ಶ್ರೀ ಮದ್ಭಗವದ್ಗೀತೆಯ ಚಿತ್ರ ಸಂಗ್ರಹಗಳು


ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ( ISKON ಸ್ಥಾಪಕರು-  International Society for Krishna Consciousness - ಕೃಷ್ಣ ಪ್ರಜ್ಞಾ ಅಂತಾರಾಷ್ಟ್ರೀಯ ಸಮಾಜ)ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 01》ಶ್ಲೋಕ :- 01
ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ?ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 01》ಶ್ಲೋಕ :- 03
ದುರ್ಯೋಧನ ಸೇನಾಧಿಪತಿ ಭೀಷ್ಮರ ಬಳಿ ಹೋಗದೆ, ದ್ರೋಣಾಚಾರ್ಯರ ಬಳಿ ಹೋಗಿ, ಭೀಷ್ಮಾಚಾರ್ಯರಿಗೆ ಕೇಳುವಂತೆ, ಆಚಾರ್ಯ ದ್ರೋಣರಲ್ಲಿ ನಂಜಿನ ಮಾತನ್ನಾಡುತ್ತಾನೆಕೃಷ್ಣ ಮತ್ತು ಅರ್ಜುನರ ರಥ ಎರಡು ಸೇನೆಗಳು ನಡುವೆ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 01》ಶ್ಲೋಕ :- 14
ಆ ಬಳಿಕ ಬಿಳಿಯ ಕುದುರೆಗಳಿಂದ ಸಜ್ಜುಗೊಂಡ ಹಿರಿಯ ರಥದಲ್ಲಿ ಕುಳಿತ ಶ್ರೀಕೃಷ್ಣ  ಮತ್ತು ಅರ್ಜುನ ವೆಗ್ಗಳದ ಶಂಖಗಳನ್ನು ಊದಿದರು.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 01》ಶ್ಲೋಕ :- 28
ಆ ಎಲ್ಲಾ ಬಂಧುಗಳು ಒಂದುಗೂಡಿರುವುದನ್ನು ಕಂಡ ಅರ್ಜುನ, ಕರುಣೆಗೊಳಗಾಗಿ, ಕಾರುಣ್ಯದಿಂದ, ದುಖಃದಿಂದ, ತನ್ನ ತುಮುಲವನ್ನು ಕೃಷ್ಣನಲ್ಲಿ ತೋಡಿಕೊಳ್ಳುತ್ತಾನೆ.
ಕೌರವ ರಿಂದ ದ್ರೌಪದಿಯ ವಸ್ತ್ರಾಪಹರಣಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 02 》ಶ್ಲೋಕ :- 11
ಅಳಬಾರದವರಿಗಾಗಿ ನೀನು ಅಳುತ್ತಿರುವೆ. ತಿಳಿದವರು ಆಡದಂಥ ಮಾತುಗಳನ್ನು ತೋಚಿದಂತೆ ಆಡುತ್ತಿರುವೆ. ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 02》ಶ್ಲೋಕ :- 13
ದೇಹದಲ್ಲಿರುವ ಜೀವಕ್ಕೆ ಈ ದೇಹದಲ್ಲೆ ಎಳೆತನ, ಹರಯ, ಮುಪ್ಪು ಹೇಗೆ-ಹಾಗೇ ದೇಹದ ಬದಲಾವಣೆ ಕೂಡಾ. ಇಂಥಲ್ಲಿ ಧೀರನಾದವನು ಕಂಗೆಡುವುದಿಲ್ಲ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 02》ಶ್ಲೋಕ :- 13
ದೇಹ ನಾಶವೆಂದರೆ ಸ್ವರೂಪ ನಾಶವಲ್ಲ. ಈ ದೇಹದಲ್ಲಿರುವ ಜೀವ ಪ್ರತಿ ಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಅನುಭವಿಸುತ್ತಿರುತ್ತದೆ. ಬಾಲ್ಯದಲ್ಲಿನ ದೇಹ ಯೌವನದಲ್ಲಿಲ್ಲ, ಯೌವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ. ಸತ್ತ ಬಳಿಕ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ. ಆದರೆ ನಮಗೆ ನಾವು ಎಲ್ಲಿಂದ ಬಂದೆವು ಹಾಗು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಮಾತ್ರ ಇಲ್ಲ. ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ತಿತ್ವ ಮಾತ್ರ. ದೇಹ ನಾಶವಾಗಿ ಹೊಸ ದೇಹ ಬರಬಹುದು. ಆದರೆ ಎಂದೂ ನಾಶವಾಗದ ಚೈತನ್ಯ ಈ 'ಜೀವ'. ಒಂದು ದಿನ ನಾಶವಾಗುವ ಈ ದೇಹದ ಬಗ್ಗೆ ಧೀರನಾದವನು ಎಂದೂ ಅಳುವುದಿಲ್ಲ ಎನ್ನುತ್ತಾನೆ ಕೃಷ್ಣ. ಇಲ್ಲಿ ಧೀರ ಎಂದರೆ ಅರಿವಿನ ಆನಂದವನ್ನು ಅನುಭವಿಸುವ ಜ್ಞಾನಿ(ಧೀ+ರಃ). ಎಲ್ಲಿ ಜ್ಞಾನವಿದೆಯೋ ಅಲ್ಲಿ ದುಃಖವಿಲ್ಲ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 02》ಶ್ಲೋಕ :- 22
ಮನುಷ್ಯ ಹಳೆಯ ಬಟ್ಟೆಬರೆಗಳನ್ನು ಬಿಸುಟು ಬೇರೆ ಹೊಸತಾದುದ್ದನ್ನು ಉಡುತ್ತಾನೆ ಹೇಗೆಯೋ ಹಾಗೇ-ಜೀವ ಒಂದು  ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತಾನೆ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 02》ಶ್ಲೋಕ :- 62-63
ವಿಷಯಗಳನ್ನೆ ನೆನೆಯುತ್ತಿರುವ ಮನುಷ್ಯನಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂಥ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ!ಶ್ರೀ ಚೈತನ್ಯ ಮಹಾಪ್ರಭುಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 03》ಶ್ಲೋಕ :- 12-14
ಇದರಿಂದ ದೇವತೆಗಳಿಗೆ ನೆರವಾಗಿ. ಆ ದೇವತೆಗಳು ನಿಮಗೆ ನೆರವಾಗಲಿ. ಒಬ್ಬರಿಗೊಬ್ಬರು ನೆರವಾಗುತ್ತ ಹಿರಿಯ ಹಿತವನ್ನು ಪಡೆಯಿರಿ.
ಇಂಥ ಯಜ್ಞದಿಂದ ಬಲಗೊಂಡ ದೇವತೆಗಳು ನೀವು ಬಯಸಿದ ಬಯಕೆಗಳನ್ನು ಈಡೇರಿಸುತ್ತಾರೆ. ಅವರು ನೀಡಿದ್ದನ್ನು ಅವರಿಗೆ ನೀಡದೆ ತಿನ್ನುವವನು ಕಳ್ಳನೇ ಸರಿ.
