ಸೃಷ್ಟಿ ಮಾಡಿ ಈ ಸೃಷ್ಟಿಯಲ್ಲಿ ಸಮಸ್ತ ವ್ಯಾಪಾರವನ್ನು ನಿಯಂತ್ರಣ ಮಾಡತಕ್ಕ ಸರ್ವೋತ್ಕೃಷ್ಟ ಶಕ್ತಿ’. 

ಭಗವಂತ ‘ಲೋಕಮಹೇಶ್ವರಃ’. ಬ್ರಹ್ಮಾದಿ ಸಮಸ್ತ ದೇವತೆಗಳು-'ಲೋಕೇಶರು'. ಅವರನ್ನು ಹೆತ್ತ ಮಾತೆ ಲಕ್ಷ್ಮಿ-'ಲೋಕೇಶ್ವರಿ'. ಅವಳಿಗೂ ಮಹಾನ್-'ಲೋಕಮಹೇಶ್ವರ'  ಆ ಭಗವಂತ. ಆತನಿಂದ ಮಹತ್ತಾದ ಇನ್ನೊಂದು ತತ್ವವಿಲ್ಲ.
ಮಹರ್ಷಿಗಳು, ದೇವತೆಗಳು, ಎಲ್ಲರನ್ನು  ಸೃಷ್ಟಿ ಮಾಡಿದವ ಆ ಭಗವಂತ. ಆದ್ದರಿಂದ ಇವರ್ಯಾರೂ ಆತನ ಮಹಿಮೆಯ ತುದಿಯನ್ನು ಕಂಡಿಲ್ಲ. ಋಗ್ವೇದದಲ್ಲಿ ಒಂದು ಕಡೆ ಹೀಗೆ ಹೇಳುತ್ತಾರೆ: ನ ತೇ ವಿಷ್ಣೋ ಜಾಯಮಾನೋ ನಾ ಜಾತೋ ದೇವ ಮಹಿಮ್ನಃ ಪರಮಂತಮಾಪ  ಎಂದು. ಹಿಂದೆ ಹುಟ್ಟಿದವರಾಗಲಿ, ಮುಂದೆ ಹುಟ್ಟುವವನಾಗಲಿ,ಭಗವಂತನ ಮಹಿಮೆಯ ತುತ್ತ ತುದಿಯನ್ನು ತಿಳಿದಿಲ್ಲ,  ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಅದು ಅನಂತ.

ಈ ಪ್ರಪಂಚ ಸೃಷ್ಟಿ ಹೇಗಾಯಿತು ಎನ್ನುವುದು ಕೂಡಾ ಯಾರಿಗೂ ತಿಳಿದಿಲ್ಲ. ಏಕೆಂದರೆ ಪ್ರಳಯ ಕಾಲದಲ್ಲಿ ಎಲ್ಲವೂ ಭಗವಂತನ ಉದರದಲ್ಲಿ ನಿದ್ರಾವಸ್ತೆಯಲ್ಲಿದ್ದು, ಆ ನಂತರ ಸೃಷ್ಟಿ ಕಾಲದಲ್ಲಿ ಮೊತ್ತ ಮೊದಲಿಗೆ ಚತುರ್ಮುಖನನ್ನು ಭಗವಂತ ಸೃಷ್ಟಿ ಮಾಡಿದ. ಆದ್ದರಿಂದ ಚತುರ್ಮುಖನ ಹುಟ್ಟಿಗೆ ಮೊದಲು ಆರಂಭವಾದ ಈ ಸೃಷ್ಟಿ ನಿರ್ಮಾಣವನ್ನು ಕಂಡವರ್ಯಾರೂ ಇಲ್ಲ. ಇದಕ್ಕಾಗಿ ಋಗ್ವೇದದಲ್ಲಿ  “ಈ ಸೃಷ್ಟಿಯ ರಹಸ್ಯ ತಿಳಿದಿದ್ದರೆ ಒಬ್ಬ ಜಾಣ ಮಗನಿಗೆ ತಿಳಿದಿರಬೇಕು” ಎನ್ನುತ್ತಾರೆ. ಆತನೇ ಭಗವಂತನ ಸೃಷ್ಟಿಯ ಮೊದಲ ಜೀವ-‘ಚತುರ್ಮುಖ ಬ್ರಹ್ಮ’.  ಈ ಎಲ್ಲಾ ಕಾರಣದಿಂದ ಸಾಮಾನ್ಯ ಮಾನವರಾದ ನಾವು ಭಗವಂತನ ಪೂರ್ಣ ಮಹಿಮೆಯನ್ನು ತಿಳಿಯಲು ಸಾಧ್ಯವೇ ಇಲ್ಲ.

 ಇದನ್ನು ಆಚಾರ್ಯರು ಹೀಗೆ ಹೇಳಿದ್ದಾರೆ: “ಬಹು ಚಿತ್ರ ಜಗತ್  ಬಹುದಾಕಾರಣಾತ್ ಪರಶಕ್ತಿರನಂತ ಗುಣಃ ಪರಮಃ” ಎಂದು. ಭಗವಂತನ ಸೃಷ್ಟಿಯ ಈ ಪ್ರಪಂಚವೇ ಇಷ್ಟೊಂದು ಅದ್ಭುತವಾಗಿರುವಾಗ ಆ ಸೃಷ್ಟಿಕರ್ತ ಅದೆಷ್ಟು ಅದ್ಭುತವಾಗಿರಬೇಕು. ಆದ್ದರಿಂದ ಭಗವಂತ ಅನಂತ ಎನ್ನುವ ನಿಜವನ್ನರಿತು ಆತನನ್ನು ಉಪಾಸನೆ ಮಾಡುವುದೊಂದೇ ಮೋಕ್ಷ ಮಾರ್ಗ. ಭಗವಂತನ ಬಗ್ಗೆ ಈ ನಿಜವನ್ನು ತಿಳಿದವ ‘ಅಸಮ್ಮೂಢ’. ಆತ ಯಾವ ಭ್ರಮೆಗೂ ಒಳಗಾಗದೆ ಸದಾ ಎಲ್ಲರನ್ನೂ ಪ್ರೀತಿಸುತ್ತ ಎಲ್ಲರಲ್ಲೂ ಭಗವಂತನನ್ನು ಕಾಣುತ್ತಿರುತ್ತಾನೆ. “ಈ ಸತ್ಯವನ್ನರಿತ ಸಾಧಕ  ಸರ್ವ ಪಾಪಗಳಿಂದ ಪಾರಾಗುತ್ತಾನೆ” ಎನ್ನುವುದು ಕೃಷ್ಣನ ಭರವಸೆ.

ಅಧ್ಯಾಯ - 10: ಶ್ಲೋಕ  04

ಬುದ್ಧಿರ್ಜ್ಞಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ ।

ಸುಖಂ ದುಃಖಂ ಭವೋSಭಾವೋ ಭಯಂ ಚಾಭಯಮೇವ ಚ ॥೪॥

ಬುದ್ಧಿಃ ಜ್ಞಾನಮ್ ಅಸಮ್ಮೋಹಃ ಕ್ಷಮಾ ಸತ್ಯಮ್  ದಮಃ ಶಮಃ 
ಸುಖಮ್  ದುಃಖಮ್  ಭವಃ ಅಭಾವಃ  ಭಯಮ್ ಚ ಅಭಯಮ್ ಏವ ಚ --

ವಿವೇಕಃ[ಅಂತಃಕರಣ], ಅರಿವು, ಕೆಟ್ಟದ್ದನ್ನು ಮಾಡಬಯಸದಿರುವುದು, ತಪ್ಪಿಗನ ಮೇಲೂ ರೇಗದಿರುವುದು, ದಿಟದ ನಡೆ, ಇಂದ್ರಿಯಗಳ ಹಿಡಿತ, ಭಗವಂತನಲ್ಲಿ ನಿಷ್ಠೆ, ಸುಖ-ದುಃಖ, ಹುಟ್ಟು-ಸಾವು, ಪುಕ್ಕು-ಕೆಚ್ಚು ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ. 

ಭಗವಂತನ ಉಪಾಸನೆಯಲ್ಲಿ ನಾವು ತಿಳಿದಿರಬೇಕಾದ ಮುಖ್ಯವಾದ ವಿಚಾರವನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ನಮಗೆ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯಂ, ದಮಃ-ಶಮಃ -ಎಲ್ಲವನ್ನು ಕೊಡುವವನು ಆ ಭಗವಂತ. ಕೆಲವರಿಗೆ ತಾವು ತುಂಬಾ ಬುದ್ಧಿವಂತರು ಎನ್ನುವ ಭ್ರಮೆ ಇರುತ್ತದೆ. ಆದರೆ ಆ ಬುದ್ಧಿಶಕ್ತಿಯನ್ನು ಕರುಣಿಸುವವ ಭಗವಂತ ಎನ್ನುವ ಸತ್ಯವನ್ನು ಅವರು ತಿಳಿದಿರುವುದಿಲ್ಲ. ಕೃಷ್ಣ ಹೇಳುತ್ತಾನೆ: “ನಿನಗೆ ಬುದ್ಧಿ ಕೊಡುವವನೂ ನಾನು,  ಜ್ಞಾನ ಕೊಡುವವನೂ ನಾನು” ಎಂದು. ಇಲ್ಲಿ ‘ಜ್ಞಾನ’ ಎಂದರೆ ಒಂದು ವಸ್ತುವಿನ ಅರಿವು.

 ‘ಬುದ್ಧಿ’ ಎಂದರೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ವಿವೇಕ. ನಮ್ಮಲ್ಲಿ ಬುದ್ಧಿ ಮತ್ತು ಜ್ಞಾನ ಎರಡೂ ಇದ್ದಾಗ ಮಾತ್ರ ಅದು ಪೂರ್ಣ. ಜ್ಞಾನವಿದ್ದು ಬುದ್ಧಿ ಇಲ್ಲದಿದ್ದರೆ ವೇದ ನಮ್ಮಿಂದ ದೂರವಾಗುತ್ತದೆ. “ಆಚಾರ ಹೀನಂ ನ ಪುನಂತಿ ವೇದಾಃ”-ಒಬ್ಬ ಮನುಷ್ಯ ಆಚಾರ ಹೀನನಾಗಿದ್ದರೆ ಅವನನ್ನು ಎಲ್ಲ ವೇದಗಳೂ  ಕೈಬಿಡುತ್ತವೆ. ರೆಕ್ಕೆ ಬಲಿತ ಹಕ್ಕಿಮರಿಗಳು ತಮ್ಮ ಗೂಡನ್ನು ಬಿಟ್ಟು ಹಾರಿ ಹೋದಂತೆ ವೇದವಿದ್ಯೆ ಅವನನ್ನು ಬಿಟ್ಟು ಹಾರಿ ಹೋಗುತ್ತದೆ. 

ಆಚಾರವಂತನಾಗಿರಬೇಕು ಎಂದು ತಿಳಿದಿರುವುದು ಜ್ಞಾನ. ಆದರೆ ಯಾವುದು ಆಚಾರ-ಯಾವುದು ಅನಾಚಾರ ಎನ್ನುವ ವಿವೇಕ ಪ್ರಜ್ಞೆ-ಬುದ್ಧಿ. ಬುದ್ಧಿ-ಜ್ಞಾನದ ಜೊತೆಗೆ  ಯಾವುದೇ ಸಂಶಯವಿಲ್ಲದೆ ಸತ್ಯವನ್ನು ತಿಳಿಯುವ  ಗ್ರಹಣಶಕ್ತಿ ‘ಅಸಮ್ಮೋಹ’. ಇವು ಬದುಕಿನಲ್ಲಿ ನಮಗೆ ಆಸರೆಯಾಗಿರುವ  ಮೂರು ಮುಖ್ಯ ಆಧಾರಸ್ಥಂಭಗಳು. ನಾವು ಇದನ್ನು ತಿಳಿದು ಆ ಭಗವಂತನನ್ನು ಉಪಾಸನೆ ಮಾಡಬೇಕು.

ನಾಲ್ಕನೇ ಗುಣ ‘ಕ್ಷಮಾ’. ಇದು ಅತ್ಯಂತ ದೊಡ್ಡ ಗುಣ. ಯಾರಾದರು ನಮ್ಮನ್ನು ಟೀಕೆ ಮಾಡಿದರೆ- ಆ ಟೀಕೆಯಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಅಂಶ ಇದ್ದರೆ ತಿದ್ದಿಕೊಳ್ಳುವುದು, ಇಲ್ಲದೆ ಅದು ಕೇವಲ ಅಸೂಯೆಯ ಟೀಕೆಯಾಗಿದ್ದರೆ ಯಾವುದೇ ಪ್ರತಿಕಾರವಿಲ್ಲದೆ ವಿಷಯವನ್ನು ಅಲ್ಲೇ ಬಿಟ್ಟುಬಿಡುವುದು ‘ಕ್ಷಮಾ’. 

ಐದನೇ ಗುಣ ‘ಸತ್ಯಂ’. ಸತ್ಯಮ್  ಎಂದರೆ ಪ್ರಾಮಾಣಿಕತೆ. ಇಂದು ನಾವು ಸಜ್ಜನಿಕೆಯನ್ನು ಮರೆತು ಸಜ್ಜೆನಿಕೆಯ ಮುಖವಾಡದಲ್ಲಿ ಬದುಕುತ್ತಿದ್ದೇವೆ. ಅಪ್ರಮಾಣಿಕತೆ ಎನ್ನುವುದು ನಮ್ಮ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ. ಪ್ರಾಮಾಣಿಕತೆ ಇಲ್ಲದೆ ಯಾವ ಆಚಾರ ಸಂಪತ್ತಿದ್ದರೂ ಉಪಯೋಗವಿಲ್ಲ. ಒಬ್ಬ ವ್ಯಕ್ತಿಯ ಎದುರೊಂದು ಮತ್ತು ಹಿಂದೊಂದು ಮಾತನಾಡುವುದು ಅಪ್ರಮಾಣಿಕತೆ. ನಮಗೆ ಇನ್ನೊಬ್ಬ ವ್ಯಕ್ತಿಯ ವಿಚಾರ ಇಷ್ಟವಾಗದೆ ಇದ್ದಲ್ಲಿ ಅವರಿಗೆ ಅದನ್ನು ನೇರವಾಗಿ ಹೇಳಬಹುದು ಅಥವಾ ಅವರಿಂದ ದೂರವಿರಬೇಕು. ನಮ್ಮಲ್ಲಿ ಪ್ರಾಮಾಣಿಕತೆ ಎಲ್ಲಿಯ ತನಕ ಬೆಳೆಯುವುದಿಲ್ಲವೋ ಅಲ್ಲಿಯ ತನಕ ಯಾವ ಶಾಸ್ತ್ರವೂ ನಮ್ಮನ್ನು ಉದ್ಧಾರ ಮಾಡುವುದಿಲ್ಲ. ನಾವು ನಮಗೆ ಇಂತಹ ಪ್ರಾಮಾಣಿಕತೆ ಕೊಡು ಎಂದು ಭಗವಂತನನ್ನು ಉಪಾಸನೆ ಮಾಡಬೇಕು.

ಆರನೆಯದಾಗಿ ದಮಾಃ. ಇದು ಇಂದ್ರಿಯಗಳಿಗೆ ಸಂಬಂಧಪಟ್ಟಿದ್ದು. ನಮ್ಮ ಇಂದ್ರಿಯಗಳು ನಾವು ಹೇಳಿದಂತೆ ಕೇಳುವುದಿಲ್ಲ. ಅವು ನಮ್ಮನ್ನು ಬೇಡದ ಕಡೆ ಸೆಳೆಯುತ್ತವೆ. ಇದರಿಂದ ನೋಡಬಾರದ್ದನ್ನು ನೋಡುವುದು, ಆಡಬಾರದ್ದನ್ನು ಆಡುವುದನ್ನು ನಾವು ಮಾಡುತ್ತೇವೆ. ಇಂತಹ ಇಂದ್ರಿಯನಿಗ್ರಹ ದಮಾಃ. ಇಂದ್ರಿಯ ನಿಗ್ರಹಕ್ಕೆ ಇರುವ ಏಕಮಾತ್ರ ಮಾರ್ಗ ಭಗವಂತನಲ್ಲಿ ಶರಣಾಗತಿ.

ಏಳನೆಯ ಗುಣ ಶಮಾಃ. ನಮ್ಮ ಮನಸ್ಸು ಶಾಂತವಾಗಿರುವುದು(to be in blissfull state) ಶಮಾಃ. ಇಂದು ನಾವೆಲ್ಲರೂ ಬದುಕುತ್ತಿರುವುದು ಅಶಾಂತಿ(Tension)ಯಿಂದಲೇ! ಇದಕ್ಕೆ ಮೂಲ ಕಾರಣ ನಾವು ನಮ್ಮ ಮನಸ್ಸನ್ನು ಲೌಕಿಕ ವಿಚಾರದಲ್ಲಿ ಕೇಂದ್ರೀಕರಿಸಿ ಸಾಗುತ್ತಿರುವುದು. ಲೌಕಿಕ ವಿಚಾರವನ್ನು ಬಿಟ್ಟು, ಮನಸ್ಸನ್ನು ಭಗವಂತನ ಕಡೆಗೆ ಹರಿಸಿದಾಗ ಮನಸ್ಸು ಹಾಯಾಗುತ್ತದೆ. ಜೀವನದಲ್ಲಿ ಸಮಸ್ಯೆ ಬಂದರೆ “ದೇವರಿದ್ದಾನೆ, ಆತ ಬಿಟ್ಟು ಹಾಕುವುದಿಲ್ಲ” ಎನ್ನುವ ದೃಢನಂಬಿಕೆ ಉಳ್ಳವ ಈ ಸ್ಥಿತಿಯನ್ನು ಗಳಿಸಬಲ್ಲ. ಒಟ್ಟಿನಲ್ಲಿ 'ನಮ್ಮ ಒಳಪ್ರಪಂಚದ ಸರ್ವಸ್ವವೂ ಭಗವಂತ ಎನ್ನುವ ಪರಿಜ್ಞಾನದಿಂದ ನಾವು ಉಪಾಸನೆ ಮಾಡಬೇಕು'-ಎನ್ನುವುದು ಇಲ್ಲಿರುವ ಮೂಲ ಸಂದೇಶ.

ಮುಂದುವರಿದು ಕೃಷ್ಣ ಹೇಳುತ್ತಾನೆ: “ಸುಖ-ದುಃಖ, ಹುಟ್ಟು-ಸಾವು, ಪುಕ್ಕು-ಕೆಚ್ಚು- ಬಗೆ ಬಗೆಯ ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ” ಎಂದು. ಸುಖ-ದುಃಖ ಎನ್ನುವುದು ದ್ವಂದ್ವ. ಜೀವನದಲ್ಲಿ ಇವೆರಡೂ ಒಟ್ಟಿಗೇ ಇರುತ್ತವೆ ಮತ್ತು  ಒಂದರ ನಂತರ ಒಂದು ಬರುತ್ತಿರುತ್ತವೆ. ಯಾರಿಗೂ ಸುಖವಿಲ್ಲದ ದುಃಖವಾಗಲಿ, ದುಃಖವಿಲ್ಲದ ಸುಖವಾಗಲಿ ಇಲ್ಲ. ಇದು ನಮ್ಮ ಜೀವನದಲ್ಲಿ ಹಗಲು-ರಾತ್ರಿ ಇದ್ದಂತೆ. ಈ ಸತ್ಯವನ್ನು ತಿಳಿದಾಗ ದುಃಖವೆನ್ನುವುದು ದುರ್ಬರವಾಗದು. ನಮ್ಮ ಜೀವನದಲ್ಲಿ ಏರಿಳಿತ ಎನ್ನುವುದು ಸಾಮಾನ್ಯ. ಹುಟ್ಟು-ಸಾವು ನೈಸರ್ಗಿಕ. ನಮ್ಮಲ್ಲಿ ಜ್ಞಾನವಿದ್ದರೆ ಅದೇ ಅಭಯ, ಇಲ್ಲದಿದ್ದರೆ ಭಯ. ಇವೆಲ್ಲವೂ ಭಗವಂತನ ಅಧೀನ.

ಹೀಗೆ ಈ ಶ್ಲೋಕದಲ್ಲಿ ಮನುಷ್ಯನ ಮನಸ್ಸಿನಲ್ಲಿ ಮೂಡುವ ಎಲ್ಲಾ ಭಾವನೆಗಳು-ಆ ಭಾವನೆಗಳಿಂದ ಆಗತಕ್ಕ ಎಲ್ಲಾ ಪರಿವರ್ತನೆ ಮತ್ತು ಪರಿಣಾಮಗಳು-ಎಲ್ಲದರ ಹಿಂದಿರುವ ಭಗವತ್ ಶಕ್ತಿ ಬಗ್ಗೆ ಕೃಷ್ಣ ವಿವರಿಸಿದ. ಮುಂದಿನ ಶ್ಲೋಕದಲ್ಲಿ ಕೃಷ್ಣ ನಾವು ಗಳಿಸಿಕೊಳ್ಳಬೇಕಾದ ಏಳು ಮಾನಸಿಕ ಗುಣವನ್ನು ವಿವರಿಸುತ್ತಾನೆ.

ಅಧ್ಯಾಯ - 10: ಶ್ಲೋಕ  05

ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋSಯಶಃ    ।

ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ ವಿಧಾಃ ॥೫॥

ಅಹಿಂಸಾ ಸಮತಾ ತುಷ್ಟಿಃ ತಪಃ (ಅ)ದಾನಮ್  ಯಶಃ ಅಯಶಃ        
ವಂತಿ ಭಾವಾಃ  ಭೂತಾನಾಮ್  ಮತ್ತಃ ಏವ ಪೃಥಕ್  ವಿಧಾಃ -- 

ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, ದಾನ, ಹೆಸರು, ಕೆಟ್ಟ ಹೆಸರು- ಬಗೆ ಬಗೆಯ ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ.

ಕೃಷ್ಣ ಹೇಳುತ್ತಾನೆ “ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, (ಅ)ದಾನ, ಹೆಸರು, ಕೆಟ್ಟ ಹೆಸರು” ಇವು ನನ್ನಿಂದ ಎಂದು. ಇಲ್ಲಿ ಅಹಿಂಸೆ ಮತ್ತು ಸಮದೃಷ್ಟಿ ತುಂಬಾ ವಿಶೇಷವಾದುದ್ದು. ಏಕೆಂದರೆ ಹಿಂಸೆಯೂ ಕೆಲವೊಮ್ಮೆ ಅಹಿಂಸೆಯಾಗುತ್ತದೆ  ಮತ್ತು ಅಸಮಾನತೆಯೂ ಸಮಾನತೆಯಾಗುತ್ತದೆ. ಅದಕ್ಕಾಗಿ ಇದನ್ನು ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದಾನೆ ಕೃಷ್ಣ. 
ಮೊದಲಿಗೆ ಅಹಿಂಸೆ: ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ಇಲ್ಲಿ ಅಹಿಂಸೆ ಎಂದರೆ ಕೇವಲ ಶಾರೀರಿಕವಾಗಿ ಮಾತ್ರವಲ್ಲ, ಮನಸ್ಸು ಮತ್ತು ಮಾತಿನಲ್ಲೂ ನಾವು ಅಹಿಂಸೆಯನ್ನು ಸಾಧಿಸಬೇಕು.

 ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು ಕೂಡಾ ಹಿಂಸೆ. ಕೆಲವೊಮ್ಮೆ ಹಿಂಸೆಯೇ ಅಹಿಂಸೆಯಾಗುತ್ತದೆ. ಉದಾಹರಣೆಗೆ: ಒಂದು ನರಭಕ್ಷಕ ಹುಲಿಯನ್ನು ಕೊಲ್ಲುವುದರಿಂದ ಊರಿನ ಅನೇಕ ಜನರ ಪ್ರಾಣ ಉಳಿಯುವುದಾದರೆ ಅದನ್ನು ಕೊಲ್ಲುವುದು ಅಹಿಂಸೆ.[ನಾವು ಈ ರೀತಿಯ ಅಹಿಂಸೆಯನ್ನು ಕೃಷ್ಣನ ಅನೇಕ ಕೃತಿಗಳಲ್ಲಿ ಕಾಣುತ್ತೇವೆ]. ದೊಡ್ಡ ಹಿಂಸೆಯನ್ನು ತಡೆಯುವುದಕ್ಕೊಸ್ಕರ ಮಾಡುವ ಚಿಕ್ಕ ಹಿಂಸೆ-ಅಹಿಂಸೆ. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.

ಎರಡನೆಯ ಗುಣ ಸಮದೃಷ್ಟಿ (ಸಮತಾಃ) : ಇಲ್ಲಿ ಸಮದೃಷ್ಟಿ ಎಂದರೆ ಎಲ್ಲರನ್ನೂ ಏಕ ರೂಪದಲ್ಲಿ ನೋಡುವುದು ಎಂದರ್ಥವಲ್ಲ. ಇದು ಯೋಗ್ಯತೆಗನುಗುಣವಾದ ಸಮದೃಷ್ಟಿ. ಉದಾಹರಣೆಗೆ: ಒಂದು ಶಾಲೆಯಲ್ಲಿ ಚನ್ನಾಗಿ ಓದಿ ಬರೆದ ವಿದ್ಯಾರ್ಥಿ ಹಾಗು ಓದದೆ ಪೋಲಿಯಾಗಿರುವ ಇನ್ನೊಬ್ಬ ವಿದ್ಯಾರ್ಥಿಗೆ ಸಮನಾದ ಅಂಕವನ್ನು ಕೊಡುವುದು ಸಮಾನತೆ ಅಲ್ಲ. ಯಾವುದೇ ದ್ವೇಷವಿಲ್ಲದೆ, ಶತ್ರು, ಮಿತ್ರ, ಸ್ಥಳೀಯ, ಪರಕೀಯ ಎನ್ನುವ ಭೇದವಿಲ್ಲದೆ, ಅವರವರ ಯೋಗ್ಯತೆಗೆ ತಕ್ಕಂತೆ ಅಂಕ ವಿತರಣೆ ಮಾಡುವುದು ಸಮಾನತೆ. ಯಾರನ್ನು ಹೇಗೆ ನೋಡಬೇಕೋ ಅವರನ್ನು ಹಾಗೆ ನೋಡುವುದು. ತಂದೆಯನ್ನು ತಂದೆಯಂತೆ, ತಾಯಿಯನ್ನು ತಾಯಿಯಂತೆ, ಗುರುವನ್ನು ಗುರುವಂತೆ ಹೀಗೆ ಯಾರು ಸಮಾನರೋ ಅವರನ್ನು ಸಮಾನವಾಗಿ ಗೌರವಿಸುವುದು ಸಮದೃಷ್ಟಿ.

ಮೂರನೆಯ ಗುಣ ತೃಪ್ತಿ: ಮನುಷ್ಯನ ಎಲ್ಲಾ ದುಃಖಗಳಿಗೆ ಮುಖ್ಯ ಕಾರಣ ಅತೃಪ್ತಿ. ಇಂದಿನ ಸಮಾಜದಲ್ಲಿ ನಮ್ಮ ಮನೆಯಲ್ಲಿ ನಮಗೆ ಅಗತ್ಯಕ್ಕೆ ಬೇಕಾದಷ್ಟು ಇದ್ದರೂ ಕೂಡ ಮಾಧ್ಯಮಗಳಲ್ಲಿ ಬರುವ ಜಾಹಿರಾತಿಗೆ ಮರುಳಾಗಿ, ಅಥವಾ ನೆರಮನೆಯವರಿಗೆ ಪ್ರತಿಸ್ಪರ್ಧಿಯಾಗಿ, ಸದಾ ಅತೃಪ್ತಿಯಲ್ಲಿ ನಾವು ಬದುಕುತ್ತೇವೆ. ಕೆಲಸ ಇಲ್ಲದಾಗ ಕೆಲಸದ ಆಸೆ, ನಂತರ ಎಷ್ಟು ಸಂಬಳ ಬಂದರೂ ಅಲ್ಲಿ ಅತೃಪ್ತಿ. ಇಲ್ಲದ್ದನ್ನು ಯೋಚಿಸಿ ಕೊರಗದೆ, ಇದ್ದದ್ದನ್ನು ಯೋಚಿಸಿ ಖುಷಿ ಪಡುವುದು(Be content with whatever you have) ನಿಜವಾದ ತೃಪ್ತಿ.

ನಾಲ್ಕನೆಯದು ತಪಸ್ಸು: ಇದರಲ್ಲಿ ಮೂರು ಬಗೆ:  ಕಾಯಾ-ವಾಚಾ-ಮನಸಾ ತಪಃ.  ಕಾಯ ಅಂದರೆ ದೇಹ. ದೇಹದ ಮೂಲಕ ತಪಸ್ಸು. ಸಾಮಾನ್ಯವಾಗಿ ದೇಹ ಹೇಳಿದಂತೆ ಕೇಳದೆ ಇರುವುದು ಆಹಾರ ಅತ್ಯಯ ಅಥವಾ ವ್ಯತ್ಯಯದಿಂದ. ಆಹಾರ ನಿಯಂತ್ರಣ ಮಾಡಿದಾಗ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಮನಸ್ಸು ನಿಯಂತ್ರಣದಲ್ಲಿದ್ದರೆ ದೇಹ ಸ್ಥಿರವಾಗಿರಲು ಸಾಧ್ಯ. ಇದಕ್ಕಾಗಿ ನಾನಾ ರೀತಿಯ ನಿಯಂತ್ರಣ ಸಾಧನವಾದ ವೃತಾನುಷ್ಠಾನ ಮಾಡುವುದು. ಒಟ್ಟಿನಲ್ಲಿ ಅಹಂಕಾರ ಅಸೂಯೆ ಪಡದೆ ಬಗ್ಗುವ ಗುಣ ಬರುವುದು  ದೇಹದ ತಪಸ್ಸಿನಿಂದ. ಇನ್ನೊಬ್ಬರಿಗೆ ಹಿತವೆನಿಸುವ, ಸತ್ಯವಾದ-ಸಹಜ ಮಾತನ್ನಾಡುವುದು; ಶಾಸ್ತ್ರಗಳ ಶ್ರವಣ-ಮನನ ಮಾಡಿ ಅದರಿಂದ ಸ್ವಪ್ರವಚನ ಅಭ್ಯಸಿಸಿ ಅದನ್ನು ಅರಗಿಸಿಕೊಂಡು ಇನ್ನೊಬ್ಬರಿಗೆ ಪ್ರವಚನ ಮಾಡಿ, ಮುಂದಿನ ತಲೆಮಾರಿಗೆ ಕೊಡುವುದು ವಾಚ-ತಪಃ. ಮಾನಸಿಕವಾಗಿ ಸದಾ ಆಳವಾದ ಚಿಂತನೆ ಮನಸಾ-ತಪಃ.

ಐದನೆಯದು (ಅ)ದಾನ: ದಾನ ಶಬ್ದಕ್ಕೆ ಸಂಸ್ಕೃತದಲ್ಲಿ ಎರಡು ಅರ್ಥವಿದೆ. ಒಂದು ‘ಕೊಡುವುದು’ ಇನ್ನೊಂದು ‘ತುಂಡರಿಸುವುದು’. ಕೊಡುವುದರಿಂದ ಅದು ನಮ್ಮ ಪಾಪವನ್ನು ತುಂಡರಿಸಿದರೆ ಅದು ದಾನ. ಬದಲಿಗೆ ನಮ್ಮ ಪುಣ್ಯವನ್ನು ತುಂಡರಿಸಿದರೆ ಅದು ಅದಾನ.

ನಮಗೆ ಅನುಪಯುಕ್ತವಾದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವ ದಾನ ದಾನವಲ್ಲ. ಅತೀ ಅಗತ್ಯವಾದ ವಸ್ತು ಇನ್ನೊಬ್ಬರಲ್ಲಿ ಇಲ್ಲದೆ ಅದು  ನಮ್ಮಲ್ಲಿ ಇದ್ದರೆ, ನಮ್ಮಲ್ಲಿರುವುದನ್ನು ಅವರಿಗೆ ಹಂಚಿ ಅವರ  ಕೊರತೆ ನೀಗಿಸುವುದು ನಿಜವಾದ ದಾನ. ಒಬ್ಬ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದೆ ಪರದಾಡುತ್ತಿರುವಾಗ ನಮ್ಮಲ್ಲಿ ಎರಡು ಹೊತ್ತಿನ ಊಟಕ್ಕಾಗುವಷ್ಟು ಧಾನ್ಯವಿದ್ದರೆ, ನಮ್ಮ ನಾಳೆಯ ಬಗ್ಗೆ ಯೋಚಿಸದೆ, ಆ ವ್ಯಕ್ತಿಗೆ ಒಂದು ಹೊತ್ತಿನ ಧಾನ್ಯವನ್ನು ದಾನ ಮಾಡುವುದು ನಿಜವಾದ ದಾನ.

ದಾನದಲ್ಲಿ ಅಶನ-ವಸನ-ಅನ್ನ ಇದನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದು. ಇರುವುದಕ್ಕೆ ತಾಣ, ಉಡುವುದಕ್ಕೆ ಬಟ್ಟೆ, ಹಸಿದವನಿಗೆ ಅನ್ನ. ಇದನ್ನು ಕೊಡುವುದಕ್ಕೆ ಯೋಗ್ಯ-ಅಯೋಗ್ಯ ಎನ್ನುವ ನಿರ್ಬಂಧವಿಲ್ಲ. ಆದರೆ ಇತರೆ ವಸ್ತುವನ್ನು ದಾನ ಮಾಡುವಾಗ ಯಾವುದು ಯಾರಿಗೆ ಅಗತ್ಯ ಮತ್ತು ಯೋಗ್ಯ ಎಂದು ನೋಡಿ ದಾನ ಮಾಡಬೇಕು. ಪ್ರಚಾರಕ್ಕಾಗಿ ದಾನ ಮಾಡುವುದು-ಅದಾನ. ಯಾವುದೇ ಬಯಕೆ ಇಲ್ಲದೆ ನಿಷ್ಪೃಹತೆಯಿಂದ ಕರ್ತವ್ಯ ದೃಷ್ಟಿಯಿಂದ ಯೋಗ್ಯವಾದ ದೇಶದಲ್ಲಿ, ಯೋಗ್ಯವಾದ ಕಾಲದಲ್ಲಿ, ಯೋಗ್ಯವಾದ ವ್ಯಕ್ತಿಗೆ ಮಾಡುವ ದಾನ ನಿಜವಾದ ದಾನ.

ಕೊನೆಯದಾಗಿ ಕೃಷ್ಣ ಶಃ-ಅಯಶಃವನ್ನು ಇಲ್ಲಿ ಹೇಳಿದ್ದಾನೆ. ಇದು ತುಂಬಾ ವಿಚಿತ್ರವಾದದ್ದು. ಒಬ್ಬ ಕೆಟ್ಟದ್ದನ್ನು ಮಾಡಿ ಒಳ್ಳೆಯವನು ಎಂದು ಯಶಸ್ಸನ್ನು ಗಳಿಸಬಹುದು. ಇನ್ನೊಬ್ಬ ಜೀವಮಾನವೆಲ್ಲ ಒಳ್ಳೆಯ ಕೆಲಸ ಮಾಡಿ ಬೇಡವಾದ ಅಪವಾದ ಕೇಳಿ ದುರಂತಕ್ಕೊಳಗಾಗಬಹುದು. ಇದು ತೀರ್ಮಾನವಾಗುವುದು ನಮ್ಮ ಜೀವನದ ನಡೆಯ ಮೇಲೆ. ಇದಕ್ಕಾಗಿ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅಪವಾದ ಬಂದಾಗ ಹೇಗಿರಬೇಕು ಎನ್ನುವುದನ್ನು ಕೃಷ್ಣ ತನ್ನ ಜೀವನ ಕ್ರಮದಲ್ಲಿ ನಮಗೆ ತೋರಿಸಿಕೊಟ್ಟಿದ್ದಾನೆ. ಶಮಂತಕ ಮಣಿಯನ್ನು ಕೃಷ್ಣ ಕದ್ದ ಎನ್ನುವ ಅಪವಾದ ಕೃಷ್ಣನಿಗೆ ಬಂದಾಗ ಕೃಷ್ಣನ ನಡೆ ಇದಕ್ಕೆ ಉತ್ತಮ ದೃಷ್ಟಾಂತ.

ಹೀಗೆ “ಈ ಎಲ್ಲಾ ಭಾವಗಳು ಜೀವಜಾತಕ್ಕೆ ಬರುವುದು ನನ್ನಿಂದಲೆ” ಎನ್ನುತ್ತಾನೆ ಕೃಷ್ಣ. ಯಾರಿಗೆ ಯಾವ ಕಾಲದಲ್ಲಿ ಯಾವ ಭಾವ ಬರಬೇಕು ಅನ್ನುವುದು ಭಗವಂತನ ನಿರ್ಧಾರ. ನಮ್ಮ ಮನಸ್ಸಿನ ಸ್ಥಿತಿಯ ಒಂದೊಂದು ಚಲನ-ವಲನ ಭಗವಂತನ ಅಧೀನ. ಇದು ನಾವು ನಮ್ಮ  ಉಪಾಸನೆಯಲ್ಲಿ ತಿಳಿದಿರಬೇಕಾದ ಮೂಲಭೂತ ಸತ್ಯ. ಇದು ಕೃಷ್ಣ ಕೊಟ್ಟ ಮಾನಸಿಕ ಉಪಾಸನೆಯ ಅದ್ಭುತ ಚಿತ್ರಣ.


ಅಧ್ಯಾಯ - 10: ಶ್ಲೋಕ  06

ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ ।

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ॥೬॥

ಮಹರ್ಷಯಃ ಸಪ್ತ ಪೂರ್ವೇ ಚತ್ವಾರಃ  ಮನವಃ ತಥಾ 
ತ್ ಭಾವಾಃ  ಮಾನಸಾಃ  ಜಾತಾಃ  ಯೇಷಾಮ್  ಲೋಕೇ ಇಮಾಃ ಪ್ರಜಾಃ –-

ಮೊದಲ ಮನ್ವಂತರದ ಏಳು ಮಂದಿ ಮಹರ್ಷಿಗಳು [ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ ], ಮೊದಲ ನಾಲ್ವರು ಮನುಗಳು [ಸ್ವಾಯಂಭುವ, ಸ್ವಾರೋಚಿಷ, ಉತ್ತಮ ಮತ್ತು ರೈವತ], ಚತುರ್ಮುಖನ ಮಾನಸ ಪುತ್ರರಾದ ಇವರು ನನ್ನಿಂದಲೆ ಆದವರು.[ನಾಲ್ಕು ವರ್ಣಗಳ ನಿಯಾಮಕರಾಗಿ ನಾಲ್ಕು ಪಂಗಡದಲ್ಲಿ ಸೇರಿದ, ವಿಶೇಷ ಅರಿವಿನ ಕಾರಣ ‘ಮನು’ಗಳೆನಿಸಿದ ಎಲ್ಲ ದೇವತೆಗಳು ನನ್ನಿಂದಲೆ ಆದವರು; ನನ್ನ ಇಚ್ಛೆಯಿಂದಲೆ ಹುಟ್ಟಿ ಬಂದವರು.] ವಿಶ್ವದ ಈ ಜನರೆಲ್ಲ ಅವರದೇ ಸಂತತಿ.

ಇಡೀ ಬ್ರಹ್ಮಾಂಡ ಸೃಷ್ಟಿ ಭಗವಂತನಿಂದಾಯಿತು ಎನ್ನುವುದು ನಮಗೆ ತಿಳಿದಿದೆ. ಇಲ್ಲಿ ಕೃಷ್ಣ ನಾವು ಉಪಾಸನೆಯಲ್ಲಿ ತಿಳಿದಿರಬೇಕಾದ ಮುಖ್ಯ ಅಂಶವನ್ನು ವಿವರಿಸುತ್ತಾನೆ. ಮೊದಲ ಮನ್ವಂತರದ ಸಪ್ತರ್ಷಿಗಳು ಮತ್ತು ಮೊದಲ ನಾಲ್ಕು ಮನುಗಳನ್ನು ಕೃಷ್ಣ ಇಲ್ಲಿ ಪ್ರಸ್ತಾಪಿಸಿದ್ದಾನೆ. ಪ್ರತಿಯೊಂದು ಮನ್ವಂತರಕ್ಕೂ ಬೇರೆ ಬೇರೆ ಸಪ್ತರ್ಷಿಗಳಿದ್ದಾರೆ. ದೇವತಾ ತಾರತಮ್ಯದಲ್ಲಿ ಹದಿನಾರನೇ ಕಕ್ಷೆಯಲ್ಲಿ ಬರುವ ಮೊದಲ ಮನ್ವಂತರದ ಈ ಸಪ್ತರ್ಷಿಗಳು ಋಷಿಮಂಡಲದಲ್ಲೇ ಬಹಳ ಶ್ರೇಷ್ಠರು. ಪುರಾಣ ಮತ್ತು ಮಹಾಭಾರತದ ಮೋಕ್ಷಧರ್ಮ ಪರ್ವವನ್ನು ನೋಡಿದಾಗ-ಇಲ್ಲಿ “ಮಹರ್ಷಯಃ ಸಪ್ತ ಪೂರ್ವೇ” ಎನ್ನುವುದು ಸೃಷ್ಟಿಕಾರಣನಾದ ಚತುರ್ಮುಖನಿಗೆ ಸಹಾಯಕರಾದ ಸಪ್ತಬ್ರಹ್ಮರನ್ನೂ ಸೂಚಿಸುತ್ತದೆ ಎಂದು ತಿಳಿಯುತ್ತದೆ. [ಇಲ್ಲಿ ಉಪಲಕ್ಷಣವಾಗಿ ಭೃಗು ಮತ್ತು ದಕ್ಷರನ್ನೂ ಸೇರಿಸಿಕೊಳ್ಳಬೇಕು. ಹತ್ತನೆಯವನಾದ ಮಾನಸ ಪುತ್ರ ನಾರದ ಬ್ರಹ್ಮಚಾರಿ ಆದ್ದರಿಂದ ಸೃಷ್ಟಿ ವಿಸ್ತಾರದಲ್ಲಿ ಆತನ ಹೆಸರನ್ನು ಸೇರಿಸಿಲ್ಲ].