ತಮಗಾಗಿ ಅನ್ನ ಬೇಯಿಸುವವರು ತಮ್ಮ ಪಾಪವನ್ನೇ ತಾವು ತಿನ್ನುತ್ತಾರೆ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 03》ಶ್ಲೋಕ :- 37-39
ಪಾಪವನ್ನು ಪ್ರೇರೇಪಿಸುವ ಶಕ್ತಿ ಕಾಮ (ಕಾಮದ ಅಭಿಮಾನಿಯಾದ ಕಾಲನೇಮಿ) ಇದರದೇ ರೂಪಾಂತರ ಸಿಟ್ಟು. ರಜೋಗುಣದಿಂದ ಇದರ ಹುಟ್ಟು. ಇದು ತಿಂದಷ್ಟೂ ತಣಿಯದ ಹೊಟ್ಟೆಬಾಕ. ಮಹಾಪಾತಕಗಳ ತವರು. ಇದನ್ನು ಈ ಸಾಧನಾ ಪಥದಲ್ಲಿ ಹಗೆಯೆಂದು ತಿಳಿ.
ಹೊಗೆಯಿಂದ ಬೆಂಕಿ ಕವಿದಂತೆ (ಭಗವಂತ), ಕೊಳೆಯಿಂದ ಕನ್ನಡಿ ಕವಿದಂತೆ(ಮನಸ್ಸು), ಗರ್ಭ ಕೋಶದಿಂದ ಭ್ರೂಣ ಕವಿದಂತೆ(ಜೀವ), ಕಾಮದಿಂದ ಈ ಎಲ್ಲಾ ಕವಿದುಕೊಂಡಿದೆ.[ಹೊಗೆ ಬೆಂಕಿಯನ್ನು ಕವಿದಂತೆ ಕಾಮ ಸಜ್ಜನರನ್ನು ಕವಿಯುತ್ತದೆ. ಕೊಳೆ ಕನ್ನಡಿಯನ್ನು ಕೆಡಿಸಿದಂತೆ ಮಧ್ಯಮರನ್ನು. ಗರ್ಭಕೋಶ ಭ್ರೂಣವನ್ನು ಮುಚ್ಚಿದಂತೆ ದುರ್ಜನರನ್ನು]
ಓ ಕೌಂತೇಯ, ಬೆಂಕಿಯಂತೆ ಕಬಳಿಸಿದಷ್ಟೂ ತೃಪ್ತಿಯಿಲ್ಲದೆ, ಕೊನೆಯಿಲ್ಲದ ಈ ಕಾಮವೆಂಬುದು ಸಾಧಕನ ಚಿರಶತ್ರು. ಇದು ಬಲ್ಲವರ ತಿಳಿವನ್ನೂ ಕವಿದು ಮಂಕಾಗಿಸುತ್ತದೆ.
ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 04 》ಶ್ಲೋಕ :- 01
ಅಳಿವಿರದ ಈ ಸಾಧನ ಮಾರ್ಗವನ್ನು ನಾನು ಸೂರ್ಯನಿಗೆ ಹೇಳಿದ್ದೆ. ಸೂರ್ಯ ಮನುವಿಗೆ ಹೇಳಿದ್ದ. ಮನು ಇಕ್ಷ್ವಾಕುವಿಗೆ ಹೇಳಿದ್ದ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 04 》ಶ್ಲೋಕ :- 07
ಓ ಭಾರತ, ಧರ್ಮ ಕಳೆಗುಂದಿದಾಗೆಲ್ಲ, ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 04 》ಶ್ಲೋಕ :- 08
ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 04 》ಶ್ಲೋಕ :- 11
ಯಾರು ಹೇಗೆ ನನ್ನನು ಸೇವಿಸುತ್ತಾರೆ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಓ ಪಾರ್ಥ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕಡೆಗೆ ನನ್ನೆಡೆಗೆಯೇ ಬರುತ್ತಾರೆ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 05》ಶ್ಲೋಕ :- 04-06
ಜ್ಞಾನ ಮತ್ತು ಕರ್ಮದ ದಾರಿ ಬೇರೆ ಬೇರೆ [ಒಂದು ಸಂನ್ಯಾಸಿಗಳಿಗೆ ಹಾಗು ಇನ್ನೊಂದು ಸಂಸಾರಿಗಳಿಗೆ] ಎಂದು ನುಡಿದವರು ಬಾಲಿಷರು[ತಿಳಿಗೇಡಿಗಳು]; ತಿಳಿದವರಲ್ಲ. ಯಾವುದೋ ಒಂದು ದಾರಿಯಲ್ಲಿ ಸರಿಯಾಗಿ ನಡೆದವನು ಎರಡರ ಫಲವನ್ನೂ ಪಡೆಯುತ್ತಾನೆ.
ಜ್ಞಾನ ಯೋಗಿಗಳು ಪಡೆಯುವ ತಾಣದೆಡೆ ಕರ್ಮ ಯೋಗಿಗಳೂ ನಡೆಯುತ್ತಾರೆ. ಜ್ಞಾನ ಮತ್ತು ಕರ್ಮದ ದಾರಿಗಳ ಗುರಿ ಒಂದೆ ಎಂದು ತಿಳಿದವನೆ ನಿಜವಾಗಿ ತಿಳಿದವನು.
ಓ ಮಹಾವೀರ,ಕರ್ಮಯೋಗವಿರದ ಬರಿಯ ಸಂನ್ಯಾಸ [ದ್ವಂದ್ವ ತ್ಯಾಗ] ಬನ್ನವನ್ನೇ ತಂದೀತು.[ಭಗವಂತನ ಪೂಜೆಯೆಂದು ಕರ್ಮ ಮಾಡುವ ಬದಲು ಕರ್ಮವನ್ನೇ ತೊರೆಯುವುದು ನರಕದ ದಾರಿ]. ಕರ್ಮ ಮಾಡುತ್ತ ದ್ವಂದ್ವವನ್ನು ಗೆದ್ದವನು ಭಗವಂತನನ್ನು ಪಡೆಯಲು ತಡವಾಗದು.


ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 05 》ಶ್ಲೋಕ :- 18
ವಿದ್ಯಾವಿನಯಸಂಪನ್ನ, ಬ್ರಾಹ್ಮಣವರ್ಣ, ಆಕಳು,ಆನೆ, ನಾಯಿ,ಹೊಲಗೇಡಿ ಹೀನ ಮಾನವನಲ್ಲಿ ಕೂಡ ಏಕರೂಪನಾದ ಭಗವಂತನನ್ನು ಕಾಣಬಲ್ಲ.


ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 06》ಶ್ಲೋಕ :- 11-14
ನಿರ್ಮಲವಾದ ತಾಣದಲ್ಲಿ, ಹುಲ್ಲ(ದರ್ಬೆ) ಚಾಪೆ-ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬ ಎತ್ತರವೂ ಅಲ್ಲದ, ತೀರ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಬೇಕು. ಅದರಲ್ಲಿ ಕುಳಿತು, ಬಗೆಯನ್ನು ನೆಟ್ಟ ಗುರಿಯಲ್ಲಿರಿಸಿ, ಇಂದ್ರಿಯಗಳ ಮತ್ತು  ಒಳಬಗೆಯ ಚೆಲ್ಲಾಟವನ್ನು ನಿಲ್ಲಿಸಿ, ಆತ್ಮ ಶುದ್ಧಿಗಾಗಿ ಸಮಾಧಿಯನ್ನು ಸಾಧಿಸಬೇಕು.