 ಈ ಏಳುಮಂದಿ ಋಷಿಗಳು ಮತ್ತು ಭೃಗು-ದಕ್ಷರನ್ನು ಪ್ರಜಾಪತಿಗಳೆಂದು ಕರೆಯುತ್ತಾರೆ. ಭಗವಂತ ಚತುರ್ಮುಖನ ಸೃಷ್ಟಿ ಮಾಡಿ, ಅವನ ಮೂಲಕ ಸಪ್ತರ್ಷಿಗಳ ಸೃಷ್ಟಿ ಮಾಡಿದ. ಸೃಷ್ಟಿಯಲ್ಲಿ ಮಾನವರ ವಂಶವಿಸ್ತಾರ ಮೊದಲು ಸ್ವಾಯಂಭುವ ಮನುವಿನ ಮೂಲಕವಾಯಿತು. ಈತನಿಂದ ಮನು ವಂಶ ಬೆಳೆದುಬಂತು. ಈ ಎಲ್ಲಾ ಕಾರಣದಿಂದ ಮೊದಲ ನಾಲ್ಕು ಮನ್ವಂತರದ ಅಧಿಪತಿಗಳು ಮತ್ತು ಸಪ್ತರ್ಷಿಗಳು ಪ್ರಧಾನವಾಗಿ ಉಪಾಸನೆಯಾಗಬೇಕಾದ ಹಿಂದಿನವರು. ವಿಶ್ವದ ಈ ಜನರೆಲ್ಲ ಅವರದೇ ಸಂತತಿ.

‘ಮನು’ ಎನ್ನುವುದಕ್ಕೆ ಇನ್ನೊಂದು ಅರ್ಥವಿದೆ. ಭಗವಂತನ ಪರಿವಾರವಾದ ದೇವತೆಗಳನ್ನೂ ‘ಮನುಗಳು’ ಎನ್ನುತ್ತಾರೆ. ತತ್ವಾಭಿಮಾನಿ ದೇವತೆಗಳಲ್ಲಿ ಮುಖ್ಯವಾಗಿ ನಾಲ್ಕು ವಿಧ. ಇವರು ಮನುಷ್ಯನ ನಾಲ್ಕು ಸ್ವಭಾವವನ್ನು(ಬ್ರಾಹ್ಮಣ್ಯ, ಕ್ಷಾತ್ರ, ವೈಶ್ಯ, ಶೂದ್ರ) ನಿಯಂತ್ರಿಸುವ ದೇವತೆಗಳು. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಈ ನಾಲ್ಕು ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಿದೆ ನಾವು ಆ ವರ್ಗದಿಂದ ಕರೆಸಿಕೊಳ್ಳುತ್ತೇವೆ. ಇದಲ್ಲದೆ ‘ಮನು’ ಶಬ್ದವಾಚ್ಯ  ಜೀವವರ್ಗ ನಾಲ್ಕು: ಸಮಸ್ತ ದೇವತೆಗಳು, ದೇವತೆಗಳಿಂದ ಸೃಷ್ಟಿಯಾದ ಋಷಿಗಳು(ಮಾನವರು), ಋಷಿಪರಂಪರೆಯಿಂದ ಬಂದ ‘ಮಾನವಮಾನವರು’, ಈ ಪರಂಪರೆಯಿಂದ ಬಂದ ಮನುಷ್ಯರು. ಇದು ಉಪಾಸನೆಯಲ್ಲಿ ತಿಳಿದಿರಬೇಕಾದ ಅಂಶ.

ಅಧ್ಯಾಯ - 10: ಶ್ಲೋಕ  07

ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ ।

ಸೋSವಿಕಲ್ಪೇನ   ಯೋಗೇನ ಯುಜ್ಯತೇ ನಾತ್ರ ಸಂಶಯಃ  ॥೭॥

ಏತಾಮ್  ವಿಭೂತಿಮ್  ಯೋಗಮ್  ಚ ಮಮ ಯಃ  ವೇತ್ತಿ ತತ್ತ್ವತಃ 
ಸಃ ಅವಿಕಲ್ಪೇನ  ಯೋಗೇನ ಯುಜ್ಯತೇ ನ ಅತ್ರ ಸಂಶಯಃ -

ನನ್ನ ಈ ಹಿರಿಮೆಯನ್ನು [ಸನ್ನಿಧಾನದಿಂದ ಹಿರಿಮೆಯನ್ನೀಯುವ ನನ್ನ ರೂಪಗಳ ಬಗೆಯನ್ನು] ಮತ್ತು ಆಳವನ್ನು ಸರಿಯಾಗಿ ತಿಳಿದವನು ಪರಿಶುದ್ಧವಾದ ಧ್ಯಾನಯೋಗದಲ್ಲಿ ನೆಲೆಗೊಳ್ಳುತ್ತಾನೆ. ಇದರಲ್ಲಿ ಸಂದೇಹವಿಲ್ಲ. 

ಭಗವಂತನ ಹಿರಿಮೆಯನ್ನು, ಆತನ ವಿವಿಧ ರೂಪವನ್ನು, ಅದರ ಆಳವನ್ನು-ಯಥಾರ್ಥವಾಗಿ ತಿಳಿದರೆ ನಮಗೆ  ಸಹಜವಾಗಿ ಶರಣಾಗತಿ ಬರುತ್ತದೆ. ಭಗವಂತನ ಬಗೆಗಿನ ಜ್ಞಾನ ನಮ್ಮಲ್ಲಿ  ದೃಢನಂಬಿಕೆಯನ್ನು ಹುಟ್ಟಿಸುತ್ತದೆ. ಶ್ರದ್ಧೆ  ಮತ್ತು ಭಕ್ತಿಯಿಂದ ತುಂಬಿದ ಮನಸ್ಸು ಭಗವಂತನಲ್ಲಿ ನೆಲೆನಿಲ್ಲುತ್ತದೆ.     

ಅಧ್ಯಾಯ - 10: ಶ್ಲೋಕ  08

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।

ಇತಿ ಮತ್ವಾ ಭಜಂತೇ  ಮಾಂ ಬುಧಾ ಭಾವಸಮನ್ವಿತಾಃ  ॥೮॥

ಅಹಮ್  ಸರ್ವಸ್ಯ ಪ್ರಭವಃ  ಮತ್ತಃ ಸರ್ವಮ್  ಪ್ರವರ್ತತೇ 
ಇತಿ ಮತ್ವಾ ಭಜಂತೇ  ಮಾಮ್  ಬುಧಾಃ  ಭಾವ ಸಮನ್ವಿತಾಃ –-

ತಿಳಿದವರು ‘ನಾನು ಎಲ್ಲದರ ಮೂಲಕಾರಣ, ನನ್ನಿಂದಲೆ ಎಲ್ಲವೂ ನಡೆಯುತ್ತಿದೆ’ ಎಂದರಿತು ಭಕ್ತಿಯಿಂದ ನನ್ನನ್ನು ಸೇವಿಸುತ್ತಾರೆ.

 ಜ್ಞಾನಿಗಳು ‘ಎಲ್ಲದರ ನಿಯಾಮಕ ಭಗವಂತ, ಎಲ್ಲವೂ ಭಗವಂತನಿಂದ ಸೃಷ್ಟಿಯಾಗಿದೆ, ಎಲ್ಲವೂ ಭಗವಂತನಿಂದ ನಿಯತವಾಗಿದೆ’ ಎನ್ನುವ  ಸತ್ಯವನ್ನು ಅರಿತು ಭಕ್ತಿಯಿಂದ  ಉಪಾಸನೆ ಮಾಡುತ್ತಾರೆ.  “ಈ ರೀತಿ ಭಗವಂತನ ಬಗೆಗೆ ಅನನ್ಯ ಭಕ್ತಿ ಮತ್ತು ಸರ್ವೋತ್ತಮ ಜ್ಞಾನವುಳ್ಳವರು: ತಮ್ಮೆಲ್ಲ  ಮನ್ಸಸ್ಸಿನ ಪ್ರಪಂಚ ನನ್ನ ಅಧೀನ, ಎಲ್ಲಕ್ಕೂ ಕಾರಣ ನಾನು, ಎಲ್ಲವೂ ಹುಟ್ಟಿದ್ದು ನನ್ನಿಂದ, ಎಲ್ಲವೂ ನಿಯಂತ್ರಿತವಾಗುವುದು ನನ್ನಿಂದ, ಎಲ್ಲವೂ ನನ್ನ ಅಧೀನ ಎಂದು ತಿಳಿದು ಉಪಾಸನೆ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ.

ಅಧ್ಯಾಯ - 10: ಶ್ಲೋಕ  09

ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ  ಪರಸ್ಪರಮ್ ।

ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ ॥೯॥

ತ್ ಚಿತ್ತಾಃ  ಮತ್ ಗತ ಪ್ರಾಣಾಃ ಬೋಧಯಂತಃ  ಪರಸ್ಪರಮ್ 
ಕಥಯಂತಃ ಚ  ಮಾಮ್  ನಿತ್ಯಮ್  ತುಷ್ಯಂತಿ ಚ ರಮಂತಿ  –-

ಅನುಗಾಲ ನನ್ನಲ್ಲೆ ಬಗೆಯಿಟ್ಟವರು , ನನಗಾಗಿ ಬದುಕುವವರು, ನನ್ನನ್ನೇ ಒಬ್ಬರಿಗೊಬ್ಬರು ತಿಳಿಹೇಳುತ್ತ,  ತಿಳಿಯುತ್ತ ತಣಿಯುತ್ತಾರೆ; ಸಂತಸಪಡುತ್ತಾರೆ.

ಹೀಗೆ ನಿಜವಾದ ಜ್ಞಾನ ಭಕ್ತಿ ಉಳ್ಳವರ ಚಿತ್ತದಲ್ಲಿ ಸದಾ ಭಗವಂತನ ಚಿಂತನವೇ ತುಂಬಿರುತ್ತದೆ. ಅವರ ಮನಸ್ಸು ಭಗವನ್ಮಯವಾಗಿ ಬಿಡುತ್ತದೆ. ಅವರಿಗೆ ಎಲ್ಲವುದರಲ್ಲೂ ಭಗವಂತನೇ ಕಾಣುತ್ತಾನೆ. ಇವರು ಪ್ರತೀ ಘಟನೆಯ ಹಿಂದೆ ಭಗವಂತನಿದ್ದಾನೆ, ಅವನ ಇಚ್ಛೆಯಂತೆ ಎಲ್ಲವೂ  ನೆಡೆಯತ್ತಿದೆ ಎನ್ನುವ ಅರಿವಿನಲ್ಲಿ ಬದುಕುತ್ತಾರೆ. ಇವರ ಮನಸ್ಸು ಭಗವಂತನಲ್ಲಿ ಶ್ರುತಿಗೂಡಿರುತ್ತದೆ. ಇವರು ಸದಾ ಭಗವಂತನ ಬಗೆಗೆ ಮಾತನಾಡುತ್ತಿರುತ್ತಾರೆ.

 ಒಂದೊಂದು ಸಂಗತಿಯಲ್ಲೂ  ‘ಭಗವಂತನ ಸೃಷ್ಟಿ ಎಷ್ಟು ಅದ್ಭುತ’ ಎನ್ನುವಂತೆ ಇವರು ವಿಶ್ಲೇಷಣೆ  ಮಾಡುತ್ತಾರೆ. ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನೂ ಇವರು ಭಗವಂತನ ಪ್ರಸಾದ ಎನ್ನುವಂತೆ ಸ್ವೀಕರಿಸುತ್ತಾರೆ. ಇಂತವರ ಜೀವನ ಆನಂದಮಯವಾಗಿರುತ್ತದೆ. ಇವರಲ್ಲಿ ಕೆಟ್ಟ ಯೋಚನೆ ಸುಳಿಯುವುದಿಲ್ಲ. ಇವರ ಮನಸ್ಸು ಸದಾ ನಿರ್ಮಲವಾಗಿರುತ್ತದೆ. ಇವರು ಲೋಕ ವ್ಯವಹಾರದ ಮಾತನ್ನು  ಬಿಟ್ಟು, ಭಗವಂತನ ವಿಚಾರ ಮಾತನಾಡುತ್ತಾ ಸದಾ ಆನಂದಪಡುತ್ತಿರುತ್ತಾರೆ.

ಅಧ್ಯಾಯ - 10: ಶ್ಲೋಕ  10

ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ ।

ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ ॥೧೦॥

ತೇಷಾಮ್  ಸತತ ಯುಕ್ತಾನಾಮ್  ಭಜತಾಮ್  ಪ್ರೀತಿ ಪೂರ್ವಕಮ್ 
ದದಾಮಿ ಬುದ್ಧಿಯೋಗಮ್  ತಮ್  ಯೇನ ಮಾಮ್ ಉಯಾಂತಿ ತೇ 

ನನ್ನಲ್ಲೆ ಅನುಗಾಲ ಬಗೆಯಿಟ್ಟು ಪ್ರೀತಿಯಿಂದ ಸೇವಿಸುವವರಿಗೆ ಆ ತಿಳಿವಿನ ದಾರಿಯನ್ನು ಕರುಣಿಸುತ್ತೇನೆ. ಅದರಿಂದ ಅವರು ನನ್ನನ್ನೆ ಸೇರುತ್ತಾರೆ.

ಈ ಶ್ಲೋಕದಲ್ಲಿ  “ಸತತಯುಕ್ತಾನಾಂ” ಎನ್ನುವಲ್ಲಿ ಬರುವ ‘ಯುಕ್ತಿ’ ಎನ್ನುವ ಶಬ್ದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥಗಳಿವೆ. ಬಹಳ ಯೋಗ್ಯವಾದ ಆಚಾರನಿಷ್ಠೆ ಹೊಂದಿ, ದಾರಿತಪ್ಪದೆ, ಜಾರದೆ ಬದುಕುವುದು ಯುಕ್ತಿ. ಭಗವಂತನ ಅನುಸಂಧಾನಕ್ಕೆ ಪೂರಕವಾದ ವೇದಾಧ್ಯಯನವನ್ನು ಗ್ರಹಿಸುವುದು ಯುಕ್ತಿ. ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಯುಕ್ತಿ. ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾವ ಬುದ್ಧಿಯೋಗದಿಂದ ಭಗವಂತನನ್ನು ಸೇರುವುದು ಸಾಧ್ಯವೋ ಅಂತಹ  ವಿಷಯ ಚಿಂತನೆ ಮಾಡುವ ಮನಸ್ಸು, ಭಕ್ತಿಯಿಂದ ಚಿಂತನೆ ಮಾಡಬೇಕು ಎನ್ನುವ ಬುದ್ಧಿ, ನಿಶ್ಚಯವಾದ ಜ್ಞಾನವನ್ನು-ನಾನೇ ಕೊಡುತ್ತೇನೆ” ಎಂದು. ಭಗವಂತನಲ್ಲಿ ಶರಣಾಗಿ ಪ್ರೀತಿಯಿಂದ ಅವನನ್ನು ಸೇವಿಸಿದಾಗ-ಭಗವಂತನನ್ನು ಸೇರುವ ಮಾರ್ಗವನ್ನು ಭಗವಂತನೇ ತೋರಿಸುತ್ತಾನೆ.

ಅಧ್ಯಾಯ - 10: ಶ್ಲೋಕ  11

ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ ।

ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ॥೧೧॥

ತೇಷಾಮ್ ಏವ ಅನುಕಂಪಾರ್ಥಮ್ ಅಮ್ ಅಜ್ಞಾನ ಮ್  ತಮಃ 
ನಾಶಯಾಮಿ ಆತ್ಮ ಭಾವ ಸ್ಥ  ಜ್ಞಾನ ದೀಪೇನ ಭಾಸ್ವತಾ 

ನಾನು ಅವರ ಮೇಲಣ ಕನಿಕರದಿಂದಲೆ, ಅವರ ಬಗೆಯಲ್ಲಿ ನೆಲೆನಿಂತು, ಬೆಳಗುವ ಅರಿವಿನ ಪಂಜಿನಿಂದ ಅಜ್ಞಾನದಿಂದ ಕವಿದ ಕತ್ತಲನ್ನು ಹೋಗಲಾಡಿಸುತ್ತೇನೆ.

ಭಗವಂತ ನಮ್ಮನ್ನು ಉದ್ಧರಿಸುವುದು ಯಾವುದೋ ಸ್ವಾರ್ಥಕ್ಕಾಗಿ ಅಲ್ಲ. ಬದಲಿಗೆ ನಮ್ಮ ಮೇಲಿನ ಕರುಣೆಯಿಂದ. ತನ್ನನ್ನು ಅನನ್ಯ ಭಕ್ತಿಯಿಂದ ಭಜಿಸಿ ಆರಾಧನೆ ಮಾಡುವ ಭಕ್ತನ ಮೇಲಿನ ಅನುಕಂಪದಿಂದ ಆತ ನಮ್ಮನ್ನು ಉದ್ಧರಿಸುತ್ತಾನೆ. ಆತ ನಮಗೆ ಕೇವಲ ಬುದ್ಧಿ ಕೊಡುವುದಷ್ಟೇ ಅಲ್ಲ, ನಮ್ಮ ಬುದ್ಧಿಯನ್ನು ಸದಾ ಕವಿದಿರುವ ತಮಸ್ಸಿನ(ಅಜ್ಞಾನದ) ಪೊರೆಯನ್ನು ಕಳಚುವವನೂ ಅವನೆ. ಭಗವಂತನ ಸಹಾಯವಿಲ್ಲದೆ ನಮ್ಮ ಮನಸ್ಸು-ಬುದ್ಧಿಗೆ ಕವಿದಿರುವ ಅಜ್ಞಾನದ ಪೊರೆಯನ್ನು ನಾವೇ ನೀಗಿಸಿಕೊಳ್ಳಲು ಸಾಧ್ಯವಿಲ್ಲ. 

ತ್ರಿಗುಣಾತೀತ ಭಗವಂತನೊಬ್ಬನೆ ಈ ಕತ್ತಲನ್ನು ಕಳೆಯಬಲ್ಲ. ಇದರಿಂದ ನಾವು ಯಥಾರ್ಥವನ್ನು ಯಥಾರ್ಥವಾಗಿ ಗ್ರಹಣ ಮಾಡಬಹುದು. ಭಗವಂತ ನಮ್ಮ ಭಾವದಲ್ಲಿ-ಭಕ್ತಿಯಲ್ಲಿ ತುಂಬಿ, ನಮ್ಮ  ಸ್ವರೂಪ ಜಾಗೃತಗೊಳಿಸಿ, ಕೃಪೆಯ ದೃಷ್ಟಿ ಬೀರಿ, ಎಲ್ಲ ವಿಧದಿಂದ ಬೆಳಕು ನೀಡಿ, ಯಥಾರ್ಥವನ್ನು ಕಾಣುವಂತೆ ಮಾಡುತ್ತಾನೆ. ಇದಕ್ಕಾಗಿ  ‘ನನ್ನೊಳಗಿನ ಕತ್ತಲನ್ನು ನೀಗು ಭಗವಂತ’ ಎಂದು ನಾವು ಆತನಲ್ಲಿ ಶರಣಾಗಬೇಕು. ಒಳಗೆ ಕತ್ತಲನ್ನು ಇಟ್ಟುಕೊಂಡು ಎಷ್ಟು ಅಧ್ಯಯನ ಮಾಡಿದರೂ ಉಪಯೋಗವಿಲ್ಲ. ಶಾಸ್ತ ಓದಿದಾಗ ಯಥಾರ್ಥ ತಿಳಿಯಬೇಕಾದರೆ ಭಗವಂತನಲ್ಲಿ ಶರಣಾಗತಿ ಮುಖ್ಯ.

ಈ ಹಂತದಲ್ಲಿ ಅರ್ಜುನ ಕೃಷ್ಣನ ಉಪದೇಶ ಕೇಳಿ ಮೈಮರೆತು ಹೋದ. ಆತನಿಗೆ ತಾನು ಯುದ್ಧರಂಗದಲ್ಲಿ ನಿಂತಿದ್ದೇನೆ ಎನ್ನುವ ವಿಚಾರವೇ ಮರೆತು ಹೋಗಿ, ಕೇವಲ ಕೃಷ್ಣನೊಬ್ಬನೆ ಕಾಣಲಾರಂಭಿಸುತ್ತಾನೆ. ಮುಂದಿನ ನಾಲ್ಕು ಶ್ಲೋಕದಲ್ಲಿ ಅರ್ಜುನ ಭಗವಂತನ ಅನಂತ ಶಕ್ತಿಯ ಪಾರಮ್ಯದ ಅನುಸಂಧಾನವನ್ನು ವ್ಯಕ್ತಪಡಿಸುವುದನ್ನು ಕಾಣುತ್ತೇವೆ.

ಅಧ್ಯಾಯ - 10: ಶ್ಲೋಕ  12,13

ಅರ್ಜುನ ಉವಾಚ ।

ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ ।

ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್  ॥೧೨॥

 

ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ ।

ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ॥೧೩॥


ಅರ್ಜುನಃ  ಉವಾಚ--ಅರ್ಜುನನು ಹೇಳಿದನು:
ಪರಮ್  ಬ್ರಹ್ಮ ಪರಮ್  ಧಾಮ ಪವಿತ್ರಮ್  ಪರಮಮ್  ಭವಾನ್ 
ಪುರುಷಮ್  ಶಾಶ್ವತಮ್  ದಿವ್ಯಮ್ ಆದಿ ದೇವಮ್ ಅಮ್  ವಿಭುಮ್  ||
ಹುಃ ತ್ವಾಮ್ ಋಷಯಃ ಸರ್ವೇ ದೇವ ಋಷಿಃ ನಾರದಃ ತಥಾ 
ಅಸಿತಃ  ದೇವಲಃ  ವ್ಯಾಸಃ ಸ್ವಯಂ ಚ ಏವ ಬ್ರವೀಷಿ ಮೇ  --

 ಪೂಜ್ಯನಾದ ನೀನು ಹಿರಿದಕ್ಕಿಂತ ಹಿರಿಯ ತತ್ವ. ಹಿರಿಯ ಆಸರೆ. ಪಾವನಗಳಿಗೂ ಪಾವನ. ನಿನ್ನನ್ನು ಗುಣಪೂರ್ಣನಾದ, ಪರಮ ‘ಪುರುಷ’ನೆಂದು, ಬದಲಾಗದವನೆಂದು, ಲೀಲಾಮಯನೆಂದು, ಎಲ್ಲ ದೇವತೆಗಳಿಗೂ ಮೊದಲಿಗನೆಂದು, ಜನ್ಮರಹಿತನೆಂದು, ಬಗೆಬಗೆಯ ರೂಪಗಳಿಂದ ಎಲ್ಲೆಡೆ ತುಂಬಿರುವವನೆಂದು ಬಲ್ಲವರೆಲ್ಲ ಹೊಗಳುತ್ತಾರೆ. ದೇವರ್ಷಿ ನಾರದ ಕೂಡ. ಅಸಿತ-ದೇವಲರು ಕೂಡ. ವ್ಯಾಸ ಮುನಿ ಹೇಳಿದ್ದುಂಟು. ಸ್ವತಃ ನೀನೂ ನನಗೆ ಹೇಳುತಿದ್ದೀಯಾ.

ಇಲ್ಲಿ ಅರ್ಜುನ ಕೃಷ್ಣನನ್ನು “ಪರಂಬ್ರಹ್ಮ, ಪರಂಧಾಮ, ಪರಮಪವಿತ್ರ ನೀನು”  ಎಂದು  ಸಂಬೋಧಿಸುತ್ತಾನೆ. ಯಾವುದು ಎಲ್ಲವುದಕ್ಕಿಂತ ದೊಡ್ಡದೋ ಅದು ಬ್ರಹ್ಮ. ಬ್ರಹ್ಮ ಅನ್ನುವ ಪದವನ್ನು ಇನ್ನೂ ಅನೇಕ ಅರ್ಥದಲ್ಲಿ ಬಳಸುತ್ತಾರೆ. ಅದಕ್ಕಾಗಿ ಇಲ್ಲಿ ಸ್ಪಷ್ಟತೆಗಾಗಿ ‘ಪರಂ ಬ್ರಹ್ಮ’ ಎಂದಿದ್ದಾರೆ. “ಎಲ್ಲಕ್ಕಿಂತ ದೊಡ್ಡವ ಮತ್ತು ನಂಬಿದವರನ್ನು ಎತ್ತರಕ್ಕೇರಿಸುವ ನೀನು ಪರಿಪೂರ್ಣ. ನಾನು ನನ್ನ ವ್ಯಕ್ತಿತ್ವದ ಪೂರ್ಣತೆಯನ್ನು ಕಾಣಲು ನಿನ್ನ ಅನುಗ್ರಹ ಬೇಕು” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇನ್ನು ಪರಂ ಧಾಮ: ‘ಧಾಮ’ ಅಂದರೆ ಆಶ್ರಯ. ಭಗವಂತನನ್ನು ಆಶ್ರಯಿಸದೆ ಇರುವ ಒಂದು ವಸ್ತು ಈ ಜಗತ್ತಿನಲ್ಲಿಲ್ಲ. “ನೀನು ಸರ್ವಸ್ವತಂತ್ರ, ಮತ್ತು ನಾವೆಲ್ಲರೂ ನಿನ್ನ ಅಧೀನ, ನೀನು ಆಶ್ರಯಧಾತ ಮತ್ತು ನಾವು ಆಶ್ರಿತರು” ಎನ್ನುವ ಅರ್ಥದಲ್ಲಿ ಅರ್ಜುನ ಕೃಷ್ಣನನ್ನು ‘ಪರಂ ಧಾಮ’ ಎಂದಿದ್ದಾನೆ. ತತ್ವಾಭಿಮಾನಿ ದೇವತೆಗಳು ಒಂದೊಂದು ರೂಪದಲ್ಲಿ ನಮಗೆ ಆಶ್ರಯ ನೀಡುತ್ತಾರೆ. ಆದರೆ ಇಂತಹ ದೇವತೆಗಳಿಗೂ ಆಶ್ರಯಧಾತನಾಗಿರುವ ಭಗವಂತ ಪರಂ ಧಾಮ. ಸಮಸ್ತ ಜೀವರ ಅನಂತ ಯಾತ್ರೆಯಲ್ಲಿ ಆಶ್ರಯಧಾತನಾಗಿ ಉದ್ಧಾರ ಮಾಡುವ ಭಗವಂತ ಸರ್ವಾಶ್ರಯಧಾತ.

ಭಗವಂತ ‘ಪರಮಪವಿತ್ರ’. ಇಂತಹ  ಭಗವಂತನನ್ನು ನಾವು ಪವಿತ್ರತೆಯ ಪ್ರತೀಕವಾದ  ಅಗ್ನಿ ಮುಖೇನ  ಉಪಾಸನೆ ಮಾಡುತ್ತೇವೆ. ಅಗ್ನಿ ಸ್ವಯಂ ಪವಿತ್ರ ಮತ್ತು ಅದು ಎಂದೂ ಕೊಳಕಾಗುವುದಿಲ್ಲ. ಅಗ್ನಿ ತನ್ನ ಸ್ಪರ್ಶಕ್ಕೆ ಬಂದ ವಸ್ತುವನ್ನು  ಕೊಳೆರಹಿತ ಮಾಡುತ್ತದೆ. ಭಗವಂತ ನಮ್ಮನ್ನು ಮತ್ತು ಪ್ರಪಂಚವನ್ನು ಪಾವನಗೊಳಿಸುವ ಪರಮಶಕ್ತಿ.
ಅರ್ಜುನ ಇಲ್ಲಿ ತನ್ನೆಲ್ಲಾ ಭೌತಿಕ ಸಂಬಂಧವನ್ನು ಮೀರಿ ತನ್ನೆದುರು ನಿಂತಿರುವ ಆ ಪರಬ್ರಹ್ಮನನ್ನು ಕಾಣುತ್ತಿದ್ದಾನೆ. “ನನ್ನಲ್ಲಿ ಕೊಳೆ ತುಂಬಿದೆ, ಅಸೂಯೆ ಅಸಹನೆ ತುಂಬಿದೆ. ನಿನ್ನ ಅನುಗ್ರಹದಿಂದ, ಆಶ್ರಯದಿಂದ ನಾನು ಪವಿತ್ರನಾಗಬೇಕು. ನಿನ್ನಿಂದ ನಾನು ಆ ಎತ್ತರಕ್ಕೇರಿ ನನ್ನ ಪೂರ್ಣತೆಯನ್ನು ಪಡೆಯಬೇಕು” ಎನ್ನುವ ಬಯಕೆ ಅರ್ಜುನನ ಈ ಸಂಬೋಧನೆಯಲ್ಲಿದೆ.

ಕೆಲವೊಮ್ಮೆ ನಾವು ಉದ್ವೇಗದಿಂದ ಅತಿಶಯವಾಗಿ ಮಾತನಾಡುತ್ತೇವೆ. ಇಲ್ಲಿ ಅರ್ಜುನ ತಾನು ಉದ್ವೇಗದಿಂದ ಮಾತನಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಒಬ್ಬ ಸಾಧಕನಿಗೆ ದೇವರ ಉಪಾಸನೆಯಲ್ಲಿ ಇದು ಬಹಳ ಮುಖ್ಯ ಅಂಶ. ಏಕೆಂದರೆ ನಾವು ದೇವರ ಬಗ್ಗೆ ಏನು ಕಲ್ಪನೆ ಮಾಡಿದರೂ ಅದು ಕೇವಲ ಕಲ್ಪನೆ ಹೊರತು ಸಾಕ್ಷಾತ್ಕಾರವಲ್ಲ. ನಮ್ಮ ಕಲ್ಪನೆ ನಮ್ಮ ಮನಸ್ಸಿನ ಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಮನಸ್ಸಿನಲ್ಲಿ ಉತ್ಸಾಹ ಇದ್ದಾಗ ಏನೇನೋ ಹೊಸ-ಹೊಸ ಕಲ್ಪನೆಗಳು ಬರುತ್ತವೆ. ಅವೆಲ್ಲವೂ ಸತ್ಯವಾಗಿರಬೇಕೆಂದಿಲ್ಲ. ಹಾಗಾಗಿ ಅವರವರ ಬುದ್ಧಿ ಮಟ್ಟಕ್ಕೆ ತಕ್ಕಂತೆ ಅವರವರ ಕಲ್ಪನೆ ಹೊರತು ಭಗವಂತ ಹೇಗಿದ್ದಾನೆ ಹಾಗೆ ನಮ್ಮ ಕಲ್ಪನೆ ಇರುವುದಿಲ್ಲ. ಈ ಕಾರಣದಿಂದ ಇಲ್ಲಿ ಅರ್ಜುನ ತನಗೆ ಬಂದ ವಿಚಾರ ತನ್ನ ಬುದ್ಧಿಮಟ್ಟದ ಕಲ್ಪನೆಯಲ್ಲ ಇದು ವಸ್ತುಸ್ಥಿತಿ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಆತ ಋಷಿಗಳು, ದೇವರ್ಷಿ ನಾರದರು ಹೇಳಿರುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾನೆ.

ಅರ್ಜುನ ಹೇಳುತ್ತಾನೆ “ನಿನ್ನನ್ನು ಪುರುಷಃ, ಶಾಶ್ವತಃ, ದಿವ್ಯಃ, ಆದಿದೇವಃ ಅಜಃ , ವಿಭುಃ ಎಂದು ಈ ಮಹಾತ್ಮರು ಹೇಳಿದ್ದಾರೆ” ಎಂದು. ಇಲ್ಲಿ ಬಳಸಿರುವ ಒಂದೊಂದು ಪದದಲ್ಲಿ  ಭಗವಂತನ ಅನಂತ ಗುಣ ಅಡಗಿದೆ. ವಿಷ್ಣುಸಹಸ್ರನಾಮದಲ್ಲಿ ಈ ಎಲ್ಲಾ ಪದಗಳನ್ನು  ಭಗವಂತನ ನಾಮವಾಗಿ ನಾವು ಕಾಣುತ್ತೇವೆ. ಬನ್ನಿ, ಇಲ್ಲಿ ಸಂಕ್ಷಿಪ್ತವಾಗಿ ಈ ಪದಗಳ ಅರ್ಥಾನುಸಂಧಾನ ಮಾಡೋಣ:  

ಪುರುಷಃ : ಇಲ್ಲಿ ಪುರುಷ ಎಂದರೆ ಗಂಡಸು ಎನ್ನುವ ಅರ್ಥವಲ್ಲ. ಪುರದಲ್ಲಿ ವಾಸಿಸುವವನು ‘ಪುರುಷಃ’.  ಸಮಸ್ತ ವೇದಗಳ ಸಾರಭೂತವಾದ ಸೂಕ್ತಗಳ ರಾಜ ‘ಪುರುಷಸೂಕ್ತ’ ಭಗವಂತನನ್ನು ಸಹಸ್ರ ಶೀರ್ಷಾ ಪುರುಷಃ' ಎಂದು ಕರೆದಿದೆ.  ಸೃಷ್ಟಿ ಕಾಲದಲ್ಲಿ ಏನೂ ಇಲ್ಲದಾಗಲೂ ಇದ್ದು, ಈ ಸೃಷ್ಟಿಯನ್ನು ನಿರ್ಮಾಣ ಮಾಡಿದ ಭಗವಂತ ಪುರಾ+ಷಃ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸುಟ್ಟ ಭಗವಂತ ಪುರ-ಉಷ. ಪ್ರಪಂಚದಲ್ಲಿ ಅನಂತವಾಗಿ, ಅನಂತ ಕಾಲ, ಅನಂತ ಸಾಮರ್ಥ್ಯ, ಅನಂತ ಗುಣಗಳಿಂದ ತುಂಬಿರುವ ಭಗವಂತ ಪುರ-ಸಹ.

 ಪ್ರಳಯ ಕಾಲದಲ್ಲಿ ಏನೂ ಇಲ್ಲದಾಗ ಇದ್ದು, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಒಂದೊಂದನ್ನು ಸೃಷ್ಟಿ ಮಾಡಿದ ಭಗವಂತ, ಮೊದಲು "ಮಹತತ್ವವನ್ನು" ಸೃಷ್ಟಿ ಮಾಡಿದ. ಮಹತತ್ವ ಎಂದರೆ ಇಡೀ ಪ್ರಪಂಚದ ಭೂತಪ್ರಜ್ಞೆ ಜಾಗೃತಿ. ಹಿಂದೆ ಇದ್ದ ಸಮಸ್ತ ಸೃಷ್ಟಿಯ ಸ್ಮರಣೆಯನ್ನು ಚಿತ್ತಾಭಿಮಾನಿ ಬ್ರಹ್ಮ-ವಾಯುವಿಗೆ ಕೊಟ್ಟು, ಸೂಕ್ಷ್ಮ ರೂಪದ ಪ್ರಪಂಚ ನಿರ್ಮಾಣ. ನಂತರ ದೇವತೆಗಳು, ಪಂಚಭೂತಗಳ ನಿರ್ಮಾಣ. ಹೀಗೆ ನಿರ್ಮಾಣವಾದ ಸ್ಥೂಲ ಬ್ರಹ್ಮಾಂಡದೊಳಗೆ ಭಗವಂತ ತುಂಬಿಕೊಂಡ. ಒಂದೊಂದು ಪಿಂಡಾಂಡದೊಳಗೆ ಒಂದೊಂದು ರೂಪದಲ್ಲಿ ಬಿಂಬ ರೂಪನಾಗಿ ತುಂಬಿ ಆ ಪಿಂಡಾಂಡದಿಂದ ಮಾಡಿಸಬೇಕಾದ ಕಾರ್ಯವನ್ನು ಮಾಡಿಸಿ, ಮೋಕ್ಷವನ್ನು ಕರುಣಿಸುವ ಭಗವಂತ ಪುರುಷಃ.

 ಹೀಗೆ ಸೃಷ್ಟಿಯ ಮೊದಲು, ಸೃಷ್ಟಿಯ ಕಾಲದಲ್ಲಿ, ಸೃಷ್ಟವಾದ ವಸ್ತುವಿನೊಳಗೆ, ಸೃಷ್ಟಿಯ ಸಾಧನೆಯಲ್ಲಿ, ಸಾಧನೆಯಿಂದ ಮುಕ್ತಿಯ ತನಕ ಎಲ್ಲೆಡೆ ಇರುವ ಈ ಹೃತ್ಕಮಲ ಮಧ್ಯ ನಿವಾಸಿ ಭಗವಂತ, ಪೂರ್ಣವಾದ ಷಡ್ಗುಣಗಳಿಂದ ತುಂಬಿರುವ ಜ್ಞಾನಾನಂದ ಸ್ವರೂಪ. ಪು+ರು+ಷಃ=ಪುರುಷಃ; ಇಲ್ಲಿ 'ಪು' ಎಂದರೆ ನಮ್ಮನ್ನು ಪಾವನಗೊಳಿಸುವ ಪರಮಪವಿತ್ರ. 'ರು' ಎಂದರೆ 'ರುವಂತಿ' , ಪ್ರಪಂಚದ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. 'ಷಃ' ಅಥವಾ 'ಸಹ' ಎಂದರೆ ಎಲ್ಲಾ ವಸ್ತುಗಳೊಳಗೆ ತುಂಬಿರುವ ಸರ್ವಾಂತರ್ಯಾಮಿ ತತ್ವ. ಹೀಗೆ ಪುರುಷಃ ಎನ್ನುವ ಭಗವಂತನ ನಾಮ ಅನೇಕ ರೀತಿಯಲ್ಲಿ ಭಗವಂತನ ಗುಣಾನುಸಂಧಾನ ಮಾಡುವ ನಾಮ.

ಶಾಶ್ವತಃ: ಅನಾದಿ ಅನಂತ ಕಾಲದಲ್ಲಿ ಯಾವುದೇ ಬದಲಾವಣೆಗೆ ಒಳಪಡದೆ, ಎಂದೆಂದೂ ಶಾಶ್ವತವಾಗಿರುವ ಆನಂದಸ್ವರೂಪ ಭಗವಂತ ಶಾಶ್ವತಃ .

ದಿವ್ಯಃ : ದಿವ್ಯ ಪದಕ್ಕೆ ಅನೇಕ ಅರ್ಥಗಳಿವೆ. ಮೂಲವಾಗಿ ದಿವ್ಯ ಅಥವಾ ದೇವರು ಈ ಪದಗಳು ದಿವು ಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು.

೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.

೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ.

೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.

೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.

೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.

೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. 

೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ  ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು ದಿವ್ಯ ಅಥವಾ  'ದೇವ'.
ಆದಿದೇವಃ: ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ಯಾರಿಗೆ ಲೀಲಾ ಮಾತ್ರವೋ ಆತ ಆದಿದೇವಃ. 

ಭಗವಂತ ಈ ಪ್ರಪಂಚ ಇರುವಾಗಲೂ, ಇಲ್ಲದಾಗಲೂ ಇರುವವ. ಆತ ಎಲ್ಲಕ್ಕಿಂತ ಎತ್ತರದಲ್ಲಿರುವವನು. ಎಲ್ಲಾ ಕಾಲದಲ್ಲೂ  ಜಗತ್ತಿನ ಸರ್ವ ವ್ಯವಹಾರವನ್ನು ನಡೆಸುವವ ಆತ. ಹೀಗೆ ಎಲ್ಲವುದರ ಒಳಗಿದ್ದು, ಎಲ್ಲಾ ಕ್ರಿಯೆಗಳನ್ನು ನಡೆಸುವ ಭಗವಂತ ಆದಿದೇವಃ.   

ಅಜಃ: 'ನ ಜಾಯತೇ ಇತಿ ಅಜಃ'; '' ಎಂದರೆ ಜನನ; ಅ+ಜಃ-ಅಜಃ ಎಂದರೆ ಹುಟ್ಟಿರದವನು. ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿದ  ಚತುರ್ಮುಖನನ್ನು ಅಜ ಎನ್ನುತ್ತಾರೆ. ಇಂತಹ ಚತುರ್ಮುಖನೊಳಗೆ ಸನ್ನಿಹಿತನಾಗಿ, ಸೃಷ್ಟಿ ಮಾಡುವ ಭಗವಂತ, ತಾನು ಹುಟ್ಟದೆ, ಎಲ್ಲವನ್ನೂ ಸೃಷ್ಟಿ ಮಾಡಿ ಸಂಹಾರ ಮಾಡುವ ಅಜಃ. ಎಲ್ಲರೂ ಭಗವಂತನ ಮಕ್ಕಳು,ಆದರೆ ಆತ ಯಾರಿಗೂ ಹುಟ್ಟಿದವನಲ್ಲ. ಏಕೆಂದರೆ ಅವನಿಗೆ ಹುಟ್ಟು-ಸಾವು ಎಂಬುದಿಲ್ಲ. ಇನ್ನು ಅಜಃ ಎಂದರೆ ಎಲ್ಲ ಕಡೆ ವ್ಯಾಪಿಸಿರುವವನು ಕೂಡಾ ಹೌದು. ಅ+ಜ-ಅಜಃ. ಇಲ್ಲಿ ''ಎಂದರೆ 'ಅಲ್ಲ' ಅಥವಾ ಇಲ್ಲ! ಅಂದರೆ ಅವನು ನಾವು ತಿಳಿದ ಯಾವ ವಸ್ತುವೂ ಅಲ್ಲ. 

ಅವನಲ್ಲಿ ಯಾವ ದೋಷವೂ ಇಲ್ಲ. ಇನ್ನೊಂದು ಅರ್ಥದಲ್ಲಿ ಅಜಃ ಅಂದರೆ ಯಾರಿಂದಲೂ ಹುಟ್ಟದವನು-ಆದರೆ ಎಲ್ಲರಲ್ಲೂ ಹುಟ್ಟುವವನು! ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ ಕಾಲದಲ್ಲಿ ಅನೇಕ ರೂಪಿಯಾಗಿ ಆತ ಹುಟ್ಟುತ್ತಾನೆ. ಗರ್ಭಿಣಿಯ ಗರ್ಭದಲ್ಲಿ ಭಗವಂತ ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ.

ವಿಭುಃ: ವಿವಿಧ+ಭವತಿ- ಅಂದರೆ ವಿವಿಧ ರೂಪ ತೊಟ್ಟ ಅನಂತರೂಪಿ.  ಸರ್ವಸಮರ್ಥನಾಗಿ ಪ್ರಪಂಚದಲ್ಲೆಲ್ಲಾ ತುಂಬಿರುವ ಭಗವಂತ ವಿಭುಃ.

ಇಲ್ಲಿ ಅರ್ಜುನ ವಿಶೇಷವಾಗಿ ದೇವರ್ಷಿ ನಾರದ, ಅಸಿತ-ದೇವಲ ಮತ್ತು ವ್ಯಾಸರ ಹೆಸರನ್ನು ಉಲ್ಲೇಖಿಸುತ್ತಾನೆ. ಏಕೆಂದರೆ ಅರ್ಜುನ ಇವರನ್ನು ಕಂಡಿದ್ದ ಮತ್ತು ಅವರು ಭಗವಂತನ ಬಗೆಗೆ ಹೇಳುವುದನ್ನು ಕೇಳಿದ್ದ. ನಾರದ ಮಹಾನ್ ಜ್ಞಾನಿ ಎನ್ನುವುದು ನಮಗೆ ತಿಳಿದಿದೆ. ದೇವತಾ ತಾರತಮ್ಯದಲ್ಲಿ ಇವರು ಹದಿನಾಲ್ಕನೇ ಮೆಟ್ಟಿಲಲ್ಲಿದ್ದಾರೆ. ಇವರು ಧರ್ಮರಾಯನ ಆಸ್ಥಾನದಲ್ಲಿ  ಭಗವಂತನ ಅಗ್ರಪೂಜೆ ನಡೆದಾಗ  ಬಂದು ಹರಸಿರುವ ದೇವಲೋಕದ ಋಷಿ. ನರ ಸಮುದಾಯದಲ್ಲಿರುವ ಅಜ್ಞಾನವನ್ನು ಸಂಹಾರ ಮಾಡಿ, ಭಗವಂತನ ಜ್ಞಾನವನ್ನು ಕೊಡುವ ನಾರದ, ನಮಗೆ ಸತ್ಯವನ್ನು ಹೊಳೆಸುವ ಅಂತಃಪ್ರಜ್ಞೆಯ(Intuition)ದೇವತೆ. 

ಆಜ್ಞಾಚಕ್ರವನ್ನು ಜಾಗೃತಗೊಳಿಸಿದಾಗ ನಮಗೆ ನಾರದರ ದರ್ಶನವಾಗುತ್ತದೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವುದನ್ನು ಅಂತರ್ದೃಷ್ಟಿಯಿಂದ ಉತ್ತರಿಸುವವರು ನಾರದರು.  ಅಸಿತ-ದೇವಲರು ಮಂತ್ರದೃಷ್ಟಾರರಾದ ವೇದಕಾಲದ ಋಷಿಗಳು. ಇವರು ಧರ್ಮರಾಯನ ಸಭೆಗೆ ಬಂದು ಆತನಿಗೆ ಧರ್ಮೋಪದೇಶ ಮಾಡಿದ್ದನ್ನು ಅರ್ಜುನ ನೋಡಿದ್ದ. ಇನ್ನು ವ್ಯಾಸರು: ವೇದವನ್ನು ವಿಭಾಗ ಮಾಡಿ, ನಮಗೆ ಹದಿನೆಂಟು ಪುರಾಣವನ್ನು, ಮಹಾಭಾರತ, ಪಂಚಮವೇದವನ್ನು ಕೊಟ್ಟ ಭಗವಂತನ ಅವತಾರ. “ಈ ಎಲ್ಲಾ ಮಹಾತ್ಮರು ಏನನ್ನು ಹೇಳಿದ್ದರೂ ಅದನ್ನೇ ನೀನು ನನಗೆ ಹೇಳುತ್ತಿದ್ದೀಯ” ಎನ್ನುತ್ತಾನೆ ಅರ್ಜುನ. ಹೀಗೆ ತನಗಾಗುತ್ತಿರುವ  ಅನುಭವ ಕೇವಲ ಭ್ರಮೆ ಅಲ್ಲ ಎನ್ನುವುದನ್ನು ಅರ್ಜುನ ಖಚಿತಪಡಿಸಿಕೊಳ್ಳುತ್ತಾನೆ.

ಅಧ್ಯಾಯ - 10: ಶ್ಲೋಕ  14

ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ ।

ನಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ ॥೧೪॥

ಸರ್ವಮ್ ಏತತ್ ಋತಮ್ ಮನ್ಯೇ ಯತ್ ಮಾಮ್ ವದಸಿ ಕೇಶವ 
 ಹಿ ತೇ ಭಗವನ್ ವ್ಯಕ್ತಿಮ್  ವಿದುಃ ದೇವಾಃ ನ ದಾನವಾಃ – 

ಓ ಕೇಶವ, ನೀನು ನನಗೇನು ಹೇಳಿದೆ ಅದೆಲ್ಲ ನಿಜವೆಂದು ಬಲ್ಲೆ. ಓ ಭಗವಾನ್, ನೀನು ಮೂಡಿಬಂದ ಬಗೆಯನ್ನು ದೇವತೆಗಳಾಗಲಿ, ದಾನವರಾಗಲಿ ಅರಿತವರಲ್ಲ.

“ನೀನು ಹೇಳುತ್ತಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎನ್ನುವುದನ್ನು ಬಲ್ಲೆ. ನಿನ್ನ ಅರಿವಿನ ಅಭಿವ್ಯಕ್ತಿಯನ್ನು ದೇವತೆಗಳಾಗಲಿ ದಾನವರಾಗಲಿ ತಿಳಿದಿಲ್ಲ” ಎನ್ನುತ್ತಾನೆ ಅರ್ಜುನ. ದೇವತೆಗಳಿಗೆ ಭಗವಂತನ ಗುಣಪ್ರಮಾಣವನ್ನು ಅಳೆಯಲು ಸಾಧ್ಯವಾಗಿಲ್ಲ. ದಾನವರು ಭಗವಂತನಲ್ಲಿ ದೋಷ ಹುಡುಕುವುದರಲ್ಲಿ ಯಶಸ್ವಿ ಆಗಿಲ್ಲ. ಏಕೆಂದರೆ ಭಗವಂತ ಅನಂತ ಗುಣಪೂರ್ಣ. ಆತನಲ್ಲಿ ಯಾವುದೇ ದೋಷವಿಲ್ಲ. 

ಆತನನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಅಸಾಧ್ಯ. ಭಗವಂತನ ಬಗೆಗೆ ಅವನೇ ಹೇಳಬೇಕು ಹೊರತು ಇನ್ನೊಬ್ಬರು ಅದನ್ನು ವರ್ಣಿಸಲು ಸಾಧ್ಯವಿಲ್ಲ. ಭಗವಂತನನ್ನು ಪೂರ್ಣ ತಿಳಿಯುವುದು ಹಾಗಿರಲಿ, ಆತನ ಒಂದು ಅವತಾರವನ್ನು, ಅವತಾರದಲ್ಲಿನ ಆತನ ಒಂದು ಲೀಲೆಯನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಕಷ್ಟ.  ಕೃಷ್ಣ ತನ್ನ ಅವತಾರದಲ್ಲಿ ನಡೆದುಕೊಂಡ ರೀತಿ ನಮಗೆ ಅರ್ಥವಾಗುವುದಿಲ್ಲ. ನಮಗೆ ಅದು ವಿಚಿತ್ರ ಎನಿಸುತ್ತದೆ. ಆತನನ್ನು ಅರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆತನ ಒಂದೊಂದು ನಡೆಯ ಹಿಂದೆ ಒಂದೊಂದು ಸಂದೇಶವಿದೆ.

ಅಧ್ಯಾಯ - 10: ಶ್ಲೋಕ  15, 16

ಸ್ವಯಮೇವಾSತ್ಮನಾSSತ್ಮಾನಂ ವೇತ್ಥ ತ್ವಂ ಪುರುಷೋತ್ತಮ ।

ಭೂತಭಾವನ ಭೂತೇಶ ದೇವದೇವ ಜಗತ್ ಪತೇ ॥೧೫॥

ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ ।

ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ॥೧೬॥

ಸ್ವಯಮ್ ಏವ ಆತ್ಮನಾ ತ್ಮಾನಮ್  ವೇತ್ಥ ತ್ವಮ್  ಪುರುಷೋತ್ತಮ  
ಭೂತಭಾವನ ಭೂತೇಶ ದೇವದೇವ ಜಗತ್ ಪತೇ ||
ವಕ್ತುಮ್ ಅರ್ಹಸಿ ಅಶೇಷೇಣ ದಿವ್ಯಾಃ ಹಿ ಆತ್ಮ ವಿಭೂತಯಃ 
ಯಾಭಿಃ ವಿಭೂತಿಭಿಃ ಲೋಕಾನ್ ಇಮಾನ್ ತ್ವಮ್  ವ್ಯಾಪ್ಯ ತಿಷ್ಠಸಿ 

ಓ ಪುರುಷೋತ್ತಮ, ನೀನೆ ಸ್ವತಃ ನಿನ್ನಳವಿನಿಂದ ನಿನ್ನನ್ನು ಅರಿತಿರುವೆ. ಓ ಎಲ್ಲಾ ಜೀವಿಗಳ ಸ್ರಷ್ಟಾರನೆ, ಎಲ್ಲ ಜೀವಿಗಳ ದೊರೆಯೆ, ದೇವತೆಗಳಿಗೂ ಹಿರಿಯ ದೈವತವೆ, ಜಗದೊಡೆಯನೆ, ಯಾವ ರೂಪಗಳಿಂದ ನೀನು ಈ ಲೋಕಗಳನ್ನೆಲ್ಲ ತುಂಬಿ ನಿಂತಿರುವೆಯೋ ಅಂಥ ಅಲೌಕಿಕವಾದ ನಿನ್ನ ಬಗೆಬಗೆಯ ರೂಪಗಳ ಹಿರಿಮೆಗಳನ್ನು ಬಿಡದೆ ತಿಳಿಹೇಳಬೇಕು ನೀನೆ.

ಅರ್ಜುನ ಹೇಳುತ್ತಾನೆ: “ನಿನ್ನ ಗುಣಪ್ರಮಾಣವನ್ನು ದೇವತೆಗಳಿಂದಲೂ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ನಿನ್ನ ಬಗೆಗೆ ತಿಳಿದಿರುವುದು ನೀನೊಬ್ಬನೆ. ಅದನ್ನು ನೀನು ನೀನಾಗಿಯೇ ಹೇಳಬೇಕು ಹೊರತು ಇನ್ನೊಬ್ಬರಿಂದ ಹೇಳಲು ಸಾಧ್ಯವಿಲ್ಲ. ಏಕೆಂದರೆ ನೀನು ಪುರುಷೋತ್ತಮ” ಎಂದು. ಇಲ್ಲಿ   ಪುರುಷೋತ್ತಮ ಎನ್ನುವ ವಿಶೇಷಣ ಬಳಕೆಯಾಗಿದೆ. ಪುರುಷೋತ್ತಮ  ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯನು. ಕ್ಷರ-ಅಕ್ಷರವನ್ನು ಮೀರಿ ನಿಂತ ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ. ಆದ್ದರಿಂದ ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು”  ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ಈ ವಿಶೇಷಣ ತಿಳಿಸುತ್ತದೆ.

ಇಲ್ಲಿ ಅರ್ಜುನ ಕೃಷ್ಣನನ್ನು- ಭೂತಭಾವನ, ಭೂತೇಶ, ದೇವದೇವ ಮತ್ತು  ಜಗತ್ ಪತೇ  ಎಂದು ಸಂಬೋಧಿಸಿದ್ದಾನೆ. ಭೂತಭಾವನ ಎಂದರೆ- ಪಂಚಭೂತಾತ್ಮಕ ಪ್ರಪಂಚವನ್ನು ಸೃಷ್ಟಿ ಮಾಡಿ,  ಸಮಸ್ತ ಜೀವ-ಜಾತದ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾಗಿರುವವ. ಭೂತೇಶ ಎಂದರೆ- ಎಲ್ಲರನ್ನು ನಿಯಂತ್ರಿಸುವ ಸರ್ವ ನಿಯಾಮಕ  ಸ್ವಾಮಿ. ದೇವದೇವ ಎಂದರೆ-ಎಲ್ಲಾ ದೇವತೆಗಳಿಗೂ ದೇವನಾಗಿರುವವ; ಸೂರ್ಯಾದಿಗಳಿಗೂ ಬೆಳಕನ್ನು ಕೊಡುವ ಮೂಲ ಜ್ಯೋತಿ. ಜಗತ್ ಪತಿ ಎನ್ನುವಲ್ಲಿ 'ಪತಿ' ಎಂದರೆ ಪಾಲಕ. ಹುಟ್ಟಿಸುವವನೂ ಭಗವಂತ, ಸಾಯಿಸುವವನೂ ಭಗವಂತ. ಹುಟ್ಟು ಸಾವಿಲ್ಲದ ಮೋಕ್ಷ  ಕೊಡುವವನೂ ಅವನೆ. ಆತ ಸಮಸ್ತ ಜಗತ್ತಿನ ಪಾಲಕ. ನಮಗೆ ಭಗವಂತ ‘ಸಂಸಾರಬಂಧ’ ಕೊಡುವುದು ಆತನ ಪಾಲನೆಯ, ಶಿಕ್ಷಣದ ಒಂದು ಮುಖ ಅಷ್ಟೆ. ಒಟ್ಟಿನಲ್ಲಿ “ನೀನಿಲ್ಲದೆ ನಾವಿಲ್ಲ, ನೀನೇ ಸರ್ವ ರಕ್ಷಕ” ಎನ್ನುವ ಭಾವವನ್ನು ಅರ್ಜುನ ಈ ಮೂಲಕ ವ್ಯಕ್ತಪಡಿಸಿದ್ದಾನೆ.

ಅಧ್ಯಾಯ - 10: ಶ್ಲೋಕ  17

ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್  ।

ಕೇಷು ಕೇಷು ಚ ಭಾವೇಷು ಚಿಂತ್ಯೋSಸಿ ಭಗವನ್ ಮಯಾ ॥೧೭॥

ಕಥಮ್  ವಿದ್ಯಾಮ್ ಅಮ್  ಯೋಗಿನ್ ತ್ವಾಮ್  ಸದಾ ಪರಿಚಿಂತಯನ್       
ಕೇಷು ಕೇಷು ಚ ಭಾವೇಷು ಚಿಂತ್ಯಃ ಅಸಿ ಭಗವನ್ ಮಯಾ

ಸರ್ವಸಮರ್ಥನೆ, ನಿನ್ನನ್ನು ಅನುಗಾಲ ಪರಿಪರಿ ನೆನೆಯುತ್ತ ನಾನು ಹೇಗೆ ತಿಳಿದೇನು? ಓ ಭಗವನ್, ಯಾವಯಾವ ವಸ್ತುಗಳಲ್ಲಿ ಹೇಗಿರುವೆಯೆಂದು ನಾನು ನೆನೆಯಬೇಕು?

ಈ ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿರುವ ಒಂದು ವಿಶಿಷ್ಟ ಗುಣದ ಹಿಂದೆ ಭಗವಂತನ ವಿಭೂತಿ ಅಡಗಿದೆ. ಇಲ್ಲಿ ಅರ್ಜುನ ಭಗವಂತನಲ್ಲಿ ಪ್ರಾರ್ಥಿಸುತ್ತಾನೆ: “ಸರ್ವ ಸಮರ್ಥನಾದ ನೀನು ಎಲ್ಲಿ ಏನಾಗಿದ್ದಿ ಎಂದು ನಿನಗೆ ಗೊತ್ತಿದೆ ಹೊರತು ನನಗಲ್ಲ. ನಾನು ಒಂದು ವಸ್ತುವನ್ನು ಕಂಡಾಗ ಅದರ ಹಿಂದಿರುವ ಭಗವತ್ ಶಕ್ತಿಯ ನೆನಪು ನನಗೆ ಬರಬೇಕು. ಯಾವಯಾವ ವಸ್ತುವಿನಲ್ಲಿ ನಿನ್ನ ಉಪಾಸನೆಯನ್ನು ನಾನು ಮಾಡಬೇಕು-ಅದನ್ನು ನಾನು ತಿಳಿಯಬೇಕು” ಎಂದು.

ಅಧ್ಯಾಯ - 10: ಶ್ಲೋಕ  18

ವಿಸ್ತರೇಣಾSತ್ಮನೋ ಯೋಗಂ ವಿಭೂತಿಂ ಚ ಜನಾರ್ದನ      ।

ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇSಮೃತಮ್ ॥೧೮॥

ವಿಸ್ತರೇಣಾ ತ್ಮನಃ  ಯೋಗಮ್  ವಿಭೂತಿಮ್  ಚ ಜನಾರ್ದನ          
ಭೂಯಃ ಕಥಯ ತೃಪ್ತಿಃ ಹಿ ಶೃಣ್ವತಃ ನ ಅಸ್ತಿ ಮೇ ಅಮೃತಮ್

ಓ ಜನಾರ್ದನ, ನಿನ್ನ ಆಳವನ್ನೂ ಬಗೆಬಗೆಯ ರೂಪಗಳ ಹಿರಿಮೆಯನ್ನೂ ಇನ್ನಷ್ಟು ಬಿತ್ತರಿಸಿ ಹೇಳು. ನನಗೆ ಈ ಸುಧೆಯನ್ನು ಎಷ್ಟು ಸವಿದರೂ ತಣಿವಿಲ್ಲ.

“ಉಪಾಸನೆಗೆ ಉಪಯೋಗವಾಗುವ ನಿನ್ನ ವಿಭೂತಿಯನ್ನು ಇನ್ನೂ ಹೇಳು”  ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ. ಭಗವಂತನ ವಿಭೂತಿಯಲ್ಲಿ ಪ್ರಮುಖವಾಗಿ ನಾಲ್ಕು ವಿಧ. (೧) ಸಾಕ್ಷಾತ್ ವಿಭೂತಿ: ಇಲ್ಲಿ ಭಗವಂತ ವಿಶಿಷ್ಟ ರೂಪದಲ್ಲಿ ನಮಗೆ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ. ಉದಾಹರಣೆಗೆ: ಭಗವಂತನ ಅವತಾರಗಳು. (೨) ವಿಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ನಕ್ಷತ್ರಗಳ ರಾಜ ಚಂದ್ರ. ಇಲ್ಲಿ ಚಂದ್ರ ನಕ್ಷತ್ರಗಳ ಜಾತಿಗೆ ಸೇರಿಲ್ಲ ಆದರೆ ಆತ ನಕ್ಷತ್ರಗಳ ರಾಜ. (೩)ಸ್ವಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ದೇವತೆಗಳಲ್ಲಿ ಇಂದ್ರ, ಬೆಳಕಿನಲ್ಲಿ ಸೂರ್ಯ. (೪) ಸ್ವಜಾತಿಯ ಏಕದೇಶೀಯ ಸ್ರಷ್ಟಪ್ರಭ. ಉದಾಹರಣೆಗೆ: ಪಾಂಡವರಲ್ಲಿ ಅರ್ಜುನ.

  ಹೀಗೆ ಈ ನಾಲ್ಕು ಬಗೆಯಲ್ಲಿ ಭಗವಂತನ ವಿಭೂತಿ ರೂಪಗಳು ಅನಂತ. ಇಲ್ಲಿ ಎಲ್ಲವನ್ನೂ ನಾವು ಉಪಾಸನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅರ್ಜುನ  “ಉಪಾಸನೆ ಮಾಡುವುದಕ್ಕೆ ಅನುಕೂಲವಾದ ನಿನ್ನ ವಿಭೂತಿಯನ್ನು ವಿಸ್ತಾರವಾಗಿ ಹೇಳು” ಎಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಅರ್ಜುನ ಕೃಷ್ಣನ ಸಂದೇಶವನ್ನು ಕೇಳಿ ಆನಂದ ಸಾಗರದಲ್ಲಿ ತೇಲುತ್ತಿದ್ದಾನೆ. ಆತ ಹೇಳುತ್ತಾನೆ: “ನಾನು ಅಮೃತಪಾನ ಮಾಡುತ್ತಿದ್ದೇನೆ, ಇಲ್ಲಿ ಸಾಕು ಎನ್ನುವುದಿಲ್ಲ” ಎಂದು. ಇದು ಮೊಕ್ಷಪ್ರದವಾದ, ಕಿವಿ ಬೊಗಸೆಯಿಂದ ಮಾಡುವ ಅಮೃತಪಾನ. ಇದು ನಮ್ಮನ್ನು ಹುಟ್ಟು-ಸಾವಿನ ಸುಳಿಯಲ್ಲಿ ಸಿಗದಂತೆ ಮಾಡಿ,ಅಮೃತರನ್ನಾಗಿ ಮಾಡುವ ಜ್ಞಾನ. ಇದನ್ನು ಎಷ್ಟು ಸವಿದರೂ ತಣಿವಿಲ್ಲ. ಅದಕ್ಕಾಗಿ “ಇನ್ನೂ ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.

ಅಧ್ಯಾಯ - 10: ಶ್ಲೋಕ 19

ಭಗವಾನುವಾಚ ।

ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ ।

ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ        ॥೧೯॥

ಭಗವಾನ್ ಉವಾಚ-ಭಗವಂತ ನುಡಿದನು:
ಹಂತ ತೇ ಕಥಯಿಷ್ಯಾಮಿ ದಿವ್ಯಾಃ ಹಿ ಆತ್ಮ ವಿಭೂತಯಃ 
ಪ್ರಾಧಾನ್ಯತಃ ಕುರುಶ್ರೇಷ್ಠ ನ ಅಸ್ತಿ ಅಂತಃ  ವಿಸ್ತರಸ್ಯ ಮೇ

ಕುರುಗಳ ಮುಂದಾಳೆ, ಭಲೆ! ನನ್ನ ಅಲೌಕಿಕವಾದ ವಿಭೂತಿ ರೂಪಗಳಲ್ಲಿ ಕೆಲವನ್ನು ಆಯ್ದು ಹೇಳುತ್ತೇನೆ. ನನ್ನ ಬಿತ್ತರಕ್ಕೆ ಕೊನೆಯಿಲ್ಲ. ಸಂಸ್ಕೃತದಲ್ಲಿ  ‘ಹಂತ’ ಎನ್ನುವ ಪದ ಸಂತೋಷ ಮತ್ತು ವಿಸ್ಮಯವನ್ನು ವ್ಯಕ್ತಪಡಿಸಲು ಬಳಸುವ ಪದ. ಕೃಷ್ಣ ಅರ್ಜುನನ ಆಸಕ್ತಿಯನ್ನು ಕಂಡು ಆತನನ್ನು ‘ಭಲೆ’ ಎಂದು ಹೊಗಳುತ್ತಾನೆ.

ಇಂದು ಯಾರಿಗೂ ವೇದಾಂತ ಕೇಳುವ ಇಚ್ಛೆ ಇಲ್ಲ. “ನಮಗೆ ಸಮಯವಿಲ್ಲ” ಎಂದು ಜಾರಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಮಾನಸಿಕವಾಗಿ ನೋಡಿದರೆ ‘ಸಮಯವಿಲ್ಲ’ ಎನ್ನುವುದು ತಮಗೆ ಇಷ್ಟವಿಲ್ಲ ಎನ್ನುವುದನ್ನು ಮುಚ್ಚಿಡಲು ಬಳಸುವ ಪದ! ನಮಗೆ ಇಷ್ಟವಿದ್ದರೆ ಸಮಯವಿರುತ್ತದೆ! ಇಲ್ಲಿ ಅರ್ಜುನನ ಕಾತರತೆಯನ್ನು ಕೃಷ್ಣ ಪ್ರಶಂಸಿಸುತ್ತಾನೆ ಮತ್ತು “ನೀನು ಕೇಳಬೇಕೆಂದು ಬಯಸಿದ್ದನ್ನು ಖಂಡಿತವಾಗಿಯೂ ಹೇಳುತ್ತೇನೆ” ಎನ್ನುತ್ತಾನೆ. 

ಭಗವಂತನ ವಿಭೂತಿ ದಿವ್ಯವಾದದ್ದು ಮತ್ತು ಅದು ಅನಂತ. ಅದನ್ನು ಪೂರ್ಣ ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೃಷ್ಣ ನಾವು ಮುಖ್ಯವಾಗಿ ಉಪಾಸನೆ ಮಾಡಬೇಕಾದ ಭಗವಂತನ ವಿಭೂತಿಯನ್ನು ಸಂಕ್ಷಿಪ್ತವಾಗಿ ಸಂಗ್ರಹ ಮಾಡಿ ಹೇಳಿದ್ದಾನೆ.
ಇಲ್ಲಿ ‘ಕುರುಶ್ರೇಷ್ಠ’ ಎನ್ನುವ ವಿಶೇಷಣ ಬಳಕೆಯಾಗಿದೆ. ತಮ್ಮನ್ನು ತಾವು ಭಗವದುಪಾಸನೆ ದಾರಿಯಲ್ಲಿ ತೊಡಗಿಸಿಕೊಂಡ ಸಾಧಕರು ‘ಕುರುಗಳು’. ಇದು ಅಧ್ಯಾತ್ಮಕ್ಕೆ ಬೇಕಾದ ಕನಿಷ್ಠ ಅರ್ಹತೆ. “ನೀನು ಅಧ್ಯಾತ್ಮ ಸಾಧನೆಯಲ್ಲಿ ಎತ್ತರಕ್ಕೇರಿದವನು. ನಿನಗೆ ಈ ಸಾಧನೆಯಲ್ಲಿ ಕಳಕಳಿ ಇದೆ. ಅದಕ್ಕಾಗಿ ನಿನಗೆ ಖಂಡಿತವಾಗಿ ಹೇಳುತ್ತೇನೆ” ಎನ್ನುವ ಭಾವ ಈ ಸಂಬೋಧನೆಯ ಹಿಂದಿದೆ.        


ಅಧ್ಯಾಯ - 10: ಶ್ಲೋಕ  20

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ।

ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ॥೨೦॥

ಅಹಮ್ ಆತ್ಮಾ ಗುಡಾಕೇಶ ಸರ್ವಭೂತ ಶಯಸ್ಥಿತಃ 
ಅಹಮ್ ಆದಿಃ ಚ ಮಧ್ಯಮ್  ಚ ಭೂತಾನಾಮ್ ಅಂತಃ ಏವ ಚ

ಓ ಗುಡಾಕೇಶ, ಎಲ್ಲ ಗುಣಗಳ ನೆಲೆಯಾದ ನಾನೆ ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿ. ನಾನೆ ಎಲ್ಲ ಜೀವಿಗಳ ಬುಡ, ನಡು ಮತ್ತು ಕೊನೆ.

ವಿಭೂತಿಯ ಒಟ್ಟು ಸಾರ(essence) ಏನೆಂದರೆ: ‘ಭಗವಂತ ಎಲ್ಲರ ಒಳಗೂ ತುಂಬಿದ್ದಾನೆ’ ಎನ್ನುವುದು. ಕೃಷ್ಣ ಹೇಳುತ್ತಾನೆ: “ನಾನು ಪ್ರತಿಯೊಂದು ಜೀವಿಯ ಒಳಗೆ ಆತ್ಮವಾಗಿ ತುಂಬಿದ್ದೇನೆ. ಎಲ್ಲ ಜೀವಗಳ ಆತ್ಮ ನಾನು” ಎಂದು. ಈ ಶ್ಲೋಕದಲ್ಲಿ ‘ಜೀವಾತ್ಮ-ಪರಮಾತ್ಮ ಒಂದೆ’ ಎಂದು ಹೇಳಲಾಗಿದೆ ಎಂದು ಕೆಲವರು ತಪ್ಪಾಗಿ  ತಿಳಿದುಕೊಳ್ಳುತ್ತಾರೆ. ಆದರೆ ಇಲ್ಲಿ ಕೃಷ್ಣ ಹೇಳಿರುವುದು 'ಜೀವಾತ್ಮರ ಆತ್ಮನಾಗಿ ನಾನು ತುಂಬಿದ್ದೇನೆ' ಎಂದೇ ಹೊರತು 'ನಾನೇ ಜೀವಾತ್ಮ' ಎಂದಲ್ಲ. ಇದು ಪ್ರತಿಯೊಂದು ಜೀವರ ಒಳಗೆ ಅಂತರ್ಯಾಮಿಯಾಗಿರುವ ಬಿಂಬರೂಪಿ ಭಗವಂತನನ್ನು ಹೇಳುತ್ತದೆ.

 ಭಗವಂತ ‘ಸರ್ವಭೂತಾಶಯಸ್ಥಿತಃ’. ಸಮಸ್ತ ಜೀವಜಾತದ ಹೃದಯಗುಹೆಯಲ್ಲಿ ಅಂತರ್ಯಾಮಿಯಾಗಿ ನಿಂತಿದ್ದಾನೆ ಆ ಹೃತ್ಕಮಲ ಮಧ್ಯ ನಿವಾಸಿ. ಇದು ಭಗವಂತನ ಅತಿ ದೊಡ್ಡ ವಿಭೂತಿ. ಅನಂತ ಜೀವರೊಳಗೆ ಅನಂತ ವಿಭೂತಿ ರೂಪದಲ್ಲಿ ಭಗವಂತ ವ್ಯಕ್ತನಾಗುತ್ತಾನೆ. ಈ ಕಾರಣದಿಂದ ನಾವು ಒಂದೊಂದು ಜೀವರಲ್ಲಿ ಒಂದೊಂದು ಶಕ್ತಿ ವೈಶಿಷ್ಟ್ಯವನ್ನು ಕಾಣುತ್ತೇವೆ.  ಸಮಸ್ತ ಜೀವಗಳು- ಹುಟ್ಟುವ ಮುಂಚೆ ಅವುಗಳ ಒಳಗೆ ನಿಯಾಮಕನಾಗಿ ನಿಂತು, ಅವುಗಳ ಸೃಷ್ಟಿಗೆ ಕಾರಣನಾಗಿ, ಅವುಗಳನ್ನು ರಕ್ಷಣೆ ಮಾಡಿ, ಪ್ರಳಯಕಾಲದಲ್ಲೂ ಕೂಡ ಎಲ್ಲವನ್ನು ಕಾಪಾಡುವ ಭಗವಂತ-ಎಲ್ಲ ಅವಸ್ಥೆಗಳಲ್ಲಿಯೂ ಒಳಗೆ ನಿಂತು ರಕ್ಷಿಸುವ ಶಕ್ತಿ.

ಇಲ್ಲಿ ಗುಡಾಕೇಶ ಎನ್ನುವ ವಿಶೇಷಣ ಬಳಸಲಾಗಿದೆ. ಇದು ಕೂಡಾ ಒಂದು ವಿಭೂತಿ ಗಮಕ. ‘ಗುಡಾಕ’ ಎಂದರೆ ನಿದ್ದೆ. ‘ಗುಡಾಕೇಶ’ ಎಂದರೆ ನಿದ್ದೆಯನ್ನು ಗೆದ್ದವ. ಅರ್ಜುನನಲ್ಲಿ ಈ ವಿಶೇಷ ಸಾಮರ್ಥ್ಯವಿತ್ತು. ಅದಕ್ಕಾಗಿ ಆತನನ್ನು ಈ ನಾಮದಿಂದ ಕರೆಯುತ್ತಿದ್ದರು. “ನಿನ್ನೊಳಗೆ ನಿದ್ದೆಯನ್ನು ಗೆಲ್ಲುವ ಶಕ್ತಿಯಾಗಿ ತುಂಬಿರುವವನೂ ನಾನೆ” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ  ತನ್ನ ವಿಶಿಷ್ಟವಾದ ವಿಭೂತಿಯನ್ನು ವಿವರಿಸುತ್ತಾನೆ.

ಅಧ್ಯಾಯ - 10: ಶ್ಲೋಕ  21

ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್।

ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ॥೨೧॥

ಆದಿತ್ಯಾನಾಮ್ ಅಮ್ ವಿಷ್ಣುಃ ಜ್ಯೋತಿಷಾಮ್  ರವಿಃ ಅಂಶುಮಾನ್
ಮರೀಚಿಃ ಮರುತಾಮ್ ಅಸ್ಮಿ ನಕ್ಷತ್ರಾಣಾಮ್ ಅಮ್  ಶಶೀ—ಹನ್ನೆರಡು ಮಂದಿ ಅದಿತಿಯ ಮಕ್ಕಳಲ್ಲಿ [ಎಲ್ಲೆಡೆ ಹಬ್ಬಿರುವುದರಿಂದ, ಎಲ್ಲದರೊಳಗೂ ತುಂಬಿರುವುದರಿಂದ] ವಿಷ್ಣುನಾಮಕ[ವಾಮನ]ನಾನು. ಬೆಳಗಿಸುವ ಶಕ್ತಿಗಳಲ್ಲಿ ಕಿರಣಗಳಿಂದ ಬೆಳಗುವ ಹಿರಿಯ ಬೆಳಕು ರವಿ ನಾನು.[ರವ=ನಾದಗಳಿಂದ, ಇ=ಜ್ಞೇಯನಾಗಿ ‘ರವಿ’ ಎಂಬ ಹೆಸರಿನಿಂದ ರವಿಯಲ್ಲಿದ್ದೇನೆ.] ಮರುತ್ತುಗಳ ಸಂತತಿಯಲ್ಲಿ ಮರೀಚಿ ನಾನು, [ಮರಿ=ನೀರು ತುಂಬಿದ ಮೊಡಗಳನ್ನು, ಚಿ=ಪ್ರಚೋದಿಸುವುದರಿಂದ ‘ಮರೀಚಿ’ ಎನ್ನಿಸಿ ಪ್ರವಹವಾಯುತನಯ ಮರೀಚಿಯಲ್ಲಿದ್ದೇನೆ.] ನಕ್ಷತ್ರಗಳ ಒಡೆಯ ಚಂದ್ರ [ಶ =ಎಲ್ಲ ಸುಖಗಳಿಗಿಂತ, ಶಿ=ಅಧಿಕ  ಸುಖರೂಪನಾಗಿ ‘ಶಶಿ’ಎನಿಸಿ ಚಂದ್ರನಲ್ಲಿದ್ದು ಅವನಿಗೆ ನಕ್ಷತ್ರಗಳ ಒಡೆತನವಿತ್ತವನು ನಾನು.

ತನ್ನ ವಿಭೂತಿಗಳ ಬಗ್ಗೆ ಹೇಳುತ್ತ ಕೃಷ್ಣ ಮೊಟ್ಟಮೊದಲು ನಿತ್ಯ ಉಪಾಸನೆಯಲ್ಲಿ ಬಹಳ ಮುಖ್ಯವಾದ ತನ್ನ ಸ್ವರೂಪ ವಿಭೂತಿಯನ್ನು ಹೇಳುತ್ತಾನೆ. ಅದಿತಿಯ ಹನ್ನೆರಡು ಮಂದಿ ಪುತ್ರರಲ್ಲಿ (ದ್ವಾದಶಾದಿತ್ಯರು-ವಿವಸ್ವಾನ್(ಸೂರ್ಯ), ಅರ್ಯಮಾ, ಪೂಷಾ, ತ್ವಷ್ಟಾ, ಸವಿತಾ, ಭಗ, ಧಾತಾ, ವಿಧಾತ, ವರುಣ, ಮಿತ್ರ, ಇಂದ್ರ, ಮತ್ತು ವಾಮನರೂಪಿ ವಿಷ್ಣು ) ಒಬ್ಬ ಭಗವಂತನ ಸಾಕ್ಷಾತ್ ವಿಭೂತಿ. ಆತನೇ ವಾಮನ ರೂಪಿ ವಿಷ್ಣು.  ಆದ್ದರಿಂದ ಕೃಷ್ಣ ಹೇಳುತ್ತಾನೆ “ದ್ವಾದಶಾದಿತ್ಯರಲ್ಲಿ ವಿಷ್ಣು ನಾನು” ಎಂದು. ಇನ್ನು ಆದಿತ್ಯರು ಎಂದರೆ ಸಮಸ್ತ ದೇವತೆಗಳು ಎನ್ನುವ ಅರ್ಥವಿದೆ. ಸರ್ವ ದೇವತೆಗಳಲ್ಲಿ ದೇವೋತ್ತಮ ‘ವಿಷ್ಣು’ ಆ ಭಗವಂತ.

ಇಲ್ಲಿ ಬರುವ ಪ್ರತಿಯೊಂದು ಭಗವಂತನ ಹೆಸರಿಗೆ ಒಂದು ಅರ್ಥನಿಷ್ಪತ್ತಿ(etymological meaning) ಇದೆ. ‘ವಿಷ್ಣು’ ಎನ್ನುವ ನಾಮ ಏನನ್ನು ಹೇಳುತ್ತದೆ ಎಂದು ಸಂಕ್ಷಿಪ್ತವಾಗಿ ನೋಡೋಣ: ಪುರಾಣದಲ್ಲಿ,  ಭಾರತದಲ್ಲಿ ಬಂದಿರತಕ್ಕಂತಹ ಪೌರಾಣಿಕ ಅರ್ಥ ನೋಡಿದರೆ ಮೂರು ಧಾತುವಿನಿಂದ ‘ವಿಷ್ಣುಃ’ ಶಬ್ದ ನಿಷ್ಪನ್ನವಾಗಿದೆ  ಎನ್ನುವುದು ತಿಳಿಯುತ್ತದೆ. (೧) ವಿಷಲ್-ವ್ಯಾಪ್ತೋ (೨) ವಿಷತಿ-ಪ್ರವೇಶೇ (೩) ವೇತಿ- ಪ್ರಜನಯತಿ, ಗತಿ, ಕಾಂತಿ, ಕಾದನೇಷು, ಗಚ್ಛತಿ. ಈ ಧಾತುವಿನ ಅರ್ಥದಲ್ಲಿ ನೋಡಿದಾಗ-ವಿಷ್ಣುಃ ಎಂದರೆ ಎಲ್ಲ ಕಡೆ ತುಂಬಿದವನು(ವ್ಯಾಪ್ತ). ಆತ ಎಲ್ಲದರ ಹೊರಗೂ ಮತ್ತು ಎಲ್ಲದರ ಒಳಗೂ(ಪ್ರವೇಶ) ತುಂಬಿರುವುದರಿಂದ ಆತ ವಿಷ್ಣುಃ. ಇದನ್ನು ನಾರಾಯಣ ಸೂಕ್ತದಲ್ಲಿ ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ ಎಂದಿದ್ದಾರೆ. ಇನ್ನು ‘ವೇತೀತಿ-ವಿಷ್ಣುಃ’.

  ಎಲ್ಲರು ಯಾರನ್ನು ಆಶ್ರಯಿಸಿಕೊಂಡಿದ್ದಾರೋ ಅವನು ವಿಷ್ಣು-ಸರ್ವಾಶ್ರಯಧಾತ ಭಗವಂತ. ‘ವೇತಿ-ಪ್ರಜನಯತಿ’-ಯಾರು ಇಡೀ ಪ್ರಪಂಚವನ್ನು ಸೃಷ್ಟಿ ಮಾಡಿದನೋ ಅವನು ವಿಷ್ಣು. ‘ವೇತಿ-ಗತಿ’- ಎಲ್ಲರನ್ನು ರಕ್ಷಣೆ ಮಾಡುವ ಸರ್ವ ರಕ್ಷಕ ಭಗವಂತ ವಿಷ್ಣು. ‘ವೇತಿ-ಕಾಂತಿ(ಇಚ್ಛೆ)’-ಇಡೀ ಜಗತ್ತನ್ನು ರಕ್ಷಿಸಿ ಉದ್ಧಾರ ಮಾಡಬೇಕು ಎನ್ನುವ ಸತ್ಯ ಸಂಕಲ್ಪ ಇರುವವ ವಿಷ್ಣು. ‘ವೇತಿ-ಕಾದನೇಶು’-ಸಮಸ್ತ ಜಗತ್ತನ್ನು ಯಾರು ಸಂಹಾರ ಮಾಡುತ್ತಾನೋ ಅವನು ವಿಷ್ಣು. ‘ವೇತಿ-ಗಚ್ಛತಿ’- ಮೂರು ಹೆಜ್ಜೆಯಿಂದ ತ್ರಿವಿಕ್ರಮನಾಗಿ ಮೂರು ಲೋಕವನ್ನು ಯಾರು ವ್ಯಾಪಿಸುತ್ತಾನೋ ಅವನು ವಿಷ್ಣು.