ಬೆನ್ನು-ತಲೆ-ಕತ್ತುಗಳನ್ನು ನೆಟ್ಟಗೆ ನಿಲ್ಲಿಸಿ, ನಲುಗದೆ ಗಟ್ಟಿಯಾಗಿ ಕುಳಿತು, ಅತ್ತಿತ್ತ ನೋಡದೆ ತನ್ನ ಮೂಗಿನ ತುದಿಯಲ್ಲೆ ನೋಟವಿಟ್ಟು, ಬಗೆಯನ್ನು ವಿಷಯಗಳತ್ತ ಹರಿಯಗೊಡದೆ ಹದಗೊಳಿಸಿ, ಅಂಜದೆ, ಬ್ರಹ್ಮಚರ್ಯದಲ್ಲಿದ್ದು, ನನ್ನನ್ನೇ ಪರದೈವವೆಂದು ನಂಬಿ, ನನ್ನನ್ನೆ ನೆನೆಯುತ್ತ ಸಮಾಧಿಯನ್ನು ಸಾಧಿಸಬೇಕು.
ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 06》ಶ್ಲೋಕ :- 24-25
ಬಗೆಯಲ್ಲಿ ಮೂಡಿಬರುವ ಎಲ್ಲ ಬಯಕೆಗಳನ್ನೂ ಪೂರ್ತಿಯಾಗಿ ತೊರೆದುಬಿಡಬೇಕು; ಇಂದ್ರಿಯಗಳ ಗಡಣವನ್ನು ಎಲ್ಲೆಡೆಯಿಂದಲು ಮನೋಬಲದಿಂದಲೆ ಹಿಡಿತದಲ್ಲಿಡಬೇಕು; ಅಳುಕದ ವಿವೇಕ ಪ್ರಜ್ಞೆಯಿಂದ ಮೆಲಮೆಲನೆ ಬಗೆಯನ್ನು ವಿಷಯಗಳಿಂದ ಹೊರಳಿಸಬೇಕು; ಭಗವಂತನಲ್ಲಿರಿಸಬೇಕು. ಇರಿಸಿ ಮತ್ತೇನನ್ನೂ ಚಿಂತಿಸಬಾರದು.
ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 06 》ಶ್ಲೋಕ :- 34
ಕೃಷ್ಣ ಬಗೆ ಚಂಚಲವಲ್ಲವೇ? ನಮ್ಮನ್ನು ಕಂಗೆಡಿಸಿಬಿಡುವಷ್ಟು ಗಟ್ಟಿ, ಬಲಶಾಲಿ. ಅದನ್ನು ಬಿಗಿ ಹಿಡಿಯುವುದೆಂದರೆ ಗಾಳಿಯನ್ನು ಬಿಗಿ ಹಿಡಿದಂತೆ ಎಂದು ನನ್ನ ಭಾವನೆ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 06 》ಶ್ಲೋಕ :- 47
ನನ್ನಲ್ಲಿ ಒಳಬಗೆಯನ್ನಿರಿಸಿ ಶ್ರದ್ಧೆಯಿಂದ ನನ್ನನ್ನು ಸೇವಿಸುವವನು ಇತರ ಎಲ್ಲ ಧ್ಯಾನಯೋಗಿಗಳಿಗಿಂತಲು ಹಿರಿಯ ಯೋಗಿ ಎಂದು ನನ್ನ ತೀರ್ಮಾನ.


ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 07》ಶ್ಲೋಕ :- 04-05
ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ,[ಸುಪ್ತಪ್ರಜ್ಞೆಯಿಂದ ಕೂಡಿದ] ಅಹಂಕಾರ ಹೀಗೆ ನನ್ನ ಅಧೀನವಾದ ಈ ಜಡ ಪ್ರಕೃತಿ ಎಂಟು ಬಗೆಯಾಗಿದೆ.
ಎರಡು ಪ್ರಕೃತಿಗಳಲ್ಲಿ ಇದು ಕೆಳಮಟ್ಟದ್ದು. ನನ್ನ ಅಧೀನವಾದ ಇನ್ನೊಂದು ಪ್ರಕೃತಿ ಇದಕ್ಕಿಂತ ಮಿಗಿಲಾದದ್ದು. ಅದೇ ಚೇತನ ಪ್ರಕೃತಿ; ಶ್ರಿತತ್ವ. ಎಲ್ಲ ಜೀವರಿಗೆ ಆಸರೆಯಾಗಿ ಎಂದೆಂದೂ ಇರುವಂಥದು. ಮಹಾವೀರ, ಅದು ಈ ಜಗವನ್ನು ಹೊತ್ತುಕೊಂಡಿದೆ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 07》ಶ್ಲೋಕ :- 15-17
ಕೆಡು ನಡೆಯ ತಿಳಿಗೇಡಿ ಹುಲು ಮನುಜರು, ಮೈಯ ಸುಖದಲ್ಲೆ ಮೈಮರೆತು ಮಾಯೆಯಿಂದ ತಿಳಿವು ಮಂಕಾದವರು. ಇವರು ನನಗೆ ಶರಣಾಗುವುದಿಲ್ಲ.
ಓ ಭರತ ವಂಶದ ವೀರ ಅರ್ಜುನ, ಪುಣ್ಯವಂತರಾದ ನಾಲ್ಕು ಬಗೆಯ ಜನರು ನನ್ನಲ್ಲಿ ಭಕ್ತಿ ಇಡುತ್ತಾರೆ: ಸಂಕಟದಲ್ಲಿರುವವರು, ಸಿರಿಯನ್ನು ಬಯಸುವವರು, ತಿಳಿಯ ಬಯಸುವವನು ಮತ್ತು ತಿಳಿದವನು.
ಅವರಲ್ಲಿ ತಿಳಿದವನು ಮಿಗಿಲಾದವನು ; ನನ್ನಲ್ಲೇ ಭಕ್ತಿಯನ್ನಿಟ್ಟು, ನನ್ನನೇ ಸದಾ ನೆನೆಯುವವನು. ತಿಳಿದವನಿಗೆ ನಾನೆಂದರೆ ತುಂಬಾ ಇಷ್ಟ, ಅವನೆಂದರೆ ನನಗೂ ತುಂಬಾ ಇಷ್ಟ.


ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 08》ಶ್ಲೋಕ :- 21-24
ಈ ಅವ್ಯಕ್ತ ತತ್ವವನ್ನೇ ‘ಅಕ್ಷರ’ ನಾದ ಭಗವಂತನೆನ್ನುತ್ತಾರೆ.ಅವನೆ ಕೊನೆಯಾಸರೆ ಎನ್ನುತ್ತಾರೆ. ಅವನನ್ನು ಪಡೆದವರು ಮತ್ತೆ ಮರಳಿ ಬರುವುದಿಲ್ಲ. ಅದು ನನ್ನ ಹಿರಿದಾದ ಸ್ವರೂಪ.
ಪಾರ್ಥ, ಆ ಪರಮ ಪುರುಷ ಅವನಿಗೇ ಮೀಸಲಾದ ಭಕ್ತಿಗೆ ಮಾತ್ರವೆ ಎಟುಕುವವನು. ಅವನ ಒಳಗೆ ಇಡಿಯ ವಿಶ್ವವಿದೆ. ಅವನು ಈ ಎಲ್ಲವನ್ನು ತಬ್ಬಿ ನಿಂತಿದ್ದಾನೆ.