 ಸಮಷ್ಟಿಯಾಗಿ ವಿಷ್ಣು ಎಂದರೆ ‘ದೇವರು’ ಎನ್ನುವ ಅರ್ಥವನ್ನು ಕೊಡುತ್ತದೆ. ಇವು ನಾವು ವಿಷ್ಣುಃ ಶಬ್ದದಿಂದ ಅನುಸಂಧಾನ ಮಾಡಬೇಕಾದ ಕೆಲವು ಅರ್ಥಗಳು. ಇದನ್ನು ಮಹಾಭಾರತದಲ್ಲಿ ಒಂದು ಕಡೆ ನಾಮಗಳ ನಿರ್ವಚನದಲ್ಲಿ ಹೇಳಿದ್ದಾರೆ. ಈ ನಿರ್ವಚನ ಭಾರತದಲ್ಲಿ ಅರ್ಜುನನಿಗೆ ಕೃಷ್ಣನೇ ಹೇಳಿದ ನಿರ್ವಚನ. ಒಟ್ಟಿನಲ್ಲಿ “ಎಲ್ಲರಿಗೂ ಆಶ್ರಯನಾದ, ಎಲ್ಲರ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ಎಲ್ಲದರ ಒಳಗೂ-ಹೊರಗೂ ತುಂಬಿರುವ, ಮೂರು ಹೆಜ್ಜೆಯಿಂದ ಮೂರು ಲೋಕವನ್ನು ಅಳೆದ ವಿಷ್ಣು ನಾನು” ಎಂದು ತನ್ನ ಸ್ವರೂಪ ವಿಭೂತಿಯನ್ನು ಕೃಷ್ಣ ವಿವರಿಸಿದ್ದಾನೆ.

ಸ್ವರೂಪ ವಿಭೂತಿಯನ್ನು ಹೇಳಿದ ಕೃಷ್ಣ, ನಂತರ ವಿಷ್ಣುವಿನ ಉಪಾಸನೆಗೆ ಅತ್ಯಂತ ಹಿರಿದಾದ ಪ್ರತೀಕ ‘ಸೂರ್ಯ’ನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಾವು ಗಾಯತ್ರಿ ಪ್ರತಿಪಾದ್ಯನಾದ ವಿಷ್ಣುವನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತೇವೆ. ಇದು ಸೌರಶಕ್ತಿಯಲ್ಲಿ ಭಗವಂತನ ಉಪಾಸನೆ. ಇದು ಭಗವಂತನ ವಿಭೂತಿಯ ಎರಡನೇ ಮಜಲು. ಅದಕ್ಕಾಗಿ ವಿಷ್ಣುವಿನ ನಂತರ ‘ರವಿ’ಯನ್ನು ಕೃಷ್ಣ ಪ್ರಸ್ತಾಪಿಸುತ್ತಾನೆ. ಸೂರ್ಯ ನಮ್ಮ ಕಣ್ಣಿಗೆ ಕಾಣುವ ಜ್ಯೋತಿಗಳಲ್ಲೇ ಅತ್ಯಂತ ದೊಡ್ಡ ಜ್ಯೋತಿ.  ಸೂರ್ಯನಲ್ಲಿ ‘ರವಿ’ ನಾಮಕನಾಗಿ ತುಂಬಿರುವ ಭಗವಂತ ಸೌರಶಕ್ತಿಯಾಗಿ ವಿಶ್ವದಲ್ಲಿ ವ್ಯಾಪಿಸಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ರವಿಃ’. ರವ+ಇ-ರವದಿಂದ ತಿಳಿಯಲ್ಪಡುವವನು-ರವಿ. ‘ರವ’ ಎಂದರೆ ನಾದ. ಯಾರು ಗಾಯತ್ರಿ ‘ರವ’ದಿಂದ ಜ್ಞೇಯನೊ ಅವನು ರವಿಃ. ಬೆಳಕುಗಳಿಗೆ ಬೆಳಕು ಕೊಡುವ ಭಗವಂತ, ಗಾಯತ್ರಿ ಪ್ರತಿಪಾದ್ಯನಾಗಿ, ‘ರವಿ’ ನಾಮಕನಾಗಿ ಸೂರ್ಯನಲ್ಲಿ, ಸೂರ್ಯ ಕಿರಣದಲ್ಲಿ  ಸನ್ನಿಹಿತನಾಗಿದ್ದಾನೆ.

ಕೃಷ್ಣ ಹೇಳುವ ಮುಂದಿನ ವಿಭೂತಿ ಆಕಾಶದಲ್ಲಿ ವಾತಾವರಣದ ಬೇರೆಬೇರೆ ಪದರನ್ನು ನಿಯಮಿಸುವ ಮರುತ್ತುಗಳ ಸಂತತಿಯ ಮರೀಚಿ. ಮೂಲಭೂತವಾಗಿ ಮರುತ್ತುಗಳು ನಲವತ್ತೊಂಬತ್ತು ಮಂದಿ. ಇವರಲ್ಲಿ ಹತ್ತು ಮಂದಿ ನಮ್ಮ ಪಿಂಡಾಂಡ ನಿಯಮನ ಮಾಡುವವರು. ಈ ಮರುತ್ತುಗಳ ನಿಯಮನ ಮಾಡುವವ ಪ್ರವಹವಾಯು. ಪುರಾಣಗಳಲ್ಲಿ ಎಲ್ಲಿಯೂ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಮರೀಚಿ ಎನ್ನುವ ಹೆಸರು ಬಂದಿಲ್ಲ. ಆದ್ದರಿಂದ ಇಲ್ಲಿ ಮರೀಚಿ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಒಬ್ಬ ಎಂದು ಹೇಳುವುದು ಕಷ್ಟ. ಆದರೆ ಆತ ಪ್ರವಹವಾಯುವಿನ ಪುತ್ರ ಎನ್ನುವುದು ಸ್ಪಷ್ಟ. ಮಧ್ವಾಚಾರ್ಯರ ಐತರೇಯ ಉಪನಿಷತ್ತಿನ ಭಾಷ್ಯ ಮತ್ತು ಗೀತಾ ತಾತ್ಪರ್ಯವನ್ನು ಸಮನ್ವಯ ಮಾಡಿ ನೋಡಿದರೆ-ಮರೀಚಿ ಹದಿನೆಂಟನೇ ಕಕ್ಷೆಯಲ್ಲಿರುವ ಭೂತವಾಯು ದೇವತೆ. 

ಆದ್ದರಿಂದ ಈತ ಆಕಾಶ ಅಭಿಮಾನಿ ದೇವತೆ(ಗಣಪತಿ)ಯ ಸಮಾನಸ್ಕಂದ. ಭಗವಂತ ಮರೀಚಿನಾಮಕನಾಗಿ ಭೂತವಾಯುವಿನ ಅಭಿಮಾನಿ ದೇವತೆಯೊಳಗೆ ವಿಭೂತಿಯಾಗಿ ನಿಂತಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ಮರೀಚಿ’. ಮರ ಎಂದರೆ ನೀರು. ಮರಿ ಎಂದರೆ ನೀರು ತುಂಬಿರುವ ಮೋಡ. ಈ ಮೊಡವನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಸೇರಿಸುವ ವಾಯುವಿನಲ್ಲಿ ಸನ್ನಿಹಿತನಾಗಿ, ಮಳೆ ಬರಿಸುವ ಶಕ್ತಿಯನ್ನು  ಮರೀಚಿಗೆ ಕೊಟ್ಟು, ಅವನಲ್ಲಿ ವಿಭೂತಿ ರೂಪದಲ್ಲಿ ಕೂತ ಭಗವಂತ ‘ಮರೀಚಿ’.

ಆಕಾಶದಲ್ಲಿ ಸೂರ್ಯ ಮತ್ತು ವಾಯುವಿನಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ನಕ್ಷತ್ರಗಳ ರಾಜ ಚಂದ್ರನಲ್ಲಿ ತನ್ನ ವಿಭೂತಿಯನ್ನು ಹೇಳುತ್ತಾನೆ.  ಇದು ವಿಜಾತಿಯ ಸ್ರಷ್ಟಪ್ರಭ ವಿಭೂತಿ. ನಕ್ಷತ್ರಗಳ ಒಡೆಯ ಚಂದ್ರ. ಚಂದ್ರನಲ್ಲಿ ಎಲ್ಲ ನಕ್ಷತ್ರಗಳನ್ನು ನಿಯಮಿಸುವ ಶಕ್ತಿಯಾಗಿ ‘ಶಶಿ’ ಶಬ್ದವಾಚ್ಯ ಭಗವಂತ ಕೂತು ಅವನಿಗೆ ಆ ಶಕ್ತಿಯನ್ನು ಕೊಟ್ಟ.
ಇಲ್ಲಿ ಬಂದಿರುವ ಭಗವಂತನ ನಾಮ ‘ಶಶಿಃ’. ಶಶ ಉಳ್ಳವನು ಶಶಿ. ‘ಶ’ ಎಂದರೆ ಆನಂದ. ಶಶ ಎಂದರೆ ಆನಂದದಆನಂದ–ಪರಮಾನಂದ. ಇಂತಹ ಪರಮಾನಂದ ಉಳ್ಳ ಭಗವಂತ ಆನಂದ ಮೂರ್ತಿಯಾಗಿ ಚಂದ್ರನಲ್ಲಿ ಕೂತ. ಈ ಕಾರಣದಿಂದ ನಮಗೆ ಬೆಳದಿಂಗಳು ಆನಂದವನ್ನು ಕೊಡುತ್ತದೆ.   

ಅಧ್ಯಾಯ - 10: ಶ್ಲೋಕ  22

ವೇದಾನಾಂ ಸಾಮವೇದೋSಸ್ಮಿ ದೇವಾನಾಮಸ್ಮಿ ವಾಸವಃ ।

ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ  ॥೨೨॥

ವೇದಾನಾಮ್  ಸಾಮ ವೇದಃ ಅಸ್ಮಿ ದೇವಾನಾಮ್ ಅಸ್ಮಿ ವಾಸವಃ 
ಇಂದ್ರಿಯಾಣಾಮ್  ಮನಃ ಚ ಅಸ್ಮಿ ಭೂತಾನಾಮ್ ಅಸ್ಮಿ ಚೇತನಾ –ವೇದಗಳಲ್ಲಿ ಸಾಮವೇದ ನಾನು. [ಸಾಮ= ಎಲ್ಲೆಡೆಯು ಸಮನಾಗಿದ್ದು, ವೇದ= ಜ್ಞಾನರೂಪನಾದ್ದರಿಂದ ‘ಸಾಮವೇದ’ ಎನ್ನಿಸಿ ಸಾಮವೇದದಲ್ಲಿದ್ದೇನೆ.] ದೇವತೆಗಳಲ್ಲಿ ಇಂದ್ರ ನಾನು. [ವಾಸ= ಎಲ್ಲ ನೆಲೆಗಳಲ್ಲು, ವ=ಇರುವವನಾಗಿ- ‘ವಾಸವ’ ಎನ್ನಿಸಿ ದೇವೇಂದ್ರನಲ್ಲಿದ್ದೇನೆ.] ಇಂದ್ರಿಯಗಳಲ್ಲಿ ಮನಸ್ಸು ನಾನು. [ಅರಿವು ನೀಡುವುದರಿಂದ ‘ಮನಸ್’ ಎನ್ನಿಸಿ ಮನಸ್ಸಿನಲ್ಲಿದ್ದೇನೆ.] ಜೀವಿಗಳ ಚೈತನ್ಯ ನಾನು. [ಚೇತಸ್ =ಎಲ್ಲ ಜೀವಿಗಳ ನೆನಪಿನ ಗಂಟನ್ನು, ನಾ=ಬಿಡಿಸುವುದರಿಂದ ‘ಚೇತನಾ’ ಎನ್ನಿಸಿ ಚೇತನಾಶಕ್ತಿಯಲ್ಲಿದ್ದೇನೆ.]      
ಆಕಾಶದಲ್ಲಿ-ಸೂರ್ಯ, ಚಂದ್ರ, ನಕ್ಷತ್ರ, ಗಾಳಿಯಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಆಕಾಶದ ವಿಶೇಷ ಗುಣವಾದ ಶಬ್ದದ ಬಗ್ಗೆ ಹೇಳುತ್ತಾನೆ. 

ಶಬ್ದದ ವಿಭೂತಿ-ವೇದ. ವೇದದಲ್ಲಿ ವಿಶಿಷ್ಟ-ಸಾಮವೇದ. ವೇದಗಳೆಲ್ಲವೂ ಅಪೂರ್ವವಾಗಿದ್ದರೂ ಕೂಡಾ, ಸಾಮವನ್ನು ಏಕೆ ವಿಶೇಷವಾಗಿ ಹೇಳಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ವೇದದಲ್ಲಿ ತಾರತಮ್ಯವಿಲ್ಲ. ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯವಿದೆ. ಸಾಮವೇದದ ಅಭಿಮಾನಿ ಪ್ರಾಣದೇವರು. ಶಾಸ್ತ್ರಕಾರರು ಹೇಳುವಂತೆ ಸಾಮಗಾನವನ್ನು ಅತ್ಯಂತ ಮಧುರವಾಗಿ ಹಾಡುವವರು ಪ್ರಾಣದೇವರು. ಪ್ರಾಣದೇವರ ಹಾಡು 'ಸಾಮಗಾನ' ಭಗವಂತನಿಗೆ ಅತೀ ಇಷ್ಟ. ಸಾಮವೇದದ ವೈಶಿಷ್ಟ್ಯ ‘ನಾದ’. 

ಒಂದು ಶಬ್ದವನ್ನು ಹೇಗೆ ಒಡೆದರೂ, ಅದನ್ನು ಹೇಗೆ ಪದಪಾಠ ಮಾಡಿದರೂ, ಅದರಲ್ಲಿ ಯಾವ ನಾದ ತುಂಬಿದರೂ, ಅದು ಭಗವಂತನ ನಾಮದೇಯವಾಗುತ್ತದೆ ಎನ್ನುವ ಪ್ರಯೋಗ ಸಾಮವೇದ. ಋಗ್ವೇದ ಮತ್ತು ಯಜುರ್ವೇದದಲ್ಲಿ ಮಂತ್ರಗಳ ಹಾಗು ಶಬ್ದಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದದಲ್ಲಿ ಶಬ್ದದ ಜೊತೆಗೆ ನಾದವನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ಅಪೂರ್ವ ಗುಣಧರ್ಮವಿದೆ(Exclusive quality). ಶಬ್ದಗಳ ಹಿಂದಿನ ನಾದದಿಂದ ಭಗವಂತನನ್ನು ಕಾಣುವ ನಾದೋಪಾಸನೆ ಇರುವ ವೇದ ಸಾಮವೇದವಾದ್ದರಿಂದ-ಭಗವಂತ ಸಾಮದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ.

 ಆದ್ದರಿಂದ 'ಸಾಮ' ಭಗವಂತನ ಅನ್ವರ್ಥ ನಾಮ.  ಎಲ್ಲ ಶಬ್ದಗಳು ಭಗವದ್ ಪರ ಎನ್ನುವುದನ್ನು ಋಗ್ವೇದ ತೋರಿಸಿದರೆ, ಶಬ್ದವಷ್ಟೇ ಅಲ್ಲ, ಎಲ್ಲ ಘೋಷಗಳೂ ಭಗವಂತನನ್ನು ಹೇಳುತ್ತವೆ ಎನ್ನುವುದನ್ನು ಸಾಮವೇದ ತೋರಿಸುತ್ತದೆ.     
ಭಗವಂತ ‘ಸಾಮಃ’  ಮತ್ತು ಆತ 'ವೇದಃ'. ಇಲ್ಲಿ ‘ಸಾಮಃ’ ಎಂದರೆ ಎಲ್ಲೆಡೆಯು ಸಮನಾಗಿರುವವ ಎಂದರ್ಥ. ‘ವೇದಃ’ ಎಂದರೆ ಜ್ಞಾನ ರೂಪ. ಭಗವಂತ ನಾದವಾಗಿ ಸಾಮವೇದದಲ್ಲಿ ತುಂಬಿ ಅದನ್ನು ವಿಭೂತಿಯಾಗಿ ಮಾಡಿದ.
ವೇದದ ನಂತರ ವೇದಪ್ರತಿಪಾದ್ಯ ದೇವತೆಗಳು. ದೇವತೆಗಳಲ್ಲಿ ಮುಖ್ಯವಾಗಿ ತತ್ವಾಭಿಮಾನಿ ದೇವತೆಗಳು. ಭಗವಂತನ ಅಧಿಷ್ಠಾನವಾಗಿ ಇಂದ್ರಿಯಯಗಳನ್ನು ನಿಯಮಿಸುವ ದೇವತೆಗಳಲ್ಲಿ ಮುಖ್ಯನಾದವ ‘ವಾಸವ’(ಇಂದ್ರ). 

ಈತ ಬಾಹ್ಯೇಂದ್ರಿಯಾಭಿಮಾನಿ ದೇವತೆಗಳಲ್ಲಿ ಶ್ರೇಷ್ಠ. ಈತ ಐದು ಜ್ಞಾನೇಂದ್ರಿಯ(ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ) ಮತ್ತು ಐದು ಕರ್ಮೇಂದ್ರಿಯ(ಕೈ, ಕಾಲು, ಬಾಯಿ, ಪಾಯು, ಉಪಸ್ಥ)ಗಳಲ್ಲಿ ಅತ್ಯಂತ ವಿಶಿಷ್ಟವಾದ ಕೈ(ಹಸ್ತ)ಯ ಅಭಿಮಾನಿ ದೇವತೆ. ಇತರ ಎಲ್ಲಾ ಇಂದ್ರಿಯಗಳು ಬೇರೆ ಪ್ರಾಣಿಗಳಿಗೂ ಇದೆ. ಆದರೆ ಕುಸುರಿ ಕೆಲಸ, ನಾಟ್ಯಭಂಗಿ, ಶಿಲ್ಪ ಇತ್ಯಾದಿ ಅತ್ಯದ್ಭುತ ಹಸ್ತಕೌಶಲ ಭಗವಂತ  ಕೇವಲ ಮಾನವರಿಗೆ ಮಾತ್ರ ಕೊಟ್ಟಿದ್ದಾನೆ. ಮಹಾಭಾರತದಲ್ಲಿ ನಮ್ಮ ಕೈಯ ವಿಶಿಷ್ಟತೆಯನ್ನು ಹೇಳುವ ಒಂದು ಕಥೆ ಇದೆ. ಒಬ್ಬ ನಿರುದ್ಯೋಗಿ ವಿದ್ವಾಂಸ ತನ್ನ ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿ ನಿಂತಿರುವಾಗ, ಒಂದು ನರಿ ಆತನಲ್ಲಿ ಹೇಳುತ್ತದೆ: “ಅಲ್ಲಯ್ಯ, ನಿನಗೆ ದೇವರು ದುಡಿಯಲು ಎರಡು ಕೈ ಕೊಟ್ಟಿದ್ದಾನೆ. ಆದರೆ ನಮಗೆ ಸಿಕ್ಕಿದ ಆಹಾರವನ್ನು ತಿನ್ನಲು ಕೂಡ  ಕೈ ಇಲ್ಲ. 

ಮೈಯಲ್ಲಿ ಕುಳಿತು ರಕ್ತ ಹೀರುವ ನೊಣವನ್ನು ಓಡಿಸಲು ಕೈ ಇಲ್ಲ. ಆದರೂ ನಾವು ಬದುಕುತ್ತೇವೆ.  ನಿಮಗೆ ಇಂತಹ ಅಮೂಲ್ಯ ಕೈ ಇದ್ದರೂ ನೀವು ಸಾಯಲು ಮುಂದಾಗುತ್ತಿದ್ದೀರಲ್ಲ-ನೀವೆಂಥಾ ಬುದ್ಧಿಗೇಡಿಗಳು” ಎಂದು. ಈ ಮಾತನ್ನು ಕೇಳಿ ಆ ವಿದ್ವಾಂಸ ಮರಳಿ ಬರುತ್ತಾನೆ. ಈ ಕಥೆಯಲ್ಲಿ ಕೈಯ ಮಹತ್ವವನ್ನು ತಿಳಿ ಹೇಳಿದ್ದಾರೆ. ಕೈಯ ಅಭಿಮಾನಿಯಾದ ಆ ‘ವಾಸವ’ನಲ್ಲಿ ಭಗವಂತ ವಾಸ ಮಾಡಿ, ಇತರ ಎಲ್ಲಾ ತತ್ವಾಭಿಮಾನಿ ದೇವತೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ತುಂಬಿದ. ಇಂತಹ ‘ವಾಸವ’ ನಾಮಕ ಭಗವಂತ ವಿಭೂತಿಯಾಗಿ ಇಂದ್ರನಲ್ಲಿ ತುಂಬಿರುವುದರಿಂದ ಇಂದ್ರನನ್ನು ‘ವಾಸವ’ ಎಂದು ಕರೆಯುತ್ತಾರೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ವಾಸವಃ’. ವಾಸವ ಎಂದರೆ ವಸುಗಳ ಸಮುದಾಯ. 

ವಸುಗಳೆಂದರೆ-"ದೇವತೆಗಳ ಸಮುದಾಯ". ಬ್ರಹ್ಮಾಂಡದಲ್ಲಿದ್ದು-ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು-ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಎಲ್ಲ ನೆಲೆಗಳಲ್ಲು, ಇರುವವನಾಗಿ ಭಗವಂತ ‘ವಾಸವಃ’. ಬಾಹ್ಯೇಂದ್ರಿಯದ ನಂತರ ಕೃಷ್ಣ ನಮ್ಮ ಅಂತರಂಗ ಪ್ರಪಂಚದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮನುಷ್ಯನ ಎಲ್ಲ ಕಾರುಬಾರಿಗೆ ಕಾರಣ ಮನಸ್ಸು. ಮನಸ್ಸಿಲ್ಲದಿದ್ದರೆ ಎಲ್ಲವೂ ಶೂನ್ಯ. ಇದು ಇಂದ್ರಿಯಗಳ ಚಟುವಟಿಕೆಗಳಿಗೆ ಮೂಲ ಪ್ರೇರಣೆ. ಹೊರಗಿನ ಎಲ್ಲ ವಸ್ತುವನ್ನು ಒಳಗಿನ ಆತ್ಮಕ್ಕೆ ಮುಟ್ಟಿಸುವ ಮಾಧ್ಯಮ ‘ಮನಸ್ಸು’. ಇಂದ್ರಿಯ ಇರುವುದು ಸಾರ್ಥಕವಾಗುವುದು ಮನಸ್ಸಿನ ಮೂಲಕ. ಶಾಸ್ತ್ರ ಓದಿದಾಗ ನಮಗೆ ವಿಷಯ ಹೊಳೆಯುವುದು ಮನಸ್ಸಿನ ಮೂಲಕ. ಭಗವಂತ ಮನನಕ್ಕೆ ಕಾರಣನಾಗಿ ‘ಮನಃ’ ಶಬ್ದ ವಾಚ್ಯನಾಗಿ ನಮ್ಮಲ್ಲಿ ಕೂತಿರುವುದರಿಂದ ನಮಗೆ ಈ ಶಕ್ತಿ ಬಂತು. ಮನುತೇ ಇತಿ ಮನಃ. ಜ್ಞಾನಸ್ವರೂಪನಾದವ, ಎಲ್ಲವನ್ನು ತಿಳಿಯುವವ, ಎಲ್ಲವನ್ನು ಬಲ್ಲವನು ‘ಮನಸ್’ ಶಬ್ದ ವಾಚ್ಯ  ಭಗವಂತ.

ಮನಸ್ಸಿನ ನಂತರ, ಮನಸ್ಸಿನ  ಮೂಲಕ ಬರುವ ವಿಷಯವನ್ನು ಗ್ರಹಣ ಮಾಡುವ ಶಕ್ತಿ- ಅರಿವು(Awareness). ಭಗವಂತ ನಮ್ಮೊಳಗಿದ್ದು,  ಮನಸ್ಸು ಕಂಡದ್ದನ್ನು ಅರಿವಾಗಿ-ವಿಷಯವನ್ನು ಸ್ವೀಕರಿಸುವ ಗ್ರಹಣ ಶಕ್ತಿಯಾಗಿ ಕೂತ. ಇದರಿಂದ ಪ್ರಪಂಚವನ್ನು ಗ್ರಹಣ ಮಾಡುವ ಶಕ್ತಿ ಜೀವಕ್ಕೆ ಬಂತು. ಇಡೀ ವಿಶ್ವವನ್ನು ತನ್ನ ಅರಿವಿನಿಂದ ಗ್ರಹಣ ಮಾಡಿ, ವ್ಯಾಪಿಸುವ ವಿಸ್ಮಯ ಭಗವಂತ ‘ಚೇತನಃ’. ‘ಚೇತಸ್’ ಎಂದರೆ ನಮ್ಮ ಸುಪ್ತಪ್ರಜ್ಞೆ. ನಮ್ಮ ಪ್ರತಿಯೊಂದು ಅನುಭವ ನಮ್ಮ ಸುಪ್ತಪ್ರಜ್ಞೆಯಲ್ಲಿ ಸಂಗ್ರಹವಾಗಿರುತ್ತದೆ. ಚಿತ್ತಕ್ಕೆ ಎಲ್ಲವನ್ನು ಗ್ರಹಿಸುವ ಶಕ್ತಿ ಕೊಟ್ಟವ ‘ಚೇತನಾ’ ನಾಮಕ  ಭಗವಂತ. ಇದು ಭಗವಂತನ ವಿಭೂತಿ.

ಅಧ್ಯಾಯ - 10: ಶ್ಲೋಕ  23

ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್       ।

ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್     ॥೨೩॥

ರುದ್ರಾಣಾಮ್  ಶಂಕರಃ ಚ ಅಸ್ಮಿ ವಿತ್ತ ಈಶಃ ಯಕ್ಷರಕ್ಷಸಾಮ್ 
ವಸೂನಾಮ್ ಪಾವಕಃ ಚ ಅಸ್ಮಿ ಮೇರುಃ ಶಿಖರಿಣಾಮ್ ಅಹಮ್

ರುದ್ರರಲ್ಲಿ [ಹನ್ನೊಂದು ಮಂದಿ] ಪ್ರಧಾನ ರುದ್ರ ನಾನು. [ಶಂ=ಸುಖವನ್ನು, ಕರ=ಕರುಣಿಸುವುದರಿಂದ ‘ಶಂಕರ’ ಎನ್ನಿಸಿ ಶಂಕರನಲ್ಲಿದ್ದೇನೆ.] ಯಕ್ಷ-ರಾಕ್ಷಸರ ಪಡೆಯ ಒಡೆಯ ಕುಬೇರ [ವಿತ್ತ=ಸಿರಿಗೆ, ಈಶ=ಒಡೆಯನಾದ್ದರಿಂದ ‘ವಿತ್ತೇಶ’ ಎನ್ನಿಸಿ ಕುಬೇರನಲ್ಲಿದ್ದು ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನಿತ್ತವನು] ನಾನು. [ಎಂಟು ಮಂದಿ] ವಸುಗಳಲ್ಲಿ ಅಗ್ನಿದೇವ ನಾನು. [ಪಾವನಗೊಳಿಸುವುದರಿಂದ ‘ಪಾವಕ’ ಎನ್ನಿಸಿ ಅಗ್ನಿಯಲ್ಲಿದ್ದೇನೆ.] ಚೆಲುಕೋಡಿನ ಬೆಟ್ಟಗಳಲ್ಲಿ ಮೇರು ನಾನು. [ಈರು=ಬೇರೊಬ್ಬ ಪ್ರೇರಕ, ಮಾ=ಇರದ್ದರಿಂದ ‘ಮೇರು’ ಎನ್ನಿಸಿ ಮೇರು ಗಿರಿಯಲ್ಲಿದ್ದೇನೆ.]

ಮನಸ್ಸಿನಲ್ಲಿನ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಮನಸ್ಸಿನ ಅಭಿಮಾನಿಯಾದ ಶಿವನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ: “ರುದ್ರರಲ್ಲಿ ಶಂಕರ ನಾನು” ಎಂದು. ರುದ್ರರು ಹನ್ನೊಂದು ಮಂದಿ. ರೈವತ, ಓಜ, ಭವ, ಭೀಮ, ವಾಮದೇವ, ಉಗ್ರ, ವೃಷಾಕಪಿ, ಅಜೈಕಪಾತ್, ಅಹಿರ್ಬುದ್ನಿ, ವಿರೂಪಾಕ್ಷ, ಮತ್ತು ಗಣಪ್ರಧಾನನಾದ ಮಹಾದೇವ. (ಈ ಏಕಾದಶ ರುದ್ರರಿಗೆ ಒಬ್ಬೊಬ್ಬರಿಗೂ ಅನೇಕ ಹೆಸರುಗಳುಂಟು. ಬೇರೆಬೇರೆ ಕಡೆ ಬೇರೆಬೇರೆ ಹೆಸರು ಉಲ್ಲೇಖ ಮಾಡಿದ್ದಾರೆ). ನಮ್ಮ ಮನಸ್ಸನ್ನು ನಿಯಂತ್ರಿಸುವ ‘ರುದ್ರ’-ಮಹಾದೇವ ಅಥವಾ ಶಿವ. ಆತನಿಗೆ ‘ಶಂಕರ’  ಎಂದು ಹೆಸರು. ರುದ್ರ ಎಂದರೆ ರೋದಯತಿ ಇತಿ ರುದ್ರಃ-ದುಃಖ ಕೊಡುವವನು ಎನ್ನುವ ಒಂದು ಅರ್ಥ. ಭಗವಂತ ದುಃಖ ಕೊಡುವುದು ಕೇವಲ ದುಷ್ಟರಿಗೆ. ಇನ್ನೊಂದು ಅರ್ಥದಲ್ಲಿ ನೋಡಿದರೆ- ರುಜಂ ದ್ರಾವಯತಿ ಇತಿ ರುದ್ರಃ.  ಅಂದರೆ ನಮ್ಮಲ್ಲಿರುವ ರೋಗವನ್ನು ಪರಿಹಾರ ಮಾಡಿ ಸುಖಕೊಡುವವನು. ಮೂಲತಃ ರೋಗ ಮಾನಸಿಕ. ನಮ್ಮ ಮನಸ್ಸು ದೃಢವಾಗಿದ್ದರೆ ಕಾಯಿಲೆ ಬರುವುದಿಲ್ಲ. ಒಂದು ವೇಳೆ ಕಾಯಿಲೆ ಬಂದರೆ ಅದನ್ನು ಎದುರಿಸಬಲ್ಲೆ ಎನ್ನುವ ದೃಢಮನಸ್ಸು ಇದ್ದರೆ-ಮನಸ್ಸೇ ಆ ರೋಗವನ್ನು ಗುಣಪಡಿಸಬಲ್ಲದು.

‘ಶಂಕರ’ ಎಂದರೆ ಸುಖವನ್ನು, ಸಂತೋಷವನ್ನು  ಕೊಡುವವ. ಆರೋಗ್ಯವಂತ ದೇಹವೇ ಜೀವನದಲ್ಲಿ ಬಹಳ ದೊಡ್ಡ ಸುಖ. ಯಾವುದೇ ಪುಣ್ಯ ಕರ್ಮ ಸಾಧನೆ ಮಾಡಲು  ಆರೋಗ್ಯವಂತ ದೇಹ ಬೇಕು. ‘ರುದ್ರ’ ಶರೀರಪುರುಷ.  ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಕಾರಣ. ನಮ್ಮ ಮನಸ್ಸಿನಲ್ಲಿ ಕೂತು ಮಾನಸಿಕ ತುಮುಲವನ್ನು ಹೋಗಲಾಡಿಸಿ, ಆರೋಗ್ಯವಂತ ಶರೀರ ಕೊಟ್ಟು, ಆನಂದ ಕೊಡುವವ ರುದ್ರ. ಋಗ್ವೇದದ ಶಿವಸ್ತುತಿಯಲ್ಲಿ  ಶಿವನನ್ನು “ಭಿಶಕ್ತಮಾಂ  ತ್ವ ಭಿಶಜಮ್” ಎಂದು ಸ್ತುತಿಸಿದ್ದಾರೆ. ಅಂದರೆ “ನೀನು ವೈದ್ಯರ ವೈದ್ಯ” ಎಂದರ್ಥ. ಈ ಕಾರಣಕ್ಕಾಗಿ ಶಿವನನ್ನು ‘ವೈದ್ಯನಾಥ’ ಎಂದೂ ಕರೆಯುತ್ತಾರೆ.

ರುದ್ರನನ್ನು ಮಹಾದೇವ ಎಂದು ಕರೆಯಲು ಅನೇಕ ಕಾರಣವಿದೆ. ಇಲ್ಲಿ ‘ದೇವ’ ಅಂದರೆ ಇಂದ್ರಿಯ.(ದೇವತೀತಿ ದೇವಂ ಇಂದ್ರಿಯಂ). ಶಿವ ಇಂದ್ರಿಯಾಭಿಮಾನಿ ದೇವತೆಗಳಲ್ಲಿ  ಎಲ್ಲರಿಗಿಂತ ದೊಡ್ಡವ. ದೇವತಾ ತಾರತಮ್ಯದಲ್ಲಿ ನೋಡಿದರೆ-ಹನ್ನೊಂದು ಮಂದಿ ರುದ್ರರಲ್ಲಿ ಹತ್ತುಮಂದಿ ರುದ್ರರು ಹದಿನೆಂಟನೇ ಕಕ್ಷೆಯಲ್ಲಿದ್ದರೆ, ಶಿವ ಅದಕ್ಕಿಂತ ಬಹಳ ಎತ್ತರದಲ್ಲಿ ಐದನೇ ಕಕ್ಷೆಯಲ್ಲಿದ್ದಾನೆ. ಶಿವ ಭಗವಂತನ ಸಂಹಾರ ಕರ್ಮದಲ್ಲಿ ವಾಯುದೇವರೊಂದಿಗೆ ಅಂಗಭೂತನಾಗಿ ಸಹಾಯಕಾರಿಯಾಗಿರುವ ಬಹಳ ದೊಡ್ಡ ಶಕ್ತಿ. ಭಗವಂತ ‘ಶಂಕರ’ ನಾಮಕನಾಗಿ ಶಿವನಲ್ಲಿ ನಿಂತಿದ್ದಾನೆ. ನಮ್ಮನ್ನು ಭಗವಂತನ ಉಪಾಸನೆಯ ದಾರಿಯಲ್ಲಿ ಕರೆದೊಯ್ದು, ಭಗವತ್ ಸಾಕ್ಷಾತ್ಕಾರಕ್ಕೆ ಮನಸ್ಸನ್ನು ಅಣಿಮಾಡುವವರೇ ರುದ್ರದೇವರು. ಆದ್ದರಿಂದ ಇದು ಭಗವಂತನ ಬಹಳ ದೊಡ್ಡ ವಿಭೂತಿ.

ಇಲ್ಲಿ ಬಂದಿರುವ ಭಗವಂತನ ನಾಮ ‘ಶಂಕರಃ’. ‘ಶಂ’ ಎಂದರೆ ಸುಖ, ‘ಕರ’ ಎಂದರೆ ಕರುಣಿಸುವವ. ಸ್ವಯಂ ಆನಂದ ಸ್ವರೂಪನಾಗಿದ್ದು, ದುಃಖಮಯವಾದ ಸಂಸಾರವನ್ನು ಖಂಡಿಸಿ- ನಮಗೆ ಮುಕ್ತಿ ಕೊಡುವ ಭಗವಂತ ‘ಶಂಕರಃ’.

ನಮ್ಮ ಅಂತರಂಗದ ಸಂಪತ್ತಿನ ಅಭಿಮಾನಿಯಾದ ಶಿವನ ಬಗ್ಗೆ ಹೇಳಿದ ಕೃಷ್ಣ, ಮುಂದೆ ನಮಗೆ  ಬಾಹ್ಯವಿತ್ತವನ್ನು ಕೊಡುವ ಕುಬೇರನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಮ್ಮ ದೇಹದ ಅಭಿಮಾನಿ ಮತ್ತು ಬಾಹ್ಯವಿತ್ತದ ಅಭಿಮಾನಿ ಕುಬೇರ. ಆತನ ಆಡಳಿತದಲ್ಲಿರುವವರು ಯಕ್ಷರು ಮತ್ತು ರಾಕ್ಷಸರು. ಯಕ್ಷರು ಎಂದರೆ ನರ ಮಾಂಸವನ್ನು ನಿರ್ದಯವಾಗಿ ಭಕ್ಷಣೆ ಮಾಡುವವರು. ರಾಕ್ಷಸರು ಯಕ್ಷರಿಗಿಂತ ಉತ್ತಮರು. ಆದರೆ ಇವರೂ ಕ್ರೂರಿಗಳು. ಇವರಿಂದ ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು.

ಇಲ್ಲಿ ಬಂದಿರುವ ಭಗವಂತನ ನಾಮ ‘ವಿತ್ತೇಶಃ’. ವಿತ್ತ ಎಂದರೆ ಸಿರಿ, ಈಶ ಎಂದರೆ ಒಡೆಯ. ಭಗವಂತ ‘ವಿತ್ತೇಶ’ ಎನ್ನಿಸಿ ಕುಬೇರನಲ್ಲಿದ್ದು, ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನು ಕೊಟ್ಟ ಮತ್ತು ಆತನನ್ನು ಬಾಹ್ಯ ಸಂಪತ್ತಿನ ಒಡೆಯನನ್ನಾಗಿ ಮಾಡಿದ. ಇದು ಕುಬೇರನಲ್ಲಿ ಭಗವಂತನ ವಿಶೇಷ ವಿಭೂತಿ.

ವೇದದಲ್ಲಿ ಬರುವ ದೇವತಾಗಣವನ್ನು ಪರಿಗಣನೆ ಮಾಡುವಾಗ, ಆದಿತ್ಯ-ವಸು-ರುದ್ರಗಣ ಮೂರು ಜೊತೆಜೊತೆಯಾಗಿ ಬರುತ್ತವೆ. ಮೂರು ಹೊತ್ತಿನ ಸವನದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಕೂಡ ಈ ದೇವತಾಗಣದಲ್ಲಿರುವ ಭಗವಂತನಿಗೆ. ಅಷ್ಟವಸುಗಳಲ್ಲಿ ಇರತಕ್ಕ ಭಗವಂತನಿಗೆ ಪ್ರಾತಃಕಾಲದಲ್ಲಿ ಅಷ್ಟಾಕ್ಷರ ಮಂತ್ರ ಗಾಯತ್ರಿ ಮೂಲಕ ಆಹುತಿ ಕೊಡುತ್ತಾರೆ. ಮದ್ಯಾಹ್ನದ ಸವನ ಏಕಾದಶ ರುದ್ರರಿಗೆ ಸಂಬಂಧಪಟ್ಟಿದ್ದು. ಇದಕ್ಕಾಗಿ ಇಲ್ಲಿ ಹನ್ನೊಂದು ಅಕ್ಷರದ ‘ತ್ರಿಷ್ಟುಪ್’ ಬಳಸುತ್ತಾರೆ. ಸಂಜೆಯ ಸವನ ದ್ವಾದಶಾದಿತ್ಯರಿಗೆ ಸಂಬಂಧಪಟ್ಟಿದ್ದು. ಅದಕ್ಕಾಗಿ ಅಲ್ಲಿ ದ್ವಾದಶಾಕ್ಷರದ ‘ಜಗತಿ’ಯನ್ನು ಬಳಸುತ್ತಾರೆ. ಕೃಷ್ಣ ಆದಿತ್ಯ ಮತ್ತು ರುದ್ರರ ಬಗ್ಗೆ ಹೇಳಿದ. 

ಈಗ ಇಲ್ಲಿ ವಸುಗಳ ಬಗ್ಗೆ ಹೇಳುತ್ತಾ ಹೇಳುತ್ತಾನೆ:  “ವಸುಗಳಲ್ಲಿ ‘ಅಗ್ನಿ’ ನಾನು” ಎಂದು. ವಸುಗಳು ಎಂಟು ಮಂದಿ. ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ  ದೋಷ, ವಸ್ತು ಮತ್ತು ವಿಭಾವಸು. ಇವರಿಗೆ ಇನ್ನೂ ಅನೇಕ ಹೆಸರಿದೆ. ಐದನೆಯವನಾದ ಅಗ್ನಿಗೆ ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ ಇತ್ಯಾದಿ ಹೆಸರಿದೆ. ಇತರ ವಸುಗಳೆಲ್ಲರೂ ದೇವತಾ ತಾರತಮ್ಯದಲ್ಲಿ ಹದಿನೆಂಟನೇ ಕಕ್ಷೆಯಲ್ಲಿದ್ದರೆ, ‘ಅಗ್ನಿ’ ಅವರಿಗಿಂತ ಎತ್ತರದಲ್ಲಿ ಹದಿನೈದನೆ ಕಕ್ಷೆಯಲ್ಲಿದ್ದಾನೆ. ಭೂ ಸ್ತರದಲ್ಲಿ ಭಗವಂತನನ್ನು ಆರಾಧನೆ ಮಾಡುವ ಶ್ರೇಷ್ಠ ಪ್ರತೀಕ ಅಗ್ನಿ. ಇಡೀ ಜಗತ್ತನ್ನು ಪಾವನಗೊಳಿಸುವ ಶಕ್ತಿಯಾದ ಭಗವಂತ ಅಗ್ನಿಯಲ್ಲಿ ‘ಪಾವಕಃ’ ನಾಮಕನಾಗಿ ಕೂತು ಆತನಿಗೆ ಈ ಶ್ರೇಷ್ಠ ಸ್ಥಾನವನ್ನು ಕೊಟ್ಟ.