ಈ ದಾರಿಯಲ್ಲಿ ಹೋದವರು ಭಗವಂತನನ್ನು ಬಲ್ಲವರು ಭಗವಂತನನ್ನು ಸೇರುತ್ತಾರೆ; ಮತ್ತೆ ಮರಳುವುದಿಲ್ಲ.


ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 09》ಶ್ಲೋಕ :- 11-14
ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೆ ಬಗೆದು ಕಡೆಗಾಣಿಸುತ್ತಾರೆ-ಎಂದೆಂದು ಎಲ್ಲೆಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು.
ಇವರ ಆಸೆ ಈಡೇರದು. ಕರ್ಮಗಳು ಫಲಿಸವು. ತಿಳಿವು ಮಾಯವಾಗುವುದು.ಅವರು ಬಗೆಗೇಡಿಗಳು; ಮರುಳುಗೊಳಿಸುವ, ರಕ್ಕಸರ –ಅಸುರರ ತಾಮಸ ಸ್ವಭಾವಕ್ಕೆ ಒಳಗಾದವರು.
ಓ ಪಾರ್ಥ, ಸಾತ್ವಿಕ ಸ್ವಭಾವದ ಹಿರಿಯ ಮಂದಿ, ಅಳಿವ ವಿಶ್ವಕ್ಕೆಲ್ಲ ಅಳಿವಿರದ ನಾನೆ  ಕಾರಣ ಎಂದು ತಿಳಿದು, ಒಂದೆ ಬಗೆಯಿಂದ ನನ್ನನ್ನು ಪೂಜಿಸುತ್ತಾರೆ.
ಅನುದಿನವು ನನ್ನಲ್ಲಿ ಬಗೆಯಿಟ್ಟು ನನ್ನನ್ನೆ ಸೇವಿಸುತ್ತಾರೆ. ನಿರಂತರ ನನ್ನನ್ನು ಕೊಂಡಾಡುತ್ತಾ ನೇಮಗಳನ್ನುನೆಮ್ಮಿಕೊಂಡು ಹೆಣಗುತ್ತಾ ನನಗಾಗಿ ತಲೆಬಾಗುತ್ತ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 10》ಶ್ಲೋಕ :- 12-13
ಪೂಜ್ಯನಾದ ನೀನು ಹಿರಿದಕ್ಕಿಂತ ಹಿರಿಯ ತತ್ವ. ಹಿರಿಯ ಆಸರೆ. ಪಾವನಗಳಿಗೂ ಪಾವನ. ನಿನ್ನನ್ನು ಗುಣಪೂರ್ಣನಾದ, ಪರಮ ‘ಪುರುಷ’ನೆಂದು, ಬದಲಾಗದವನೆಂದು, ಲೀಲಾಮಯನೆಂದು, ಎಲ್ಲ ದೇವತೆಗಳಿಗೂ ಮೊದಲಿಗನೆಂದು, ಜನ್ಮರಹಿತನೆಂದು, ಬಗೆಬಗೆಯ ರೂಪಗಳಿಂದ ಎಲ್ಲೆಡೆ ತುಂಬಿರುವವನೆಂದು ಬಲ್ಲವರೆಲ್ಲ ಹೊಗಳುತ್ತಾರೆ. ದೇವರ್ಷಿ ನಾರದ ಕೂಡ. ಅಸಿತ-ದೇವಲರು ಕೂಡ. ವ್ಯಾಸ ಮುನಿ ಹೇಳಿದ್ದುಂಟು. ಸ್ವತಃ ನೀನೂ ನನಗೆ ಹೇಳುತಿದ್ದೀಯಾ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 10》ಶ್ಲೋಕ :- 41
ಗುಂಪಿನಲ್ಲಿ ಮಿಗಿಲಾದದ್ದು , ಸಿರಿಯಲ್ಲಿ ಹಿರಿದಾದದ್ದು. ಎತ್ತರದಲ್ಲಿ ಮೆರೆದದ್ದು ಯಾವುದೆಲ್ಲ ಇದೆ ಅದೆಲ್ಲವೂ ನನ್ನ ಹಿರಿಮೆಯ ಬೆಳಕಿನ ಕಿಡಿಯಿಂದ ಮೂಡಿಬಂದದ್ದು ಎಂದು ತಿಳಿ.
ಒಟ್ಟಿನಲ್ಲಿ ಒಬ್ಬ ವ್ಯಕ್ತಿಯಲ್ಲಿ, ಒಂದು ವಸ್ತುವಿನಲ್ಲಿ ಇನ್ನೊಬ್ಬರಲ್ಲಿಲ್ಲದ ಯಾವ ವಿಶಿಷ್ಠ ಗುಣವಿದೆ ಅದು ಭಗವಂತನ ಹಿರಿಮೆಯ ಒಂದು ಬೆಳಕಿನ ಕಿಡಿ. ಇದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 11 》ಶ್ಲೋಕ :- 13
ಭಗವಂತ ಅರ್ಜುನನಿಗೆ ರಣರಂಗದಲ್ಲಿ ತೋರಿದ ವಿಶ್ವರೂಪ ತುಂಬಾ ವಿಶಿಷ್ಟವಾದದ್ದು. ಮಧ್ವಾಚಾರ್ಯರು ಹೇಳುವಂತೆ ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಪ್ರಪಂಚದಲ್ಲಿ ಭಗವಂತನ ವಿಶ್ವರೂಪ ದರ್ಶನ ಕಾಣುವ ಅರ್ಹತೆಯುಳ್ಳ ಎಲ್ಲರಿಗೂ ಈ ದರ್ಶನವಾಗಿತ್ತು. [ಮೂರು ಲೋಕದಲ್ಲಿರುವ, ಅರ್ಹತೆಯುಳ್ಳ  ಸಮಸ್ತ ಜೀವಿಗಳಿಗೂ ಭಗವಂತನ ಈ ವಿಶೇಷ  ದರ್ಶನವಾಗಿದೆ ಎನ್ನುವ ಮಾತು ಮುಂದೆ ಈ ಅಧ್ಯಾಯದಲ್ಲಿ ಬರುತ್ತದೆ]. ಅರ್ಜುನನಿಗೆ ಇಲ್ಲಿ ಕಾಣಿಸಿದ್ದು ಕೇವಲ ಎಲ್ಲೆಡೆ ತುಂಬಿರುವ ಭಗವಂತ ಮಾತ್ರವಲ್ಲ, ಆತನೊಳಗೆ ತುಂಬಿರುವ ಪ್ರಪಂಚ ಕೂಡ. [ಇಲ್ಲಿ ಭಗವಂತನೊಳಗೆ ವಿಶ್ವವನ್ನು ಕಾಣುವುದು ಅಂದರೆ ಧ್ಯಾನದಲ್ಲಿ ಪರಮಾತ್ಮನನ್ನು, ಆತನಿಂದ ಸೃಷ್ಟವಾದ ಸೃಷ್ಟಿಯನ್ನು ಕಂಡಂತೆ. ಸತ್ವದಿಂದ ಸ್ವಚ್ಛವಾದ ಮನಸ್ಸುಳ್ಳ ಅರ್ಜುನ(ಪಾಂಡವ), ತನ್ನ ದಿವ್ಯ ದೃಷ್ಟಿಯಿಂದ ಭಗವಂತನಲ್ಲಿ ತುಂಬಿರುವ ಇಡೀ ವಿಶ್ವವನ್ನು ಸ್ಪಷ್ಟವಾಗಿ ಕಂಡ.]ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 11 》ಶ್ಲೋಕ :- 50
ವಾಸುದೇವ ಹೀಗೆ ನುಡಿದು ಮರಳಿ ಅರ್ಜುನನಿಗೆ ತನ್ನ ಕೃಷ್ಣ ರೂಪವನ್ನೇ ತೋರಿದ. ಮಹಾತ್ಮನಾದ ಕೃಷ್ಣ ಹೀಗೆ ಮರಳಿ ಸೌಮ್ಯರೂಪ ತಾಳಿ ಅಂಜಿದ್ದ ಅರ್ಜುನನನ್ನು ಸಂತೈಸಿದಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 12》ಶ್ಲೋಕ :- 06-07
ಕೆಲವರಿರುತ್ತಾರೆ: ಅವರು ಮಾಡಿದ್ದನ್ನೆಲ್ಲ ನನ್ನಲ್ಲಿ ಅರ್ಪಿಸಿಬಿಡುತ್ತಾರೆ. ಅವರು ನನ್ನಲ್ಲೆ ಬಗೆಯಿಟ್ಟವರು. ಅವರ ಸಾಧನೆಯ ಗುರಿ ನಾನಲ್ಲದೆ ಬೇರಿಲ್ಲ. ನನ್ನನ್ನೆ ನೆನೆಯುತ್ತ ಸೇವಿಸುತ್ತಾರೆ. ಓ ಪಾರ್ಥಾ, ನನ್ನನ್ನೆ ನೆಚ್ಚಿದ ಅಂಥವರನ್ನು ನಾನು ಬಹುಬೇಗ  ಸಾವಿನ ಬಾಳಿನ ಕಡಲಿನಿಂದ ಬಿಡುಗಡೆಗೊಳಿಸುತ್ತೇನೆ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 14》ಶ್ಲೋಕ :- 14-18
ಸತ್ವಗುಣ ಬಲಗೊಂಡಾಗ ಜೀವಿ ಸಾವನ್ನಪ್ಪಿದರೆ, ಹಿರಿದಾದ ತತ್ವವನ್ನು- ಬಲ್ಲವರ ಕುಲದಲ್ಲಿ, ದೋಷವಿರದ ದೇಹಗಳನ್ನು ಪಡೆಯುತ್ತಾನೆ.
ರಜೋಗುಣದಲ್ಲಿ ಸಾವನ್ನಪ್ಪಿದರೆ ಕರ್ಮಕ್ಕೆ ಅಂಟಿಕೊಂಡವರಲ್ಲಿ ಹುಟ್ಟುತ್ತಾನೆ. ತಮೋಗುಣದಲ್ಲಿ ಸತ್ತವನು ತಿಳಿವಿರದ ಹೀನಯೋನಿಗಳಲ್ಲಿ ಹುಟ್ಟುತ್ತಾನೆ.
ಒಳ್ಳೆಯ ಕಜ್ಜದಿಂದ ದುಗುಡವಿರದ ಸಾತ್ವಿಕ ಫಲ ಎನ್ನುತ್ತಾರೆ ತಿಳಿದವರು. ರಾಜಸವಾದ ಕಜ್ಜದಿಂದ ದುಃಖ ಬೆರೆತ ಸುಖ. ತಿಳಿಗೇಡಿತನವೇ ತಮೋಗುಣದ ಕಜ್ಜದ ಫಲ.
ಸತ್ವದಿಂದ ತಿಳಿವು ತಿಳಿಯಾಗುತ್ತದೆ. ರಜಸ್ಸಿನಿಂದ ಜಿಪುಣತನ ಬೆಳೆಯುತ್ತದೆ. ತಮಸ್ಸಿನಿಂದ ಮೈಮರೆವು, ಭ್ರಾಂತಿ ಮತ್ತು ತಿಳಿಗೇಡಿತನ ಉಂಟಾಗುತ್ತದೆ.
ಸತ್ವದಲ್ಲಿ ನೆಲೆಗೊಂಡವರು ಎತ್ತರಕ್ಕೆರುತ್ತಾರೆ. ರಾಜಸರು ನಡುವಿನಲ್ಲಿ ನಿಲ್ಲುತ್ತಾರೆ. ‘ಕೊನೆಯ ಗುಣದ’ ಪ್ರಭಾವಕ್ಕೊಳಗಾದ ತಾಮಸರು ಕೆಳಕ್ಕೆ ಕುಸಿಯುತ್ತಾರೆ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 15》ಶ್ಲೋಕ :- 01-04
ಮೇಲಿರುವ ಭಗವಂತ ಮತ್ತು ಪ್ರಕೃತಿ ವಿಶ್ವದ ಬುಡಕಟ್ಟು. ಕೆಳಗಿನ ಜೀವ-ಜಡಗಳು ಇದರ ಟೊಂಗೆ-ಟಿಸಿಲು. ಇದು ಎಂದೆಂದೂ ಇರುವ,[ಅ+ಶ್ವಃ+ತ್ಥ= ಇಂದು ಇದ್ದಂತೆ ನಾಳೆ ಇರದ],[ಅಶ್ವ+ತ್ಥ=ಕುದುರೆಯಂತೆ ನಿರಂತರ ಚಲನಶೀಲವಾದ] ಅರಳಿಯ ಮರ. ವೇದಗಳು ಇದರ ಎಲೆಗಳು. ಇದನ್ನು ಬಲ್ಲವನು ವೇದಗಳನ್ನು ಬಲ್ಲವನು.
ತ್ರಿಗುಣಗಳಿಂದ ಕೊಬ್ಬಿದ ಇದರ ಟೊಂಗೆಗಳು ಕೆಳಗೂ ಮೇಲೂ ಹಬ್ಬಿ ಹರಡಿವೆ. ಇಂದ್ರಿಯ ವಿಷಯಗಳೆ ಇವುಗಳ ತಳಿರುಗಳು. ಇದರ ಬುಡಕಟ್ಟುಗಳೂ ಜೀವಿಗಳ ಕರ್ಮಕ್ಕೆ ತಕ್ಕಂತೆ ಕೆಳಗೆ ಕೂಡ, ಭೂಮಿಯಲ್ಲು ಹರವಿಕೊಂಡಿವೆ.
ಇದರ ಇರವು ಇದ್ದ ಹಾಗೆ ಕಾಣಿಸುವುದಿಲ್ಲ. ಇದರ ಕೊನೆ ಕಾಣದು; ಬುಡ ಕಾಣದು; ನೆಲೆ ಕೂಡ. ಬಲವಾಗಿ ಬೇರೂರಿದ ಈ ಅರಳಿಯನ್ನು ಅನಾಸಕ್ತಿಯೆಂಬ ಹರಿತವಾದ ಕತ್ತಿಯಿಂದ ತರಿದು, ಅನಂತರ ಆ ಪರತತ್ವವನ್ನು ಅರಸಬೇಕು. ಅವನನ್ನು ಸೇರಿದವರು ಮತ್ತೆ ಮರಳುವುದಿಲ್ಲ. ಅವನಿಂದಲೆ ಈ ಪುರಾತನವಾದ ಪಯಣ ಪ್ರಾರಂಭವಾಯಿತು. ಎಲ್ಲದರ ಮೊದಲಿರುವ ಆ ಪರಮ ಪುರುಷನಿಗೇ ಶರಣಾಗಬೇಕು.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 15 》ಶ್ಲೋಕ :- 06
ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 15》ಶ್ಲೋಕ :- 07-08
ಈ ದೇಹದಲ್ಲಿರುವ ಅಳಿವಿರದ ಜೀವನು ನನ್ನದೇ  ಒಂದು ತುಣುಕಿನಂತೆ; [ನನ್ನ ಭಿನ್ನಾಂಶ; ನನ್ನ ಪ್ರತಿಬಿಂಬ]. ಅವನು ಶರೀರದಲ್ಲಿರುವ ಐದು ಜ್ಞಾನೇಂದ್ರಿಯಗಳನ್ನು  ಆರನೆಯ ಮನಸ್ಸಿನ ಜತೆಗೆ ವಿಷಯಗಳತ್ತ ಹರಿಯಗೊಡುತ್ತಾನೆ. ವಾಸ್ತವವಾಗಿ ಜೀವ  ಈ ಶರೀರವನ್ನು ಹೊಕ್ಕಾಗ ಮತ್ತು ಬಿಟ್ಟು ಹೊರಟಾಗ ಸರ್ವಶಕ್ತನಾದ ಭಗವಂತನೆ ಈ ಇಂದ್ರಿಯಗಳನ್ನು ನಿಯಂತ್ರಿಸುತ್ತ ಜತೆಗೆ ಬರುತ್ತಾನೆ; ಗಾಳಿ ಹೂವಿನ ಕಂಪನ್ನು ಹೊತ್ತು ಬಂದಂತೆ. [ಭಗವಂತ ಈ ಜೀವದ ಶರೀರವನ್ನು ಹೊಕ್ಕಾಗ ಮತ್ತು ಹೊರಬಂದಾಗ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ ತನ್ನಂಕೆಯಲ್ಲಿರಿಸಿಕೊಳ್ಳುತ್ತಾನೆ. ಜೀವನಿಗೆ ವಿಷಯಾನುಭವ ನೀಡುವಾಗ ಇವುಗಳನ್ನು ಜತೆಗೊಯ್ಯುತ್ತಾನೆ.-ಗಾಳಿ ಹೂವಿಂದ ಕಂಪನ್ನು ಜತೆಗೊಯ್ಯುವಂತೆ.]


ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 16》ಶ್ಲೋಕ :- 05,21
ಒಳ್ಳೆಯ ನಡತೆ ಬಿಡುಗಡೆಯ ದಾರಿ. ಕೆಡುನಡೆ ತಮಸ್ಸಿನ ಸೆರೆಯ ದಾರಿ. ಪಾಂಡವ, ಕೊರಗಬೇಡ. ನೀನು ಒಳಿತಿನ ದಾರಿಯನ್ನು ಮೈಗೂಡಿಸಿಕೊಂಡವನು.
ಇದು ಮೂರು ಆತ್ಮ ನಾಶದ ದಾರಿ, ನರಕದ ಬಾಗಿಲು: ಕಾಮ, ಕ್ರೋಧ, ಮತ್ತು ಲೋಭ. ಅದ್ದರಿಂದ ಈ ಮೂರನ್ನು ದೂರವಿಡಬೇಕು.


ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 16》ಶ್ಲೋಕ :- 09-18
ಆಸುರ ಮನೋವೃತ್ತಿ ಬೆಳೆಸಿಕೊಳ್ಳುವ ಜನ ತಮ್ಮ ಬದುಕಿಗೆ ಅನರ್ಥವನ್ನು ತಂದುಕೊಂಡು ತಮ್ಮ ನಾಶಕ್ಕೆ ತಾವೇ ಕಾರಣರಾಗುತ್ತಾರೆ. ಇವರು ತಮ್ಮ ನಂಬಿಕೆಯೇ ತಮ್ಮನ್ನು ನಾಶ ಮಾಡುತ್ತಿದೆ, ತಾವು ಕತ್ತಲೆಯ ದಾರಿಯಲ್ಲಿ ನಡೆಯುತ್ತಿದ್ದೇವೆ ಎನ್ನುವ ಎಚ್ಚರವೂ ಇಲ್ಲದೆ  ಉಗ್ರಗಾಮಿ(ಉಗ್ರಕರ್ಮಾಣಃ)ಗಳಾಗುತ್ತಾರೆ. ಇದರ ಪರಿಣಾಮ ಇವರು ಲೋಕಶತ್ರುಗಳಾಗಿ, ಲೋಕ ನಾಶಕ್ಕೆ ಕಾರಣರಾಗುತ್ತಾರೆ. ಈ ರೀತಿಯ ಮನೋವೃತ್ತಿ ಇದ್ದು ನಮ್ಮ ನಿಮ್ಮ ನಡುವೆ ಇರುವ  ಜನರೇ ಅಸುರರು.
ತಣಿಯದ ಬಯಕೆಯ ಬೆನ್ನುಹತ್ತಿ ಬೂಟಾಟಿಕೆ, ಬಿಂಕ ಮತ್ತು ಸೊಕ್ಕಿಗೆ ತುತ್ತಾದವರು. ಕೊಳಕು ನಡೆಯ ಈ ಮಂದಿ ತಿಳಿಗೇಡಿತನದಿಂದ ತಪ್ಪು ಗ್ರಹಿಕೆಗಳನ್ನೆ ಕಟ್ಟಿಕೊಂಡು ಬಾಳುತ್ತಾರೆ.
ಸಾವಿನ ಜೊತೆಗೆಯೆ ಅಳಿಯುವ, ಅಳೆಯಲಾಗದ ಚಿಂತೆಗೊಳಗಾದವರು. ಕಾಮದ ತೀಟೆಯೇ ಜೀವನದ ಸರ್ವಸ್ವವಾದವರು. ಜೀವನವೆಂದರೆ ಇಷ್ಟೇ ಎಂದು ನಂಬಿದವರು.
ನೂರಾರು ಆಸೆಗಳ ಬಲೆಯಲ್ಲಿ ಸಿಕ್ಕಿಬಿದ್ದವರು. ಹುಚ್ಚು ಹಂಬಲ-ಸಿಡುಕುಗಳಿಗೆ ತಮ್ಮನ್ನು ಮಾರಿಕೊಂಡವರು. ತೀಟೆ ತೀರಿಸಲೆಂದು ತಪ್ಪು ದಾರಿಯಿಂದ ರಾಶಿ ರಾಶಿ ಹೊನ್ನು ಬಾಚಬಯಸುವವರು
ಅವರು ತಿಳಿಗೇಡಿತನದಿಂದ ಹೀಗೆ ಬಡಬಡಿಸುತ್ತಾರೆ: ಇದನ್ನೀಗ ನಾನು ಪಡೆದೆ; ಈ ಬಯಕೆಯನ್ನು ಮುಂದೆ ಈಡೇರಿಸಿಕೊಳ್ಳುತ್ತೇನೆ; ಇದಂತು ಇದೆ; ಮತ್ತೆ ಈ ಹೊನ್ನೂ ನನ್ನದಾಗಲಿದೆ; ಈ ಹಗೆಯನ್ನು ಕೊಂದೆ; ಉಳಿದವರನ್ನೂ ಮುಗಿಸಲಿದ್ದೇನೆ; ನಾನು ಸರ್ವಶಕ್ತ; ನಾನೆ ಭೋಗಿಸುವವನು; ನಾನೆ ಬಯಸಿದ್ದನ್ನೆಲ್ಲ ಪಡೆದವನು; ಶಕ್ತಿಶಾಲಿ ಮತ್ತು ಸುಖಿ; ಸಿರಿವಂತನಿದ್ದೇನೆ; ಕುಲವಂತನಿದ್ದೇನೆ; ಯಾರಿದ್ದಾರೆ ನನಗೆ ಸಾಟಿ? ನಾನು ಯಾಗ ಮಾಡಿಸುತ್ತೇನೆ. ದಾನ ನೀಡುತ್ತೇನೆ. ಖುಶಿಪಡುತ್ತೇನೆ.