ಅಗ್ನಿಯಲ್ಲಿ ಭಗವಂತನ ತೇಜಸ್ಸಿದೆ. ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ  ಹಾಗು ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ಈ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ. ಅಗ್ನಿಯ ಸಂಪರ್ಕಕ್ಕೆ ಬರುವ ವಸ್ತು ಪಾವನವಾಗುತ್ತದೆ. ಅಗ್ನಿಯಲ್ಲಿದ್ದು ಅಗ್ನಿಗೆ ಇಂತಹ ತೇಜಸ್ಸನ್ನು ಕೊಟ್ಟ ಭಗವಂತ ಜಗತ್ತನ್ನು ಪಾವನಗೊಳಿಸುವ ಪಾವಕಃ. ಎಲ್ಲರನ್ನು ಪಾವನಗೊಳಿಸುವ ಭಗವಂತ ದೇವತೆಗಳಿಗೂ ಕೂಡಾ ಅವಕ(ರಕ್ಷಕ).

ವಿತ್ತೇಶ ಕುಬೇರನ ಬಗ್ಗೆ ಹೇಳಿದ ಕೃಷ್ಣ ಮುಂದೆ ಭೂಮಿಯಲ್ಲಿ ಸಂಪತ್ತಿನ ನೆಲೆಯಾದ ಮೇರು ಪರ್ವತದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮೇರು ಪರ್ವತವನ್ನು ಹೇಮಾದ್ರಿ(ಚಿನ್ನದ ಬೆಟ್ಟ) ಎಂದು ಕರೆಯುತ್ತಾರೆ. ಅದು ವಸುಗಳ ನೆಲೆ. ಕೃಷ್ಣ ಹೇಳುತ್ತಾನೆ: “ಬೆಟ್ಟಗಳಲ್ಲಿ ಮೇರು ನಾನು” ಎಂದು. ಹಿಮಾಲಯದಲ್ಲಿನ ಪರ್ವತ ಶ್ರೇಣಿಯಲ್ಲಿರುವ, ಮನುಷ್ಯ ಮಾತ್ರಕ್ಕೆ ಗೊತ್ತಿರದ ಸಂಪತ್ತಿನ ಬಗ್ಗೆ ಸ್ವಾಮಿರಾಮ್ ಅವರು “ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್ “ ಎನ್ನುವ ಪುಸ್ತಕದಲ್ಲಿ ತಮ್ಮ ಸ್ವತಃ ಅನುಭವವನ್ನು ಹಂಚಿಕೊಂಡಿದ್ದಾರೆ. 

ಯುದ್ಧದಲ್ಲಿ ಪೂರ್ಣ ಸಂಪತ್ತು ನಾಶವಾದಾಗ ಧರ್ಮರಾಯ ಬೆಟ್ಟಗಳ ಸಾಲಿನಲ್ಲಿ ಹುದುಗಿಟ್ಟ ಸಂಪತ್ತನ್ನು ತರಿಸಿ ಯಜ್ಞ ಮಾಡಿದ ಎಂದು ಮಹಾಭಾರತದಲ್ಲಿ ಹೇಳುತ್ತಾರೆ. ಈ ವಿಚಾರ ಹಿಮಾಲಯದಲ್ಲಿ ತಪಸ್ಸು ಮಾಡುವ ಕೆಲವು ಯೋಗಿಗಳಿಗೂ ತಿಳಿದಿದೆ. ಇಂಥಹ ಸಂಪತ್ತಿನ ನೆಲೆ ಮೇರು.

ಇಲ್ಲಿ ಬಂದಿರುವ ಭಗವಂತನ ನಾಮ ‘ಮೇರುಃ’.  ಮಾ+ಈರು-ಮೇರು. ಸಮಸ್ತ ಚೈತನ್ಯದಲ್ಲಿ ಸರ್ವ ಶ್ರೇಷ್ಠಳಾದ ತಾಯಿ ಮಹಾಲಕ್ಷ್ಮಿಗೂ ಸಹ ಪ್ರೇರಕನಾಗಿ ನಿಂತಿರುವವ ಭಗವಂತ. ಇಂತಹ ಭಗವಂತನಿಗೆ ಇನ್ನೊಬ್ಬ ಪ್ರೆರಕನಿಲ್ಲ. ಆದ್ದರಿಂದ  “ಮೇರುಃ” ಭಗವಂತನ ಅನ್ವರ್ಥನಾಮ.

ಅಧ್ಯಾಯ - 10: ಶ್ಲೋಕ  24

ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ ।

ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ॥೨೪॥

ಪುರೋಧಸಾಮ್  ಚ ಮುಖ್ಯಮ್  ಮಾಮ್  ವಿದ್ಧಿ ಪಾರ್ಥ ಬೃಹಸ್ಪತಿಮ್ 
ಸೇನಾನೀನಾಮ್ ಅಮ್ ಸ್ಕಂದಃ ಸರಸಾಮ್ ಅಸ್ಮಿ ಸಾಗರಃ -- 

ಓ ಪಾರ್ಥಾ, ಪುರೋಹಿತರಲ್ಲಿ ಹಿರಿಯನಾದ ಬೃಹಸ್ಪತಿ ನಾನು.[ಬೃಹತ್=ಹಿರಿಯರಿಗು, ಪತಿ=ಒಡೆಯನಾಗಿ ‘ಬೃಹಸ್ಪತಿ’ಯಲ್ಲಿದ್ದೇನೆ.] ದಳವಾಯಿಗಳಲ್ಲಿ ಸ್ಕಂದ ನಾನು.[ಅರಿಗಳ ಬೀರವನ್ನು ಹೀರಿ ‘ಸ್ಕಂದ’ ಎನ್ನಿಸಿ ನಾನು ಸೇನಾಪತಿ ‘ಸ್ಕಂದ’ನಲ್ಲಿದ್ದೇನೆ.] ನೀರಾಸರೆಗಳಲ್ಲಿ ಕಡಲು ನಾನು. [ಸಾ=ಸಾರವನ್ನು ಗರ=ಉಣ್ಣುವುದರಿಂದ, ‘ಸಾಗರ’ ಎನ್ನಿಸಿ ಕಡಲಿನಲ್ಲಿದ್ದೇನೆ.]

ನಾವು ಪೂಜಿಸುವ ಭಗವಂತನ ಪ್ರತೀಕವನ್ನು ಹೇಳಿದಮೇಲೆ ಎಲ್ಲವುದಕ್ಕೂ ಮುಖ್ಯವಾಗಿ ಬೇಕಾಗಿರುವ ಪುರೋಹಿತರ ಬಗ್ಗೆ ಇಲ್ಲಿ ಹೇಳಲಾಗಿದೆ. ಕೃಷ್ಣ ಹೇಳುತ್ತಾನೆ “ಪುರೋಹಿತರಲ್ಲಿ ನನ್ನ ಸನ್ನಿಧಾನವಿದೆ” ಎಂದು. ಋಗ್ವೇದದ ಪ್ರಥಮ ಸೂಕ್ತದಲ್ಲಿ ಹೇಳುವಂತೆ:  " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |” ಇಲ್ಲಿ ಹೇಳುವ ‘ಹೋತಾ’ ಋಗ್ವೇದದ ಪುರೋಹಿತ. ಹಿಂದೆ ಒಂದು ಯಾಗ ಮಾಡುವಾಗ ಅಲ್ಲಿ ಹದಿನಾರು ಮಂದಿ ಪುರೋಹಿತರಿರುತ್ತಿದ್ದರು. ಋಗ್ವೇದಕ್ಕೆ: ‘ಹೋತಾ’ ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಮೈತ್ರಾವರುಣ, ಅಚ್ಛಾವಾಕ, ಗ್ರಾಮಸ್ತುತ್) ಸಹಾಯಕರು. ಯಜುರ್ವೇದಕ್ಕೆ: ಅಧ್ವರ್ಯು ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರತಿಪ್ರಸ್ಥುತಾ, ನೇಷ್ಟಾ, ಉನ್ನೇತಾ) ಸಹಾಯಕರು. ಸಾಮವೇದಕ್ಕೆ: ಉದ್ಗಾತಾ ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರಸ್ತೋತಾ, ಪ್ರತಿಹರ್ತಾ, ಸುಬ್ರಹ್ಮಣ್ಯ) ಸಹಾಯಕರು. ಈ ಎಲ್ಲರ ಮೇಲ್ವಿಚಾರಕರಾಗಿ, ಯಜ್ಞದಲ್ಲಿ ಯಾವುದೇ ಲೋಪದೋಷ ಬರದಂತೆ ನೋಡಿಕೊಳ್ಳುವವರು ಸರ್ವವೇದ ಪಾರಂಗತ ಪ್ರಧಾನ ಪುರೋಹಿತರು. ಅವರಿಗೆ ‘ಬ್ರಹ್ಮಾ’ ಎಂದು ಹೆಸರು.

ಇವರಿಗೂ ಮೂರು ಮಂದಿ(ಬ್ರಾಹ್ಮಾಣಾಇಚ್ಛಂಸಿ, ಅಗ್ನೀಧ್ರ, ಪೋತಾ) ಸಹಾಯಕರು. ಹೀಗೆ ಭಗವಂತನ ವಿಶೇಷ ಸನ್ನಿಧಾನವಿರುವ ಹದಿನಾರು ಮಂದಿ ಪುರೋಹಿತರು ಸೇರಿ ಯಜ್ಞ ನೆರವೇರಿಸುತ್ತಿದ್ದರು. ಪುರೋಹಿತರ ಸ್ಥಾನ ಸಮಾಜದಲ್ಲಿ ಅತ್ಯಂತ ಹಿರಿದು. ಆದರೆ ಇಂದಿನ ಪುರೋಹಿತರು ಹಿಂದಿನಷ್ಟು ಸ್ಥಾನಮಾನವನ್ನು ಸಮಾಜದಲ್ಲಿ ಗಳಿಸುತ್ತಿಲ್ಲ. ಪುರೋಹಿತರು ನಮಗೆ ಹಿತವಾದುದ್ದನ್ನು ನಮ್ಮಿಂದ ಮೊದಲೇ ತಿಳಿದು ನಮ್ಮನ್ನು ತಿದ್ದಿ ಆ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುವವರು. ನಮ್ಮ ಅಭಿವೃದ್ಧಿಗೆ ಪೂರಕವಾಗಿರತಕ್ಕಂತಹ ಕ್ರಿಯೆಗಳನ್ನು ಮಾಡಿ ನಾವು ಅಭಿವೃದ್ಧಿಹೊಂದುವಂತೆ ಮುಂಜಾಗ್ರತೆ ಕೊಡುವ ಗುರುಸ್ಥಾನದಲ್ಲಿರುವ ಸಲಹೆಗಾರರು. ಇಡೀ ಸಮಾಜಕ್ಕೆ ಇವರು ಮಾರ್ಗದರ್ಶಕರು. ಪೌರೋಹಿತ್ಯ ಬಹಳ ಜವಾಬ್ದಾರಿಯುತ ಕೆಲಸ. ಒಂದು ಧಾರ್ಮಿಕ ನಡೆಯಲ್ಲಿ ಸಂಶಯಬಂದಾಗ ಸಮಾಜಕ್ಕೆ ಮಾರ್ಗದರ್ಶಿಯಾಗಿ ಕೆಲಸ ಮಾಡುವ ಪುರೋಹಿತನ ಜವಾಬ್ದಾರಿ ಬಹಳ ದೊಡ್ಡದು. ಮಂತ್ರ ಹೇಳುವಾಗ ಯಾವುದಾದರು ಲೋಪವಾದರೆ, ತಪ್ಪು ಮಾಡಿದರೆ, ಅದಕ್ಕೆ ಪುರೋಹಿತ ಕಾರಣನಾಗುತ್ತಾನೆ. ಆದ್ದರಿಂದ ಭಗವಂತನ ವಿಶೇಷ ಸನ್ನಿಧಾನ ಅಲ್ಲಿದೆ.

ಭೂಮಿಯ ಎಲ್ಲಾ ಪುರೋಹಿತರಿಗಿಂತ ದೊಡ್ಡ ಪುರೋಹಿತರು ಇಬ್ಬರು. ದೈತ್ಯ ಪುರೋಹಿತರಾದ ಶುಕ್ರಾಚಾರ್ಯರು ಮತ್ತು ದೇವತೆಗಳ ಪುರೋಹಿತರಾದ ಬೃಹಸ್ಪತಿಯಾಚಾರ್ಯರು. ಬೃಹಸ್ಪತಿ ದೇವತಾ ತಾರತಮ್ಯದಲ್ಲಿ ಹತ್ತನೇ ಕಕ್ಷೆಯಲ್ಲಿದ್ದಾರೆ. ಇವರು ದೇವಲೋಕದಲ್ಲಿ ದೇವತೆಗಳಿಗೆ ಮತ್ತು ದೇವೇಂದ್ರನಿಗೆ ಸಲಹೆಗಾರರು. ದೇವತೆಗಳಿಗೆ  ಪುರೋಹಿತರಾಗಿರುವ ಇವರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ದೇವತಾ ತಾರತಮ್ಯದಲ್ಲಿ ಎಂಟನೇ ಕಕ್ಷೆಯಲ್ಲಿರುವ ಇಂದ್ರ ಹತ್ತನೇ ಕಕ್ಷೆಯಲ್ಲಿರುವ ಬೃಹಸ್ಪತಿಯಾಚಾರ್ಯರಿಗೆ ನಮಸ್ಕರಿಸಿ ಅವರ ಮಾರ್ಗದರ್ಶನದಂತೆ ನಡೆಯಲು ಅವರಲ್ಲಿರುವ ಭಗವಂತನ ಸನ್ನಿಧಾನವೇ ಕಾರಣ. ಇದನ್ನು ನೆನಪಿಸುವಂತೆ ಕೃಷ್ಣ ದೇವೇಂದ್ರನ ಅವತಾರವಾದ ಅರ್ಜುನನನ್ನು ಇಲ್ಲಿ ‘ಪಾರ್ಥಾ’ ಎಂದು ಸಂಬೋಧಿಸಿದ್ದಾನೆ.

ಇನ್ನೊಂದು ಮುಖದಲ್ಲಿ ನೋಡಿದರೆ ವೇದಗಳಲ್ಲಿ ಬೃಹಸ್ಪತಿ ಎಂದರೆ ಪ್ರಾಣದೇವರು. ಸರಸ್ವತಿ ಭಾರತಿಯರ ಪತಿ-ಬೃಹಸ್ಪತಿಗಳು. ಇವರೇ ಬ್ರಹ್ಮ-ವಾಯು. ಇವರು ಸಮಸ್ತ ದೇವತೆಗಳಿಗೂ ಪುರೋಹಿತರು. ಭಗವಂತ ಪ್ರಾಣದೇವರಲ್ಲಿ ಗಾನದ(ಕಂಠಸಿರಿ) ವಿಶೇಷ ವಿಭೂತಿಯಾಗಿ ನೆಲೆಸಿದ್ದಾನೆ.

ಇಲ್ಲಿ ಬಂದಿರುವ ಭಗವಂತನ ನಾಮ ‘ಬೃಹಸ್ಪತಿ’. ಬೃಹತ್ ಅಂದರೆ ಹಿರಿಯರು, ಪತಿ ಅಂದರೆ ಒಡೆಯ. ಬ್ರಹ್ಮಾದಿ ಸಕಲ ದೇವತೆಗಳಿಗೂ ಒಡೆಯನಾದ, ಪುರೋಹಿತರಿಗೂ ಪುರೋಹಿತ ಭಗವಂತ  ‘ಬೃಹಸ್ಪತಿ’.

ಅಧ್ಯಾತ್ಮ ಯೋಧರಾದ  ಪುರೋಹಿತರ ಬಗ್ಗೆ ಹೇಳಿದ ಕೃಷ್ಣ, ಈಗ ಯುದ್ಧದಲ್ಲಿ ವಿಜಯ ತಂದುಕೊಟ್ಟು ರಕ್ಷಣೆ ಮಾಡುವ ಯೋಧರಲ್ಲಿ ತನ್ನ ವಿಶೇಷ ವಿಭೂತಿಯನ್ನು ವಿವರಿಸುತ್ತಾನೆ. ದೇವತೆಗಳು ಬೃಹಸ್ಪತಿಯಾಚಾರ್ಯರ ಮಾರ್ಗದರ್ಶನದಲ್ಲಿ ಸಂಪಾದಿಸಿದ ಸಂಪತ್ತನ್ನು ಅಸುರರು ಅಪಹರಿಸಿದಾಗ, ಅವರ ವಿರುದ್ಧ ಹೋರಾಡಿ ಅದನ್ನು ಹಿಂದಕ್ಕೆ ತಂದುಕೊಟ್ಟವ ಸ್ಕಂದಃ. ಭಗವಂತ ‘ಸ್ಕಂದಃ ನಾಮಕನಾಗಿ ಸೇನಾನಿಯಲ್ಲಿ ನಿಂತು ನಡೆಸುತ್ತಾನೆ. ಸ್ಕಂದನಿಗೆ ಸೇನಾಧಿಪತಿಯಾಗಿ ತಾರಕಾಸುರನನ್ನು ಸಂಹಾರ ಮಾಡುವಂತಹ ಶಕ್ತಿ ಕೊಟ್ಟಂತಹ, ಅಂತರಂಗದ ಒಳಗೆ ಕುಳಿತ ಅಂತರ್ಯಾಮಿ ತತ್ವ-ಭಗವಂತ. 

ಸೇನಾನಿಯ ಬಗ್ಗೆ ಹೇಳುವಾಗ ಇಲ್ಲಿ ಸೇನಾನಿಯಾಗಿ ಕೀರ್ತಿ ಪಡೆದ ಕರ್ನಾಟಕದ ಹೆಮ್ಮೆಯ ಪುತ್ರ  ‘ಕಾರ್ಯಪ್ಪ’ ಅವರನ್ನು ನೆನೆಸಿಕೊಳ್ಳಬಹುದು. ಭಗವಂತನ ವಿಶೇಷ ಸನ್ನಿದಾನದಿಂದಾಗಿ ಸೇನಾಧಿಪತಿಯಲ್ಲಿ ಅಂಥಹ ವಿಶೇಷ ಶಕ್ತಿ ಬರುತ್ತದೆ. 
ಇಲ್ಲಿ ಬಂದಿರುವ ಭಗವಂತನ ನಾಮ ಸ್ಕಂದಃ. ‘ಸ್ಕಂದಃ’ ಎಂದರೆ ಇಡೀ ಜಗತ್ತನ್ನು ಸಂಹಾರ ಮಾಡುವ ಶಕ್ತಿ. “ಅರಿಗಳ ಬೀರವನ್ನು ಹೀರಿ ‘ಸ್ಕಂದ’ ಎನ್ನಿಸಿ ನಾನು ಸೇನಾಪತಿ ‘ಸ್ಕಂದ’ನಲ್ಲಿದ್ದೇನೆ” ಎಂದಿದ್ದಾನೆ ಕೃಷ್ಣ.

ಮುಂದುವರಿದು ಕೃಷ್ಣ ಹೇಳುತ್ತಾನೆ: “ಸರಸಾಮಸ್ಮಿ ಸಾಗರಃ” ಎಂದು. ಭೂಮಿಯ ಮೇಲಿನ ಅಪಾರ ಸಂಪತ್ತಿನ ತಾಣ ಮೇರು ಪರ್ವತವಾದರೆ, ರಸದಿಂದ ಸಹಿತವಾದ, ಜಲಾಶಯಗಳಲ್ಲಿ ಬಹಳ ದೊಡ್ಡದಾಗಿರುವುದು ಸಾಗರ. “ಅದರಲ್ಲಿ ವಿಭೂತಿಯಾಗಿ ನಾನಿದ್ದೇನೆ” ಎನ್ನುತ್ತಾನೆ ಕೃಷ್ಣ. ಭೂಮಿಯ ಯಾವಭಾಗದಲ್ಲಿ ಬಾವಿ ತೋಡಿದರೂ ಸಿಹಿ ನೀರು. ಆದರೆ ಅಪರಂಪಾರವಾದ ಸಾಗರದ ನೀರು ಉಪ್ಪು. ಇದು ಏಕೆ ಎಂದು ನಮಗೆ ಗೊತ್ತಿಲ್ಲ. 

ರಷ್ಯದ ವಿಖ್ಯಾತ ಮನಃಶಾಸ್ತ್ರಜ್ಞ ವಿಲಿಕೋ^ಸ್ಕಿ(Velikovsky) ತನ್ನ ‘Worlds in Collision’ ಎನ್ನುವ ಪುಸ್ತಕದಲ್ಲಿ ಹೇಳುತ್ತಾರೆ: “ನಾವು ವಿಶ್ವದ ವಿಸ್ಮಯವನ್ನೆಲ್ಲ ಭೇದಿಸಿದ ಭ್ರಮೆಯಲ್ಲಿದ್ದೇವೆ, ಆದರೆ ನಮಗೆ  ಏನೂ ಗೊತ್ತಿಲ್ಲ” ಎಂದು. ಇಂದು ಸಮುದ್ರದ ನೀರು ಉಪ್ಪು ಏಕೆ, ಬಾವಿಯ ನೀರು ಸಿಹಿ ಏಕೆ ಎನ್ನುವುದೂ ನಮಗೆ ಗೊತ್ತಿಲ್ಲ. ಭಗವಂತ ಇತರ ಎಲ್ಲಾ ರಸವನ್ನು ಹಣ್ಣಿನಲ್ಲಿಟ್ಟ. ಆದರೆ ರಸದ-ರಸ ಲವಣರಸ ಉಪ್ಪನ್ನು ಮಾತ್ರ ಯಾವ ಹಣ್ಣಿನಲ್ಲೂ ಇಡದೆ-ಸಮುದ್ರದ ನೀರಿನಲ್ಲಿಟ್ಟ. ಈ ಸಮುದ್ರ ಒಂದು ವಿಸ್ಮಯ. ಭೂಮಿ ಮೇಲಿನ ಪ್ರಾಣಿ ವೈವಿದ್ಯಕ್ಕಿಂತ ಹೆಚ್ಚು ವೈವಿದ್ಯ ಸಮುದ್ರದಲ್ಲಿದೆ. ಭಗವಂತ ಸಮುದ್ರವನ್ನು ಸೃಷ್ಟಿ ಮಾಡಿ ಅದರಲ್ಲಿ ಸಾಗರಃ ಶಬ್ದವಾಚ್ಯನಾಗಿ ತುಂಬಿದ್ದಾನೆ.

ಇಲ್ಲಿ ಬಂದಿರುವ ಭಗವಂತನ ನಾಮ ಸಾಗರಃ. ಸಾರ+ಗರ-ಸಾಗರ. ಸಾರವಾಗಿರುವುದನ್ನು ಸ್ವೀಕರಿಸುವ ಭಗವಂತ ಸಾರಃ. ಎಲ್ಲಕ್ಕಿಂತ ಮಹತ್ತಾದ ಸಾರ-ಲವಣ, ಅದರಲ್ಲಿ ತುಂಬಿರುವ ಭಗವಂತ ಸಾಗರಃ. ಸಾರಂ ಗರತಿ ದದಾತೀತಿ ಸಾಗರಃ. ಜಗತ್ತಿಗೆ ಜೀವನದ ಸಾರ ಸರ್ವಸ್ವವನ್ನು ಕೊಡುವ ಭಗವಂತ ಸಾಗರಃ.

ಅಧ್ಯಾಯ - 10: ಶ್ಲೋಕ  25

ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್।

ಯಜ್ಞಾನಾಂ ಜಪಯಜ್ಞೋSಸ್ಮಿ ಸ್ಥಾವರಾಣಾಂ ಹಿಮಾಲಯಃ ॥೨೫॥

ಹಾ ಋಷೀಣಾಮ್  ಭೃಗುಃ ಅಮ್  ಗಿರಾಮ್ ಅಸ್ಮಿ ಏಕಮ್ ಅಕ್ಷರಮ್
ಯಜ್ಞಾನಾಮ್ ಜಪಯಜ್ಞಃ ಅಸ್ಮಿ ಸ್ಥಾವರಾಣಾಮ್  ಹಿಮಾಲಯಃ –ಮಹರ್ಷಿಗಳಲ್ಲಿ ಭೃಗು ನಾನು. [ಕೆಟ್ಟವರನ್ನು ಸುಟ್ಟುರಿದು, ‘ಭೃಗು’ ಎನ್ನಿಸಿ, ‘ಭೃಗು’ಮುನಿಯಲ್ಲಿದ್ದೇನೆ.] ವಾಙ್ಮಯಗಳಲ್ಲಿ ಓಂಕಾರವೆಂಬ ಒಂದಕ್ಷರ ನಾನು. [ಎಲ್ಲಕ್ಕಿಂತ ಮಿಗಿಲಾಗಿ ‘ಏಕ’ ಎನ್ನಿಸಿ, ಅಳಿವಿರದ್ದರಿಂದ ‘ಅಕ್ಷರ’ ಎನ್ನಿಸಿ ಓಂಕಾರವಾಚ್ಯನಾಗಿದ್ದೇನೆ.] ಯಜ್ಞಗಳಲ್ಲಿ ಜಪಯಜ್ಞ ನಾನು.[ಜ=ಹುಟ್ಟಿದ್ದನ್ನೆಲ್ಲ, ಪ=ಪಾಲಿಸುವುದರಿಂದ ‘ಜಪ’ಎನ್ನಿಸಿ, ಎಲ್ಲರ ಎಲ್ಲ ಪೂಜೆಗಳನ್ನು ಕೊಳ್ಳುವುದರಿಂದ ‘ಯಜ್ಞ’ಎನ್ನಿಸಿ ಜಪಯಜ್ಞದಲ್ಲಿದ್ದೇನೆ.] ಘನವಾದ ಬೆಟ್ಟಗಳಲ್ಲಿ ಹಿಮಾಲಯ ನಾನು. [ಹ್ರೀ=ಲಕ್ಷ್ಮಿಯ ‘ಹ್ರೀ’ನಾಮಕ ರೂಪಕ್ಕೆ ಮತ್ತು ಮಾ=’ಶ್ರೀ’ ನಾಮಕ ರೂಪಕ್ಕೆ ಆಲಯ=ನೆಲೆಯಾದ್ದರಿಂದ ‘ಹಿಮಾಲಯ’ ಎನ್ನಿಸಿ ಹಿಮಗಿರಿಯಲ್ಲಿದ್ದೇನೆ.]

ಈ ಹಿಂದೆ ನಾವು ದೇವರ್ಷಿ ಬೃಹಸ್ಪತಿಯ ಬಗ್ಗೆ ನೋಡಿದೆವು. ಇವರು ದೇವಲೋಕಕ್ಕೆ ಸಂಬಂಧಪಟ್ಟವರು. ಇವರನ್ನು ಬಿಟ್ಟು ಇತರ ಮಹರ್ಷಿಗಳನ್ನು ನೋಡಿದರೆ-ಭಗವಂತನನ್ನು ಕಂಡ ವಿಶಿಷ್ಟರಲ್ಲಿ ಅತ್ಯಂತ ಶ್ರೇಷ್ಠರಾದವರು ಭೃಗು ಮಹರ್ಷಿಗಳು. ವಿಶ್ವಾಮಿತ್ರ-ವಸಿಷ್ಠರು ತಾರತಮ್ಯ ಕಕ್ಷೆಯಲ್ಲಿ ಹದಿನಾರನೇ ಸ್ಥಾನದಲ್ಲಿದ್ದರೆ,  ಭೃಗುಮುನಿಗಳು ಇವರಿಂದ ಎತ್ತರದಲ್ಲಿ ಹದಿನೈದನೇ ಕಕ್ಷೆಯಲ್ಲಿ ಅಗ್ನಿಗೆ ಸಮಾನರಾಗಿದ್ದಾರೆ. 

ಇವರು ಭೂಮಿಯಲ್ಲಿ ಋಷಿಗಳ ಮಾಲಿಕೆಯಲ್ಲಿ ಹೊಸ ಆವಿಷ್ಕಾರ ಮಾಡಿದವರು. ಭಾಗವತದಲ್ಲಿ ಬರುವ ಒಂದು ಕಥೆಯಂತೆ ತ್ರಿಮೂರ್ತಿಗಳಲ್ಲಿ ಯಾರು ಅತ್ಯಂತ ಶ್ರೇಷ್ಟರು ಎಂದು ಅಳೆಯುವ ನಿಯೋಗಶ್ರೇಷ್ಠರಾಗಿ ಹೋಗಿ, ‘ನಾರಾಯಣ’ ಸರ್ವ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ ಬಹಳ ದೊಡ್ಡ ಮುನಿ ಭೃಗು. ಈ ಕಥೆಯಲ್ಲಿ ಹೇಳುವಂತೆ- ನಿಯೋಗ ಶ್ರೇಷ್ಠರಾಗಿ ಭೃಗು ಮೊದಲು ಶಿವನಲ್ಲಿಗೆ, ನಂತರ ಬ್ರಹ್ಮನಲ್ಲಿಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಯಾವ ಪುರಸ್ಕಾರವೂ ದೊರೆಯದಿದ್ದಾಗ, ಭೃಗು ಸಿಟ್ಟಿನಿಂದಲೇ ನಾರಾಯಣನಲ್ಲಿಗೆ ಹೋಗುತ್ತಾರೆ. ಅಲ್ಲಿ ವಿಷ್ಣು ಕೂಡಾ ಇವರನ್ನು ಗಮನಿಸದೇ ಇದ್ದಾಗ, ಸಿಟ್ಟಿನಿಂದ ವಿಷ್ಣುವಿನ ಎದೆಗೆ ಒದೆಯುತ್ತಾರೆ. ಆಗ ಭಕ್ತವತ್ಸಲ ನಾರಾಯಣ: “ನೀವು ಕರೆದಿದ್ದರೆ ನಾನು ಬರುತ್ತಿದ್ದೆ, ಈ ರೀತಿ ಒದೆದುದರಿಂದ ನಿಮ್ಮ ಕಾಲಿಗೆ ಅದೆಷ್ಟು ನೋವಾಯಿತೋ” ಎಂದು ಅವರ ಕಾಲನ್ನು ಉಜ್ಜಲು ಆರಂಭಿಸುತ್ತಾನೆ. 

ಆಗ ಭೃಗು ತನ್ನ ತಪ್ಪನ್ನು ಅರಿತು ನಾರಾಯಣನಲ್ಲಿ ಶರಣಾಗುತ್ತಾರೆ. ಈ ಕಥೆಯನ್ನು ನೋಡಿದಾಗ ನಮಗೆ ಈ ಮುನಿಗಳಿಗೆ ಭಗವಂತನ ಮಹತ್ವ ಗೊತ್ತಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ. ಖಂಡಿತವಾಗಿ ಅವರಿಗೆ ಭಗವಂತನ ಪೂರ್ಣ ಮಹತ್ವ ತಿಳಿದಿದೆ. ಇದು ಕೇವಲ ಜನಸಾಮಾನ್ಯರಿಗೆ ಕ್ರಿಯೆಯ ಮೂಲಕ ವಿಷಯನ್ನು ತಿಳಿಸುವ ಒಂದು ಕಾರ್ಯ ಅಷ್ಟೆ. ಇದೇ ರೀತಿ “ನೀನು ಭೂಮಿಯ ಮೇಲೆ ಹತ್ತು ಬಾರಿ ಅವತಾರ ತಾಳು” ಎಂದು ಭಗವಂತನಿಗೆ ಶಾಪ ಕೊಟ್ಟವರು ಭೃಗು. ಅವರ ಶಾಪಕ್ಕೆ ಪುರಸ್ಕಾರ ಕೊಡುವುದಕ್ಕೆ ಭಗವಂತ ಭೂಮಿಯ ಮೇಲೆ ಹತ್ತು ಅವತಾರ ತಾಳಿದ. ಲಕ್ಷ್ಮಿ ಭಾರ್ಗವಿಯಾಗಿ ಭೃಗು ಮುನಿಯಲ್ಲಿ ಮಗಳಾಗಿ ಹುಟ್ಟಿದಳು. ಈ ರೀತಿ ಭೃಗುವಿನಲ್ಲಿ ಅನೇಕ ವೈಶಿಷ್ಟ್ಯವನ್ನು ಕಾಣುತ್ತೇವೆ. ಇದಕ್ಕೆಲ್ಲ ಕಾರಣ ಭೃಗುವಿನಲ್ಲಿ ಭಗವಂತನ ವಿಶೇಷ ಸನ್ನಿದಾನ.

ಇಲ್ಲಿ ಬಂದಿರುವ ಭಗವಂತನ ನಾಮ ‘ಭೃಗುಃ’. ಭರ್ಜನಾತ್ ಇತಿ ಭೃಗುಃ. ಪ್ರಳಯ ಕಾಲದಲ್ಲಿ ಎಲ್ಲವನ್ನು ಭರ್ಜನೆ ಮಾಡುವ ಭಗವಂತ, ಮುಖ್ಯವಾಗಿ ಭಕ್ತರ ಪಾಪವನ್ನು ಭರ್ಜನೆ(ನಾಶ)ಮಾಡುವ ಭೃಗುಃ. ಭಗವಂತ ತನ್ನ ಭಕ್ತರ ಜೀವನದಲ್ಲಿ ಅಡ್ಡಿ ಮಾಡುವ ದುಷ್ಟ ಶಕ್ತಿಗಳನ್ನು ಭರ್ಜನೆ ಮಾಡುವವ. ದುಷ್ಟರನ್ನು ಮತ್ತು ಅಧರ್ಮವನ್ನು ಭರ್ಜನೆ ಮಾಡಿ, ಧರ್ಮ ಸಂಸ್ಥಾಪನೆ ಮಾಡುವ ಭಗವಂತ ಭೃಗುಃ ಶಬ್ದ ವಾಚ್ಯ. ಋಷಿಗಳಲ್ಲಿ ಅತ್ಯಂತ ಎತ್ತರ ಸ್ಥಾನ ಭೃಗುವಿಗೆ ಬರುವಂತೆ ಮಾಡಿ, ಅವರಲ್ಲಿ ಭೃಗು ಶಬ್ದ ವಾಚ್ಯನಾಗಿ ಭಗವಂತ ಸನ್ನಿಹಿತನಾಗಿದ್ದಾನೆ. ಇದು ನಾವು ಉಪಾಸನೆಯಲ್ಲಿ ತಿಳಿದಿರಬೇಕಾದ ಮುಖ್ಯವಾದ ಅಂಶ.

ಋಷಿಗಳ ಬಗ್ಗೆ ಹೇಳಿದಾಗ ಋಷಿಗಳು ಭಗವಂತನಿಗೆ ಹತ್ತಿರ ಹೇಗಾದರು ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ಕಾರಣ- ಉಪಾಸನೆ, ಮಂತ್ರ-ಜಪ ಸಿದ್ಧಿ.  ಕ್ಷತ್ರಿಯನಾದ ವಿಶ್ವಾಮಿತ್ರ ಕೂಡ ವೇದಮಂತ್ರ ಜಪ ಸಿದ್ಧಿಯಿಂದ ಬ್ರಹ್ಮರ್ಷಿಯಾದ. ಋಷಿಯಾಗಬೇಕಿದ್ದರೆ, ಋಷಿತ್ವ ಪಡೆಯಬೇಕಿದ್ದರೆ ಓಂಕಾರದ ಉಪಾಸನೆಯಿಂದ ಭಗವಂತನನ್ನು ಸಾಕ್ಷಾತ್ಕಾರಗಳಿಸಿಕೊಳ್ಳಬೇಕು. ಪ್ರಪಂಚದಲ್ಲಿರುವ ಅತ್ಯಂತ ಮಹತ್ವವಾದ ಮತ್ತು ಶ್ರೇಷ್ಠ ಶಬ್ದ ಓಂಕಾರ. ಈ ಓಂಕಾರದಲ್ಲಿ ಅಕ್ಷರಃ ನಾಮಕ ಭಗವಂತನ ವಿಶೇಷ ಸನ್ನಿದಾನವಿದೆ. ಓಂಕಾರ ಭಗವಂತನ ವಿಶೇಷ(Exclusive)ನಾಮ. [ಓಂಕಾರಕ್ಕೆ ಕೃಷ್ಣ ಇಷ್ಟು ಮಹತ್ವ ಏಕೆ ಕೊಟ್ಟ, ಓಂಕಾರದಲ್ಲಿರುವ ಅಸಾಧಾರಣ ವೈಶಿಷ್ಟ್ಯ ಏನು ಎನ್ನುವುದರ ವಿಶೇಷ ಅರ್ಥ ವಿವರಣೆಯನ್ನು, ನಾವು ಏಳನೇ ಅಧ್ಯಾಯದಲ್ಲಿ ಈಗಾಗಲೇ ನೋಡಿದ್ದೇವೆ(ಅ-೭, ಶ್ಲೋಕ-೮)]. ಎಂದೂ ನಾಶವಿಲ್ಲದ(ಅ-ಕ್ಷರ) ಭಗವಂತ ಎಲ್ಲರಿಗಿಂತ ಹಿರಿದಾದ ಏಕಮಾತ್ರ ತತ್ವ. ಆದ್ದರಿಂದ ಆತ ಏಕಃ.

ಓಂಕಾರದ ನಂತರ ಇಲ್ಲಿ ಜಪಯಜ್ಞದ ಬಗ್ಗೆ ಕೃಷ್ಣ ಹೇಳುತ್ತಾನೆ. “ಯಜ್ಞಾನಾಮ್ ಜಪಯಜ್ಞಃ ಅಸ್ಮಿ” ಎನ್ನುತ್ತಾನೆ ಕೃಷ್ಣ. ಎಲ್ಲಕ್ಕಿಂತ ದೊಡ್ಡ ಯಜ್ಞ ಅಂದರೆ ಜಪಯಜ್ಞ. ಹಿಂದೆ ಹೇಳಿದಂತೆ ಅಗ್ನಿ ಮುಖದಲ್ಲಿ ಮಾಡುವ ಪೂಜೆ  ಮಾತ್ರ ಯಜ್ಞವಲ್ಲ. ಕೊಡುವಿಕೆ, ಪೂಜೆಯಂತಹ ಒಳ್ಳೆಯ ಕಾರ್ಯಕ್ಕೆ ಒಂದು ಕಡೆ ಸೇರುವಿಕೆ(ಸಂಗತೀಕರಣ),ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇರುವುದನ್ನು ಇಲ್ಲದವರಿಗೆ ಹಂಚಿ ಬದುಕುವುದು, ಎಲ್ಲವೂ ಒಂದು ಯಜ್ಞವೆ. ಸಾಮಾನ್ಯವಾಗಿ ಯಜ್ಞದಲ್ಲಿ ಎರಡು ವಿಧ. ಒಂದು ಅಂತರಂಗ ಯಜ್ಞ ಇನ್ನೊಂದು ಬಾಹ್ಯಯಜ್ಞ. ಅಂತರಂಗದಲ್ಲಿ  ಭಗವಂತನ ನಿರಂತರ ಪೂಜೆ(ದೇವಪೂಜಾ); ಚಿತ್ತ-ಮನಸ್ಸು ಭಗವಂತನ ಜೊತೆಗೆ ಸೇರುವುದು(ಸಂಗತೀಕರಣ) ಮತ್ತು ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳುವುದು-ಪರಿಪೂರ್ಣವಾದ ಮಾನಸ ಯಜ್ಞ. ಈ ರೀತಿ ಮನಸ್ಸಿನಲ್ಲಿ ಮಾಡುವ ಜಪಯಜ್ಞ ಅತ್ಯಂತ ಶ್ರೇಷ್ಠ. ಇದಕ್ಕೆ ಕಾರಣ ಜಪಯಜ್ಞದಲ್ಲಿನ ಭಗವಂತನ ವಿಭೂತಿ.

ಇಲ್ಲಿ ಬಂದಿರುವ ಭಗವಂತನ ನಾಮ 'ಜಪಃ' ಮತ್ತು 'ಯಜ್ಞಃ'. ಜಗತ್ತಿನಲ್ಲಿ ಹುಟ್ಟಿಬರುವ ಪ್ರತಿಯೊಂದು ಜೀವವನ್ನು ಪಾಲಿಸುವ ಭಗವಂತ 'ಜಪಃ'. ಇಂತಹ ಭಗವಂತ ಎಲ್ಲರ ಎಲ್ಲ ಪೂಜೆಗಳನ್ನು ಕೊಳ್ಳುವುದರಿಂದ ‘ಯಜ್ಞ’ಎನ್ನಿಸಿ ಜಪಯಜ್ಞದಲ್ಲಿದ್ದಾನೆ.
ಜಪದ ಬಗ್ಗೆ ಹೇಳಿದ ಮೇಲೆ, ಭೂಮಿಯ ಮೇಲೆ ಸಾತ್ವಿಕ ಕಂಪನ ಇರುವ ಅತ್ಯಂತ ಶ್ರೇಷ್ಠ ಸ್ಥಾವರದ ಬಗ್ಗೆ ಕೃಷ್ಣ ಹೇಳುತ್ತಾನೆ. ಹಿಂದೆ ಮನೆ ಕಟ್ಟುವಾಗ ಅಲ್ಲಿ ಹೆಚ್ಚು ಸಾತ್ವಿಕ ಕಂಪನ ಇರುವ ಸ್ಥಳದಲ್ಲಿ ದೇವರ ಕೋಣೆಯನ್ನು ನಿರ್ಮಿಸುತ್ತಿದ್ದರು. ಒಂದು ಊರಿನಲ್ಲಿ ಅತಿ ಹೆಚ್ಚು ಸಾತ್ವಿಕ ಕಂಪನ ಇರುವ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುತ್ತಿದ್ದರು. 

ಈ ಭೂಮಿಯಲ್ಲಿ ಅತಿ ಹೆಚ್ಚು ಸಾತ್ವಿಕ ಕಂಪನ ಇರುವ ಏಕ ಮಾತ್ರ ಸ್ಥಳ ಹಿಮಾಲಯ. ಇಲ್ಲಿ ಎಲ್ಲಿ ಕುಳಿತರೂ ನಮ್ಮ ಮನಸ್ಸು ಬಹು ಸುಲಭದಲ್ಲಿ ಭಗವಂತನಲ್ಲಿ ಶ್ರುತಿಗೂಡುತ್ತದೆ. ಹಿಮಾಲಯಕ್ಕೆ ಈ ಶಕ್ತಿ ಭಗವಂತನ ವಿಶೇಷ ಸನ್ನಿದಾನದಿಂದ ಬಂತು. ಭಗವಂತ ‘ಹಿಮಾಲಯಃ’ ನಾಮಕನಾಗಿ ಇಲ್ಲಿ ನೆಲೆಸಿದ್ದಾನೆ. ಭಗವಂತನ ಈ ನಾಮಕ್ಕೆ ವಿಶೇಷ ಅರ್ಥವಿದೆ. ಹ್ರೀ+ಮಾ+ಆಲಯ=ಹಿಮಾಲಯ. ಹ್ರೀ ಅಂದರೆ ಶ್ರೀಲಕ್ಷ್ಮಿ, ಮಾ ಅಂದರೆ ಭೂದೇವಿ. ಶ್ರೀದೇವಿ ಮತ್ತು ಭೂದೇವಿಯರ ಆಲಯನಾದ ಭಗವಂತ ಹಿಮಾಲಯಃ. ಭಗವಂತನ ಈ ವಿಶೇಷ ವಿಭೂತಿಯಿಂದಾಗಿ ಹಿಮಾಲಯದ ಕಣಕಣವೂ ಅಧ್ಯಾತ್ಮದ ವಿಸ್ಮಯದಿಂದ ತುಂಬಿದೆ. ಮನುಷ್ಯನ ಮನಃಪರಿವರ್ತನೆ ಮಾಡಿ ಆತನನ್ನು ಅಧ್ಯಾತ್ಮದತ್ತ ತಿರುಗಿಸುವ ವಿಶೇಷಶಕ್ತಿ ಹಿಮಾಲಯಕ್ಕಿದೆ. ವೇದವ್ಯಾಸರು, ನರ-ನಾರಾಯಣರು, ಆಚಾರ್ಯ ಮಧ್ವರು ನೆಲೆಸಿರುವ ತಾಣ ಹಿಮಾಲಯ. ಅನೇಕ ದೇವತೆಗಳು ನೆಲೆಸಿರುವ ನಿಗೂಢ ತಾಣ ಈ ಹಿಮಾಲಯ. ಭಗವಂತನ ವಿಭೂತಿ ಈ ನೆಲಕ್ಕೆ ಈ ಅದ್ಭುತ ಶಕ್ತಿಯನ್ನು ತಂದುಕೊಟ್ಟಿದೆ.

ಅಧ್ಯಾಯ - 10: ಶ್ಲೋಕ  26

ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ               ।

ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ       ॥೨೬॥

ಅಶ್ವತ್ಥಃ ಸರ್ವ ವೃಕ್ಷಾಣಾಮ್ ದೇವರ್ಷೀಣಾಮ್ ಚ ನಾರದಃ ।
ಗಂಧರ್ವಾಣಾಮ್ ಚಿತ್ರರಥಃ ಸಿದ್ಧಾನಾಮ್ ಕಪಿಲಃ ಮುನಿಃ –ಎಲ್ಲ ಮರಗಳಲ್ಲಿ ಅರಳಿಮರ ನಾನು.[ಅಶ್ವ=ಕುದುರೆಯ ರೂಪದಲ್ಲಿ ಸ್ಥ=ಇದ್ದುದರಿಂದ, ‘ಅಶ್ವತ್ಥ’ ಎನಿಸಿ ಅರಳಿಮರದಲ್ಲಿದ್ದೇನೆ.] ದೇವಲೋಕದ ಋಶಿಗಳಲ್ಲಿ ನಾರದ ನಾನು. [ನಾರ=ನರರ ಬಯಕೆಯೆಲ್ಲವನ್ನು ದ=ಕೊಡುವವನಾಗಿ ‘ನಾರದ’ ಎನ್ನಿಸಿ ನಾರದನಲ್ಲಿದ್ದೇನೆ.] ಗಂಧರ್ವರ ದೊರೆ ಚಿತ್ರರಥ ನಾನು. [ಚಿತ್ರ=ಅಚ್ಚರಿಯ, ರಥ=ತೇರಿನಲ್ಲಿ ಚರಿಸುವುದರಿಂದ ‘ಚಿತ್ರರಥ’ ಎನ್ನಿಸಿ ಗಂದರ್ವ ರಾಜ ಚಿತ್ರರಥನಲ್ಲಿದ್ದೇನೆ.] ಯೋಗಸಿದ್ಧರಲ್ಲಿ[ಕ=ಸುಖರೂಪನಾಗಿ, ಪಿ=ಪಾಲಿಸುವುದರಿಂದ, ಮತ್ತು ಲ=ಲಯಗೊಳಿಸುವುದರಿಂದ] ಕಪಿಲ ಮುನಿ ನಾನು.
ಕೃಷ್ಣ ಹೇಳುತ್ತಾನೆ: “ಸರ್ವ ವೃಕ್ಷಗಳಲ್ಲಿ  ಅಶ್ವತ್ಥ ನಾನು” ಎಂದು. 

ಅಶ್ವತ್ಥಮರ ಇಂದು ಮೇಲ್ನೋಟದಲ್ಲಿ ನೋಡುವವರಿಗೆ ಯಾವುದಕ್ಕೂ ಉಪಯೋಗವಿಲ್ಲದ ಮರ. ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿದ್ದರೆ ಈ ಮರದ ಬಗ್ಗೆ ನಮಗೆ ಏನೂ ತಿಳಿದಿರುತ್ತಿರಲಿಲ್ಲ. ಏಕೆಂದರೆ ಈ ಮರ ನಮಗೆ ತಿನ್ನುವ ಹಣ್ಣನ್ನಾಗಲಿ, ಸುಗಂಧವಾದ ಹೂವನ್ನಾಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೊಪಕರಣ ಮಾಡಲು ಸಾಧ್ಯವಿಲ್ಲ. ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ, ಮೇಲ್ನೋಟಕ್ಕೆ ಜನರಿಗೆ ಕಾಟ ಕೊಡುವ ಮರ! ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥ” ಎಂದು. ಏಕೆ  ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಈ ಮರವನ್ನು ನೆಟ್ಟರೆ ಪುಣ್ಯಬರುತ್ತದೆ ಎನ್ನುವ ಕಾರಣಕ್ಕೆ ಮನೆಯಿಂದ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರ ನೆಡುವುವವರಿದ್ದಾರೆ. ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನವರು ಆಲ, ಅರಳಿ ಮತ್ತು ಅತ್ತಿ ಈ ಮೂರು ಮರಗಳಿಗೆ ಬಹಳ ಮಹತ್ವ ಕೊಟ್ಟರು. [ಬೇಂದ್ರೆಯವರು ತಮ್ಮ ತೋಟದಲ್ಲಿ ಮೂಡಿಬಂದ ಈ ಮೂರು ಗಿಡಗಳನ್ನು ನೋಡಿ- “ನಮ್ಮ ತೋಟದಲ್ಲಿ ಭಗವಂತ ಮೂರು ರೂಪದಲ್ಲಿ ಬಂದಿದ್ದಾನೆ” ಎಂದು ಹೃದಯತುಂಬಿ ಹೇಳಿದ್ದನ್ನು ಇಲ್ಲಿ ಬನ್ನಂಜೆಯವರು ನೆನಪಿಸಿಕೊಂಡಿದ್ದಾರೆ].  

ಹಿಂದೆ ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿತೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿತೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ.

ಇಂದು ಹಲವರು ಅಶ್ವತ್ಥಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ. ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಹಿಂದಿನ ಕಾಲದಲ್ಲಿ ಋಷಿಗಳು ಅಶ್ವತ್ಥ ಮರದ ಬುಡದಲ್ಲಿ ಕುಳಿತು ವೇದಾಧ್ಯಾಯನ ಮಾಡುತ್ತಿದ್ದರು. ಹೀಗೆ ಅಶ್ವತ್ಥ ಮರದಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ಇಂಥಹ ಅನೇಕ ವಿಶೇಷ ಶಕ್ತಿಯನ್ನು ಕೊಟ್ಟಿದೆ.

ಇಲ್ಲಿ ಬಂದಿರುವ ಭಗವಂತನ ನಾಮ ‘ಅಶ್ವತ್ಥಃ’. ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನು ‘ಅಶ್ವತ್ಥಃ’ ಎಂದು ಕರೆಯುತ್ತಾರೆ.
ಮುಂದುವರಿದು ಕೃಷ್ಣ ಹೇಳುತ್ತಾನೆ ದೇವರ್ಷೀಣಾಂ ಚ ನಾರದಃ ಎಂದು. ನಾರದ ಗಂಧರ್ವರಲ್ಲಿ ಒಬ್ಬ. ಆದರೆ ಭಗವಂತನ ವಿಶೇಷ  ಸನ್ನಿಧಾನದಿಂದ ಆತ ತುಂಬಾ ಎತ್ತರಕ್ಕೇರಿ  ದೇವರ್ಷಿಯಾದ. ನಾರದ ಭಗವಂತನನ್ನು ಪಡೆದದ್ದು ಮಹಾ ಸಾಧನೆಯಿಂದ. ಹಿಂದಿನ ಬ್ರಹ್ಮಕಲ್ಪದಲ್ಲಿ ನಾರದ ಒಂದು ಬಡ ಕುಟುಂಬದಲ್ಲಿ ಹುಟ್ಟಿದ್ದ. 

ಆತನ ತಾಯಿ ಋಷಿ-ಮುನಿಗಳ ಆಶ್ರಮದಲ್ಲಿ ಕೆಲಸ ಮಾಡಿಕೊಂಡು ಬದುಕುತಿದ್ದಳು. ಪುಟ್ಟ ಮಗುವಾಗಿದ್ದ ಈತ ಋಷಿಗಳ ಅಧ್ಯಾತ್ಮ ಸಂಭಾಷಣೆಯನ್ನು ಕೇಳುತ್ತ ಬೆಳೆದ. ಈತ ಐದು ವರ್ಷದವನಿದ್ದಾಗ ಆತನ ತಾಯಿ ಹಾವು ಕಚ್ಚಿ ಸಾಯುತ್ತಾಳೆ. ತಿಳಿದವರು ಹೇಳುವಂತೆ- “ನಮಗೆ ದೇವರೇ ‘ನಾಥ’ ಎಂದು ಗೊತ್ತು ಮಾಡಿಸಲು  ಭಗವಂತ ನಮ್ಮನ್ನು ಮೊದಲು ‘ಅನಾಥ’ ಮಾಡುತ್ತಾನೆ”. ಹಾಗೆ ಅನಾಥನಾದ ಈತ  ತನ್ನ ಐದನೇ ವರ್ಷದಿಂದಲೇ, ಋಷಿಗಳಿಂದ ತಿಳಿದ ಜ್ಞಾನದಿಂದ ಸಾಧನೆ ಆರಂಭಿಸುತ್ತಾನೆ. ಆದರೆ ಆತನಿಗೆ ಆ ಜನ್ಮದಲ್ಲಿ ಭಗವಂತನ ದರ್ಶನವಾಗುವುದಿಲ್ಲ. ಆದರೆ ಆತ ಭಗವಂತನ ವಾಣಿಯನ್ನು ‘ಕೇಳಿದ’. “ಈ ಜನ್ಮದಲ್ಲಿ ನನ್ನನ್ನು ಕಾಣುವ ಪ್ರಯತ್ನ ಮಾಡಬೇಡ. ನೀನು ಮುಂದಿನ ಕಲ್ಪದಲ್ಲಿ ಸದಾ ನನ್ನನ್ನು ಕಾಣುವೆ” ಎಂದು. ನಂತರ ಈತ ಈ ಬ್ರಹ್ಮಕಲ್ಪದಲ್ಲಿ ನಾರದನಾಗಿ ಹುಟ್ಟಿ ಭಗವಂತನ ಮಹಾ ಅನುಗ್ರಹಕ್ಕೆ ಪಾತ್ರನಾದ.

ನಾರದರು ನಮ್ಮ ಅಂತಃಪ್ರಜ್ಞೆಯ ಅಭಿಮಾನಿ ದೇವತೆ. ಹಿಂದಿನ ಕಾಲದ ಕಥೆಗಳಲ್ಲಿ ಕಾಣುವಂತೆ ಯಾವುದಾದರು ಒಳ್ಳೆಯ ಕೆಲಸವಾಗಬೇಕಾದರೆ ಅಲ್ಲಿ ನಾರದರು ಬಂದು ಹೇಳಿ ಹೋಗುತ್ತಿದ್ದರು. ಉದಾಹರಣೆಗೆ ವಾಲ್ಮೀಕಿ ರಾಮಾಯಣ ಬರೆಯುವಂತೆ ಹೇಳಿ ಹೋದವರು ನಾರದರು. 

ಇಲ್ಲಿ ನಮಗೆ ಒಂದು ಪ್ರಶ್ನೆ ಬರುತ್ತದೆ. ಈಗ ಏಕೆ ನಾರದರು ಬರುವುದಿಲ್ಲ, ಏಕೆ ನಮಗೆ ಮಾರ್ಗದರ್ಶನ ಸಿಗುವುದಿಲ್ಲ ಎಂದು. ನಾರದರನ್ನು ನಾವು ಕರೆದರೆ ಖಂಡಿತ ಇವತ್ತಿಗೂ ಬರುತ್ತಾರೆ!  ‘ನಾರದ’ ಅಂದರೆ ನಮ್ಮ ಅಂತರಂಗದ ಧ್ವನಿ(intuitional flash). ನಾವು ನಮ್ಮ ಆತ್ಮದ ಕರೆಗೆ ಕಿವಿ ಕೊಟ್ಟರೆ ಅಲ್ಲಿ ನಾರದರು ಮಾತನಾಡುತ್ತಾರೆ. ನಾವು ನಮ್ಮ ಒಳಗಿನ ಸಂದೇಶವನ್ನು ಆಲಿಸಲು ಅಭ್ಯಾಸ ಮಾಡಿದರೆ ಆಗ ನಮ್ಮ ಆಜ್ಞಾಚಕ್ರ ತೆರೆದುಕೊಳ್ಳುತ್ತದೆ. ಇದರಿಂದ 'ಈ ರೀತಿ ಮಾಡು' ಎನ್ನುವ ಸಂದೇಶ(Divine Message) ಬರುತ್ತದೆ. ಇದೇ ಅಶರೀರವಾಣಿ ಅಥವಾ ಅಂತಃರ್ವಾಣಿ. ಇದೇ ನಾರದ. ಪ್ರತ್ಯಕ್ಷ ಕಾಣಲಾಗದಿದ್ದರೂ ಕೂಡ ಅವರನ್ನು ಕೇಳಬಹುದು. ನಾರದರಿಗೆ ಈ ಎಲ್ಲಾ ವಿಶಿಷ್ಠ ಶಕ್ತಿ ಭಗವಂತನ ವಿಶೇಷ ಸನ್ನಿಧಾನದಿಂದ  ಬಂತು.

ಇಲ್ಲಿ ಬಂದಿರುವ ಭಗವಂತನ ನಾಮ ‘ನಾರದಃ’. ನರರ ಅಜ್ಞಾನವನ್ನು ಕಳೆದು(ನಾರ-ಧ್ಯತಿ), ಅವರು ಬಯಸಿದ್ದನ್ನು ದಾರೆ ಎರೆಯುವ(ನಾರ-ದದಾತಿ) ಭಗವಂತ ನಾರದಃ.

ನಾರದರ ನಂತರ ಗಂಧರ್ವರಲ್ಲಿ ತನ್ನ ವಿಶೇಷ ವಿಭೂತಿಯನ್ನು ಕೃಷ್ಣ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ “ಗಂಧರ್ವರಲ್ಲಿ ಚಿತ್ರರಥ ನಾನು” ಎಂದು. ದೇವಲೋಕದ ಪರಿಚಾರಿಕೆ ಮಾಡುವ ಉಪದೇವತಾ ಗಣ ಗಂಧರ್ವರು. ಇವರು ಅವಾಂತರ ದೇವತೆಗಳು. ಈ ಗಣದ ರಾಜ ಚಿತ್ರರಥ. ‘ರಾಜಾ ಪ್ರತ್ಯಕ್ಷ ದೇವತಾ’ ಎನ್ನುವಂತೆ ಭಗವಂತ ಚಿತ್ರರಥನಲ್ಲಿ ವಿಶೇಷ ವಿಭೂತಿಯಾಗಿ ಸನ್ನಿಹಿತನಾಗಿದ್ದಾನೆ.  ಇಲ್ಲಿ ಬಂದಿರುವ ಭಗವಂತನ ನಾಮ ‘ಚಿತ್ರರಥಃ’.  ವಿಚಿತ್ರವಾದ ರಥ ಉಳ್ಳ ಭಗವಂತ ಚಿತ್ರರಥಃ. ಭಗವಂತನ ವಾಹನ-ಗರುಡ. ಇದು ಇತರ ಎಲ್ಲ ವಾಹನಗಳಿಗಿಂತ ವಿಶಿಷ್ಠ. ಇಂಥಹ ರಥದಲ್ಲಿ ಸಂಚರಿಸುವ ಭಗವಂತ ಚಿತ್ರರಥಃ.  

ಕೃಷ್ಣ ಹೇಳುತ್ತಾನೆ “ಸಿದ್ಧಾನಾಂ ಕಪಿಲೋ ಮುನಿಃ” ಎಂದು. ಇತಿಹಾಸದಲ್ಲಿ ಇಬ್ಬರು ಕಪಿಲಮುನಿಗಳು ಬರುತ್ತಾರೆ. ಇವರಿಬ್ಬರೂ ಸಾಂಖ್ಯವನ್ನು ಹೇಳಿದವರು. ಆದರೆ ಒಬ್ಬ ಭಗವಂತನನ್ನು ನಂಬದವ. ಆದ್ದರಿಂದ ಇಲ್ಲಿ ಬಂದಿರುವ ಕಪಿಲಮುನಿ-ಕಪಿಲ ವಾಸುದೇವ. ಸಾಂಖ್ಯವನ್ನು ಮೂಲತಃ ಜಗತ್ತಿಗೆ ಕೊಟ್ಟ ಸಾಕ್ಷಾತ್ ಭಗವಂತನ ಅವತಾರ. ಸ್ವಾಯಂಭುವ ಮನುವಿನ ಮಗಳು ದೇವಭೂತಿ ಹಾಗು ಕರ್ಧಮ ಪ್ರಜಾಪತಿಯ ದಾಂಪತ್ಯ ಫಲದಲ್ಲಿ ಮೂಡಿಬಂದ ಭಗವಂತನ ಅವತಾರ. ವೇದವ್ಯಾಸರು ಕೂಡಾ ಕಪಿಲ ಹೇಳಿರುವುದನ್ನೇ ನಮ್ಮ ಮುಂದೆ ಪ್ರಸ್ತುತಿ ಮಾಡಿರುವುದು. ಹೊಸತನ್ನು ಜಗತ್ತಿಗೆ ಕೊಟ್ಟ ಭಗವಂತನ ಅವತಾರ ‘ಕಪಿಲಾವತಾರ’.

ಇಲ್ಲಿ ಬಂದಿರುವ ಭಗವಂತನ ನಾಮ ‘ಕಪಿಲಃ’. ಕ-ಪಿ-ಲ; ಇಡೀ ಜಗತ್ತನ್ನು ಪಾಲಿಸುವ(ಪಿ), ಮತ್ತು ಲಯಗೊಳಿಸುವ(ಲ), ಆನಂದಮೂರ್ತಿ(ಕ) ಭಗವಂತ ಕಪಿಲಃ. ಸದಾ ಆನಂದವನ್ನು ಪಾನಮಾಡುವ, ಅದ್ಭುತವಾದ ಸಾಂಖ್ಯದ ಮೂಲಕ ವಿಶ್ವದ ರಹಸ್ಯವನ್ನು ತೆರೆದಿಟ್ಟ ಭಗವಂತ ‘ಕಪಿಲಃ’.    

ಅಧ್ಯಾಯ - 10: ಶ್ಲೋಕ  27-29

ಋಷಿ, ಬ್ರಹ್ಮರ್ಷಿ, ದೇವರ್ಷಿ, ಮಹರ್ಷಿಗಳು ಹೀಗೆ ಬ್ರಹ್ಮ ತೇಜಸ್ಸು ಮತ್ತು ಅವರು ಮಾಡುವ ವೇದಾಧ್ಯಾಯನ, ತಪಸ್ಸು, ಯಜ್ಞ-ಎಲ್ಲದರ ಬಗ್ಗೆ  ಹೇಳಿದ ಕೃಷ್ಣ, ಮುಂದಿನ ಶ್ಲೋಕದಲ್ಲಿ  ಕ್ಷಾತ್ರತೇಜಸ್ಸಿನ ಬಗ್ಗೆ ಹೇಳುತ್ತಾನೆ.                     
                  

ಅಧ್ಯಾಯ - 10: ಶ್ಲೋಕ 27

ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್    ।

ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್     ॥೨೭॥

ಉಚ್ಚೈಃಶ್ರವಸಮ್ ಅಶ್ವಾನಾಮ್ ವಿದ್ಧಿ ಮಾಮ್ ಅಮೃತ ಉದ್ಭವಮ್  ।
ಐರಾವತಮ್ ಗಜೇಂದ್ರಾಣಾಮ್ ನರಾಣಾಮ್ ಚ ನರಾಧಿಪಮ್—

ಕುದುರೆಗಳಲ್ಲಿ ಕಡಲಲ್ಲಿ ಮೂಡಿಬಂದ ಉಚ್ಚೈಃಶ್ರವಸ್ಸನ್ನು, ಹಿರಿಯಾನೆಗಳಲ್ಲಿ ಐರಾವತವನ್ನು, ಮನುಜರಲ್ಲಿ ಒಡೆಯನಾದ ಅರಸನನ್ನು[ಉನ್ನತಕೀರ್ತಿ ಪಡೆದು ‘ಉಚ್ಚೈಃಶ್ರವಸ್’ ಎನ್ನಿಸಿ ಉಚ್ಚೈಃಶ್ರವದಲ್ಲಿರುವವನು, ಐರಾ=ಲಕ್ಷ್ಮಿಗೆ, ಅವನ=ರಕ್ಷಕನಾಗಿ ‘ಐರಾವತ’ ಎನ್ನಿಸಿ ಐರಾವತದಲ್ಲಿರುವವನು, ನರರಿಗೆಲ್ಲ ಒಡೆಯನಾದ್ದರಿಂದ ‘ನರಾಧಿಪ’ ಎನ್ನಿಸಿ ಅರಸನಲ್ಲಿರುವವನು] ನಾನೆಂದು ತಿಳಿ.

ಹಿಂದೆ ಸೇನೆಯಲ್ಲಿ ಮುಖ್ಯವಾದ ಅಂಗಗಳಾಗಿ ಕುದುರೆ ಮತ್ತು  ಆನೆಗಳನ್ನು ರಾಜರು ಬಳಸುತ್ತಿದ್ದರು. ಕೃಷ್ಣ ಈ ಶ್ಲೋಕದಲ್ಲಿ ಕುದುರೆ, ಆನೆ ಮತ್ತು ರಾಜರಲ್ಲಿ ತನ್ನ ವಿಶೇಷ ವಿಭೂತಿಯನ್ನು ಹೇಳಿದ್ದಾನೆ. ಕೃಷ್ಣ ಹೇಳುತ್ತಾನೆ “ಸಮುದ್ರ ಮಥನದಲ್ಲಿ ಅಮೃತದ ಜೊತೆಗೆ ಹುಟ್ಟಿದ ಅಶ್ವ ‘ಉಚ್ಚೈಃಶ್ರವಸ್ಸು’ ಮತ್ತು ಹಿರಿಯಾನೆ ‘ಐರಾವತ’ ನಾನೆಂದು ತಿಳಿ” ಎಂದು. ಈ ಎರಡೂ ಪ್ರಾಣಿಗಳು ಬಹಳ ವಿಶೇಷ ಪ್ರಾಣಿಗಳು. ಕುದುರೆ ಮತ್ತು ಆನೆ  ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗಳು. ಇವು ತನ್ನನ್ನು ಪ್ರೀತಿಯಿಂದ ಸಾಕುವ ಧನಿಗೆ ಎಂದೂ ಮೋಸ ಮಾಡುವುದಿಲ್ಲ. ಇನ್ನು ನರರಲ್ಲಿ ಶ್ರೇಷ್ಠ ‘ನರಾಧಿಪ’. 

ಮನುಕುಲಕ್ಕೆ ನಾಯಕರಾಗಿ ನಿಂತು ಧರ್ಮನಿಷ್ಠರಾಗಿ ಜನಪಾಲನೆ ಮಾಡುವ ಮುಖಂಡರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಹಿಂದೆ ರಾಜ್ಯಭಾರ ಮಾಡಿದ ಧರ್ಮರಾಜ, ಪರೀಕ್ಷಿತ ಇತ್ಯಾದಿ ರಾಜರನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.

ಇಲ್ಲಿ ಬಂದಿರುವ ಭಗವಂತನ ಹೆಸರು ಉಚ್ಚೈಃಶ್ರವಸ್ಸು, ಐರಾವತಃ ಮತ್ತು ನರಾಧಿಪಃ. ‘ಶ್ರವಸ್ಸು’ ಎಂದರೆ ಕೀರ್ತಿ, ಜ್ಞಾನ, ಕರ್ಮ. ಹಬ್ಬಿರುವ ಕೀರ್ತಿ ಹೊಂದಿರುವ, ಮಹಾಜ್ಞಾನಿಯಾದ ಭಗವಂತ ಈ ಸೃಷ್ಟಿ-ಸ್ಥಿತಿ-ಸಂಹಾರವೆಂಬ ಮಹಾಕರ್ಮವನ್ನು ಸದಾ ಮಾಡುತ್ತಿರುವ ‘ಉಚ್ಚೈಃಶ್ರವಸ್ಸು’ . ಐರಾ ಎಂದರೆ ಭೂದೇವಿಯಲ್ಲಿ ಸನ್ನಿಹಿತಳಾಗಿರುವ ಲಕ್ಷ್ಮಿ. ಇಂತಹ ಲಕ್ಷ್ಮಿಗೆ ಪತಿಯಾಗಿರುವ ಭಗವಂತ ‘ಐರಾವತಃ’. ನರರಿಗೆ, ಸರ್ವ ಜೀವಜಾತಕ್ಕೆ ಅಧಿಪತಿಯಾಗಿ, ಅರಸರಲ್ಲಿ ಸನ್ನಿಹಿತನಾಗಿರುವ ಭಗವಂತ ‘ನರಾಧಿಪಃ’. 

ಅಧ್ಯಾಯ - 10: ಶ್ಲೋಕ  28

ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।

ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥೨೮॥

ಆಯುಧಾನಾಮ್ ಅಹಮ್ ವಜ್ರಮ್ ಧೇನೂನಾಮ್ ಅಸ್ಮಿ ಕಾಮಧುಕ್ ।
ಪ್ರಜನಃ ಚ ಅಸ್ಮಿ ಕಂದರ್ಪಃ ಸರ್ಪಾಣಾಮ್ ಅಸ್ಮಿ ವಾಸುಕಿಃ – 

ಆಯುಧಗಳಲ್ಲಿ ವಜ್ರಾಯುಧ ನಾನು. [ಅರಿವರ್ಜಿತನಾದ್ದರಿಂದ ‘ವಜ್ರ’ ಎನ್ನಿಸಿ ವಜ್ರಾಯುಧದಲ್ಲಿದ್ದೇನೆ.] ಹಸುಗಳಲ್ಲಿ ಕಾಮಧೇನು ನಾನು. [ಕಾಮ=ಬಯಸಿದ್ದನ್ನು, ಧುಕ್=ಕರೆಯುವುದರಿಂದ ‘ಕಾಮಧುಕ್’ ಎನ್ನಿಸಿ ಕಾಮಧೇನುವಿನಲ್ಲಿದ್ದೇನೆ.] ಸಂತಾನವನ್ನೀಯುವ ಕಾಮದೇವ [ಕಂ=ಸುಖದ, ದರ=ಹಲವು ಬಗೆಗಳನ್ನು, ಪ=ಉಣ್ಣಿಸುವುದರಿಂದ ‘ಕಂದರ್ಪ’ ಎನ್ನಿಸಿ ಕಾಮದೇವನಲ್ಲಿದ್ದು ಅವನಿಗೆ ಹುಟ್ಟಿನ ಸೆಳೆತದ ಶಕ್ತಿಯನ್ನಿತ್ತವನು] ನಾನು. ಹಾವುಗಳಲ್ಲಿ ವಾಸುಕಿ ನಾನು. [ವಾಸು=ಎಲ್ಲೆಡೆ ವಾಸಮಾಡಿ, ಕಿ=ಸುಖವನ್ನೀಯುವುದರಿಂದ ‘ವಾಸುಕಿ’ ಎನ್ನಿಸಿ ವಾಸುಕಿಯಲ್ಲಿದ್ದೇನೆ.]

ಆಯುಧಗಳಲ್ಲಿ ಸರ್ವಶ್ರೇಷ್ಠ ಆಯುಧ ಭಗವಂತ ಧರಿಸುವ ಸುದರ್ಶನ. ಭಗವಂತನ ಆಯುಧವನ್ನು ಬಿಟ್ಟರೆ ಶ್ರೇಷ್ಠ ಆಯುಧ ವಜ್ರಾಯುಧ. ಕೃಷ್ಣ ಹೇಳುತ್ತಾನೆ “ಆಯುಧಗಳಲ್ಲಿ ವಜ್ರಾಯುಧ ನಾನು” ಎಂದು. ಈ ವಜ್ರಾಯುಧ ಇಂದ್ರನ ಆಯುಧ. ಇದಕ್ಕೆ ಮೂರು ಲೋಕವನ್ನು ನಿಯಂತ್ರಿಸುವ ಶಕ್ತಿಯನ್ನು ಭಗವಂತ ಕೊಟ್ಟ.  ವ್ರತ್ರನನ್ನು ಸಂಹಾರ ಮಾಡಲು ಭಗವಂತನ ಆದೇಶದಂತೆ ದಧೀಚಿ ಎನ್ನುವ ಮುನಿಯ ಪೂರ್ಣ ತಪಸ್ಸಿನ ಫಲವನ್ನು ಆವಾಹನೆ ಮಾಡಿ ನಿರ್ಮಾಣಗೊಂಡ ಆಯುಧ ವಜ್ರಾಯುಧ. ಮಳೆ ಬಂದಾಗ ಕಾಣುವ ಸಿಡಿಲು-ಮಿಂಚನ್ನು ವಜ್ರಾಯುಧದ ಪ್ರತೀಕವೆನ್ನುತ್ತಾರೆ. ಈ ಆಯುಧದಲ್ಲಿ ಭಗವಂತ ‘ವಜ್ರಃ’ ನಾಮಕನಾಗಿ ಸನ್ನಿಹಿತನಾಗಿದ್ದಾನೆ. ‘ವರ್ಜನಾತ್ ಇತಿ ವಜ್ರಃ’. ಶತ್ರುಗಳನ್ನು, ಸಮಸ್ತ ದೋಷವನ್ನು, ವರ್ಜನೆ ಮಾಡುವ ಭಗವಂತ ವಜ್ರಃ.

ಅಸ್ತ್ರದ ಬಗ್ಗೆ ಹೇಳಿದ ಕೃಷ್ಣ ಮುಂದೆ ವಿಶ್ವಾಮಿತ್ರನ ಸಮಸ್ತ ಅಸ್ತ್ರವನ್ನು ನಾಶಮಾಡಿದ ವಸಿಷ್ಠಮುನಿಯ ಕಾಮಧೇನುವಿನ ಬಗ್ಗೆ ಹೇಳುತ್ತಾನೆ. ಪ್ರಾಣಿಗಳಲ್ಲೇ ಶ್ರೇಷ್ಠ ಪ್ರಾಣಿ-ಧೇನು(ಹಸು). ನಮ್ಮ ಜೀವಮಾನವಿಡೀ ನಮಗೆ ಹಾಲುಣಿಸಿ ಪೋಷಿಸುವ ಭಗವಂತನ ವಿಶಿಷ್ಠ ವಿಭೂತಿ ಹಸು. ಈ ಕಾರಣಕ್ಕಾಗಿ ಕೃಷ್ಣ ಬಾಲಕನಿದ್ದಾಗಿ ಗೋಪೂಜೆಯನ್ನು ಚಾಲ್ತಿಗೆ ತಂದ. ಹಸುವಿನ ಮಲ-ಮೂತ್ರ ಕೂಡ ತ್ಯಾಜ್ಯವಲ್ಲ. ಯಾವುದರಿಂದಲೂ ಗುಣವಾಗದ ಚರ್ಮರೋಗಕ್ಕೆ ಗೋಮಯ ಮತ್ತು  ಮೃತ್ತಿಕೆ(ಕೆಂಪು ಮಣ್ಣು)ಯಿಂದ ಸ್ನಾನ ಮಾಡಿದರೆ ಆ ರೋಗ ಗುಣವಾಗುತ್ತದೆ. ಮನೆ ಮುಂದೆ ಸಗಣಿ ಸಾರಿಸುವುದರಿಂದ  ಅಲ್ಲಿ ಕ್ರಿಮಿ ಕೀಟ ಇಲ್ಲವಾಗುತ್ತದೆ.  ಗೋಮಯದಲ್ಲಿ ಲಕ್ಷ್ಮಿಯ ಸನ್ನಿಧಾನವಿದೆ ಎಂದು ಮಹಾಭಾರತದಲ್ಲಿ ಬರುವ ಒಂದು ಕಥೆಯಲ್ಲಿ ಹೇಳಲಾಗಿದೆ. ಹೀಗೆ ಅನೇಕಾನೇಕ ಉಪಯೋಗ ಹಸುವಿನಿಂದ. ಭಗವಂತ ಬಯಸಿದ್ದನ್ನು ಕೊಡುವ ‘ಕಾಮಧುಕ್’ ನಾಮಕನಾಗಿ ಕಾಮಧೇನುವಿನಲ್ಲಿ ವಿಭೂತಿಯಾಗಿ ನಿಂತ.

ಈ ಪ್ರಪಂಚದಲ್ಲಿರುವ ಜೀವಿಗಳಲ್ಲಿ  ಗಂಡು-ಹೆಣ್ಣಿನ ನಡುವೆ ಹುಟ್ಟಿನ ಸೆಳೆತ(Sexual desire)ವಾಗಿ ನಿಂತಿರುವವ- ಸಂತಾನವನ್ನೀಯುವ ಕಾಮದೇವ. ಈ ಕಾಮದೇವ(ಕಂದರ್ಪ)ನಲ್ಲಿ ಭಗವಂತನ ವಿಶಿಷ್ಠ ಶಕ್ತಿ ಅಡಗಿದೆ. ಸೃಷ್ಟಿಯಲ್ಲಿ ಸಂತಾನ ಕ್ರಿಯೆ ನಡೆಯುವುದಕ್ಕೋಸ್ಕರ ಅಧಮ್ಯ ಬಯಕೆಯನ್ನು ಎಲ್ಲರೊಳಗೆ ತುಂಬಿ, ಅಲ್ಲಿ ಭಗವಂತ ಕೂತ. ಈ ಕಾರಣದಿಂದ ಭಗವಂತನ ಅನುಗ್ರಹವಿಲ್ಲದೆ ಲೀಲಾಜಾಲವಾಗಿ ಯಾರೂ ಕೂಡ ಈ ಶಕ್ತಿಯಿಂದೀಚೆಗೆ ಬರಲಾರರು. ಬಲವಂತವಾಗಿ ಅದನ್ನು ಬಿಡಲಾಗದು. ಭಗವಂತ ಕಂದರ್ಪಃ ನಾಮಕನಾಗಿ ಕಾಮದೇವನಲ್ಲಿ ತುಂಬಿದ್ದಾನೆ. ಮನುಷ್ಯನಿಗೆ ಅನೇಕ ರೀತಿಯ ಬಯಕೆಗಳನ್ನು ಕೊಟ್ಟು, ಆ ಬಯಕೆಯಿಂದ ಅವರನ್ನು ಸಂತೃಪ್ತಿಗೊಳಿಸಿ, ವಿಚಿತ್ರ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸುವ ಭಗವಂತ ‘ಕಂದರ್ಪಃ’.

ಕಾಮದೇವ-ಮನ್ಮಥನ  ನಂತರ ಕಾಮದ ಸಂಕೇತವಾದ ಸರ್ಪದ ಬಗ್ಗೆ ಕೃಷ್ಣ ವಿವರಿಸುತ್ತಾನೆ. ಹೊಟ್ಟೆಯನ್ನು ಹೊಸೆದುಕೊಂಡು ಹೋಗುವ ಸರೀಸೃಪವನ್ನು ಸರ್ಪ ಎನ್ನುತ್ತಾರೆ. ಸರೀಸೃಪಗಳಿಗೆಲ್ಲ  ರಾಜ ವಾಸುಕಿ. ಭಗವಂತ ‘ವಾಸುಕಿಃ’ ನಾಮಕನಾಗಿ ನಿಂತು, ವಾಸುಕಿಗೆ ಈ ಸ್ಥಾನವನ್ನು ಕೊಟ್ಟ. ಭಗವಂತ ಇಲ್ಲದ ಸ್ಥಳವಿಲ್ಲ. ಎಲ್ಲೆಡೆ ವಾಸಮಾಡುವ ಭಗವಂತ ‘ವಾಸುಕಿಃ.’.

ಅಧ್ಯಾಯ - 10: ಶ್ಲೋಕ  29

ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್  ।

ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ॥೨೯॥

ಅನಂತಃ ಚ ಅಸ್ಮಿ ನಾಗಾನಾಮ್ ವರುಣಃ ಯಾದಸಾಮ್ ಅಹಮ್     ।
ಪಿತೄಣಾಮ್ ಅರ್ಯಮಾ ಚ ಅಸ್ಮಿ ಯಮಃ ಸಂಯಮತಾಮ್ ಅಹಮ್ –

ನಾಗರಹಾವುಗಳಲ್ಲಿ ಶೇಷ ನಾನು. [ಅಳಿವಿರದ್ದರಿಂದ ‘ಅನಂತ’ ಎನ್ನಿಸಿ ಶೇಷನಲ್ಲಿದ್ದೇನೆ.] ಜಲಚರಗಳ ಒಡೆಯ ವರುಣ [ವರ=ಹಿರಿದಾದ, ಣ=ಆನಂದಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು ಅವನಿಗೆ ಜಲಚರಗಳ ಒಡೆತನವನ್ನಿತ್ತವನು] ನಾನು. ಪಿತೃದೇವತೆಗಳಲ್ಲಿ ಅರ್ಯಮ ನಾನು. [ಅರ್ಯ=ಅರಿಯಬೇಕಾದವನು ಮತ್ತು ಮಾ=ಅರಿತವನು ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ.] ದಂಡಿಸುವವರಲ್ಲಿ ಯಮ[ನಿಯಮಿಸುವುದರಿಂದ ‘ಯಮ’ ಎನ್ನಿಸಿ, ಯಮನಲ್ಲಿದ್ದು ಅವನಿಗೆ ಪಾಪಿಗಳನ್ನು ದಂಡಿಸುವ ಹೊಣೆಯಿತ್ತವನು]ನಾನು.