ಹಲವು ಬಗೆಯ ಯೋಚನೆಗಳಿಂದ ಗೊಂದಲಗೊಂಡವರು; ಮೋಹದ ಬಲೆಯಲ್ಲಿ ಸಿಕ್ಕಿಕೊಂಡವರು; ಕಾಮದ ತೀಟೆಗಳಲ್ಲಿ ಮೈಮರೆತವರು. ಅವರು ಕೊಳಕು ನರಕದಲ್ಲಿ ಬಿದ್ದು ನರಳುತ್ತಾರೆ.
ತಮ್ಮ ಬಗೆಗೆಯೆ ಕೊಚ್ಚಿಕೊಳ್ಳುವವರು. ಸಿರಿ ಸಮ್ಮಾನದ ಸೊಕ್ಕಿನಿಂದ ಬೀಗಿದವರು. ಅಂಥವರೂ ಯಜ್ಞಗಳನ್ನಾಚರಿಸುತ್ತಾರೆ: ಬೂಟಾಟಿಕೆಯಿಂದ, ಶಾಸ್ತ್ರದ ಕಟ್ಟಳೆಯ ಕಟ್ಟು ಮುರಿದು.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 17》ಶ್ಲೋಕ :- 04-10
ಸಾತ್ವಿಕರ ಪೂಜೆ ದೇವತೆಗಳಿಗೆ ಸಲ್ಲುತ್ತದೆ, ರಾಜಸರದು ಯಕ್ಷ-ರಾಕ್ಷಸರಿಗೆ. ತಾಮಸರ ಪೂಜೆಯೋ ಪ್ರೇತಗಳಿಗೆ, ಭೂತಗಣಗಳಿಗೆ ಸಲ್ಲುತ್ತದೆ.
ಕೆಲವು ಜನರು ಶಾಸ್ತ್ರದ ಕಟ್ಟಳೆ ಮೀರಿ ಕೆಟ್ಟ ತಪವನ್ನಾಚರಿಸುತ್ತಾರೆ; ಬೂಟಾಟಿಕೆಯಿಂದ ಮತ್ತು ಹಮ್ಮಿನಿಂದ. ಆಸೆ-ಆಸಕ್ತಿಗಳೆ ಅವರ ಸಾಧನೆಗೆ ಬೆಂಬಲ. ಇಂಥ ತಿಳಿಗೇಡಿಗಳು ತಮ್ಮ ದೇಹದಲ್ಲಿರುವ ಭೂತ ಸಮೂಹವನ್ನು [ದೇಹವನ್ನು ನಿಯಮಿಸುವ ದೇವತಾಗಣವನ್ನು] ಕಡೆಗಣಿಸುತ್ತಾರೆ. ದೇಹದೊಳಗಿರುವ ನನ್ನ ಹಿರಿಮೆಯನ್ನು ಅಲ್ಲಗಳೆಯುತ್ತಾರೆ. ಅಂಥವರು ತಾಮಸ ಸ್ವಭಾವದವರು ಎಂದು ತಿಳಿ.
ಎಲ್ಲರೂ ಉಣ್ಣುವ ಆಹಾರವೂ ಮೂರು ತೆರನಾಗಿ ಮೆಚ್ಚಿಗೆಯಾಗುತ್ತದೆ. ಯಜ್ಞ, ತಪಸ್ಸು, ದಾನ ಕೂಡ. ಅವುಗಳ ಈ ಬಗೆಯನ್ನಾಲಿಸು.
ಇವು ಸಾತ್ವಿಕರಿಗೆ ಮೆಚ್ಚಿಕೆಯಾದ ತಿನಿಸುಗಳು: ಆಯುಸ್ಸು, ಒಳ್ಳೆಯತನ, ತ್ರಾಣ, ಆರೋಗ್ಯವನ್ನು ಹೆಚ್ಚಿಸುವಂಥವು; ಬಹಳ ಕಾಲ ಮೆಚ್ಚಿಕೆಯಾಗುವಂಥವು; ತಿಂದಾಗ ಖುಷಿಯಾಗುವಂಥವು; ರುಚಿಯಾದಂಥವು; ಕಸುವಿರುವಂಥವು; ಧೀರ್ಘಕಾಲ ಪರಿಣಾಮ ಬೀರುವಂಥವು; ಮತ್ತೆಮತ್ತೆ ಮನ ಸೆಳೆಯುವಂಥವು.
ಇವು ರಾಜಸರಿಗೆ ಮೆಚ್ಚಿಕೆಯಾದ ತಿನಿಸುಗಳು: ಅತಿಯಾದ ಖಾರ, ಹುಳಿ, ಉಪ್ಪು, ತುಂಬ ಬಿಸಿ, ಬಿರುಸು, ನೀರಸ ಮತ್ತು ಉರಿಬರಿಸುವಂಥವು; ದುಃಖ-ದುಮ್ಮಾನ ಮತ್ತು ಖಾಯಿಲೆ ಬರಿಸುವಂಥವು.
ಇದು ತಾಮಸರಿಗೆ ಮೆಚ್ಚಿನ ತಿನಿಸು: ಅಟ್ಟು ಜಾವ ಕಳೆದದ್ದು, ರುಚಿ ಕಳೆದುಕೊಂಡದ್ದು, ಹಳಸಿದ್ದು, ತಂಗಳಾದದ್ದು, ಎಂಜಲು ಮತ್ತು ಕೊಳಕಾದದ್ದು.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 18》ಶ್ಲೋಕ :- 14
ಕ್ರಿಯೆ ನಡೆಯುವ ತಾಣ, ಮಾಡುವ ಭಗವಂತ [ಜೀವ], ಬೇರೆಬೇರೆ ಉಪಕರಣಗಳು, ಬಗೆಬಗೆಯ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ[ಭಗವಂತ]. 
ಪ್ರತಿಯೊಂದು ಕ್ರಿಯೆ ನಡೆಯಲು ಐದು ಕಾರಣಗಳು: 
(೧) ಅಧಿಷ್ಠಾನ: ಇಲ್ಲಿ ಅಧಿಷ್ಠಾನ ಎಂದರೆ ನೆಲೆ. ನಮ್ಮ ದೇಹವೇ ನಮ್ಮ ಅಧಿಷ್ಠಾನ. ಈ ಸಾಧನಾ ಶರೀರವಿಲ್ಲದೆ ಯಾವ ಕ್ರಿಯೆಯೂ ನಡೆಯುವುದಿಲ್ಲ. ನಿನಗೆ ದೊರೆತಿರುವ ಸಾಧನಾ ಶರೀರ ಆ ಭಗವಂತನ ಪ್ರಸಾದ. 