ಸರ್ಪಗಳ ಜಾತಿಯಲ್ಲಿ ಹೆಡೆ ಉಳ್ಳದ್ದು ‘ನಾಗರ’. ನಾಗರದಲ್ಲಿ ಅತ್ಯಂತ ಶ್ರೇಷ್ಠ ‘ಶೇಷ’. ಬಲರಾಮನಾಗಿ, ಲಕ್ಷ್ಮಣನಾಗಿ, ಸದಾ ಭಗವಂತನ ಹಾಸಿಗೆಯಾಗಿ ಇರುವ ಬಹಳ ದೊಡ್ಡ ದೇವತೆ ಶೇಷ. ಶೇಷ ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ. ಹೀಗಾಗಿ ಭೂಮಿಯನ್ನು ಶೇಷ ಹೊತ್ತಿದ್ದಾನೆ ಎನ್ನುತ್ತಾರೆ. ಇಂತಹ ಶೇಷನಲ್ಲಿ ಭಗವಂತ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಹೆಡೆಯಿರುವ ಹಾವುಗಳಿಗೆಲ್ಲ ಮೂಲಶಕ್ತಿಯಾಗಿ ಶೇಷನಲ್ಲಿ ತುಂಬಿದ, ಎಂದೂ ಅಳಿವಿರದ ಶೇಷಶಯನ ಭಗವಂತ ‘ಅನಂತಃ’.

“ಜಲಚರ ಪ್ರಾಣಿಗಳಲ್ಲಿ ಅವುಗಳ ಒಡೆಯ ‘ವರುಣ’ ನಾನು”  ಎನ್ನುತ್ತಾನೆ ಕೃಷ್ಣ. ನೀರಿನ ಆವರಣದಲ್ಲಿ ಅನೇಕ ಜಲಚರ ಪ್ರಾಣಿಗಳಿಗೆ ಬದುಕು ಕೊಡುವ ವರುಣನೊಳಗೆ ವಿಶೇಷ ವಿಭೂತಿಯಾಗಿ ಭಗವಂತ ತುಂಬಿದ. ಇಲ್ಲಿ ಬರುವ ಭಗವಂತನ ನಾಮ ವರುಣಃ. ಹಿರಿದಾದ ಆನಂದ ಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು, ಅವನಿಗೆ ಜಲಚರಗಳ ಒಡೆತನವಿತ್ತ ಭಗವಂತ ‘ವರುಣಃ’.

ಭೂಮಿಯಿಂದ ದೇಹತ್ಯಾಗ ಮಾಡಿ ಹೋದ ಜೀವಗಳನ್ನು ನಿಯಂತ್ರಿಸುವ ದೇವತಾ ಶಕ್ತಿ-ಪಿತೃದೇವತೆಗಳು. ಅವರಲ್ಲಿ ಅವರ ಮುಖಂಡನಾದ, ದ್ವಾದಶಾದಿತ್ಯರಲ್ಲಿ ಒಬ್ಬ ಅರ್ಯಮನಲ್ಲಿ ಭಗವಂತ ವಿಶೇಷ ಶಕ್ತಿಯಾಗಿ ನಿಂತ. “ಅರಿಯಬೇಕಾದವನು(ಅರ್ಯ) ಮತ್ತು ಅರಿತವನು(ಮಾ) ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ”  ಎನ್ನುತ್ತಾನೆ ಕೃಷ್ಣ.

ಪಾಪ ಮಾಡಿದ ಜೀವಗಳನ್ನು ನಿಯಂತ್ರಿಸುವವ ಯಮ. ಯಮನೊಳಗೆ ಭಗವಂತನ ವಿಶೇಷ ಸನ್ನಿಧಾನವಿದೆ. ಯಮನಲ್ಲಿದ್ದು ನಿಯಮಿಸುವ ಭಗವಂತ ‘ಯಮಃ’. ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಹೇಳುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಈ ಐದು ನಿಯಮಗಳನ್ನು ಕೊಟ್ಟ ಭಗವಂತ ಯಮಃ. ಇಡೀ ಜಗತ್ತನ್ನು ನಿಯಂತ್ರಿಸುವ, ಯಮಧರ್ಮನನ್ನೂ ನಿಯಂತ್ರಿಸುವ ಭಗವಂತ ಯಮಃ.

ಅಧ್ಯಾಯ - 10: ಶ್ಲೋಕ  30

ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್     ।

ಮೃಗಾಣಾಂ ಚ ಮೃಗೇಂದ್ರೋSಹಂ ವೈನತೇಯಶ್ಚ ಪಕ್ಷಿಣಾಮ್ ॥೩೦॥

ಪ್ರಹ್ಲಾದಃ ಚ ಅಸ್ಮಿ ದೈತ್ಯಾನಾಮ್  ಕಾಲಃ ಕಲಯತಾಮ್ ಅಹಮ್     ।
ಮೃಗಾಣಾಮ್  ಚ ಮೃಗೇಂದ್ರಃ ಅಹಮ್  ವೈನತೇಯಃ ಚ  ಪಕ್ಷಿಣಾಮ್ –

ದಿತಿಯ ವಂಶದವರಲ್ಲಿ ಹಿರಿಯನಾದ ಪ್ರಹ್ಲಾದ ನಾನು [ಹಿರಿಯ ಆನಂದದಿಂದ ‘ಪ್ರಹ್ಲಾದ’ ಎನ್ನಿಸಿ ಪ್ರಹ್ಲಾದನಲ್ಲಿದ್ದೇನೆ.] ಲೆಕ್ಕಿಗರಲ್ಲಿ ಕಾಲ ನಾನು. [ಕೊಲ್ಲುವವನಾದ್ದರಿಂದ ‘ಕಾಲ’ ಎನ್ನಿಸಿ ಕಾಲದೇವತೆಯಲ್ಲಿದ್ದೇನೆ.] ಮೃಗಗಳಲ್ಲಿ ಸಿಂಹ ನಾನು. [ಮೃಗ=ಭಗವಂತನನ್ನರಸುವ ಭಕ್ತರಿಗೆ, ಇಂದ್ರ =ಒಡೆಯನಾದ್ದರಿಂದ ‘ಮೃಗೇಂದ್ರ’ ಎನ್ನಿಸಿ ಸಿಂಹದಲ್ಲಿದ್ದೇನೆ.] ಹಕ್ಕಿಗಳಲ್ಲಿ ಗರುಡ ನಾನು. [ವಿನತ =ಶರಣಾದವರಿಗೆ  ಆಸರೆಯಾಗಿ ‘ವೈನತೇಯ’ ಎನ್ನಿಸಿ ಗರುಡನಲ್ಲಿದ್ದೇನೆ.]
ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದೆ, ದುರ್ಜನರಲ್ಲೂ ಇದೆ.  ದೈತ್ಯರಿಗೆ ಬಲವನ್ನು ಕೊಡುವವನೂ ಭಗವಂತ. 

ಸಾಮಾನ್ಯವಾಗಿ ದೈತ್ಯರು ಇನ್ನೊಬ್ಬರ ಬದುಕನ್ನು ಹಾಳುಗೆಡುವವರು. ಆದರೆ ಇಂಥಹ ದೈತ್ಯವಂಶದ ಆದಿಯಲ್ಲಿ ಹುಟ್ಟಿದ ಪ್ರಹ್ಲಾದ-ಎಲ್ಲರಿಗಿಂತ ಭಿನ್ನ. ಇದಕ್ಕೆ ಕಾರಣ ಭಗವಂತ ಈತನಲ್ಲಿ ವಿಶೇಷವಾಗಿ ಸನ್ನಿಧಾನವಿತ್ತಿರುವುದು. ದೈತ್ಯ ವಂಶದಲ್ಲಿ ಹುಟ್ಟಿ, ಆ ಸ್ವಭಾವದಿಂದ ಕಳಚಿಕೊಂಡು ಬಹಳ ಎತ್ತರಕ್ಕೇರಿದವ  ಪ್ರಹ್ಲಾದ. ಈ ಕಾರಣದಿಂದ ದೈತ್ಯರಲ್ಲೇ ವಿಶೇಷ ವಿಭೂತಿ ಈತ. ಪ್ರಹ್ಲಾದನ ಮೇಲೆ ಭಗವಂತನ ವಿಶೇಷ ಅನುಗ್ರಹ. ಆತ ಗರ್ಭದಲ್ಲಿದ್ದಾಗಲೇ ಆತನಿಗೆ ದೇವರ್ಷಿ ನಾರದರ ಮೂಲಕ ಅಧ್ಯಾತ್ಮ ಉಪದೇಶ ಪಡೆಯುವ ಭಾಗ್ಯ ದೊರೆಯಿತು. ಈತ ದ್ರುವನಂತೆ ತನ್ನ ಐದನೇ ವಯಸ್ಸಿನಲ್ಲಿ ದೇವರನ್ನು ಕಂಡ ಸಾಧಕ. ಪ್ರಹ್ಲಾದನ ಮುಖೇನ ಪ್ರಪಂಚಕ್ಕೆ ಭಗವಂತ ಬಹಳ ಮುಖ್ಯವಾದ ಸಂದೇಶವನ್ನು ನೀಡಿದ್ದಾನೆ. 

‘ಭಗವಂತ ಭಯಾನಕ ಅಲ್ಲ, ಪ್ರೀತಿಯಿಂದ ಭಗವಂತನ ಬಳಿಗೆ ಹೋದರೆ ಆತ ನಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾನೆ; ಭಗವಂತನ ಪೂಜೆ ಒಂದು ವ್ಯಾಪಾರವಲ್ಲ, ನಮ್ಮ ಯಾವುದೋ ಬಯಕೆಯನ್ನು ಸಾಧಿಸಿಕೊಳ್ಳುವುದಕ್ಕೋಸ್ಕರ ನಾವು ದೇವರ ಪೂಜೆ ಮಾಡಬಾರದು; ನಮ್ಮ ನಿಷ್ಕಾಮ ಭಕ್ತಿ ಭಗವಂತನಿಗೆ ಇಷ್ಟ; ಈ ರೀತಿ ಭಗವಂತನನ್ನು ಪೂಜಿಸುವುದರಿಂದ ನಾವು ಸದಾ ಆನಂದದಿಂದಿರಬಹುದು’ ಎನ್ನುವ ಸತ್ಯವನ್ನು ಪ್ರಹ್ಲಾದ ಪ್ರಪಂಚಕ್ಕೆ ತೋರಿಸಿಕೊಟ್ಟ. ಇಲ್ಲಿ ಬರುವ ಭಗವಂತನ ನಾಮ ಪ್ರಹ್ಲಾದಃ. ಎಂದೂ ದುಃಖವಿಲ್ಲದ ಪೂರ್ಣವಾದ ಆನಂದಮೂರ್ತಿ ಭಗವಂತ ಪ್ರಹ್ಲಾದಃ.

ಕೃಷ್ಣ ಹೇಳುತ್ತಾನೆ: “ಕಾಲಃ ಕಲಯತಾಮ್ ಅಹಮ್” ಎಂದು. ಈ ಜಗತ್ತಿನಲ್ಲಿ ಅನಾಧಿ ಅನಂತ ಕಾಲದಲ್ಲಿ ನಡೆಯತಕ್ಕ ಪ್ರತಿಯೊಂದು ಹುಟ್ಟು-ಸಾವು ಪೂರ್ವನಿಶ್ಚಿತ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಕಾಲ ಎನ್ನುವ ಪದ ಲೆಕ್ಕ, ಮೃತ್ಯು, ಶಿವ, ದುರ್ಗೆ, ಕಾಲಾಗ್ನಿ, ಇತ್ಯಾದಿ ಅನೇಕ ಅರ್ಥವನ್ನು ಕೊಡುತ್ತದೆ. ಇವೆಲ್ಲದರಲ್ಲೂ ಭಗವಂತನ ವಿಶೇಷ ವಿಭೂತಿ ಅಡಗಿದೆ. ಭಗವಂತ ಕಾಲಃ ನಾಮಕನಾಗಿ ‘ಕಾಲ’ದಲ್ಲಿ ತುಂಬಿದ್ದಾನೆ. ಕಾಲ ಎನ್ನುವುದು 'ಕಲ' ಎನ್ನುವ ಧಾತುವಿನಿಂದ ಬಂದ ಪದ. ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ 'ಕಲೆ' ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ 'ಕಾಲ ಪುರುಷನಾಗಿ' ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ನಮ್ಮ ಉದ್ಧಾರ ಕೆಲವೊಮ್ಮೆ'ಬದುಕಿನಲ್ಲಿ'ದ್ದರೆ ಇನ್ನು  ಕೆಲವೊಮ್ಮೆ ನಮ್ಮ 'ಸಾವಿನಲ್ಲಿ'; ಕೆಲವೊಮ್ಮೆ ನಮ್ಮ 'ಮಾನದಲ್ಲಿ', ಇನ್ನು ಕೆಲವೊಮ್ಮೆ ನಮ್ಮ 'ಅವಮಾನದಲ್ಲಿ'.; ಕೆಲವೊಮ್ಮೆ ನಮ್ಮ 'ಜ್ಞಾನದಲ್ಲಿ' ನಮ್ಮ ಉದ್ಧಾರವಿದ್ದರೆ, ಇನ್ನು ಕೆಲವೊಮ್ಮೆ ನಮ್ಮ 'ಅಜ್ಞಾನದಲ್ಲಿ' ನಮ್ಮ ಉದ್ಧಾರವಿರುತ್ತದೆ. 

ಆದರೆ ನಮ್ಮ 'ಅಹಂಕಾರದಲ್ಲಿ' ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿದಾಗ ಭಗವಂತ 'ಕಾಲ ಪುರುಷನಾಗಿ' ಬೆಳೆದು ನಿಲ್ಲುತ್ತಾನೆ. ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ 'ಸಮಯ'. ಪ್ರತಿಯೊಂದು ಕ್ರಿಯೆಯ ಹಿಂದೆ 'ಕಾಲ' ಸರ್ವ ಕಾರಣವಾಗಿರುತ್ತದೆ. ಕಾಲನಿಯಾಮಕ ಭಗವಂತ ಕಾಲಃ. ಜ್ಞಾನಕಾರಕವಾದ ಅವತಾರಗಳಿಂದ (ವ್ಯಾಸ,ಕಪಿಲ,ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ 'ಕಾಲವಾದ' ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ,ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ'ಕಾಲನಾದ'. ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗು ಕಾಲನಿಯಾಮಕ ಭಗವಂತ ಕಾಲಃ.

ಸಂಹಾರ ಶಕ್ತಿಯಾಗಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ಪ್ರಾಣಿಗಳಲ್ಲಿ ಬಹಳ ಉಗ್ರ ಮತ್ತು ಬಲಿಷ್ಠ ಪ್ರಾಣಿಯಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಭೂಮಿಯಲ್ಲಿ ಹೆಚ್ಚು ಬಲಿಷ್ಠ ಮತ್ತು ದೊಡ್ಡ ಪ್ರಾಣಿ ಆನೆ. ಆದರೆ ಇಂಥಹ ಆನೆಯನ್ನೂ ಕೂಡಾ ಸಂಹಾರ ಮಾಡಬಲ್ಲ ಕಾಡಿನ ರಾಜ ಮೃಗೇಂದ್ರ-ಸಿಂಹ. ಮೃಗಗಳಲ್ಲೇ ಶ್ರೇಷ್ಠ ಮೃಗ ಎನ್ನಿಸಿಕೊಳ್ಳುವ ವಿಭೂತಿಯಾಗಿ ಭಗವಂತ ಸಿಂಹದಲ್ಲಿ ಕೂತ. ಇಲ್ಲಿ ಬರುವ ಭಗವಂತನ ನಾಮ ‘ಮೃಗೇಂದ್ರಃ’. ಭಗವಂತನ ಸಾಧನೆಯಲ್ಲಿ ನಿಂತವರಿಗೆ ಮಾರ್ಗದರ್ಶಕನಾಗಿ ನಿಲ್ಲುವ(ಮೃಗ) ಸರ್ವಶ್ರೇಷ್ಠ ಭಗವಂತ ‘ಮೃಗೇಂದ್ರಃ’.
ಪ್ರಾಣಿಯ ನಂತರ ಪಕ್ಷಿಗಳಲ್ಲಿ ಭಗವಂತನ ವಿಭೂತಿ. ಪಕ್ಷಿಗಳಲ್ಲೇ ಅತ್ಯಂತ ಶ್ರೇಷ್ಠ ಪಕ್ಷಿ ‘ಗರುಡ’. ಹೊಟ್ಟೆಯ ಭಾಗ ಬೆಳ್ಳಗಿರುವ ಹದ್ದಿನ ಜಾತಿಯ ಪಕ್ಷಿ ಗರುಡ. ಭಗವಂತನ ವಾಹನ ಗರುಡ ವಿನುತೆಯ ಮಗ ಆದ್ದರಿಂದ ಈತನನ್ನು ವೈನತೇಯ ಎನ್ನುತ್ತಾರೆ. ತನಗೆ ಶರಣಾಗುವ ಭಕ್ತರಿಗೆ(ವಿನತ) ಆಸರೆಯಾಗಿ ‘ವೈನತೇಯ’ ಎನ್ನಿಸಿ ಭಗವಂತ ಗರುಡನಲ್ಲಿ ಸನ್ನಿಹಿತನಾಗಿದ್ದಾನೆ. ಭಗವಂತನನ್ನು ತನ್ನ ಹೆಗಲ ಮೇಲೆ ಹೊತ್ತು ಓಡಾಡುವ ಗರುಡ-ಭಗವಂತನ ವಿಶೇಷ ವಿಭೂತಿ.

ಅಧ್ಯಾಯ - 10: ಶ್ಲೋಕ  31

ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ ।

ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ        ॥೩೧॥

ಪವನಃ ಪವತಾಮ್ ಅಸ್ಮಿ ರಾಮಃ ಶಸ್ತ್ರಭೃತಾಮ್ ಅಹಮ್ ।
ಝಷಾಣಾಮ್ ಮಕರಃ ಚ ಅಸ್ಮಿ ಸ್ರೋತಸಾಮ್ ಅಸ್ಮಿ ಜಾಹ್ನವೀ

ಚಲಿಸುವ ವಸ್ತುಗಳಲ್ಲಿ ಮಿಗಿಲಾದ ಗಾಳಿ ನಾನು.[ಪ=ಜಗತ್ತನ್ನು ಪಾಲಿಸುವ ದೇವತೆಗಳಿಂದಲೂ, ವನ=ಸೇವ್ಯನಾದ್ದರಿಂದ ‘ಪವನ’ ಎನ್ನಿಸಿ ಗಾಳಿಯಲ್ಲಿದ್ದೇನೆ.] ಆಯುಧದಿಂದ ಹೋರಬಲ್ಲ ವೀರರಲ್ಲಿ ನಾನು [ರ=ಆನಂದರೂಪನಾಗಿ, ಅಮ=ಅಪರಿಮಿತನಾದ್ದರಿಂದ ಮತ್ತು ಲೋಕವನ್ನು ರಮಿಸುವುದರಿಂದ] ರಾಮನೆಂದು ಹೆಸರಾಗಿದ್ದೇನೆ. ಮೀನುಗಳಲ್ಲಿ ತಿಮಿಂಗಿಲ ನಾನು. [ಮ=ತಿಳಿವನ್ನು, ಕರ=ಕೊಡುವವನಾದ್ದರಿಂದ ‘ಮಕರ’ ಎನ್ನಿಸಿ ಮಕರದಲ್ಲಿದ್ದೇನೆ.] ನದಿಯಲ್ಲಿ ಗಂಗೆ ನಾನು. [ಜಹತ್ =ಕಾಮನೆಗಳನ್ನು ತೊರೆದವರಿಗೆ, ಅವಿ=ರಕ್ಷಕನಾಗಿ, ‘ಜಾಹ್ನವಿ’ ಎನ್ನಿಸಿ ಗಂಗೆಯಲ್ಲಿದ್ದೇನೆ.]
ಮುಂದುವರಿದು ಕೃಷ್ಣ ಹೇಳುತ್ತಾನೆ “ಪವನಃ ಪವತಾಮಸ್ಮಿ” ಎಂದು. ‘ಪವನ' ಎನ್ನುವ ಪದದ ಪ್ರಸಿದ್ಧವಾದ ಅರ್ಥ 'ಗಾಳಿ' ಅಥವಾ ವಾಯುದೇವರು. ಆಕಾಶದಲ್ಲಿ ಸಂಚರಿಸುವ ಶಕ್ತಿಗಳಲ್ಲೇ ದೊಡ್ಡ ವಿಭೂತಿ ‘ವಾಯು’. 

ನಮ್ಮ ಜೀವವನ್ನು ನಿಯಂತ್ರಿಸುವ ವಾಯುದೇವರಲ್ಲಿ ವಿಶೇಷವಾಗಿ  ಸನ್ನಿಹಿತನಾಗಿರುವ ಭಗವಂತ ಪವನಃ. ಪವತೇ ಇತಿ ಪವನಃ - ಅಂದರೆ ನಿರಂತರ ಚಲಿಸುವಂತಹದ್ದು. ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ, ಆಯಾ ವಸ್ತುವಿನಲ್ಲಿ ಆಯಾ ರೂಪದಲ್ಲಿದ್ದು ನಿರಂತರ ಚಲನೆ ಕೊಡುತ್ತಿರುತ್ತಾನೆ. ನಮ್ಮ ದೇಹದಲ್ಲಿ ಆತನ ಚಲನೆ ನಿಂತಾಕ್ಷಣ ನಾವು 'ಶವ' ವಾಗುತ್ತೇವೆ. ಉಪನಿಷತ್ತಿನಲ್ಲಿ ಭಗವಂತನನ್ನು ವನಃ ಎಂದಿದ್ದಾರೆ. ಅವನು ಪ+ವನಃ; ಇಲ್ಲಿ '' ಎಂದರೆ 'ಪಾಲನೆ'. ನಮ್ಮನ್ನು ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳನ್ನು ಪಾಲಿಸುವ ಶಕ್ತಿ. ವನಃ ಎಂದರೆ ಎಲ್ಲರೂ ಭಜಿಸಬೇಕಾದ,ಪ್ರೀತಿಯಿಂದ ಉಪಾಸನೆ ಮಾಡತಕ್ಕಂತಹ, ಎಲ್ಲರೂ ಆಶ್ರೈಸಬೇಕಾದ ವಸ್ತು. ಸಹಸ್ರ ರೂಪನಾಗಿ ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲಿಸುವ ಭಗವಂತ ಪವನಃ.

“ಆಯುಧವನ್ನು ಹಿಡಿದು ಹೋರಾಡಬಲ್ಲ ವೀರರಲ್ಲಿ ರಾಮ ನಾನು” ಎಂದು ತನ್ನ ಸ್ವರೂಪ ವಿಭೂತಿಯನ್ನು ವಿವರಿಸುತ್ತಾನೆ ಕೃಷ್ಣ. ಭಗವಂತನ ಇತರ ಎಲ್ಲ ಅವತಾರಕ್ಕಿಂತ ರಾಮಾವತಾರದಲ್ಲಿ ಆತ ಕೋದಂಡಪಾಣಿಯಾಗಿ ಶಸ್ತ್ರದ ಪೂರ್ಣ ಬಳಕೆ ಮಾಡಿ ಶತ್ರು ನಿಗ್ರಹ ಮಾಡಿದ.

ರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದಸ್ವರೂಪ ಹಾಗು ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರು ಕೂಪಗೊಂಡಾಗಲೂ ಸಹ, ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ. ಬದಲಿಗೆ "ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಸಂತೋಷದಿಂದ ಕಾಡಿಗೆ ಹೊರಟು ಹೋದ. 

ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ, ಈ ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಂಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ. ಇದು ಜಗತ್ತಿಗೆ ಆನಂದ ಕೊಟ್ಟ ಭಗವಂತನ ಅಮಿತಾನಂದಸ್ವರೂಪ ವಿಭೂತಿ.
ನೀರಿನಲ್ಲಿರುವ ಮೀನುಗಳಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದೊಡ್ಡ ಆಕಾರವುಳ್ಳದ್ದು ತಿಮಿಂಗಿಲ. ಕೃಷ್ಣ ಹೇಳುತ್ತಾನೆ “ಝಷಾಣಾಂ ಮಕರಶ್ಚಾಸ್ಮಿ” ಎಂದು. ಇಲ್ಲಿ ಮಕರ ಎಂದರೆ ತಿಮಿಂಗಿಲ. ಭಗವಂತ ಮಕರಃ ಶಬ್ದವಾಚ್ಯನಾಗಿ ತಿಮಿಂಗಿಲನಲ್ಲಿ ವಿಶೇಷ ವಿಭೂತಿಯಾಗಿ ಅದಕ್ಕೆ ಆ ಶಕ್ತಿಯನ್ನು ಕೊಟ್ಟ. ತಿಳಿವನ್ನು(ಮ) ಕೊಡುವ(ಕರ) ಭಗವಂತ ಮಕರಃ.

“ನದಿಗಳಲ್ಲಿ ಗಂಗೆ ನಾನು” ಎನ್ನುತ್ತಾನೆ ಕೃಷ್ಣ. ನದಿಗಳಲ್ಲೇ ಶ್ರೇಷ್ಠ-ಗಂಗೆ. ಈ ನದಿ ನೀರಿಗೆ ಸಾಟಿಯಾದ ಔಷಧ ಇನ್ನೊಂದಿಲ್ಲ. ಗಂಗೆಯಲ್ಲಿ ಮಿಂದರೆ ನಾವು ನಮ್ಮ ಮನಃ ಶುದ್ಧಿ ಮಾಡಿಕೊಳ್ಳಬಹುದು. ಅಲ್ಲಿರುವ ಯಾವುದೇ ಕೊಳೆ ನಮಗಂಟದು. ಶೇಖರಿಸಿಟ್ಟರೆ ಎಂದೂ ಕೆಡದ ನೀರು ಗಂಗೆ. ಗಂಗೆಗೆ ಈ ಮಹಾನ್ ಶಕ್ತಿಯನ್ನು ಕೊಟ್ಟ ಭಗವಂತನ ವಿಭೂತಿನಾಮ ‘ಜಾಹ್ನವಿ’. ‘ಜಹ್ನು’ ಅಂದರೆ ತೊರೆಯುವುದು. ಕ್ಷುದ್ರ ಭೌತಿಕ ಬಯಕೆಗಳನ್ನು ತೊರೆದು, ಭಗವಂತನ ಮಾರ್ಗದಲ್ಲಿ ಸಾಗುವವರ ರಕ್ಷಣೆ ಮಾಡುವ ಭಗವಂತ ‘ಜಾಹ್ನವಿ’. ಇದು ಭಗವಂತನ ಸ್ತ್ರೀರೂಪ ಪ್ರತೀಕ ನಾಮ. ತಾಯಿಯಂತೆ ಸಲಹುವ ಭಗವಂತನನ್ನು ಸ್ತ್ರೀ ರೂಪದಲ್ಲಿ ಕೂಡ ಉಪಾಸನೆ ಮಾಡುತ್ತಾರೆ. ಜಾಹ್ನವಿ ಭಗವಂತನ ಸ್ತ್ರೀರೂಪದ ನಾಮ.

ಅಧ್ಯಾಯ - 10: ಶ್ಲೋಕ  32

ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ ।

ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್      ॥೩೨॥

ಸರ್ಗಾಣಾಮ್ ಆದಿಃ ಅಂತಃ ಚ ಮಧ್ಯಮ್ ಚ ಏವಅಹಮ್ ಅರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಮ್ ವಾದಃ ಪ್ರವದತಾಮ್ ಅಹಮ್

ಓ ಅರ್ಜುನ, ಜೀವಿಗಳ ಹುಟ್ಟಿಗೆ, ಸಾವಿಗೆ, ಇರವಿಗೆ ಕಾರಣ ನಾನು. ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು. [ಜೀವರಿಗೆ ಒಡೆಯನಾದ್ದರಿಂದ ‘ಅಧ್ಯಾತ್ಮ’ ಎನ್ನಿಸಿ, ಜ್ಞಾನರೂಪನಾದ್ದರಿಂದ ‘ವಿದ್ಯಾ’ ಎನ್ನಿಸಿ ಅಧ್ಯಾತ್ಮ ವಿದ್ಯೆಯಲ್ಲಿದ್ದೇನೆ.] ಚರ್ಚಿಸುವವರ ಚರ್ಚೆಯಲ್ಲಿ [ತತ್ವದ ತಿಳಿವಿಗಾಗಿ ನಡೆಸುವ] ವಾದ ನಾನು. [ಎಲ್ಲ ನಾಮಗಳಿಂದ ವಾಚ್ಯನಾಗಿ ‘ವಾದ’ ಎನ್ನಿಸಿ ವಾದದಲ್ಲಿದ್ದೇನೆ.]

ಪ್ರಪಂಚದಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲಿಯೂ ಭಗವಂತನ ವಿಭೂತಿ ಅಡಗಿದೆ. ನಮಗೆ ಮೇಲ್ನೋಟಕ್ಕೆ ವ್ಯರ್ಥವೆಂದು ಕಾಣುವ ವಸ್ತುವಿನಲ್ಲೂ ಕೂಡಾ ಇನ್ನೊಂದು ವಸ್ತುವಿನಲ್ಲಿರದ ಒಂದು ವಿಶಿಷ್ಠಗುಣ(Exclusive Quality) ಅಡಗಿರುತ್ತದೆ. ಆದ್ದರಿಂದ ಒಂದು ಹುಲ್ಲುಕಡ್ಡಿಯಿಂದ ಹಿಡಿದು ಚತುರ್ಮುಖ ಬ್ರಹ್ಮನವರೆಗೆ ಎಲ್ಲವೂ ಭಗವಂತನ ವಿಭೂತಿ. ಇಲ್ಲಿ ಕೃಷ್ಣ ಕೇವಲ ಆ ಗುಂಪಿನಲ್ಲಿ ವಿಶಿಷ್ಠಭೂತಿಯನ್ನು ಹೇಳಿದ್ದಾನೆ ಅಷ್ಟೆ. ಜೀವ ಹುಟ್ಟುವ ಮೊದಲು ಇದ್ದವ, ಜೀವದ ಇರವಿಗೆ ಕಾರಣನಾದವ, ಕೊನೆಗೆ ಸಂಹಾರಶಕ್ತಿಯಾಗಿ ನಿಲ್ಲುವವ ಆ ಭಗವಂತ. ಹೀಗೆ “ಹುಟ್ಟುವಾಗ, ಇರುವಾಗ ಮತ್ತು ಅಂತದಲ್ಲೂ ನಾನಿದ್ದೇನೆ” ಎನ್ನುತ್ತಾನೆ ಕೃಷ್ಣ. “ಈ ವಿಷಯ-ಜ್ಞಾನಾರ್ಜನ ಮಾಡಿದ, ಸಾತ್ವಿಕನಾದ, ನಿನಗೆ ತಿಳಿದೇ ಇದೆ” ಎನ್ನುವ ಅರ್ಥದಲ್ಲಿ ಕೃಷ್ಣ ಇಲ್ಲಿ ಪಾರ್ಥನನ್ನು  ‘ಅರ್ಜುನ’ ಎಂದು ವಿಶೇಷವಾಗಿ ಸಂಬೋಧಿಸಿದ್ದಾನೆ.

“ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು” ಎನ್ನುತ್ತಾನೆ ಕೃಷ್ಣ. ಭಗವಂತನನ್ನು ಸ್ಪರ್ಶಮಾಡುವ ಅಧ್ಯಾತ್ಮ ವಿದ್ಯೆಯಲ್ಲಿ ಪರಮಾತ್ಮ ತುಂಬಿದ್ದಾನೆ. ಎಲ್ಲ ಆತ್ಮಗಳಿಗೆ ಹಿರಿದಾದ ಭಗವಂತ ಅಧಿಕ-ಆತ್ಮ(ಅಧ್ಯಾತ್ಮ). ಅಧ್ಯಾತ್ಮ ವಿದ್ಯೆಯನ್ನು ಪಡೆಯಬೇಕಾದರೆ ನಾವು ಇನ್ನೊಬ್ಬರೊಂದಿಗೆ ಸಂವಾದ ಮಾಡಬೇಕು. ಇದು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ, ಜ್ಞಾನ ದಾಹವನ್ನು ಇಂಗಿಸಿಕೊಳ್ಳುವುದಕ್ಕಾಗಿ ಮಾಡುವ ಶಾಸ್ತ್ರೀಯ ಚರ್ಚೆ. ಇಂತಹ ಚರ್ಚೆಯಲ್ಲಿ ‘ವಾದಃ' ವಾಚ್ಯನಾಗಿ ಭಗವಂತನಿರುತ್ತಾನೆ. ಎಲ್ಲ ನಾಮಗಳಿಂದ ವಾಚ್ಯನಾದ ಭಗವಂತ ವಾದಃ.

ಅಧ್ಯಾಯ - 10: ಶ್ಲೋಕ  33

ಅಕ್ಷರಾಣಾಮಕಾರೋಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।

ಅಹಮೇವಾಕ್ಷಯಃ ಕಾಲೋ ಧಾತಾSಹಂ ವಿಶ್ವತೋಮುಖಃ   ॥೩೩॥

ಅಕ್ಷರಾಣಾಮ್ ಅಕಾರಃ ಅಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮ್ ಏವ ಅಕ್ಷಯಃ ಕಾಲಃ ಧಾತಾ ಅಹಮ್  ವಿಶ್ವತೋಮುಖಃ –

ಅಕ್ಷರಗಳಲ್ಲಿ ಮೊದಲ ಅಕಾರ ನಾನು. [‘ಅ’ ಎಂದು ಕರೆಸಿಕೊಂಡು, ‘ಅಕಾರ’ ಎನ್ನಿಸಿ  ಅ-ಕಾರದಿಂದ ವಾಚ್ಯನಾಗಿದ್ದೇನೆ.] ಸಮಾಸಗಳ ಗುಂಪಿನಲ್ಲಿ ದ್ವಂದ್ವ ಸಮಾಸ ನಾನು. [ಎರಡು ರೂಪಗಳಿಂದ ಒಳಗೂ ಹೊರಗೂ ಇರುವುದರಿಂದ ‘ದ್ವಂದ್ವ’ ಎನ್ನಿಸಿ ದ್ವಂದ್ವ ಸಮಾಸದಲ್ಲಿದ್ದೇನೆ.] ಅಳಿವಿರದ ನಾನೆ [ಕಾಲದಲ್ಲಿದ್ದು] ಕಬಳಿಸುವವನು. ಎಲ್ಲೆಡೆ ತುಂಬಿದ್ದು ಎಲ್ಲವನ್ನು ಸಲಹುವವನೂ ನಾನೆ.

ಹಿಂದೆ ಶಬ್ದಗಳಲ್ಲಿ ಓಂಕಾರವನ್ನು ಹೇಳಿದ್ದ ಕೃಷ್ಣ, ಇಲ್ಲಿ ಅಕ್ಷರದಲ್ಲಿ ತನ್ನ ವಿಭೂತಿಯನ್ನು ಹೇಳುತ್ತ ಹೇಳುತ್ತಾನೆ: “ಅಕ್ಷರಾಣಾಮಕಾರೋಸ್ಮಿ” ಎಂದು. ‘ಅ’ ಪೂರ್ತಿಯಾಗಿ ಭಗವಂತನ ಎಲ್ಲ ಗುಣಗಳನ್ನೂ ಹೇಳುವ ವಿಶಿಷ್ಠ ಅಕ್ಷರ. ಅ- ಅಂದರೆ ‘ಅಲ್ಲ’. ಭಗವಂತ ‘ಅಲ್ಲ’. ಅಂದರೆ ನಮಗೆ ತಿಳಿದಿರುವ ಯಾವ ವಸ್ತುವೂ ಅವನಲ್ಲ. ಆತ ಪ್ರಪಂಚದಿಂದ ವಿಲಕ್ಷಣ. ಇಂತಹ ಭಗವಂತ ‘ಇಲ್ಲ’. ಅಂದರೆ ಆತನಲ್ಲಿ ಯಾವ ದೋಷವೂ ಇಲ್ಲ. ಆತ ಸರ್ವಗುಣಪೂರ್ಣ. ಹೀಗೆ ಸರ್ವವಿಲಕ್ಷಣ, ಸರ್ವದೋಷದೂರ, ಸರ್ವಗುಣಪೂರ್ಣ ಭಗವಂತ ಅ-ಕಾರವಾಚ್ಯನಾಗಿ ‘ಅ’ಕಾರದಲ್ಲಿ ತುಂಬಿದ್ದಾನೆ.

ಅಕ್ಷರದ ನಂತರ ಸಮಾಸಗಳ ಬಗ್ಗೆ ಹೇಳುತ್ತ ಕೃಷ್ಣ ಹೇಳುತ್ತಾನೆ: “ದ್ವಂದ್ವಃ ಸಾಮಾಸಿಕಸ್ಯ” ಎಂದು.  ನಮಗೆ ತಿಳಿದಂತೆ ಯಾವುದೇ ಸಮಾಸವಾಗಬೇಕಾದರೆ ಅಲ್ಲಿ ಎರಡು ಶಬ್ದವಿರಬೇಕು (ಅಥವಾ ಒಂದು ಶಬ್ದ ಮತ್ತು ಒಂದು ಪ್ರತ್ಯಯವಿರಬೇಕು). ಇತರ ಎಲ್ಲಾ ಸಮಾಸಗಳಲ್ಲಿ ಒಂದು ಪದ, ಅಥವಾ ಎರಡೂ ಪದ(ಬಹುವ್ರೀಹಿ)  ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳಬಹುದು. ಆದರೆ ದ್ವಂದ್ವ ಸಮಾಸದಲ್ಲಿ ಎರಡೂ ಪದಗಳು ಮುಖ್ಯ. ಉಭಯಪದ ಪ್ರಧಾನ ಸಮಾಸವಾದ ದ್ವಂದ್ವ ಸಮಾಸದಲ್ಲಿ ಭಗವಂತ ದ್ವಂದ್ವಃ ನಾಮಕನಾಗಿ ತುಂಬಿದ್ದಾನೆ. ಎರಡು ರೂಪದಿಂದ ನಮ್ಮ ಒಳಗೂ-ಹೊರಗೂ ತುಂಬಿರುವ ಭಗವಂತ ದ್ವಂದ್ವಃ.

ಎಲ್ಲವನ್ನು ಸಂಹಾರ ಮಾಡುವ ಕಾಲಪುರುಷ ಭಗವಂತ, ಎಲ್ಲವನ್ನು ಧಾರಣೆ ಮಾಡಿ, ಪೋಷಣೆ ಮಾಡುವ ‘ಧಾತ’. ಇಂತಹ ಭಗವಂತ ವಿಶ್ವತೋಮುಖಃ. ಆತ ಎಲ್ಲೆಡೆ ತುಂಬಿದ್ದಾನೆ. ಆತನಿಲ್ಲದ ತಾಣವಿಲ್ಲ. ಆತ ಕಾಣದ ಎಡೆಯಿಲ್ಲ.

ಅಧ್ಯಾಯ - 10: ಶ್ಲೋಕ  34

ಮೃತ್ಯುಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ ।

ಕೀರ್ತಿಃ ಶ್ರೀರ್ವಾಕ್ ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥೩೪॥

ಮೃತ್ಯುಃ ಸರ್ವ ಹರಃ ಚ ಅಹಮ್ ಉದ್ಭವಃ ಚ  ಭವಿಷ್ಯತಾಮ್ ।
ಕೀರ್ತಿಃ ಶ್ರೀಃ ವಾಕ್ ಚ ನಾರೀಣಾಂ ಸ್ಮೃತಿಃ ಮೇಧಾ ಧೃತಿಃ ಕ್ಷಮಾ –

ಎಲ್ಲವನ್ನೂ ಕಬಳಿಸುವ ಮೃತ್ಯುದೇವತೆ [ಸಾಯಿಸುವವನಾದ್ದರಿಂದ ‘ಮೃತ್ಯು’ನಾಮಕನಾಗಿ, ಯಮನ ಪರಿವಾರ ದೇವತೆಯಾದ ಮೃತ್ಯುವಿನಲ್ಲಿದ್ದು ಅವನಿಗೆ ಎಲ್ಲವನ್ನು ಕಬಳಿಸುವ ಶಕ್ತಿಯಿತ್ತವನು] ನಾನು. ಮುಂದೆ ಆಗುವವರನ್ನು ಹುಟ್ಟಿಸುವವನೂ ನಾನು. ಹೆಂಗಸರಲ್ಲಿ ಕೀರ್ತಿಯ ದೇವತೆ ನಾನು;  ಶ್ರೀದೇವಿ ನಾನು; ವಾಗ್ದೇವಿ ನಾನು. ಸ್ಮರಣಶಕ್ತಿಯ ದೇವತೆ ನಾನು; ಧಾರಣಶಕ್ತಿಯ ದೇವತೆ ನಾನು; ಸಹನೆಯ ದೇವತೆ ನಾನು; ಕ್ಷಮಾ ದೇವಿ ನಾನು.[ಕೀರ್ತನೀಯವಾಗಿ ‘ಕೀರ್ತಿ’ ಎನ್ನಿಸಿ ಕೀರ್ತಿದೇವಿಯಲ್ಲಿದ್ದೇನೆ; ಆಶ್ರಯನಾಗಿ ‘ಶ್ರೀ’ ಎನ್ನಿಸಿ ಶ್ರೀದೇವಿಯಲ್ಲಿದ್ದೇನೆ; ವಕ್ತಾರನಾಗಿ ‘ವಾಕ್’ ಎನ್ನಿಸಿ ವಾಗ್ದೇವಿಯಲ್ಲಿದ್ದೇನೆ; ಸ್ಮರಣೀಯನಾಗಿ ‘ಸ್ಮೃತಿ’ ಎನ್ನಿಸಿ ಸ್ಮೃತಿದೇವಿಯಲ್ಲಿದ್ದೇನೆ; ಅರಿವಿನ ಮೂರ್ತಿಯಾಗಿ ‘ಧೃತಿ’ ಎನ್ನಿಸಿ ಧೃತಿದೇವಿಯಲ್ಲಿದ್ದೇನೆ; ತಪ್ಪುಗಳನ್ನು ಮನ್ನಿಸುವವನಾಗಿ ‘ಕ್ಷಮಾ’ ಎನ್ನಿಸಿ ಕ್ಷಮಾದೇವಿಯಲ್ಲಿದ್ದೇನೆ.]

ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನು ಕಬಳಿಸುವ ಮೃತ್ಯುದೇವತೆ ಕೂಡಾ ಹೌದು. ಪ್ರಳಯಕಾಲ ನಂತರ ಸೃಷ್ಟಿಯನ್ನು ಪುನಃ ನಿರ್ಮಾಣ ಮಾಡುವವನೂ ಅವನೆ. ಸ್ತ್ರೀ ರೂಪದಲ್ಲಿನ  ತನ್ನ ವಿಭೂತಿಯನ್ನು ಹೇಳುತ್ತ ಕೃಷ್ಣ ಇಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ ಮತ್ತು ಭಾರತಿಯರಲ್ಲಿ ತನ್ನ ವಿಭೂತಿಯನ್ನು ವಿವರಿಸಿದ್ದಾನೆ. ಕೀರ್ತಿ, ಅದೃಷ್ಟ, ಸುಂದರ ಮಾತು, ಸ್ಮರಣಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ -ಇವುಗಳ ಅಭಿಮಾನಿ ದೇವತೆಯರು ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ  ಮತ್ತು ಭಾರತಿಯರು. ಇವರಲ್ಲಿ ಸ್ತ್ರೀ ರೂಪ ವಿಭೂತಿಯಾಗಿ  ಭಗವಂತ ನಿಂತಿದ್ದಾನೆ. 

ಅಧ್ಯಾಯ - 10: ಶ್ಲೋಕ  35

ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರಿ ಛಂದಸಾಮಹಮ್ ।

ಮಾಸಾನಾಂ ಮಾರ್ಗಶೀರ್ಷೋSಹಮೃತೂನಾಂ ಕುಸುಮಾಕರಃ ॥೩೫॥

ಬೃಹತ್ಸಾಮ ತಥಾ ಸಾಮ್ನಾಮ್  ಗಾಯತ್ರಿ ಛಂದಸಾಮ್ ಅಹಮ್ ।
ಮಾಸಾನಾಮ್  ಮಾರ್ಗಶೀರ್ಷಃ ಅಹಮ್ ಋತೂನಾಮ್  ಕುಸುಮ ಆಕರಃ –

ಸಾಮದ ಗಾನಗಳಲ್ಲಿ ಬೃಹತ್ ಸಾಮವೆಂಬ ಗಾನ ನಾನು. [ಬೃಹತ್ =ಹಿರಿದಾದ, ಸ=ಸಾರವಸ್ತು ಮತ್ತು, ಅಮ=ಅರಿವಿಗೆಟುಕದವನಾದ್ದರಿಂದ ‘ಬೃಹತ್ಸಾಮ’ ಎನ್ನಿಸಿ ಬೃಹತ್ಸಾಮವೆಂಬ ಗಾನದಲ್ಲಿದ್ದೇನೆ.] ಛಂದಸ್ಸುಗಳಲ್ಲಿ ಗಾಯತ್ರಿ ನಾನು. [ಗಾಯ =ಗಾಯಕರನ್ನು ತ್ರಿ=ಸಲಹುವುದರಿಂದ ‘ಗಾಯತ್ರಿ’ ಎನ್ನಿಸಿ ಗಾಯತ್ರಿ ಛಂದಸ್ಸಿನಲ್ಲಿದ್ದೇನೆ.] ತಿಂಗಳಲ್ಲಿ ಮಾರ್ಗಶಿರ ನಾನು. [ದಾರಿಯ ಕೊನೆಯಲ್ಲಿರುವುದರಿಂದ ‘ಮಾರ್ಗಶೀರ್ಷ’ ಎನ್ನಿಸಿ ಮಾರ್ಗಶಿರಮಾಸದಲ್ಲಿದ್ದೇನೆ.] ಋತುಗಳಲ್ಲಿ ವಸಂತ ನಾನು. [ಕು=ಕೆಟ್ಟ, ಸು= ಒಳ್ಳೆಯ, ಮಾ=ಅರಿವನ್ನು, ಕರ=ನೀಡುವುದರಿಂದ ‘ಕುಸುಮಾಕರ’ ಎನ್ನಿಸಿ ವಸಂತ ಋತುವಿನಲ್ಲಿದ್ದೇನೆ.]

ಸಾಮಗಾನದಲ್ಲಿ ಅನೇಕ ವಿಧ. ಸಪ್ತ ಸ್ವರವನ್ನು ಬಳಸಿ ಹಾಡುವುದು ಸಾಮವೇದದಲ್ಲಿ ಮಾತ್ರ. ಇದು ಋಗ್ವೇದ ಯಜುರ್ವೇದದಲ್ಲಿ ಇಲ್ಲ. ಎಲ್ಲ ಸಾಮಗಳಲ್ಲಿ ಸಪ್ತಸ್ವರದ ಬಳಕೆ ಇಲ್ಲ. ಈ ರೀತಿ ಸಪ್ತಸ್ವರವಿರುವ ಸಾಮದಲ್ಲಿ “ಬೃಹತ್ಸಾಮವೆಂಬ ಗಾನ ನಾನು” ಎನ್ನುತ್ತಾನೆ ಕೃಷ್ಣ. ಇಲ್ಲಿ ಬಂದಿರುವ ಭಗವಂತನ ನಾಮ ‘ಬೃಹತ್ಸಾಮಃ’ – ಹಿರಿದಾದ, ಸಾರಭೂತನಾದ  ಮತ್ತು ನಮ್ಮ ಅರಿವಿಗೆಟುಕದೆ ಅಮಿತವಾಗಿರುವ ಭಗವಂತ ‘ಬೃಹತ್ಸಾಮಃ’
ಪದ್ಯದ ರೂಪದಲ್ಲಿ ಒಂದು ಅಪೂರ್ವವಾದ ಅರ್ಥವನ್ನು, ಅಧ್ಯಾತ್ಮದ ಸಂದೇಶವನ್ನು ತುಂಬಿಡುವಂತಾದ್ದು-ಛಂದಸ್ಸು. ಇದು ನಮ್ಮ ಅಭಿಪ್ರಾಯವನ್ನೂ ಲಯಬದ್ಧವಾಗಿ ವ್ಯಕ್ತಪಡಿಸುವ ವಿಧಾನ. ಛಂದಸ್ಸಿನಲ್ಲಿ ಪ್ರಧಾನವಾಗಿ ಏಳು ಛಂದಸ್ಸುಗಳಿವೆ. 24 ಅಕ್ಷರದ ಗಾಯತ್ರಿ,  28 ಅಕ್ಷರದ ಉಷ್ಣಿಕ್,  32 ಅಕ್ಷರದ ಅನುಷ್ಪುಪ್, 36 ಅಕ್ಷರದ ಬೃಹತೀ, 40 ಅಕ್ಷರದ ಪಂಕ್ತಿ, 44 ಅಕ್ಷರದ ತ್ರಿಷ್ಪುಪ್ ಮತ್ತು  48 ಅಕ್ಷರದ ಜಗತೀ.  ಈ ಛಂದಸ್ಸುಗಳಲ್ಲಿ ಭಗವಂತನ ವಿಶೇಷ ವಿಭೂತಿ ಇರುವ  ಛಂದಸ್ಸು ‘ಗಾಯತ್ರಿ’. ಇದು ಭಗವಂತನ ಹೆಸರು ಕೂಡಾ ಹೌದು. ‘ಗಾಯತಂ ತ್ರಾಯತೆ ಇತಿ ಗಾಯತ್ರಿಃ’. ಯಾರು ಭಗವಂತನನ್ನು ಈ ಮಂತ್ರದಿಂದ ಸ್ತೋತ್ರ ಮಾಡುತ್ತಾರೋ ಅವರನ್ನು ಆತ ರಕ್ಷಣೆ ಮಾಡುತ್ತಾನೆ. ಗಾಯತ್ರಿ ಛಂದಸ್ಸು ಏಳು ಛಂದಸ್ಸುಗಳಲ್ಲಿ ಮೊದಲನೆಯದು. ಎಂಟು ಅಕ್ಷರದ ಮೂರು ಪಾದಗಳುಳ್ಳ ಗಾಯತ್ರಿ ಎಲ್ಲದರ ಪಂಚಾಂಗ(Foundation)ದಂತಿದೆ. 

ಋಗ್ವೇದದಲ್ಲಿನ ಹೆಚ್ಚಿನ ಮಂತ್ರಗಳು ಗಾಯತ್ರಿ ಛಂದಸ್ಸಿನಲ್ಲಿದೆ. ಸಮಸ್ತ ವೇದಗಳ ‘ವೇದಮಾತ’ ಎನ್ನಿಸಿಕೊಂಡಿರುವ ಗಾಯತ್ರಿ ಮಂತ್ರವಿರುವುದು ‘ಗಾಯತ್ರಿ’ ಛಂದಸ್ಸಿನಲ್ಲಿ. ಹೀಗೆ ಗಾಯತ್ರಿ ಇತರ ಛಂದಸ್ಸಿಗೆ ಮಾತೃಸ್ಥಾನೀಯವಾಗಿದೆ. ಗಾಯತ್ರಿ  ಅಧ್ಯಾತ್ಮದ ಮೂಲಭೂತವಾದ ಮುಖವನ್ನು ಹೊಂದಿರತಕ್ಕಂತಹ  ಮಂತ್ರ. ಸೂರ್ಯನಲ್ಲಿರುವ ಸೌರಶಕ್ತಿಯನ್ನು ನಮಗೆ ಹರಿಸುತ್ತ, ಸೌರಮಂಡಲದಲ್ಲಿರುವ ನಮ್ಮ ಜೀವಪ್ರಧಾನವಾದ ಭಗವಂತನ ಸ್ತೋತ್ರ ಮಾಡುವುದು ಗಾಯತ್ರಿ. ‘ಇಡೀ ಬ್ರಹ್ಮಾಂಡದ ನಿಯಾಮಕನಾಗಿದ್ದು,  ಸೌರ ಶಕ್ತಿಯಿಂದ ಬಂದು, ನಮ್ಮ ಆತ್ಮದ ಒಳಗೆ ನಮ್ಮ ಹೃದಯ ಕಮಲದಲ್ಲಿ ‘ಧೀ’ ಶಕ್ತಿಯನ್ನು ಪ್ರೇರಣೆ ಮಾಡುವಂಥ ಶಕ್ತಿ ಭಗವಂತ’ ಎನ್ನುವ ಸಮಷ್ಟಿ ಚಿಂತನ ಇರುವ ಮಂತ್ರ ಗಾಯತ್ರಿ. ಗಾಯತ್ರಿ ವಿಶಿಷ್ಟವಾಗಿ(Exclusively) ವೈದಿಕ ಛಂದಸ್ಸಾಗಿ ಬಳಕೆಯಾಗಿದೆ. ಲೌಕಿಕವಾಗಿ ಇದರ ಬಳಕೆ ಇಲ್ಲ. ಗಾಯತ್ರಿಗೆ ಈ ವಿಶಿಷ್ಠ ಸ್ಥಾನ ಭಗವಂತನ ವಿಶೇಷ ವಿಭೂತಿಯಿಂದ ಬಂತು.

[ಇಲ್ಲಿ ಒಂದು ವಿಷಯವನ್ನು ನಾವು ತಿಳಿದಿರಬೇಕು: ಐತರೇಯ ಉಪನಿಷತ್ತಿನಲ್ಲಿ ಬೃಹತೀ ಛಂದಸ್ಸನ್ನು ಶ್ರೇಷ್ಠ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಅಭಿಮಾನಿ ದೇವತಾ ತಾರತಮ್ಯದಲ್ಲಿ ನೋಡಿದಾಗ ಗಾಯತ್ರಿ ಅಭಿಮಾನಿ ದೇವತೆಯರು ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಅಗ್ನಿಪತ್ನಿ ಸ್ವಾಹ. ಬೃಹತೀ ಛಂದಸ್ಸನ್ನು ನೋಡಿದಾಗ ಅಲ್ಲಿ ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಬೃಹಸ್ಪತಿಪತ್ನಿ ತಾರ ಅಭಿಮಾನಿ ದೇವತೆಗಳು. ಅಗ್ನಿಪತ್ನಿ ಸ್ವಾಹಕ್ಕಿಂತ ತಾರ ದೇವತಾ ತಾರತಮ್ಯದಲ್ಲಿ ಎತ್ತರದಲ್ಲಿರುವುದರಿಂದ, ದೇವತಾ ತಾರತಮ್ಯವನ್ನು ಮುಖ್ಯವಾಗಿಟ್ಟುಕೊಂಡು ಅಲ್ಲಿ ಹಾಗೆ ಹೇಳಿದ್ದಾರೆ. ಈ ವಿಚಾರ ತಿಳಿದಾಗ ಇಲ್ಲಿ ಗೊಂದಲವಿಲ್ಲ.]

“ನಾನು ಮಾಸಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತ” ಎನ್ನುತ್ತಾನೆ ಕೃಷ್ಣ. ಮಾರ್ಗಶಿರಮಾಸ-ಮಾಸಗಳಲ್ಲಿ ಮೊದಲನೇ ಮಾಸ; ಕಾರ್ತಿಕ ಕೊನೆಯ ಮಾಸ. ಈ ಕಾರಣಕ್ಕಾಗಿ ಕಾರ್ತಿಕ ಮಾಸದಲ್ಲಿ (ಮಾರ್ಗಶಿರ ಮಾಸದ   ಮೊದಲು) ದೀಪಾವಳಿಯನ್ನು ಆಚರಿಸುತ್ತಾರೆ. ಒಂದು ವರ್ಷವನ್ನು ಕೃತಜ್ಞತೆಯಿಂದ ಕಳುಹಿಸಿಕೊಡುವುದು ದೀಪಾವಳಿಯ ಮಹತ್ವ. ಮಾರ್ಗಶಿರಕ್ಕೆ ಆಗ್ರ-ಹಾಯಣ ಎನ್ನುತ್ತಾರೆ. ಹಾಯಣ ಎಂದರೆ ಮಾಸ. ಆಗ್ರ ಅಂದರೆ ಮೊದಲನೆಯದು. ನಾವು ಗೀತಾಜಯಂತಿಯನ್ನು ಈ ಮಾಸದಲ್ಲಿ ಆಚರಿಸುತ್ತೇವೆ. ಇದರಿಂದ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಮಾಸ ಕೂಡ ಮಾರ್ಗಶಿರ ಎನ್ನಬಹುದು(ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ). ಈ ಮಾಸದಲ್ಲಿ ವಿಭೂತಿಯಾಗಿ ಕುಳಿತಿರುವ ಭಗವಂತನ ನಾಮ ‘ಮಾರ್ಗಶೀರ್ಷ’. ಸಾಧನಾ ಮಾರ್ಗದಲ್ಲಿ ನಾವು ಸಾಗಬೇಕಾದ ಮಾರ್ಗದ ತುತ್ತತುದಿಯಾದ ಆ ಭಗವಂತ ‘ಮಾರ್ಗಶೀರ್ಷ’. ಹೂ ಅರಳಿ ಗಿಡಮರಗಳು ಚಿಗುರುವ ವಸಂತ ಋತುವಿನಲ್ಲಿ ‘ಕುಸುಮಾಕರನಾಗಿ’ ನಾನಿದ್ದೇನೆ ಎನ್ನುತ್ತಾನೆ ಕೃಷ್ಣ. ಕೆಟ್ಟವರಿಗೆ ಕುಸ್ಸಿತವಾದ ಮತ್ತು ಸಜ್ಜನರಿಗೆ ಉತ್ತಮ ಜ್ಞಾನವನ್ನು ಕೊಡುವ ಭಗವಂತ ‘ಕುಸುಮಾಕರಃ’.

ಅಧ್ಯಾಯ - 10: ಶ್ಲೋಕ  36

ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।

ಜಯೋSಸ್ಮಿ ವ್ಯವಸಾಯೋSಸ್ಮಿ ಸತ್ತ್ವಂ ಸತ್ತ್ವವತಾಮಹಮ್ ॥೩೬॥

ದ್ಯೂತಮ್  ಛಲಯತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್ ।
ಜಯಃ ಅಸ್ಮಿ ವ್ಯವಸಾಯಃ ಅಸ್ಮಿ ಸತ್ತ್ವಮ್  ಸತ್ತ್ವವತಾಮ್ ಅಹಮ್—

ಮೋಸಗಾರರ ಜೂಜು ನಾನು. [ಕ್ರೀಡಾರೂಪನಾಗಿ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದೇನೆ.] ವೀರರಾದವರ ಬೀರ ನಾನು. [ಪ್ರಕಾಶರೂಪನಾದ್ದರಿಂದ ‘ತೇಜಸ್’ ಎನ್ನಿಸಿ ಬೀರದಲ್ಲಿದ್ದೇನೆ.] ಗೆಲುವು ನಾನು. [ಎಲ್ಲವನ್ನು ಗೆದ್ದವನಾಗಿ ‘ಜಯ’ ಎನ್ನಿಸಿ ಗೆಲುವಿನಲ್ಲಿದ್ದೇನೆ.] ದುಡಿಮೆ ನಾನು. [ನಿಶ್ಚಯ ಜ್ಞಾನರೂಪನಾದ್ದರಿಂದ ‘ವ್ಯವಸಾಯ’ ಎನ್ನಿಸಿ ದುಡಿಮೆಯಲ್ಲಿದ್ದೇನೆ.] ಹಿರಿಯ ವ್ಯಕ್ತಿಗಳ ಘನತೆ ನಾನು.[ಸದ್ಗುಣಗಳ ಗಣಿಯಾಗಿ ‘ಸತ್ವ’ ಎನ್ನಿಸಿ ದೊಡ್ಡವರ ಘನತೆಯಲ್ಲಿದ್ದೇನೆ.]

ಕೌರವ ಪಾಂಡವರ ನಡುವೆ ಯುದ್ಧವಾಗಲು ಕಾರಣವಾಗಿ ಕಾಣುವುದು ದ್ಯೂತ. ಇದು ಮೊಸಗಾರಿಕೆಯಲ್ಲಿ ಅತ್ಯಂತ ಶ್ರೇಷ್ಠ ಕಲೆ! ಭಗವಂತ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದಾನೆ. ಇಲ್ಲಿ ಭಗವಂತನ ನಾಮ ‘ದ್ಯೂತ’. ದಿವು ಅಂದರೆ ಕ್ರೀಡೆ. ಸದಾ ಸೃಷ್ಟಿ ಸ್ಥಿತಿ ಸಂಹಾರಗಳ ಕ್ರೀಡೆಯಲ್ಲಿ ನಿರತನಾದ ಭಗವಂತ ‘ದ್ಯೂತ’ ಶಬ್ದ ವಾಚ್ಯ. ಆತ್ಮಬಲವುಳ್ಳವರ ತೇಜಸ್ಸು ಭಗವಂತ. ಜಯಃ ನಾಮಕನಾಗಿ ಗೆಲುವಿನಲ್ಲಿ ಭಗವಂತನಿದ್ದಾನೆ. ಜಗತ್ತಿನ ಎಲ್ಲ ವಿಜಯಗಳ ಪ್ರೇರಕ ಭಗವಂತ.  ಒಂದು ಕಾರ್ಯದಲ್ಲಿ ಉತ್ಸಾಹದಿಂದ ತೊಡಗುವಂತೆ ಮಾಡುವವನು ‘ವ್ಯವಸಾಯ’ ನಾಮಕ  ಭಗವಂತ. ಬಲನಿಯಾಮಕನಾಗಿ ಆತ ಬಲಶಾಲಿಗಳಲ್ಲಿ ‘ಸತ್ವ’ ನಾಮಕನಾಗಿ ಕೂತಿದ್ದಾನೆ.

ಅಧ್ಯಾಯ - 10: ಶ್ಲೋಕ  37

ವೃಷ್ಣೀನಾಂ ವಾಸುದೇವೋSಸ್ಮಿ ಪಾಂಡವಾನಾಂ ಧನಂಜಯಃ ।

ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥೩೭॥

ವೃಷ್ಣೀನಾಮ್  ವಾಸುದೇವಃ ಅಸ್ಮಿ ಪಾಂಡವಾನಾಮ್  ಧನಂಜಯಃ ।
ಮುನೀನಾಮ್ ಅಪಿ ಅಹಮ್  ವ್ಯಾಸಃ ಕವೀನಾಮ್ ಉಶನಾ ಕವಿಃ – 

ವೃಷ್ಣಿವಂಶದ ರಾಜನ್ಯರಲ್ಲಿ [ವಾಸು=ಎಲ್ಲವನ್ನೂ ಆವರಿಸಿ, ಎಲ್ಲದರೊಳಗೂ ನೆಲೆಸಿರುವ, ದೇವ=ದಿವ್ಯರೂಪನಾದ್ದರಿಂದ] ವಾಸುದೇವನಾಗಿ ಅವತರಿಸಿದ್ದೇನೆ. ಪಾಂಡವರಲ್ಲಿ ಅರ್ಜುನ ನಾನು. [ಸಿರಿಯನ್ನು ಗೆದ್ದವನಾಗಿ ‘ಧನಂಜಯ’ ಎನ್ನಿಸಿ ಅರ್ಜುನನಲ್ಲಿದ್ದೇನೆ.] ಮುನಿಗಳಲ್ಲಿ [ವಿ=ಎಲ್ಲಕ್ಕಿಂತ ವಿಶಿಷ್ಟನಾಗಿ, ಆ=ಎಲ್ಲೆಡೆಯು, ಸಃ =ಅವನೆ ತುಂಬಿರುವುದರಿಂದ]  ವ್ಯಾಸ ನಾನು. ವಿಜ್ಞಾನಿಗಳಲ್ಲಿ ಹಿರಿಯ ವಿದ್ವಾಂಸನಾದ ಶುಕ್ರ ನಾನು. [ಇಚ್ಛಾರೂಪನಾದ್ದರಿಂದ ‘ಉಶನಸ್’ ಎನ್ನಿಸಿ ದೈತ್ಯಗುರು ಶುಕ್ರನಲ್ಲಿದ್ದೇನೆ.]

ಸಾಕ್ಷಾತ್ ವಿಭೂತಿಯನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ “ವೃಷ್ಣೀನಾಮ್  ವಾಸುದೇವಃ ಅಸ್ಮಿ” ಎಂದು.  ಇಲ್ಲಿ ಭಗವಂತನ ವಿಭೂತಿ ನಾಮ ‘ವಾಸುದೇವಃ’. ಎಲ್ಲೆಡೆ ಇದ್ದರೂ ಕಾಣಿಸದೆ, ಅಪರೋಕ್ಷ ಜ್ಞಾನವನ್ನು ಕರುಣಿಸಿ ಪ್ರತ್ಯಕ್ಷನಾಗುವ ಭಗವಂತ ವಾಸುದೇವಃ. ಪಾಂಡವರಲ್ಲಿ ‘ಧನಂಜಯಃ’ ನಾನು ಎನ್ನುತ್ತಾನೆ ಕೃಷ್ಣ. ಇದು ಏಕದೇಶ ವಿಭೂತಿ. ಅರ್ಜುನನಲ್ಲಿ ಭಗವಂತನ ವಿಶೇಷ ಆವೇಶ ಇತ್ತು. ಆತನಲ್ಲಿ ಭಗವಂತ  ‘ಧನಂಜಯಃ’ ನಾಮಕನಾಗಿ ನಿಂತಿದ್ದ. 

ಧನಂಜಯಃ ಎನ್ನುವಲ್ಲಿ  ಧನ ಎಂದರೆ ಜ್ಞಾನ.  ಭಗವಂತನ ಅರಿವು, ಅದರಿಂದ ಪಡೆಯುವ ಮೋಕ್ಷ ಶಾಶ್ವತ ಧನ. ಅದನ್ನು ಕೊಡುವ ಭಗವಂತ ಧನಂಜಯಃ. ಮುನಿಗಳಲ್ಲಿ ವ್ಯಾಸ. ಇದು ಭಗವಂತನ ಸಾಕ್ಷಾತ್ ವಿಭೂತಿ. ವ್ಯಾಸರು ವೇದವನ್ನು 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾರೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿಗೆ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ 24 ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. 

ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ 15 ಸಂಹಿತೆ, ಹಾಗು ಕೃಷ್ಣ ಯಜುರ್ವೇದದಲ್ಲಿ 86 ಸಂಹಿತೆ, ಒಟ್ಟು 101 ಸಂಹಿತೆ. ಸಾಮವೇದದಲ್ಲಿ 1000 ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ  ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ  ಒಟ್ಟು 12  ಶಾಖೆಗಳು. ಹೀಗೆ ವೇದವನ್ನು  1137 (24+101+12+1000) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಮುನಿ ವ್ಯಾಸ. ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ, ಎಲ್ಲೆಡೆ ತುಂಬಿರುವ ಭಗವಂತ ವ್ಯಾಸಃ. ದೈತ್ಯ ಗುರು ಶುಕ್ರಾಚಾರ್ಯರಲ್ಲಿ ‘ಉಶನ’ ನಾಮಕನಾಗಿ ಭಗವಂತ ನಿಂತ. ಈ ಕಾರಣದಿಂದ ಗ್ರಹಗಳಲ್ಲಿ ಶುಕ್ರ ಒಬ್ಬನಾಗಿ ಸ್ಥಾನ ಪಡೆದ. ತನ್ನ ಇಚ್ಛಾಮಾತ್ರದಿಂದಲೇ ಎಲ್ಲ ಕಾರ್ಯವನ್ನು ಮಾಡುವ ಭಗವಂತ ‘ಉಶನ’.

ಅಧ್ಯಾಯ - 10: ಶ್ಲೋಕ  38

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।

ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ॥೩೮॥

ದಂಡಃ ದಮಯತಾಮ್ ಅಸ್ಮಿ ನೀತಿಃ ಅಸ್ಮಿ ಜಿಗೀಷತಾಮ್ ।
ಮೌನಮ್  ಚ ಏವ ಅಸ್ಮಿ ಗುಹ್ಯಾನಾಮ್ ಜ್ಞಾನಮ್ ಜ್ಞಾನವತಾಮ್ ಅಹಮ್  --

ಬಗ್ಗುಬಡಿಯುವವರ ದಂಡನೀತಿ ನಾನು. [ದಂಡಿಸುವವನಾದ್ದರಿಂದ ‘ದಂಡ’ ಎನ್ನಿಸಿ ದಂಡನೀತಿಯಲ್ಲಿದ್ದೇನೆ.] ಗೆಲ್ಲಬಯಸುವವರ ನಯಗಾರಿಕೆ ನಾನು. [ಗೆಲುವಿನತ್ತ ಕರೆದೊಯ್ಯುವುದರಿಂದ ‘ನೀತಿ’ ಎನ್ನಿಸಿ ನಯಗಾರಿಕೆಯಲ್ಲಿದ್ದೇನೆ.] ಗುಟ್ಟುಗಳಲ್ಲಿ ಮೌನ ನಾನು. [ಮುನಿಗಳಿಂದ ಸ್ತುತನಾಗಿ ‘ಮೌನ’ ಎನ್ನಿಸಿ ಮೌನದಲ್ಲಿದ್ದೇನೆ.] ಬಲ್ಲವರ ತಿಳಿವು ನಾನು. [ಅರಿವಿನ ಮೂರ್ತಿಯಾದ್ದರಿಂದ ‘ಜ್ಞಾನ’ ಎನ್ನಿಸಿ ತಿಳಿವಿನಲ್ಲಿದ್ದೇನೆ.]

“ದುಷ್ಟರನ್ನು  ದಮನ ಮಾಡುವ ದಮನಶಕ್ತಿ ನಾನು” ಎನ್ನುತ್ತಾನೆ ಕೃಷ್ಣ. ಈ ದಮನಶಕ್ತಿಯಾಗಿ ವೀರರಲ್ಲಿ ಭಗವಂತ ಕೂತಿದ್ದಾನೆ. ದಂಡ ಎಂದರೆ ಶಿಕ್ಷೆ. ಸಂಸ್ಕೃತದಲ್ಲಿ ಶಿಕ್ಷೆ ಎನ್ನುವುದಕ್ಕೆ ಶಿಕ್ಷಣ ಎನ್ನುವ ಅರ್ಥವಿದೆ. ಆದರೆ ಇಲ್ಲಿ ದಂಡ ಎಂದರೆ ದಂಡಿಸುವುದು(Punishment). ತಪ್ಪು ಮಾಡಿದವರಿಗೆ ದೇವರ ರಾಜ್ಯದಲ್ಲಿ ಕ್ಷಮೆ ಇಲ್ಲ. ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇಬೇಕು. ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯ ಹಾಗು ನಿಷ್ಠುರವಾದ ದಂಡನೆಯನ್ನು ಕೊಡುವ ಭಗವಂತ ‘ದಂಡಃ’. ಗೆಲ್ಲುವ ಶಕ್ತಿಯಾಗಿ ಎಲ್ಲರನ್ನು ನಿಯಂತ್ರಣ ಮಾಡುವ ಭಗವಂತ ‘ನೀತಿಃ’. ಮನನಶಕ್ತಿಯಾಗಿ ನಿಂತ ಭಗವಂತ ‘ಮೌನಃ’. ಬಲ್ಲವರ ತಿಳಿವಾಗಿರುವ ಭಗವಂತ ‘ಜ್ಞಾನಃ’.
ಮೂಲಭೂತವಾಗಿ ವಿಭೂತಿಗಳ ವಿಸ್ತಾರ ಇಲ್ಲಿಗೆ ಮುಗಿಯಿತು. ಮುಂದೆ ವಿಭೂತಿಯ ಉಪಸಂಹಾರವನ್ನು ಈ ಅಧ್ಯಾಯದ ಉಳಿದ ಭಾಗದಲ್ಲಿ ನೋಡೋಣ.

ಅಧ್ಯಾಯ - 10: ಶ್ಲೋಕ  39

ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।

ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್   ॥೩೯॥

ಯತ್ ಚ ಅಪಿ ಸರ್ವ ಭೂತಾನಾಮ್  ಬೀಜಮ್  ತತ್ ಅಹಮ್ ಅರ್ಜುನ ।
ನ ತತ್ ಅಸ್ತಿ ವಿನಾ ಯತ್ ಸ್ಯಾತ್ ಮಯಾ ಭೂತಮ್ ಚರ ಅಚರಮ್ –

ಅರ್ಜುನ, ಸಮಸ್ತ ಜೀವಿಗಳಲ್ಲಿ  ಏನೆಲ್ಲ ವಿಶಿಷ್ಠ ಗುಣವಿದೆಯೊ ಅವುಗಳಲ್ಲಿ ನಾನೆ ಇದ್ದು ಆ ಶಕ್ತಿ ನೀಡಿದ್ದೇನೆ. ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ ತಾನಾಗಿ ಇಲ್ಲ.

“ಈ ಜಗತ್ತಿನಲ್ಲಿರುವ ಸಮಸ್ತ ವಸ್ತು(ಜಡ-ಚೇತನ)ವಿಗೂ ಮೂಲಭೂತವಾಗಿರುವ ಅಭಿವ್ಯಂಜಕ ರೂಪ ಮತ್ತು ಶಕ್ತಿ ಕೊಡುವವನು ನಾನು” ಎನ್ನುತ್ತಾನೆ ಕೃಷ್ಣ. ಹೀಗೆ ಭಗವಂತ ಸಮಸ್ತ ಸೃಷ್ಟಿಗೂ ಬೀಜಪುರುಷನಾಗಿ ನಿಂತಿದ್ದಾನೆ. ಕಣ್ಣಿಗೆ ಕಾಣದ ಜೀವಕ್ಕೆ ಕಣ್ಣಿಗೆ ಕಾಣುವ ಶರೀರ ಕೊಡುವವನು ಆತ. ಗಂಡಿನ ರೇತಸ್ಸಿನಲ್ಲಿದ್ದು, ಜೀವವನ್ನು ರೇತಸ್ಸಿನ ಮುಖೇನ ಹೆಣ್ಣಿನ ದೇಹದೊಳಗೆ ಸೇರಿಸಿ, ಅಲ್ಲಿ ಜೀವಕ್ಕೆ ಒಂದು ರೂಪವನ್ನು ಕೊಟ್ಟು ಬೆಳಗಿಸುವವ ಭಗವಂತ. ಹೀಗೆ ಈ ಪ್ರಪಂಚದಲ್ಲಿರುವ ಚೇತನಾಚೇತನ ಅಥವಾ ಚರಾಚರಾತ್ಮಕ-ಎಲ್ಲವನ್ನೂ ಹುಟ್ಟಿಸುವವನು ಭಗವಂತ. “ಈ ಪ್ರಪಂಚದಲ್ಲಿ ನನ್ನನ್ನು ತೊರೆದು ಸ್ವತಂತ್ರವಾಗಿ ಯಾವ ವಸ್ತುವೂ ಇಲ್ಲ” ಎನ್ನುತ್ತಾನೆ ಕೃಷ್ಣ. ಇದು ವೈದಿಕ ಪರಂಪರೆಯಲ್ಲಿ ಇರುವ ಗೊಂದಲಕ್ಕೆ ಕೃಷ್ಣ ಕೊಟ್ಟ ನೇರ ಉತ್ತರ. ಜೀವ ಮತ್ತು ಭಗವಂತ ಒಂದೇ ಅಲ್ಲ. ಜೀವ ಭಗವಂತನ ಪ್ರತಿಬಿಂಬ. ಎಲ್ಲವೂ ಇದೆ. ಆದರೆ  ಭಗವಂತನನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ಯಾರಿಗೂ ಇಲ್ಲ.         

ಅಧ್ಯಾಯ - 10: ಶ್ಲೋಕ  40

ನಾಂತೋSಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।

ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥೪೦॥

ನ ಅಂತಃ ಅಸ್ತಿ ಮಮ ದಿವ್ಯಾನಾಮ್ ವಿಭೂತೀನಾಮ್ ಪರಂತಪ      ।
ಏಷಃ ತು ಉದ್ದೇಶತಃ ಪ್ರೋಕ್ತಃ  ವಿಭೂತೇಃ ವಿಸ್ತರಃ  ಮಯಾ—

ಓ ಅರಿಗಳ ಉರಿಯೆ, ನನ್ನ ದಿವ್ಯರೂಪಗಳ ಹಿರಿಮೆಗಳಿಗೆ ಕೊನೆಯಿಲ್ಲ. ನನ್ನ ಹಿರಿಮೆಯ ಬಿತ್ತರದ ಕೆಲವನ್ನಷ್ಟೆ ಇಲ್ಲಿ ಹೆಸರಿಸಿ ಹೇಳಿದೆ.

ಕೃಷ್ಣ ಹೇಳುತ್ತಾನೆ “ನನ್ನ ವಿಭೂತಿ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಇದೆ. ಅದನ್ನು ಹೇಳಿ ಕೊನೆ ಇಲ್ಲ” ಎಂದು. ಲೋಕವಿಲಕ್ಷಣವಾದ ಭಗವಂತನ ವಿಭೂತಿಗೆ ಕೊನೆ ಇಲ್ಲ. ಅದನ್ನು ಹೇಳಿ ಮುಗಿಯುವುದಿಲ್ಲ. ಇಲ್ಲಿ ಕೃಷ್ಣ ಅತ್ಯಂತ ಮುಖ್ಯವಾದ, ನಾವು ನಿರಂತರ ಉಪಾಸನೆ ಮಾಡಬೇಕಾದ, ನಿತ್ಯ ಅನುಸಂಧಾನದಲ್ಲಿರಬೇಕಾದದ್ದನ್ನು ಹೇಳಿದ.

ಅಧ್ಯಾಯ - 10: ಶ್ಲೋಕ  41

ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ ।

ತತ್ತದೇವಾವಗಚ್ಛ ತ್ವಂ ಮಮ ತೇಜೋಂSಶಸಂಭವಮ್ ॥೪೧॥

ಯತ್ ಯತ್  ವಿಭೂತಿ ಮತ್ ಸತ್ತ್ವಮ್ ಶ್ರೀಮತ್ ಊರ್ಜಿತಮ್ ಏವ ವಾ ।
ತತ್ ತತ್ ಏವ ಅವಗಚ್ಛ ತ್ವಮ್ ಮಮ ತೇಜಃ ಅಂಶ ಸಂಭವಮ್—

ಗುಂಪಿನಲ್ಲಿ ಮಿಗಿಲಾದದ್ದು , ಸಿರಿಯಲ್ಲಿ ಹಿರಿದಾದದ್ದು. ಎತ್ತರದಲ್ಲಿ ಮೆರೆದದ್ದು ಯಾವುದೆಲ್ಲ ಇದೆ ಅದೆಲ್ಲವೂ ನನ್ನ ಹಿರಿಮೆಯ ಬೆಳಕಿನ ಕಿಡಿಯಿಂದ ಮೂಡಿಬಂದದ್ದು ಎಂದು ತಿಳಿ.

ಒಟ್ಟಿನಲ್ಲಿ ಒಬ್ಬ ವ್ಯಕ್ತಿಯಲ್ಲಿ, ಒಂದು ವಸ್ತುವಿನಲ್ಲಿ ಇನ್ನೊಬ್ಬರಲ್ಲಿಲ್ಲದ ಯಾವ ವಿಶಿಷ್ಠ ಗುಣವಿದೆ ಅದು ಭಗವಂತನ ಹಿರಿಮೆಯ ಒಂದು ಬೆಳಕಿನ ಕಿಡಿ. ಇದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು.

ಅಧ್ಯಾಯ - 10: ಶ್ಲೋಕ  42

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।

ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್        ॥೪೨॥

ಅಥವಾ ಬಹುನಾ ಏತೇನ ಕಿಮ್ ಜ್ಞಾತೇನ ತವ ಅರ್ಜುನ ।
ವಿಷ್ಟಭ್ಯ ಅಹಮ್ ಇದಮ್  ಕೃತ್ಸ್ನಮ್ ಏಕ ಅಂಶೇನ ಸ್ಥಿತಃ ಜಗತ್ –

ಅಥವಾ, ಓ ಅರ್ಜುನ, ಎಲ್ಲವನ್ನು ತಿಳಿದು ಏನು ಬಂತು ? ಸಾರವಿದು: ನಾನು ನನ್ನ ಅಳವಿನ ಒಂದು ಅಂಶದಿಂದ ಈ ಇಡಿಯ ವಿಶ್ವವನ್ನು ತಬ್ಬಿ ತಡೆಹಿಡಿದು ನಡೆಸುತ್ತಿದ್ದೇನೆ.

ಒಂದೊಂದನ್ನು ಪ್ರತ್ಯೇಕ ತಿಳಿದು ಹೇಳುವುದು ಅಸಾಧ್ಯ. ಈ ರೀತಿ ಮಾಡುವ ಅಗತ್ಯವೂ ಇಲ್ಲ. ಎಲ್ಲವುದರೊಳಗೂ ಒಂದು ವಿಶಿಷ್ಠ ಶಕ್ತಿಯಾಗಿ ಭಗವಂತನಿದ್ದಾನೆ. ಎಲ್ಲದರಲ್ಲೂ ಭಗವಂತನ ವಿಭೂತಿ ಅಡಗಿದೆ. ಕೃಷ್ಣ ಹೇಳುತ್ತಾನೆ “ ಇಡೀ ವಿಶ್ವವನ್ನು ನಾನು ನನ್ನ ಸಾಮರ್ಥ್ಯದ ಒಂದು ತುಣುಕಿನಿಂದ  ವ್ಯಾಪಿಸಿ ನಿಂತಿದ್ದೇನೆ” ಎಂದು. ಪುರುಷ ಸೂಕ್ತದಲ್ಲಿ ಹೇಳುವಂತೆ:

ಪಾದೋಸ್ಯ ವಿಶ್ವಾ ಭೂತಾನಿ| ತ್ರಿಪಾದಸ್ಯಾಮೃತಂ ದಿವಿ|

ತ್ರಿಪಾದೂರ್ಧ್ವ ಉದೈತ್ಪುರುಷಃ| ಪಾದೋಸ್ಯೇಹಾಭವಾತ್ಪುನಃ|

ತತೋ ವಿಷ್ವಂವ್ಯಕ್ರಾಮತ್| ಸಾಶನಾನಶನೇ ಅಭಿ|

ಈ ಪ್ರಪಂಚದಲ್ಲಿ ವ್ಯಾಪಿಸಿರುವುದು  ಭಗವಂತನ ಕೇವಲ ಕಾಲು ಭಾಗವಷ್ಟೇ. ಅಮೃತಮಯವಾದ  ಮುಕ್ಕಾಲು ಭಾಗ ದಿವ್ಯಲೋಕ (ಮುಕ್ತಲೋಕ) ದಲ್ಲಿ ನೆಲೆಸಿದೆ. “ಜಗತ್ತಿನ ಸಮಸ್ತ ವಸ್ತುವಿನ ಒಳಗೂ ಹೊರಗೂ  ತುಂಬಿ ನಾನು ವಿಶ್ವ ರೂಪನಾಗಿದ್ದೇನೆ” ಎನ್ನುತ್ತಾನೆ ಕೃಷ್ಣ.

ಇತಿ  ದಶಮೋSಧ್ಯಾಯಃ

ಹತ್ತನೆಯ ಅಧ್ಯಾಯ ಮುಗಿಯಿತು
*******
Previous
Next Post »