(೨) ಕರ್ತಾ: ಶರೀರದಲ್ಲಿ ಕೂತು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವ ಭಗವಂತ ಕರ್ತಾ. ಆತ ಸ್ವತಂತ್ರ. ಆತನಿಗೆ ಅಧೀನವಾಗಿರುವ ಜೀವ(ನಾನು-Self) ಸ್ವತಂತ್ರನಲ್ಲ. ಆದರೆ ಜೀವನಿಗೆ ಇಚ್ಛಾಪೂರ್ವಕ ಕೃತಿ ಇದೆ. 
(೩) ಕರಣಗಳು: ನಮ್ಮ  ಇಂದ್ರಿಯಗಳು. ನಮ್ಮ ಇಂದ್ರಿಯಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಇಂದ್ರಿಯಗಳ ಒಡೆಯ ಭಗವಂತ(ಹೃಷೀಕೇಶ). ಇಂದ್ರಿಯಗಳು ನಮಗೆ ಭಗವಂತನ ಮಹಾ ಪ್ರಸಾದ. 
(೪) ವಿವಿಧ ಪೂರಕ ಸಾಧನಗಳು: ಒಂದು ಕ್ರಿಯೆ ಆಗಬೇಕಾದರೆ ಅದಕ್ಕೆ ಪೂರಕವಾದ ಅನೇಕ ಪೂರಕ ಸಾಧನಗಳು ಅಗತ್ಯ. 
(೫) ದೈವಂ: ನಮ್ಮ ಪ್ರತಿಯೊಂದು ಕ್ರಿಯೆ ಭಗವಂತನ ಸಂಕಲ್ಪವನ್ನು ಅವಲಂಭಿಸಿದೆ. ಇದನ್ನು ಅದೃಷ್ಟ, ಹಣೆಬರಹ ಎಂದೂ ಕರೆಯಬಹುದು. 
ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ- ಒಬ್ಬ ಅತ್ಯುತ್ತಮ ಮಾತುಗಾರ. ಆತ ಅಷ್ಟೊಂದು ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುತ್ತಾನೆ. ಆತ ಹೀಗೆ ಮಾತನಾಡಬೇಕಾದರೆ ಆತ ಮೂಗನಾಗಿರಬಾರದು, ಬಾಯಿ ಇದ್ದರೆ ಸಾಲದು-ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು, ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು, ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದದ ಹುಟ್ಟಿಗೆ ಆಕಾಶ-ಗಾಳಿ ಮಾಧ್ಯಮ. ಈ ಎಲ್ಲ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಹುಟ್ಟುವಾಗಲೇ ಮೂಗನಾಗಿ ಹುಟ್ಟಿದ್ದರೆ? ಜ್ಞಾನ ಪರಂಪರೆಯೇ ಇಲ್ಲದ ಮನೆತನದಲ್ಲಿ ಹುಟ್ಟಿದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ‘ನಾನು ಮಾಡಿದೆ’ ಎನ್ನುವ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ   ಇರಲು ಸಾಧ್ಯ.ಶ್ರೀ ಮದ್ಭಗವದ್ಗೀತಾ》ಅಧ್ಯಾಯ :- 18》ಶ್ಲೋಕ :- 41-46
ಓ ಅರಿಗಳ ಉರಿಯೆ, ಸ್ವಭಾವದಿಂದುಂಟಾದ ಗುಣಗಳಿಗೆ ಅನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳೂ ಬೇರೆಬೇರೆಯಾಗಿವೆ.
ಭಗವತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ  ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು.
ಕೆಚ್ಚು, ಕಸುವು, ಗಟ್ಟಿತನ, ಕೌಶಲ, ಕಾಳಗದಲ್ಲಿ ಬೆನ್ನು ತೋರಿಸದಿರುವುದು, ಕೊಡುಗೈತನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ ಸಹಜ ಕರ್ಮಗಳು.
ಬೇಸಾಯ, ಆಕಳು ಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವಸಹಜವಾದ ಕರ್ಮ. ಸೇವಾರೂಪವಾದ ಕಾಯಕ ಶೂದ್ರ ಸ್ವಭಾವಕ್ಕೆ ಸಹಜವಾದದ್ದು.
ತನ್ನತನ್ನ ಸಹಜ ಕರ್ಮದಲ್ಲಿ ನಿರತನಾದ ಮನುಷ್ಯ ಸಿದ್ಧಿಯನ್ನು ಪಡೆಯುತ್ತಾನೆ. ತನ್ನದಾದ ಕರ್ಮದಲ್ಲಿ ತೊಡಗಿದವನು ಹೇಗೆ ಸಿದ್ಧಿ ಪಡೆಯುತ್ತಾನೆ ಆ ಬಗೆಯನ್ನು ಕೇಳು.
ಯಾರಿಂದ ಜೀವಿಗಳ ಚಟುವಟಿಕೆಯೋ, ಯಾರು ಈ ಎಲ್ಲವನ್ನು ತುಂಬಿನಿಂತಿರುವನೋ ಅಂಥ ಭಗವಂತನನ್ನು ಮನುಷ್ಯ ಸ್ವಭಾವಸಹಜವಾದ ಕರ್ಮದಿಂದ ಆರಾಧಿಸಿ ಸಿದ್ಧಿ ಪಡೆಯುತ್ತಾನೆ.ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 18 》ಶ್ಲೋಕ :- 65
ನನ್ನಲ್ಲೆ ಬಗೆಯಿಡು. ನನ್ನಲ್ಲೆ ಭಕ್ತಿಯಿಡು. ನನ್ನನ್ನೆ ಪೂಜಿಸು. ನನಗೇ  ಪೊಡಮಡು. ಆಗ ನನ್ನನ್ನೆ ಸೇರುವೆ. ನೀನು ನನಗೆ ಮೆಚ್ಚಿನವ. ನಿನ್ನಾಣೆಗೂ ಇದು ನಿಜ.


ಶ್ರೀ ಮದ್ಭಗವದ್ಗೀತಾ 》ಅಧ್ಯಾಯ :- 18 》ಶ್ಲೋಕ :- 78
ಯೋಗಮಾರ್ಗಗಳೊಡೆಯನಾದ ಕೃಷ್ಣನಿರುವಡೆ, ಬಿಲ್ಗಾರನಾದ ಪಾರ್ಥನಿರುವೆಡೆ(ನರ-ನಾರಾಯಣನಿರುವೆಡೆ) ಸಿರಿ, ಗೆಲುವು, ಉನ್ನತಿಕೆ ಮತ್ತು ಸ್ಥಿರವಾದ ನೀತಿ ನೆಲೆಸಿರುತ್ತದೆ ಎಂದು ನನ್ನ ನಿರ್ಧಾರ. 
ಎಲ್ಲಿಎಲ್ಲಿ ನರ-ನಾರಾಯಣರಿರುತ್ತಾರೋ ಅಲ್ಲಿ ಎಲ್ಲವೂ ಇದೆ. ಎಲ್ಲ ಬಗೆಯ ಸಂಪತ್ತು, ಗೆಲುವು, ಅಂತರಂಗ ಸಾಧನೆ, ಬಾಹ್ಯ ಉನ್ನತಿ ಎಲ್ಲವೂ ನೆಲೆಸಿರುತ್ತದೆ. ಇದು ನನ್ನ ನಿರ್ಧಾರ ಎನ್ನುತ್ತಾನೆ ಸಂಜಯ.


Previous
Next Post »